ಸಂಪು ಕಾಲಂ : ಸಾವು-ಬದುಕು ಮತ್ತು ಮಿಶ್ ಆಲ್ಬಂ


“Everyone know they die but no one believes it”, (ತಮ್ಮ ಸಾವು ಖಚಿತ ಎಂದು ಎಲ್ಲರಿಗೂ ಗೊತ್ತು, ಆದರೆ ಯಾರೂ ಅದನ್ನು ನಂಬುವುದಿಲ್ಲ) ಎಂಬ ಮಾತನ್ನು ಓದಿದಾಕ್ಷಣ ಒಂದು ಕ್ಷಣ ಎದೆಬಡಿತ ನಿಂತಿತ್ತು. ನಾವೂ ಸಾಯುತ್ತೇವೆ ಹೌದು, ಗೊತ್ತು! ಆದರೆ ಪಿಚ್ಚರ್ ಅಭಿ ಬಾಕಿ ಹೈ ಎನ್ನುವಂತೆ, ನಮ್ಮದೇ ಕಾಲ್ಪನಿಕ ಜಗತ್ತಿನಲ್ಲಿ ಸ್ಲೋ ಮೋಷನ್ ನಲ್ಲೇ ಬದುಕನ್ನು ಕನಸುತ್ತಿರುತ್ತೇವೆ. ಬದುಕಿನ ಯಾವುದೋ ಅನಗತ್ಯ ಜಗ್ಗಾಟಗಳ, ಹೋರಾಟಗಳ ಹಿಂದೆ ಬಿದ್ದು ಸೆಣಸಾಡುತ್ತಿರುತ್ತೇವೆ. ಬದುಕು-ಸಾವಿನ ಮಧ್ಯೆ ಹೋರಾಡುತ್ತಿದ್ದ ಮುನ್ನಾಭಾಯಿ ಎಮ್.ಬಿ.ಬಿ.ಎಸ್ ಸಿನೆಮಾದ ಜಹೀರ್ ಹೇಳುವಂತೆ, “ಅಭಿ ಪೂರೀ ಜಿಂದಗೀ ಪಡೀ ಹುಯೀಹೈ” ಎಂದು ಆಲೋಚಿಸುತ್ತಿರುತ್ತೇವೆ. ಆದರೆ, ಕ್ಯಾಲೆಂಡರಿನ ದಿನಾಂಕದಂತೆ ನಮ್ಮ ಸಾವು, ಇಂತಹ ಕೆಲದಿನಗಳಲ್ಲೇ ಸಂಭವವಾಗುತ್ತದೆ ಎಂದು ತಿಳಿದು ಬಿಟ್ಟರೆ, ನಮ್ಮ ಜೀವನ ಹೇಗಾಗಬಹುದು!
ನಮ್ಮ ಶಾಲಾ ಮಾಸ್ತರೊಬ್ಬರು ಪರೀಕ್ಷೆಗೆ ನೂರು ದಿನಗಳಿವೆ ಎಂದಾಗ, ಅಂದಿನಿಂದ ಕರಿಹಲಗೆಯ ಮೇಲೆ ಪರೀಕ್ಷೆಗೆ ಉಳಿದಿರುವ ದಿನಗಳನ್ನು ಬರೆಯುತ್ತಾ ಇದ್ದರು. ತೊಂಭತ್ತೊಂಭತ್ತು, ತೊಂಭತ್ತೆಂಟು…….ಎಂಭತ್ತೈದು………ಐದು…..ಹೀಗೆ. ಅದನ್ನು ನೋಡಿದ ಪ್ರತಿ ಘಳಿಗೆ ನಮ್ಮ ಹೆದರಿಕೆ, ಗಾಂಭೀರ್ಯ ಹೆಚ್ಚುತ್ತಿತ್ತು. ಈ ರೀತಿ ನಂಬರಿಂಗ್ ನಮ್ಮ ಸಾವಿನದ್ದೂ ಆಗಿಬಿಟ್ಟರೆ, ಜಗತ್ತು ಈಗಿರುವಷ್ಟೇ ನಿರುಮ್ಮಳವಾಗಿ, ನಾವು ಪರ್ಮನೆಂಟ್ ಎಂಬಂತೆ ಸಾವಕಾಶವಾಗಿ ನಡೆಯುತ್ತಿತ್ತೇ. ’ಸಾಸಿವೆ ತಂದವಳು’ ಪುಸ್ತಕದಲ್ಲಿ ಭಾರತಿ ಬಿ.ವಿಯವರು ಹೇಳಿದ ಮಾತು: ಅವರು ತಮ್ಮ ವೈದ್ಯರಲ್ಲಿ, “ನಾನು ಸಾಯುತ್ತೇನೆ ಅನ್ನುವುದು ಗ್ಯಾರೆಂಟಿ ಆದರೆ ಹೇಳಿಬಿಡಿ ಡಾಕ್ಟ್ರೇ, ನನ್ನ ಜೀವನದ ಎಲ್ಲ ಆಸೆ-ಕನಸುಗಳನ್ನು ಫ಼ಾಸ್ಟ್ ಫ಼ಾರ್ವರ್ಡ್ ಮಾಡಿ ಜೀವಿಸಿಬಿಡುತ್ತೇನೆ” ಎಂದು. ಇದು ಎಂತಹ ಆತಂಕಕಾರೀ ಕ್ಷಣ. ಇದನ್ನು ನಾವು ಎಷ್ಟು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೂ, ಅನುಭವಿಸುವ ಮನಸ್ಸಿಗೆ ನಾಟುವಷ್ಟು ತೀವ್ರತೆ ಇತರರಿಗೆ ಸಾಧ್ಯವಾಗುವುದಿಲ್ಲ.
ಒಂದು ವೇಳೆ ಅದೇ ನಿಜವಾದರೆ, ನಮ್ಮ ಮುಂದೆ ಉಳಿಯುವ ಆ ಪುಟ್ಟ ಬದುಕನ್ನು ಹೇಗೆ ಬದುಕಬೇಕು? ಪ್ರತಿಯೊಂದು ಕ್ಷಣವೂ ನನ್ನ ಸಾವಿಗೆ ಇಂತಿಷ್ಟೇ ಹತ್ತಿರವಾಗುತ್ತಿದೆ ಎಂಬ ಕಹಿ ಸತ್ಯವನ್ನು ಅರಗಿಸಿಕೊಂಡು ಹೇಗೆ ನಾವು ಆ ಘಳಿಗೆಗಳನ್ನು ಸ್ವೀಕರಿಸಬೇಕು? ಬಹಳ ಎಚ್ಚರವಾಗಿ ವರ್ಷಾನುಗಟ್ಟಲೆಯಿಂದ ಜೋಪಾನವಾಗಿಸಿಕೊಂಡು, ಅಚ್ಚುಕಟ್ಟಾಗಿಸಿದ ದೇಹ ಇನ್ನಿಲ್ಲವಾಗುತ್ತಿದೆ, ನಾನೆಂಬ ನಾನು ಇನ್ನು ಮುಂದೆ ಈ ಜಗತ್ತಿನಲ್ಲಿ ಇರುವುದಿಲ್ಲ, ನನ್ನ ಮನೆ, ವಸ್ತುಗಳು, ಪುಸ್ತಕಗಳು, ಕಪಾಟು, ಬಟ್ಟೆಗಳು, ವರ್ಷಾನುಗಟ್ಟಲೆಯಿಂದ ಕಾಪಿಟ್ಟ ನನ್ನ ಆಸೆ, ಕನಸು, ಗುಟ್ಟು, ಸ್ನೇಹ, ಪ್ರೇಮ ಎಲ್ಲವೂ, ಎಲ್ಲವೂ ಒಂದು ಪೂರ್ಣವಿರಾಮವನ್ನು ಕಾಣುತ್ತಿದೆ ಎಂದು ಕಡ್ಡಿ ತುಂಡು ಮಾಡಿದಂತೆ ನಿಖರವಾಗಿ ನಮಗರಿವಾದಾಗ ಆ ಒಂದು ಖಾಲಿತನವನ್ನು, ಒಂಟಿತನವನ್ನು, ನಿರಾಶೆ, ಆತಂಕಗಳನ್ನು ಹೇಗೆ ಎದುರಿಸಬಲ್ಲೆವು? ನಮ್ಮ ಸಾವನ್ನು ನಾವು ಹೇಗೆ ಆಹ್ವಾನಿಸಬಲ್ಲೆವು? “When you learn how to die, you learn how to live.” (ನಾವು ಸಾಯುವುದು ಹೇಗೆ ಎಂದು ತಿಳಿದಾಗ, ಬದುಕುವುದು ಹೇಗೆ ಎಂಬುದನ್ನೂ ಅರಿಯುತ್ತೇವೆ), ಎಂಬ ಈ ಮಾತು ಬಹುಶಃ ಮೇಲಿನ ಎಲ್ಲ ಪ್ರಶ್ನೆಗಳ ವ್ಯಾಖ್ಯಾನ ಅಥವಾ ಉತ್ತರವಾಗಬಲ್ಲದು.
ಇಂಗ್ಲಿಷ್ ಕವಿ ಆಡೆನ್ ನ, ”love or perish” ಎಂಬ ಮಾತನ್ನೇ ಮಂತ್ರವಾಗಿಸಿಕೊಂಡು, ಮಾರಣಾಂತಿಕ ಖಾಯಿಲೆಗೆ ತುತ್ತಾದ ನಡುವಯಸ್ಸಿನ ವ್ಯಕ್ತಿಯೊಬ್ಬ ತನ್ನ ಬದುಕಿನಲ್ಲಿ ಉಳಿದ ಸ್ವಲ್ಪವೇ ದಿನಗಳನ್ನು ಭೂಮಿಯ ಮೇಲಿನ ಪಿಕ್ನಿಕ್ ಎಂಬಂತೆ ಕಳೆಯಬಯಸುವ, ಕೊಟ್ಟಷ್ಟೂ, ಪಡೆಯಬಹುದಾದ ಪ್ರೀತಿಯನ್ನು ನಂಬಿ, ಪ್ರೀತಿಯೊಂದೇ ನಾವಿಲ್ಲವಾದಮೇಲೂ ಇರಬಹುದಾದ ನಮ್ಮ ಅಂಶ ಎಂಬ ಜೀವನದ ಸೂಕ್ಷ್ಮವನ್ನು ಇತರರಿಗೂ ಬೋಧಿಸಿ, ತಾನು ಇಲ್ಲವಾದಮೇಲೂ ತನ್ನ ಶಿಷ್ಯನ ಮೂಲಕ ಈ ಜಗತ್ತಿನಲ್ಲಿ ದಾಖಲಾಗಿಬಿಟ್ಟ ವ್ಯಕ್ತಿ Morrie Schwartz. ಇಂತಹ ವ್ಯಕ್ತಿತ್ವವನ್ನು ನಮಗೆ ಪರಿಚಯಿಸಿದ್ದು, Morrie ಯ ಶಿಷ್ಯ Mitch Albom ಎಂಬ ಬರಹಗಾರ ಮತ್ತು ಆ ಪರಿಚಯ ಪುಸ್ತಕ Tuesdays With Morrie. ಮನುಷ್ಯ ಸಾವಿಗೆ ಹತ್ತಿರಾಗಿದ್ದಾನೆ ಎಂದು ತಿಳಿಯುವ ಸಂದರ್ಭದಲ್ಲಿ, ಅವನು ಹೇಗೆ ಅದಕ್ಕೆ ಪ್ರತಿಕ್ರಿಯಿಸಬಹುದು, ಅದನ್ನು ಎಷ್ಟು ಪಾಸಿಟಿವ್ ಆಗಿ ತೆಗೆದುಕೊಳ್ಳಬಲ್ಲ, ಅದಕ್ಕೆ ಸಹಾಯ ಮಾಡುವ ಆಕರಗಳೇನು, ಸಾವನ್ನು ಹತ್ತಿರದಲ್ಲೇ ಎದುರುಕಾಣುತ್ತಿರುವ ಮನುಷ್ಯ ಜೀವನವನ್ನು ಹೇಗೆ ನೋಡಬಹುದು ಎಂಬೆಲ್ಲಾ ವಿಷಯಗಳನ್ನು ಅತ್ಯಂತ ವಿಷದವಾಗಿ ತಿಳಿಸಿಕೊಡುತ್ತದೆ ಈ ಪುಸ್ತಕ.
ಯಾವುದೋ ಒಬ್ಬ ಗುರುಶಿಷ್ಯರ ಒಡನಾಟದ ಕಥೆಯಂತೆ ಕಾಣುವ ಈ ಪುಸ್ತಕದ ತುಂಬ ಬದುಕು, ಸಾವು, ಸ್ನೇಹ, ಪ್ರೀತಿ, ಸಂಬಂಧಗಳು, ಸಂಸ್ಕೃತಿ, ಜಗತ್ತು, ನಿರರ್ಥಕವಾದ ಆರ್ಥಿಕ ಸುಖ ಇಂತಹ ಸಾಕಷ್ಟು ವಿಷಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಸಾವಿನ ಸ್ಥಿತಿಯಲ್ಲಿರುವ ದಾಸವಾಳದ ಗಿಡವೊಂದನ್ನು, ತನಗೇ ಹೋಲಿಸಿಕೊಂಡು, ಸಮಾಜಶಾಸ್ತ್ರದ ಅದ್ಯಾಪಕನಾಗಿರುವ, ಸಾವು, ಬದುಕಿನ ನಡುವಿನ ಅಂತರವನ್ನು ಒಂದು ಆಧ್ಯಾತ್ಮಿಕ ಹಂತಕ್ಕೆ ಕೊಂಡೊಯ್ದು ಜೀವಿಸುವ ತನ್ಮೂಲಕ ಆತನ ಶಿಷ್ಯನಾದ ಮಿಶ್ ಎಂಬ ಯುವಕನ ಎಲ್ಲ ರೀತಿಯ ಮನಃಪರಿವರ್ತನೆಗೆ ಕಾರಣನಾಗುವ ಮೌರಿಯ ಕಥೆ ಮನಕರಗಿಸುವಂತೆ ಚಿತ್ರಿಸಲಾಗಿದೆ.

ಯುವಕನಾದ ಮಿಶ್ ತನ್ನ ಕಾಲೇಜಿನ ದಿನಗಳಲ್ಲಿ ಸಮಾಜಶಾಸ್ತ್ರದ ಅಧ್ಯಾಪಕನಾದ ಮೌರಿಯನ್ನು ಕಾಲೇಜಿನ ಕೊನೆಯ ದಿನ ಬೀಳ್ಕೊಟ್ಟ ನಂತರ ಮತ್ತೆ ಸುಮಾರು ವರ್ಷಗಳೇ ಕಳೆದಿರುತ್ತದೆ. ಮಿಶ್ ನ ಮಾವ ತೀರಿಹೋದ ನಂತರ, ಆತನ ವಿಷಮ ಪರಿಸ್ಥಿತಿಯನ್ನು ಕಂಡಿದ್ದ ಮಿಶ್ ಗೆ ಹೇಗಾದರೂ ಮಾಡಿ ಬದುಕಿನಲ್ಲಿ ಚೆನ್ನಾಗಿ ದುಡ್ಡು ಮಾಡಬೇಕು ಅದೇ ಸುಖ, ಸತ್ಯ ಎಂಬ ನಂಬಿಕೆ ಬಲವಾಗುತ್ತದೆ. ತನ್ನೆಲ್ಲ ಕನಸುಗಳನ್ನು ಕೈಬಿಟ್ಟು, ಜೇಬು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ. ಬದುಕು ಯಾಂತ್ರಿಕವಾಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ, ಟಿವಿ ಸಂದರ್ಶನವೊಂದರಲ್ಲಿ ತಾನು ವರ್ಷಗಳ ಕೆಳಗೆ ಬೀಳ್ಕೊಟ್ಟು ಕಳುಹಿದ ತನ್ನ ಪ್ರೊಫ಼ೆಸರ್ ನನ್ನು ಕಾಣುತ್ತಾನೆ. ಆತನಿಗೆ ಮಾರಣಾಂತಿಕ ಖಾಯಿಲೆ ಬಂದಿರುವುದು ಸಹ ತಿಳಿದು ಬರುತ್ತದೆ. ಅಲ್ಲಿಯವರೆಗೂ ಆತನನ್ನು ಕಾಣದೇ ಹೋದ ಗಿಲ್ಟ್ ನಲ್ಲೇ, ಅವನನ್ನು ಭೇಟಿ ಮಾಡಲು ಹೊರಡುತ್ತಾನೆ.
ಆಶ್ಚರ್ಯವೆಂಬಂತೆ, ಆಗಂತುಕನಂತೆ ಹೊರಟ ಇವನನ್ನು ಮೌರಿ ಅತ್ಯಂತ ನಿಕಟವರ್ತಿಯಂತೆ, ಬಹಳ ಆಪ್ಯಾಯವಾಗಿ ಬರಮಾಡಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ ಪ್ರತಿ ಮಂಗಳವಾರ ಅವರಿಬ್ಬರ ಭೇಟಿ ಮತ್ತು ಲೋಕಾಭಿರಾಮವಾದ ಮೌಲ್ಯಯುಕ್ತ ಮಾತುಕತೆಗಳು ನಡೆಯುತ್ತಿರುತ್ತವೆ. “Aging is not just decay…It’s growth.” ಎಂದು ಹೇಳುತ್ತಾ ಬದುಕಿನ ತನ್ನೆಲ್ಲಾ ಸಂತೋಷವನ್ನು ಮೈವೆತ್ತಂತೆ ಕಾಣುವ ಖಾಯಿಲೆಬಿದ್ದ ವ್ಯಕ್ತಿಯ ಚೈತನ್ಯವನ್ನು ಕಂಡು ಮಿಶ್ ದಂಗಾಗುತ್ತಾನೆ. ಹಣಮಾಡುವುದೇ ಜೀವನದ ಉದ್ದೇಶ ಎಂದು ಬಗೆದಿದ್ದ ಮಿಶ್ ಗೆ, ಹಣ ಮತ್ತು ಅಧಿಕಾರಗಳು ಪ್ರೀತಿಯ ಕೋಮಲಭಾವಕ್ಕೆ ತೃಣಮಾತ್ರ ಸಮವಲ್ಲ ಎಂದು ಒಂದೇ ಮಾತಿನಲ್ಲಿ ಅಲ್ಲಗಳೆದುಬಿಟ್ಟಿದ್ದಷ್ಟೇ ಅಲ್ಲದೆ ಆ ಮಾತನ್ನು ತನ್ನ ಭಾವಾಭಿವ್ಯಕ್ತಿಯಿಂದ ಅನುಭವಕ್ಕೆ ತರಿಸಿಬಿಡುತ್ತಾನೆ ಮೌರಿ.
ಸಾವು ಬದುಕನ್ನಷ್ಟೇ ವಿರಮಿಸುತ್ತದೆ, ಸಂಬಂಧಗಳನ್ನಲ್ಲ. ಸಂಬಂಧಿಕರು, ಪ್ರೀತಿಪಾತ್ರರ ಮನದಾಳದಲ್ಲಿ ನಾವು ಸಾವಿನ ನಂತರವೂ ಅಚ್ಚಳಿಯದೆ ನೆಲೆಸಿರುತ್ತೇವೆ ಎಂದು ಮೌರಿ ಹೇಳುತ್ತಾನೆ. ತನ್ನ ಜೀವದ ಗೆಳೆಯನ ಸಾವಿನ ಶ್ರದ್ಧಾಂಜಲಿಯ ವೇಳೆ ನಡೆಯುವ ಆತನ ಗುಣಗಾನವನ್ನು ಕಂಡ ನಂತರ, ತನ್ನ ಬಗೆಗಿನ ಇಂತಹ ಒಳ್ಳೆ ಮಾತುಗಳು ಕೇಳಲು ತಾನಿರುವುದಿಲ್ಲ ಎಂದು ಬಗೆದ ಮೌರಿ ತಾನು ಬದುಕಿರುವಾಗಲೇ ಜೀವಂತ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾನೆ. ಜನರು ತನ್ನ ಬಗ್ಗೆ ಇಟ್ಟಿರುವ ಪ್ರೇಮಾದರಗಳನ್ನು ಅರಿತನಂತರ ಪ್ರೀತಿಯ ಬಗೆಗಿನ ತನ್ನ ವ್ಯಾಖ್ಯಾನಕ್ಕೆ ಬಲಬಂದಂತಾಗಿ ಸಂಭ್ರಮಿಸುತ್ತಾನೆ. ಈ ಎಲ್ಲಾ ಕ್ರಿಯೆಗಳು ಮಿಶ್ ನಲ್ಲಿ ತನಗರಿವಿಲ್ಲದೇ ಒಂದು ಪರಿವರ್ತನೆಯನ್ನು ತರುತ್ತಿರುತ್ತದೆ.
“What’s wrong with being number two?” ಎಂಬ ಮೌರಿಯ ಮಾತಿನಿಂದ, ಬದುಕನ್ನು ಒಂದು ಸ್ಪರ್ಧೆಯಂತೆ ಕಾಣುತ್ತಿದ್ದ ಮಿಶ್ ತಬ್ಬಿಬ್ಬುಗೊಳ್ಳುತ್ತಾನೆ. ಸ್ಪರ್ಧೆಯು ಜೀವನದ ಒಂದು ಸಣ್ಣ ಭಾಗವಷ್ಟೇ, ಅದನ್ನೇ ಬದುಕಾಗಿಸುವುದು ಒಂದು ಮೂರ್ಖತನ ಎಂದು ತನ್ನ ಸಖ್ಯದಿಂದ ಮನವರಿಕೆ ಮಾಡಿಸುವ ಮೌರಿ, ಮಿಶ್ ನಲ್ಲಿ ಒಬ್ಬ ಹೊಸ ವ್ಯಕ್ತಿಯ ಹುಟ್ಟನ್ನು ಕಾಣುತ್ತಾನೆ. “ನೀನು ಸಾಯುವ ಮೊದಲು ನಿನ್ನನ್ನು ಮೊದಲು ಕ್ಷಮಿಸಿಕೋ, ನಂತರ ಇತರರನ್ನು” ಎಂಬ ಮೌರಿಯ ಮಾತನ್ನು ಮಿಶ್ ಇನ್ನಿಲ್ಲದಂತೆ ತನ್ನದಾಗಿಸಿಕೊಳ್ಳುತ್ತಾನೆ. ಹದಿನಾಲ್ಕು ಮಂಗಳವಾರಗಳ ಇವರಿಬ್ಬರ ಒಡನಾಟ, ಓದಲು, ತಿಳಿಯಲು, ಆ ಮಾತುಗಳನ್ನು ಅನುಭವಿಸಿ ಸಂಭ್ರಮಿಸಲು ಆ ಪುಸ್ತಕ ನಮಗೆ ಇನ್ನೂರು ಪುಟಗಳ ಉಡುಗೊರೆ.
ಮೌರಿಯ ಮಾತುಗಳಿಂದ ಮಿಶ್ ಆಲ್ಬಂನಲ್ಲಾಗುವ ಪರಿವರ್ತನೆಯಂತೆಯೇ ನಮ್ಮಲ್ಲೂ ಹಲವಾರು ಆಲೋಚನೆಗಳು ಹುಟ್ಟಿ, ನಮ್ಮನ್ನು ವಾರ್ಮ್ ಅಪ್ ಮಾಡುವ ಪುಸ್ತಕ ಟ್ಯೂಸ್ಡೇಸ್ ವಿತ್ ಮೌರಿ. ಸಾವನ್ನು ಬಿಂಬಿಸುವ ಪುಸ್ತಕವಾದರೂ ಅತ್ಯಂತ ಚೇತೋಹಾರಿಯಾಗಿರುವ, ಜೀವನ ಮೌಲ್ಯಗಳ ಪ್ಯಾಕೇಜ್ ಆಗಿರುವ ಈ ಪುಸ್ತಕ, ನಮ್ಮ ಓದಲೇಬೇಕಾದವು ಎಂಬ ಕಪಾಟನ್ನು ಸೇರುವಂತಹುದು.
 

‍ಲೇಖಕರು G

April 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. ಶಮ, ನಂದಿಬೆಟ್ಟ

  Thanks Kane.. ಒಂದು ಚೆಂದದ ಓದನ್ನು ಓದಲೊಂದು ಪುಸ್ತಕವನ್ನು ಕೊಟ್ಟೆ ನೀನು

  ಪ್ರತಿಕ್ರಿಯೆ
 2. ಶರಣಪ್ಪ ಪಿ. ನೂಲ್ವಿ.

  ಪುಸ್ತಕದ ಕಿರು ಪರಿಚಯ ಓದಿದಾಗ ಮೈಯಲ್ಲಾ ಜುಂ ಎನ್ನುವುದು. ಇನೂ ಪುಸ್ತಕವನೆಲಾ ಓದಿದರೆ, ಸಾವು ಬದುಕಿನ ನಡುವಿನ ಜೀವನ ಅರ್ಥವಾಗುವುದು…!!!

  ಪ್ರತಿಕ್ರಿಯೆ
 3. Anil Talikoti

  ತುಂಬಾ ಚೆನ್ನಾಗಿದೆ -“ಪ್ರೀತಿಯೊಂದೇ ನಾವಿಲ್ಲವಾದಮೇಲೂ ಇರಬಹುದಾದ ನಮ್ಮ ಅಂಶ” -ಓದಲು ಪ್ರೇರೇಪಿಸುವ ಮನಮೋಹಕ ವಿಶ್ಲೇಷಣೆ. ನನಗೇಕೋ ‘ಆನಂದ’ ಚಿತ್ರದ ಪಾತ್ರಗಳು, ಸಂಭಾಷಣೆಗಳು ನೆನಪಾದವು.
  -ಅನಿಲ್

  ಪ್ರತಿಕ್ರಿಯೆ
 4. Badarinath Palavalli

  ಸಾವಿನ ಬಿಂದುವಿನ ಅರಿವಿದ್ದ Morrie Schwartz ಮತ್ತು ಅದನ್ನು ದಾಖಲಿಸಿದ ಅವನ ಶಿಷ್ಯನಾದ Mitch Albom ಹಾಗೂ ಸದರಿ ಪುಸ್ತಕ Tuesdays With Morrie. ಒಳ್ಲೆಯ ಜೀವನಾಕರ್ಷಕ ಬರಹ ನಿಮ್ಮದು.
  ಪ್ರತಿಬಾರಿಯೂ ನಿಮ್ಮ ಬ್ಲಾಗೆಂಬುದು ನಮಗೆ ಅಚ್ಚರಿಯ ಮೂಟೆಯೇ!
  ನೀವು ಹೊತ್ತು ತರುವ ಸರಕು ಮತ್ತದರ ನಿರೂಪಣೆ ನಮಗೆ ಓದಿನೆಡಎಗೆ ಅಯಸ್ಕಾಂತಗಳೇ.
  ನಮಗೆ ಪಾಠದಂತಹ ಸಾಲುಗಳು:
  “ನೀನು ಸಾಯುವ ಮೊದಲು ನಿನ್ನನ್ನು ಮೊದಲು ಕ್ಷಮಿಸಿಕೋ, ನಂತರ ಇತರರನ್ನು”

  ಪ್ರತಿಕ್ರಿಯೆ
 5. vinodbangalore

  ಒಪ್ಪವಾದ ನಿರೂಪಣೆ ಧನ್ಯವಾದಗಳು ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸಿದ್ದಕ್ಕೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: