ನಾ ದಿವಾಕರ
ಡಾ. ಬಿ ಆರ್ ಅಂಬೇಡ್ಕರ್ ಭಾರತದ ಆಧುನಿಕ ಸಂವಿಧಾನ ಶಿಲ್ಪಿ. ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪೂರ್ಣ ಪ್ರಮಾಣದ ಪಾತ್ರವೇನು ಎಂದು ಶುಷ್ಕ ಚರ್ಚೆ ನಡೆಸುವುದಕ್ಕಿಂತಲೂ ತಮ್ಮ ಸಾಮಾಜಿಕ ಕಳಕಳಿ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವ ತಮ್ಮ ದೃಢ ಸಂಕಲ್ಪ, ದೇಶದ ಶೋಷಿತ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯನ್ನು ಒದಗಿಸುವ ಧೋರಣೆಗಳ ಹಿನ್ನೆಲೆಯಲ್ಲಿ ಡಾ ಅಂಬೇಡ್ಕರ್ ದೇಶದ ಸಂವಿಧಾನದಲ್ಲಿ ಅಳವಡಿಸಿದ ಕೆಲವು ಅಂಶಗಳು ಇಂದಿಗೂ ದಲಿತರ ಆಶಾಕಿರಣಗಳಾಗಿವೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ಮೌಲ್ಯಗಳನ್ನು ಹೊಂದಿದ್ದು ತನ್ನ ಮಾನವೀಯ ದೃಷ್ಟಿಕೋನಕ್ಕಾಗಿ ವಿಶ್ವಮಾನ್ಯತೆ ಪಡೆದಿದೆ. ಆದರೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲೇ ಆತಂಕ ವ್ಯಕ್ತಪಡಿಸಿದಂತೆ ಈ ಉನ್ನತ ಆದರ್ಶಗಳ ಸಂವಿಧಾನವನ್ನು ಆಳುವ ವರ್ಗಗಳು ಅನುಷ್ಟಾನಗೊಳಿಸುವುದರಲ್ಲಿ ದೇಶದ ಹಿತ ಅಡಗಿದೆ. ವಿಪರ್ಯಾಸವೆಂದರೆ ಅಂಬೇಡ್ಕರ್ ಅವರ ಆತಂಕ ಇಂದಿನ ವಾಸ್ತವ ಸಂಗತಿಯಾಗಿದೆ.
ಅಂಬೇಡ್ಕರ್ ಚಿಂತನೆಗಳಿಗೆ ಬದ್ಧರಾಗಿರುವುದಕ್ಕೂ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಪ್ರಾಮಾಣಿಕವಾಗಿ ಅನುಸರಿಸುವುದಕ್ಕೂ ಇರುವ ವ್ಯತ್ಯಾಸವೇ ಅಂಬೇಡ್ಕರ್ ಅವರನ್ನು ಆರಾಧಿಸುವವರ ನೈಜ ಸ್ಚರೂಪ ಮತ್ತು ಬದ್ಧತೆಯನ್ನು ಪ್ರಮಾಣೀಕರಿಸುತ್ತದೆ. ಈ ವಾಸ್ತವವನ್ನು ಗ್ರಹಿಸುವುದರಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಪರ ರಾಜಕೀಯ ಪಕ್ಷಗಳು ವಿಫಲವಾಗಿವೆ. ಹಾಗಾಗಿಯೇ ಅಂಬೇಡ್ಕರ್ ಅವರನ್ನು ವೈಭವೀಕರಿಸಿ, ಪ್ರತಿಮೆಗಳಲ್ಲೇ ಈ ಮಹಾನ್ ಚೇತನವನ್ನು ಬಂಧಿಸಿ, ಆರಾಧಿಸುವ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳನ್ನು ಮೂಲೆಗೆ ತಳ್ಳಿ ,ಸಂವಿಧಾನದ ಮೂಲ ಆಶಯಗಳಿಗೇ ಧಕ್ಕೆ ಉಂಟುಮಾಡುತ್ತಿವೆ. 2014ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ವಿಪರ್ಯಾಸ ಎದ್ದು ಕಾಣುತ್ತಿದೆ .ಇಂದಿನ ಭಾರತೀಯ ಪ್ರಭುತ್ವ ಅನುಸರಿಸುತ್ತಿರುವ ಆಡಳಿತಾತ್ಮಕ ನೀತಿಗಳು ಕೆಲವೊಮ್ಮೆ ಪ್ರಜಾಸತ್ತಾತ್ಮಕ ನೀತಿಗಳಿಗೇ ಧಕ್ಕೆ ಉಂಟುಮಾಡುವಂತಿವೆ. ಪ್ರತಿರೋಧದ ದನಿಗಳಿಗೆ ಕಿವಿಗೊಟ್ಟು ಜನತೆಯ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂವಿಧಾನದ ಚೌಕಟ್ಟಿನಲ್ಲೇ ಪರಿಹಾರ ಮಾರ್ಗಗಳನ್ನು ಅರಸುವುದು ಯಾವುದೇ ಒಂದು ಪ್ರಜತಂತ್ರ ವ್ಯವಸ್ಥೆಯ ಲಕ್ಷಣ. ಆದರೆ ಅಧಿಕಾರ ರಾಜಕಾರಣದ ಲಾಲಸೆಗಳಿಗೆ, ಆಡಳಿತಾತ್ಮಕ ಅಧಿಕಾರದ ಆಮಿಷಗಳಿಗೆ ಬಲಿಯಾಗಿ ದೇಶದ ಸ್ವಾವಲಂಬನೆ ಮತ್ತು ಸ್ವಾಭಿಮಾನಕ್ಕಿಂತಲೂ ತಮ್ಮ ಸ್ವಹಿತಾಸಕ್ತಿಯನ್ನೇ ಪ್ರಧಾನವಾಗಿ ಪರಿಗಣಿಸುವ ರಾಜಕೀಯ ಪಕ್ಷಗಳು ಅಂಬೇಡ್ಕರ್ ಚಿಂತನೆಗಳನ್ನೇ ಅಪಮಾನಗೊಳಿಸುತ್ತಿರುವುದು ಈ ಸಂದರ್ಭದ ಮತ್ತೊಂದು ದುರಂತ.

ಇಂದಿನ ರಾಜಕೀಯ ಸಂಕಥನದಲ್ಲಿ ಪ್ರಧಾನವಾಗಿ ಬಿಂಬಿತವಾಗುತ್ತಿರುವುದು ದೇಶದ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರ, ಕೋಮುವಾದ, ಮತೀಯವಾದ, ಜಾತಿವಾದ ಮತ್ತು ರಾಜಕಾರಣಿಗಳ ನೈತಿಕ ಅಧಃಪತನ. ಇವೆಲ್ಲವೂ ಗಂಭೀರ ಸಮಸ್ಯೆಗಳೇ ಹೌದು. ಆದರೆ ಈ ಸಮಸ್ಯೆಗಳಲ್ಲಿ ಅಂತರ್ಗತವಾಗಿರುವ ಹಾಗೂ ಸಮಸ್ಯೆಗಳ ಮೂಲಕಾರಣವಾಗಿರುವ ನೈತಿಕತೆಯ ಪ್ರಶ್ನೆಗಳು ಚರ್ಚೆಗೊಳಗಾಗುತ್ತಿಲ್ಲ. ರಾಜಕೀಯ ಭ್ರಷ್ಟತೆ, ಆರ್ಥಿಕ ಭ್ರಷ್ಟತೆ ಆಡಳಿತಾತ್ಮಕ ವ್ಯವಸ್ಥೆಯಿಂದ ಉಗಮಿಸುವ ವಿದ್ಯಮಾನಗಳು. ಇವುಗಳನ್ನು ಕಾನೂನಾತ್ಮಕವಾಗಿ ನಿಗ್ರಹಿಸಲು ಸಾಧ್ಯ. ಆದರೆ ಜಾತಿ ವ್ಯವಸ್ಥೆಯ ಸಂಕೋಲೆಗಳಿಂದ ಬಂಧಿತರಾಗಿ ಇಂದಿಗೂ ಜಾತಿ ಆಧಾರಿತ ಶೋಷಣೆಯನ್ನು ಅನುಭವಿಸುತ್ತಿರುವ ಸಮಾಜದ ಶೋಷಿತ ನಿಮ್ನ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಗ್ರಹಿಸಲು ಮಾನವೀಯ ಮೌಲ್ಯಗಳ ರಕ್ಷಣೆ ಅಗತ್ಯ. ಹಾಗೆಯೇ ಆಡಳಿತಾತ್ಮಕ ದೃಷ್ಟಿಯಿಂದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯೂ ಅಗತ್ಯ . ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಸಹ ಇದೇ ಮಾರ್ಗದಲ್ಲಿದ್ದುದನ್ನು ಅವರ ಬರಹಗಳಲ್ಲಿ, ಭಾಷಣಗಳಲ್ಲಿ ಕಾಣಬಹುದು. ಆದರೆ ಅಂಬೇಡ್ಕರ್ ಚಿಂತನೆಗಳನ್ನು ವ್ಯಾಪಕವಾಗಿ ಚರ್ಚಿಸುವ ಸಂದರ್ಭಗಳಲ್ಲಿ ಈ ಮಹತ್ವದ ಅಂಶ ಮರೆಯಾಗಿರುತ್ತದೆ.
ವಿಘಟನೆಯ ಹಾದಿಯಲ್ಲಿ ಸಾಗುತ್ತಲೇ ದಲಿತರ ಐಕ್ಯತೆಗಾಗಿ ವಿಭಿನ್ನ ಮಾರ್ಗಗಳನ್ನರಸುತ್ತಾ ಹಾದಿಯುದ್ದದ ತಮ್ಮದೇ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುತ್ತಾ, ಅಂಬೇಡ್ಕರ್ವಾದವನ್ನು ಪ್ರತಿಪಾದಿಸುತ್ತಿರುವ ದಲಿತ ಸಂಘಟನೆಗಳ ವೈಫಲ್ಯವನ್ನೂ ಈ ದೃಷ್ಟಿಯಿಂದಲೇ ಪರಾಮರ್ಶಿಸಬೇಕಾಗುತ್ತದೆ. ಮೀಸಲಾತಿ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಆರ್ಥಿಕ ಸಬಲೀಕರಣ ಇವುಗಳನ್ನು ಸ್ಚತಂತ್ರ ಭಾರತದ 66 ವರ್ಷಗಳಲ್ಲಿ ಸಾಧಿಸಲಾಗದಿರುವುದು ಭಾರತೀಯ ಪ್ರಜಾತಂತ್ರದ ವೈಫಲ್ಯದ ಪ್ರತೀಕ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಭಾರತೀಯ ಸಮಾಜವನ್ನು ಕಾಡುತ್ತಿರುವುದು ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ. ಇದಕ್ಕೆ ಕಾರಣ ದಿನೇ ದಿನೇ ಗಟ್ಟಿಗೊಳ್ಳುತ್ತಿರುವ ಜಾತಿವಾದ ಮತ್ತು ಜಾತಿ ಪ್ರಜ್ಞೆ. ಮೇಲ್ಜಾತಿಗಳು ತಮ್ಮ ಜಾತಿ ಪ್ರಜ್ಞೆಯನ್ನು ಪಾರಂಪರಿಕ ರೀತಿ ರಿವಾಜುಗಳ ಮೂಲಕ ಧೃವೀಕರಣಗೊಳಿಸುತ್ತಿವೆ. ಊಳಿಗಮಾನ್ಯ ಪದ್ಧತಿಯನ್ನು ಪುಷ್ಟೀಕರಿಸುವ ಜಾತಿ ಸಮೂಹಗಳು ಖಾಪ್ ಪಂಚಾಯತ್ ಮುಂತಾದ ವಿಧಾನಗಳನ್ನು ಅನುಸರಿಸಿ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿವೆ. ಈ ಎರಡೂ ವರ್ಗಗಳ ಶೋಷಣೆಗೆ ಪೂರಕವಾದ ನವ ಉದಾರವಾದಿ ಆರ್ಥಿಕ ನೀತಿಯನ್ನು ಆಳುವ ವರ್ಗಗಳು ಅನುಸರಿಸುತ್ತಿವೆ.
ಈ ವಿದ್ಯಮಾನವನ್ನು ಜಾತಿವಾದದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ದಲಿತ ಸಮುದಾಯಗಳನ್ನು ಧೃವೀಕರಣಗೊಳ್ಳುತ್ತಿರುವ ಜಾತಿ ಪ್ರಜ್ಞೆಯ ವಿರುದ್ಧ ಸಂಘಟಿಸುವಲ್ಲಿ ದಲಿತ ಸಂಘಟನೆಗಳು ವಿಫಲವಾಗುತ್ತಿವೆ. ದಲಿತರಿಗೆ ರಾಜಕೀಯ ಅಧಿಕಾರ ಅಗತ್ಯವಾದರೂ, ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ಸ್ಥಾಪಿತ ವ್ಯವಸ್ಥೆಯ ಮನುಕುಲ ವಿರೋಧಿ ಮೌಲ್ಯಗಳಿಗೇ ಬದ್ಧತೆ ತೋರುವ ಬಹುಜನ ಸಮಾಜ ಪಕ್ಷ ತನ್ನ ಅಸ್ತಿತ್ವ ಮತ್ತು ಅಧಿಕಾರದ ಹಪಾಹಪಿಯನ್ನು ಬದಿಗಿರಿಸಿ ಮುನ್ನಡೆಯಲು ವಿಫಲವಾಗಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಮತ್ತೊಂದೆಡೆ ದಲಿತ ಸಂಘಟನೆಗಳು ಮತ್ತು ದಲಿತ ನಾಯಕರು ತಮ್ಮ ಅಸ್ತಿತ್ವ ರಾಜಕಾರಣಕ್ಕೇ ಜೋತು ಬಿದ್ದಿರುವುದು ಮತ್ತೂ ಗಂಭೀರವಾದ ಸಮಸ್ಯೆಯಾಗಿದೆ. ಅಧಿಕಾರ ರಾಜಕಾರಣದ ಯಾವ ಗುಂಪು ಅಥವಾ ಪಕ್ಷಕ್ಕೆ ಬೆಂಬಲಿಸಬೇಕು ಎಂದು ನಿರ್ಧರಿಸುವುದನ್ನೇ ತಮ್ಮ ದಲಿತ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುವ ದಲಿತ ನಾಯಕರು ಮತ್ತು ಸಂಘಟನೆಗಳು ಈ ಪಕ್ಷಗಳಲ್ಲಿನ ಸೂಕ್ಷ್ಮವಾದ ದಲಿತ ವಿರೋಧಿ ತರಂಗಗಳನ್ನಾಗಲೀ, ಜಾತಿ ಪ್ರಜ್ಞೆಯನ್ನಾಗಲೀ ಗ್ರಹಿಸದಿರುವುದು ದುರಂತ. ಹಾಗಾಗಿಯೇ ಉದಿತ್ ರಾಜ್ ಅವರಂತಹ ದಲಿತ ಪರ ಚಿಂತಕರು ಬಿಜೆಪಿ ಬೆಂಬಲಿಸುತ್ತಾರೆ. ದೇವನೂರು ಮಹಾದೇವ ಮುಂತಾದವರು ಕಾಂಗ್ರೆಸ್ ಬೆಂಬಲಿಸುತ್ತಾರೆ. ಅತಿ ಕಡಿಮೆ ಅಪಾಯಕಾರಿ ಪಕ್ಷಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಅತಿ ಹೆಚ್ಚು ಅಪಾಯಕಾರಿಯಾದ ಜಾತಿ ಪ್ರಜ್ಞೆಯ ಧೃವೀಕರಣ ಪ್ರಕ್ರಿಯೆ ಮತ್ತು ತತ್ಸಂಬಂಧಿ ರಾಜಕೀಯ ನಿಲುವುಗಳನ್ನು ದಲಿತ ಸಂಘಟನೆಗಳು, ನಾಯಕರು ಉಪೇಕ್ಷೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ದಲಿತ ಸಂಘಟನೆಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ.






ದಿವಾಕರ್ ಅವರಿಗೆ — ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ ದಲಿತರ ಸ್ಥಿತಿ ಗತಿಗಳಲ್ಲಿ ಬದಲಾವಣೆಯೇ ಆಗಿಲ್ಲ ಎಂಬುದನ್ನು ಒಪ್ಪಲಾಗುವುದಿಲ್ಲ. ದಲಿತರ ಏಳ್ಗೆಗಾಗಿ ತನ್ನ ರಾಜಕೀಯ ನೀತಿ, ಮಿತಿಗಳ ನಡುವೆಯೂ ಸಾಕಷ್ಟು ಕೆಲಸ ಮಾಡಿರುವುದು ಕಾಂಗ್ರೆಸ್ಸ್ ಎಂಬುದನ್ನು ಆ ಪಕ್ಷದ ವಿರೋಧಿಗಳೂ ಸಹ ಒಪ್ಪಬೇಕಾದ ಸತ್ಯ. ನಮ್ಮ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬೇಕಾಗಿರುವುದು ‘ರಾಜಕೀಯ ಇಚ್ಚಾ ಶಕ್ತಿ’. ಅದಕ್ಕೆ ಪೂರಕವಾಗಿ ಶಕ್ತ ಆಡಳಿತ ನಡೆಸುವ ಪಕ್ಷದ ಸರ್ಕಾರ ಬೇಕು. ಅದು ಕಾಂಗ್ರೆಸ್ಸ್ ಆಗಿರಬಹುದು ಇಲ್ಲವೇ ಬಿ ಜೆ ಪಿ ಸಹ ಆಗಿರಬಹುದು. ಈ ಸಲದ ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಸಾಹಿತಿಗಳು ಪ್ರತ್ಯಕ್ಷವಾಗಿಯೇ ಈ ಎರಡು ಪಕ್ಷಗಳ ಬೆಂಬಲಕ್ಕೆ ನಿಂತಿದ್ದರು. ಅದರಲ್ಲಿ ತಪ್ಪೇನು? ಸುಮ್ಮನೆ ಮನೆಯಲ್ಲಿ ಗೊಣಗುತ್ತಾ ಕೂರುವುದು ,ಸಭೆ,ವಿಚಾರಗೋಷ್ಠಿಗಳಲ್ಲಿ ಭಾಷಣ ಮಾಡುವುದಕ್ಕಿಂತ ಇದು ಉತ್ತಮ. –ಎಂ ಎ ಶ್ರೀರಂಗ ಬೆಂಗಳೂರು.
Few people have the attitude of deliberately ignoring the good and looking at the stray incidents of bad. Unhappy things can happen to anyone. Nobody seems to have objectively looked at the whole picture. There is no achievement in picking up one incident and generalizing everything on a large scale. Hope the author would come out of strong prejudices he has built around him. I completely agree with views of Mr Sriranga.
you are talking about urbanised miniscule population of dalits who are beneficiaries of indian development process and progress. I am talking about the vast majority of the community who are marginalised and getting more marginalised as days are going by. Peipherals always look glittering it is the inner essence that matters.