ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಪ್ದರ್ ಹಷ್ಮೀ'ಯನ್ನು ನೆನೆಯುತ್ತಾ…

ಕೆ ಮಹಾಂತೇಶ


ಪುಸ್ತಕಗಳು ಮಾತಾಡುತ್ತವೆ…
ಮಾತಾಡುತ್ತವೆ ಪುಸ್ತಕಗಳು
ಜಗತ್ತು ಜನರ ಬವಣೆ ಕುರಿತು
ನಾಳಿನ ಒಂದೊಂದು ದಿನಗಳ ಕುರಿತು
ಸೋಲು ಗೆಲುವಿನ ಸುಖ ದುಖಃವ ಕುರಿತು
ಮಾತಾಡುತ್ತವೆ ಪುಸ್ತಕಗಳು…
-ಸಪ್ದರ್ ಹಷ್ಮೀ
 
ನಮ್ಮ ಮನೆಯ ಕಪಾಟುಗಳಲ್ಲಿ, ಅಥವಾ ಮೂಲೆಯೊಂದರಲ್ಲಿ ನಮ್ಮಗಳ ನಿರ್ಲಕ್ಷ್ಯದಿಂದ ಅನಾಥವಾಗಿ ಬಿದ್ದಿರುವ ಪುಸ್ತಕಗಳು ಕೂಡ ಮಾತಾಡುತ್ತವೆ ಎಂದರೆ ನೀವು ನಂಬುತ್ತೀರಾ ? ಹೌದು ! ಪುಸ್ತಕಗಳು ಜಡತ್ವವಲ್ಲ ಅವುಗಳಿಗೂ ಜೀವ ಇದೆ ಅವೂ ಕೂಡ ಮಾತಾಡುತ್ತವೆ ಎಂದು ತೋರಿಸಿಕೊಟ್ಟ ಮಹಾನ್ ಕಲಾವಿದ, ಪತ್ರಕರ್ತನೇ ‘ಸಪ್ದರ್ ಹಾಷ್ಮೀ’ ಕೇವಲ 34 ವರ್ಷಗಳ ಕಿರಿಯ ಕ್ರಾಂತಿಕಾರಿ ಬದುಕು ಅವರದು ಆದರೆ ಆದರೆ ಅವಧಿಯಲ್ಲಿ ಶತಮಾನಗಳಷ್ಟು ಮರೆಯಲಾಗದ ಕೆಲಸ ಮಾಡಿದ ಕೀರ್ತಿ ಅವರದು. ಏಪ್ರಿಲ್ 12 ಸಪ್ದರ್ ಹಷ್ಮೀ ಜನ್ಮ ದಿನ. ಜನರಿಂದ ರೂಪಿತವಾಗಿ ಜನತೆಗಾಗಿ ಅರ್ಪಿಸಿಕೊಂಡು ಜನರಿಗಾಗಿಯೇ ತನ್ನ ಯೌವ್ವನವನ್ನೇ ಬಲಿನೀಡಿದ ಹಷ್ಮೀ ನೀನು ಸದಾ ಅಮರ..!

ದೇಶದಲ್ಲಿ ಮತ್ತೊಂದು ಮಹಾ ಚುನಾವಣೆಯ ಪರ್ವ ಆರಂಭಗೊಂಡಿದೆ. ಒಂದೆಡೆ ಆಳಿದವರು ಮತ್ತೊಂದಡೆ ಆಳಬೇಕೆನ್ನುವವರ ನಡುವೆ ಬಿರುಸಿನ ಪೈಪೋಟಿಗಳು ತೀವ್ರಗೊಂಡಿವೆ. ಇನ್ನೂ ನಮ್ಮ ರಾಜ್ಯದಲ್ಲೂ ಸಾಹಿತಿ ಕಲಾವಿದರುಗಳ ನಡುವೆಯೂ ಒಂದು ಅಸಹನೀಯ ಸ್ಪರ್ಧೆ ಏರ್ಪಟ್ಟಿದೆ. ಬಹುಶಃ ಸಪ್ದರ್ ಇಂದು ಬದುಕಿದ್ದರೆ, ದೇಶದ ಕೋಟಿ ಕೋಟಿ ಜನರ ಬದುಕಿನ ಹಣೆ ಬರಹವನ್ನು ನಿರ್ಧರಿಸಬೇಕಾದ ಈ ಮಹಾ ಸಮರದಲ್ಲಿ ಜನತೆಯ ಬದುಕಿನ ಸಂಕಟಗಳನ್ನು ತಮ್ಮ ಹಾಡು.. ನಾಟಕ ಮತ್ತು ಬರಹಗಳ ಮೂಲಕ ಅವಕಾಶವಾದಿ ರಾಜಕಾರಣವನ್ನು ವಿಡಂಬನೆ ಅವಕಾಶವನ್ನು ಅವರು ಖಂಡಿತ ಕಳೆದುಕೊಳ್ಳುತ್ತಿರಲಿಲ್ಲ. ಆಳುವ ವರ್ಗದ ಜೊತೆ ಎಂದೂ ಅಧಿಕಾರ ಪದವಿಗಾಗಿ ರಾಜಿಯಾಗದೆ ಬದಲಾಗಿ ಅವರ ಹುಳುಕುಗಳನ್ನು ಸದಾ ಹುಡುಕುತ್ತಾ ಅದಕ್ಕೆ ಅಕ್ಷರ, ಹಾಡು, ನಾಟಕದ ರೂಪಗಳನ್ನು ನೀಡಿ ಜನತೆಯ ಸದಾ ಎಚ್ಚರಿಸುತ್ತಿದ್ದ ಕಲಾವಿದ ಸಪ್ದರ್ ಹಷ್ಮೀ ಆ ಕಾರಣದಿಂದಲೇ ಆಳುವವರ ಕೆಂಗಣ್ಣಿಗೆ ಗುರಿಯಾದರು.
ಅದು 25 ವರ್ಷಗಳ ಹಿಂದಿನ ಕಥೆ. 1989 ಜನವರಿ 1, ಜಗತ್ತು ಮತ್ತು ದೇಶದೆಲ್ಲೆಡೆ ಹೊಸವರ್ಷದ ಸಂಭ್ರಮ..! ಆದರೆ ಸಪ್ದರ್ ಹಷ್ಮೀ ಮತ್ತು ಆತನ ಜನನಾಟ್ಯ ಮಂಚ್(ಜನಂ) ತಂಡ ದೆಹಲಿ ಸಮೀಪದ ಸಾಹಿದಾಬಾದ್ ಎನ್ನುವ ಕಾರ್ಮಿಕರೆ ಹೆಚ್ಚಾಗಿ ವಾಸಿಸುವ ಜನವಸತಿ ಮತ್ತು ಕೈಗಾರಿಕಾ ಪ್ರದೇಶದಲ್ಲಿದ್ದರು. ಸಾಹಿದಾಬಾದ್ ನಗರಸಭೆಗೆ ಚುನಾವಣೆ ಘೋಷಣೆಯಾಗಿದ್ದವು. ಅಂತಹ ಸನ್ನಿವೇಶದಲ್ಲಿ ಸಪ್ದರ್ ಮತ್ತು ಅವರ ‘ಜನಂ’ ತಂಡ ‘ಅಲ್ಲಾ ಬೋಲ್’ ಎನ್ನುವ ವಿಡಂಬನಾತ್ಮಕ ಬೀದಿ ನಾಟಕದ ಮೂಲಕ ಆ ಪ್ರದೇಶದ ದುಡಿಯುವ ವರ್ಗ ವಿಶೇಷವಾಗಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಂಕಟಗಳನ್ನು ಹಾಗೂ ಸ್ಥಳೀಯ ಪೊಲೀಸರು-ಕೈಗಾರಿಕಾ ಮಾಲೀಕರು ಹಾಗೂ ಆ ಪ್ರದೇಶದ ರಾಜಕಾರಣದ ನಡುವಿದ್ದ ಕಾನೂನು ಬಾಹಿರ ನಂಟನ್ನು ಎಳೆ-ಎಳೆಯಾಗಿ ಬಿಡಿಸಿಟ್ಟು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿತ್ತು.
ದೆಹಲಿ ಸುತ್ತಮುತ್ತಲಿನ ಆ ಪ್ರದೇಶದಲ್ಲಿ ‘ಜನಂ’ ತಂಡದ ಈ ಚಟುವಟಿಕೆಗಳು ಅದಾಗಲೇ ಬಹಳ ಜನಪ್ರಿಯವಾಗಿದ್ದವು. ಇದರಿಂದಾಗಿ ಕ್ರೋಧಗೊಂಡಿದ್ದ ರಾಜಕೀಯ ಪ್ರೇರಿತ ಶಕ್ತಿಗಳು ಜನವರಿ 1 ರ ಮಧ್ಯಾಹ್ನ ನಾಟಕ ಪ್ರದರ್ಶಿಸುತ್ತಿದ್ದ ತಂಡದ ಮೇಲೆ ಸುಮಾರು 150 ಜನರ ಗೂಂಡಾಪಡೆ ಏಕಾಏಕಿ ದಾಳಿ ನಡೆಸಿತು. ಹಲ್ಲೆಕೋರರಿಂದ ಹೇಗ್ಹೋ ತಪ್ಪಿಸಿಕೊಂಡ ಕಲಾವಿದರು ಸ್ಥಳೀಯ ಕಾರ್ಮಿಕ ಸಂಘದ ಕಛೇರಿಯಲ್ಲಿ ಆಶ್ರಯಪಡೆದರು. ಆದರೆ ಅಲ್ಲಿಗೂ ನುಗಿದ ಗೂಂಡಾಪಡೆ ದೊಣ್ಣೆ, ಲಾಠಿ ಹಾಗೂ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ತನ್ನ ಸಹಕಲಾವಿದರನ್ನೆಲ್ಲಾ ಬೆಂಗಾವಲಾಗಿ ರಕ್ಷಿಸುತ್ತಾ ಬಾಗಿಲಲ್ಲೇ ನಿಂತಿದ್ದ ಸಪ್ದರ್ ಹಷ್ಮೀ ಅಂದಿನ ಕಾಂಗ್ರೆಸ್ ಪಕ್ಷದ ಆ ಗೂಂಡಾಗಳು ನಡೆಸಿದ ಮಾರಣಾಂತಿಕ ಪೆಟ್ಟುಗಳಿಂದಾಗಿ ಸಾವನಪ್ಪಿದರು. ಆ ಮೂಲಕ ಆಳುವವರು ರೂಪಿಸಿದ ಸಂಚಿಗೆ ಬಲಿಯಾಗಿ ಹುತಾತ್ಮರಾದರು.

ಹಷ್ಮೀ ಮತ್ತವರ ಸಂಗಾತಿಗಳು ನಡೆಸುತ್ತಿದ್ದ ಕೆಲಸವೇ ಅಂತಹುದ್ದು. ಇಡೀ ದೆಹಲಿ ಮಾತ್ರವಲ್ಲ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಎಲ್ಲಿಯೇ ಅನ್ಯಾಯ, ದಬ್ಬಾಳಿಕೆ ಕೂಗು ಕೇಳಿದರೆ ಅಲ್ಲಿಗೆ ಪ್ರತ್ಯಕ್ಷವಾಗುತ್ತಿತ್ತು ‘ಜನನಾಟ್ಯಮಂಚ್’ ತಂಡ.! ಅದು ಹೊಟೇಲ್ ತಿಂಡಿ ಬೆಲೆ ಏರಿಕೆ, ದೆಹಲಿ ನಗರ ಬಸ್ ಪ್ರಯಾಣ ದರ ಏರಿಕೆ, ಕಾರ್ಮಿಕರ ನ್ಯಾಯಯುತ ಮುಷ್ಕರ ಸೇರಿದಂತೆ… ಜನತೆಯ ಮೇಲೆ ನಡೆಯುವ ಎಲ್ಲಾ ದಬ್ಬಾಳಿಕೆಗಳಿಗೆ ಉತ್ತರವಾಗಿ ‘ಜನಂ’ ತಂಡ ದೆಹಲಿಯ ‘ಮಂಡಿಹೌಸ್’ ಮತ್ತು ಕನಾಟ್ ಪ್ಲೇಸ್ ಗಳಲ್ಲಿ( ನಮ್ಮ ಬೆಂಗಳೂರಿನ ಕಲಾ ಕ್ಷೇತ್ರದಂತೆ) ಕುಳಿತು ಹಾಡು, ನಾಟಕಗಳನ್ನು ಸಿದ್ದಪಡಿಸಿ ಅಲ್ಲೇ ರಿಹರ್ಸಲ್ ಮಾಡುತ್ತಿತ್ತು.
ಅಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಹೊಸ ನಾಟಕಗಳನ್ನು ವಿಕ್ಷೀಸಲು ನೂರಾರು ಜನರು ಸೇರುತ್ತಿದ್ದರು ಹೀಗಾಗಿ 80 ದಶಕದಲ್ಲಿ ‘ಕನಾಟ್ ಪ್ಲೇಸ್’ ಎಂದರೆ ದೆಹಲಿ ಪೊಲೀಸರಿಗೆ ಬೆವರಿಳಿಯುತ್ತಿತ್ತು. ಆಕಾರಣದಿಂದಾಗಿ ಅವರು ಆ ಪ್ರದೇಶದ ಸುತ್ತಮುತ್ತ ಎಷ್ಟೋ ಬಾರಿ ಕಲಂ 144 ಹೇರುತ್ತಿದ್ದರು.!
ಸಪ್ಧರ್ ಸದಾ ಹಸನ್ಮುಖಿ. ನಗು-ನಗುತ್ತಲೇ ಎಲ್ಲರನ್ನೂ ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ವ ಅವರದು. ಅತ್ಯಂತ ಚಿಕ್ಕವಯಸ್ಸಿನಲ್ಲೇ ಅವರೊಲ್ಲೊಬ್ಬ ಕವಿ, ಕಲಾವಿದ ಮನೆಮಾಡಿಕೊಂಡಿದ್ದ ಮಾತ್ರವಲ್ಲ ಒಬ್ಬ ಅತ್ಯುತ್ತಮ ಬರಹಗಾರ ಮತ್ತು ಜನಪರ ಹೋರಾಟಗಾನಿದ್ದ. ವಿದ್ಯಾರ್ಥಿ ದಿಸೆಯಿಂದಲೂ ಸಪ್ದರ್ ಪ್ರತಿಭಾವಂತರಾಗಿದ್ದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮುಗಿಸಿ ಕೆಲ ಕಾಲ ಕಾಶ್ಮೀರದಲ್ಲಿ ಅಧ್ಯಾಪಕನಾಗಿ ನಂತರ ಪ.ಬಂಗಾಳ ಸರ್ಕಾರದ ವಾರ್ತಾಧಿಕಾರಿ ದೆಹಲಿಯಲ್ಲಿದ್ದು ಕಾರ್ಯನಿರ್ವಹಿಸಿದರು. ಸಪ್ದರ್ ಹಷ್ಮೀ ಹತ್ಯೆಯಾಗಿದ್ದು ಕೇವಲ ತನ್ನ 34 ವರ್ಷದಲ್ಲಿ.! ನಿಜ, ಅದು ಸಾಯುವ ವಯಸ್ಸಲ್ಲ. ಆದರೆ ಆಳುವ ವರ್ಗದ ಹಿತಾಸಕ್ತರಿಗೆ ಅವರು ಹೆಚ್ಚು ದಿನಗಳು ಬದುಕಿದಷ್ಟು ಕಷ್ಟದ ದಿನಗಳು ಎಂಬುದು ಮನದಟ್ಟಾಗಿತ್ತು. ಅದಕ್ಕಾಗಿ ಒಬ್ಬ ಮಹಾನ್ ಕಲಾವಿದನೊಬ್ಬನ ಬದುಕನ್ನೇ ಇಲ್ಲವಾಗಿಸಲು ಜನವರಿ 1 ರಂದು ಮುಹೋರ್ತ ನಿಗದಿಪಡಿಸಿದ್ದರು.
ಮಹಾನ್ ಕಲಾವಿದ ಹಷ್ಮೀ ಹತ್ಯೆಯನ್ನು ಇಡೀ ದೇಶವೇ ಒಂದಾಗಿ ಖಂಡಿಸಿತ್ತು. ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದವು. ಜನವರಿ 2 ರಂದು 14 ಕೀ.ಮೀ ನಡೆದ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಸಂಖ್ಯೆ 10 ಸಾವಿರ ದಾಟಿತ್ತು.! ಸಪ್ದರ್ ತಾಯಿ, ಖ್ಯಾತ ನಾಮರಾದ ಭೀಷ್ಮ ಸಹಾನಿ, ಹಬೀಬ್ ತನ್ವೀರ್, ಯಶಪಾಲ, ಸುರ್ಜಿತ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಇನ್ನೂ ಸ್ಪೂರ್ತಿ ನೀಡಿದ ಸಂಗತಿ ಎಂದರೆ ಜನವರಿ 3 ರಂದು ಅಂದರೆ ಹಷ್ಮೀ ಹತ್ಯೆಯಾದ ಎರಡೇ ದಿನದಲ್ಲಿ ಅದೇ ‘ಜನಂ’ ತಂಡ ಸಪ್ದರ್ ಹೆಂಡತಿ ಮಾಲಶ್ರೀ ಹಷ್ಮೀ ನೇತೃತ್ವದಲ್ಲಿ ಹಷ್ಮೀ ಹತ್ಯೆಯಾದ ಅದೇ ಸಾಹಿದಾಬಾದ್ ಪ್ರದೇಶದಲ್ಲೇ ಭೋಖ್ಸೇ ಮರ್ನೇವಾಲೇ ಕ್ಯಾ ಮೌತ್ಸೇ ಹರ್ನೇ ವಾಲೇ ?(ಹಸಿವಿನಿಂದ ಸಾಯುತ್ತಿರುವ ನಾವು ಸಾವಿಗೆ ಹೆದರುವೆವೆನು?) ಎನ್ನುವ ಘೋಷಣೆಯೊಂದಿಗೆ ಅರ್ಧಕ್ಕೆ ನಿಂತಿದ್ದ ಅದೇ ‘ಅಲ್ಲಾಬೋಲ್ ನಾಟಕವನ್ನು ಪ್ರದರ್ಶಿಸಿ ಆಳುವವರಿಗೆ ನೇರ ಸವಾಲೆಸೆದರು.
ಜಗತ್ ಪ್ರಸಿದ್ದ ಕಲಾವಿದ ಎಂ.ಎಫ್. ಹುಸೇನ್ ಹಷ್ಮೀ ಹತ್ಯೆ ಖಂಡಿಸಿ ರಚಿಸಿದ ಕಲಾಕೃತಿಯು ಬಾಂಬೆಯಲ್ಲಿ ನಡೆದ ಪ್ರದರ್ಶನದಲ್ಲಿ 10 ಲಕ್ಷಕ್ಕೆ ಮಾರಾಟವಾಗುವ ಮೂಲಕ ಹಷ್ಮೀ ಜನಪ್ರಿಯತೆಗೆ ಸಾಕ್ಷಿಯಾಯಿತು. ಹಷ್ಮೀ ಅಮರರಾದ ನಂತರ ಅಸ್ತಿತ್ವಕ್ಕೆ ಬಂದಿರುವ ‘ಸಹಮತ್'(ಸಪ್ದರ್ ಹಷ್ಮೀ ಮೆಮೊರಿಯಲ್ ಟ್ರಸ್ಟ್) ಕಳೆದ ಎರಡೂವರೆ ದಶಕಗಳಲ್ಲಿ ಅಭಿವ್ಯಕ್ತಿ ಸಾತಂತ್ರ್ಯಗಳ ರಕ್ಷಣೆ, ಜಾತಿವಾದ, ಕೋಮುವಾದ, ಭ್ರಷ್ಟಚಾರ ಹಾಗೂ ಜನರ ಬದುಕಿಗೆ ಸಂಬಂಧಿಸಿದ ವಿವಿಧ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
1989 ಏಪ್ರಿಲ್ 12 ರಿಂದ 16 ರವರಗೆ ಬೆಂಗಳೂರಿನಲ್ಲಿ ಸಮುದಾಯ ಸಪ್ದರ್ ಹಷ್ಮೀ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ‘ಸಮಗ್ರತಾ ಉತ್ಸವ’ ವನ್ನು ನಟ ಅನಂತನಾಗ್ ಉದ್ಗಾಟಿಸಿದರು. ಆ ಸಂದರ್ಭದಲ್ಲಿ ರಾಯಚೂರಿನ ಕಲಾವಿದೆ ಶಾಂತ ಕುಲಕರ್ಣಿ…
ಓ ತಾಯಿ ಭಾರತಾಂಬೆ ನಿನ್ನ ಮಗನ ಕೊಂದರು
ನಿನ್ನ ಮಗನ ಕೊಂದರು…
ಹೋರಾಟದ ಜೀವಿಯನ್ನು..ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು…
ಎಂದು ಸುಶ್ರ್ಯಾವ ಕಂಠದಿಂದ ಧ್ವನಿ ಎತ್ತಿ ಹಾಡುತ್ತಿದ್ದರೆ… ಸಂಸ ಬಯಲಿನಲ್ಲಿ ಕುಳಿತಿದ್ದ ಸಾವಿರಾರು ಜನರ ಕಣ್ಣಂಚಿನಲ್ಲಿ ಅವರಿಗೆ ಅರಿವಿಲ್ಲದಂತೆ ಜಿನುಗುತ್ತಿತ್ತು..ಹಷ್ಮೀ ನೆನಪಿನ ಕಣ್ಣೀರು…

‍ಲೇಖಕರು avadhi

16 April, 2014

4 Comments

  1. parashuram boner

    hiriya geleya k. mahantesh spadar hasmi bage bareda baraha odide tumba chenagide. sapdar hasmi kuritu namage tilisikota hiriya geleya mahanteshge vandanegallu
    parashuram boner
    gangavati
    dist:kopalla

  2. ಮಹಂತೇಶ

    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಪರುಶರಾಮ

  3. jaykumar

    safdar hashmi ravarannu nenapisuva baraha tumbaa chennagade. dhanyavaadagalu.

  4. siddappa c

    Second freedom fighter through pen after independence

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading