‘ದಾರಿಯ ಮೊರೆ’ ಒಂದು ಅನುಸಂಧಾನ
ಗಿರಿಜಾ ಶಾಸ್ತ್ರಿ
ಸನದಿಯವರು ತಮ್ಮ ಕವಿತೆಗೆ ‘ದಾರಿಯ ಮೊರೆ’ ಎಂದು ಹೆಸರಿಟ್ಟಿದ್ದಾರೆ.
‘ದಾರಿ’ ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ ‘ಮೊರೆ’ ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ ಹುಟ್ಟಿಸುತ್ತದೆ. ‘ಮೊರೆ’ ಎನ್ನುವ ಶಬ್ದಕ್ಕೆ ಕನ್ನಡದಲ್ಲಿ ‘ರೀತಿ’ ಎನ್ನುವ ಅರ್ಥವೂ ಇದೆ.
ದಾರಿ ಎನ್ನುವುದು ಎರಡು ತುದಿಗಳನ್ನು ಜೋಡಿಸಬಲ್ಲ ಒಂದು ಸಂಪರ್ಕ ಸಾಧನ. ಜೋಡಿಸುವುದು ಇದರ ಗುರಿ. ಮುರಿಯುವುದಲ್ಲ. ಇದು ನಮ್ಮ ಬದುಕಿನ ಗತಿಶೀಲತೆಯ ಸಾಧನ ಕೂಡ ಹೌದು. ಇದು ಪೃಥ್ವಿಯ ಮೇಲಿನ ಎಲ್ಲಾ ಜೀವ ಜಾಲ, ಸಂಸ್ಕೃತಿ, ದೇಶ, ಭಾಷೆಗಳನ್ನು ಬೆಸೆಯುತ್ತದೆ. ಅವುಗಳ ನಡುವಿನ ಎಲ್ಲ ಭೇದಗಳನ್ನು, ಅಡ್ಡ ಗೋಡೆಗಳನ್ನು ಕತ್ತರಿಸಿ ಹರಿಯುತ್ತದೆ. ಇಂಗ್ಲಿಷಿನ ಕ್ಯಾಪಿಟಲ್ ಅಕ್ಷರ (I)ಎದ್ದರೆ ಗೋಡೆಯಾಗುತ್ತದೆ ಅದು ಬಿದ್ದರೆ — ಸೇತುವೆಯಾಗುತ್ತದೆ, ಎನ್ನುವ ಆಂಗ್ಲ ಉಕ್ತಿಯೊಂದಿದೆ. ‘ನಾನು’ ಎಂಬ ವ್ಯಷ್ಟಿಯ ಅಹಂಕಾರವನ್ನು ಮುರಿದು ಸಮಷ್ಟಿಯ ಜೊತೆಗೆ ಸೇತುವೆಯಾಗಲು ಈ ದಾರಿಗೆ ಮಾತ್ರ ಸಾಧ್ಯ.
ಸನದಿಯವರು ಇದನ್ನು ‘ದಾರಿಯ ಮೊರೆ’ ಎಂದಿದ್ದರೂ ಇದು ಕಾಲದ ಮೊರೆ, ಬದುಕಿನ ಮೊರೆ, ಇದು ಕಾಲ ಮತ್ತು ಬದುಕಿನ ರೀತಿ ಮತ್ತು ಮೊರೆತ. ಪ್ರಾರಂಭದಲ್ಲಿ ಕಾಲದ ಹಾಗೆ ಬದುಕಿಗೂ ಆದಿ ಅಂತ್ಯ ವೆಂಬುದಿಲ್ಲ. ಬದುಕು ನಾವು ಹುಟ್ಟಿದ ಮೊದಲೂ ಇರುತ್ತದೆ ಮತ್ತು ನಮ್ಮ ನಂತರವೂ ಮುಂದುವರೆಯುತ್ತದೆ. ವೈಯಕ್ತಿಕ ಹುಟ್ಟು ಸಾವು ಎಂಬುದು ಕೇವಲ ಸಾಪೇಕ್ಷ ಸತ್ಯಗಳಷ್ಟೇ. ಕಾಲದ ಪ್ರವಾಹದಲ್ಲಿ ಅದಕ್ಕೆ ಯಾವ ಪ್ರತ್ಯೇಕ ಮಹತ್ವವಿಲ್ಲ. ಅದು ಕಾಲದ, ಬದುಕಿನ ನಿರಂತರತೆಯನ್ನು ಬೆಸೆಯುವ ಕೊಂಡಿಗಳಷ್ಟೇ.
ಇದು ಕಾಲದ ಮೊರೆ ಏಕೆಂದರೆ, ಆಯಾ ಕಾಲದ ಸಾಂಸ್ಕೃತಿಕ ವೈಷಮ್ಯಗಳ ಗೋಡೆಗಳನ್ನು ಕಿತ್ತು ಸಹ ಬಾಳ್ವೆಯ ನಾಂದಿ ಹಾಡಲು ‘ದಾರಿ’ ಮಾಡಿಕೊಡುತ್ತದೆ. ದಾರಿ ಮಾಡಿಕೊಡುವುದು ಎಂಬ ಮಾತನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ. ಅದಕ್ಕೆ ಸುಗಮಗೊಳಿಸು, ತಿಳಿಗೊಳಿಸು, ಹಗುರಾಗಿಸು ಎಂಬೆಲ್ಲಾ ಅರ್ಥದ ಪದರುಗಳನ್ನು ಹಚ್ಚಬಹುದಾಗಿದೆ. ನಮ್ಮ ಸಾಂಸ್ಕೃತಿಕ ವೈಷಮ್ಯಗಳನ್ನು ಅವು ಹೀಗೆ ತಿಳಿಯಾಗಿಸುತ್ತವೆ.
ದಾರಿ ನದಿಯಂತೆ. ಎಂತಹ ಬೆಟ್ಟ ಗುಡ್ಡಗಳು ಅಡ್ಡ ಬಂದರೂ ಅದು ಹರಿಯುವುದನ್ನು ನಿಲ್ಲಿಸಿಬಿಡುವುದಿಲ್ಲ. ಬಂಡೆ ಕಲ್ಲುಗಳನ್ನು ಕೊರೆದಾದರೂ ಹೋಗಬಹದು, ಇಲ್ಲವೇ ಬಳಸಿಕೊಂಡಾದರೂ ಹೋಗಬಹುದು. ಅದಕ್ಕೆ ಹರಿಯುವುದೊಂದೇ ಗುರಿ. ಹೀಗೆ ಅನೇಕ ಸ್ಥಾವರ ಗುಡ್ಡಗಳನ್ನು ಚಲನಶೀಲವಾಗಿಸುವ ಜಂಗಮ ಸ್ಥಿತಿ ಈ ದಾರಿಯದು. ಈ ದಾರಿ ಮಾನವ ನಿರ್ಮಿತ ಕಲ್ಲು ಸಿಮೆಂಟುಗಳ ದಾರಿ ಮಾತ್ರವಲ್ಲ. ನಾಗರೀಕತೆ ಕಣ್ಣು ಬಿಡುವ ಮುಂಚಿನಿಂದಲೂ ಅದು ಇದೆ. ‘ದಾರಿ ಯಾವುದಯ್ಯ ವೈಕುಂಠಕೆ ಎಂದು ದಾಸರು ಕೇಳುತ್ತಾರೆ.
ಅಂದರೆ ಇದು ‘ಇಹ ಮತ್ತು ಪರ’ ಗಳನ್ನು ಸೇರಿಸುವ ಸೇತುವೆಯೂ ಹೌದು. ಅನೇಕ ಮಹಾತ್ಮರು ಹುಟ್ಟಿ ಚರಿತ್ರೆಯಲ್ಲಿ ಹಲವಾರು ದಾರಿಮಾಡಿಕೊಟ್ಟು ಹೋಗಿದ್ದಾರೆ. ರಾಮನ ದಾರಿ, ಕೃಷ್ಣನ ದಾರಿ, ಕ್ರಿಸ್ತನ ದಾರಿ, ಬುದ್ಧನ ದಾರಿ, ಕಬೀರನ ದಾರಿ ಹೀಗೆ ಎಷ್ಟೆಲ್ಲಾ ದಾರಿಗಳಿವೆ!! ಆಯ್ಕೆ ನಮ್ಮದೇ. ವೈವಿಧ್ಯ ದಾರಿಗಳದ್ದು ಮಾತ್ರ. ಗಮ್ಯ ಮಾತ್ರ ಒಂದೇ. ಅದು ಆತ್ಮ ಸಾಕ್ಷಾತ್ಕಾರ. ಅದರ ಗತಿ ಭಾವೈಕ್ಯತೆ. ಇಂತಹ ಹಂತದಲ್ಲಿ ಎಲ್ಲಾ ದಾರಿಗಳೂ ಸಮಾನ ಮಹತ್ವವನ್ನು ಪಡೆದು ಕೊಳ್ಳುತ್ತವೆ. ವಿವಿಧ ಹಾದಿಯಲ್ಲಿ ಪಯಣಿಸುವ ಎಲ್ಲರೂ ಸಮಾನ ಪಥಿಕರು, ಸಹ ಪಯಣಿಗರು ಎಂಬ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುತ್ತವೆ.
ಭಾವೈಕ್ಯತೆಗೆ ಕಾರಣವಾಗುವ ಈ ದಾರಿಯ ಮೇಲೆ ‘ಅಡ್ಡ ಗೋಡೆಗಳನ್ನು ಕಟ್ಟುವುದು ಬೇಡ’ ಎನ್ನುವುದೇ ಈ ‘ದಾರಿಯ ಮೊರೆ’ ಇದು ಅನಾದಿ ಕಾಲದಿಂದ ಹೀಗೆ ಮೊರೆಯುತ್ತಲೇ ಇದೆ. ಗೋಡೆಗಳು ಎದ್ದಷ್ಟೂ, ‘ದಾರಿ’ ಮುಚ್ಚಿಹೋಗುತ್ತದೆ. ತನ್ನದೆನ್ನುವ ‘ಅಹಮ್ಮಿನ ಕೋಟೆಯೊಳಗೆ’ (ಜಿ.ಎಸ್.ಎಸ್.) ಅಜ್ಞಾನ ವಿಜೃಂಭಿಸುತ್ತದೆ. ದಾರಿ ಬಯಲಾದರೆ, ಕೋಟೆ ಕಟ್ಟಡಗಳು ಸ್ಥಾವರ ವಾದವು. ಸ್ಥಾವರ ತನ್ನ ಅಸ್ಮಿತೆಯ ಶ್ರೇಷ್ಠತೆಯನ್ನು ಮೆರೆಯುವ ಅಹಂಕಾರದಲ್ಲಿ ಇನ್ನೊಂದರ ಅಸ್ಮಿತೆಗೆ ಧಕ್ಕೆಯೊದಗಿಸುತ್ತದೆ. ಅಸ್ಮಿತೆಯ ಎಲ್ಲಾ ಪೊರೆಗಳನ್ನು ಒಂದೊಂದಾಗಿ ಕಳೆದು ಕೊಂಡು ‘ಈಗ ನಾನು ಯಾರೂ ಅಲ್ಲ’ (ಪು.ತಿ.ನ) ಎನ್ನುವ ಸ್ಥಿತಿಗೆ ನಮ್ಮನ್ನು ತಲಪಿಸುವ ದಾರಿಯೊಂದಿದೆ. ಅದು ಬುದ್ಧನ ದಾರಿ ಭಾವೈಕ್ಯದ ದಾರಿ.
ಕೆಲವು ಜನರು ಈಗಾಗಲೇ ನಿರ್ಮಾಣವಾಗಿರುವ ಇಂತಹ ದಾರಿಯಲ್ಲಿ ಸಾಗುತ್ತಾರೆ. ಕೆಲವರು ಅಡ್ಡದಾರಿ ಹಿಡಿಯುತ್ತಾರೆ. ಇನ್ನೂ ಕೆಲವರಂತೂ ಮಾರ್ಗ ಸೂಚಿಯನ್ನೇ ಮಾರ್ಗವೆಂದು ಭ್ರಮಿಸಿ, ಅದರ ಲಾಂಛನವನ್ನು ಹಿಡಿದು ಕೊಂಡು ಕುಳಿತಲ್ಲೇ ಕುಳಿತುಬಿಡುತ್ತಾರೆ. ಮಹಾತ್ಮರ ದಾರಿಯೆಂದರೆ ಅವು ಮಾರ್ಗ ಸೂಚಿಗಳೇ ಹೊರತು ಅವು ತಮ್ಮಷ್ಟಕ್ಕೇ ತಾವು ಮಾರ್ಗಗಳಲ್ಲ. ಅದು ಪ್ರಾರಂಭಕ್ಕೆ ‘ಮಸುಕು ಮಸುಕಾಗಿ’ ಕಂಡರೂ ಆ ಸೂಚಿಯನ್ನು ಹಿಡಿದು ಮಾರ್ಗದ ಮೇಲೆ ಕ್ರಮಿಸಿದರೆ ಮಾತ್ರ ಮಾರ್ಗತೆರೆದು ಕೊಳ್ಳುತ್ತಾ ಹೋಗುತ್ತದೆ. ಸಾಧನೆ, ಪರಿಶ್ರಮದೊಂದಿಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಹೀಗೆ ಪ್ರತಿಯೊಬ್ಬರ ಪಯಣ, ಅದರ ರೀತಿ ವೈಯಕ್ತಿಕವಾಗಿರುವಂತೆ, ವಿಶಿಷ್ಟವಾದುದು ಕೂಡ.
ಅಪರೂಪಕ್ಕೆ ಒಮ್ಮೊಮ್ಮೆ ತಮ್ಮದೇ ಹಾದಿಯನ್ನು ನಿರ್ಮಾಣ ಮಾಡಿಕೊಳ್ಳುವ ಮಹಾತ್ಮರು ಹುಟ್ಟಿ ಬರುತ್ತಾರೆ. ಹೊಸ ಹಾದಿಯ ನಿಮರ್ಾಣವೆಂಬುದು ಅತ್ಯಂತ ಸೃಜನಶೀಲವಾದದ್ದು. ಅದಕ್ಕೆ ಹೊಸ ಕಾಣ್ಕೆ ಬೇಕು. ಕಾಲದ ಕೃಪೆ ಬೇಕು.
ದಾರಿಯ ಮೊರೆ
– ಬಿ.ಎ. ಸನದಿ
ಧ್ರುವ ಬಿಂದು -1995
ಎಲ್ಲಿ ಹುಟ್ಟಿತೊ ಎಲ್ಲಿ ಮುಟ್ಟಿತೊ
ಈ ಅನಂತ ದಾರಿ!
ಬಂದರು ಅಡೆತಡೆ ಇದಕೇತರ ಭಿಡೆ
ನಡೆಯುವುದೊಂದೆ ಗುರಿ !
ಕೊಳ್ಳ ತಿಟ್ಟಗಳ ಗುಡ್ಡ ಬೆಟ್ಟಗಳ
ಹತ್ತಿಇಳಿದು ಸುಳಿದು,
ಬಯಲು ಸೀಮೆಗಳ
ಹಸಿರು ಭೂಮಿಗಳ
ದಾಟುತ ಮುನ್ನಡೆದು,
ಕ್ಷಣ ಕ್ಷಣ ದಿನ ದಿನ ಶತ ಶತಮಾನ
ಕಾಲವುರುಳುತಿರಲು
ಈ ಜನ ಆ ಜನ ದೇಶ-ಭಾಷೆಗಳ
ರೇಷೆಗಳೆಳೆದಿರಲು
ಯಾವ ಇತಿಗೆ ಸಹ ಸಿಲುಕದ ನಿರ್ಮಿತಿ
ಪ್ರಕೃತಿಯ ಈ ಗೆರೆಯು
ನರಳದು ಕೆರಳದು ಭೇದ-ಭವಗಳ
ಜಗವಾಗಿರೆ ಹೊರೆಯು !
ಒಂದೆ ಮನುಜ ಕುಲದಲ್ಲಿ ಏಸು ವಿಧ
ಏಸು ಭಾವ-ಬಂಧ !
ಹೆಜ್ಜೆ ಹೆಜ್ಜೆಗೂ ಇತಿಮಿತಿಗಳ ಗೆರೆ
ಕೊರೆವುದೇನು ಚಂದ!
ಒಂದೆ ಬಾರಿಗೆ ನಮ್ಮ ದಾರಿಗೆ
ಬಂದುದು ಈ ಬದುಕು
ಬಲ್ಲೆವೆ ಕೊನೆಗೆ ಹೋಗುವೆವೆಲ್ಲಿಗೆ
ಮೊದಲಿದ್ದೆವೆ ಇದಕು ?
ಬಂದುದೇನೊ ದಿಟ ಮಸಕು ಮಸಕು ಪುಟ
ಹಿಂದು ಮುಂದಿನರಿವು;
ಜೀವ ಭವಗಳ ಬೆಸೆವ ಬದುಕಿನಲಿ
ಇಟ್ಟ ಹೆಜ್ಜೆ ಚಿರವು!
ಲೆಕ್ಕವಿಲ್ಲದೀ ಭೇದಗಳಳಿಯುವ
ಬದುಕಿಳಿಯಲಿ ಧರೆಗೆ!
ಮನುಜ ಕುಲದ ಭಾವೈಕ್ಯವೆ ಉತ್ತರ
ಈ ದಾರಿಯ ಮೊರೆಗೆ!
0 Comments