ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಭವಾಮಿ ಯುಗೇ ಯುಗೇ!' – ಎಸ್ ಜಿ ಶಿವಶಂಕರ್ ಹೇಳುತ್ತಿದ್ದಾರೆ

ಎಸ್ ಜಿ ಶಿವಶಂಕರ್

ಗೀತಾಚಾರ್ಯ ಶ್ರೀಕೃಷ್ಣನ ಗೀತೆಯ ಮಾತಿನ ಸಾಲೊಂದರ ಕೊನೆಯನ್ನು ನನ್ನ ಲೇಖನಕ್ಕೆ ಶೀರ್ಷಿಕೆಯಾಗಿ ಬಳಸಿದ್ದೇನೆ. ಕಣ್ಣು ಕೆಂಪಾಯಿತೆ? ಭಗವಾನ್ ಶ್ರೀಕೃಷ್ಣನೆಲ್ಲಿ? ಈ ಯಕಶ್ಚಿತ್ ಲೇಖಕನೆಲ್ಲಿ..? ಎಂಬ ತಿರಸ್ಕಾರ ಮನಸ್ಸಿನಲ್ಲಿ ಮೂಡಿತೇ..? ಗೀತೆಯ ಈ ಗಂಭೀರ ಮಾತನ್ನು ಲಘುವಾಗಿ ಬಳಸುತ್ತಿದ್ದೇನೆಂದು ಕೋಪ ಮಾಡಿಕ್ಕೊಳ್ಳಬೇಡಿ. ಎಲ್ಲ ಕಾಲದಲ್ಲೂ ಬರುತ್ತೇನೆ ಎಂಬ ಅರ್ಥವನ್ನು ಮಾತ್ರ ಇಲ್ಲಿ ಬಳಸಿಕ್ಕೊಳ್ಳುತ್ತಿದ್ದೇನೆ.
ದುರ್ಜನರು ಹೆಚ್ಚಾಗಿ ಸಜ್ಜನರಿಗೆ ಕಾಟ ಕೊಡುವಾಗ ನಾನು ಕಾಲಕಾಲಕ್ಕೆ ಭುವಿಗೆ ಬರುತ್ತೇನೆ ಎಂದಿದ್ದ ಪರಮಾತ್ಮ. ಆ ಮಾತು ಇಲ್ಲಿ, ಹೇಗೆ? ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿದೆ! ಈ ಸುಟ್ಟ ಲೇಖಕ ಇದಕ್ಕೇನು ಸಮಜಾಯಿಸಿ ನೀಡಬಲ್ಲ ಎಂಬ ತಿರಸ್ಕಾರವೂ ಹುಟ್ಟಿದೆ ಎಂದು ಬಲ್ಲೆ. ಅದಕ್ಕೆ ಉತ್ತರ ಮುಂದೆ ಓದಿದರೆ ತಿಳಿಯುತ್ತದೆ ಎಂದು ನಮ್ರತೆಯಿಂದ ವಿನಂತಿಸುತ್ತಿದ್ದೇನೆ.
ವಯಸ್ಸು ಇಪ್ಪತ್ತು ಪ್ಲಸ್ಸು, ಅಂದರೆ ಇಪ್ಪತ್ತೊಂದು ಮೀರಿದ ವಯಸ್ಸು. ಸೀಳಿದರೆ ಮೂರು ಜನರಾಗುವé ಘನ ದೇಹ. ಆರಡಿ ಹತ್ತಿರಹತ್ತಿರದ ಎತ್ತರ. ಸಮೃದ್ಧಿಯಾಗಿ ದೇಹ ಪೋಷಣೆಯಾಗಿರುವ ಎಲ್ಲ ಕುರುಹೂ ಕಾಣುವ ದೇಹ. ಸೊಂಟದಿಂದ ಕೆಳಗೆ, ಅರ್ಧ ಪೃಷ್ಠದ ಮೇಲೆ ನಿಂತಿರುವ ಜೀನ್ಸು. ಕೈ ಎತ್ತಿದರೆ ಹೊಟ್ಟೆ ಕಾಣುವ ಟೀ ಷರ್ಟು, ಅದರ ಮೇಲೆ ಚಿತ್ರವಿಚಿತ್ರ ಚಿತ್ರಗಳು ಮತ್ತು ಉಲ್ಲೇಖಗಳು : ’ನಾನು ಮುಗ್ಧ, ಹುಡುಗಿಯರು ನನ್ನನ್ನು ಹಾಳುಮಾಡಿದರು’, ‘ನನ್ನನ್ನು ಹಿಡಿಯಿರಿ ನೋಡೋಣ?’-ಇಂತಾ ಒಕ್ಕಣೆಗಳು. ಕುರುಚುಲು ಗಡ್ಡ! ಕೆದರಿದ ಅಸ್ತವ್ಯಸ್ತ ತಲೆಗೂದಲು, ಸ್ನಾನ ಮಾಡಿ ಬಹಳ ದಿನಗಳಾಯಿತೇನೋ ಎಂಬ ಭಾವನೆ ಬರುವಂತ ಗೆಟಪ್ಪು! ದೈತ್ಯಗಾತ್ರದ ಮೋಟಾರು ಬೈಕುಗಳಲ್ಲಿ ಕಾಲೇಜಿಗೆ ಪ್ರವೇಶ. ಜೇಬು ತುಂಬಾ ಝಣಝಣ ಹಣ! ಇದು ನಾನು ಭೋಧಿಸುವ ಎಂ.ಬಿ.ಎ ಎಂಬ ಸ್ನಾತಕೋತ್ತರ ಗಂಡು ವಿಧ್ಯಾರ್ಥಿಗಳ ಗೆಟಪ್ಪು!

ಇನ್ನು ಹುಡಿಗಿಯರ ಧಿರಿಸು ಅಹಹಾ ಎನ್ನುವಂತೆ! ಚರ್ಮದ ಭಾಗವೇನೋ ಎಂದು ಭ್ರಮೆ ಬರಿಸುವಂತ ಜೀನ್ಸು, ಅಷ್ಟೇ ಬಿಗಿಯಾಗಿ ತ್ವಚೆಯನ್ನಪ್ಪಿದ ಟೀಷರ್ಟು! ಬಣ್ಣದ ಸ್ಕೂಟರೆಟಿಗಳಲ್ಲಿ ಕಾಲೇಜಿಗೆ ಆಗಮನ. ಕೈಯಲ್ಲಿ ನಾಲ್ಕೂವರೆ ಇಂಚು ಸ್ಕ್ರೀನಿನ ಮೊಬೈಲು! ಸದಾ ಅದರಲ್ಲಿಯೇ ಕಣ್ಣು ಕೀಲಿಸುವ ಪ್ರವೃತ್ತಿ! ಬಾಯಲ್ಲಿ ಉಲಿವ ಏಕಮಾತ್ರ ಭಾಷೆ ಇಂಗ್ಲಿಷು, ಕೆಲವೊಮ್ಮೆ ಕಂಗ್ಲೀಷು!
ಯಮಗಾತ್ರದ ಮೋಟಾರು ಬೈಕುಗಳು ಮತ್ತು ಬಣ್ಣಬಣ್ಣದ ಸ್ಕೂಟರೆಟಿಗಳಲ್ಲಿ ಬಹುತೇಕ ಹುಡುಗ ಹುಡುಗಿಯರು ಹೆಚ್ಚು ಕಡಿಮೆ ಕಾಲೇಜಿನ ಸಮಯಕ್ಕೆ ಕ್ಯಾಂಪಸ್ಸಿಗೆ ಬರುವುದು ಸಾಮಾನ್ಯವಾದ ಸಂಗತಿ. ಇವರ ಜೊತೆಗೇ ಲಾರಿ ನೆನಪಿಸುವ ದೈತ್ಯ ಗಾತ್ರದ ಇನ್ನೋವಾ, ಸ್ಕಾರ್ಪಿಯೋ, ಆಕ್ಟೊವಿಯಾ, ಜೈಲೋ, ಐಲೋ-ಮುಂತಾದ ವಾಹನಗಳಲ್ಲಿ ಬರುವ ಇನ್ನೊಂದು ವರ್ಗದ ವಿಧ್ಯಾರ್ಥಿಗಳೂ ಇದ್ದಾರೆ! ಇವರಿಗೆ ಭೋಧಿಸುವ ಅಧ್ಯಾಪಕರು, ಪ್ರೊಫೆಸರುಗಳು, ಸಂಸ್ಥೆಯ ಆಡಳಿತ ಸಿಬ್ಬಂದಿ ಮಾರುತಿ, ಆಲ್ಟೋ, ಸ್ಕೂಟರು, ಟಿವಿಎಸ್ ಮೊಪೆಡ್ಡು, ಬಸ್ಸುಗಳಲ್ಲಿ ಕಾಲೇಜಿಗೆ ಬರುತ್ತಾರೆ. ಇವರ ಜೊತೆಗೇ ಇನ್ನೊಂದು ವರ್ಗದ ವಿಧ್ಯಾರ್ಥಿಗಳೂ ಇದ್ದಾರೆ. ಅವರು ಗ್ರಾಮೀಣ ಭಾಗದಿಂದ ಬಂದವರು. ಕನ್ನಡ ಮಾಧ್ಯಮದಲ್ಲಿ ಪದವಿ ಗಳಿಸಿ ಸ್ನಾತಕೋತ್ತರ ಪದವಿಗೆ ಸೇರಿದವರು. ಇವರಲ್ಲಿ ಕೆಲವರಿಗೆ ಹಣದ ಕೊರತೆ, ಆಡಳಿತ ನಿರ್ವಹಣಾಶಾಸ್ತ್ರಕ್ಕೆ ಬೇಕಾದ ಇಂಗ್ಲಿಷ್ ಭಾಷೆಯ ಕೊರತೆ. ಕಂಗ್ಲೀಷು ಪ್ರಯೋಗಿಸಲು ಹೆದರಿಕೆ! ಇವರಲ್ಲಿ ಕೆಲವರಿಗೆ ಕಲಿಯುವ ಆಸಕ್ತಿ ಇದ್ದರೆ ಇನ್ನು ಕೆಲವರಿಗೆ ಉಢಾಳತನ!

ಎಂದಿನಂತೆ ನಾನು ಮೂರನೆಯ ಸೆಮೆಸ್ಟರ್ ಎಂ.ಬಿ.ಎ ತರಗತಿಯನ್ನು ಪ್ರವೇಸಿಸಿದೆ. ಎಲ್.ಕೆ.ಜಿ ತರಗತಿಯ ಮಕ್ಕಳು ಮಾಡುವ ಗದ್ದಲಕ್ಕಿಂತಲೂ ಅಧಿಕ ಗದ್ದಲ ಅಲ್ಲಿತ್ತು. ಅಧ್ಯಾಪಕರು ಒಳಗೆ ಬಂದಿದ್ದಾರೆ ಎನ್ನುವ ಗಮನವೇ ಇಲ್ಲದೆ ಮೈಮರೆತು ಮಾತುಕತೆಗಳಲ್ಲಿ ತೊಡಗಿದ್ದರು. ಯಾವುದೋ ಸಂತೆಗೋ ಇಲ್ಲಾ ತರಕಾರಿ ಮಾರುಕಟ್ಟೆಯನ್ನು ಪ್ರವೇಶಿಸಿದ ಅನುಭವ ನನಗೆ! ಸ್ನಾತಕೋತ್ತರ ತರಗತಿಯ ವಿಧ್ಯಾರ್ಥಿಗಳು ಇವರು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎನಿಸಿತು. ಸರ್ವಜ್ಞನ ಮಾತೊಂದು ನೆನಪಾಯಿತಿ. ‘ವಿಧ್ಯಯುಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿಧ್ಯಯಿಲ್ಲದವನ ಬರಿಮುಖವು ಹಾಳೂರು ಹದ್ದಿನಂತಕ್ಕು ಸರ್ವಜ್ಞ’ ಎಂದು. ಬಹುಶಃ ಈ ಪದವೀದರರನ್ನು ನೋಡಿದ್ದರೆ ಸರ್ವಜ್ಞ ಈ ತ್ರಿಪದಿಯನ್ನು ಖಂಡಿತಾ ಬರೆಯುತ್ತಿರಲಿಲ್ಲ!
ಒಂದಿಬ್ಬರು ಸೂಕ್ಷ್ಮ ಸಂವೇದನೆಯ ವಿಧ್ಯಾರ್ಥಿಗಳು (ಇವರನ್ನು ಉಳಿದವರು ‘ಹುಂಬರು’ ಎನ್ನುತ್ತಾರೆ) ನಾನು ಬಂದುದನ್ನು ಗಮನಿಸಿ ‘ಹುಷ್..ಹುಷ್’ಎನ್ನುತ್ತಾ ಇತರರನ್ನು ಎಚ್ಚರಿಸುವ ಪ್ರಯತ್ನ ಮಾಡಿದರು. ಅವರ ಮಾತನ್ನು ‘ಕ್ಯಾರೇ..?’ ಎನ್ನುವವರೇ ಇರಲ್ಲಿಲ್ಲ.
‘ಸೈಲೆನ್ಸ್’ ಎಂದು ಒಮ್ಮೆ ದೊಡ್ಡ ಗಂಟಲಿನಲ್ಲಿ ಅವಾಜ್ ಹಾಕಿದೆ. ಸ್ವಲ್ಪ ಗದ್ದಲ ಕಮ್ಮಿಯಾಯಿತು. ಇನ್ನೂ ಮೂರು ಸಲ ಅರಚಿದ ನಂತರ ಗದ್ದಲ ತಹಬಂದಿಗೆ ಬಂದಿತು. ಆಗಲೇ ನಾನು ಬಂದಿರುವುದನ್ನು ವಿಧ್ಯಾರ್ಥಿಗಳು ಗಮನಿಸಿದ್ದು!
ಕಂಪ್ಯೂಟರಿಗೆ ಪೆನ್ ಡ್ರೈವ್ ಸಿಕ್ಕಿಸಿ, ಪರದೆಯ ಮೇಲೆ ಮಾಡಲಿರುವ ಪಾಠದ ಚಿತ್ರಣ ಮೂಡಿಸಿ ಬೋಧನೆಗೆ ತೊಡಗಿದೆ.
ಬಾಗಿಲಲ್ಲಿ ವಿಧ್ಯಾರ್ಥಿನಿಯರಿಬ್ಬರು ಪ್ರತ್ಯಕ್ಷವಾಗಿ ‘ಮೆ ಐ ಕಮಿನ್ ಸಾರ್..?’ ಎಂಬ ಬೇಡಿಕೆ ಸಲ್ಲಿಸಿದರು.
‘ಎಸ್…ಯೂ ಕೆನ್ ಕೆಮ್ ಇನ್’ ಎಂದೆ. ನನ್ನ ಮಾತಿನಲ್ಲಿದ್ದ ಹಾಸ್ಯವನ್ನು ಗುರುತಿಸುವ ಸೂಕ್ಷ್ಮತೆ ಇಲ್ಲದ ಅವರು ಒಳಗೆ ಬಂದರು. ಬಂದಮೇಲೆ ಎಲ್ಲಿ ಕೂರಬೇಕೆನ್ನುವ ಅವರು ನಿರ್ಧರಿಸಿ ಕೂರುವಾಗ ತರಗತಿಯಲ್ಲಿ ಮತ್ತೆ ಕಲರವ!
ಮತ್ತೆ ಮೊದಲಿನಿಂದ ಪಾಠ ಶುರು ಮಾಡಿದೆ. ಎರಡು ನಿಮಿಷ ಬೋಧಿಸುವುದರಲ್ಲಿ ಮತ್ತೆ ನಾಲ್ವರು ಅಪ್ರಭುದ್ಧರು ಬಾಗಿಲ ಬಳಿ ನಿಂತು ಒಳಗೆ ಬರಲಪ್ಪಣೆ ಕೇಳಿದರು. ಅವರಿಗೂ ಅವಕಾಶ ಕಲ್ಪಿಸಿದೆ.
ಮತ್ತೆ ತರಗತಿಯಲ್ಲಿ ಕಲರವ. ಬಂದವರು ರಣರಂಗದಲ್ಲಿ ಗೆದ್ದು ಬಂದ ವೀರರಂತೆ ಎದೆಯುಬ್ಬಿಸಿ ವಿಜಯದ ನಗೆಯನ್ನು ಪ್ರಕಟಿಸುತ್ತಾ ಸೀದಾ ಹಿಂದಿನ ಬೆಂಚಿನತ್ತ ನಡೆದರು.
ಇಷ್ಟರಲ್ಲಿ ಒಂದು ಗಂಟೆಯ ಬೋಧನಾ ಸಮಯದಲ್ಲಿ ಹದಿನೈದು ನಿಮಿಷ ಆಗಲೇ ಕಳೆದಿತ್ತು! ಹೀಗೆ ಐದೈದು ನಿಮಿಷದ ಅಂತರದಲ್ಲಿ ಇನ್ನೂ ಬರುತ್ತಲೇ ಇದ್ದರು! ಬೇಸತ್ತು ಬಾಗಿಲು ಹಾಕಿ ಚಿಲಕ ಹಾಕಿ ಪಾಠ ಮುಂದುವರಿಸಿದೆ. ಮತ್ತೆ ಐದು ನಿಮಿಷದಲ್ಲಿ ಬಾಗಿಲ ಬಳಿ ಕಟಕಟ ಸದ್ದು! ಅದನ್ನು ಗಮನಿಸದೆ ಪಾಠ ಮುಂದುವರಿಸಿದೆ.
ಮತ್ತೆ ಬಾಗಿಲ ಬಳಿ ಸದ್ದು. ಕಿರಿಕಿರಿಯಾಯಿತು. ಬಾಗಿಲು ತೆರೆದು ಬಂದವರಗೆ ‘ಮಹಾಶಯರೆ, ತಾವು ಮುಂದಿನ ತರಗತಿಗೆ ಬಲು ಬೇಗ ಬಂದಿದ್ದೀರಿ, ಇನ್ನೂ ಸಮಯವಿದೆ, ಹೋಗಿ ಬನ್ನಿ’ ಎಂದು ವಿನಯದಿಂದ ಹೇಳಿದೆ.
ತರಗತಿಯಲ್ಲಿ ದೊಡ್ಡ ಹುಯಿಲೆದ್ದಿತು! ಎಲ್ಲರೂ ಖುಷಿಯಿಂದ ನಗುತ್ತಿದ್ದರು. ಕೇಕೆ ಹಾಕುವುದೊಂದು ಬಾಕಿಯಿತ್ತು.
ಬಂದಿದ್ದವರು ಏನೇನೋ ಸಬೂಬುಗಳನ್ನು ಹೇಳತೊಡಗಿದರು. ವಾದ ಮಾಡುವ ಉತ್ಸಾಹದಲ್ಲಿದ್ದರು. ‘ನೋ ಅರ್ಗ್ಯೂಮೆಂಟ್ಸ್ ಪ್ಲೀಸ್’ ಎಂದು ಹೇಳಿ ಬಾಗಿಲು ಭದ್ರಪಡಿಸಿದೆ.
ಗಂಭೀರ ಬೋಧನೆಯಲ್ಲಿ ಮುಳುಗಿದೆ. ಬಹುತೇಕರು ಪಕ್ಕದವರ ಜೊತೆಯಲ್ಲಿ ಮಾತುಕತೆಗಳಲ್ಲಿ ತೊಡಗಿದ್ದರು. ಕೆಲವರು ನನ್ನ ಗಮನಕ್ಕೆ ಬರುವುದಿಲ್ಲವೆಂದು ತಿಳಿದು ಮುಖದ ಮುಂದೆ ಕೈಯನ್ನು ಅಡ್ಡ ಇಟ್ಟು ಮಾತಾಡುತ್ತಿದ್ದರು. ಹಿಂದಿನ ಬೆಂಚಿನಲ್ಲಿದ್ದವರು ತಮ್ಮ ಬ್ಯಾಕ್ಪ್ಯಾಕ್ ಎನ್ನುವ ಬ್ಯಾಗುಗಳನ್ನು ತೆರೆದು ಮರೆಮಾಡಿಕೊಂಡು ತಮ್ಮ ಮೊಬೈಲುಗಳಲ್ಲಿ ಎಸ್ಸೆಮೆಸ್ಸು, ಇಂಟರ್ನೆಟ್ಟುಗಳಲ್ಲಿ ಮಗ್ನರಾಗಿದ್ದರು. ಇನ್ನು ಕೆಲವರು ಬೇರೆ ವಿಷಯಗಳ ಅಸೈನ್ಮೆಂಟುಗಳನ್ನು ಮರೆಮಾಡಿಕೊಂಡು ಬರೆಯುತ್ತಿದ್ದರು. ಕೆಲವೇ ಕೆಲವು ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಮಾತ್ರ ನನ್ನ ಲೆಕ್ಚರನ್ನು ಆಲಿಸುತ್ತಿದ್ದರು.
ಒಬ್ಬ ವಿಧ್ಯಾರ್ಥಿ ನನ್ನತ್ತ ಒಂದು ಪ್ರಶ್ನೆಯ ಬಾಣ ಬಿಟ್ಟ. ಆ ಪ್ರಶ್ನೆಯಲ್ಲಿದ್ದ ಇಂಗ್ಲಿಷ್ ಪದಗಳು ಎಷ್ಟು ಗೋಜಲಾಗಿದ್ದುವೆಂದರೆ ಅದನ್ನು ಅರ್ಥ ಮಾಡಿಕ್ಕೊಳ್ಳಲು ತಿಣುಕಿದೆ. ಕೊನೆಗಾತನನ್ನು ನಿನ್ನ ಮಾತೃ ಭಾಷೆಯಲ್ಲಿ ಹೇಳು ಎಂದೆ. ಆತ ನೇಪಾಳಿ ಭಾಷೆಯಲ್ಲಿ ಕೇಳಬೇಕೆ..? ಆತ ನೇಪಾಳಿ ಎಂಬುದನ್ನು ಮರೆತಿದ್ದೆ. ಅವನಿಗೆ ಇಂಗ್ಲಿಷ್ ಬರದು, ನನಗೆ ನೇಪಾಳಿ ಬರದು. ಅವನಿಗೆ ಸಮಜಾಯಿಷಿ ಹೇಳುವುದರಲ್ಲಿ ತರಗತಿಯಲ್ಲಿ ಅಸಾಧ್ಯ ಗಲಾಟೆ!
ಅವನ ಪಕ್ಕದಲ್ಲಿದ್ದವನ ಗಲಾಟೆ ತಡೆಯಲಾರದೆ ಅವನಿಗೊಂದು ಪ್ರಶ್ನೆ ಕೇಳಿದೆ. ಎಕರಪೆಕರಾಗಿ ಉತ್ತರ ಕೊಟ್ಟ. ಅವನ ಉತ್ತರಕ್ಕೆ ತರಗತಿ ನಗೆಗಡಲಲ್ಲಿ ಮುಳುಗಿತು.
ಹಾಗೆ ನಗುತ್ತಿದ್ದವರನ್ನೆಲ್ಲಾ ತರಾಟೆಗೆ ತೆಗೆದುಕ್ಕೊಳ್ಳಲು ಸಾಧ್ಯವಿಲ್ಲ ಎಂದರಿತು ಒಬ್ಬನನ್ನು ನಿಲ್ಲಿಸಿ ‘ಆವಾಜ್’ ಹಾಕಿದೆ. ತರಗತಿ ಸ್ಥಂಬೀಭೂತವಾಯಿತು. ಇನ್ನೂ ಒಂದಿಷ್ಟು ಬೈದು, ಆ ಸಮಯವನ್ನು ಉಪಯೋಗಿಸಿಕೊಂಡು ಬಹಳ ಮುಖ್ಯವಾದ ಕೆಲವು ವಿಷಯಗಳನ್ನು ಬೋಧಿಸಿದೆ. ಅದು ಅವರ ಕಲಿಕೆಯ ದೃಷ್ಟಿಯಿಂದಲೂ, ಪರೀಕ್ಷೆಯ ದೃಷ್ಟಿಯಿಂದಲೂ ಮುಖ್ಯವಾಗಿತ್ತು. ಅದನ್ನು ಹೇಳಿದರೂ ಯಾರಿಗೂ ಅದರ ಗಂಭೀರತೆ ಅರಿವಾದಂತೆ ಕಾಣಲಿಲ್ಲ. ಬೋಧನೆ ನನ್ನ ಕರ್ತವ್ಯ, ಅದನ್ನು ಸ್ವೀಕರಿಸುವುದು ಬಿಡುವುದೂ ಅವರಿಗೆ ಬಿಟ್ಟಿದ್ದು ಎಂದು ತರಗತಿಯನ್ನು ಮುಗಿಸಿ ಈಚೆ ಬಂದೆ. ಅಬ್ಬಾ ಇನ್ನೊಂದು ತರಗತಿ ಮುಗಿಯಿತು ಎಂದುಕೊಂಡೆ!
ಇದು ನನ್ನೊಬ್ಬನ ಅನುಭವವಲ್ಲ. ನನ್ನ ಡಿಪಾರ್ಟ್ಮಂಟಿನ ಎಲ್ಲ ಅಧ್ಯಾಪಕರ ಅನುಭವವೂ ಇದೇ! ಒಬ್ಬರ ಅನುಭವವಾದರೆ ಅವರ ಬೋಧನೆ ಸರಿಯಿಲ್ಲವೆನ್ನಬಹುದು. ಸಾರಾಸಗಟಾಗಿ ಎಲ್ಲ ಅಧ್ಯಾಪಕರ ಅನುಭವವೂ ಇದೇ! ಅತ್ಯಂತ ಶ್ರೇಷ್ಠ ಅಧ್ಯಾಪಕರಿಗೂ ಈ ವಿಧ್ಯಾರ್ಥಿಗಳ ಪ್ರತಿಕ್ರಿಯೇ ಇದೇ ರೀತಿಯಲ್ಲಿರುತ್ತಿತ್ತು.
ಒಮ್ಮೊಮ್ಮೆ ಹೊರಗಿನಿಂದ ಯಶಸ್ವೀ ಉದ್ಯಮಿಗಳನ್ನೂ, ಹಿರಿಯ ಅನುಭವೀ ಉಪನ್ಯಾಸಕರಿಂದ ವಿಶೇಷ ಉಪನ್ಯಾಸಗಳನ್ನು ನಮ್ಮ ವಿಭಾಗ ಏರ್ಪಡಿಸುವುದು. ಅವರಿಂದ ಕಾರ್ಯಾಗಾರ ಕೂಡ ನಡೆಸುತ್ತೇವೆ. ಆಗಲೂ ಈ ವಿಧ್ಯಾರ್ಥಿಗಳ ವರ್ತನೆ ಹೀಗೇ! ಮೊದಲಿಗೆ ಅರ್ಧಕ್ಕೆ ಅರ್ಧ ಜನ ಚಕ್ಕರ್ ಹಾಕುತ್ತಾರೆ. ಉಳಿದವರು ಎಂದಿನಂತೆ ಸಾಮಾನ್ಯ ತರಗತಿಗಳಲ್ಲಿ ವರ್ತಿಸುವಂತೆ ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರಗಳಲ್ಲಿ ಕೂಡ ವರ್ತಿಸುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ಹಲವು ಸಲ ನಮಗನ್ನಿಸಿದ್ದು ‘ನಾಯಿ ಬಾಲ ಎಂದಿಗೂ ಡೊಂಕೇ! ನಾವು ಅದನ್ನು ದಬ್ಬೆ ಕಟ್ಟಿ ನೇರ ಮಾಡುವ ವ್ಯರ್ಥಪ್ರಯತ್ನದಲ್ಲಿ ತೊಡಗಿದ್ದೇವೆ!’
ಒಂದೊಂದು ಬ್ಯಾಚು ವಿಧ್ಯಾರ್ಥಿಗಳು ತಮ್ಮ ಕೊನೆಯ ಪರೀಕ್ಷೆಯನ್ನು ಮುಗಿಸಿ ಕ್ಯಾಂಪಸ್ಸಿನಿಂದ ಆಚೆ ಹೋಗುವಾಗ ‘ಅಬ್ಬಾ ಅಂತೂ ಹೋದರು’ ಎಂದು ಅಧ್ಯಾಪಕ ವರ್ಗ ನಿಟ್ಟುಸಿರಿಡುವಾಗ ಹೊಸದಾಗಿ ಬಂದಿರುವ ವಿಧ್ಯಾರ್ಥಿಗಳು ಹಿಂದಿನವರಿಗಿಂತ ಭಯಂಕರರು ಎಂದು ಬಲುಬೇಗನೆ ಗೊತ್ತಾಗಿಬಿಡುತ್ತದೆ. ಅಕ್ಷಯ ಪಾತ್ರೆಯಂತೆ ಈ ಭುವಿ ಇಂತಾ ವಿಧ್ಯಾರ್ಥಿಗಳನ್ನು 21ನೆಯ ಶತಮಾನದಲ್ಲಿ ಸೃಷ್ಟಿಸುತ್ತಿದೆಯಲ್ಲಾ ಎಂದು ಅಚ್ಚರಿಯಾಗುತ್ತದೆ.
ಬಹುಶಃ ನಮ್ಮ ಜ್ಞಾನದ ಬಗೆಗೆ, ನಮ್ಮ ಭೋಧನಾ ಸಾಮರ್ಥ್ಯದ ಬಗೆಗೆ ಹೆಚ್ಚು ವಿಶ್ವಾಸ ಹೊಂದಿರುವ ನಮ್ಮಂತಹ ಅಧ್ಯಾಪಕರ ಸೊಕ್ಕು ಮುರಿಯಲೆಂದೇ ಇಂತಾ ವಿಧ್ಯಾರ್ಥಿಗಳು ಉದಯಿಸುತ್ತಾರೋ ಎಂಬ ಯೋಚನೆ ಬಂತು! ಆಗಲೇ ಕೃಷ್ಣಪರಮಾತ್ಮನ ನೆನಪಾಯಿತು. ಬಹುಶಃ ಅವನೇ ಬಂದು ವಿಧ್ಯಾರ್ಥಿಗಳನ್ನು ಸುಧಾರಿಸುತ್ತಾನೋ ಇಲ್ಲಾ ವಿಧ್ಯಾರ್ಥಿಗಳೇ ನಮ್ಮನ್ನು ಸುಧಾರಿಸುತ್ತಾರೋ? ಗೊತ್ತಿಲ್ಲ! ಪದೇಪದೇ ಶ್ರೀಕೃಷ್ಣನ ನೆನಪಾದುದಕ್ಕೆ ಈ ಲೇಖನಕ್ಕೆ ಶೀರ್ಷಿಕೆ ‘ಸಂಭವಾಮಿ ಯುಗೇಯುಗೇ!’

‍ಲೇಖಕರು G

1 January, 2014

3 Comments

  1. Kiran

    Sir, very timely. I completely empathise with your views.
    What might the reason be? Is it mushrooming of private MBA colleges (or any other pvt college) whose sole aim is to make money by giving admission to everyone who can buy the degree? Is the environment same in government colleges also? If yes, we know the reasons!
    Is institutes like IIM any different? It takes mettle and guts to enter IIM-like institute. But what about the others?
    Our education system is already stuck in the quagmire of corruption, political intervention, money and what not! It really takes a GOD to bring us out of this pathetic condition.

  2. roopa

    very common problem as sir is elaborating……students should be imparted with BhagvatGeetha lessons from the very beginning…primary level and at home to avoid teachers scratching their heads…

  3. shivashankar

    Kiran
    I offer the following to your views and questions:
    In IIM’s the curriculum is more or less same, but the students fund their own study, either through loan, or through their previous earnings. They invest their precious earnings for higher education and skill. they exhibit high level of maturity. whereas Our private college students burn their parents money.
    Even our Universities are diluting the entire education system.
    shivashankar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading