ಕವಿ ಸನದಿಯ ಹೃದಯದಲ್ಲಿದ್ದ ಪಂಪ 

ನಾಗರಾಜ ಹರಪನಹಳ್ಳಿ 

ಕವಿ ಬಾಬಾ ಸಾಹೇಬ.ಎ.ಸನದಿ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ನಮ್ಮ ವಾರ್ತಾ ಇಲಾಖೆಯ ಮೇಡಂ ನಜರಾಬಿ ದೂರವಾಣಿ ಕರೆ ಮಾಡಿ ತಿಳಿಸಿದರು. ರವಿವಾರ ಬೆಳಗಿನ ಜಾವ 5.30ಕ್ಕೆ ಅವರು ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು, ಹೃದಯಾಘಾತವಾಗಿ ನಿಧನರಾದರು ಎಂಬ ಸುದ್ದಿ ತಿಳಿಯಿತು.

ಇದೇ ಮಾರ್ಚ 18 ರಂದು ವ್ಯಾಟ್ಸಪ್‍ನಲ್ಲಿ ನನಗೆ  `ಕುಮಟಾಕ್ಕೆ ಬಂದಿದ್ದೇವೆ. ಬೆಳಗಾವಿಯಲ್ಲಿ ಬಿಸಿಲು ಸಿಳ್ಳು ಹಾಕುತ್ತಿತ್ತು. ಇಲ್ಲಿನ ಬಿಸಿಲು ಕಹಳೆ ಊದುತ್ತಿದೆ !’ ಎಂದು ಮೆಸೇಜ್ ಮಾಡಿದ್ದರು. ಇದೇ ಸಂದೇಶ ಕೊನೆ. ಇದಕ್ಕೂ ಎರಡು ದಿನ ಮೊದಲು ಬೆಳಗಾವಿಯ ಸಿಂಧೊಳ್ಳಿಯಲ್ಲಿದ್ದ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೆ. ಸಂಬಂಧಿಕರು ಬಿಡುತ್ತಿಲ್ಲ. ಕುಮಟಾಕ್ಕೆ ಬಂದ ಮೇಲೆ ಮಾತನಾಡುವೆ ಎಂದಿದ್ದರು.

ಫೆ.16 ರಂದು ಕಾರವಾರದಲ್ಲಿ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕಲ್ಲೂರು ಎಜುಕೇಶನ್ ಟ್ರಸ್ಟನ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಸಮಾರಂಭ. ಅಲ್ಲಿಂದ ಅವರು ಸ್ವಗ್ರಾಮ ಬೆಳಗಾವಿಯ ಸಿಂಧೊಳ್ಳಿಗೆ ತೆರಳಿದ್ದರು.
ಕಾರವಾರದ ಆ ಸಮಾರಂಭದಲ್ಲಿ ಕವಿ ಬಾಬಾ ಸಾಹೇಬ ಸನದಿ ಅವರು ಮಾತುಗಳು ಹೀಗಿದ್ದವು…

“ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡ ನಮ್ಮನ್ನು ತಲೆತಗ್ಗಿಸುವಂತೆ ಮಾಡಿದೆ. ಮನುಷ್ಯರು ಇನ್ನಾದರೂ ದ್ವೇಷ ಬಿಟ್ಟು ಜನರನ್ನು ಪ್ರೀತಿಸುವುದನ್ನು ಕಲಿಯಬೇಕು.ಕನ್ನಡದ ಆದಿ ಕವಿ ಪಂಪ ಮನುಷ್ಯ ಕುಲಂ ತಾನೊಂದೇ ವಲಂ ಎಂದಿದ್ದಾನೆ. ಪಂಪನ ಒಂದು ವಾಕ್ಯ ಇಡೀ ವಿಶ್ವದ ಮೇಲಿನ ಮನುಷ್ಯರಿಗೆ ಸಂಬಂಧಿಸಿದ್ದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು  ಹೇಳಿದರು. ನಮ್ಮ ಕನ್ನಡ ನಾಡು ಇಡೀ ವಿಶ್ವದ ಮಾನವತೆಯ ಕುರಿತು ಮಾತನಾಡಿದೆ. ಇದನ್ನು ನಾವು ದಿನನಿತ್ಯ ನೆನಪಿಸಿಕೊಳ್ಳಬೇಕಿದೆ ಎಂದು ಕವಿ ಸನದಿ ಹೇಳಿದರು.

ಮನುಷ್ಯರೆಲ್ಲಾ ಒಂದೇ ಒಂದೇ ಕರ್ನಾಟಕ ಒಂದೇ, ಭಾರತ ಒಂದೇ ಎಂದು ಕವಿ ಬೇಂದ್ರೆ ಹಾಡಿದ್ದಾರೆ. ಮನುಜ ಮತ, ವಿಶ್ವಪಥ ಎಂದು ವಿಶ್ವಕ್ಕೆ ಸಂದೇಶ ನೀಡಿದ ಸಂಸ್ಕøತಿ ಕನ್ನಡದ್ದು, ಕನ್ನಡದ ಸಾಂಸ್ಕøತಿಕ ನೆಲ ವಿಶ್ವದ ಮನುಷ್ಯರೆಲ್ಲಾ ಒಂದೇ ತಾಯಿ ಮಕ್ಕಳು ಎಂದು ಸಾರಿದೆ. ಇದನ್ನು ಉಳಿಸಿಕೊಳ್ಳಬೇಕಾದ ಸನ್ನಿವೇಶ ಈಗ ನಿರ್ಮಾಣವಾಗಿದೆ.”

ಪಂಪ ಪ್ರಶಸ್ತಿ ಘೋಷಣೆಯಾದ ಸಮಯ.

13.1.2017 ರಂದು ಕಾರವಾರ ತಾಲೂಕಿನ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಬಿ.ಎ.ಸನದಿ ಅವರ ಸಾಹಿತ್ಯದ ಹಾದಿ ಮೆಲುಕು ಹಾಕಲೆಂದು  ಅವರ ಜೊತೆ  ಸಂವಾದ ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದೆ. ಆ ಸಮಾರಂಭದಲ್ಲಿ ಸನದಿ ಅವರು ತಮ್ಮ ಬದುಕಿನ ಹಾದಿಯನ್ನು ವಿದ್ಯಾರ್ಥಿಗಳ ಜೊತೆ ತೆರೆದಿಟ್ಟಿದ್ದರು. ಆ ಸಮಾರಂಭದ ನೆನಪುಗಳನ್ನು ಅವರ ಮನದಾಳದ ಅಲೆಗಳು ಕೃತಿಯಲ್ಲಿ ಸನದಿ ಅವರು ಸ್ಮರಿಸಿಕೊಂಡಿದ್ದಾರೆ. ಆ ಸಮಾರಂಭದ ನೆನಪಿಗಾಗಿ ನಾನು ಮತ್ತು ವಾರ್ತಾಧಿಕಾರಿ ಶಫಿ ಸಾದುದ್ದೀನ್ ಅವರು ಸೇರಿ ಪಂಪನ ಹಾದಿಯಲ್ಲಿ ಕೃತಿ ತಂದೆವು. ಅದರಲ್ಲಿ ಸನದಿ ಅವರು ಸಂವಾದದಲ್ಲಿ ಹೊರ ಹೊಮ್ಮಿದ ಮಾತುಗಳನ್ನು ಹಾಗೂ ಅಂದು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದವರ ಕವಿತೆಗಳನ್ನು ಸೇರಿಸಲಾಗಿದೆ.

ಕವಿ ಸನದಿ ಅವರ ತುಳಸೀಕಟ್ಟೆ ಕವಿತೆ ಸಹ ಪಂಪನ ಹಾದಿಯಲ್ಲಿ ಕೃತಿಯಲ್ಲಿದೆ. ಬೆಳಗಾವಿಯ ಸಿಂಧೊಳ್ಳಿ ಗ್ರಾಮದ ಸನದಿ ಅವರು ಕುಮಟಾಕ್ಕೆ ಬಂದು ನೆಲಸಲು ಕಾರಣ ಸಮುದ್ರ ದಂಡೆಯ ಶಾಂತ ವಾತಾವರಣದ ಊರು. ಮೇಲಾಗಿ ಅವರ ಪತ್ನಿಯ ಊರು. ಅವರಿಗೆ 86 ತುಂಬಿ, 87 ನೇ ವರ್ಷಕ್ಕೆ ಕಾಲಿಟ್ಟಿದ್ದರು. 2019 ಅಗಸ್ಟ ತಿಂಗಳು ಬಂದರೆ ಅವರು 87ನ್ನು ಪೂರ್ಣಗೊಳಿಸುತ್ತಿದ್ದರು.

2017 ರಿಂದ ಅವರು ಕಾರವಾರ, ಬನವಾಸಿ ಮತ್ತು 2019 ರಲ್ಲಿ ಕಾರವಾರದಲ್ಲಿ ಮಾತನಾಡಿದ ಸಮಾರಂಭಗಳಲ್ಲಿ ಪಂಪ ಅವರ ಹೃದಯವನ್ನು ತುಂಬಿ ಕೊಂಡಿದ್ದ. ಪಂಪ ಅವರ ನಾಲಿಗೆಯ ಮೇಲೆ ಸದಾ ನಲಿದಾಡುತ್ತಿದ್ದ. ಅನುವಾದ, ಮಕ್ಕಳ ಸಾಹಿತ್ಯ, ವಿಮರ್ಶೆ, ಪ್ರವಾಸ ಸಾಹಿತ್ಯ, ಸಂಪಾದನೆಯ ಕೃತಿಗಳನ್ನು ನೀಡಿದ್ದರೂ, ಅವರು ಕವಿ. ಕವಿ ಮನಸ್ಸಿನ ಪ್ರತೀಕವಾಗಿ ಅವರ 18 ಕವನ ಸಂಕಲನಗಳು ನಮ್ಮ ಮುಂದಿವೆ.
ಸೂರ್ಯಪಾನ,ಮರುಭೂಮಿ ಅವರ ಪ್ರಮುಖ ಕವನ ಸಂಕಲನ. ಆಶಾಕಿರಣ(ಸುನೀತಗಳು), ನೆಲಸಂಪಿಗೆ,ತಾಜಮಹಲ್, ಹಿಮಗಿರಿಯ ಮಡಿಲಲ್ಲಿ, ವೀರ ಕಂಕಣ, ಧ್ರುವಬಿಂದು,ಪ್ರತಿಬಿಂಬ,ಸೀಮಾಂತರ, ಮುಂಬೈ ಮಳೆ, ಮನೆಮನೆಗೆ ಬೇಲಿ, ಗೀತ ಗುಂಜನ, ಸಂಭವ, ಥಸ್ರ್ಟಿ ವಡ್ರ್ಸ(ಇಂಗ್ಲೀಷ್ ಗೀತೆಗಳು), ಹೊಸ ಶಬ್ದಸಂಸಾರ, ಬಾನಾಡಿ, ಮಾಯಾನಗರಿ,ಬದುಕಿನ ಬೇರು ಅವರ ಕವನ ಸಂಕಲನಗಳು.

‍ಲೇಖಕರು avadhi

March 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: