ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ಫೇಕ್ ಅಕೌಂಟ್! 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

32

ಅವರೊಂದು ವಿದಾಯದ ಪೋಸ್ಟ್ ಬರೆದು ತಕ್ಷಣ ಡಿಲೀಟ್ ಮಾಡಿಬಿಟ್ಟರು. ಫೇಸ್ಬುಕ್ ತೊರೆಯುವೆ. ಹೀಗೆ ಏನೊ ಒಂದು ನಿರ್ಧಾರದಂತಿತ್ತು ಅವರ ಬರಹ. ಆ ಕ್ಷಣಕ್ಕೆ ನನ್ನ ತಲೆಯಲ್ಲಿ ಮಿಂಚೊಂದು ಸುಳಿದು ಹೊಯಿತು. ನಾನು ಅವರ ಪ್ರೊಫೈಲ್ ಅನ್ನು ಚಕಾಚಕ್ ಅಂತ ನೋಡಿ ಅವರ ಪ್ರೊಫೈಲ್ ಪಿಕ್ ಮತ್ತು ಇತರೆ ವಿವರಗಳನ್ನು ಸೇವ್ ಮಾಡಿಕೊಂಡೆ. ನಾನೊಂದು ಯಾವುದೊ ಹೊಸ ಬಲೆಯೊಳಗೆ ಕವಚಿ ಬೀಳುತ್ತೇನೆ ಎಂಬ ಅರಿವು ಆ ಕ್ಷಣಕ್ಕೆ ನನಗೆ ಇರಲಿಲ್ಲ. 

ನಾನು ಆ ವಿವರಗಳನ್ನು ಸೇವ್ ಮಾಡಿಕೊಂಡ ಸ್ವಲ್ಪ ಹೊತ್ತಿನಲ್ಲೆ ಅವರ ಅಕೌಂಟ್ ಡಿಲೀಟ್ ಆಗಿತ್ತು. ಯಾವ ಕುರುಹು ಇಲ್ಲದಂತೆ ಅವರ ಫೇಸ್ಬುಕ್ಕಿನಿಂದ ಹೊರಟು ಹೋಗಿದ್ದರು.

ನನಗೆ ಆಗಲೇ ಅನಿಸಿದ್ದು ಅವರ ಹೆಸರಿನಲ್ಲಿ ಒಂದು ನಕಲಿ ಖಾತೆ ತೆರೆಯಬೇಕು ಅಂತ.  ನಕಲಿ ಖಾತೆ ತೆರೆದು ದುಡ್ಡು ಕೇಳಿ, ಪೋನ್ ಪೇ ಇದೆಯಾ ಅಂತ ಕಾಡಿಸಿ ದುಡ್ಡು ಸೆಳೆಯುವ ಯಾವ ಉದ್ದೇಶವೂ ನನಗಿರಲಿಲ್ಲ. ನನಗ್ಯಾಕೆ ಹಾಗೆ ಅನಿಸಿತೊ ಗೊತ್ತಿಲ್ಲ. ಅವರ ವಿದಾಯದ ಪೋಸ್ಟ್ ಬರೆದುಕೊಂಡಾಗ ಅವರದೊಂದು ಫೇಕ್ ಅಕೌಂಟ್ ತೆರೆಯುವ  ಆಲೋಚನೆ ನನ್ನೊಳಗೆ ಬಂದಿತ್ತಾ? ನಾನು ಆದನ್ನು ನಿಖರವಾಗಿ ಹೇಳಲಾರೆ. ಆದರೆ ಅವರ ಖಾತೆ ಪತ್ತೆ ಇಲ್ಲದಂತೆ ಅಳಿಸಿ ಹೋದಾಗ ಅವರ ಹೆಸರಿನಲ್ಲಿ ಒಂದು ನಕಲಿ ಖಾತೆ ತೆರೆಯುವ ನಿರ್ಧಾರ  ಸ್ಪಷ್ಟವಾಯಿತು. 

 ಮಹಾಭಾರತದ ಯಯಾತಿ ಅಂತ ಒಬ್ಬ ರಾಜನಿದ್ದ. ಅವನಿಗೆ ಅವನದೆ ಆದ ಬದುಕಿನ ಒಂದು ಪ್ರೊಫೈಲ್ ಇತ್ತು.‌ ಅದಕ್ಕೆ ತಕ್ಕನಾದ ಹಿಂಬಾಲಕರೂ ಇದ್ದರು. ಅವರಿಂದ ಉತ್ತಮವಾದ ಲೈಕ್, ಕಮೆಂಟುಗಳಿದ್ದವು. ಪ್ರೀತಿಸುವ ಜನ ಇದ್ದರು. ಒಮ್ಮೊಮ್ಮೆ ನಾವೇ ನಮ್ಮ ಪ್ರೊಫೈಲ್ ಗಳನ್ನು ಹಾಳುಗೆಡುವಿಕೊಳ್ಳುತ್ತೇವೆ. ನಮ್ಮ ತಲೆ ಹರಟೆಗಳಿಗೆ ಯಾರೊ ರಿಪೋರ್ಟ್ ಮಾಡ್ತಾರೆ. ಖಾತೆ ಸಂಕಟಕ್ಕೆ ತಳ್ಳಲ್ಪಡುತ್ತದೆ.‌

ಯಯಾತಿ ಇದ್ದಕ್ಕಿದ್ದಂತೆ ತನ್ನ ನಾಳೆಗಳ ಮೇಲೆ ತಾನೇ ಕಲ್ಲು ಹಾಕಿಕೊಂಡ. ಅವನ ಹೆಂಡತಿ ದೇವಯಾನಿಯೇ ಅವನ ಪ್ರೊಫೈಲ್ ಬಗ್ಗೆ ಅವರಪ್ಪನಿಗೆ ರಿಪೋರ್ಟ್ ಮಾಡಿದಳು. ಖಾತೆಗೆ ಕಷ್ಟ ಬಂತು. ಅವರು ನಿನ್ನ ಖಾತೆಗೆ ಯಾವುದೂ ದಕ್ಕದಂತಾಗಲಿ. ಮುಪ್ಪು ಮೆತ್ತಿಕೊಳ್ಳಲು ಅಂದುಬಿಟ್ಟರು. ದಿಢೀರನೆ ಬಂದ ಮುಪ್ಪಿನಿಂದ ಏನು ತಾನೆ ಸಾಧ್ಯ? 

ಆದರೆ ಅವನಿಗೊಂದು ಅವಕಾಶ ಇತ್ತು. ಆತ ಇನ್ನೊಂದು ಪ್ರೊಫೈಲ್ ನಲ್ಲಿ ನುಗ್ಗಬಹುದಿತ್ತು. ಅದಕ್ಕೆ ನುಗ್ಗಬಹುದಾದ ಪ್ರೊಫೈಲ್‍ನವರ ಅನುಮತಿ ಬೇಕು, ಪಾಸ್‍ವರ್ಡ್ ಬೇಕು. ಯಾರು ಕೊಟ್ಟಾರು? ತನ್ನ ಬದುಕಿನ ಗುಟ್ಟನ್ನು, ಅದು ಕೊಡುವ ಕಷ್ಟಗಳನ್ನು, ಸುಖಗಳನ್ನು ಯಾರು ಹಂಚಿಕೊಂಡಾರು.! 

ಅವನಿಗೊಬ್ಬ ಮುಗ್ದ ಮಗ ಪುರು ಸಿಕ್ಕ‌. ತನ್ನ ಹೊಚ್ಚ ಹೊಸ ಪ್ರೊಫೈಲ್ ಇದೆ ಅಂದ. ನಿಮಗೆ ಕೊಡುವೆ ಅಂದ. ನಿಮ್ಮದು ನನಗೆ ಇರಲಿ ಅಂದ. ನಿಮಗೇನು ಬೇಕು, ನಿಮಗೆಷ್ಟು ಬೇಕೊ ಅಷ್ಟು ಬಳಸಿಕೊಳ್ಳಿ. ಸಾಕು ಅನಿಸಿದ ತಕ್ಷಣ ವಾಪಸ್ ಕೊಡಿ ಅಂದ. ಯಾರೂ ತಾನೇ ಬೇಡ ಅಂದಾರು!?

*** 

ನನ್ನದೊಂದು ಪಾಸ್ವರ್ಡ್ ಮರೆತು ಹೋದ ಹಳೆಯ ಮೈಲ್ ಐಡಿ ಇತ್ತು. ಅದರ ಪಾಸ್ವರ್ಡ್ ರಿಸೆಟ್ ಮಾಡಿ. ಫೇಸ್ಬುಕ್ ನಲ್ಲಿ ಸೈನ್ ಅಪ್ ಆದೆ. ನಕಲಿ ಖಾತೆಯೊಂದನ್ನು ಅಸಲಿ ಖಾತೆ ತೆರೆಯುವ ಕಾಳಜಿಗಿಂತ ಹೆಚ್ಚು ಮುತುವರ್ಜಿ ಮಾಡಿದೆ. ಈ ಜಗತ್ತಿನಲ್ಲಿ ನಕಲಿಯೆ ಕಷ್ಟ; ಅಸಲಿ ಸುಲಭ. ಈ ಜನ ಈ ಕಷ್ಟದ್ದನ್ನು, ನಕಲಿಯನ್ನು ಹೊತ್ತುಕೊಂಡು ಅದೆಷ್ಟು ಸುಸ್ತಾಗಿ ಹೋಗಿದ್ದಾರೊ!  

ಡಿಲೀಟ್ ಮಾಡಿ ಹೋದವನ ಖಾತೆಯಿಂದ ಸೇವ್ ಮಾಡಿಕೊಂಡಿದ್ದ ಅಷ್ಟೂ ವಿವರಗಳನ್ನು ಬಳಸಿ ಅವನ ಹೆಸರಿನಲ್ಲಿ ಒಂದು ನಕಲಿ ಖಾತೆ ತೆರೆದೆ. ಎಲ್ಲೂ ಕೂಡ ಅನುಮಾನ ಬರದಂತೆ ಚೆಂದಗಾಣಿಸಿದೆ. ಸಾಲಾಗಿ ಬಂದು ಪ್ರೆಂಡ್ ಸಜೆಷನ್ ಗಳಿಗೆ ಹಿಂದು ಮುಂದು ನೋಡದೆ ರಿಕ್ವೆಸ್ಟ್ ಕಳುಹಿಸಿದೆ. ಒಂದಷ್ಟು ರಿಕ್ವೆಸ್ಟ್ ಗಳು ಬಂದವು. ಅವುಗಳನ್ನು ಓಕೆ ಮಾಡಿದೆ.

ಎರಡ್ಮೂರು ದಿನಗಳು ಹೀಗೆ ಪ್ರೆಂಡ್ ಮಾಡಿಕೊಳ್ಳುವುದರಲ್ಲೇ ಕಳೆದೆ. ಮೂರನೆ ದಿನಕ್ಕೆ ಸುಮಾರು ಎರಡು ಸಾವಿರ ಗೆಳೆಯರಾದರು. ಏನಾದ್ರೂ ಪೋಸ್ಟ್ ಬರೆಯಬೇಕಲ್ಲ. ಏನು ಬರೆಯುವುದು? ಅವನು ಯಾವ ತರಹದ ಪೋಸ್ಟ್ ಬರೆಯುತ್ತಿದ್ದ. ನಮಗೆ ಅದರ ಅರಿವಿಲ್ಲ. ಸುಮ್ಮನೆ ಏನಾದ್ರೂ ಒಂದು ಹಾಕಲೇ? ಅವನ ಗೆಳೆಯರು ಇದೇನಿದು ಹೀಗೆ? ಈ ತರಹ ಬರೆದಿದ್ದೀಯಾ ಅಂದರೆ? ಖಾತೆ ಫೇಕ್ ಆಗಬಹುದು? ನನ್ನ ಅಭಿರುಚಿಯನ್ನು ಅವನ ಅಭಿರುಚಿಯಂತೆ ಫೇಕ್ ಮಾಡುವುದು ಎಷ್ಟೊಂದು ಕಷ್ಟದ್ದು. 

ಆದರೆ ಇಡೀ ಟೈಮ್ ಲೈನ್ ಖಾಲಿ ಬಿಡಬಾರದಲ್ಲ. ಒಂದೊಳ್ಳೆ ರೂಮಿಯ ಸಾಲಿಗೆ ಒಂದು ಹುಡುಗಿ ಚಿತ್ರ ಹಾಕಿ ಪೋಸ್ಟ್ ಬರೆದೆ. ಒಂದಷ್ಟು ಲೈಕ್ ಗಳು ಬಂದವು.‌ ಕೆಲವರು ಇದೇನೊ ಹೊಸ ಖಾತೆ? ಹಳೆಯದು ಏನಾಯ್ತು? ಪಾಸ್ ವರ್ಡ್ ಮರೆತು ಹೋಗಿದೆಯಾ? ನೂರೆಂಟು ಕಮೆಂಟುಗಳು. ಅವುಗಳಿಗೆಲ್ಲಾ ಒಂದೊಂದು ಲೈಕ್ ಒತ್ತಿ ಸುಮ್ಮನಾದೆ. 

ಮೂರು ದಿನದ ನಂತರ ಇನ್ಬಾಕ್ಷಿಗೆ ಒಂದು ಮೆಸೇಜ್ ಬಂತು. 

*** 

ಪುರುವಿನ ಪ್ರೊಫೈಲ್ ಯಯಾತಿ, ಯಯಾತಿಯ ಪ್ರೊಫೈಲ್ ಪುರು. ಯಯಾತಿಯ ಗೋಳು ಪುರುವಿಗೆ, ಪುರುವಿನ ತುಂಬು ಯವ್ವನ ಯಯಾತಿಗೆ. ‌ಆದರೆ ಇದನ್ನು ಪುರುವಿನ ಹೆಂಡತಿ ಹೇಗೆ ಒಪ್ಪಿಕೊಂಡಾಳು? ಅವಳು ಪುರುವಿನ ಪ್ರೊಫೈಲ್ ನೋಡಿ ವಿನಂತಿ ಕಳುಹಿಸಿದ್ದು, ಜೊತೆ ಬಂದದ್ದು.. ಈಗ ಅದೇ ಇಲ್ಲ ಅಂದ್ಮೇಲೆ unfriend ಮಾಡಬಹುದು. Block ಮಾಡಬಹುದು. ಮನುಷ್ಯನ ಎಲ್ಲಾ ಸಂಬಂಧಗಳು‌ ಒಂದು ಉದ್ದೇಶದವು. ಆ ಉದ್ದೇಶ ಹಿಡೇರಲ್ಲ ಅಂದ್ಮೇಲೆ ಯಾರು ತಾನೇ ಜೊತೆ ಇರುತ್ತಾರೆ? 

ಅವಳು ಬಯಸಿದ್ದು ಪುರುವಿನ ಯವ್ವನ, ಹೆಸರು. ಅದು ಯಯಾತಿಯ ಬಳಿ ಹೋಗಿ ಸೇರಿದೆ. ಹಾಗಾದರೆ ಯಯಾತಿ ತನ್ನ ಉದ್ದೇಶ ಈಡೇರಿಸುವನೆ? ಯಯಾತಿಗೆ ಸಾಧ್ಯವಾಗುತ್ತದಾ? ಇಲ್ಲಿ ಮನುಷ್ಯ ನೆಪ ಮಾತ್ರ. ಅದಕ್ಕೆ ಅಂಟಿಕೊಂಡ ಉದ್ದೇಶಗಳಿಗೆ ನಾವು ಪ್ರೀತಿ, ವಿಶ್ವಾಸ, ನಂಬಿಕೆಯ ಹೆಸರು ಕೊಡುತ್ತೇವೆ. ಅದನ್ನು ಬೇಕಾದರೆ ನೀವು ಮುಖವಾಡವೆಂದು ವ್ಯಾಖ್ಯಾನಿಸಬಹುದು.‌ 

ಯಾವುದು ಮುಖ್ಯ? 

ಇದಕ್ಕೆ ಯಯಾತಿ ಏನನ್ನಬಹುದು? 

*** 

“ಏ ಲೋಫರ್ ಯಾಕೊ ಹಳೆ ಅಕೌಂಟ್ ಡಿಲೀಟ್ ಮಾಡಿ ಹೊಸ ಅಕೌಂಟ್ ಕ್ರಿಯೇಟ್ ಮಾಡಿದೀಯ? ಮೂರಾಲ್ಕು ದಿನಗಳಿಂದ ಮೊಬೈಲ್ ಕೂಡ ಸ್ವೀಚ್ ಆಫ್.   ವಾಟ್ಸಪ್ ಕೂಡ ಆಫ್ ಲೈನ್. ಏನಾಯ್ತು ಡಿಯರ್? ತುಂಬಾ ಹೆದರಿದ್ದೆ ಕಣೋ. ಹೋಗಬಹುದು ನೀನು ಹೀಗೆ ಒಂದು ಮಾತನು ಹೇಳದೆ..?” 

ಅನ್ನುವ ಮೆಸೇಜ್ ಬಂದು ಇನ್ಬಾಕ್ಷಿನಲ್ಲಿ ಬಂದು ಕೂತಿತ್ತು. ತೆಗೆದು ನೋಡಿದೆ. ಅದು ಹುಡುಗಿಯದು. ಅವಳ ಪ್ರೊಫೈಲ್ ಚೆಕ್ ಮಾಡಿದೆ. ಹುಡುಗಿ ತುಂಬಾ ಚೆಂದ ಇದ್ದಾಳೆ. ಅವರ ಪೋಸ್ಟಿಂಗ್ ತುಂಬಾ ಇಂಟ್ರಸ್ಟಿಂಗ್. ಒಳ್ಳೊಳ್ಳೆ ಸಾಲುಗಳಿವೆ. ಅವಳೇ ಬರೆದ ಕವಿತೆಗಳಿವೆ. ಬಹುಶಃ ಅವಳೇ ತೆಗೆದ ಒಂದಷ್ಟು ಪೋಟೊಗಳೂ ಇವೆ. 

ಅವಳಿಗೆ ಏನು ಪ್ರತಿಕ್ರಿಯಿಸಲಿ? ನಾನು ಅವನಲ್ಲ. ಅವನು ನಾನಲ್ಲ. ನಾನು ಅವನಾಗಿ ಮಾತಾಡುವುದು ಹೇಗೆ? 

ಇನ್ನೊಂದು ಮೆಸೇಜ್ 

“ಪ್ಲೀಸ್ ಕಣೋ.. ಮಾತಾಡು. ಏನಾಯ್ತು? ಯಾಕೆ ಇಷ್ಟು ಮೌನ. ಬೇರೆ ಅಕೌಂಟ್ ಮಾಡಿಕೊಂಡು ನನ್ನಿಂದ ಓಡಿ ಹೋಗುವ ಪ್ರಯತ್ನವಾ? ಅದನ್ನು ಒಂದು ಮಾತಿನಲ್ಲಿ ಹೇಳಿಹೋಗಬಹುದಿತ್ತು.. ಇಷ್ಟೆಲ್ಲಾ ಕಷ್ಟ ಯಾಕೆ ತೆಗೆದುಕೊಂಡೆ..?” 

ಅಂತ ಬರೆದಿತ್ತು. 

ನನಗೆ ಪೇಚಿಗಿಟ್ಟುಕೊಂಡಿತು. 

ನಾನು ಅವನ್ನಲ್ಲ ಅಂದು ಬಿಡಲೇ?

ಅನ್ನಬಹುದು. ಇದು ಫೇಕ್ ಅಕೌಂಟ್ ಅಂತ ಅವಳು ನಂಬುತ್ತಾಳಾ? ಇವನು ಮೋಸ ಮಾಡಲು ಮಾಡಿಕೊಂಡ ಹುನ್ನಾರು ಅನ್ನಬಹುದು. 

ಎಷ್ಟು ಕಷ್ಟದ್ದು ಇದು.. ಇನ್ನೊಬ್ಬರಾಗಿ ಬದುಕುವುದು. 

ಧೈರ್ಯ ಮಾಡಿ ಒಂದು ಮೆಸೇಜ್ ಹಾಕಿದೆ..

“ಹಾಯ್ ಹೇಗಿದೀಯ?” 

ತಕ್ಷಣ ಅವಳ ಮಸೇಜ್ ‘ಇನ್ನೂ ಬದುಕಿದೀನಿ ಕಣೋ’ 

‘ಸಾರಿ. ಆ ಅಕೌಂಟ್ ಡಿಲೀಟ್ ಆಯ್ತು. ಪಾಸ್ವರ್ಡ್ ಮರೆತಿದ್ದೆ. ಅದನ್ನು ರಿಟ್ರೈವ್ ಮಾಡಲು ಪ್ರಯತ್ನ ಪಟ್ಟೆ ಆಗಲಿಲ್ಲ. ಸೋ ಹೊಸದು ತೆರೆದೆ. ಮೊಬೈಲ್ ಎಲ್ಲೊ ಕಳೆದು ಹೋಗಿದೆ. ಈಗ ಸೈಬರ್ ನಲ್ಲಿ ಕೂತು ಚಾಟ್ ಮಾಡ್ತಾ ಇದೀನಿ. ಸ್ವಲ್ಪ ದಿನ ಬ್ಯೂಸಿ ಆಯ್ತಾ..’ 

ಅಂತ ಒಂದು ಮಸೇಜ್ ಕಳುಹಿಸಿ ನಿಟ್ಟುಸಿರು ಬಿಟ್ಟೆ. ನನಗೆ ಇದರ ಉಸಾಬರಿಯೆ ಬೇಡ. ಖಾತೆ ಅಳಿಸಿಬಿಡುವ ಅನಿಸಿತು. 

ಚೆಂದದ ಹುಡುಗಿ ಇವಳು. ಚಾಟ್ ಮಾಡಿಕೊಂಡು ಇದ್ದು ಬಿಡಲೇ. ಚಾಟ್ ನಿಂದಲೇ ಅವಳನ್ನು ಇನ್ನಷ್ಟು ಗೆದ್ದು. ಅಮೇಲೆ ನಾನು ಅವನ್ನಲ್ಲ.. ಇವನು ಬೇರೆ ಅಂದು ಅವಳನ್ನು ಪ್ರೀತಿಸಲೆ? ಈ ಯೋಚನೆಯೂ ಬಂದು ಹೊಯಿತು. ಒಮ್ಮೆ ನನ್ನ ಯೋಚನೆಯ ಬಗ್ಗೆ ನನಗೆ ಅಸಹ್ಯವಾಯಿತು. 

ಅವತ್ತಿನ ದಿನ ಇಷ್ಟಕ್ಕೆ ಮುಗಿಯಿತು. 

ನಂತರದ ದಿನಗಳಲ್ಲಿ ನಮ್ಮ ನಡುವೆ ಒಂದಷ್ಟು ಮಾತುಗಳಾದವು. ಅವಳು ತುಂಬಾ ಚೆಂದ ಮಾತಾಡುತ್ತಿದ್ದಳು. ಮೊಬೈಲ್ ತಗೊ ಅಂದಳು. ದುಡ್ಡು ಕಳುಹಿಸಲಾ ಅಂದಳು. ಈಗ ಎಲ್ಲಿದೀಯ ಕೇಳಿದಳು? ಯಾಕೆ ಹೆಚ್ಚು ಮಾತಾಡುತ್ತಿಲ್ಲ.. ಹುಷಾರು ಇದೀಯಾ ತಾನೆ? ಅಮ್ಮ ಹೇಗಿದಾರೆ ಈಗ? ಊರಿಗೆ ಹೋಗಿ ಬಂದ್ಯಾ? ಬೇರೆ ಕಡೆ ಕೆಲಸಕ್ಕೆ ಟ್ರೈ‌ ಮಾಡ್ತಾ ಇದ್ದೆಯಲ್ಲಾ ಏನಾಯ್ತು? ಇರುವ ಕೆಲಸದಲ್ಲಿ ಬಹಳ ಕಿರಿಕಿರಿ, ತುಂಬಾ ಒತ್ತಡ ಅಂತಿದ್ಯಾಲ್ಲ, ಈಗ ಹೇಗಿದೆ?

ಅಬ್ಬಾ ಎಷ್ಟೆಲ್ಲಾ ಪ್ರಶ್ನೆಗಳು? ಅವನ ಬಗ್ಗೆ ಎಷ್ಟೊಂದು ಮಾಹಿತಿ ಗೊತ್ತಾದವು. 

ಈಗ ನಾನು ನಾನಿಸಲಿಲ್ಲ, ಅವನೆಂದೇ ಅನಿಸತೊಡಗಿತು. ಅಮ್ಮ ಊರಿನಲ್ಲಿದ್ದಾಳೆ‌. ನಾನು ಈಗ ಮಾಡುವ ಕೆಲಸದಲ್ಲಿ ನೆಮ್ಮದಿಯಿಲ್ಲ‌. ಹೊಸ ಕೆಲಸ ಹುಡುಕಬೇಕು. ಮದುವೆ ಆಗಿಲ್ಲ. ನನಗೊಂದು ಪ್ರೀತಿ ಇದೆ. ಮುದ್ದಾದ ಹುಡುಗಿ ನನ್ನನ್ನು ಪ್ರೀತಿಸುತ್ತಿದ್ದಾಳೆ.. 

ನಾನು ಎರಡು ಬದುಕಗಳನ್ನು ಬದುಕುತ್ತಿರುವ ಏಕೈಕ ವ್ಯಕ್ತಿ ಅನಿಸಿತು. 

ಸಣ್ಣ ಪ್ರತಿಕ್ರಿಯೆ ನೀಡುತ್ತಾ.. ನಾನು ಅವನಾಗಿಯೆ ಉಳಿದೆ. 

ಆದರೆ ಅವೊತ್ತು ಆ ಒಂದು ಮೆಸೇಜ್ ಬಂದಾಗ ನಾನು ತತ್ತರಿಸಿ ಹೋದೆ.. 

*** 

ಯಯಾತಿಯ ಈ ನಡೆ ಶರ್ಮಿಷ್ಠಗೆ ಇಷ್ಟವಾಗಲಿಲ್ಲ.‌ ಯಯಾತಿ ವಾದಿಸಿದ. ಅವಳು ಅದಕ್ಕೆಲ್ಲಾ ಉತ್ತರ ಕೊಟ್ಟಳು. ಅವರವರ ಬದುಕನ್ನು ಅವರವರೇ ಅನುಭವಿಸಬೇಕು. ಅವರವರ ಪ್ರೊಫೈಲ್ ನಲ್ಲಿ ಅವರವರೇ ಇರಬೇಕು. ಅದು ಕೊಡುವ ಕಷ್ಟ, ಸುಖ ಅವರವರೆ ಅನುಭವಿಸಬೇಕು ಅದೇ ಅಸಲಿ ಬದುಕು. ಯಾರದು ಕಷ್ಟ ನಮ್ಮದಾಗಲು ಹೇಗೆ ಸಾಧ್ಯ? ಯಾರದು ಸುಖ ನಮ್ಮದಾಗಲು ಹೇಗೆ ಸಾಧ್ಯ? 

ನೀನು ಪುರುವಿನ ಯವ್ವನ ಪಡೆದಿದ್ದೀಯ? ಹಾಸಿಗೆಯ ಮೇಲೆ ನೀನು‌ ಕುಡಿಯುವ ಕಾಮ ನಿನ್ನದಲ್ಲ. ಅದು ಪುರುವಿನದು. ನಿನ್ನ ಕಾಮ ಮುಗಿದು ಹೋಗಿದೆ. ಪರುವಿನ ದೇಹ ಪುರುವಿನಲ್ಲೆ ಇರಬಹುದು ಆದರೆ ಅವನ ಯವ್ವನ ನಿನ್ನ ಬಳಿ‌ ಇದೆ. ನಾನು ನಿನ್ನೊಂದಿಗೆ ಸೇರಿದರೆ ಅದು ಪುರುವಿನ ಯವ್ವನವನ್ನು ನಾನು ಅನುಭವಿದಂತಾಗುತ್ತದೆ. ಮಗನ ಪ್ರೊಫೈಲ್ ಮಗನಿಗೆ ಕೊಟ್ಟು ಬಿಡಿ. ನೀವು ನೀವಾಗಿ, ನಾನು ನಾನಾಗುತ್ತೀನಿ. ನಮಗೆ ಎಷ್ಟು ದಕ್ಕುತ್ತದೊ ಅಷ್ಟು ಅನುಭವಿಸೋಣ. ಅದು ನಮ್ಮದೇ ಆಗಿರುತ್ತದೆ. ಎಲ್ಲಾದರೂ ಹೊರಟು ಹೋಗೋಣ ಬೇಕಾದರೆ ಅಂದಳು.. 

ಅವನು ಅವಳ ಮೇಲೆ ಕೂಗಾಡಿದ. ಅರಚಿದ.. ತೊಲಗು ಅಂದ. ಅವಳು ಹೋದ ಮೇಲೆ ಬಂದ ಹೊಸಬಳ ಮಾತು ಕೇಳಿ ಇವನು ನಿಜಕ್ಕೂ ಕಂಗಾಲಾದ..

*** 

ಹಾಯ್

ಎಲ್ಲಿದ್ದಿಯ? 

ಯಾರದೊ ಮಸೇಜ್..  ಅವನು ಒಬ್ಬ ಹುಡುಗ. 

ರಿಪ್ಲೆ ಮಾಡಲೊ ಬೇಡವೊ ಯೋಚನೆಯಾಯಿತು.‌

ನಾನು ಫೇಕ್ ಅಕೌಂಟ್ ತೆರೆದು ಸಾಧಿಸಿದ್ದೇನು? ಅನಿಸತೊಡಗಿತು. 

‘ನಿಂಗೆ ಎಷ್ಟು ಪೋನ್ ಮಾಡಿದ್ರೂ ಹೋಗ್ತಿಲ್ಲ’

‘ಪೇಸ್ಬುಕ್ ನಲ್ಲಿ ಮೊದಲು ನೀನು ಇದ್ದೆ ನನ್ನ ಪ್ರೆಂಡ್ ಲಿಸ್ಟ್ ನಲ್ಲಿ ಈಗ ಅಲ್ಲಿ ಸಿಗಲಿಲ್ಲ ನೀನು. ಬಹುಶಃ unfriend ಮಾಡಿರಬೇಕು ಅನ್ಕೊಂಡು..ಈಗ ಸರ್ಚ್ ಕೊಟ್ಟು ಹುಡುಕಿದೆ. ನೀನು ಸಿಕ್ಕೆ. 

‘ತುಂಬಾ ಅರ್ಜೆಂಟು ಇತ್ತು ಕಣೊ..’

ಅನ್ನುವ ಮೆಸೇಜ್ ಬಂತು.

ಏನೊ ಮುಖ್ಯವಾದದ್ದು ಇರಬೇಕು ಅನಿಸಿತು‌ ನನಗೆ. ತಿಳಿಯುವ ಕುತೂಹಲ ಕೂಡ ಆಯ್ತು. 

‘ಹೇಳು.. ಅದು ಏನು ಅಂತ’ ಒಂದು ರಿಪ್ಲೆ ಕೊಟ್ಟೆ. 

‘ನಿಮ್ಮ ಅಮ್ಮಂಗೆ ತುಂಬಾ ಹುಷಾರಿಲ್ಲ ಮಾರಾಯ. ಎಲ್ಲಿದೀಯ ನೀನು. ಹಾಸ್ಪಿಟಲ್‍ಗೆ ನಿನ್ನೆ ಬೆಳಗ್ಗೆ ಸೇರಿಸಿದ್ವಿ.‌ ನಿನಗೆ ತಿಳಿಸೋಕೆ ನೋಡಿದ್ರೆ ನೀನು ಪತ್ತೆ ಇಲ್ಲ. ಈಗ ಸಿಕ್ಕೆ ನೋಡು. ಬೇಗ ಬಾ.. ಡಾಕ್ಟರ್ ತುಂಬಾ ದುಡ್ಡು ಬೇಕಾಗುತ್ತೆ ಅಂದಿದ್ದಾರೆ. ಅಲ್ಲಿ ಹಾಸ್ಪಿಟಲ್ ನಲ್ಲೆ ಇರ್ತೀನಿ ಬೇಗ ಬಾ..’

ಅಂತ ಒಂದೇ ಉಸಿರಲ್ಲಿ ಟೈಪ್ ಮಾಡಿ ಕಳುಹಿಸಿದ್ದ.‌

ನಾನು ಆ ಮೆಸೇಜ್ ಓದಿ ಜಲಜಲ ಬೆವತು ಹೋದೆ. ನನ್ನ ಅಮ್ಮ ನೆನಪಾದರು. ಎಲ್ಲಾ ಅಮ್ಮಂದಿರು ಒಂದೆ.. ಎಲ್ಲಾ ಅಮ್ಮಂದಿರು ದೇವರು. ಇವರೇ ನನ್ನದೆ ಅಮ್ಮ ಅಂತ  ಅನಿಸಿಬಿಟ್ಟಿತು. 

ಹೋಗಬೇಕೊ, ಬೇಡವೊ ತುಸು ಯೋಚನೆ ಬಂತು. ಆದರೆ ಯೋಚಿಸುತ್ತಾ ಕೂರುವ ಸಮಯವಲ್ಲ. ಒಂದಷ್ಟು ದುಡ್ಡು, ಕ್ರೆಡಿಟ್ ಕಾರ್ಡ್ ಇಟ್ಟುಕೊಂಡು ಹೊರಟೆ. ಒಂದು ರಾತ್ರಿಯ ಪಯಣದಷ್ಟು ದೂರದ ಊರು. ಅವನು ಹೇಳಿದ ಊರು, ಹಾಸ್ಪಿಟಲ್ ಗುರುತು ಮಾಡಿಕೊಂಡು ಬಸ್ಸು ಹತ್ತಿದೆ..

ಬಸ್ಸು ಹತ್ತುವಾಗ ಅವಳ ಮೆಸೇಜ್ ಬಂತು.. 

‘ಅಮ್ಮಂಗೆ ಹುಷಾರಿಲ್ಲ ಕಣೇ..’ ಅಂತ ಮಸೇಜ್ ಹಾಕಿದೆ. 

ಇದೇ ಮೊದಲ ಬಾರಿ ಅವಳಿಗೆ ತುಂಬಾ ಹತ್ತಿರವಾಗುವಂತಹ ಮಸೇಜ್ ಹಾಕಿದ್ದೆ.. ‘ಕಣೇ..’ ಅಂದದ್ದು ನನ್ನನ್ನು ಕೂಡ ಪುಳಕಿತಗೊಳಿಸಿತ್ತು.‌ ಅವಳು ಮತ್ತೆ ಏನೇನೊ ಮಸೇಜ್ ಹಾಕುತ್ತಲೇ ಇದ್ದಳು. ನಾನು ಆ ಹುಡುಗನ ಅಮ್ಮನ ಅನಾರೋಗ್ಯದ ಒತ್ತಡದಲ್ಲಿ ಏನನ್ನು ಪ್ರತಿಕ್ರಿಯಿಸಲಾಗಲಿಲ್ಲ.. 

ಬೆಳಗ್ಗೆ ಆ ಊರು ತಲುಪಿದೆ. ದಡಬಡಾಯಿಸಿ ಆಸ್ಪತ್ರೆ ಸೇರಿದೆ. ಅವನು ಕೊಟ್ಟ ವಾರ್ಡ್‍ಗೆ ಹೋಗಿ ತಲುಪಿದೆ. ಅವರ ಅಮ್ಮನ ಹೆಸರು ಕೇಳಿ ‘ಎಲ್ಲಿದ್ದಾರೆ?’ ಅಂದೆ. 

ನನಗೆ ತೀರದ ಆತಂಕ..

ನೀವು ಯಾರು ಅಂದರು? 

‘ಅವರ ಮಗ..’ ನಾಲಿಗೆ ತುದಿಯವರೆಗೂ ಬಂದು ಮಾತು ನುಂಗಿಕೊಂಡು. ಅವರಿಗೆ ಬೇಕಾದವರು. ಅವರ ಮಗ ಕಳುಹಿಸಿದ. ಅವನು ತುಂಬಾ ಬ್ಯುಸಿ ಇದ್ದ. ಅಮ್ಮನಿಗೆ ಹುಷಾರಿಲ್ಲ.. ಸ್ವಲ್ಪ ಹೋಗಿ ಬಾ.. ದುಡ್ಡು‌ ಕೂಡ ಕೊಟ್ಟಿದ್ದಾನೆ. ಎಷ್ಟಾದರೂ ಖರ್ಚಾಗಲಿ.. ಅಮ್ಮ ಉಳಿಬೇಕು..’ ಅಂದೆ.‌

ಅವರು ನನ್ನನ್ನು ತುಂಬಾ ಮರುಕದ ನೋಟದಲ್ಲಿ ನೋಡಿದರು. 

ಅವರ ಅಮ್ಮ ಬೆಳಗಿನ ಜಾವ ಸತ್ತು ಹೋದರು. ಸಾಯುವಾಗ ಮಗನ ಹೆಸರು ಕರೆಯುತ್ತಲೇ ಇದ್ದರು.‌ ಅವನು ಬಂದಿರಲಿಲ್ಲ.. 

ಸಾಯುವಾಗ ಅಷ್ಟು ಪ್ರೀತಿಯಿಂದ ಕರೆದಿದ್ದಕ್ಕೆ ಮಗ ಅಷ್ಟೊಂದು ಪ್ರೀತಿಯಿಂದಲೇ ಅವರ ಬಳಿ ಹೋದ. ಎಂದೂ ಅವನ ಮಾತು ಕೇಳದ ಮಗ.. ಇವತ್ತು ಅವನ ಅಮ್ಮನ ಮಾತು ಕೇಳಿ ಹೊರಟು ಹೋದರು. ಬೆಳಗ್ಗೆ ಅವನು ಸತ್ತ ಸುದ್ದಿ ಬಂತು. ದೂರದ ಊರಲ್ಲಿ ಯಾವುದೊ ಲಾಡ್ಜ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವನ ದೇಹ ಸಿಕ್ಕದೆ ಅಂತೆ.. ಅವನ ಜೇಬಿನಲ್ಲಿದ್ದ ಊರಿನ ಕುರುಹು ಹುಡುಕಿ ಪೋಲಿಸವರು ಪೋನ್ ಮಾಡಿದ್ದರು…’ ಅಂದ. 

ನನ್ನ ಕೈ ಕಾಲುಗಳು ನಡುಗತೊಡಗಿದವು. ಎದೆ ಹೊಡೆದುಕೊಳ್ಳ ತೊಡಗಿತು. ಅಯ್ಯೊ ಇದೇನಾಯ್ತು.. 

ಅಲ್ಲಿಂದ ಅಷ್ಟೆ ಅಲ್ಲ ಇಡೀ ಜಗತ್ತಿನಿಂದ ಓಡಿ ಹೋಗಬೇಕು ಅನಿಸಿತು.. ಅಲ್ಲೊಂದು ಮೂಲೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. 

ಆ ದಿನ ಅಲ್ಲೆ ಇದ್ದು.. ಇಬ್ಬರ ಶವಸಂಸ್ಕಾರ ಮುಗಿಸಿ ಅಲ್ಲಿಂದ ಹೊರಟು ಬಂದೆ.. 

ನಾನು ಅಕ್ಷರಶಃ ಸತ್ತು ಹೋಗಿದ್ದೆ..

ಅವಳ ಮಸೇಜ್ ಗಳು ನಿಂತಿರಲಿಲ್ಲ.. 

ನನಗೆ ಆ ಅಕೌಂಟ್ ಡಿಲೀಟ್ ಮಾಡಬೇಕು ಅನಿಸಿತು. ಅವಳಿಗೆ ನಿಜ ಹೇಳಿ ಈ ಫೇಕ್ ಆಟವನ್ನು ನಿಲ್ಲಿಸಬೇಕು ಅನಿಸಿತು. 

ಆದರೆ ಅವಳು ತುಂಬಾ ಪ್ರೀತಿಸುತ್ತಿದ್ದಳು. ದಿನಕ್ಕೊಂದು ಕನಸು ಹೆಣಿಯುತ್ತಿದ್ದಳು. ನಾನು ಅವಳಿಗೆ ಬಿಟ್ಟಿರಲು ಸಾಧ್ಯವಾಗದಷ್ಟು ಹತ್ತಿರವಾಗತೊಡಗಿದೆ..

ಆದರೆ ಅವಳು ಪ್ರೀತಿಸುತ್ತಿರುವುದು ನನ್ನನ್ನಲ್ಲ ‘ಅವನನ್ನು’ ಆದರೆ ಪಾಪ ಅವನಿಲ್ಲ..ಅವಳಿಗೆ ಗೊತ್ತಿಲ್ಲ. 

ಇತ್ತೀಚಿಗೆ ನಿನ್ನ ಮಾತುಗಳು ಎಷ್ಟೊಂದು ಇಷ್ಟ ಆಗ್ತ ಇವೆ ಗೊತ್ತಾ. ಎಷ್ಟೊಂದು ಕಾಳಜಿ ಇದೆ ನಿನಗೆ ನನ್ನ ಮೇಲೆ ಅನಿಸಿತ್ತೆ. ಮನುಷ್ಯನಿಗೆ ಒಳ್ಳೆ ಬುದ್ದಿ ಬರೋಕೆ ವಯಸ್ಸೇ ಆಗಬೇಕಾ? ಹೊಸ ಖಾತೆ ಕ್ರಿಯೇಟ್ ಆದ್ಮೇಲೆ ಎಷ್ಟೊಂದು ಹತ್ತಿರದವನಾಗಿದ್ದಿ ನೀನು.. ಎಲ್ಲವೂ ಹೊಸತಾಗಿದೆ ಕಣೋ..

ಅನ್ನುತ್ತಿದ್ದಾಳೆ.. 

*** 

ಶರ್ಮಿಷ್ಠೆ ಹೊರಟು ಹೋದ ನಂತರ ಬಂದವಳೇ ಚಿತ್ರಲೇಖ. ಆಗಷ್ಟು ಮನೆಗೆ ಬಂದ ಪುರುವಿನ ಹೆಂಡತಿ.‌ ಇತ್ತೀಗಿಷ್ಟೇ ಪುರುವನ್ನು ಮದುವೆಯಾದ ತರುಣಿ.

ಪರುವಿನ ಹೆಂಡತಿ ಚಿತ್ರಲೇಖ ಯಯಾತಿಗೆ ಹೇಳುತ್ತಾಳೆ. ಪುರುವಿನ ಯವ್ವನ ಪಡೆದೆ. ನಾನು ಕೇವಲ ಪುರುವಿನ ರಾಜ್ಯ ಸಂಪತ್ತು ನೋಡಿ ಮದುವೆ ಆಗಿಲ್ಲ. ಅವನ ಯವ್ವನ ನೋಡಿ ಮದುವೆ ಆದೆ.. ಅವನ ಯವ್ವನದ ಜೊತೆ ನನ್ನ ಪಡೆದುಕೊಳ್ಳಬೇಕಾದದ್ದು, ಕಳೆದುಕೊಳ್ಳಬೇಕಾದದ್ದು ತುಂಬಾ ಇದೆ. ಆದರೆ ಆ ಯವ್ವನ ಈಗ ನಿಮ್ಮ ಬಳಿ ಇದೆ.  ಈಗ ನಿವ್ಯಾಕೆ ನನ್ನನ್ನು…..? 

ಯಯಾತಿ ಅವಳ ಮಾತಿನ ಹಿಂದಿನ ಉದ್ದೇಶ ಅರ್ಥವಾಗುತ್ತದೆ. 

ಯಯಾತಿ ಮುಂದಿನ ಅವಳ ಮಾತನ್ನು ಹೊರ ಬೀಳಲು ಬಿಡುವುದಿಲ್ಲ. ಕೂಗುತ್ತಾನೆ. ಕವಿ ಮುಚ್ಚಿಕೊಳ್ಳುತ್ತಾನೆ. ಹೊರಟು ಹೋಗು ಅನ್ನುತ್ತಾನೆ..‌

ಪುರು ಕೊಡಬೇಕಾದದ್ದು ನೀವು ಕೊಡಿ ಎಂದು ಅವಳು ಹಠ ಹಿಡಿಯುತ್ತಾಳೆ.. 

ಬೇರೆಯವರ ಪ್ರೊಫೈಲ್ ನಲ್ಲಿ ಬದುಕುವುದು ಅಷ್ಟು ಸುಲಭವಾ? 

ಅವನಿಗೆ ತೀವ್ರವಾಗಿ ಅನಿಸುತ್ತದೆ.. 

ಶರ್ಮಿಷ್ಠೆ ಮಾತು ನೆನಪಾಗುತ್ತದೆ.. 

ಪುರುವಿನದು ಪುರುವಿಗೆ ಕೊಟ್ಟ ಬಿಟ್ಟರೆ ಹೇಗೆ? ಯೋಚಿಸುತ್ತಾನೆ..

ಆ ಯೋಚನೆಯೇ ಅವನಿಗೊಂದು ಸಮಾಧಾನ ಕೊಡುತ್ತದೆ.. 

*** 

ಅವಳು ನನಗೆ ಇಷ್ಟವಾ? ಗೊತ್ತಿಲ್ಲ. ಅವಳಿಗೆ ನಾನು ಇಷ್ಟನಾ? ನಾನು ಅಲ್ಲ ಅವನು ಇಷ್ಟ.. ಈಗೀಗ ನೀನು ತುಂಬಾ ಇಷ್ಟ ಅನ್ನುತ್ತಿದ್ದಾಳೆ..‌

ಪಾಪ.. ಸುಂದರಿ..

ಅನಿಸುತ್ತೆ..

ಈ ಫೇಕ್ ಆಟ ಮುಗಿಸಬೇಕು ಅನಿಸುತ್ತೆ.. ಎಲ್ಲವನ್ನೂ ಹೇಳಿಬಿಡಬೇಕು ಅನಿಸುತ್ತೆ. ಹೌದು.. ಹೇಳಿಬಿಡಬೇಕು. ನಟಿಸುವುದು ಕಷ್ಟ. ನಕಲಿ ಎಂದೂ ಅಸಲಿಯಾಗುವುದು ಸಾಧ್ಯವಿಲ್ಲ. ನಾನು ಅವನಾಗಲು ಸಾಧ್ಯವಿಲ್ಲ. ಆದರೆ ಅವಳಗೆ ಇದೆಲ್ಲವನ್ನೂ ಹೇಗೆ ಹೇಳಬೇಕು ಅಂತ ಯೋಚಿಸುತ್ತಾ ಕೂರುತ್ತೇನೆ. ಯೋಚಿಸಿ, ಯೋಚಿಸಿ ಟೈಪ್ ಮಾಡುತ್ತಾ ಹೋಗುತ್ತೇನೆ.. 

ಅತ್ತ ಅವಳಿಗೆ ಟೈಪಿಂಗ್ ಎಂದು‌ ಕಾಣಿಸುತ್ತಿರಬಹುದು..

ಅವಳು ನನ್ನ ಮಾತಿಗೆ ಕಾಯದೆ ಪುಂಖಾನುಪುಂಖವಾಗಿ ಮೆಸೇಜ್ ಕಳುಹಿಸುತ್ತಲೇ ಇದ್ದಾಳೆ.

ನಾನು ಈ ಕಡೆಯಿಂದ ಅವಳಿಗೊಂದು ದೀರ್ಘ ಮೆಸೇಜ್ ಬರೆಯುತ್ತಿದ್ದೇನೆ..

‍ಲೇಖಕರು avadhi

March 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: