ಸಂಪು ಕಾಲಂ : ಸಮಾಜ, ಸಲಿಂಗಕಾಮ ಮತ್ತು 'ಮೋಹನಸ್ವಾಮಿ'


 
ನಾನೊಂದು ಕಥೆ ಓದ್ತಿದೀನಿ ಕಣೆ, ಸಲಿಂಗ ಕಾಮಿಗಳ ಬಗ್ಗೆ ಎಂದು ಗೆಳತಿಗೆ ಹೇಳಿದ ತಕ್ಷಣ ಮುಖ ಕಿವುಚಿಕೊಂಡಳು. ಸ್ಟಾಪ್ ಮಾಡೆ ಮಾರಾಯ್ತಿ, ಅದರ ಬಗ್ಗೆ ಕೇಳಲು ಮುಜುಗರ ಆಗುತ್ತೆ, ಅಸಹ್ಯ. ಎಂದು ಬಿಟ್ಟಳು ಆಕೆ! ಆ ಕ್ಷಣ ನನಗೆ ಆ ಹುಡುಗಿ, ಜಗತ್ತಿನ ಶೇಕಡಾ ತೊಂಭತ್ತೊಂಭತ್ತು ಮಿದುಳುಗಳ ಪ್ರತಿನಿಧಿಯಾಗಿ ಕಂಡಳು, ನನ್ನನೂ ಸೇರಿಸಿ! “ಗೇ”…. , ಇತ್ತೀಚಿನವರೆಗೂ ನಾನೂ ಈ ಪದದ ಬಗ್ಗೆ ಹೆದರಿದ್ದೆ, ಅಸಹ್ಯ ಪಟ್ಟಿದ್ದೆ, ಬರುಬರುತ್ತಾ ಅದು ಅನುಕಂಪವಾಯಿತು, ಮರುಕವಾಯಿತು! ಆದರೆ ನನ್ನ ಓದು ಮತ್ತು ಅನುಭವಗಳು ಹೆಚ್ಚುತ್ತಾ ಇವರ ಬಗ್ಗೆ ಅನುಕಂಪ ಪಡುವುದು ಸಹ ಒಂದು ಮೌಢ್ಯತೆ, ಮುಗ್ಧತೆ ಎಂದು ಅರಿವಾಗುತ್ತಿದೆ. ಪುರಾಣಗಳ ಕಾಲದಿಂದಲೂ, ನಮ್ಮ ಆದಿ ಗ್ರಂಥಗಳಲ್ಲೂ ಉಲ್ಲೇಖವಾಗಿರುವ ಸಲಿಂಗ ಕಾಮ ಈಗಲೂ ನಮಗೆ ಒಂದು “ಫುಲ್ ಸ್ಟಾಪ್” ಆಗಿರುವುದು ಸಖೇದ ಆಶ್ಚರ್ಯ!
ಎಲ್ಲರ ಒಡಲಲ್ಲೂ ಇರುವ ಕ್ರೋಮೋಸೋಮ್ ಗಳು ಸ್ವಲ್ಪ ಭಿನ್ನವಾಗಿ ರಚನೆಯಾಗಿ, ಪ್ರಕೃತಿಯ ಅತ್ಯಂತ ಸಹಜ ನಿರ್ಮಾಣಗಳಲ್ಲಿ ಒಂದಾದ ಈ ಸಲಿಂಗ ಕಾಮಿಗಳು (ಅಥವಾ ಭಿನ್ನ ಲಿಂಗಿಗಳು) ಜೀವನದುದ್ದಕ್ಕೂ ಸಮಾಜದಿಂದ ಪಡೆಯುವುದು ಮಾತ್ರ ತಿರಸ್ಕಾರ, ತಾತ್ಸಾರ, ಅವಮಾನ, ದುಃಖ, ಕೀಳರಿಮೆ ಎಂಬಿತ್ಯಾದಿ ಬಳುವಳಿಗಳು. ಒಂದು ಹೆಣ್ಣು ಗಂಡು ಕೈ ಕೈ ಮಿಲಾಯಿಸಿ ರಸ್ತೆ ಬದಿಯಲ್ಲಿ ನಡೆಯುತ್ತಿದ್ದರೆ ತುಂಟ ಮಂದಹಾಸ ಬೀರುವ ನಾವು, ಇಬ್ಬರು ಗಂಡಸರು ಕೈಕೂಡಿಸಿ ನಡೆದದ್ದು ಕಂಡರೆ ಗೇಲಿ, ಅಪಹಾಸ್ಯದ ದೃಷ್ಟಿ ಹಾಯಿಸುತ್ತೇವೆ. ಈ ರೀತಿ ಸಣ್ಣ ಪುಟ್ಟ ಅವಮಾನಗಳಿಂದ ಹಿಡಿದು ಸುಪ್ರೀಂ ಕೋರ್ಟ್ ನ ಅವಮಾನಿತ ಕಾನೂನು ಮಂಡನೆಯವರೆಗೆ ಈ ಭಿನ್ನ ಲಿಂಗಿಗಳು ಕಾಣುತ್ತಿರುವುದು, ಅನುಭವಿಸುತ್ತಿರುವುದು ಬರೀ ಅವಮಾನ, ನೋವು! ಇದೊಂದು ಸ್ವಾಭಾವಿಕ ಪ್ರಕ್ರಿಯೆ ಎಂಬ ಸತ್ಯ ನಮ್ಮ ರೂಢಿಗತ ಪರಿಭಾಷೆಯಾಗಬೇಕಾದರೆ ಬಹುಶಃ ಇನ್ನೂ ಸಾಕಷ್ಟು ದಶಕಗಳೇ ಕಳೆಯಬೇಕು. ಅಸಹ್ಯವೂ ಅಲ್ಲದ, ಅನುಕಂಪವೂ ಬೇಡದ ಒಂದು ಸಮಾನ ದೃಷ್ಟಿ ನಮ್ಮ ಸಮಾಜ ಈ ಜನರ ಬಗೆಗೆ ಎಂದು ಬೀರುತ್ತದೋ ಅಂದೇ ಸಾಕಷ್ಟು ಇತರ ಸಾಮಾಜಿಕ ಸಮಸ್ಯೆಗಳೂ ದೂರಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯವೂ ಹೆಚ್ಚಾಗುತ್ತದೆ. ಕಾಮದ ಬಗ್ಗೆ ಮಾತನಾಡುವುದೇ ನಮಗೆ ಒಂದು ಕಲ್ಚರಲ್ ಶಾಕ್ ಆಗಿದ್ದಾಗ ಸಲಿಂಗ ಕಾಮ ಅಂತೆಲ್ಲಾ ಮಾತನಾಡಿದರೆ ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ ನಮ್ಮಂತಹ ದೇಶದಲ್ಲಿ. ಅದಕ್ಕಾಗಿ ನಮಗೆ ಇಂದು ಬೇಕಾಗಿರುವುದು ಸಲಿಂಗ ಕಾಮಿಗಳ ಬಗ್ಗೆ, ಅವರ ಸಾಧಾರಣ ಭಾವನೆಗಳ ಬಗೆಗಿನ ಪ್ರಜ್ಞೆ, ಗೌರವ ಮತ್ತು ಪರಕಾಯ ಪ್ರವೇಶದಂತಹ ಗ್ರಹಿಕೆ.
ಇಂತಹ ಗ್ರಹಿಕೆ, ತಿಳುವಳಿಕೆಗೆ ಸಹಾಯವಾಗುವಂತೆ ಮೂಡಿಬಂದಿದೆ “ಮೋಹನ ಸ್ವಾಮಿ”. ಭಿನ್ನ ಲಿಂಗಿಗಳ ನೋವು, ದುಃಖಗಳನ್ನು ನಾಟುವಂತೆ, ಮನಮುಟ್ಟುವಂತೆ ಬಹಳ ಬೋಲ್ಡ್ ಆಗಿ ಪ್ರತಿಬಿಂಬಿಸಿದ್ದಾರೆ ಕಥೆಗಾರ ವಸುಧೇಂದ್ರ ಚಂದರವರು ತಮ್ಮ ಹೊಸ ಕಥಾಸಂಕಲನ “ಮೋಹನಸ್ವಾಮಿ”ಯಲ್ಲಿ. ಅಷ್ಟೇ ಅಲ್ಲ, ಈ ಕಥಾಸಂಕಲನವನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಭಾಗಿಸಬಹುದು. ಒಟ್ಟು ಹನ್ನೊಂದು ಕಥೆಗಳಿರುವ ಈ ಸಂಕಲನದ ಮೊದಲ ಆರು ಕಥೆಗಳು ಭಿನ್ನಲಿಂಗಿಗಳ ಸಮಸ್ಯೆಗಳ ಕುರಿತಾಗಿದ್ದು, ನಂತರದ ಕಥೆಗಳು ಇತರ ಅತ್ಯಂತ ಪ್ರಸ್ತುತವಾದ ಸಾಮಾಜಿಕ ಸಮಸ್ಯೆಗಳ ಜ್ವಲಂತ ಚಿತ್ರಣವಾಗಿದೆ. ಸಂಬಂಧಗಳು, ಭಾವನೆಗಳು, ಸಾಮಾಜಿಕ ಸಮಸ್ಯೆಗಳು-ಹೊಣೆಗಾರಿಕೆ ಮತ್ತು ಇವುಗಳೆಲ್ಲದರ ಮೇಲಿನ ಮಾಧ್ಯಮಗಳ ಪರಿಣಾಮ – ಈ ಎಲ್ಲಾ ಅಂಶಗಳು ಕಥೆಗಾರನ ಬಹಳವಾಗಿ ಕಾಡಿವೆ ಎಂಬುದು ಸುಸ್ಪಷ್ಟ. ಈ ಕಥೆಗಳು ಬರಿ ಕಥೆಗಳಲ್ಲದೆ ಒಂದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ರೂಪಕಗಳು ಎಂದು ಕರೆಯಬಹುದು.
ಸಂಕಲನದ ಮೊದಲ ಭಾಗದ ಕಥೆಗಳಾದ ‘ತುತ್ತ ತುದಿಯಲಿ ಮೊತ್ತ ಮೊದಲು’, ‘ಕಗ್ಗಂಟು’, ‘ಕಾಶೀವೀರರು’, ‘ಒಲ್ಲದ ತಾಂಬೂಲ’, ‘ತಗಣಿ’ ಮತ್ತು ‘ಕಿಲಿಮಾಂಜರೊ’ (ಈ ಕಥೆ ನೇರವಾಗಿ ಈ ಗುಂಪಿಗೆ ಸೇರದಿದ್ದರೂ, ಆಳದ ತೊಳಲಾಟಗಳು ಅದರ ಒಂದು ಭಾಗವನ್ನು ಪ್ರತಿಬಿಂಬಿಸುವುದರಿಂದ ಸೇರಿಸಿಕೊಳ್ಳಬಹುದು) ಎಲ್ಲವೂ ಭಿನ್ನ ಲಿಂಗಿಗಳ ಬೇರೆಬೇರೆ ರೀತಿಯ ಸಮಸ್ಯೆಗಳನ್ನು ನಮ್ಮ ಮುಂದೆ ತಂದಿಡುತ್ತದೆ. ಮೋಹನಸ್ವಾಮಿ ಎಂಬ ಸಭ್ಯ ಸಲಿಂಗ ಕಾಮಿ, ಗಂಡು ಪ್ರೇಮಿ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೂ ಹೇಗೆ ಕಡೆಗಣಿಸಲ್ಪಡುತ್ತಾನೆ, ತನ್ನ ಭಯ ಹೆದರಿಕೆಗಳ ನಡುವೆ ಮುದುಡಿ ಹೋಗಿ ತನ್ನ ಅಸ್ತಿತ್ವವನ್ನು ಹುಡುಕುತ್ತಲೇ ಮರೆಮಾಚಿ ತನ್ನೆಲ್ಲಾ ನೋವುಗಳನ್ನು ಕೃಷ್ಣನ ವಿಗ್ರಹದ ಮುಂದೆ ಅಳಲು ತೋಡಿಕೊಂಡು ಹಗುರನಾಗುತ್ತಾನೆ. “ನಿನ್ನ ಹನ್ನೊಂದನೇ ಅವತಾರದಲ್ಲಿ ನನ್ನಂತೆ ಹುಟ್ಟು” ಎಂದು ಕೃಷ್ಣನಿಗೆ ಶಾಪ ಕೊಡುತ್ತಾನೆ. ಕಥೆಗಳಲ್ಲಿ ಮೋಹನಸ್ವಾಮಿ ಕೃಷ್ಣನ ಮೊರೆಹೋಗುವ ಪ್ರತಿ ಸಂದರ್ಭದಲ್ಲೂ ಭಿನ್ನಲಿಂಗಿಗಳ ಅಸಹಾಯಕತೆಯ ಪರಮಾವಧಿಯ ಒಂದು ಮನಕಲಕುವ ಚಿತ್ರಣವಿದೆ.

‘ತುತ್ತ ತುದಿಯಲಿ ಮೊತ್ತ ಮೊದಲು’ ಕಥೆಯಲ್ಲಿ ಸಲಿಂಗ ಕಾಮಿಗಳ ಆಂತರಿಕ ತೊಳಲಾಟಗಳು, ಅವರ ಸ್ವಾಭಾವಿಕವಾದ ಕಾಮನೆಗಳನ್ನು ಸಮಾಜ ಅರ್ಥಮಾಡಿಕೊಳ್ಳದಿರುವಿಕೆ, ಅವರ ಅವಮಾನಗಳು, ಆತಂಕಗಳು, ಎಲ್ಲವನ್ನೂ ಚೆನ್ನಾಗಿ ರೂಪಿಸಿದ್ದಾರೆ. ಮೊದಲ ಪುಟದಿಂದಲೇ ಕಥೆಯ ಕಟ್ಟುವಿಕೆ ಸೆಳೆಯುತ್ತದೆ. ಆದರೆ ಕೊನೆಯ ಪ್ಲೈನ್ ಕ್ರಾಶ್ ದೃಶ್ಯ ಕೊಂಚ ನಾಟಕೀಯವಾಗಿದೆ. ‘ಕಗ್ಗಂಟು’ ಕಥೆ ದ್ವಿಲಿಂಗ ಕಾಮಿಗಳ ತೊಡಕುಗಳು, ಹೆಣ್ಣಿನಂತೆ ವರ್ತಿಸುವ ಗಂಡು, ಅವನ ಗಂಡು ದೇಹದ ಕಾಮನೆ, ಕೊನೆಯ ಇಬ್ಬರು ‘ಗಂಡು-ಹೆಣ್ಣು’ ಲಿಂಗಿಗಳ ತೊಳಲಾಟ ಇಂತಹ ಮಾರ್ಮಿಕ ಸತ್ಯಗಳನ್ನು ನಮ್ಮ ಮುಂದಿಡುತ್ತದೆ. ಜೊತೆಗೆ ನಾವು ಅವರ ಬಗ್ಗೆ ತೋರಿಸುವ ಒಂದು ತಿರಸ್ಕಾರ ಭಾವಕ್ಕೆ ನಾವೇ ತಲೆತಗ್ಗಿಸುವಂತೆ ಮಾಡುತ್ತದೆ. ‘ಕಾಶೀವೀರರು’ ಸಲಿಂಗ ಕಾಮಿಗಳ ಬಗ್ಗೆ ಸಮಾಜ ಹೊಂದಿರುವ ನಿಲುವುಗಳನ್ನು ದುರುಪಯೋಗ ಪಡಿಸಿಕೊಂಡು ಒಬ್ಬ ಅಮಾಯಕ ಸಲಿಂಗ ಕಾಮಿಯನ್ನು ದುರುಳವಾಗಿ ಬ್ಲಾಕ್ ಮೇಲ್ ಮಾಡುವಂತಹ ವಿಷಾದಕರ ದೃಷ್ಟಾಂತ.
‘ಒಲ್ಲದ ತಾಂಬೂಲ’ ಹೆಸರೇ ಸೂಚಿಸುವಂತೆ, ಅಪಾರ್ಟ್ಮೆಂಟ್ ನಲ್ಲಿ ಇರಬಹುದಾದ, ಒಂದು ‘ಸುಖೀ’ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳ ವಿವರಣೆಗಳ ಮೂಲಕ “ಅದೊಂದು ತಾಂಬೂಲ ಆದರೆ ತನಗೆ ಒಲ್ಲದ್ದು” ಎಂಬ ಸಲಿಂಗ ಕಾಮಿಗಳು ಅನುಭವಿಸುವ ಖಿನ್ನತೆ, ಕೀಳರಿಮೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ‘ತಗಣಿ’ ಶಂಕರ ಗೌಡ ಎಂಬ ಒಬ್ಬ ಮಂಗಳ ಮುಖಿಯ ದಾರುಣ ಕಥೆಯನ್ನು ಚಿತ್ರಿಸುವ ಕಥೆ. ‘ಕಿಲಿಮಂಜಾರೋ’ ಒಂದು ಟ್ರಿಕ್ಕಿ ಕಥೆ ಎನ್ನಬಹುದು. ನನಗೆ ಮೆಚ್ಚುಗೆಯಾದ ಕಥೆ ಕೂಡ. ಇದೊಂದು ರೀತಿಯ ಆತ್ಮವಿಶ್ವಾಸದ ಬುಗ್ಗೆ. ಒಬ್ಬ ವ್ಯಕ್ತಿ ತನ್ನ ಕಷ್ಟಗಳಿಂದ ಎಷ್ಟು ಕುಗ್ಗಿರುತ್ತಾನೆ ಆದರೆ ತನ್ನ ನಂಬಿಕೆ ಮತ್ತು ಗೆಲುವುಗಳು ಅವನ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಈ ಕಥೆ ತೋರಿಸುತ್ತದೆ. ಆಫ್ರಿಕಾದ ತಾಂಜಾನಿಯಾದ ಎತ್ತರದ ಕಿಲಿಮಾಂಜಾರೊ ಪ್ರಕೃತಿಯ ಒಂದು ವಿಸ್ಮಯ. ಒಡಲಿನಲ್ಲಿ ಬೆಂಕಿ ಇದ್ದು, ಮೇಲ್ಮೆಯು ಹಿಮಯುತವಾಗಿದೆ. ಅದೇ ರೀತಿ ಮನುಷ್ಯ ತನ್ನ ಒಡಲಿನಲ್ಲಿ ಎಷ್ಟೆಲ್ಲಾ ಕಷ್ಟಗಳು, ದುಃಖಗಳನ್ನು ಮಡಿಲಲ್ಲಿ ಅವಿಸಿಟ್ಟುಕೊಂಡು ಮೇಲೆ ನಗುತ್ತಲಿರುತ್ತಾನೆ. ಆದರೆ ಒಮ್ಮೆ ಆ ನೋವುಗಳನ್ನು ಗೆಲ್ಲುವ ದಾರಿ ತಿಳಿದ ನಂತರ ಅವನಿಗೆ ತನ್ನ ನೋವುಗಳು ಒಂದು ಗೆಲುವಿನ ಮೆಟ್ಟಿಲಾಗಿ ತೋರುತ್ತದೆ. ಶಿಖರವೇರಲು ಸಹಕರಿಸುವ ಡೇವಿಡ್ “ಮಗು” ಎಂದು ಕರೆಯುವುದು, ದಾರಿ ತೋರುವುದು ಇತ್ಯಾದಿ ಅನೇಕ ಸೂಕ್ಷ್ಮಗಳು ಇಲ್ಲಿ ಒಂದು ಆಧ್ಯಾತ್ಮಿಕ ಎಳೆಯನ್ನು ಪ್ರತಿಬಿಂಬಿಸುತ್ತದೆ.
ಪುಸ್ತಕದ ಎರಡನೆಯ ಮತ್ತು ಮುಖ್ಯವಾದ ಭಾಗದಲ್ಲಿರುವ ಕಥೆಗಳು; ‘ದುರ್ಭಿಕ್ಷ ಕಾಲ’, ‘ಭಗವಂತ, ಭಕ್ತ ಮತ್ತು ರಕ್ತ’, ‘ಪೂರ್ಣಾಹುತಿ’, ‘ದ್ರೌಪದಮ್ಮನ ಕಥಿ’ ಮತ್ತು ‘ಇವತ್ತು ಬೇರೆ’. ಇವೆಲ್ಲಾ ನಾನಾಗಲೇ ಹೇಳಿದಂತೆ ಪ್ರಮುಖ, ಪ್ರಬಲ ಮತ್ತು ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಕನ್ನಡಿ. ನಗರ ಜೀವನದ ಒತ್ತಡಗಳು, ತೊಳಲಾಟಗಳು, ಜಾಗತೀಕರಣದ ಸಮಸ್ಯೆಗಳು, ಮಾಧ್ಯಮಗಳ ಪರಿಣಾಮ ಇತ್ಯಾದಿ ಸಾಕಷ್ಟು ಬಿಕ್ಕಟ್ಟುಗಳನ್ನು, ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಕಥೆಗಾರನ ಗೆಲುವಿದೆ. ‘ದುರ್ಭಿಕ್ಷ ಕಾಲ’ ಪ್ರಸ್ತುತ ಸಮಸ್ಯೆಗಳ ಸಕಾಲಿಕ ಚಿತ್ರಣ. ಕೆಲಸದ ಒತ್ತಡ, ಕೆಲಸ ಕಳೆದುಕೊಳ್ಳುವಿಕೆ, ಸಾಲ ಸೋಲ, ಸುತ್ತಾಟ ಮೋಜು, ಫಿಟ್ನೆಸ್ ಭೂತ, ಕೊನೆಗೆ ಕೆಲಸದ ಒತ್ತಡಕ್ಕಾಗಿ ಗರ್ಭನಿವಾರಿಸಿಕೊಳ್ಳುವುದು ಇತ್ಯಾದಿ ಗಂಭೀರ ಸಾಮಾಜಿಕ ಸವಾಲುಗಳ ಬಗ್ಗೆ ನಮ್ಮ ಮನಸ್ಸನ್ನು ತೆಗೆದೊಯ್ಯುತ್ತದೆ. ‘ಭಗವಂತ, ಭಕ್ತ ಮತ್ತು ರಕ್ತ’, ಜಾತಿ, ಮತ ಎಂಬ ಪೆಡಂಭೂತಗಳು ನಮ್ಮ ಸಮಾಜವನ್ನು ಇನ್ನೂ ಹೇಗೆ ಕಾಡುತ್ತಲೇ ಇದೆ. ತಂತ್ರಜ್ಞಾನದ ಜ್ಞಾನ ಹೆಚ್ಚಾದಂತೆ ನಾವಿನ್ನೂ ಹೆಚ್ಚು ವೈಚಾರಿಕತೆಯಿಂದ ದೂರ ದೂರ ಸಾಗುತ್ತಿದ್ದೇವೆ ಎಂಬ ಸತ್ಯವನ್ನು ಮನದಟ್ಟು ಮಾಡಿಸುವ ಕಥೆ.
‘ಪೂರ್ಣಾಹುತಿ’, ನನ್ನನ್ನು ಬಹಳ ಕಾಡಿದ ಕಥೆ. ಇದು ಇಂದಿನ ಅತ್ಯಂತ ಪ್ರಸ್ತುತ ಸಮಸ್ಯೆ. ಕಿರಿಯರು, ಹದಿಹರೆಯದವರು ಹೇಗೆ ಹೊಸ ತಂತ್ರಜ್ಞಾನಕ್ಕೆ ಮೊರೆಹೋಗಿ ತಮ್ಮ ಜೀವನವನ್ನೇ ಛಿದ್ರಗೊಳಿಸುತ್ತಾರೆ ಮತ್ತು ಹಳೆಯ ತೆಲೆಮಾರು ಹೊಸತನ್ನು ಕಡಾ ಖಂಡಿತವಾಗಿ ಧಿಕ್ಕರಿಸಿ ಸಮಾಜದ ಹೊರತಾಗಿಯೇ ಉಳಿದು ಕಳೆದುಹೊಗುತ್ತಿದ್ದಾರೆ ಎಂಬುದನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಹೊಸತನ್ನು ನಿರಾಕರಿಸದ, ಆದರೆ ಅದನ್ನು ನಮ್ಮ ಸರ್ವಸ್ವ ಎಂದೂ ಪರಿಗಣಿಸದ, ಎಷ್ಟು ಬೇಕೋ ಅಷ್ಟು ಜಾಣ ಬಳಕೆ, ಜೀವಿಸುವಿಕೆ ನಮ್ಮದಾಗಬೇಕು ಎಂಬ ಜವಾಬ್ದಾರಿ ಕಥೆಯಲ್ಲಿ ಬಹಳ ಪ್ರಭಾವ ಬೀರುವಂತೆ ಮೂಡಿಬಂದಿದೆ. ‘ದ್ರೌಪದಮ್ಮನ ಕಥಿ’, ಈ ಕಥೆ ಸ್ವಲ್ಪ ಇತರ ಕಥೆಗಳ ಗುಂಪಿಗೆ ಸೇರದ ಕಥೆ ಎನ್ನಬಹುದಾದರೂ ಪೂರ್ತಿ ಗುಂಪಿಗೆ ಸೇರದ್ದಲ್ಲ. ಪುರಾಣದ ಮಹಾಭಾರತ ಕಥೆ ಆಧರಿಸಿ, ಕೌಟುಂಬಿಕ ನೆಲೆಗಟ್ಟಿನಲ್ಲಿ ಅಡಗಿರುವ ಗುಪ್ತ ಸಮಸ್ಯೆಗಳು, ಒಂದು ಸಂಬಂಧಕ್ಕೆ ಮತ್ತು ಅದರ ಸಮಸ್ಯೆಗಳಿಗೆ ಇರುವ ಸಾಮಾಜಿಕ ಒತ್ತಡಗಳು. ಇವುಗಳ ಬಗ್ಗೆ ಈ ಕಥೆ ಸೂಕ್ಷ್ಮವಾಗಿ ವಿವರಿಸುತ್ತವೆ. ‘ಇವತ್ತು ಬೇರೆ’ ಕಥೆ ಒಬ್ಬ ಹೆಣ್ಣಿಗೆ ತನ್ನ ಗಂಡ ಹೊರಯಾದರೆ ಆಕೆ ಆತನನ್ನು ಧಿಕ್ಕರಿಸಿ ತನ್ನ ಸ್ವಂತ ಜೀವನ ಸುಖವನ್ನು ಕಾಣಲು ಇಂದು ಸಿದ್ಧ ಎಂಬ ಸ್ತ್ರೀವಾದೀ ಧೋರಣೆಗಳನ್ನು ಒಳಗೊಂಡಿದೆ.
ಈ ರೀತಿ ಪ್ರತಿಯೊಂದು ಕಥೆಯೂ ಒಂದೊಂದು ಸಾಮಾಜಿಕ ಸಮಸ್ಯೆಯ ಕನ್ನಡಿಯಾಗಿಯೂ, ಸೂಕ್ಷ್ಮವಾಗಿ ಓದಿದಲ್ಲಿ ಆ ಸಮಸ್ಯೆಗಳಿಗೆ ಪರಿಹಾರವಾಗಿಯೂ ಕಂಡುಬರುತ್ತವೆ. ಸಾಮಾಜಿಕ ಪ್ರಜ್ಞೆ ಇರುವ ಜವಾಬ್ದಾರೀ ಕಥಾಸಂಕಲನವಾಗುವಲ್ಲಿ “ಮೋಹನಸ್ವಾಮಿ” ಗೆಲ್ಲುತ್ತದೆ. ಆದರೆ ಕೆಲವು ಕಥೆಗಳಲ್ಲಿ ಎಲ್ಲೋ ಸಮಸ್ಯೆಗಳ ಗಾಢತೆ, ಗುಮ್ಮನಾಗಿ ಬಂದು ನಮ್ಮನ್ನು ಕಾಡುವುದರಲ್ಲಿ (ಗಂಭೀರವಾಗಿ ಅಧ್ಯಯನ ಮಾಡದಲ್ಲಿ) ಕೊಂಚ ವಿಫಲವಾಗುತ್ತದೆ ಎನಿಸುತ್ತದೆ. ಬಹುಶಃ ನಗರ ಜೀವನದ ಒಂದು ಹಸಿತನವನ್ನು, ವಿಘಟನೆಯನ್ನು ಚಿತ್ರಿಸಲು ಕಥೆಗಾರ ಈ ರೀತಿ ಆಲೋಚಿಸಿರಬಹುದು. ಆದರೆ ‘ಪೂರ್ಣಾಹುತಿ’, ‘ತಗಣಿ’, ‘ದ್ರೌಪದಮ್ಮನ ಕಥಿ’ ಮತ್ತು ‘ಕಗ್ಗಂಟು’ಗಳು ನಮ್ಮನ್ನು ಟ್ರಿಗರ್ ಮಾಡಿ ಒಂದು ವ್ಯೋಮದಲ್ಲಿ, ಪ್ರಜ್ಞಾವಸ್ಥೆಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.
ಒಟ್ಟಿನಲ್ಲಿ ಎಲ್ಲ ಕಥೆಗಳು ಓದಲೇಬೇಕಾದವು. ಸಾಮಾಜಿಕ ಸಮಸ್ಯೆಗಳ ಬಗ್ಗೆ, ಆ ಸಮಸ್ಯೆಗಳಲ್ಲಿ ಸಿಕ್ಕು ನರಳುತ್ತಿರುವ ನಗರ ಜೀವನದ ಜಟಿಲತೆಗಳ ಬಗ್ಗೆ ಈ ಪುಸ್ತಕ ಒಂದು ಗಂಭೀರ ಅಧ್ಯಯನವಾಗಿದೆ.
 
 

‍ಲೇಖಕರು G

January 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

 1. sunil Rao

  Melnotakke kathegalu bhinnalingigala kuritadde aadaroo…adu ellaa lingigala samasyeye..
  Illi mohana swamy ondj model ashte…
  Nanna prakaara avanu bhinna lingi annuvudakkintaloo…nammade pratiroopa annisuttane..avanu pattante, naavoo asahaayakateyannu anubhavisutteve…
  Avanu gandina preetige haatoraderadare….hennu gandu..paraspara preetige haatoreyuttaare…ashte.
  I think sampu neevu katheya aantaryakke innonchooru iliyabekittu ansatte…
  Pustakada horanotagalanna maatrabimbisalaagide…

  ಪ್ರತಿಕ್ರಿಯೆ
  • samyuktha

   Sunila…..nanna prakaara aa kelavu kathegalu bhinnalingigala tolalatagalannu highlight maduvantadde agive. Mohana swami krishnana bali “ninna hannondane avatara nannate irali” endu shaapa hakuva sandarbhadalli idu spashta. Neenu helidante idu ella lingigala samasyeyoo houdu, aadare kathegala uddesha nee helidante toruvudilla.

   ಪ್ರತಿಕ್ರಿಯೆ
 2. Rukmini Nagannavar

  samajika Samasyegalanna Kuritanta Adeshtu Pustakagalannu parichayisi kottidira akka.. Thank you.. yaav Pustaka odabeku enondu tochuttiralilla.. sadyada stock mugisi ivakke kai hakabeku..
  Nimma Barahada kurithu matilla… matanaaduva shaktiyoo nanagilla…

  ಪ್ರತಿಕ್ರಿಯೆ
 3. ಸತೀಶ್ ನಾಯ್ಕ್

  ಒಳ್ಳೆಯ ಪುಸ್ತಕ ಪರಿಚಯ.. ಮೋಹನ ಸ್ವಾಮೀ ಕುರಿತಾಗಿ ಇದೆ ರೀತಿಯ ಅಭಿಪ್ರಾಯಗಳನ್ನ ಕೇಳಿದ್ದೆ ಹಲವರಿಂದ. ನಾಳೆ ಬೆಂಗಳೂರಿಗೆ ಬರ್ತೀನಲ್ಲ ಈ ಪುಸ್ತಕ ಕೊಂಡೆ ಕೊಳ್ತೇನೆ.. ಚೆಂದದ ಬರಹ.

  ಪ್ರತಿಕ್ರಿಯೆ
 4. Rj

  ಸಂಯುಕ್ತಾ ಅವರೇ,
  ನಾನಿನ್ನೂ ವಸುಧೇಂದ್ರರ ಈ ಪುಸ್ತಕವನ್ನು ಓದಿಲ್ಲ. ಆದರೆ ನಿಮ್ಮ ಲೇಖನ ಸದರಿ ಪುಸ್ತಕದ ಬಗ್ಗೆ ಕುತೂಹಲವನ್ನು ಹುಟ್ಟುಹಾಕುತ್ತಿದೆ.
  ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ-ಎಂಬ ultimate ಸತ್ಯವನ್ನು ಮರೆಯುವಂತಿಲ್ಲ.
  ಸಲಿಂಗಕಾಮ ಎನ್ನುವದು ಒಂದು ಅಸಹಜ,ಅನೈಸರ್ಗಿಕ ಕ್ರಿಯೆ ಎಂದು ಭಾವಿಸಬಹುದು.
  ಆದರೆ ಇಲ್ಲಿ ನನಗೊಂದಿಷ್ಟು ಪ್ರಶ್ನೆಗಳು ಮೂಡುತ್ತಿವೆ:
  ಬದಲಾದ (?) ಇವತ್ತಿನ ಕಾಲಘಟ್ಟದಲ್ಲಿ ‘ಸಲಿಂಗಕಾಮ’ವೆನ್ನುವದು ಅದು ಹೇಗೆ ದಿಢೀರ್ ಅಂತ ಉದ್ಭವಿಸಿತು? ಸಲಿಂಗಕಾಮಕ್ಕೆ ಆಯಾ
  ವ್ಯಕ್ತಿಯಲ್ಲಿನ ವರ್ಣತಂತುಗಳ ಅಸಮತೋಲನ ಕಾರಣವಾಗಿರಬಹುದು.ಇಂಥದೊಂದು ಅಸಮತೋಲನ ಇದ್ದಕ್ಕಿದ್ದಂತೆ ಶುರುವಾಯಿತೇ,
  ಅಥವಾ ನೂರಿನ್ನೂರು ವರ್ಷಗಳ ಹಿಂದೆಯೇ ಇಂಥದೊಂದು ಚಟುವಟಿಕೆ ಚಾಲ್ತಿಯಲ್ಲಿತ್ತೆ ಎನ್ನುವದನ್ನೂ ನಾವು ಗಮನಿಸಬೇಕಾಗಿದೆ.
  ಹಾಗೊಂದು ವೇಳೆ ತುಂಬ ಹಿಂದೆಯೇ ಈ ರೀತಿಯ ಚಟುವಟಿಕೆಗಳು ಗುಪ್ತವಾಗಿ ನಡೆದುಕೊಂಡು ಬಂದಿದ್ದಲ್ಲಿ,ಇವತ್ತಿನ ಸ್ವೇಚ್ಚಾಚಾರವೇ
  ಅದನ್ನು ಇನ್ನಷ್ಟು ಶೋಕೇಸ್ ಮಾಡುವದರಲ್ಲಿ ಸಂಶಯವಿಲ್ಲ.ಹಾಗಂತ,ಇವತ್ತಿನ ನಮ್ಮ ನ್ಯಾಯಾಲಯಗಳು ಇದ್ದಕ್ಕಿದ್ದಂತೆಯೇ “ಇಂಥದ್ದನ್ನೆಲ್ಲ ನಾನು ಒಪ್ಪುವದಿಲ್ಲ..”
  ಅಂತ ತೀರ್ಪು ನೀಡಿಬಿಟ್ಟರೆ ಸಾಕೇ?
  ಇಲ್ಲೊಬ್ಬ ಹುಡುಗನಿಗೆ ತನ್ನದೇ ಪ್ರಾಯದ ಹುಡುಗಿಯನ್ನು ನೋಡಿದಾಗ ಪ್ರೀತಿಯ,ಸುಕೋಮಲ ಭಾವನೆಗಳು ಮೂಡಬೇಕೆಂದು ನಿಸರ್ಗವೇನೋ
  ನಿರ್ದೇಶಿಸುತ್ತದೆ.ಆದರೆ ಸದರಿ ಹುಡುಗನಿಗೆ ಪ್ರಕೃತಿಯ ಈ ಆದೇಶವನ್ನು ಪಾಲಿಸಲಾಗುತ್ತಿಲ್ಲ.ಬದಲಾಗಿ ಇನ್ನೊಬ್ಬ ಹುಡುಗನನ್ನು ನೋಡಿದಾಗ
  ಪ್ರೀತಿಯ ಭಾವನೆ ಮೂಡುತ್ತಿದೆ!
  ಇಲ್ಲಿ ತಪ್ಪು ಯಾರದು?
  ತಪ್ಪು ಹುಡುಗನಿಗೆ ತಪ್ಪು ನಿರ್ದೇಶನ ಕೊಟ್ಟ ಪ್ರಕೃತಿಯದೇ?
  ಅಥವಾ ಕೊಟ್ಟ ಆದೇಶವನ್ನು ಪಾಲಿಸಲಾಗದಂಥ ಮನಸ್ಥಿತಿ/ದೈಹಿಕಸ್ಥಿತಿಯಲ್ಲಿರುವ ಹುಡುಗನದೇ?
  ತಮಾಷೆಯೋ,ವ್ಯಂಗ್ಯವೋ ಅಥವಾ ದುರಂತವೋ-ಪ್ರಕೃತಿಗೆ ಶಿಕ್ಷೆ ವಿಧಿಸುವ ಅಥವಾ ನಿಯಂತ್ರಣದಲ್ಲಿಡುವ ಶಕ್ತಿ ನಮ್ಮ ನ್ಯಾಯಾಲಯಗಳಿಗಿಲ್ಲ.
  ಇಲ್ಲಿ ಸುಲಭಕ್ಕೆ ಸಾಧ್ಯವಾಗುವ ಕೆಲಸವೆಂದರೆ,ಅಂಥ ಹುಡುಗ/ಹುಡುಗಿಯನ್ನು ಶಿಕ್ಷಿಸುವದು..
  ನನಗನ್ನಿಸುವಂತೆ,ನ್ಯಾಯಾಲಯ ತನ್ನ ತೀರ್ಪು ನೀಡುವ ಮೊದಲಿಗೆ ‘ಇಂಥದೊಂದು’ ಕೆಲಸ ಮಾಡುವ ವ್ಯಕ್ತಿಯ ಮಾನಸಿಕ ಸ್ಥಿತಿಯ ಬಗ್ಗೆ
  ಇನ್ನೊಂದು ವ್ಯವಸ್ಥೆ (ಅಂದರೆ,ಸರ್ಕಾರ) ಯಾವುದಾದರೂ outlet ಒದಗಿಸಿದೆಯೇ ಅಂತ ತಿಳಿದುಕೊಳ್ಳಬೇಕು.’ದೋಷ ಪರಿಹಾರ’ಕ್ಕಾಗಿ ಅವರಿಗೆ
  ಯಾವ ರೀತಿಯ ದೈಹಿಕ/ಮಾನಸಿಕ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ ಅಂತ ಪರಿಶೀಲಿಸಬೇಕು.ಹಾಗೊಂದು ವೇಳೆ ಇಂಥ ‘ಪರಿವರ್ತನಾ ವ್ಯವಸ್ಥೆ’ಯನ್ನು
  ಸರ್ಕಾರ ಮಾಡಿಲ್ಲವೆಂದಾದಲ್ಲಿ,ಅದನ್ನು ಮೊದಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು.ಯಾಕಂದರೆ,ನಿರುದ್ಯೋಗದಿಂದಾಗಿಯೋ ಅಥವಾ
  ಮೋಜಿನ ಜೀವನಕ್ಕಾಗಿಯೋ ಬೈಕ್ ಕಳ್ಳತನ ಮಾಡುವದಕ್ಕೂ ಮತ್ತು ದೈಹಿಕ/ಮಾನಸಿಕ ಅಸಮತೋಲತೆಯಿಂದ ಸಲಿಂಗಕಾಮದೆಡೆಗೆ ವಾಲುವವರಿಗೂ
  ವ್ಯತ್ಯಾಸವಿದೆಯಲ್ಲವೇ?
  ಇದ್ಯಾವುದನ್ನೂ ಮಾಡದೇ ಸಲಿಂಗಕಾಮ ಅಮಾನ್ಯ ಅಂತ ತೀರ್ಪು ನೀಡುವದರಲ್ಲಿ ಯಾವ ಪುರುಷಾರ್ಥವೂ ಇಲ್ಲ.ಅಲ್ಲಿಗೆ,ಇದೂ ಕೂಡ ಭಾರತೀಯ
  ದಂಡಸಂಹಿತೆಯಲ್ಲಿನ ಒಂದು ಕಲಂ ಆಗಿ ನಿರ್ಜೀವವಾಗುತ್ತದೆ.ಇಂಥ ಸಾಕಷ್ಟು ಕಲಂಗಳ ಪೈಕಿ “ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಶಿದ್ಧ”, “ಗುಟಖಾ ನಿಷೇಧ”,
  “ವಾಹನ ಚಾಲನೆಯಲ್ಲಿ ಮೊಬೈಲ್ ನಿಶಿದ್ಧ” ಎಂಬ ಅಪರಾಧಗಳ ಪಟ್ಟಿ ಇವತ್ತು ಎಲ್ಲಿಗೆ ಬಂದು ನಿಂತಿದೆ ಅಂತ ನಮಗೆಲ್ಲರಿಗೂ ಗೊತ್ತಿದೆ.
  ಶಿಕ್ಷೆ ಎನ್ನುವದು ಅಪರಾಧಿಯ ಮನಸ್ಥಿತಿಗೆ ಅಳವಡಿಸಬೇಕೇ ಹೊರತು ಅಪರಾಧಿಗಲ್ಲ-ಎನ್ನುವದು ನಾಗರಿಕ ಪ್ರಪಂಚದ ಘೋಷಣೆ.
  ಅದರರ್ಥ:ಅಪರಾಧಿಯ ಮನಸ್ಥಿತಿಯನ್ನು ಬದಲಾಯಿಸುವದು.ಈ ಕೆಲಸವನ್ನು ನಮ್ಮ ಜೈಲುಗಳು ಮಾಡುತ್ತಿವೆಯೇ?ಹಾಗೆಯೇ ಸಲಿಂಗಕಾಮಿಯಲ್ಲಿ ಕೊರತೆಯೇನಿದೆ ಅಂತ ತಿಳಿಯದೇ,
  ಅವರ ವೈದ್ಯಕೀಯ ಜರೂರತ್ತನ್ನು fulfill ಮಾಡದೇ ಶಿಕ್ಷೆ ಜಾರಿಗೊಳಿಸುವದು ಅಮಾನವೀಯತೆ ಅಂತ ನನಗೆ ಅನಿಸುತ್ತಿದೆ.
  ಹಾಗೆಯೇ ಇವತ್ತು ನಮ್ಮಲ್ಲಿ ಹುಡುಗ-ಹುಡುಗಿಯ ಪ್ರೇಮದ ಕಾರಣಗಳಿಂದ ಘಟಿಸುವ ಮರ್ಯಾದಾ ಹತ್ಯೆಗಳಿಗೂ,ಪರಿಹಾರ ಕೊಡದೇ ಸಲಿಂಗಕಾಮಕ್ಕೆ ಶಿಕ್ಷೆ ವಿಧಿಸುವ ನ್ಯಾಯಾಲಯದ ತೀರ್ಪಿಗೂ ಯಾವ ವ್ಯತ್ಯಾಸವೂ ಕಾಣಿಸದು..
  ಮೊನ್ನೆ ಅಂತರ್ಜಾಲದಲ್ಲಿ ಕೆಲವೊಂದು ವೀಡಿಯೊ ಗಮನಿಸುತ್ತಿರುವಾಗ ಒಂದು ವಿಷಯ ನನ್ನ ಗಮನ ಸೆಳೆಯಿತು.ಇದು ನೇರವಾಗಿ ಸಲಿಂಗಕಾಮಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಕೂಡ ನಿಸರ್ಗವು ತನ್ನಲ್ಲಿ ಏನೇನು ಅತಿರೇಕಗಳನ್ನು ಮತ್ತು ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ ಅಂತ ಅಚ್ಚರಿಯಾಯಿತು.ಆಸಕ್ತಿಯುಳ್ಳವರಿಗೆ ಏನಾದರೂ ಹೊಸ ವಿಷಯ ತಿಳಿಸೋಣ ಅಂತ ಈ ಟಿಪ್ಪಣಿ:
  ಇವರು ಕೀಸ್ ಮೋಯ್ಲಿಕರ್ (Kees Moeliker).
  ಸತ್ತ ಪ್ರಾಣಿಗಳನ್ನು ಸಂಗ್ರಹಿಸುವ ವೃತ್ತಿಯಲ್ಲಿರುತ್ತಾರೆ.ನೆದರ್ ಲ್ಯಾಂಡಿನ ರೊಟ್ಟರ್ ಡ್ಯಾಮ್ ನಲ್ಲಿ ಕೆಲಸ.ಒಂದು ದಿನ ತಮ್ಮ ಕೆಲಸದ ಮಧ್ಯೆ ಅಚ್ಚರಿಗೊಳಗಾಗುವ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಸುತ್ತಲೂ ಗಾಜಿನ ಗೋಡೆಯನ್ನಾವರಿಸಿದ ಅವರ ಕಚೇರಿಯ ಗೋಡೆಗೆ ಅದು ಗಾಜು ಅಂತ ತಿಳಿಯದೇ ಒಂದು ಬಾತುಕೋಳಿ ಅಪ್ಪಳಿಸಿ ಸತ್ತುಹೋಗುತ್ತದೆ.ಇದನ್ನು ಗಮನಿಸಿದ ಕೀಸ್ ಮೋಯ್ಲಿಕರ್ ಬಾತುಕೋಳಿಯನ್ನು ನೋಡಲು ಹೊರಗೆ ಬರುತ್ತಿದ್ದಂತೆ ಇನ್ನೊಂದು ಆಶ್ಚೈರ್ಯಕರ ಘಟನೆಗೆ ಸಾಕ್ಷಿಯಾಗುತ್ತಾರೆ.ಅಲ್ಲಿ ಸತ್ತು ಮಲಗಿದ್ದ ಕೋಳಿಯ ಮೇಲೆ ಇನ್ನೊಂದು ಜೀವಂತ ಕೋಳಿಯು ರತಿಕ್ರೀಡೆಯಾಡುವ ಪ್ರಯತ್ನ ಮಾಡುತ್ತಿರುತ್ತದೆ!
  ಕುತೂಹಲದಿಂದ ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಿದಾಗ-ಸತ್ತ ಕೋಳಿ ಮತ್ತು ಜೀವಂತ ಕೋಳಿ ಎರಡೂ ಸಲಿಂಗಿಗಳು ಅನ್ನುವ ವಿಷಯ ಕೀಸ್ ಮೋಯ್ಲಿಕರ್ ಅವರಿಗೆ ಗೊತ್ತಾಗುತ್ತದೆ.
  ಸದರಿ ಘಟನೆಯನ್ನು ಅವರು Necrophilia ಅಂತ ಗುರುತಿಸುತ್ತಾರೆ. ಸತ್ತ ವ್ಯಕ್ತಿಯ ಮೇಲಿನ ಮೋಹದಿಂದಾಗಿ ಶವದ ಮೇಲೂ ಕೂಡ ರತಿಕ್ರೀಡೆಯಾಡಬಯಸುವ ವಾಂಛೆಗೆ ‘ನೆಕ್ರೋಫಿಲಿಯ’ ಅಂತ ಕರೆಯಲಾಗುತ್ತದೆ.
  ಇಂಥ ವರ್ತನೆಯನ್ನು ನೋಡಿದ ಬಳಿಕ ಕುತೂಹಲದ ಸಂಶೋಧನೆಗೆ ಇಳಿಯುತ್ತಾರೆ.ಪ್ರಾಣಿ-ಪಕ್ಷಿಗಳಲ್ಲೂ ಕೂಡ ಸಲಿಂಗಕಾಮ,ಕಾಮ ವೈಪರಿತ್ಯ ಮತ್ತು Necrophilia ಉದ್ಭವಿಸಬಲ್ಲದು ಅಂತ ಕೀಸ್ ಮೋಯ್ಲಿಕರ್ ತಮ್ಮ ಮುಂದಿನ ಸಂಶೋಧನೆಗಳಲ್ಲಿ ಹಂತ ಹಂತವಾಗಿ ಕಂಡುಕೊಳ್ಳುತ್ತಾರೆ.ಅವರ ಸಂಶೋಧನೆಯ ಕ್ಲಿಪ್ಪಿಂಗ್ ಇಲ್ಲಿ ನೋಡಬಹುದು.
  http://www.ted.com/talks/kees_moeliker_how_a_dead_duck_changed_my_life.html
  ಕೊನೆಯದಾಗಿ,ಸಲಿಂಗಕಾಮವು ಒಳ್ಳೆಯದೋ,ಕೆಟ್ಟದ್ದೋ ಎಂಬುದನ್ನು ಸಂಶೋಧಕರು ಮತ್ತು ವೈದ್ಯಕೀಯ ಜಗತ್ತು ಹೇಳಬಹುದಾಗಿದೆ.ಆದರೆ,ಪ್ರಾಣಿ-ಪಕ್ಷಿಗಳಿಗಿಂತ ಹೆಚ್ಚಿನ ಬುದ್ಧಿಮತ್ತೆಯನ್ನು ಮತ್ತು ಅರಿವನ್ನು ಹೊಂದಿರುವ ಮನುಜ ಆದಷ್ಟೂ ನಿಸರ್ಗಕ್ಕೆ ಹತ್ತಿರವಾಗಿ ಬದುಕುವದನ್ನು ಕಲಿಯಬೇಕಾಗಿದೆ,ನಿಸರ್ಗದ ವೈಪರಿತ್ಯವನ್ನು ಅರಿಯಬೇಕಿದೆ ಮತ್ತು ಸೃಷ್ಟಿಯ ನಿಯಮಗಳನ್ನು ಪಾಲಿಸಬೇಕಿದೆ..
  -Rj

  ಪ್ರತಿಕ್ರಿಯೆ
 5. Jyothi Kadladi

  Madam, tumba channagi barediddeeri.. Howdu.. Vasudhendra avara ee pustake tumba different aagide.. ellaroo.. yaavude purvagrahavillade odidare tumba ishta aagabahudaada katha sankalana idu.. nimma anisikegalu tumba channagive.. naanoo kooda avadhiyalli… 25 Dec na issuedalli ee pustakada bagge barediddeeni..

  ಪ್ರತಿಕ್ರಿಯೆ
 6. Roopa Satish

  hey Sampu….
  pustaka odide, very touching, hats off….
  While the subject no more a taboo, time to open up and accept ashte.
  …….. nimma vimarshe sooperb, sooperb!…….

  ಪ್ರತಿಕ್ರಿಯೆ
 7. ಹನುಮಂತ ಹಾಲಿಗೇರಿ

  ಕಥೆಗಳನ್ನು ಓದಿಸುವ ಕುತೂಹಲ ಹುಟ್ಟಿಸಿದ್ದಿರಿ, ಧನ್ಯವಾದಗಳು

  ಪ್ರತಿಕ್ರಿಯೆ
 8. Badarinath Palavalli

  ವಸುಧೇಂದ್ರರ ಈ ಹೊತ್ತಿಗೆ ನಾನೂ ಓಡಬೇಕಿದೆ, ಇನ್ನೂ…
  “ಎಲ್ಲರ ಒಡಲಲ್ಲೂ ಇರುವ ಕ್ರೋಮೋಸೋಮ್ ಗಳು ಸ್ವಲ್ಪ ಭಿನ್ನವಾಗಿ ರಚನೆಯಾಗಿ, ಪ್ರಕೃತಿಯ ಅತ್ಯಂತ ಸಹಜ ನಿರ್ಮಾಣಗಳಲ್ಲಿ ಒಂದಾದ ಈ ಸಲಿಂಗ ಕಾಮಿಗಳು (ಅಥವಾ ಭಿನ್ನ ಲಿಂಗಿಗಳು)” ಎಂಬ ವ್ಯಾಖ್ಯಾನ ಸರಿಯಾಗಿದೆ.
  ಮೊನ್ನೆ ಒಬ್ಬರು ಫೇಮಸ್ ಗುರೂಜೀ ಪುರಾಣಗಳಲ್ಲೂ ಸಲಿಂಗ ಕಾಮ ಎಂದು ಮಾತಾಡಿದ ನೆನಪು!

  ಪ್ರತಿಕ್ರಿಯೆ
 9. Ishwara Bhat

  ನಾನಿನ್ನೂ ಓದಿಲ್ಲ. ಓದಬೇಕು ಅನ್ನಿಸುತ್ತಿದೆ ನಿಮ್ಮ ಲೇಖನವನ್ನೋದಿ.

  ಪ್ರತಿಕ್ರಿಯೆ
 10. Shankar

  S….. ಒಂದುಸಲ ಪುಸ್ತಕ ಓದಬೇಕು ಅನಿಸುತ್ತಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: