ಒಂದು ಪ್ರೇಮಪತ್ರವು…
ಕಣ್ಣುಗಳನ್ನು ಬಿತ್ತಿ ಮುದ್ದಾದ ಹೆಣ್ಣು ಬೆಳೆಯುವ ಹುಡುಗನಿಂದ…
ಪುಟ್ಟಾ..
ಮನೆಯ ಮುಂದಿನ ಮರದ ಮೇಲಿನ ಗೂಡಿನಲ್ಲಿ ಹಕ್ಕಿಯೊಂದು ಒಮ್ಮೆ ರೆಕ್ಕೆ ಬಡಿದು ಮಗ್ಗಲು ಬದಲಿಸಿದ ಸದ್ದು. ಯಾವ ಕನಸು ಅದನ್ನು ಕಾಡುತ್ತಿದೆಯೊ? ಅದು ಯಾರನ್ನು ನೆನೆದು ಹೀಗೆ ತೊಳಲುತ್ತಿದೆಯೊ? ನಾ ಮಲಗಿರುವ ರೂಮಿನ ಬಾಗಿಲಲಿ ಕನಸುಗಳು ಸಾಲುಗಟ್ಟಿ ಶಿಸ್ತಿನಲ್ಲಿ ನಿಂತಿವೆ. ಚೂರು ಧಾವಂತ, ಚೂರು ಸಾವಧಾನ. ಆದರೆ ಈ ಕಣ್ಣುಗಳನ್ನು ಯಾಕೊ ನಿದ್ದೆ ತೊರೆದು ಹೊಯಿತು. ನಾನು ಮತ್ತು ಆ ಗೂಡಿನ ಹಕ್ಕಿ ಯಾವ ಬಿಂದುವಿನಲ್ಲಿ ಎದುರಾಗುತ್ತೇವೆ?
ಸಾಲು ನಿಂತ ಕನಸುಗಳು, ಅಲ್ಲಿ ದೂರದಲ್ಲಿ ಮೈ ಚಾಚಿದ ನೀನು.. ಇಲ್ಲಿ ನಿದ್ದೆ ಕಳೆದುಕೊಂಡು ಎದ್ದು ಕೂತ ನಾನು..
ಮತ್ತು ಇಂದು ನೀನು ಟೈಪಿಸಿ ಕಳುಹಿಸಿದ ಆ ಮೆಸೇಜ್ ಮತ್ತು ಅದಕ್ಕೆ ನಾನು ಉತ್ತರಿಸಲು ತೆಗೆದುಕೊಂಡ 56 ಸೆಕೆಂಡ್ ಗಳ ಕಾಲಾವಧಿ..
ಓಹ್.. ಏನಿದು. ಎಲ್ಲವೂ ಒಂದು ಬಿಂದುವಿನಲ್ಲಿ!
“ನಮ್ಮ ಮೊದಲ ಭೇಟಿಯಲ್ಲಿ ಕಂಡ ಹಾಗೆ ಈಗ ನಾನಿಲ್ಲ.
Do you still love me?” ಕಿಬ್ಬೊಟ್ಟಿಯಿಂದ ಚಿಮ್ಮುವ ನೋವಿನಂತೆ ನೀನು ಆ ಪ್ರಶ್ನೆಯೊಂದನ್ನು ನನ್ನೆದುರಿಗಿಟ್ಟೆ..
ನಾನು ಧಡಾರನೆ ನಿನ್ನ ಕಡೆ ತಿರುಗಿ ನೋಡಿದೆ. ನಿನ್ನ ಕಣ್ಣಲ್ಲಿ ಸಣ್ಣ ಮುಗಿಲು..
“Of course, yes! ನೀನು ಬದಲಾಗಿದ್ದ ನಾ ಗಮನಿಸಿಯೇ ಇಲ್ಲ.”
ನಾನು ಇದನ್ನು ಬರೀ ಉತ್ತರವೆಂಬಂತೆ ನಿನ್ನ ಮುಂದೆ ಇಡಲಿಲ್ಲ. ನನ್ನನ್ನು ನಾನು ತೆರೆದುಕೊಂಡೆ. ಉತ್ತರವನ್ನು ಬೇಗ ಹೇಳಿದರೆ ಅದು ಹೆಚ್ಚು ಸರಿಯೊ? ತಡವಾಗಿ ಹೇಳಿದರೆ ಹೆಚ್ಚು ಸರಿಯೊ.. ?
ನಿನ್ನ ಮಗುತನ ನನಗೆ ಇಷ್ಟ ಆಯ್ತು.. ನಾನು ದುಡುದುಡು ಬಂದು ನಿನ್ನ ಹಣೆಗೆ ಮುತ್ತಿಟ್ಟೆ. ಜೋಡಿ ಪಾರಿವಾಳಗಳು ಕಿಚಕಿಚ ಅಂದು, ಒಮ್ಮೆ ನಮ್ಮನ್ನು ನೋಡಿ ಹಾರಿ ಹೋದವು; ಅವಕ್ಕೂ ಖುಷಿ.
“ನೋಡು… ನನ್ನ ಸೊಂಟದ ಸುತ್ತಳತೆ ಹೆಚ್ಚಿದೆ… ಚರ್ಮ ಮೊದಲಿನಷ್ಟು ನುಣುಪಿಲ್ಲ… ಹೀಗಿರುವ ನಾನು ನಿನಗೇಕೆ ಬೇಕು ಹೇಳು …??” ಹಾಗಂತ ನೀನು ಕೇಳಬಹುದಾ ಡಿಯರ್? ಆ ಕ್ಷಣಕ್ಕೆ ನಿನ್ನನ್ನು ನಾನು ನನ್ನ ಎರಡೂ ಬೊಗಸೆಯಲ್ಲಿ ತುಂಬಿಕೊಂಡೆ. ನೀನು ನನ್ನ ಕಣ್ಣಲ್ಲಿ ಅದೇನು ಹುಡುಕುತ್ತಿದ್ದೆ!?
ಉತ್ತರವಾ..?
ಹುಚ್ಚು ಹುಡುಗಿ. ನಾಲ್ಕು ಹರಿದಪದ ಪೋಣಿಸಿ ಹೇಳುವ ಎರಡು ಮಾತುಗಳು ಸಮಾಧಾನ ಕೊಡುವ ಉತ್ತರವಾಗುತ್ತವಾ? ನಾನು ಉತ್ತರಿಸುವುದಿಲ್ಲ. ನಾನು ಒಂದು ಉತ್ತರದಂತೆ ಬದುಕುತ್ತೇನೆ ಅನ್ನೋದು ನಿನಗೂ ಗೊತ್ತಿದೆ. ನಾನು ಆ ಕ್ಷಣಕ್ಕೆ ನಿನಗೆ ಉತ್ತರಿಸಲು ಹೋಗಲಿಲ್ಲ. ನನ್ನ ಇಡೀ ಬದುಕನ್ನು ನನ್ನ ತೋಳಿಗೆ ತುಂಬಿಕೊಂಡು ನಿನ್ನ ತಬ್ಬಿಕೊಂಡೆ. ಬರೀ ಪದಗಳಲ್ಲೇ ಉತ್ತರ ಬೇಕು ಎಂದಾದರೆ ತಗೊ ಓದಿಕೊಂಡು ಬಿಡು..
ಹುಡುಗಿ,
ದೇಹ ಮುಟ್ಟಿದರೆ ಬರೀ ದೇಹ ಸಿಗುತ್ತದೆ. ಆದರೆ ನಾ ಮುಟ್ಟುವುದು ಬರೀ ನಿನ್ನ ದೇಹವಷ್ಟೇ ಅಲ್ಲ. ನಿನ್ನ ಕರುಣೆ, ಒಳ್ಳೆಯತನ, ಸತ್ಯ, ಪ್ರಾಮಾಣಿಕತೆ. ನೀ ಎಂದರೆ ಎದುರು ಕಾಣುವ ಬರೀ ಈ ನಿನ್ನಲ್ಲ. ಬರೀ ನಿನ್ನ ಆ ಮುದ್ದು ಮೂಗುತಿಯಲ್ಲ, ಮಿಂಚಿನ ಹಲ್ಲಲ್ಲ, ಮೋಹಕ ತುದಿ ಮೂಗಲ್ಲ. ನೀ ಬರೆಯುವ ಕವಿತೆ. ಶಾಲೆಯ ಮಕ್ಕಳು ಜ್ವರಕ್ಕೆ ಬಿದ್ದರೆ ಆತಂಕಗೊಳ್ಳುವ ನಿನ್ನ ಮನಸು. ಆ ಗುಡಿಸನಲ್ಲಿನ ಅಜ್ಜನಿಗೆ ವಾರಕ್ಕೆರಡು ಬಾರಿ ಊಟ ತೆಗೆದುಕೊಂಡು ಹೋಗುವ ನಿನ್ನ ಅಂತಃಕರಣ, ಬಸ್ಸಿನಲ್ಲಿ ಯಾರದೊ ಹೆಣ್ಮಕ್ಳಿಗೆ ಹುಡುಗರು ರೇಗಿಸಿದಾಗ ಭುಗಿಲೇಳುವ ನಿನ್ನ ಕಾಳಜಿ…. ಅವೆಲ್ಲವೂ ಸೇರಿದ ಆ ನೀನು. ಆ ನಿನ್ನನ್ನ… ನಾನು ನೋಡಿದ್ದು, ಪ್ರೀತಿಸಿದ್ದು. ನಾನು ನೋಡಿದ್ದು ಬರೀ ಕಣ್ಣಿನಿಂದಾಗಿದ್ದರೆ, ಬದಲಾದ ನಿನ್ನ ದೇಹವಷ್ಟೇ ನನಗೆ ಮುಖ್ಯವಾಗುತ್ತಿತ್ತು. ನಾ ನಿನ್ನ ಪ್ರೀತಿಸಿದ್ದು ನನ್ನ ಹೃದಯದಿಂದ, ಮನಸಿನಿಂದ, ನೀ ನನ್ನೊಳಗೆ ಹುಟ್ಟು ಹಾಕಿದ ಕನಸಿನಿಂದ. ನೀನು ಈಗಾಗಲೇ ದೇಹದಿಂದ ನನ್ನ ಭಾವಕ್ಕೆ ತಲುಪಿದೀಯ. ನೀ ಹೇಗೆ ಕಾಣುವೆ ಎಂಬ ಚಿಂತೆ ಬೇಡ; Enjoy, how I see you… and feel for you.. ಇಷ್ಟು ಸುಂದರವಾದ ನಿನ್ನನ್ನು ಹೇಗೆ ಪ್ರೀತಿಸದೇ ಇರಲಿ ಹೇಳು?!
ನಿನಗಾಗಿ ಒಮ್ಮೆ ಬರೆದ ಆ ಕವಿತೆ ಮತ್ತೊಮ್ಮೆ ನೆನಪಾಗುತ್ತಿದೆ..
ಹುಡುಗಿ,
ಸದಾ ನಿನ್ನನ್ನು ನೋಡುವ
ಈ ಕಣ್ಣುಗಳನ್ನು ಕಿತ್ತು
ಇಲ್ಲಿ ಆ ಮೈದಾನದಲ್ಲಿ ಬಿತ್ತುತ್ತೇನೆ
ಮಳೆ ಸುರಿಯುತಿದೆ ಈಗ
ನೆಲವೂ ಹದವಾಗಿದೆ
ಅಲ್ಲಿ ಮತ್ತೆ ಕಣ್ಣುಗಳೆ ಬೆಳೆಯುವುದಿಲ್ಲ
ಒಂದೊಂದು ಕಣ್ಣಿಗೂ
ಸಾವಿರಾರು ನಿನ್ನ ಮುಖಗಳು ಅರಳುತ್ತವೆ..
ನೀ ಹತ್ತಾಗುತ್ತೀ
ನೂರಾಗುತ್ತೀ..
ಸಾವಿರವಾಗುತ್ತೀ..
ಮತ್ತೂ ಸಾವಿರವಾಗುತ್ತೀ..
ಇಡೀ ಜಗತ್ತು ಚೆಲುವಾಗುತ್ತದೆ..
ಮತ್ತು
ನೀ
ಎಲ್ಲಾ ಕಾಲಕ್ಕೂ ಉಳಿಯುತ್ತೀ!
ಭೂಮಿ ಮತ್ತೆ ಮತ್ತೆ ಹುಟ್ಟಿದರೂ
ನೀ
ಬೆಳೆಯುತ್ತಲೇ ಇರುತ್ತೀ..
ಜಗ ಸುಂದರವಾಗುತ್ತಲೇ ಹೋಗುತ್ತೆ
ನಿನ್ನ ಚೆಲುವ ಚಿರಾಯು…
ನಿನ್ನೆ ನೀನು ಮುಗ್ದವಾಗಿ ಆ ಎಳಸು ಪ್ರಶ್ನೆ ಕೇಳುವಾಗಲೂ ಹೇಗೆ ಕಾಣಿಸುತ್ತಿದ್ದೆ ಗೊತ್ತಾ.. ಆಹಾ ಅದೆಷ್ಟು ಸೊಗಸು!
ಕಿವಿಯಲ್ಲಿ ನಕ್ಷತ್ರ, ಇಡೀ ತಲೆತುಂಬಾ ಆ ಕಡುಕಪ್ಪು ಇರುಳು , ಚಂದಿರನ ಕಳೆಯೇ ಆದ ಆ ಮುದ್ದು ಮುಖ..ಎರಡೂ ಕಣ್ಣುಗಳಲ್ಲಿ ಉರಿಯುವ ಪುಟ್ಟ ಕಂದೀಲು.. ಎರಡೂ ಕೆನ್ನೆಗಳಲ್ಲಿ ತೇಲುವ ನವಿರು ಮುಗಿಲು.. ಸೂರ್ಯೋದಯ ಮತ್ತು ಸೂರ್ಯಾಸ್ತದಂತಿರುವ ಎರಡು ತುಟಿಗಳು.. ದಿಗಂತದಂತಹ ಬೈತಲೆ ಮತ್ತು ಈ ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿಟ್ಟಕೊಂಡು ಬೀಗುವ ದೇವರಂತಹ ಆ ಮೂಗುತಿ..
ಯಾರ್ ತಾನೇ ಸೋಲದೆ ಉಳಿಯುವರು ಈ ಚೆಲುವಿಗೆ..
ಯಾರಿಗೆ ತಲುಪಿಸಬೇಕೊ ಅವರಿಗೆ ಮಾತ್ರ ತಲುಪುವಂತೆ ಬಿಚ್ಚಿಕೊಂಡ ಶೃಂಗಾರ, ಇದ್ದರೂ ಇಲ್ಲದಂತೆ ಇಲ್ಲದಂತೆ ಕಾಣುವ ಗಂಭೀರತೆ, ಮೂಗಿನ ತುದಿಯಲ್ಲಿ ಬಂದು ಕೂತ ಇಡೀ ದೇಹದ ಚೆಲುವು, ತುಂಟ ಕೂದಲನ್ನು ಗದರಿಸಿ ಶಿಸ್ತಿನಿಂದ ನಿಲ್ಲಿಸಿದ ಸೊಬಗು.. ಇಡೀ ಮುಖದ ತುಂಬಾ ತುಂಬಿಕೊಂಡ ಯಾವುದೊ ಅವ್ಯಕ್ತ ಸುಖ, ಸುಖದಲ್ಲಿ ಅದ್ದಿ ತೆಗೆದಿಟ್ಟ ಮನಸು, ಯಾವ ಕಸಿವಿಸಿಯೂ ಇಲ್ಲದ ನಿರಾಳತೆ, ಹೆಣ್ಣೆಂದರೆ ಹೀಗೆ ಇರಬೇಕು ಅನ್ನುವ ಒಂದು ಮಾದರಿ, ಪ್ರೀತಿಸಲೇ ಬೇಕು ಎಂದು ಹಟ ಹುಟ್ಟಿಸುವ ಒಂದು ದಿವ್ಯ ಸೌಂದರ್ಯ.. ಮಾತು ಆಡಿದರೆ ಎಲ್ಲಿ ಇಡೀ ಸೊಬಗು ಕೆಟ್ಟು ಹೋಗುತ್ತದೊ ಎನ್ನುವಂತೆ ಆವರಿಸಿರುವ ಮೌನ.. ಚೆಲುವಿಗೆ ತನ್ನ ಪಾಲನ್ನೂ ಧಾರೆ ಎರೆದು ತನ್ನ ಪಾಡಿಗೆ ತಾನಿರುವ ಸೈಲೆಂಟ್ ಆದ ಆ ಸೀರೆ.. ಅದಕ್ಕೆ ಅನುರೂಪವಾದ ಕುಪ್ಪಸ.. ಯಾರ ಧ್ಯಾನಿದಲ್ಲಿರವರೊ ಅವರ ಕುರುಹು.. ಏನುಂಟು ಏನಿಲ್ಲ..
ನಿನಗೂ, ನಿನ್ನನ್ನು ನನಗೆ ಕೊಟ್ಟ ದೇವರಿಗೂ ಧನ್ಯವಾದ..
ಹಾಂ, ನಾಳೆ ಸರಿಯಾಗಿ 8:30 ಕ್ಕೆ ಅಪೂರ್ವ ಹೋಟೆಲ್‍ನ ಮೂರನೇ ಟೇಬಲ್‍ನಲ್ಲಿರುತ್ತೇನೆ. ಎರಡು ಇಡ್ಲಿ, ಬೈಟು ಕಾಫಿ ಮೊದಲೇ ಅರ್ಡರ್ ಮಾಡಿರುತ್ತೇನೆ.
ಬರುವಾಗ ನಿಮ್ಮ ಮನೆಯ ದಾರಿಯಲ್ಲಿ ಎಡಭಾಗಕ್ಕೆ ಕಸ ಇಡುವ ಜಾಗವಿದೆಯಲ್ಲ ಅಲ್ಲಿ ನಿನ್ನ ಆ ಎಳಸು ಪ್ರಶ್ನೆಗಳೇನಾದರೂ ಇದ್ದರೆ ಎಸೆದು ಬಂದು ಬಿಡು. ನಾವು ಸುಮ್ಮನೆ ಬದುಕಲು ಒಂದಾದವರು, ಯಾವುದಕ್ಕೊ ಉತ್ತರ ಹುಡುಕಲು ಅಲ್ಲ.. ಅಸಲಿಗೆ ನಮ್ಮ ನಡುವೆ ಪ್ರಶ್ನೆಗಳೇ ಇಲ್ಲ.
ಅಲ್ವ?
ಲವ್ ಯೂ.. ನಾಳೆ ಮಾತಾಡೋಣ..
ಎಂದೂ ಕೂಡ ನಿನ್ನವ…
ಸದಾಶಿವ ಸೊರಟೂರು.






0 Comments