
ಬದುಕಿನ ಒಂದು ದೊಡ್ಡ ವಿಪರ್ಯಾಸವೆಂದರೆ ಬದುಕಿಗೆ Ctrl+Alt+Del ಕೀಗಳು ಇರುವುದಿಲ್ಲ. ’ನಾಳೆಯಿಂದ ಹೊಸ ಮನುಷ್ಯ ನೀನು, ಹೊಸದಾಗಿ ಬದುಕು ಶುರು ಮಾಡು’ ಅನ್ನುವುದೆಲ್ಲಾ ಹುಸಿ ಹುಸಿ ಮಾತುಗಳು. ಬೇಕೆಂದರೂ, ಬೇಡೆಂದರೂ ನಮ್ಮ ನೆನ್ನೆಗಳು ನಮ್ಮ ಬೆನ್ನು ಬಿಡುವುದೇ ಇಲ್ಲ. ’ನಿನ್ನ ಬೆನ್ನಿನ ಮೇಲೆ ನಿನ್ನ ನಿನ್ನೆಗಳ ಭಾರ, ನನ್ನ ಬೆನ್ನಿನ ಮೇಲೆ ನನ್ನ ಹೊರೆ, ಬದುಕುವುದಾದರೆ ಇವುಗಳ ಜೊತೆಯಲ್ಲೇ ಬದುಕಬೇಕು, ನೀನೆಂದರೆ ಆ ಎಲ್ಲಾ ನಿನ್ನೆಗಳೂ ಇರುವ ನೀನು, ನಾನೆಂದಾರೆ ಆ ಎಲ್ಲಾ ನಿನ್ನೆಗಳ ಮೊತ್ತವಾದ ನಾನು’ ಎಂದು ಒಮ್ಮೆ ಕೇಳಿದ ಮಾತು ಆಗ ಅರ್ಥವಾಗಿರಲಿಲ್ಲ. ಆಮೇಲೆ ಸುಮಾರು ’ಇಂದು’ ಗಳು ನಿನ್ನೆಯ ಪಟ್ಟಿ ಸೇರಿದ ಮೇಲೆ ಆ ಮಾತು ಹೆಚ್ಚು ಸ್ಪಷ್ಟವಾಯಿತು.
ಆದರೆ ಒಂದು ತಮಾಷೆ ಏನು ಗೊತ್ತಾ, ಆ ಎಲ್ಲಾ ನಿನ್ನೆಗಳೂ ನಮ್ಮ ಹೆಗಲ ಮೇಲೇ ಇರುತ್ತವೆ, ಅವುಗಳ ಪ್ರಭಾವ ನಮ್ಮ ಮೇಲೆ ಇರುತ್ತವೆ, ಆದರೆ ನಾವು ಮತ್ತೆ ಬಯಸಿದರೂ, ಹಟ ಹಿಡಿದರೂ, ಅಂಗಲಾಚಿದರೂ ಆ ನಿನ್ನೆಗಳಿಗೆ ಹಿಂದಿರುಗಲು ಸಾಧ್ಯವಾಗುವುದೇ ಇಲ್ಲ. ಅದೊಂದು ಬೆನ್ನ ಮೇಲಿನ ಮಚ್ಚೆಯಂತೆ, ಇರುತ್ತದೆ ಆದರೆ ಕಾಣುವುದಿಲ್ಲ. ನಾವು ಮಾಡಬಹುದಾದದ್ದೆಲ್ಲಾ ಆ ನೆನ್ನೆಗಳ ಎಚ್ಚರವನ್ನು ಕೇಳಿಸಿಕೊಳ್ಳುತ್ತಾ ನಮ್ಮ ’ಇಂದು’ಗಳನ್ನಾದರೂ ಪೂರ್ಣವಾಗಿ ಬದುಕಿಬಿಡುವುದು.
ತುಂಬಾ ದಿನಗಳ ಮೊದಲು ಒಂದು ಚಿತ್ರ ನೋಡಿದ್ದೆ. ಆ ಚಿತ್ರದಲ್ಲಿ ಬದುಕಿನಲ್ಲಿ ಅತ್ಯಂತ ಕಷ್ಟದಿಂದ ಮೇಲೆ ಬಂದ ಯುವಕನೊಬ್ಬನಿಗೆ ತನ್ನ ಎಲ್ಲಾ ಬಾಲ್ಯಕಾಲದ ಆಸೆ-ಇಷ್ಟಗಳಿಗೆ, ನೋವು-ಅವಮಾನಗಳಿಗೆ, ನಿರೀಕ್ಷೆ-ಕನಸುಗಳಿಗೆ ಉತ್ತರವಿರುವುದೇ ತನ್ನ ದುಡಿತದಲ್ಲಿ ಎನ್ನುವ ಭಾವನೆ ಇರುತ್ತದೆ. ಒಂದು ನಲವತ್ತು ವರ್ಷ ಹಾಗೆ ತಪಸ್ಸಿಗಿಳಿದಂತೆ ಬದುಕಿಬಿಡುತ್ತೇನೆ ಆಮೇಲೆ ಮಿಕ್ಕ ನಾಳೆಗಳೆಲ್ಲಾ ನನ್ನವೇ ಎಂದು ಬದುಕುತ್ತಿರುತ್ತಾನೆ. ಆ ಓಟದಲ್ಲಿ ಅವನ ಕೈಗಳಿಂದ ಅವನ ಹುಡುಗಿಯ ಬೆರಳುಗಳು ಕಳಚಿಕೊಂಡಿದ್ದು ಅವನಿಗೆ ಅರಿವಾಗುವುದಿಲ್ಲ, ಸ್ನೇಹಿತರಿಗೂ ಅವನಿಗೂ ನಡುವೆ ಒಂದು ಗಾಜಿನ ಗೋಡೆ ಬಂದದ್ದು ಅವನಿಗೆ ಗೊತ್ತಾಗುವುದಿಲ್ಲ – ಎಲ್ಲಾ ಕಾಣಿಸುತ್ತಿದೆ ಅಂದುಕೊಳ್ಳುತ್ತಾನೆ, ಆದರೆ ಏನೂ ಕೇಳಿಸುತ್ತಿಲ್ಲ ಎನ್ನುವುದು ಅರಿವಿಗೆ ಬರುವುದಿಲ್ಲ. ನಿಂತಲ್ಲೇ ಒಂದು ದ್ವೀಪವಾಗಿ ಹೋಗಿರುತ್ತಾನೆ ಆತ, ಗಡಿಯಾರದಂತೆ ಕ್ಷಣ ಕ್ಷಣ ತಪ್ಪದಂತೆ ಟಕ್, ಟಕ್ ಎಂದು, ಎಲ್ಲಿಯೂ ನಿಲ್ಲದಂತೆ ನಡೆಯುತ್ತಾ ಇರುತ್ತಾನೆ ಆತ.
ಸ್ನೇಹಿತರಿಬ್ಬರ ಬಲವಂತದ ಮೇರೆಗೆ ಅವರ ಜೊತೆ ಒಂದು ಪ್ರವಾಸಕ್ಕೆ ಹೊರಡುತ್ತಾನೆ, ಅದೂ ತನ್ನೆಲ್ಲಾ ಭಾರ, ಬಾಧ್ಯತೆ, ಜವಾಬ್ದಾರಿಗಳನ್ನು ಹೊತ್ತುಕೊಂಡೇ. ಅಲ್ಲಿ ಅವನಿಗೊಬ್ಬ ಜೀವಸೆಲೆಯಂತಹ ಹುಡುಗಿಯ ಪರಿಚಯ ಆಗುತ್ತದೆ. ಇವನ ಎಲ್ಲಾ ನಂಬಿಕೆಗಳನ್ನೂ ತೊಳೆದು, ಒರೆಸಿ ಹಾಕುವ ರೀತಿಯಲ್ಲಿ ಅವಳು ಬದುಕುತ್ತಿರುತ್ತಾಳೆ ಮತ್ತು ಅದ್ಭುತವಾಗಿ ಬದುಕುತ್ತಿರುತ್ತಾಳೆ. ಇವನೆಲ್ಲಾ ನಂಬಿಕೆಗಳನ್ನು ಪ್ರಶ್ನಿಸುವಂತಹ ಜೀವ ಅವಳು.
ಪ್ರವಾಸಕ್ಕೆಂದು ಬಂದ ಈ ಗೆಳೆಯರಿಗೆ ಆಕೆ ಸ್ಕೂಬಾ ಡೈವಿಂಗ್ ಗೈಡ್. ಒಮ್ಮೆ ನೀರಿನಲ್ಲಿ ಮುಳುಗಿ, ನೀರಿನ ಜಗತ್ತಿನಲ್ಲಿ ಓಡಾಡಿ ಬಂದವನನ್ನು ಅಲ್ಲಾಡಿಸುವಂತೆ ಒಂದು ಪ್ರಶ್ನೆ ಕೇಳಿಬಿಡುತ್ತಾಳೆ, ’ಆ ನೀರಿನಲ್ಲಿ ಮುಳುಗಿದಾಗ ನೀ ಕಂಡ ಆ ಅನಿರ್ವಚನೀಯ ಸಂತಸಕ್ಕೆ ನಿನ್ನ ಕಣ್ಣಲ್ಲಿ ನೀರು ಬಂದಿತ್ತಲ್ಲ, ನಿನ್ನ ಸಂಬಳದ ಚೆಕ್ ನೋಡಿದಾಗ ಯಾವತ್ತಾದರೂ ಹಾಗೆ ಅತ್ತಿದ್ದುಂಟಾ’ ಅಂತ. ಹುಡುಗ ಸೋಲುವುದಿಲ್ಲ, ಅವಳನ್ನು ಒಪ್ಪಿಸಲು ಹೆಣಗಾಡುತಾನೆ, ’ಹಾಗೇನಿಲ್ಲ, ನೋಡು ನಾನು ಎಲ್ಲವನ್ನೂ ಪ್ಲಾನ್ ಮಾಡಿದ್ದೇನೆ, ನಲವತ್ತು ವರ್ಷ ದುಡಿದರೆ ಆಯಿತು, ಆಮೇಲೆ ಬದುಕೆಲ್ಲಾ ನನ್ನದೆ’ ಅನ್ನುತ್ತಾನೆ. ’ಅಕಸ್ಮಾತ್ ಅಷ್ಟರೊಳಗೆ ನೀನು ಸತ್ತು ಹೋದರೆ…?’ ಹುಡುಗಿ ಕೇಳುತ್ತಾಳೆ, ಹುಡುಗನಲ್ಲಿ ಉತ್ತರವಿರುವುದಲ್ಲ. ಗೆಳೆಯಾ ಬದುಕು ಇರುವುದು ಇಲ್ಲಿ, ಈ ಕ್ಷಣದಲ್ಲಿ ಎಂದು ಹೇಳುತ್ತಾಳೆ.
ನನಗೆ ಗೊತ್ತು, ಇದು ಒಂದು ಆಕರ್ಷಕ ವಾಕ್ಯ. ’ಅಷ್ಟರೊಳಗೆ ಸತ್ತು ಹೋದರೆ…’ ಅನ್ನುವುದು ಹೇಗೆ ಒಂದು ಸಾಧ್ಯತೆಯೋ, ’ಅಕಸ್ಮಾತ್ ಸಾಯದೆ ವರ್ಷಾನುಗಟ್ಟಲೆ ಬದುಕಿ ಬಿಟ್ಟರೆ’ ಅನ್ನುವುದೂ ಸಹ ಒಂದು ಸಾದ್ಯತೆಯೇ. ಬದುಕು ಯಾವುದನ್ನಾದರೂ ನಮ್ಮ ವಿಳಾಸಕ್ಕೆ ಕಳಿಸಿಬಿಡಬಹುದು. ನಾಳೆ ಸಾಯುತ್ತೇನೆ ಎಂದು ಗೊತ್ತಾದರೆ ಇನ್ನಿಲ್ಲದಂತೆ ಇಂದನ್ನು ಬದುಕಿ ಬಿಡಬಹುದು, ಆದರೆ ನಾಳಿದ್ದೂ ಇರಬಹುದು ಎಂದಾದಗ ಹಾಗೆ ಇರಲಿಕ್ಕಾಗುವುದಿಲ್ಲ, ಹಾಲಿಗೆ ಹೆಪ್ಪು ಹಾಕಬೇಕು, ನೀರಿನ ಬಾಟಲಿ ತುಂಬಿಡಬೇಕು, ಹಾಲಿನ ಚೀಟಿ, ಕವರ್ ಬಾಗಿಲಿಗೆ ನೇತು ಹಾಕಬೇಕು, ಬಟ್ಟೆ ಇಸ್ತ್ರಿ ಮಾಡಿಡಬೇಕು. ಇಂದು ಮುಖ್ಯ ಎಂದು ನಾಳೆಗೆ ಬಾಗಿಲು ಹಾಕಲಿಕ್ಕಾಗುವುದಿಲ್ಲ, ಒಪ್ಪುತ್ತೇನೆ ನಾನು.
ಆದರೆ ಕನಿಷ್ಠ ಅಂದಂದಿನ ಬಾಕಿಗಳನ್ನಾದರೂ ತೀರಿಸಿ, ಸಣ್ಣ ಸಣ್ಣ ಸಂತೋಷಗಳನ್ನು ನಮ್ಮ ಖಜಾನೆಗೆ ಸೇರಿಸಿಕೊಳ್ಳುತ್ತಾ ಬದುಕನ್ನು ಬದುಕಲು ಸಾಧ್ಯವಾದರೆ…? ಮುಂದೆ ಹೆಜ್ಜೆ ಹಾಕುತ್ತಲೇ ರಸ್ತೆ ಬದಿಯಲ್ಲಿ ನಿಂತಿರುವ ತುಂಟ ಮಗುವಿನ ಕೆನ್ನೆ ಸವರಲು, ಮಳೆ ಕಂಡು ಕೈ ಚಾಚಿ ತಂಪಾಗಲು, ಹೂವ ನೋಡಿ ನಗಲು, ಹಾಡ ಕೇಳಿ ನಿಲ್ಲಲು ಸಾಧ್ಯವಾದರೆ…? ಇದು ನನ್ನ ಪ್ರಶ್ನೆ ಮತ್ತು ಆಸೆ ಎರಡೂ ಸಹ.
ಬಾಕಿ ತೀರಿಸುವುದು ಹೇಗೆ? ಅಥವಾ ಬಾಕಿ ಎಂದರೆ ಏನು…? ಇಲ್ಲಿ ಸ್ವಲ್ಪ ವೈಯಕ್ತಿಕವಾಗಿ ಹೇಳುತ್ತೇನೆ, ಕ್ಷಮೆ ಇರಲಿ. ಒಂದು ಸಲ ಅಪ್ಪನ ಮೇಲೆ ಏನೋ ಕಾರಣಕ್ಕೆ ಮುನಿಸು, ಮುನಿಸಿಕೊಳ್ಳುವ ಅಧಿಕಾರ ಇರುವ ಸಂಬಂಧದಲ್ಲಿ ತಾನೆ ಮುನಿಸು ಸಾಧ್ಯ? ಯಾವ ಕಾರಣಕ್ಕೆ ಮುನಿಸು ಎನ್ನುವುದು ನೆನಪೇ ಇಲ್ಲ ಈಗ. ಆದರೆ ಅಂದು ಅಪ್ಪ ಕಟ್ಟಿಸಿಕೊಂಡು ಬಂದಿದ್ದ ಬಿಸಿ ಬಿಸಿ ಇಡ್ಲಿ ಬೇಡ ಅಂತ ನಿರಾಕರಿಸಿದ್ದು ಮಾತ್ರ ಮರೆಯಲಾಗಿಲ್ಲ.. ನನಗೆ ಇಷ್ಟ ಎಂದೇ ಬಸ್ಸಿನಿಂದಿಳಿದು, ಇಡ್ಲಿ ಕಟ್ಟಿಸ್ಕೊಂಡು ನಡೆದುಕೊಂಡು ಬಂದಿದ್ದರು ಅಪ್ಪ, ’ತಿನ್ನಮ್ಮ, ಒಂದು ತಿನ್ನಮ್ಮ..’ ಅಂತ ಎಷ್ಟು ಬಲವಂತ ಮಾಡಿದ್ದರು.. ಅದ್ಯಾಕೆ ನಾನು ನಿರ್ದಾಕ್ಷ್ಯಣ್ಯವಾಗಿ ಬೇಡ ಅಂದೆ…. ಆಮೇಲೆ ಅಂದು ಅಪ್ಪ ತಾವು ಇಡ್ಲಿ ತಿಂದರಾ, ಹಾಗೆ ಮಲಗಿದರಾ.. ಇಂದಿಗೂ ಈ ಪ್ರಶ್ನೆ ಬೇಟೆ ಆಡುತ್ತದೆ ನನ್ನನ್ನು. ಅದಕ್ಕಿಂತ ಕೊರೆಯುವುದು ಎಂದರೆ ನಾನು ಆಮೇಲೆ ಅಪ್ಪನಿಗೆ ’ಸಾರಿ’ ಕೇಳಲಾಗಲೇ ಇಲ್ಲ ಎನ್ನುವುದು.. ಅದು ನನ್ನ ಪಾಲಿನ ಸಾಲ, ನಾ ಎಂದೂ ತೀರಿಸಲಾಗದ, ಹೊತ್ತೇ ಬದುಕಬೇಕಾದ ಹೊರೆ.

ಅಂತಹುದೇ ಇನ್ನೊಂದು ಬಾಕಿ, ಇದು ನಾನು ತೀರಿಸಲಾದ ಬಾಕಿ. ನನ್ನ ತಂಗಿಯ ಮಗ ಆಗ ನಾಲ್ಕನೆ ತರಗತಿ ಪರೀಕ್ಷೆ ಬರೆದಿದ್ದ. ಕ್ಲಾಸಿಗೆ ಫಸ್ಟ್ ಬಂದರೆ ಏನೋ ಕೊಡಿಸ್ತೀನಿ ಅಂದಿದ್ದೆ. ಪಾಪ ಹುಡುಗ ಮೊದಲನೆಯ ಸ್ಥಾನ ಪಡೆಯಲಾಗಿರಲಿಲ್ಲ. ಅವರ ಮನೆಗೆ ಹೋದವಳು ಅವನನ್ನು ಮಾತನಾಡಿಸಲಿಲ್ಲ. ಮೃದು ಸ್ವಭಾವದ ಅವನು ಒಳಗೆ ಹೋಗಿ ಅಮ್ಮನ ಹತ್ತಿರ ಹೇಳುತ್ತಿದ್ದ, ’ಮಾರ್ಕ್ಸ್ ಕಡಿಮೆ ಬಂದರೆ ನಾನು ಮಗ ಅಲ್ಲವೇನಮ್ಮ’ ಅಂತ.. ಯಾರಾದರೂ ಕೆನ್ನೆಗೆ ಬಾರಿಸಿದ್ದರೂ ಅಷ್ಟು ಸಂಕಟವಾಗುತ್ತಿರಲಿಲ್ಲ ನನಗೆ. ಎಂಟರ ಪೋರ ನಾನು ಬದುಕನ್ನು ನೋಡುವ ದೃಷ್ಟಿಯನ್ನೇ ಬದಲಿಸಿದ್ದ. ಸಾಧನೆಗಿಂತ ಸಂಬಂಧ ದೊಡ್ಡದು ಅಂತ ಕಲಿಸಿದ್ದ. ಅದೇ ಕಡೆ. ಅಂಕಗಳ ಭ್ರಮೆ ನನ್ನ ಕಣ್ಣಿಂದ ಕಳಚಿಬಿತ್ತು. ಆಗ ನನ್ನ ನಡುವಳಿಕೆಯನ್ನು ನಾನು ಬದಲಿಸಿಕೊಂಡೆ ಮತ್ತು ನನ್ನ ಬದಲಾವಣೆ ಅವನಿಗೆ ಗೊತ್ತಾಯಿತು ಎನ್ನುವುದೇ ನನ್ನ ಪಾಲಿನ ಕ್ಷಮೆ ಮತ್ತು ಬಿಡುಗಡೆ. ಹೀಗೆ ಸಣ್ಣದು ಎಂದು ನಾವು ಅಂದುಕೊಂಡ ಎಷ್ಟು ತಪ್ಪುಗಳು ಜರುಗಿರುತ್ತವೆ ನಮ್ಮಿಂದ? ಅವನ್ನು ಅಳಿಸಲಿಕ್ಕಂತೂ ಆಗುವುದಿಲ್ಲ, ಅದರ ತಪ್ಪನ್ನಾದರೂ ಒಪ್ಪಿಕೊಂಡರೆ ನಮ್ಮ ನೆನ್ನೆಗಳ ಮೂಟೆಯಿಂದ ಸ್ವಲ್ಪ ತೂಕ ಇಳಿಸಬಹುದಾ?
ನಮಗೆ ನಾವು ಮಾಡಿದ್ದು ತಪ್ಪು ಅಂತ ಗೊತ್ತಾದ ಕೂಡಲೆ ಕ್ಷಮೆ ಕೇಳಿಬಿಡಬೇಕು, ತಡವಾದರೆ ಆ ಸಾಲ ತೀರದೆಯೇ ಹೋಗಿಬಿಟ್ಟರೆ. ಕ್ಷಮೆ ನೀಡಬೇಕಾದವರೇ ದೂರಾಗಿಬಿಟ್ಟರೆ, ಅಥವಾ ಅವರಿಗೆ ನಮ್ಮ ಕ್ಷಮೆಯೇ ಅವರಿಗೆ ಬೇಡ ಎಂದಾಗಿಬಿಟ್ಟರೆ? ಸಹಾಯ ಕೇಳಿದವರು ಕೇಳಿದಾಗ ಸಹಾಯ ಮಾಡದೆ, ನಾವು ಕೊಡಲು ಕೈ ಚಾಚಿದಾಗ ಅವರು ಕೈ ಹಿಂದೆಗೆದುಕೊಂಡು ಬಿಟ್ಟರೆ? ಅದಕ್ಕಿಂತ ದೌರ್ಭಾಗ್ಯ ಉಂಟಾ? ಕನಿಷ್ಠ ಇಂತಹ ವಿಷಯಗಳಲ್ಲಾದರೂ ನಾವು ಆ ಆ ಕ್ಷಣಗಳಲ್ಲೇ ಬದುಕಿಬಿಡಬೇಕು ಅಲ್ಲವಾ?
ಅದೆಲ್ಲಾ ಇರಲಿ, ಇದೆಲ್ಲಾ ಕ್ಷಮೆಯ, ನೋವಿನ ಹೊರೆಯ ವಿಷಯ ಆಯಿತು. ಆದರೆ ಇದಕ್ಕಿಂತ ಹತಭಾಗ್ಯ ಸಂಗತಿ ಏನು ಗೊತ್ತಾ? ನಾವು ಪ್ರೀತಿಸುವವರಿಗೆ, ನಮ್ಮನ್ನು ಪ್ರೀತಿಸುವವರಿಗೆ ಅದನ್ನು ಹೇಳದೆ ಇರುವುದು. ಅದಕ್ಕೆ ಸಾರಿ ಕೇಳಬೇಕೆಂದಿದ್ದರೆ ಕೇಳಿಬಿಡಿ, ಪ್ರೀತಿಯ ವಿಷಯ ಹೇಳಬೇಕೆಂದಿದ್ದರೆ ಹೇಳಿಬಿಡಿ, ಅಪ್ಪನಿಗೆ, ಅಮ್ಮನಿಗೆ, ಅಕ್ಕನಿಗೆ, ಗೆಳೆಯನಿಗೆ, ಮಗಳಿಗೆ, ಮಗನಿಗೆ, ತಂಗಿಗೆ, ಗಂಡನಿಗೆ, ಹೆಂಡತಿಗೆ…
ಸಂಧ್ಯಾರಾಣಿ ಕಾಲಂ : ಹೇಳಬೇಕು ಅನಿಸಿದರೆ ಹೇಳಿಬಿಡಿ…
ನಿಮಗೆ ಇವೂ ಇಷ್ಟವಾಗಬಹುದು…

’ಮಾರ್ಕ್ಸ್ ಕಡಿಮೆ ಬಂದರೆ ನಾನು ಮಗ ಅಲ್ಲವೇನಮ್ಮ’ ಅಂತ.. What a touchy sentence! Isn’t this every kid would ask? By insisting too much, we have been depriving the children of their childhood. This is a very emotional article. We have been, in the pressure of life, ignoring the happiness that we can derive out of small things & incidences. We need to live today with a vision for tomorrow. Indeed, relations are more important than anything else.
Beautiful…..ಮನಸ್ಸಿನ ಕಪಾಳಕ್ಕೆ ಎರಡು ಬಿಗಿದು “ಕೇಳಿಸ್ಕೋ ಇಲ್ಲಿ ” ಅಂತ ಹೇಳುವಂತಿದೆ. Superb!
Madam, bahala chennagi barediddiri……Especially ’ಮಾರ್ಕ್ಸ್ ಕಡಿಮೆ ಬಂದರೆ ನಾನು ಮಗ ಅಲ್ಲವೇನಮ್ಮ’ – ee ondu sentence saaku….
Nimma personal experience taraha – nannalloo kelavu haageye……ulidubittive……
Bahala nija….helodakke…badukodakke kaayalebaardu.
ಸುರಿಯದೆ ಹೋದ ಮಳೆ
ಆಡದೆ ಉಳಿದ ಮಾತು
ಎರಡರಿಂದಲೂ,
ಎದೆಯೊಳಗೆ ಧಗೆ ಹೆಚ್ಚು
so moving madam.
ಹೌದು, ಹೇಳಬೇಕು ಅನಿಸಿದಾಗ ಹೇಳಬೇಕು, ಅಷ್ಟೇ ಅಲ್ಲಾ ಹೇಳಬೇಕು ಅನ್ನಿಸಿದ್ದನ್ನು, ಮನಸ್ಸಿನಲ್ಲಿದ್ದದ್ದನ್ನು ಇದ್ದಂತೆ ಹೇಳಿಬಿಡಬೇಕು. ಆಗ, ನಿನ್ನೆ ಏನು/ಏಕೆ ಹೇಳಿದ್ದೆ ಎಂಬ ಆತಂಕ ಅರ್ಧದಷ್ಟು ಕಮ್ಮಿಯಾಗಿರುತ್ತದೆ.
ಇದು ಕೂಡಾ ಹೇಳುವದು ಸುಲಭ ಮಾಡುವದು ಅತೀ ಕಷ್ಟ ಕೆಟಗರಿಯದೆ. ‘ಬದುಕು’ ನಿರಂತರ ಪಾಠ ಕಲಿಸುವ, ಅಭ್ಯುದಯದತ್ತ ಕರೆದೊಯ್ಯುವ ಸಖನೇನೋ?
~ಅನಿಲ
ಸಂಧ್ಯಾ, ಇದನ್ನೋದಿದ ಮೇಲೆ ನಿನಗೊಂದು ವಿಚಾರ ಹೇಳಲೇಬೇಕು. ವಾರದ ಹಿಂದೆ ಕಟೀಲು, ಸುಬ್ರಹ್ಮಣ್ಯ, ಧರ್ಮಸ್ಥಳ ಹೋಗಿದ್ದೆವು. ನಮ್ಮ ಚಿಕ್ಕ ಗುಂಡ ಸ್ವಾತಿ ಏನೇ ಮಾಡಿದ್ರೂ ಬೇರೆ ಯಾರ ಬಳಿಯೂ ಹೋಗದೆ ಪೂರ ಪೂರ ನನ್ ಬಳಿಯೇ ಇದ್ದಳು. ಕಟೀಲು, ಅಲ್ಲಿಂದ ಸ್ವಲ್ಪ ದೂರದಲ್ಲಿರುವ ನಮ್ಮಮ್ಮನ ಮನೆ ಮುಗಿಸಿ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಹೋಗೋ ಹೊತ್ತಿಗೆ ಶುರುವಾಯ್ತು ಪ್ರಣತಿಗೆ “ಹಲ್ಲುನೋವು” ಅನ್ನೋ ರಗಳೆ. (ನಮ್ ಪ್ರಕಾರ ಅವತ್ತು ಅದು ರಗಳೆ). ನಾನು ಪೂರ ಸ್ವಾತಿ ಹತ್ತಿರವೇ ಇದ್ದ ಕಾರಣ ಅಮ್ಮ ಸಿಗಲಿಲ್ಲ ಅಂತ ಹೀಗ್ಮಾಡ್ತಿದಾಳೆ ಅಂದ್ರು ಎಲ್ಲರೂ. ಿವಳನ್ನು ಬಿಟ್ಟು ಅವಳನ್ನು ನಾ ರಮಿಸಿದ್ದೂ ಆಯ್ತ. ಏನೇ ಮಾಡಿದ್ರೂ ಮುಗೀಲಿಲ್ಲ. ಕೊನೆಗೆ ನಿಜಕ್ಕೂ ಹಲ್ಲುನೋವಾ ನೋಡಲು ಐಸ್ ಕ್ರೀಂ ಕೊಟ್ಟಾಯ್ತು. ಚೆನ್ನಾಗೇ ತಿಂದಳು. ಎಲ್ಲರೂ ಸುಮ್ಮನೇ ಹಠ ಮಾಡ್ತಿದಾಳೆ ಅಂದು ಕೊನೆಗೆ ಎಲ್ಲರೂ ಗದರಿ ಭಯಕ್ಕೇ ಸುಮ್ಮನಾಗೋದು. ಮತ್ತೊಂದಷ್ಟು ಹೊತ್ತು ಆದ ತಕ್ಷಣ ಅಳೋದು ನಡೆದೇ ಇತ್ತು. ಪ್ರಯಾಣದುದ್ದಕ್ಕೂ ಮಗುವನ್ನ ಎತ್ತಿಕೊಂಡೇ ಇದ್ದ ಸುಸ್ತು, ಆ ಉರಿ ಬಿಸಿಲಿನ ಬೇಗೆಗೆ ಸಾಕಾಗಿ ಬೆಂಗಳೂರಿಗೆ ವಾಪಸಾದ ತಕ್ಷಣ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಬೇಕು ಎಂಬ ಹಪಾಹಪಿ. ಅವತ್ತು ರಾತ್ರಿ ಮತ್ತೆ ಶುರುವಾಯ್ತು. “ಅಮ್ಮಾ ನೀ ತಂಗಿ ಹತ್ರ ಹೋಗ್ಬೇಡ; ನನ್ ಹತ್ರ ಬಾ; ನಂಗೆ ಹಲ್ಲು ನೋವು” ಅಂತ ಯಾವಾಗ ಅಂದಳೋ ಎಲ್ಲರಿಗೂ ಇದು ಸುಮ್ಮನೇ ಅಮ್ಮ ಹತ್ತಿರ ಬರ್ಲಿ ಅಂತ ಿವಳು ಹೀಗ್ಮಾಡ್ತಿದಾಳೆ ಅನ್ನಿಸ್ತು. ಕೊನೆಗೆ ಒಂದು ಕ್ಷಣ ನಂಗೂ ತೀರ ಕೋಪ ಬಂದು ಅವಳನ್ನು ಮೈನ್ ಡೋರ್ ವರೆಗೂ ಕರೆತಂದು “ಕೆಳಗೆ ಘೂರ್ಕ ಬರ್ತಾನಲ್ಲ ಅಲ್ಲಿ ಬಿಟ್ಟು ಬರ್ಲಾ” ಕೇಳಿದೆ. ಭಯವಾಗಿ ಸುಮ್ಮನೇ ಮಲ್ಕೊಂಡ್ಲು. ಅವಳಿಗೆ ನಿದ್ದೆ ಬಂತೋ ಇಲ್ಲವೋ ನೋಡುವಷ್ಟು ಶಕ್ತಿಯೂ ನನಗಿರಲಿಲ್ಲ. ದಿನಾ ಅವಳ ಜತೆ ಮಲಗುತ್ತಿದ್ದ ಅವಳ ಅಪ್ಪನೂ ಅವಳ ಅಳುವಿಂದ ಬೇಸತ್ತು ಡ್ರೈವಿಂಗಿನ ಸುಸ್ತು ಬೇರೆ ಕಾಡಿ ಬೇರೆ ರೂಮಲ್ಲಿ ಮಲಗಿದ್ರು. ಇಷ್ಟೆಲ್ಲ ಆಗಿ ಮುಗಿಯೊ ಹೊತ್ತಿಗೆ ಬೆಳಗಿನ ಜಾವ 4:30. ಅತ್ತೂ ಅತ್ತೂ ಬಹುಶಃ ಅವಳಿಗೆ ನಿದ್ದೆ ಬಂದಿರಬೇಕು. ನಾನೂ ಒಂದೆರಡು ಘಂಟೆ ನಿದ್ದೆ ಮಾಡಿ ಎದ್ದೆ. ಸ್ವಲ್ಪ ಹೊತ್ತಿಗೇ ಮತ್ತೆ ಎದ್ದು ಬಂದು ಹಲ್ಲು ನೋವು ಅಂತ ಶುರುವಿಟ್ಟಳು. ನಿದ್ದೆ ಮುಗಿಸಿ ಎದ್ದ ನಾನು ಸ್ವಲ್ಪ ಫ್ರೆಶ್ ಆಗಿದ್ದೆ. ಸುಮ್ಮನೇ ಅಲ್ಲೇ ಮಲಗಿ ಎದೆ ಮೇಲೆ ಮಲಗಿಸಿಕೊಂಡರೆ “ಅಮ್ಮಾ ನಾ ಸುಳ್ಳು ಹೇಳ್ತಿಲ್ಲ; ನಿಜಾ ಹಲ್ಲು ನೋವು. ಏನಾದ್ರೂ ಮಾಡಮ್ಮಾ” ಅಂದು ಜೋರಾಗಿ ತಬ್ಬಿಕೊಂಡು ಅತ್ತಳು. ಸರಿ ಲವಂಗದೆಣ್ಣೆ ಇತ್ಯಾದಿಗಳೆಲ್ಲ ಆಯ್ತು. ವಾಸಿಯಾಗಲಿಲ್ಲ. ನಮ್ಮಮ್ಮನ ಮನೇಲಿ ಬಿದ್ದಿದ್ದು ನೆನಪಾಗಿ ಅವರಪ್ಪ ಬಿದ್ದ ಏಟಿರಬಹುದು ಸರಿಹೋಗುತ್ತೆ ಸಂಜೆ ಹೊತ್ತಿಗೆ ಅಂದು ನೋವಿಗೆ ಔಷಧಿ ಕೊಟ್ಟು ಕ್ಲಿನಿಕಿಗೆ ಹೋದರು. ಅವಳ ಬೇಡಿಕೆಯಂತೆ ನಾ ಎಲ್ಲೂ ಹೋಗದೆ ಮನೇಲೇ ಅವಳ ಪಕ್ಕದಲ್ಲೇ ಇದ್ದೆ. ಮಧ್ಯಾಹ್ನದ ಹೊತ್ತಿಗೆ ಕೆನ್ನೆ ಸಣ್ಣಗೆ ಊದಿಕೊಂಡಿತ್ತು. ಆಮೇಲೆ ನೋಡಿದರೆ ಮಂಗನಬಾವು (Mumps) ಆಗಿತ್ತು. ಅಂಥ ನೋವನ್ನು ಅದ್ಹೇಗೆ ತಡಕೊಂಡಳೋ, ಜತೆಗೆ ನಮ್ಮೆಲ್ಲರ ಬೈಗುಳಗಳನ್ನೂ. ಕಲ್ಲು ದೇವರ ನೋಡಹೋದವರು ಕಣ್ಣೆದುರಿನ ದೇವರ ನಿರ್ಲಕ್ಷ್ಯ ಮಾಡಿದ್ದೆವು. ಯಾಕೋ ಬಹಳ ಸಂಕಟವಾಯ್ತು. ವೇದನೆ ತಡೆಯಲಾರದೇ ಅವಳ ಎದುರು ಮಂಡಿಯೂರಿ ಕೂತು ಎರಡೂ ಕೈ ಹಿಡಿದು “ಅಮ್ಮ Sorry ಮಗಳೇ; ನಿಂಗೆ ನೋವಾಗಿದ್ದು ನಿಜಕ್ಕೂ ನಂಗೊತ್ತಾಗಿಲ್ಲ ಕಂದಾ. ಇನ್ನೊಂದ್ಸಾರ್ತಿ ಹೀಗಾಗದಂತೆ ನೋಡ್ಕೋತೀನಿ. ನನ್ ಮೇಲೆ ಬೇಜಾರು ಮಾಡ್ಕೋಬೇಡ” ಅನ್ನುವಷ್ಟರಲ್ಲಿ ನಂಗೆ ದುಖಃ ಉಕ್ಕಿ ಬಂದಿತ್ತು. ಅವಳು ತನ್ನ ನೋವು ಮರೆತು “Its ok ಅಮ್ಮಾ; ಆದ್ರೆ ನೀ ಅಳ್ಬೇಡ; ನಂಗೂ ಅಳು ಬರುತ್ತೆ.” ಅಂದು ಕಣ್ಣೊರೆಸಿದಳು. ಆ ಕ್ಷಣ ನನಗವಳು ನಿಜಕ್ಕೂ ದೇವರಿಗಿಂತ ಮಿಗಿಲೆನಿಸಿದ್ದು; ಬದುಕಿನ ಬಹುದೊಡ್ಡ ಪಾಠ ಕಲಿಸಿದ್ದು ಸತ್ಯ.
ಇನ್ನೂ ನನ್ನೊಳಗೆ ಆ ನೋವು ಪೂರ ಹೋಗಿಲ್ಲವಾದರೂ ಕ್ಷಮೆ ಕೇಳಿದ ಸಮಾಧಾನ ನೋವನ್ನು ನೀಗಿಸುವಲ್ಲಿ ಸಹಕರಿಸಿದೆ. ಹೇಳಬೇಕು ಅನ್ನಿಸಿದ್ದನ್ನ ಹೇಳಿಬಿಟ್ಟ ನಿರಾಳ ನನ್ನೊಳಗನ್ನು ಒಂದಷ್ಟು ಮಟ್ಟಿಗೆ ಶಾಂತಗೊಳಿಸಿದೆ.
ಅಂ ಹಾಗೆ ಸಂಧ್ಯಾ ಆ ಸಿನೆಮಾ ನನ್ನ ಅತೀ ಇಷ್ಟದ ಸಿನೆಮಾಗಳಲ್ಲೊಂದು ಮತ್ತು ಅವರಿಬ್ಬರೂ ಬೆಳದಿಂಗಳ ರಾಥ್ರಿಯಲ್ಲಿ ಕಾಲು ಚಾಚಿ ಒರಗಿದ ದೃಶ್ಯ ಮೋಹಕವಾಗಿ ಮನದಲ್ಲಿ ನೆಲೆಯಾಗಿದೆ
ಮಾತು ಸ್ವಗತಗಾಳಾದಾಗ ಧಾರಾಳವಾಗುವ ಇಂತಹ ವಿಚಾರಗಳು, ನಡೆಯಲ್ಲಿ ಬರುವುದೇ ಇಲ್ಲ ಅಲ್ಲವೇ? ಮನಸ್ಸನ್ನು ಮೃದುಗೊಳಿಸಿ, ಹಸನುಗೊಳಿಸುತ್ತ ಸಾಗಿದರೆ, ಮುಂದೊಂದು ದಿನ ಆ ಅರಳಿಮರವೋ, ಆಲದ ಮರವೋ ದಕ್ಕೀತೇನೊ!