
‘Khushwant Singh is No More’, ಈ ಮೆಸೇಜನ್ನು ಓದಿದ ಕೂಡಲೆ, ‘Are You Sure?’ ಅಂತ ಮರು ಟೈಪಿಸಿದ್ದೆ. ಅಜ್ಜನಿಗೆ ೯೯ ವರ್ಷ ವಯಸ್ಸಾಗಿತ್ತು, ಆದರೂ ಮನಸ್ಸು ಆ ಸುದ್ದಿಯನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ, ಇನ್ನೊಂದೆರಡು ಪುಸ್ತಕ…? ಮತ್ತೊಂದಿಷ್ಟು ಅಂಕಣ..? ಒಂದು ಬೊಗಸೆ ಜೋಕುಗಳು….? ಇನ್ನೂ ಅಜ್ಜನಿಂದ ಕೇಳುವ ಕಥೆಗಳು ಎಷ್ಟಿದ್ದವು… ಅದಕ್ಕೇ ‘Are You Sure?’ ಅಂತ ಕೇಳಿದ್ದೆ. ಒಂದು ಸಮೃದ್ಧ ಬದುಕು ಹೇಗಿರಬೇಕೋ ಹಾಗಿತ್ತು ಅವರ ಬದುಕು. ಅವರ ವಿದಾಯಕ್ಕೆ ಕಣ್ಣೀರಿಡಬೇಕೋ ಅಥವಾ ಆ ಬದುಕಿಗೆ ಒಂದು ಸಂಭ್ರಮದ ವಿದಾಯ ಹೇಳಬೇಕೋ? ಬಹುಶಃ ಕಣ್ಣೀರನ್ನು ಅವರೂ ಇಷ್ಟ ಪಡುತ್ತಿರಲಿಲ್ಲ, ಹಾಗೇ. ಹಿಗ್ಗಾಮುಗ್ಗ ಹೊಗಳುವುದನ್ನೂ. ಅವರು ಸುಮಾರು ವಿದಾಯ ಲೇಖನಗಳನ್ನು ಬರೆವಾಗ ಚಟಾಕಿ ಹಾರಿಸಿದ್ದೂ ಇದೆ, ’ಯಾರ ಬಗ್ಗೆ ಆದರೂ ಕಟು ಸತ್ಯಗಳನ್ನು ಹೇಳಬೇಕು ಅಂತ ಇದ್ದರೆ, ಬೆಸ್ಟ್ ಸಮಯ ಅಂದ್ರೆ ಅವರಿಗೆ ವಿದಾಯ ಹೇಳುವಾಗ, ಯಾಕೆ ಹೇಳಿ, ಹೇಗೂ ಅವರು ಬಂದು ಮಾನಹಾನಿ ಮೊಕದ್ದಮೆ ಹೂಡೋಲ್ಲ ನೋಡಿ’ ಅಂತ!
ನಮ್ಮ ಪ್ರಿಯರಾದವರ ಬಗ್ಗೆ ಯಾಕೆ ನಾವು ಕಟು ಸತ್ಯಗಳನ್ನು ಹೇಳಲು ಹಿಂಜರಿಯುತ್ತೇವೆ? ಒಂದು ಕಾರಣ ತೀರಾ ಸಮೀಪದಲ್ಲಿದ್ದಾಗ ವ್ಯಕ್ತಿತ್ವದ ಸಾಮಿಪ್ಯ ಅಷ್ಟೇ ಗ್ರಹಿಕೆಗೆ ಸಿಗುತ್ತದೆ, ಅದರ ಓರೆ ಕೋರೆಗಳಲ್ಲ, ಒಂದೋ ಅವರು ಪ್ರಿಯರಾದವರು ಅನ್ನುವ ಕಾರಣಕ್ಕೇ ಅವರು ಒಳ್ಳೆಯವರು ಎನ್ನುವ ಪೂರ್ವಗ್ರಹ ಅಥವಾ ಅವರು ಒಳ್ಳೆಯವರಾಗಿದ್ದರೆ ಮಾತ್ರ ನಮಗೆ ಪ್ರಿಯರಾಗುತ್ತಾರೆ ಎನ್ನುವ ಹೆದರಿಕೆ. ಇದೆರಡನ್ನೂ ಮೀರಿ ವ್ಯಕ್ತಿಯನ್ನು ಆ ವ್ಯಕ್ತಿಯ ಗುಣ ದೌರ್ಬಲ್ಯಗಳೆರಡರ ಜೊತೆ ಜೊತೆಯಲ್ಲಿಯೇ ನಮ್ಮದಾಗಿಸಿಕೊಳ್ಳುವುದು ನಿಜವಾದ ಸವಾಲು. ಇದೇ ಪಾತಳಿಯ ಮೇಲೆ ನಾನು ಖುಷ್ವಂತರನ್ನು ಇಷ್ಟ ಪಟ್ಟಿದ್ದೇನೆ, ಅವರ ಹೆಣ್ಣುಬಾಕತನ, ಅದ್ಭುತ ಪ್ರತಿಭೆ, ಅವರ ಬೆಚ್ಚಿಬೀಳಿಸುವ ವ್ಯಂಗ್ಯದ ಮೊನಚು, ಕಥೆಗಳಲ್ಲಿ ಸಿಗುವ ಅವರ ದಿಲ್ಲಿಯಂತಹ ಮನಸ್ಸು, ಎಷ್ಟೋ ಸಲ ಕೇವಲ ಪರಿಣಾಮಕ್ಕಾಗಿಯೇ ಆಡುವ ಬೆಚ್ಚಿ ಬೀಳಿಸುವ ಮಾತು ಎಲ್ಲದರ ನಡುವೆಯೂ ಮತ್ತು ಎಲ್ಲದರ ಜೊತೆ ಜೊತೆಯಲ್ಲಿಯೇ ಅವರು ನನಗೆ ಇಷ್ಟ.
ನಾನು ಹೈಸ್ಕೂಲಿನವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವಳು, ಹಾಗಾಗಿ ನನ್ನ ಮಟ್ಟಿಗೆ ಸಾಹಿತ್ಯ ಎಂದರೆ ಆಗೆಲ್ಲಾ ತ್ರಿವೇಣಿ, ತರಾಸು, ಬೈರಪ್ಪ, ಟಿ ಕೆ ರಾಮರಾವ್, ಉಷಾ ನವರತ್ನರಾಂ, ಸಾಯಿಸುತೆ ಮುಂತಾದವರು. ಆಮೇಲೆ ಯಂಡಮೂರಿ. ಆದರೂ ಖುಷ್ವಂತ್ ಸಿಂಗ್ ಹೆಸರು ಕೇಳಿದ್ದೆ ನಾನು. ಅಪ್ಪ ಮತ್ತು ಅವರ ಗೆಳೆಯರು ಮಾತನಾಡುವಾಗ ಈ ಹೆಸರು ಕೇಳಿಬರುತ್ತಿತ್ತು, ಅದೇ ಸಮಯದಲ್ಲಿ ಮರಿಯೋ ಬರೆದ ಬಲ್ಬ್ ಚಿತ್ರದೊಳಗಿನ ಸರ್ದಾರ್ಜಿ ಇವರೆ ಅಂತ ಗೊತ್ತಾಗಿ ಯಾಕೋ ಒಂದಿಷ್ಟು ವಿಸ್ಮಯ, ಒಂದಿಷ್ಟು ಕಸಿವಿಸಿ ಆಗಿತ್ತು. ಆ ವಯಸ್ಸಿನಲ್ಲಿ, ತಾಲೂಕು ಕೇಂದ್ರಗಳಲ್ಲೇ ಬೆಳೆದ ನನಗೆ ಬಲ್ಬ್ ನೊಳಗಿನ ಆ ಚಿತ್ರ, ಇಷ್ಟುದ್ದ ಜೋಡಿಸಿದ್ದ ಪುಸ್ತಕಗಳು, ಪಕ್ಕದಲ್ಲಿನ ಮದಿರೆಯ ಬಾಟಲು, ಎದುರಿಗಿರುತ್ತಿದ್ದ ಒಂದೆರಡು ಅರೆನಗ್ನ ಚಿತ್ರಗಳು ಒಂದೇ ಸಮಯದಲ್ಲಿ ಹೆದರಿಕೆ ಮತ್ತು ಕುತೂಹಲ ಹುಟ್ಟಿಸಿದ್ದವು. ನಾನು ಇಂಗ್ಲಿಷ್ ಓದಲು ಪ್ರಾರಂಭಿಸಿದ್ದು ತಡವಾಗಿ, ಕಾದಂಬರಿಗಳನ್ನು ಓದುತ್ತಿದ್ದ ನಾನು, ಖುಷ್ವಂತರನ್ನು ಓದಲು ಶುರು ಮಾಡಿದ್ದು ಇನ್ನೂ ತಡವಾಗಿ.
ಮೊದಲು ಓದಿದ್ದು, ಅವರ ದಿಲ್ಲಿ ಕಾದಂಬರಿ. ಅಧಿಕಾರ ಪೀಠ ದಿಲ್ಲಿ, ಯಾವುದೇ ಸಂಬಂಧಗಳಿಗೆ ಬೆಲೆಕೊಡದೆ ಅಧಿಕಾರವೊಂದೇ ಪರಮ ಸತ್ಯವೆಂದು ಪ್ರತಿಪಾದಿಸುವ, ವಯಸ್ಸಾದ ವೇಶ್ಯೆಯಂತೆ, ಹಿಜಡಾ ಭಾಗಮತಿಯಂತೆ ಕಾಣುವ ದಿಲ್ಲಿ, ಆದರೆ ಮನಸ್ಸಿನಲ್ಲಿ ಅಪಾರ ಅಂತಃಕರಣ ಇಟ್ಟುಕೊಂಡು ಸಂತೈಸುವ ದಿಲ್ಲಿ. ಅದನ್ನು ಓದುವ ವೇಳೆಗೆ ಅದನ್ನು ಓದಬಲ್ಲ, ನನ್ನದಾಗಿಸಿಕೊಳ್ಳಬಲ್ಲ ಮನೋಸ್ಥಿತಿಗೆ ನಾನು ಬಂದಿದ್ದೆ. ಆಮೇಲೆ ನಾನು ಅವರ ಪುಸ್ತಕಗಳನ್ನು, ಬರಹಗಳನ್ನು ಪ್ರೀತಿಯಿಂದ ಓದುತ್ತಾ ಹೋದೆ. ಅವರ ಆತ್ಮಚರಿತ್ರೆ Truth, Love and a little malice ಅನ್ನೂ ತುಂಬಾ ಇಷ್ಟ ಪಟ್ಟು ಓದಿದ್ದೆ. ಅಷ್ಟೇ ಪ್ರೀತಿಯಿಂದ ಓದಿದ್ದು ಅವರ Book of unforgettable women, ಅದರಲ್ಲಿ ಅವರ ಅಜ್ಜಿಯಿಂದ ಶುರುವಾಗಿ ಅವರ ಬದುಕಿನಲ್ಲಿ ಸುಳಿದ, ಅವರ ಬದುಕನ್ನು ರೂಪಿಸಿದ, ಘಾಸಿಗೊಳಿಸಿದ, ಪ್ರಭಾವಿಸಿದ, ಪ್ರಚೋದಿಸಿದ, ಪ್ರಶ್ನಿಸಿದ, ಬೆರಗಾಗಿಸಿದ ಹೆಣ್ಣುಗಳ ಬಗ್ಗೆ ಅಜ್ಜ ಬರೆದಿದ್ದಾರೆ. ಅಲ್ಲಿ ಫೂಲನ್ ದೇವಿ ಇದ್ದಾರೆ, ಮದರ್ ಥೆರೇಸಾ ಇದ್ದಾರೆ, ಅಮೃತಾ ಶೇರ್ ಗಿಲ್ ಇದ್ದಾರೆ, ಅವೆಲ್ಲದರ ನಡುವೆ ಕಲ್ಲಿನಲ್ಲಿ ಕಡೆದ ಶಿಲೆಯಂತಹ ಒಬ್ಬ ಭಿಕ್ಷುಕಿಯ ಬಗ್ಗೆ ಬರೆಯುತ್ತಾರೆ ಖುಷ್ವಂತ್, ಸಮುದ್ರದಿಂದ ಎದ್ದು ಬಂದ ವೀನಸ್ ಗೆ ಆಕೆಯನ್ನು ಹೋಲಿಸಿ ಎಷ್ಟು ತೀವ್ರವಾಗಿ ಬರೆಯುತ್ತಾರೆಂದರೆ ಈಗಲೂ ನನ್ನ ಕಣ್ಣಲ್ಲಿ ಅದು ಒಂದು ನೋಡಿದ ದೃಶ್ಯವಾಗಿ ನಿಂತಿದೆ.
ನೀವ್ಯಾಕೆ ಇಷ್ಟೊಂದು ಬರೆಯುತ್ತೀರಿ ಅಂತ ಯಾರೋ ಕೇಳಿದ ಪ್ರಶ್ನೆಗೆ, ’ಪೆನ್ನಿಗೆ ಇನ್ನೂ ಯಾರೂ ಕಾಂಡೂಮ್ ಕಂಡು ಹಿಡಿದಿಲ್ಲ’ ಎಂದು ಥಣ್ಣಗೆ ಉತ್ತರ ಕೊಟ್ಟಿದ್ದರು ಅಜ್ಜ!
ಖುಷ್ವಂತ್ ಅಂದರೆ ಹೀಗೆ ಎಂದು ಯಾರೂ ಹೇಳಲಾಗುತ್ತಿರಲಿಲ್ಲ, ನಾನು ನಾಸ್ತಿಕ ಅನ್ನುತ್ತಿದ್ದರು, ಪ್ರೀತಿಯಿಂದ ಸಿಖ್ಖರ ಕೀರ್ತನೆಗಳನ್ನು ಕೇಳುತ್ತಿದ್ದರು, ನಾನು ನಿಷ್ಠುರವಾದಿ ಎಂದು ಹೇಳುತ್ತಿದ್ದರು, ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರೆಯನ್ನು ಸಾಕ್ಷಾತ್ ದುರ್ಗೆಯ ಅವತಾರ, ಸಂಜಯ್ ಗಾಂಧಿ ಬದಲಾವಣೆಯ ಹರಿಕಾರ ಎಂದು ಹೇಳುತ್ತಿದ್ದರು. ಸ್ವರ್ಣ ಮಂದಿರಕ್ಕೆ ಸೈನ್ಯ ನುಗ್ಗಿದಾಗ ಸರ್ಕಾರ ತಮಗಿತ್ತ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ಮಗ ಪಗಡಿ ತೆಗೆದಿಟ್ಟು, ಗಡ್ಡ ಬೋಳಿಸಿದಾಗ ನೊಂದುಕೊಂಡಿದ್ದರು.
ಅವರು ಬರೆದ ಪುಸ್ತಕಗಳ ಸಂಖ್ಯೆ ೮೫, ಅಂಕಣಕಾರರಾಗಿ ಎಲ್ಲರ ಮನೆ ಮನಕ್ಕೆ ಬಂದ ಇವರು ಅಂಕಣ ಬರೆಯಲು ಪ್ರಾರಂಭಿಸಿದ್ದು ತಮ್ಮ ೬೯ ನೆಯ ವಯಸ್ಸಿನಲ್ಲಿ. ಇಲಸ್ಟ್ರೇಟೆಡ್ ವೀಕ್ಲಿಗೆ ಇವರು ಸಂಪಾದಕರಾಗಿ ಸೇರಿದಾಗ ಅದರ ಪ್ರಸಾರ ಸಂಖ್ಯೆ ಸುಮಾರು ೬೫,೦೦೦, ಅದನ್ನು ೪,೦೦,೦೦೦ ದ ವರೆಗೂ ಎಳೆದುಕೊಂಡುಹೋದರು ಖುಷ್ವಂತ್. ಬಹಿರಂಗದಲ್ಲಿ ’ಕಾಮ’ವನ್ನು ಹೀಗಳೆಯುತ್ತಲೇ ಅದರ ಬಗ್ಗೆ ಅಂತರಂಗದಲ್ಲಿ ಅಪಾರ ಕುತೂಹಲ ಇಟ್ಟುಕೊಂಡಿದ್ದ ಜನರ ಮನಸ್ಸಿನ ಮಾತು ಅರ್ಥವಾಯಿತೋ ಎಂಬಂತೆ ಇವರು ಭಾಷೆಯನ್ನು ಬಳಸುತ್ತಿದ್ದರು, ವಿಷಯವನ್ನು ಆರಿಸಿಕೊಳ್ಳುತ್ತಿದ್ದರು. ಇವರನ್ನು ಹೊಗಳುವವರೂ ಇವರನ್ನು ಓದುತ್ತಿದ್ದರು, ತಪ್ಪೆಂದು ಹೀಗಳೆಯುವವರೂ ಇವರನ್ನು ಓದುತ್ತಿದ್ದರು! ಆಷಾಡಭೂತಿ ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು, ಸಿನಿಮಾ ತಾರೆಯರು, ಸಹ ಲೇಖಕ – ಲೇಖಕಿಯರು ಎಲ್ಲರೂ ಇವರ ಲೇಖನಿಯ ಮೊನಚನ್ನು ಅನುಭವಿಸಿದವರೇ. ಆದರೆ ಅಂತಹ ಪತ್ರಿಕೆಯಿಂದ ನಿವೃತ್ತಿಗೆ ಕೇವಲ ಕೆಲವೇ ದಿನಗಳಿರುವಾಗ ಇವರನ್ನು ಹೊರಗೆ ಹೋಗುವಂತೆ ಸೂಚಿಸಲಾಯಿತು ಮತ್ತು ಅದೇ ದಿನ ಇನ್ನೊಬ್ಬ ಸಂಪಾದಕರನ್ನು ತಂದು ಕೂರಿಸಲಾಯಿತು. ಪತ್ರಿಕೋದ್ಯಮದಲ್ಲಿರುವ ಯಾರಿಗೇ ಆಗಲಿ ಆಗ ಅವರು ಪಟ್ಟಿರುವ ನೋವಿನ, ಅವಮಾನದ, ಅಸಹಾಯಕತೆಯ ಅರಿವಾಗುತ್ತದೆ. ಆದರೆ ಅದು ಇವರನ್ನು ಹಿಮ್ಮೆಟ್ಟಿಸಿತು ಆದರೆ ಸೋಲಿಸಲಿಲ್ಲ, ಇದು ಅವರ ಶಕ್ತಿ. ಸಂಪಾದಕರಾಗಿದ್ದಾಗ ಆಗಿದ್ದಕ್ಕಿಂತ ಹೆಚ್ಚು ಪ್ರಸಿದ್ಧಿಯನ್ನು ಅವರು ಅಂಕಣಕಾರರಾದ ಮೇಲೆ ಸಂಪಾದಿಸಿದರು.
ಅಮೃತಾ ಪ್ರೀತಂ ನಂತಹ ಅಮೃತಾ ಪ್ರೀತಂ ಒಮ್ಮೆ ’ನಾನು, ನನ್ನ ಆತ್ಮ ಚರಿತ್ರೆ ಬರೀಬೇಕು ಅಂತಿದೀನಿ’ ಅಂದಾಗ, ’ಅಯ್ಯೋ ಅದರಲ್ಲಿನ್ನೇನಿರುತ್ತೆ ಮಹಾ, ಒಂದು ರಸೀತಿ ಟಿಕೇಟಿನ ಮೇಲೆ ಬರೀಬಹುದು ನೀನು’ ಅಂತ ಅಂದಿದ್ದರು. ತಮ್ಮ ಆತ್ಮಚರಿತ್ರೆ ಬರೆದಾಗ ಅಮೃತಾ ಅದಕ್ಕೆ ’ರಸೀತಿ ಟಿಕೆಟ್’ ಎಂದೇ ಬರೆದು ಸಿಹಿಯಾಗಿ ಸೇಡು ತೀರಿಸಿಕೊಂಡಿದ್ದರು.
ಭಾರತ ಸರ್ಕಾರದ ವಿದೇಶಿ ಸೇವೆಯಲ್ಲಿದ್ದಾಗ ವಿದೇಶದಲ್ಲಿ ಒಮ್ಮೆ ನೆಹರು ಅವರನ್ನು ಭೇಟಿ ಮಾಡಲು ಹೋಗಿದ್ದಾಗ, ಲೇಡಿ ಮೌಂಟ್ ಬ್ಯಾಟನ್ ಅಲ್ಲೇ ತಂಗಿದ್ದನ್ನು ಬರೀತಾರೆ, ಅಮೃತಾ ಶೇರ್ ಗಿಲ್ ಬಗ್ಗೆ ಬರೀತಾರೆ. ಅವರ ಹೈದ್ರಾಬಾದಿನ ಗೆಳತಿಯ ಬಗ್ಗೆ ಬರೀತಾರೆ, ಹಾಸ್ಯ ಮಾಡುತ್ತಾರೆ, ಛೇಡಿಸುತ್ತಾರೆ ಆದರೆ ಅಷ್ಟೇ ಪ್ರೀತಿಸುತ್ತಾರೆ. ಇವರು ಬರೆದ Burial at Sea ಎಲ್ಲೋ ಇಂದಿರಾಗಾಧಿ ಅವರ ಜೀವನವನ್ನು ಹೋಲುತ್ತದೆ ಎನ್ನುವ ಗುಲ್ಲು ಸಹ ಆಗ ಎದ್ದಿತ್ತು.
ಉಡಾಫೆತನದಿಂದ ಮಾತನಾಡಿದರೂ, ಪರಮ ಬೇಜವಾಬ್ದಾರಿಯಿಂದ ನಡೆದುಕೊಂಡಂತೆ ತೋರಿಸಿಕೊಂಡರೂ ಇವರ ಶಿಸ್ತು ಮತ್ತು ಸಮಯ ಪ್ರಜ್ಞೆ ಅನುಕರಣೀಯ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಒಮ್ಮೆ ಭೇಟಿಯಾಗಲು ಅಂತ ಬಂದಿದ್ದಾರೆ. ಏನು ಕೆಲಸ ಇತ್ತೋ ಏನೋ, ಹೇಳಿದ ಸಮಯಕ್ಕಿಂತ ಸ್ವಲ್ಪ ತಡವಾಗಿ ಬಂದಿದ್ದಾರೆ. ಅವರಿಗೆ ಕೊಟ್ಟ ಸಮಯದವರೆಗೂ ಮಾತನಾಡಿ ಅಮೇಲೆ, ’ಕ್ಷಮಿಸಿ, ನಿಮಗೆ ಕೊಟ್ಟ ಸಮಯ ಮುಗಿಯಿತು, ಇನ್ನೀಗ ನನ್ನ ಸಮಯ’ ಅಂತ ಇವರು ಭೇಟಿ ಮುಗಿಸಿ ಎದ್ದಾಗ ರಾಜೀವ್ ಮತ್ತು ಅವರ ಸಿಬ್ಬಂದಿ ಇಬ್ಬರೂ ಕಕ್ಕಾಬಿಕ್ಕಿ!
ಅಮಿತತ್ವ ಘೋಷ್ ಹೇಳಿದ ಹಾಗೆ ಇವರದು ಒಂದು ವ್ಯಾಖ್ಯಾನಕ್ಕೆ ಸಿಗುವ ಪ್ರತಿಭೆ ಅಲ್ಲ. ಪತ್ರಕರ್ತ, ಕಾದಂಬರಿಕಾರ, ಇತಿಹಾಸ ತಜ್ಞ, ಸಾಮಾಜಿಕ ರಾಜಕೀಯ ವಿಶ್ಲೇಷಕ, ಮತ್ತು ಅದ್ಭುತವಾಗಿ ಚುಟುಕುಗಳನ್ನು ಹೇಳುವ ಶಕ್ತಿ ಇದ್ದವರು. ಯಾವುದೇ ಗುಂಪಿನ ಜೀವಾಳ ಇವರ ಅಡ್ಡಾ. ಸಿಖ್ ಧರ್ಮದ ಬಗ್ಗೆ ಇವರು ಬರೆದ ಪುಸ್ತಕಗಳು ಆ ಧರ್ಮ ಮತ್ತು ಅದರ ಬೆಳವಣಿಗೆಯ ಬಗ್ಗೆ ಇಂದಿಗೂ ಅನೇಕ ಪುಸ್ತಕಗಳಿಗೆ ಆಖರ ಗ್ರಂಥಗಳು.
ವಿಸ್ಕಿ, ಹೆಣ್ಣು ಮತ್ತು ಗಾಸಿಪ್ ನಷ್ಟೇ ಇವರಿಗೆ ಪ್ರೀತಿಯ ಇನ್ನೊಂದು ವಿಷಯ ಇದ್ದರೆ ಅದು ಶಾಯರಿ.
ತನ್ನಲ್ಲಿರುವ ಪ್ರತಿಭೆಗೆ ಮತ್ತಷ್ಟು, ಇನ್ನಷ್ಟು ಸೇರಿಸಿ, ಹಾಲನ್ನು ಈ ಗ್ಲಾಸಿನಿಂದ ಆ ಗ್ಲಾಸಿಗೆ, ಆ ಗ್ಲಾಸಿನಿಂದ ಈ ಗ್ಲಾಸಿಗೆ ಬಗ್ಗಿಸಿ, ಬಗ್ಗಿಸಿ ನೊರೆ ಬರೆಸಿ ಅರ್ಧ ಲೋಟದ ಹಾಲನ್ನು ಪೂರ್ತಿ ಲೋಟ ಮಾಡಿರುವವರನ್ನು ನಾವು ಕಂಡಿದ್ದೇವೆ, ಆದರೆ ತನ್ನ ಪ್ರತಿಭೆಯನ್ನು ಕರ್ಚೀಫಿನಲ್ಲಿ ಕಟ್ಟಿ, ಸಣ್ಣ ಗಂಟಾಗಿಸಿ, ನೋಡುವವರ ಎದುರಲ್ಲಿ ಕೋಡಂಗಿಯಾಟ ಆಡುತ್ತಾ ಪ್ರತಿಭೆಯನ್ನು ಯಾರಾದರೂ ಮರೆಸಿದ್ದರೆ ಅದು ಖುಷ್ವಂತ್ ಸಿಂಗ್. ಇವರ ಉತ್ತೇಜಕ ಬರಹಗಳ ಚರ್ಚೆಯಲ್ಲಿ ಇವರ ‘History of the Sikhs’ ಪುಸ್ತಕ ಹಿಂದಿನ ಸೀಟಿನ ಮೂಲೆಯಲ್ಲೆಲ್ಲೋ ಕುಳಿತುಬಿಟ್ಟಿತು. ಕಂಪನಿ ಆಫ್ ವುಮನ್ ಬಾಯಿ ಚಪ್ಪರಿಸಿಕೊಂಡು ಓದಿದವರ ಎದೆಗೆ ಟ್ರೇನ್ ಟು ಪಾಕಿಸ್ತಾನ್ ನಾಟಲೇ ಇಲ್ಲ, ’ಹೌದು, ನಾನೊಬ್ಬ ಲಂಪಟ’ ಎಂದು ಹೇಳಿಕೊಳ್ಳುವ ಇವರ ಭರಾಟೆಯಲ್ಲಿ ಇವರ ಶಿಸ್ತು, ಪ್ರತಿಭೆ, ಮತ್ತು ಪ್ರತಿಭೆಯ ಜೊತೆ ಜೊತೆಯಲ್ಲೇ ಇದ್ದ ಇವರ ವ್ಯವಹಾರಿಕ ಜಾಣತನ ಮತ್ತು ಹರಿತವಾದ ಬುದ್ದಿಮತ್ತೆ ಯಾರಿಗೂ ಕಾಣಿಸಲೇ ಇಲ್ಲ. ಹೆಣ್ಣುಗಳ ಜೊತೆ ಒಡನಾಡಿದ, ಇನ್ನಿಲ್ಲದಂತೆ ಫ್ಲರ್ಟ್ ಮಾಡಿದ ಖುಷ್ವಂತ್ ತಮ್ಮ ಪತ್ನಿಯ ಕಣ್ಣಿನಲ್ಲಿ ತಾವು ಹೇಗೆ ಕಾಣಿಸಿಕೊಳ್ಳುತ್ತೇನೆ ಎಂಬುದರ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳುತ್ತಿದ್ದರು ಮತ್ತು ಮುದ್ದಾಗಿ ಹೆಂಡತಿಗೆ ಹೆದರುವ ’ಅಮ್ಮಾವ್ರ ಗಂಡ’ ಆಗಿದ್ದರು.
ಚಿತ್ರಕೃಪೆ : ಸಂದೀಪ್ ಅಧ್ವರ್ಯು
ಸಾವಿನ ಬಗ್ಗೆ ಅವರು ಬರೆದದ್ದನ್ನು ಓದಬೇಕು. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರೂ ಸಾವು ಅವರನ್ನು ಕಾಡಿತ್ತು. ಅವರು ತಮ್ಮ Absolute Khushwant ನಲ್ಲಿ ಕವಿ ಯಸ್ ಯಗಾನ ಚಂಗೇಸಿಯನ್ನು ಉಲ್ಲೇಖಿಸುತ್ತಾ ಹೇಳುವಂತೆ, ’ದೇವರು ಇದಾನೋ ಇಲ್ಲವೋ ಎನ್ನುವ ಅನುಮಾನ ಇರಬಹುದು, ಆದರೆ ಸಾವಿನ ಸತ್ಯದ ಬಗ್ಗೆ ಎಂತಹ ಅನುಮಾನ?’. ೯೫ ರಲ್ಲಿದ್ದಾಗ ಅವರು ಆ ಪುಸ್ತಕ ಬರೆದದ್ದು. ಅದರಲ್ಲಿ ಅವರು ಬಯಸುವುದು ಇಷ್ಟೇ, ’ನಾನು ಒಂದು ಸಂತೃಪ್ತ ಜೀವನ ನಡೆಸಿದ್ದೇನೆ, ಈಗ ಸಾವು ಬರುತ್ತದೆ, ಬರಲಿ, ಸಾಧ್ಯವಾದರೆ ನೆಮ್ಮದಿಯ ಸಾವು ಬರಲಿ, ನಿದ್ದೆಯಲ್ಲಿ ಹೇಳುವ ವಿದಾಯದ ಹಾಗೆ…’. ಅಷ್ಟೇ ಅಲ್ಲ ತಮ್ಮ ಸಮಾಧಿಯ ಮೇಲಿನ ಮರಣವಾಕ್ಯಗಳನ್ನೂ ಸಹ ಅವರು ಬರೆದುಕೊಂಡಿದ್ದರು,
“ಇದೋ ಇಲ್ಲಿ ಮಲಗಿದ್ದಾನೆ,
ಮನುಷ್ಯರನ್ನಿರಲಿ, ದೇವರನ್ನೂ ಲೆಕ್ಕಿಸದವನು.
ಸುಮ್ಮನೆ ನಿಮ್ಮ ಕಣ್ಣೀರ ವ್ಯರ್ಥಮಾಡಿಕೊಳ್ಳಬೇಡಿ
ಬೇರೆಯರನ್ನು ಚುಚ್ಚಿ ಬರೆಯುತ್ತಲೇ ನಕ್ಕವನು ಇವನು
ಸಧ್ಯ ದೇವರೆ ಇನ್ನಿಲ್ಲ ಇವ, ಈ ಕಳ್ಳನನ್ನ ಮಗ.
ಸಾವನ್ನು ನಾವು ಹೇಗೆ ಎದಿರುಗೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕಿನ ಸಾರ್ಥಕತೆ ನಿರ್ಧಾರ ಆಗುತ್ತದೆ ಎನ್ನುತ್ತಾರೆ. ಅಜ್ಜನೇ ನೆನಸಿಕೊಳ್ಳುವ ಹಾಗೆ, ಕವಿ ಇಕ್ಬಾಲ್ ಬರೆದಿರುವುದು ಹೀಗೆ, “ನಂಬಿಕೆ ಇಟ್ಟು ಬದುಕಿದ ಮನುಷ್ಯನ ಲಕ್ಷಣಗಳೇನು ಅಂದೆಯಾ, ಸಾವು ಕದ ತಟ್ಟಿದಾಗ ಅವನ ತುಟಿಗಳ ಮೇಲೆ ನಗು ಇರುತ್ತದೆ’… ನಿದ್ದೆಯಲ್ಲೇ ನಡೆದು ಹೋದ ಈ ಅಜ್ಜನ ತುಟಿಯಲ್ಲಿ, ಮುಖದಲ್ಲಿ, ಗಡ್ಡದ ತುದಿಯಲ್ಲಿ ನಗು ಇತ್ತು ಅನ್ನಿಸುತ್ತದೆ ನನಗೆ….



At last the pen did stop writing. God, if he is there, might have broken the nib of his pen with Khushwant Singh’s death for having invited him. Sure, there also he won’t leave Him, and expose him to fullest extent. A writer par excellence, witty, satirical, fully outspoken, a person who would bring out the deepest of emotions, and what not, has created a vacuum in a specific niche. Sure, God will not send another Khushwant Singh. Can’t you, Khushwant Singh, goad him to send Him somehow to send another You? Our future generations are certain to miss you!
ಅಜ್ಜನ ಬಗ್ಗೆ ಲೇಖನ ಚೆನ್ನಾಗಿದೆ. ಈ ವರ್ಷದ ಕೊನೇಲಿ ದಿಲ್ಲಿಗೆ ಹೋದಾಗ ಹೇಗಾರ ಮಾಡಿ ಅವ್ರನ್ನ ಭೆಟ್ಟಿ ಆಗಿ ಬಿಡ್ಬೇಕು ಅಂತ ಸ್ಕೆಚ್ ಹಾಕಿದ್ದೆ .. ದೇವ್ರು ಬೇರೆ ಸ್ಕೆಚ್ ಹಾಕಿಬಿಟ್ಟ …:(
RIP….Khushwant ji…
ಎಲ್ಲಿಗೆ ಹೋಗಿ ಬರುವುದು? ಎಲ್ಲಿಂದಲಾದರೂ ಬಂದಿದ್ದರೆ ತಾನೆ ಹೋಗುವುದು? ಹೋಗುವ ಸ್ಥಳ ಯಾವುದಾದರೂ ಇದ್ದರೆ ತಾನೆ ಹೋಗುವುದು, ಅಲ್ಲಿಂದ ಬರುವುದು? ಖುಶ್ವಂತ್ ಸಿಂಗ್ ಸಾಯುವ ಮೊದಲೇ ಅವರ ‘ಮರಣಶಾಸನ’ವನ್ನು ಬರೆದುಕೊಂಡ ನಾಸ್ತಿಕ. ಅವರ ಭಾವನೆ-ದೃಷ್ಟಿಕೋನಗಳಿಗೆ ಲಗತ್ತಾದ ತಲೆಬರಹ ಇದಲ್ಲ.
ಹೋಗಿ ಬನ್ನಿ ಖುಷ್ವಂತಜ್ಜ :'(
BYE SIR . WE MISS YOU.
ನಗುವಲ್ಲೂ ನೋವಿನ ಮೊನಚು , ಸಾವಲ್ಲೂ ಸಾರ್ಥಕವಾದ ಖುಶಿ -ಶತಕ ವಂಚಿತ ಎನ್ನುವದು ಸಣ್ಣ ದುಃಖ
-ಅನಿಲ
nimaganisiddannu satyavagi barediddira, hallimooleya nanoo ajjaana mommaga.nimmodige nanndu ashru…
nijakkuu varnaranjita vyaktitva avaradu.shaayi mugiyada lekhani avarinda ee 99ralluu baravanigeyalli todagisikondiddu dodda adbutha…a great loss to literary world alas!! sandhya,tumba chennagi avara antharaala hididutorisiddeeri.
ನಿಮ್ಮ ಬರಹ ತುಂಬಾ ಹಿಡಿಸಿತು ಸಂದ್ಯಕ್ಕಾ.. ನಾನು ಖುಷ್ವಂತ್ ಅಜ್ಜನ ಬಗ್ಗೆ ಕೇಳಿದ್ದು ಇತ್ತೀಚಿಗೆ ಮಾತ್ರ.. ಓದಬೇಕು ಅನ್ನುವಷ್ಟರಲ್ಲ್ಲೇ ನಮ್ಮನ್ನು ಬಿಟ್ಟು ಹೋಗಿದ್ದಾರೆ
ಖಂಡಿತ ಓದುತ್ತೇನೆ ಖುಷ್ವಂತ್ರನ್ನು
Bahala hidisitu.
Infact english odoke shuru maadiddu naanu khuswanth avara pustakagalanne.
He has lived wonderful 99
ವಾಹ್ ವಾಹ್!
Very apt good bye to Khushwanth Singh!
ನಿದ್ದೆಯಲ್ಲೇ ನಡೆದು ಹೋದ ಈ ಅಜ್ಜನ ತುಟಿಯಲ್ಲಿ, ಮುಖದಲ್ಲಿ, ಗಡ್ಡದ ತುದಿಯಲ್ಲಿ ನಗು ಇತ್ತು ಅನ್ನಿಸುತ್ತದೆ ನನಗೂ .. Thanks for the beautiful write up.. ಅವರಷ್ಟೇ ಚೆಂದಗಿತ್ತು