ಸಂಪು ಕಾಲಂ : ಫ್ರಾಸ್ಟ್ ನ ಕಾವ್ಯದ ‘ಸಂದರ್ಭಾಧಾರಿತ ಭಾವ’ – ಒಂದು ವಿಶ್ಲೇಷಣೆ


“ಎನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ…”, ಬೇಂದ್ರೆಯವರ ಈ ಸಾಲುಗಳು ಜನಪ್ರಿಯ ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ಗೆ ಅತಿ ಸೂಕ್ತವಾಗಿ ಅನ್ವಯಿಸುತ್ತದೆ. ಈತ ಆಧುನಿಕ ಕವಿಗಳಾದ ಟಿ. ಎಸ್. ಎಲಿಯಟ್, ಎರ್ಜಾ ಪೌಂಡ್ ರವರ ಸಮಕಾಲೀನರಾಗಿದ್ದರೂ ಆಧುನಿಕ ಹಾಗೂ ಟ್ರೆಡಿಶನಲ್ ಕಾವ್ಯದ ಮಿಳಿತದಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಫ್ರಾಸ್ಟ್ ನ ವಯಕ್ತಿಕ ಜೀವನ ಅತ್ಯಂತ ಕಷ್ಟಕರವೂ ಹಾಗೂ ವಿಷಾದದಿಂದ ಕೂಡಿದುದೂ ಆಗಿತ್ತು. ಬಹುಷಃ ಅವರ ಇದೇ ಅನುಭವಸಿರಿಯು, “ಅನುಭವದ ಪಾಲೊಳು ವಿಚಾರ ಮಂಥನವಾಗೆ ಜನಿಯಿಕುಂ ಜ್ಞಾನ ನವನೀತನದೆ ಸುಖದಂ” ಎಂಬಂತೆ ಇದೇ ಅನುಭವದ ಹಿನ್ನೆಲೆಯಲ್ಲಿ ಮತ್ತಷ್ಟು ಅನುಭಾವತೆಯ ಅವಲೋಕನ ಸೇರಿದರೆ ಉಂಟಾಗುವ ಚಮತ್ಕಾರವೇ ಫ್ರಾಸ್ಟ್ ನ ಕಾವ್ಯ! ಇದೇ ಕಾವ್ಯ ಸಂಪತ್ತು ಅವರಿಗೆ ನಾಲ್ಕು ಬಾರಿ ಪುಲಿಟ್ಜ್ಯರ್ ಪ್ರಶಸ್ತಿಯನ್ನು ದಕ್ಕಿಸಿದೆ.
ಇನ್ನು ಫ್ರಾಸ್ಟ್ ನ ಕಾವ್ಯದೆಡೆಗೆ ವಿಹರಿಸೋಣ. ಇವರ ಕಾವ್ಯವು ಎಂದಿಗೂ ಕಲೆಗೆ ದನಿಗೂಡಿಸುವ, ಜೀವಂತವಾಗಿಸುವ ಕನಸಾಗಿತ್ತು. ಒಮ್ಮೆಲೇ ಓದಿದರೆ ಅತಿ ಸರಳವಾಗಿ ಕಾಣುವ ಇವರ ಬರಹಗಳು, ಆಂತರ್ಯದ ಒಳಹೊಕ್ಕು ನೋಡಿದಾಗ, ಬಾಳಿನರ್ಥದ ವೇದಾಂತ, ತಾತ್ವಿಕತೆಗಳ ಮಜಲುಗಳನ್ನು ಬಿಡಿಸುವ ಆಳ ಮತ್ತು ಗಾಂಭೀರ್ಯತೆಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ, ಫ್ರಾಸ್ಟ್ ನ ಕಾವ್ಯದ ಮತ್ತೊಂದು ಕೌತುಕ, ಅವರ ಪದ್ಯಗಳ ‘ಓಪನ್ ಎನ್ ಡೆಡ್ ನೆಸ್ಸ್’ ಅಥವಾ ನಾನಾ ವ್ಯಾಖ್ಯಾನ ರೂಪ. ಫ್ರಾಸ್ಟ್ ನೇ ಹೇಳಿರುವಂತೆ ತನ್ನ ಕಾವ್ಯವು ‘ಕಾನ್ ಟೆಕ್ಸ್ಟ್ ಬೇಸ್ಡ್’, ಅಂದರೆ ಸಂದರ್ಭಾನುಸಾರವಾಗಿ ಹಾಗೂ ವಿಷಯಾಧಾರಿತವಾಗಿರುತ್ತದೆ.
ಈ ಮೇಲ್ನುಡಿಯನ್ನು ಅರ್ಥೈಸಲು ಒಂದೆರಡು ಉದಾಹರಣೆಗಳನ್ನು ಗಮನಿಸೋಣ: ಫ್ರಾಸ್ಟ್ ನ “Stopping by the Woods on a Snowy Evening” ಹಾಗೂ “Desert Places”. ಈ ಎರಡೂ ಪದ್ಯಗಳೂ ಒಂದೇ ಪರಿಸರದಲ್ಲಿ ಬೆಳೆಯುತ್ತದೆ. ಎರಡೂ ಹಳ್ಳಿಗಾಡಿನ ಹಿನ್ನೆಲೆಯಲ್ಲೇ ರಚಿತವಾಗಿದ್ದು, ಎರಡರಲ್ಲೂ ಒಂದೇ ವಿಧವಾದ ನಿಶ್ಚಲತೆ, ಚಳಿಗಾಲದ ಸಂಜೆಗತ್ತಲು ಹಾಗೂ ಹಿಮದ ಸನ್ನಿವೇಶ ತುಂಬಿರುತ್ತದೆ. ಆದರೆ ಕುತೂಹಲವೆಂದರೆ ಅದೆರಡೂ ತದ್ವಿರುದ್ಧ ಭಾವಗಳನ್ನು ಹೊಂದಿದೆ. ಒಂದೇ ವಾತಾವರಣ, ಒಂದೇ ದೃಶ್ಯ ಕವಿಯ ಮನಸ್ಸಿಗೆ, ಭಾವರೂಪತೆಗೆ ಅನುಸಾರವಾಗಿ ಎರಡು ವಿಭಿನ್ನ ಸಿದ್ಧಾಂತಗಳಾಗಿ ರೂಪುಗೊಂಡಿದೆ. ಇಲ್ಲಿ ನಾವು ಕಾವ್ಯದ ಸ್ವಭಾವತಃ ಬಹುರೂಪ ಹಾಗೂ ಅದರ ಎಲ್ಲೆ ಇರದ ಸ್ವಾತಂತ್ರ್ಯವನ್ನು ಕಾಣಬಹುದು.
“Stopping by the Woods” ಪದ್ಯವು ಚಳಿಗಾಲದ ಹಿಮಭರಿತ ಸಂಜೆಗತ್ತಲು, ಕಾಡದಾರಿಯಲ್ಲಿ ಆರಂಭಗೊಳ್ಳುತ್ತದೆ. ಕುದುರೆಯನೇರಿದ ದಾರಿಹೋಕ (ಕವಿ) ನೊಬ್ಬ ನಡುವೆ ಕಂಡ ಕಾಡನ್ನು, ಅದರ ಮನೋಹರ ದೃಶ್ಯವನ್ನು ರಮಿಸುತ್ತಾ ಅಲ್ಲೇ ನಿಲ್ಲುತ್ತಾನೆ. ಹಿಮದಿಂದ ಮುಳುಗುತ್ತಿರುವ ಆ ಕಾಡು ಯಾರದೆಂಬುದನ್ನು ಆತ ಅರಿತಿರುತ್ತಾನೆ. ಆ ಗೊಂಡಾರಣ್ಯ ಮತ್ತು ಶೀತಲ ಸರೋವರದ ಸೌಂದರ್ಯತೆಯನ್ನು ನೋಡುತ್ತಾ ಕಳೆದು ಹೋಗಿದ್ದ ಆತನಿಗೆ, ತನ್ನ ಕುದುರೆಯೇನೆಂದುಕೊಳ್ಳುತ್ತದೆಯೋ ಎಂಬ ಅನುಮಾನ. ಅದ್ಭುತವಾದ, ಮಾರ್ಮಿಕವಾದ, ಸೆಳೆಯುವ ಆ ಕಾಡನ್ನು ಆನಂದಿಸುತ್ತಿದ್ದ ಆತನಿಗೆ ಥಟ್ಟನೆ ಹೊಳೆಯುವುದು ತನ್ನ ಜವಾಬ್ದಾರಿಗಳು ಮತ್ತು ಹೊಣೆಗಾರಿಕೆ. “Miles to go before i sleep, miles to go before i sleep”, ಎಂದು ಹೇಳಿ ಹೊರಡುತ್ತಾನೆ.
ಈ ಪದ್ಯವನ್ನು ಕೂಲಂಕುಷವಾಗಿ ಅವಲೋಕಿಸಿದರೆ, ಕವಿ ಕಂಡ ಕಾಡು ಜೀವನದಾಚೆಯ, ಪರಲೋಕವನ್ನು ಸಂಕೇತಿಸುತ್ತದೆ. ಅದು ಕವಿಯನ್ನು ಬಹಳಷ್ಟು ಆಕರ್ಷಿಸುತ್ತದೆ. ಇದು ಆತ್ಮಹತ್ಯೆಯ ಅಭಿಲಾಷೆಯೂ ಆಗಿರಬಹುದು. ಸಮಾಜದ ಸಂಕೇತವಾಗಿರುವ ತನ್ನ ಕುದುರೆಯ ವರ್ತನೆಯನ್ನು ಕಂಡು, ಇವನ ಮನದಿಂಗಿತವು ಎಲ್ಲಿ ನಗೆಪಾಟಲಾಗುವುದೋ ಎಂದು ಹೆದರುತ್ತಾನೆ. ಆ ಮರಣದ ಭಾವಾತೀತ ಅನುಭವ, ಆ ಚಿರನಿದ್ರೆ, ಪ್ರಶಾಂತತೆ ಅವನನ್ನು ಕಾಡಿದರೂ, ತನಗೆ ತನ್ನ ಬದುಕು, ಜವಾಬ್ದಾರಿಗಳು, ಸಂಬಂಧಗಳು ನೆನಪಾಗಿ, ಜೀವನದಲ್ಲಿ ತಾನು ಸಾಧಿಸುವುದು ಸಾಕಷ್ಟಿದೆ ಎಂದರಿತು, ಹೊರಡಲೇ ಬೇಕು ಎಂಬ ಧೃಡ ನಿರ್ಧಾರಕ್ಕೆ ಬರುತ್ತಾನೆ. ಈ ಅನಿಸಿಕೆ ಆತನ ಜವಾಬ್ದಾರಿಯುತ, ಸಂತಸದ ಬದುಕನ್ನು ಹಿಂಪಡೆಯುವ, ಅದನ್ನು ಪ್ರೇರೇಪಿಸುವ ಆಶಯ ಮತ್ತು ನಿರೀಕ್ಷೆಗಳಿಂದ ಕೂಡಿದೆ. ಈ ಪದ್ಯವನ್ನು ಮತ್ತೊಂದು ರೀತಿ ವ್ಯಾಖ್ಯಾನಿಸಿದರೆ, ಸುಖದ, ಬೇಜವಾಬ್ದಾರಿತನಗಳ, ಪಲಾಯನವಾದದ ಬದುಕನ್ನು ಕವಿ ಆಶಿಸಿದರೂ ಹಿಮ್ಮೆಟ್ಟಿ ಛಲದಿಂದ ಬದುಕಿನ ಸವಾಲುಗಳನ್ನು ಎದುರಿಸಲು ಮುಂದಾಗುತ್ತಾನೆ. ಈ ಪರಿಯ, ‘ದೃಷ್ಟಿಯಂತೆ ಸೃಷ್ಟಿ’ ಎಂಬಂತೆ ಚಿತ್ರಣ ನೀಡುವ ಸಾಮರ್ಥ್ಯ ಫ್ರಾಸ್ಟ್ ನದು.
“Desert Places” ನ ನಿರ್ವಿಣ್ಣತೆ, ಭೀಕರತೆಗಳು ಪ್ರಾರಂಭಗೊಳ್ಳುವುದು ಅದೇ ಚಳಿಗಾಲದ ಹಿಮ ಸಂಜೆಯಿಂದಲೇ. ಚಳಿಗಾಲದ ಹಿಮಭರಿತ ಸಂಜೆಗತ್ತಲು, ಕಾಡದಾರಿ. ದಾರಿಹೋಕ ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾನೆ. ನೆಲವೆಲ್ಲಾ ಹಿಮದಿಂದ ಆವೃತಗೊಂಡಿದೆ. ಆದರೆ ಕೆಲವೇ ಗಿಡದ ಕಳೆ, ಮರದ ದಿಮ್ಮಿಗಳು ಕಾಣುತ್ತಿವೆ. ಪ್ರಾಣಿಗಳೆಲ್ಲಾ ಅದರ ಗೂಡಿನೊಳಗೆ ಬಚ್ಚಿಟ್ಟುಕೊಂಡಿವೆ. ಈ ದಾರಿಹೋಕ ತಾನೊಬ್ಬೊಂಟಿಗ. ಆ ನಿರ್ಜನತೆ, ನಿಶ್ಚಲ ಕಾಡು, ಬಿಳಿ ಹಿಮ ನೋಡುತ್ತಾ ಆ ವ್ಯಕ್ತಿಗೆ ಮತ್ತಷ್ಟು ಒಂಟಿತನ ಕಾಡುತ್ತದೆ. ಇದರಲ್ಲಿ ಕವಿ ಕಾಣುವುದೆಲ್ಲಾ ದುಗುಡ, ಶೂನ್ಯತೆ ಮತ್ತು ಖಿನ್ನತೆ. ತನ್ನ ಜೀವನದ ಕಷ್ಟಗಳಿಂದ ದುಃಖಿತನಾದ ಕವಿ ತಾನನುಭವಿಸಿದಂತೆ ಪ್ರಕೃತಿಯನ್ನು ಕಾಣುತ್ತಾನೆ. ಆದರೂ ಈ ಭಯಾನಕ ಪರಿಸರ ತನ್ನನ್ನು ಭಯಪಡಿಸಲಾರದು ಏಕೆಂದರೆ ಭಯಪಡಲು ತನ್ನದೇ ಆದ ತನ್ನೊಳಗಿನ ಮರುಭೂಮಿ ಸ್ಥಳಗಳಿವೆ” ಎಂದು ನುಡಿಯುತ್ತಾನೆ.

ಈ ಕವನವು ಕವಿಯ ಋಣಾತ್ಮಕ ಮನಸ್ಥಿತಿಯನ್ನು ಬಿಂಬಿಸುತ್ತದೆ. ಕವಿಯು ಆ ಭಯಗ್ರಸ್ಥ ವಾತಾವರಣದಲ್ಲಿ ಭಯದ ಭ್ರಮೆಗೊಳಗಾದರೂ ಹೆದರಲಾರ. ಏಕೆಂದರೆ ಅವನ ಒಳಗಣ ಮಾನಸಿಕ ನೋವು ಈ ಎಲ್ಲಾ ಒಂಟಿತನ, ಹತಾಶೆಗೆ ಮೀರಿದ್ದು. ಕವಿ ಹೇಳುತ್ತಾನೆ ತನ್ನ ಮಾನಸ ಸರೋವರವು ಬತ್ತು ಹೋಗಿ ಒಂದು ಒಣ ಮರುಭೂಮಿಯಾಗಿದೆ ಎಂದು. ಇದರಿಂದ ಮನಶಾಸ್ತ್ರದ ಒಳಸುಳಿಗಳನ್ನು, ನಮ್ಮ ಜೀವನದ ಅನುಭವಗಳು ಮನಸಿನ ಮೇಲೆ ಬೀರುವ ಪ್ರಭಾವಗಳನ್ನು ಅರಿಯಬಹುದು. ಘಾಸಿಗೊಂಡ ಮನಸಿನ ಆಂತರಿಕ ಸ್ವಭಾವಗಳನ್ನು ಅತ್ಯಂತ ಸಂವೇದನಾಶೀಲವಾಗಿ ಬಿಂಬಿಸುವುದು ಫ್ರಾಸ್ಟ್ ನ ಕಲಾತ್ಮಕತೆಯ ಪ್ರತೀಕ.
ನಮ್ಮ ನೋಟ, ವಿಚಾರಗಳು ನಮ್ಮ ಅನುಭವದಿಂದ ಆವೃತವಾಗಿರುತ್ತದೆ ಎಂಬುದಕ್ಕೆ ಈ ಎರಡು ಪದ್ಯಗಳು ಸಾಕ್ಷಿಯಾಗಿವೆ. ಇದೇ ಪ್ರಾಸಂಗಿಕ, ಅನುಭವಗಳ ಪುಟಗಳನ್ನು ತಿರುವುತ್ತಿದ್ದ ನನಗೆ ನೆನಪಾದುದು ಬೇಂದ್ರೆಯವರ ಈ ಎರಡು ಸಾಲುಗಳು; “ಬಿದಿಗಿ ಚಂದ್ರನ ಚೊಗಚಿ ನಗಿ ಹೂ….” ಮತ್ತು “ಹುಣ್ನಿಮಿ ಚಂದಿರನ ಹೆಣ ಬಂತು ಮುಗಿಲಾಗ ತೇಲುತಾ ಹಗಲಾ….”. ಎರಡರಲ್ಲೂ ಕವಿ ಕಂಡದ್ದು ಚಂದ್ರನನ್ನೇ. ಆದರೆ ಅದನ್ನು ಕಂಡ ಸಂದರ್ಭ, ಪ್ರಸಂಗಗಳು ಬೇರೆ ಬೇರೆಯದಾಗಿತ್ತು!
ಹೀಗೆ ಫ್ರಾಸ್ಟ್ ನ ಕವಿತೆಯು ಸಂಧರ್ಭಾಧಾರಿತ ಭಾವವನ್ನು ಹೊಂದಿರುತ್ತದೆ. ಮತ್ತೆ ಮತ್ತೆ ಹತಾಶೆಯ, ಆಶೆ-ನಿರೀಕ್ಷೆಯ ತುಡಿತದಿಂದ ಈಜುತ್ತದೆ. ಈತನ ಮತ್ತೊಂದು ಅತ್ಯಂತ ಚಮತ್ಕಾರೀ ಪದ್ಯವೆಂದರೆ, “Dust of Snow”. ಇದು ಅತ್ಯಂತ ಸಾಧಾರಣವಾಗಿ ಕಾಣುವ, ಎಂಟೇ ಸಾಲಿನ ಅತಿ ಚಿಕ್ಕ ಪದ್ಯ. ಆದರೆ ಇದರಲ್ಲೂ ಕವಿ ದುಃಖವನ್ನು (ಅಥವಾ ಸಾವನ್ನು) ಹಿಮ್ಮೆಟ್ಟಿ ಜೀವನ ಪ್ರೀತಿಗೆ ಮರಳುತ್ತಾನೆ. ಬದುಕಲು ಒಂದು ಹೊಸ ಹುರುಪನ್ನು, ಮರುಜನ್ಮವನ್ನು ಪಡೆಯುತ್ತಾನೆ. ಈ ರೀತಿಯ ತನ್ನ ಅನುಭವಗಳನ್ನು ಕಾವ್ಯಧಾರೆಯ ರಸವಾಗಿಸುವ ಅತ್ಯಂತ ಯಶಸ್ವೀ ಕವಿಗಳಲ್ಲಿ ಫ್ರಾಸ್ಟ್ ಒಬ್ಬರಾಗುತ್ತಾರೆ. ಕಾವ್ಯದಲ್ಲಿ ತಮ್ಮ ಅನುಭವ ವಿಷಯಗಳೊಂದಿಗೆ, ಸಾಂಕೇತಿಕತೆ ಮತ್ತು ಪ್ರತಿಮಾವಿಧಾನಗಳ ಪ್ರಯೋಗದಿಂದ ನಮ್ಮನ್ನು ರೋಮಾಂಚನಗೊಳಿಸುತ್ತಾರೆ.

‍ಲೇಖಕರು G

June 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Uday Itagi

    Robert Frost ಬಗೆಗಿನ ಲೇಖನ ತುಂಬಾ ಚನ್ನಾಗಿದೆ. ನಾನು ಈ ಹಿಂದೆ ನೀವು ವಿಶ್ಲೇಶಣೆ ಮಾಡಿದ Stopping by woods on a snowy evening ಎನ್ನುವ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದು ನೆನಪಾಯಿತು. Good article!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: