
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
34
ಮಂಗಳಾರತಿಗೆ ನಮಸ್ಕರಿಸಿ, ಅದರ ಬಿಸಿಯಲ್ಲಿ ಒಮ್ಮೆ ಪುಳಕಗೊಂಡು, ಕೊನೆಯ ಬಾರಿ ಗರ್ಭಗುಡಿಯತ್ತ ಕಣ್ಣು ಹಾಯಿಸಿ ದೇವರ ಗುಡಿಯಿಂದ ಸಾವಕಾಶವಾಗಿಯೇ ಹೊರಬಂದೆ. ಯಾವ ಗಡಿಬಿಡಿಯೂ ಇರಲಿಲ್ಲ. ದರ್ಶನ, ಅರ್ಚನೆ ಎಲ್ಲವೂ ಚೆನ್ನಾಗಿಯೇ ಆಗಿತ್ತು. ಹೊರಗೆ ಬಂದು ಭಕ್ತರು ಬಿಟ್ಟು ಹೋಗಿದ್ದ ರಾಶಿ ಚಪ್ಪಲಿಗಳಲಿ ನನ್ನ ಚಪ್ಪಲಿಗಳನ್ನು ಹುಡುಕ ತೊಡಗಿದೆ. ಬಣ್ಣ-ಬಣ್ಣದ ಚಪ್ಪಲಿಗಳು ರಾಶಿಯಾಗಿ ಬಿದ್ದಿದ್ದವು. ಪುರುಷರವು, ಮಹಿಳೆಯರವು, ಮಕ್ಕಳವು ಹೀಗೆ ನಾನಾ ತರಹದ ಚಪ್ಪಲಿಗಳಿದ್ದವು. ನನ್ನ ಚಪ್ಪಲಿಗಳು ಮೊದಲು ಕಣ್ಣಿಗೆ ಬೀಳಲಿಲ್ಲ. ನಂತರ ತುಂಬಾ ಹೆಣಗಾಟದ ಬಳಿಕ ಒಂದು ಚಪ್ಪಲಿ ಸಿಕ್ಕಿತು. ಬಚ್ಚಿಟ್ಟುಕೊಂಡಂತೆ ಚಪ್ಪಲಿ ರಾಶಿಯ ಒಳಗೆ ಸೇರಿಕೊಂಡಿತ್ತು. ಅದನ್ನು ನೋಡಿ ಸಣ್ಣ ಸಮಾಧಾನವೂ ಆಯಿತು. ಇನ್ನೊಂದು ಸಿಗಲಿಲ್ಲ. ಗಲಿಬಿಲಿಯೇನು ಆಗಲಿಲ್ಲ. ಒಂದು ಇಲ್ಲಿದೆ ಅಂದ್ರೆ ಇನ್ನೊಂದು ಕೂಡ ಇಲ್ಲೆ ಇರುತ್ತೆ. ಕದ್ದು ಹೊಯ್ಯುವವನು ಒಂದನ್ನು ಮಾತ್ರ ಹೇಗೆ ಒಯ್ಯಲು ಸಾಧ್ಯ? ಹಾಗೆ ನನ್ನಷ್ಟಕ್ಕೆ ನಾನೇ ಕೇಳಿಕೊಂಡು, ಆ ರಾಶಿಯ ನಡುವೆ ಹುಡುಕತೊಡಗಿದೆ. ಉಹೂಂ ಇನ್ನೊಂದು ಚಪ್ಪಲಿ ಸಿಗಲಿಲ್ಲ. ಇಂಚಿಂಚು ಹುಡುಕಿದೆ, ಆದರೆ ಸುಳಿವೂ ಸಿಗಲಿಲ್ಲ.
ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಒಳ್ಳೆಯದು. ಪಾಪ ಹೊರಟು ಹೋಗುತ್ತದೆ ಅನ್ನುವ ಮಾತನ್ನು ಎಲ್ಲೊ ಕೇಳಿದ್ದು ನೆನಪಾಗಿ ಇದುವರೆಗೂ ನಾನು ಮಾಡಿರುವ ಪಾಪದ ಬಗ್ಗೆ ಯೋಚಿಸ ತೊಡಗಿದೆ. ಪಾಪದ ಬಾಬ್ತು ದೊಡ್ಡದೆ ಇತ್ತು. ಇದರಲ್ಲಿ ಈಗ ಎಷ್ಟು ಹೋಗಿರಬಹುದು? ಆ ಪಾಪ ಎರಡೂ ಚಪ್ಪಲಿ ಹೋದರೆ ಹೋಗುತ್ತೊ.. ಒಂದು ಮಾತ್ರ ಹೋದರೆ ಹೋಗುತ್ತೊ? ಅನ್ನುವ ಯೋಚನೆ ಶುರುವಾಯಿತು. ಬಹುಶಃ ನನ್ನ ಪಾಲಿನ ಅರ್ಧ ಪಾಪ ಹೋಗಿರಬಹುದೆಂದು ಸಮಾಧಾನಿಸಿಕೊಂಡೆ. ಹಾಗಾದರೆ ದೇವರು ಒಂದನ್ನು ಮಾತ್ರ ಯಾಕೆ ಉಳಿಸಿದ. ತೊಳೆಯಲಾಗದ ಪಾಪವೊಂದು ಇನ್ನೂ ಢಾಳಾಗಿಯೇ ಉಳಿದಿದೆಯೇ? ಎಂಬ ಪ್ರಶ್ನೆ ಮೂಡ ತೊಡಗಿತು. ಈಗ ಉಳಿದಿರುವ ಚಪ್ಪಲಿಯೂ ಕಳೆದು ಹೋದರೆ ಎಲ್ಲವೂ ಸರಿ ಹೋಗಬಹುದಾ? ಅನ್ನುವ ಯೋಚನೆಯೂ ಬಂತು. ಉಳಿದ ಅರ್ಧ ಪಾಪ ಕಳೆಯಲು ಅದು ತಾನಾಗಿಯೇ ಕಳೆದುಹೋಗಬೇಕೊ ಅಥವಾ ನಾನೇ ಅದನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಹೋದರೂ ಆದಿತೊ? ನನಗೆ ಅದರ ಬಗ್ಗೆ ಸ್ಪಷ್ಟವಾಗಲಿಲ್ಲ. ಒಂದು ಚಪ್ಪಲಿ ಕಳೆದುಹೋದರೆ; ಉಳಿದು ಹೋದ ಇನ್ನೊಂದು ಚಪ್ಪಲಿ ಆ ಕಳೆದು ಹೋದ ಚಪ್ಪಲಿಯ ಪಾಲಿಗೆ ಕಳೆದು ಹೋದಂತೆಯೇ ಅಲ್ಲವೆ..ಇಂತಹ ಹತ್ತಾರು ಯೋಚನೆಗಳಲ್ಲಿ ಮುಳುಗಿ ನಾನು ಅದರಿಂದ ಆಚೆಗೆ ಬರಲು ಕೈ ಕಾಲು ಬಡಿಯತೊಡಗಿದೆ.
ಒಂದು ಚಪ್ಪಲಿಯಿಂದ ಉಪಯೋಗವಿಲ್ಲ ನಿಜ. ಆದರೆ ಇನ್ನೊಂದು ಚಪ್ಪಲಿ ಅನಾವಶ್ಯಕವಾಗಿ ಬಿಟ್ಟು ಹೋಗುವಂತಹ ಅನಿವಾರ್ಯತೆಯೂ ಕೂಡ ಇರಲಿಲ್ಲ. ಅದು ಸಾಧುವೂ ಅಲ್ಲ. ಇದು ಉದ್ದೇಶಪೂರ್ವಕವಾದದ್ದು, ಅಥವಾ ಅಚಾನಕ್ಕಾಗಿ ಎಲ್ಲೊ ಬಿದ್ದು ಹೋಗಿದೆಯೊ? ಯಾವುದೂ ಕೂಡ ಸ್ಪಷ್ಟವಾಗಲಿಲ್ಲ. ಹೋಗುವವರು ಒಂದನ್ನು ಮಾತ್ರ ಹೇಗೆ ಎತ್ತಿಕೊಂಡು ಹೋಗುತ್ತಾರೆ? ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾಗುವ ಸಂಕಟವಿದು.
ಆದರೆ ಆ ಒಂಟಿ ಚಪ್ಪಲಿಯನ್ನು ಅಲ್ಲೆ ಬಿಟ್ಟು ಬರಲು ಮನಸಾಗಲಿಲ್ಲ. ಅದನ್ನು ಎತ್ತಿಕೊಂಡು ಬಂದೆ. ಅದನ್ನು ಮನೆಯಲ್ಲಿ ನಿತ್ಯ ಇಡುವ ಜಾಗದಲ್ಲಿ ಇಟ್ಟೆ. ಅದು ಅಲ್ಲಿ ಒಂಟಿಯಾಗಿ ಕೂತು ತನ್ನ ಇನ್ನೊಂದು ಜೋಡಿಯ ನೆನಪಲ್ಲಿ ಮುಳುಗಿದಂತೆ ಕಾಣುತ್ತಿತ್ತು. ಸಂಕಟದಲ್ಲಿರುವಂತೆ ತೋರುತ್ತಿತ್ತು. ಅದನ್ನು ನೋಡಿ ನನಗೆ ಮರುಕವೆನಿಸಿತು.

ಈ ಸಣ್ಣ ಖೋಲಿಯಲ್ಲಿ ನಾನು ಮತ್ತು ಈ ಉಳಿದು ಹೋದ ಒಂಟಿ ಚಪ್ಪಲಿ ಬೇರೆ ಬೇರೆ ಅನಿಸಲಿಲ್ಲ. ಅದಕ್ಕೊಂದು ‘ಜೊತೆಗಾರನನ್ನು’ ಹುಡುಕಬೇಕೆಂದು ಮನಸಾಯಿತು. ಆದರೆ ಎಲ್ಲಿ ಹುಡುಕುವುದು? ಕಳೆದುಕೊಂಡಲ್ಲಿಯೇ ಹುಡುಕು ಅನ್ನುವುದು ಲೋಕ ಧರ್ಮ. ಇದು ಕಳೆದು ಹೋದದ್ದೊ ಅಥವಾ ಯಾರೊ ಉದ್ದೇಶಪೂರ್ವಕವಾಗಿ ಕದ್ದಿದ್ದೊ!? ನನ್ನ ಯೋಚನೆ ನಿಲ್ಲಲ್ಲಿ. ರಾತ್ರಿಯೆಲ್ಲಾ ಅರ್ಧ ನಿದ್ರೆ ಅರ್ಧ ಎಚ್ಚರಗಳ ನಡುವೆ ಈ ಯೋಜನೆಯಲ್ಲಿ ತೊಳಲಾಡಿದೆ. ಹಾಳಾಗಿ ಹೋಗಲಿ ಬರೀ ಐನೂರು ರೂಪಾಯಿ ಅಲ್ವ? ಇನ್ನೊಂದು ಜೊತೆ ಕೊಂಡರಾಯಿತು ಅನ್ನುವ ಯೋಚನೆ ನನ್ನ ಬಳಿ ಸುಳಿಯಲೇ ಇಲ್ಲ. ಇದು ದುಡ್ಡಿನ ಪ್ರಶ್ನೆಯಾಗಿರಲಿಲ್ಲ. ಕೇವಲ ಒಂದು ಚಪ್ಪಲಿ ಮಾತ್ರ ಕಳೆದು ಹೋಗಿ ಇನ್ನೊಂದು ಚಪ್ಪಲಿ ಮಾತ್ರ ಉಳಿದಿರುವ ನಿಗೂಢತೆಯದ್ದಾಗಿತ್ತು.
ಈ ಒಂಟಿ ಚಪ್ಪಲಿ ಇಟ್ಟುಕೊಂಡು ಅದರಿಂದ ನನಗೇನು ಆಗಬೇಕಾದದ್ದು ಇರಲಿಲ್ಲ. ಅದನ್ನು ಅಲ್ಲಿಯೇ ಬಿಟ್ಟು ಬರಬಹುದಿತ್ತು. ಆದರೆ ಅದರ ಮೇಲೊಂದು ಮರುಕ ತನಗಾದರೂ ಏಕೆ ಬಂತು ಎಂಬುದು ಈಗಲೂ ಅರ್ಥವೇ ಆಗಿಲ್ಲ. ಆ ರಾತ್ರಿಯನ್ನು ಬಲವಂತವಾಗಿ ದೂಡಿ ಅದನ್ನು ಬೆಳಕಿನ ಕಡಲಿಗೆ ಎಸೆದು ನಸುಮುಂಜಾನೆ ಎದ್ದು ನಿನ್ನೆ ರಾತ್ರಿ ಚಪ್ಪಲಿ ಕಳೆದು ಹೋದ ದೇವಸ್ಥಾನದ ಅಂಗಳ ತಲುಪಿದೆ. ಇಡೀ ಅಂಗಳವನ್ನು ಇಂಚಿಂಚು ಹುಡುಕಿದೆ. ಸಿಗಲಿಲ್ಲ. ಕಂಡವರು ‘ಏನದು ಬೆಳಗ್ಗೆ ಬೆಳಗ್ಗೆ ಹುಡುಕಾಟದಲ್ಲಿದ್ದೀರಿ?’ ಎನ್ನುವ ಪ್ರಶ್ನೆ ಎಸೆದರು. ನಾನು ಕಳೆದು ಹೋದ ಒಂದು ಚಪ್ಪಲಿಯ ಬಗ್ಗೆ ಬಾಯಿ ಬಿಡಲಿಲ್ಲ. ಬದಲಿಗೆ ಚಪ್ಪಲಿಗಳು ಎಂದೆ. ನಾನು ಒಂದು ಎಂದು ಯಾಕೆ ಹೇಳಲಿಲ್ಲ, ಗುಟ್ಟನ್ನು ಯಾಕೆ ಅಡಗಿಸಿದೆ ನನಗೆ ನಿಜಕ್ಕೂ ಗೊತ್ತಿಲ್ಲ. ಹುಡುಕಿ, ಸೋತು ಕೈ ಚೆಲ್ಲಿದೆ. ಅಲ್ಲಿಯೇ ತುಂಬಾ ಹೊತ್ತು ಕೂತಿದ್ದೆ. ಆತ್ಮೀಯರನ್ನು ದೂರ ಕಳುಹಿಸಿದಾಗ ಉಂಟಾಗುವ ನೀರವತೆಯೊಂದು ನನ್ನನ್ನು ಆವರಿಸಿತ್ತು. ಎಷ್ಟೊ ಹೊತ್ತಿನ ಬಳಿಕ ವಾಪಾಸಾದೆ.
ಆದರೆ ಅದಕ್ಕೊಂದು ಜೋಡಿ ಹುಡುಕಿ ತರುವ ನನ್ನ ಪ್ರಯತ್ನಗಳು ನಿಲ್ಲಲಿಲ್ಲ. ಆದರೆ ನಾ ಹುಡುಕಿ ತರುವ ಆ ಒಂದು ಚಪ್ಪಲಿ ಇದಕ್ಕೆ ಹೊಂದುತ್ತದೆಯೇ? ಈ ಉಳಿದು ಹೋದ ಚಪ್ಪಲಿ ಹೊಸ ಚಪ್ಪಲಿಯೊಂದಿಗೆ ಹೇಗೆ ಬೆರೆಯಬಹುದು? ಅಸಲಿಗೆ ಅಂತದ್ದು ಚಪ್ಪಲಿ ಸಿಗುತ್ತದಾ? ಸಿಕ್ಕರೂ ಅದನ್ನು ಈ ಚಪ್ಪಲಿ ಸ್ವೀಕರಿಸುತ್ತದಾ? ಹುಟ್ಟುವಾಗ ಒಟ್ಟಿಗೆ ಹುಟ್ಟಿದ ಇದು ಈಗ ಇನ್ನೊಂದರೊಂದಿಗೆ ಹೇಗಿರುತ್ತದೆ. ಇಂತದ್ದೆ ಹತ್ತಾರು ಹುಚ್ಚು ಯೋಚನೆಗಳು ನನ್ನಲ್ಲಿ.
ಇನ್ನೊಂದು ಜೊತೆ ಇಂತದ್ದೆ ಚಪ್ಪಲಿಕೊಂಡು ಅದರಲ್ಲಿ ಒಂದನ್ನು ಜೋಡಿ ಮಾಡಿದರೆ ಹೇಗೆ? ಯೋಚನೆ ಎಷ್ಟು ಬೇಗ ಬಂತು ಅಷ್ಟು ಬೇಗನೆ ಕರಗಿತು. ಅದರಿಂದ ಆ ಜೋಡಿಯ ಇನ್ನೊಂದು ಚಪ್ಪಲಿ ಒಂಟಿಯಾಗ ಬೇಕೆ? ಯಾರನ್ನೊ ಜೊತೆ ಮಾಡುವ ದೃಷ್ಟಿಯಿಂದ ಇನ್ಯಾರನ್ನೊ ಒಂಟಿ ಮಾಡುವುದು ಯಾವ ಧರ್ಮ? ಹೀಗೊಂದು ಚಿಂತನೆಯೂ ಮೂಡಿತು. ಆದರೆ ಈಗ ಒಂಟಿಯಾಗಿ ಉಳಿದಿರುವ ಚಪ್ಪಲಿಯೂ ತನ್ನದಲ್ಲದ ತಪ್ಪಿಗೆ ಯಾಕೆ ಒಂಟಿಯಾಗಬೇಕಾಯಿತು? ಅಥವಾ ಆ ಜೋಡಿಯಲ್ಲಿ ಏನಾದ್ರೂ ವ್ಯತ್ಯಾಸವಿತ್ತೆ? ಹೊಂದಿಕೆಯಲ್ಲಿ ಅಡಚಣೆಯಿತ್ತೆ? ಆದರೆ ಇಷ್ಟು ದಿನ ತೊಟ್ಟು ನಡೆಯುವಾಗ ಅಂತದ್ದು ಯಾವ ಸುಳಿವೂ ತನಗೇಕೆ ಸಿಗಲಿಲ್ಲ ಎನಿಸಿತು.
ಕೊಂಡು ತಂದು, ಇನ್ನೊಂದನ್ನು ಒಂಟಿ ಮಾಡಿ ಇದಕ್ಕೆ ಜೊತೆ ಮಾಡುವ ಯೋಚನೆ ಬಿಟ್ಟೆ. ಕೊಂಡು ತಂದಾಗ ಒಟ್ಟು ಮೂರು ಚಪ್ಪಲಿಗಳಾಗುತ್ತವೆ. ಒಂದೇ ಬಾರಿಗೆ ಮೂರು ಹಾಕಿಕೊಂಡು ನಡೆಯುವುದೇ ಹೇಗೆ? ಒಂದನ್ನು ಬಿಟ್ಟು ಹೋಗಲೇ ಬೇಕು.. ಆದರೆ ಕೊಂಡು ತಂದಿದ್ದರಿಂದ ನಾನು ಸಾಧಿಸುವುದೇನು? ಅದರಿಂದ ಮತ್ತೆ ಯಾವುದೊ ಒಂದು ಚಪ್ಪಲಿ ಒಂಟಿಯಾಗುವುದರಲ್ಲಿ ಅನುಮಾನವಿಲ್ಲ. ಆ ಯೋಚನೆ ಸಾಧುವಲ್ಲ ಅಂತ ಅದನ್ನೂ ಕೈಬಿಟ್ಟೆ. ಆದರೆ ಅದೇ ತರಹದ ಚಪ್ಪಲಿಯ ತಲಾಶನ್ನು ನಾನು ನಿಲ್ಲಿಸಿರಲಿಲ್ಲ. ಚಪ್ಪಲಿ ತೊಟ್ಟು ನಡೆಯುವ ಪ್ರತಿ ಜನರ ಕಾಲುಗಳನ್ನು ನೋಡತೊಡಗಿದೆ. ಜನರ ಮುಖಗಳನ್ನು ನೋಡುವುದನ್ಮೇ ಮರೆತುಬಿಟ್ಟೆ. ಬರೀ ಅವರ ಕಾಲುಗಳ ನೋಡುವುದೇ ನನ್ನ ನಿತ್ಯದ ಕೆಲಸವಾಯಿತು.
ಹೀಗೆ ನೋಡ ತೊಡಗಿದ ಮೇಲೆ ನನಗೆ ಬೇರೆಯದೆ ಜಗತ್ತು ಕಾಣಿಸಿತು. ಅವರ ತೊಡುವ ಚಪ್ಪಲಿಗಳನ್ನು ಆಧರಿಸಿ ಅವರನ್ನು ಅಳೆಯತೊಡಗಿದೆ. ದುಬಾರಿ ಚಪ್ಪಲಿಗಳು, ಕಡಿಮೆ ಬೆಲೆಯವು, ಪುಟ್ ಪಾತ್ ನಲ್ಲಿ ಸಿಗುವಂತವು, ಬ್ರಾಂಡೆಂಡ್ ನವು, ಹೆಸರೇ ಇಲ್ಲದವು, ಸವೆದು ಹೋದಂತವು, ಹೊಚ್ಚ ಹೊಸವು, ನಾಜೂಕಿನವು, ಎತ್ತರದವು, ಹರಿದು ಹೋದಂತವು, ಅಲ್ಲಲ್ಲೆ ಹೋಲಿಸಿಕೊಂಡಂತವು, ಪಿನ್ ಗಳನ್ನು ಹಾಕಿಕೊಂಡು ನಲುಗುತ್ತಿದ್ದಂತವು, ಅಳತೆ ಹೊಂದಿದಂತವು, ಅಳತೆ ಮೀರಿದವು, ಮಕ್ಕಳವು, ಹುಡುಗಿಯರವು.. ಹೀಗೆ ನೂರೆಂಟು ನಮೂನೆಯ ಚಪ್ಪಲಿಗಳನ್ನು ನಿತ್ಯ ನೋಡಿ ನೋಡಿ ಸಾಕಾಗಿ ಹೋಯಿತು. ಚಪ್ಪಲಿ ನೋಡಿ ವ್ಯಕ್ತಿಯನ್ನು ಎಂತವನು ಎಂಬುದನ್ನು ನಿರ್ಧರಿಸಬಲ್ಲಷ್ಟು ಫಳಗಿ ಹೋದೆ. ಆದರೆ ಯಾರೂ ಕೂಡ ಅದಲು ಬದಲು ಚಪ್ಪಲಿ ಹಾಕಿರಲಿಲ್ಲ. ಬರಿಗಾಲಲ್ಲಿ ಬೇಕಾದರೆ ನಡೆಯುತ್ತಿದ್ದರು ಆದರೆ ಯಾರೂ ಕೂಡ ಅಂತಹ ಪ್ರಯತ್ನ ಮಾಡಿರಲಿಲ್ಲ. ಹಾಗೆ ಹಾಕಿಕೊಂಡರೆ ಅದರಲ್ಲೇನು ಅಂತದ್ದು ಅಪಥ್ಯವಾದದ್ದು ಇದೆ ಅಂತ ನನಗೆ ಅನಿಸಲಿಲ್ಲ. ನಾನೇಕೆ ಈಗ ಉಳಿದಿರುವ ಒಂದು ಚಪ್ಪಲಿಗೆ, ಇನ್ನೊಂದು ಯಾವುದೊ ಒಂಟಿ ಚಪ್ಪಲಿ ಸಿಕ್ಕರೆ ಜೊತೆ ಮಾಡಿ ಹಾಕಿಕೊಂಡರೆ ಹೇಗೆ ಅಂತ ಯೋಚಿಸಿದೆ. ಈ ಜನ ನನ್ನನ್ನು ಹೇಗೆ ಸ್ವೀಕರಿಸಬಹುದು ಅಂತ ಚಿಂತೆಯಾಯಿತು. ಈಗಾಗಲೇ ಸಮಾಜ ಏನನ್ನು ಒಪ್ಪಿಕೊಂಡಿದೆಯೊ ಅದರಂತೆ ನಡೆದರೆ ಮಾತ್ರ ಅದಕ್ಕೊಂದು ಬೆಲೆ. ಇಲ್ಲದಿದ್ದರೆ ಜನ ನನ್ನನ್ನು ಸ್ವೀಕರಿಸಲಾರರು ಅನಿಸಿತು.
ಈ ನಡುವೆ ನನಗೆ ಪ್ರತಿ ರಾತ್ರಿ ಅದೇ ಅದೇ ಕನಸು ಬೀಳತೊಡಗಿತ್ತು. ಅದರಲ್ಲಿ ಬಗೆಬಗೆಯ ಚಪ್ಪಲಿ ತೊಟ್ಟ ಜನ ಕಾಣಿಸತೊಡಗಿದರು. ಆದರೆ ಅವರಲ್ಲಿ ಯಾರೂ ಒಂದೇ ತರಹದ ಚಪ್ಪಲಿ ತೊಟ್ಟಿರಲಿಲ್ಲ. ಒಂದಷ್ಟು ಒಂದೇ ಚಪ್ಪಲಿಯಲ್ಲಿ, ಇನ್ನೊಂದಷ್ಟು ಜನ ಅದಲು ಬದಲಾದ ಚಪ್ಪಲಿ ತೊಟ್ಟಿದ್ದರೆ ಇನ್ನೊಂದಿಷ್ಟು ಜನ ಎರಡು ಕಾಲಿಗೂ ಚಪ್ಪಲಿ ತೊಟ್ಟು ಇನ್ನೊಂದನ್ನು ಕೈಯಲ್ಲಿಡಿಕೊಂಡು ಹೆಣಗಾಡುತ್ತಿದ್ದರು. ಆದರೆ ಕನಸಲ್ಲಿ ನಾನು ಮಾತ್ರ ಹರಿದು ಹೋದ ಒಂದೇ ಚಪ್ಪಲಿ ತೊಟ್ಟು ಸದಾ ಅದನ್ನು ಎಳೆಯುತ್ತಾ ನಡೆದು ನಡೆದು ಎಡವಿ ಬೀಳುತ್ತಿದ್ದೆ. ಜನ ನನ್ನನ್ನು ನೋಡಿ ನಗುತ್ತಿದ್ದರು. ಅವರ ನಗುವಿಗೆ ನಾನು ನನ್ನ ನಗುವನ್ನು ಸೇರಿಸಿ ನಗುತ್ತಿದ್ದೆ. ನಗುತ್ತಾ ನಗುತ್ತಾ ನನಗೆ ಹುಚ್ಚು ಹಿಡಿದು ಹೋಗುತ್ತಿತ್ತು. ಆ ಹುಚ್ಚತನದಲ್ಲಿ ಇನ್ನಷ್ಟು ನಗುತ್ತಿದ್ದೆ. ನಗುತ್ತಿರುವಾಗಲೇ ಏಕಾಏಕಿ ಎಚ್ಚರವಾಗಿ ಬಿಡೋದು. ಬೆಳಗ್ಗೆ ಕನಸಿನಲ್ಲಿ ಗುಂಗಿನಲ್ಲಿ ಸ್ವಲ್ಪ ಹೊತ್ತು ಕಳೆದು ಅದನ್ನು ಮರೆತು ಬಿಡುತ್ತಿದ್ದೆ.
ಚಪ್ಪಲಿ ಹುಡುಗಾಟದ ನನ್ನ ಈ ಹುಚ್ಚು ದಿನ ಕಳೆದಂತೆ ಮತ್ತಷ್ಟು ಹೆಚ್ಚಾಯಿತು. ಹೀಗೆ ಹುಡುಗಾಟದ ಮಧ್ಯೆ ಒಂದು ದಿನ ನನಗೆ ನನ್ನ ಒಂಟಿ ಚಪ್ಪಲಿಯನ್ನೇ ಹೋಲುವ ಚಪ್ಪಲಿ ಹಾಕಿಕೊಂಡವರು ಸಿಕ್ಕರು. ಅವರನ್ನು ಹಿಂಬಾಲಿಸುತ್ತಲೇ ಹೋದೆ. ಅದರಲ್ಲಿ ಒಂದನ್ನು ಕದ್ದು ನನ್ನ ಚಪ್ಪಲಿಗೆ ಜೋಡಿ ಮಾಡಿಕೊಳ್ಳುವ ಯೋಚನೆ ಇತ್ತು. ಆ ಅಸಾಮಿಯಂತೂ ಹುಟ್ಟಿದಾಗಲೇ ಚಪ್ಪಲಿ ತೊಟ್ಟಿದ್ದವನೊ ಎಂಬಂತೆ ಎಲ್ಲಿಯೂ ಬಿಡದೆ ಹಾಕಿಕೊಂಡು ಓಡಾಡುತ್ತಿದ್ದ. ಆ ಚಪ್ಪಲಿ ಅವನಿಗೆ ಒಪ್ಪುತ್ತಿದ್ದವು. ಒಮ್ಮೊಮ್ಮೆ ಅಯ್ಯೊ ಇದೆಲ್ಲಾ ಬೇಡ ಪಾಪ ಅನಿಸೋದು ಆದರೆ ನಾನು ನನ್ನ ಒಂಟಿ ಚಪ್ಪಲಿಗೊಂದು ಜೋಡಿ ಕೊಡುವುದು ಅನಿವಾರ್ಯವಿತ್ತು. ನಾನು ಅವನು ಹೋದ ಕಡೆಯಲೆಲ್ಲಾ ಅವನನ್ನು ಬಿಡದಂತೆ ಹಿಂಬಾಲಿಸಿದೆ.

ಒಮ್ಮೆ ಅವನು ಯಾರದೊ ಒಬ್ಬರ ಮನೆ ಮುಂದೆ ತನ್ನ ಬೈಕ್ ನಿಲ್ಲಿಸಿದ. ಮನೆಯ ಗೇಟು ತೆಗೆದು ಒಳಗೆ ಹೋದ. ಬಾಗಿಲ ಹೊರಗೆ ಮೆಟ್ಟಿಲ ಬಳಿ ಚಪ್ಪಲಿ ಬಿಟ್ಟು ಒಳಗೆ ನಡೆದ. ನಾನು ಜಾಗೃತನಾದೆ. ಇಷ್ಟು ದಿನ ನಾನು ಕಾದು ಕೂತ ಗಳಿಗೆ ಬಂದಿತು. ಆ ಕಡೆ ಈ ಕಡೆ ನೋಡಿದೆ. ಯಾರೂ ಇಲ್ಲದದ್ದನ್ನು ಖಚಿತಪಡಿಸಿಕೊಂಡೆ. ದಡಬಡ ಚಪ್ಪಲಿಗಳ ಬಳಿ ನಡೆದೆ. ನೋಡಿದೆ. ಹೌದು ನನ್ನ ಚಪ್ಪಲಿಯಂತೆಯೇ ಇವೆ ಅವು. ಒಂದನ್ನು ಎತ್ತಿಯೇ ಬಿಡೋಣ ಅನಿಸಿತು. ಬಾಗಿ ಕೈಯಿಂದಲೇ ಅದರಲ್ಲಿ ಒಂದನ್ನು ಎತ್ತಿದೆ. ಎತ್ತಿ ಕೈಯಲ್ಲಿಟ್ಟುಕೊಂಡೆ. ಇನ್ನೇನು ಹೊರಡಬೇಕು. ನಿಂತು ಒಮ್ಮೆ ಕೆಳಗೆ ನೋಡಿದೆ. ತನ್ನ ಜೊತೆಗಾರನನ್ನು ಕಳೆದುಕೊಂಡ ಆ ಇನ್ನೊಂದು ಚಪ್ಪಲಿ ಅನಾಥವಾಗಿ ನನ್ನನ್ನು ನೋಡುತ್ತಿತ್ತು. ನನಗೆ ಆಗ ನನ್ನ ಒಂಟಿ ಚಪ್ಪಲಿಯೇ ನೆನಪಾಯಿತು. ನನ್ನ ಇಷ್ಟು ದಿನದ ತಲ್ಲಣಗಳೂ ನೆನಪಾದವು. ಅದನ್ನು ವಿನಾಕಾರಣ ಒಂಟಿ ಮಾಡಲು ತನಗೇನು ಅಧಿಕಾರವಿದೆ ಅನ್ನುವ ಯೋಚನೆಯಾಗಿ ಸಣ್ಣ ಸಂಕಟವಾಯಿತು. ಕೈಯಲ್ಲಿ ಹಿಡಿದಿದ್ದ ಒಂದು ಒಂಟಿ ಚಪ್ಪಲಿಯನ್ನು ಸುಮ್ಮನೆ ಕೆಳಗೆ ಇಟ್ಟು ಹೇಗೆ ಹೋಗಿದ್ದೇನೊ ಹಾಗೆಯೇ ಹಿಂದುರುಗಿದೆ.
ತುಂಬಾ ಬೇಸರವೆನಿಸಿತು. ಹೊಟ್ಟೆ ಹಸಿತಾ ಇತ್ತು. ಸಾಕಷ್ಟು ಬಾಯಾರಿಕೆ. ಖೋಲಿ ಸೇರಲು ತುಂಬಾ ದೂರ ಸಾಗಬೇಕು. ಸಿಟಿ ಬಸ್ಸಿನಲ್ಲಿ ಹೋಗಬೇಕು, ಇಲ್ಲವೆ ಆಟೊ ಹಿಡಿಯಬೇಕು. ಆದರೆ ಯಾವುದರ ಬಗ್ಗೆ ಯೋಚಿಸದೆ ನಡೆಯತೊಡಗಿದೆ. ಬಿಸಿಲಿಗೆ ಬೆವರು ಸುರಿಯತೊಡಗಿತು. ದಾಹ, ಹಸಿವು ನನ್ನನ್ನು ಹಣಿಯತೊಡಗಿದ್ದವು. ನಾನು ರೂಮು ಸೇರಿದಾಗ ಸುಸ್ತೊ ಸುಸ್ತು. ಸ್ವಲ್ಪ ಹೊತ್ತು ಕೂತೆ. ಅಲ್ಲಿಯೇ ನಿದ್ದೆ ಹೋಗಿಬಿಟ್ಟೆ, ನಿದ್ದೆಯಲ್ಲಿ ಅದೇ ಕನಸು ಹಾಜರ್. ಆದರೆ ಇಂದು ಆ ಕನಸಿನಲ್ಲಿ ಕಳೆದುಹೋಗಿದ್ದ ಒಂಟಿ ಚಪ್ಪಲಿಯೊಂದು ಯಾರದೊ ಪಾದದಲ್ಲಿರುವುದು ಕಾಣಿಸಿತು. ಅವರನ್ನು ಬೆನ್ನಟ್ಟಿಕೊಂಡು ಹೋದೆ. ಓಡುವ ಭರದಲ್ಲಿ ಚಪ್ಪಲಿಯಾದರೂ ಬಿಟ್ಟ ಹೋಗಬಹುದ ಅನ್ನುವ ಆಸೆ ಇತ್ತು. ಆದರೆ ಅವರು ಚಪ್ಪಲಿಯನ್ನು ಎತ್ತಿಕೊಂಡು ಕೈಯಲ್ಲಿಡಿದುಕೊಂಡು ಓಡತೊಡಗಿದರು. ನಾನು ಓಡಿ ಓಡಿ ಸುಸ್ತಾಗಿ ಬಿದ್ದೆ. ಎಚ್ಚರವಾಗಿಬಿಟ್ಟಿತು.
ಎಚ್ಚರವಾದರೂ ಏಳದೆ ಹಾಗೆ ಮಲಗಿದ್ದೆ. ಎಷ್ಟೊ ಹೊತ್ತಿನ ಬಳಿಕ ಎದ್ದು ಬಚ್ಚಲ ಮನೆಗೆ ಹೋಗಿ ಮುಖ ತೊಳೆದುಕೊಂಡು ಬಂದು ಮುಖ ಒರೆಸಿಕೊಳ್ಳುತ್ತಾ ಕನ್ನಡಿ ಮುಂದೆ ನಿಂತೆ. ಕನ್ನಡ ನೋಡಿದ್ದೆ ನನಗೆ ಯಾರೊ ಮುಖದ ಮೇಲೆ ಹೊಡೆದಂತಾಯ್ತು. ಕನ್ನಡಿಯಲ್ಲಿ ನನ್ನ ಮುಖ ಕಾಣಿಸಿರುತ್ತಿಲ್ಲ. ಆ ಒಂಟಿ ಚಪ್ಪಲಿ ಕಾಣಿಸುತ್ತಿತ್ತು.
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು