ಸದಾಶಿವ್ ಸೊರಟೂರು
ಹೊಂದಿಸಿ ಬರೆಯಲು
ಬಲ ಬದಿಗೆ ನೀಡಿದ ಪದಗಳಲ್ಲಿ
ಯಾವುದೂ ಹೊಂದುತ್ತಿಲ್ಲ
ತಪ್ಪು
ಪ್ರಶ್ನೆಯದೊ
ಉತ್ತರದೊ
ಕೊಟ್ಟವನಿಗೂ ಸ್ಪಷ್ಟವಿಲ್ಲ..
ಸಂದರ್ಭ ಸಹಿತ ವಿವರಿಸುವ
ಮುನ್ನ
ಯೋಚಿಸಬೇಕಿದೆ ಇಲ್ಲಿ
ಹೇಳಿದವರಿಗೆ ಹೇಳಿದ್ದು ತಿಳಿದಿಲ್ಲ
ಕೇಳಿಸಿಕೊಂಡವರಿಗೆ ಕೇಳಿಸಿಕೊಂಡಿದ್ದು
ನೆನಪಿಲ್ಲ
ಸಂದರ್ಭವಿದೆ; ಅದರಲ್ಲಿ ಸ್ವಾರಸ್ಯವಿಲ್ಲ!
ಇದೇನಿದು ಒಂದು ಮಾರ್ಕಿನ
ಪ್ರಶ್ನೆಗೆ ಪುಟಗಟ್ಟಲೆ ಖಾಲಿ
ಜಾಗ
ವಿವರಣೆ ಬಯಸುವ ಪ್ರಶ್ನೆಗೆ
ಒಂದು ಸಾಲಿನ ಜಾಗ..
ಯಾಕಿಲ್ಲಿ ಯಾವುದೂ ಸರಿ ಇಲ್ಲ..!?
ಬಿಟ್ಟ ಸ್ಥಳ ತುಂಬಲು ಸರಿಯಾದ
ಪದ ಹುಡುಕಬೇಕು?
ಒಂದು ಸರಿಯಾದ ಪದಕ್ಕೆ
ಇಡೀ ಬದುಕು ಸಾಲದಿರುವಾಗ
ಒಂದು ಬಿಟ್ಟ ಸ್ಥಳಕ್ಕೆ
ಪದದ ತಲಾಷು ಸುಲಭವಲ್ಲ..
ಯಾವ ಪದಗಳೂ ಇಲ್ಲೀಗ
ಸರಿಯಿಲ್ಲ;
ನಂಬುವಂತೆಯೂ ಇಲ್ಲ..
ಬರೆಯುವ ಉಸಾಬರಿ
ಬೇಡವೆಂದರೆ ಮೌಖಿಕ ಪ್ರಶ್ನೆಗಳಿವೆ
ಎದುರುಗಿ ನಿಂತು ಉಗುಳು
ನುಂಗಬೇಕು;
ಜಗತ್ತಿನ ಮುಂದೆ ಖೈದಿಯಂತೆ ನಿಂತು..
ಅಂಕವನ್ನಲ್ಲದೆ ನಮ್ಮ
ಉಸಿರನ್ನು ನಾವೇ ನುಂಗಬೇಕು..
ಪ್ರಶ್ನೆಗಳು ಅದರ ಪಾಡಿಗಿವೆ..
ಉತ್ತರಗಳೂ ಇವೆ ಅದರ ಪಾಡಿಗೆ..
ಅವುಗಳನ್ನು
ಜೋಡಿಸುತ್ತಾ ಕೂರುವುದು
ಬದುಕು
ಯಾರಿಗೂ ಪ್ರಶ್ನೆಗೊಂದು ಉತ್ತರ
ಸಿಕ್ಕಿಲ್ಲ
ಮತ್ತು ಸರಿಯಾದ ಉತ್ತರಕ್ಕೊಂದು
ಪ್ರಶ್ನೆಯೂ…!
0 Comments