
ನಾಟಕ ಮುಗಿದಿತ್ತು. ಅದು ಮುಗಿಯಿತು ಅಂತ ಅರಿವಾಗಬೇಕಾದರೆ ನಾಟಕವನ್ನು ಆಯೋಜಿಸಿದ್ದ ’ಸರ್ವಸ್ವ’ ತಂಡದ ನಾಗರಾಜ ಸೋಮಯಾಜಿ ವೇದಿಕೆಯ ಮೇಲೆ ಬರಬೇಕಾಯ್ತು. ಅಷ್ಟರಮಟ್ಟಿಗೆ ವೀಕ್ಷಕರು ನಾಟಕದಲ್ಲಿ ಮುಳುಗಿ ಹೋಗಿದ್ದರು, ಅಷ್ಟರ ಮಟ್ಟಿಗೆ ನಾಟಕ ನಮ್ಮಲ್ಲಿ ಇಳಿದುಹೋಗಿತ್ತು. ನಾಟಕ ನೋಡುತ್ತಿರುವಾಗ ನಟ ನಟಿಯರ ಸಹಜ ಅಭಿನಯಕ್ಕೆ ಮಾರುಹೋಗಿ, ಮುಗಿದ ಮೇಲೆ ಎದ್ದು ನಿಂತು ಚಪ್ಪಾಳೆ ಹೊಡೆಯಲೇಬೇಕು ಅಂತಿದ್ದೆ, ಅದು ನೆನಪಿಗೇ ಬರಲಿಲ್ಲ, ಕುರ್ಚಿಗೆ ಅಂಟಿ ಕೂತಿದ್ದೆ, ಒಂದು ಅಗಾಧ ಮೌನವನ್ನು ಗಂಟಲಲ್ಲಿ ಹೊತ್ತು. ಆ ಮೌನದೊಡನೆ ಇನ್ನಷ್ಟು ಹೊತ್ತು ಇರಬೇಕಿತ್ತು ನನಗೆ, ಹಾಗೆಂದೇ ಎಂದಿನಂತೆ ನಾಟಕ ಮುಗಿದ ಮೇಲೆ ಸ್ನೇಹಿತರ ಜೊತೆ ಮಾತಿಗೆ ನಿಲ್ಲದೆ ಹೊರಟು ಬಂದೆ.
ಒಂದು ನಾಟಕದ ಉದ್ದೇಶ ಕೇವಲ ಬೆಚ್ಚಿ ಬೀಳಿಸುವುದು ಎಂದಿದ್ದರೆ ಅದರಲ್ಲಿ ಈ ನಾಟಕ ಯಶಸ್ವಿಯಾಗಿತ್ತು, ನಾಟಕ ಇನ್ನಿಲ್ಲದಂತೆ ಬೆಚ್ಚಿಬೀಳಿಸಿತ್ತು. ಆದರೆ ಅದರಿಂದಾಚೆಗೂ ನಾಟಕ ನಮ್ಮೊಡನೆ ಉಳಿದರೆ, ನಮ್ಮನ್ನು ಆ ಬಗ್ಗೆ ಚಿಂತಿಸುವಂತೆ ಮಾಡಿದರೆ ನಾಟಕದ ಉದ್ದೇಶ ಸಾರ್ಥಕ ಎನ್ನುವುದು ನನ್ನ ಭಾವನೆ. ಸಖಾರಾಂ ಹಾಗೆ ಮಾಡಿದ್ದ, ನೀವು ಅವನನ್ನು ಒಪ್ಪುತ್ತೀರೋ, ಬಿಡುತ್ತೀರೋ ಅದು ನಿಮ್ಮ ಹಣೆಬರಹ, ಆದರೆ ಅವನನ್ನು ನಿರ್ಲಕ್ಷಿಸಿ ಹೆಗಲ ಮೇಲಿನಿಂದ ಇಳಿಸುವುದು ಮಾತ್ರ ಸುಲಭವಾಗಿರಲಿಲ್ಲ, ಸಿಂದಾಬಾದನ ಮುದುಕನ ರೀತಿ ಅವನು ಕುಳಿತೇ ಇದ್ದ. ಥೇಟ್ ಇಂತಹದ್ದೇ ಪರಿಣಾಮವನ್ನು ಇನ್ನೊಂದು ನಾಟಕ ಮಾಡಿತ್ತು, ’ಎಲ್ಲಿ ಜಾರಿತೋ ಮನವು…’. ನನಗೆ ನೆನಪಿದ್ದಂತೆ ಅದೂ ಸಹ ಮರಾಠಿ ಮೂಲದ ನಾಟಕ, ಆಗಲೂ ನಾಟಕ ಮುಗಿದ ಮೇಲೆ ನನ್ನಲ್ಲಿ ಒಂದು ಮೌನ ಇತ್ತು. ಅಲ್ಲೂ ಸಹ ನೈತಿಕತೆ ಮತ್ತು ಅನೈತಿಕತೆಯ ಪ್ರಶ್ನೆ ಇತ್ತು, ಸಮಾಜ ಒಪ್ಪಿಕೊಂಡ ಮೌಲ್ಯಗಳು ಮತ್ತು ಅವುಗಳ ಉಲ್ಲಂಘನೆ ಅಲ್ಲೂ ಇತ್ತು. ದೈಹಿಕ ಕ್ರೌರ್ಯ ಅಲ್ಲಿ ಇರಲಿಲ್ಲ ಎನ್ನುವುದು ಬಿಟ್ಟರೆ ಈ ಪ್ರಶ್ನೆಗಳು ಅಲ್ಲೂ ಇದ್ದವು, ಇಲ್ಲೂ ಇದ್ದವು. ಹಾಗಾದರೆ ಎರಡು ನಾಟಕಗಳ ನಡುವಿನ ಸುಮಾರು ೩೦-೩೫ ವರ್ಷಗಳ ಅಂತರದಲ್ಲಿ ಕ್ರೌರ್ಯದ ಅಭಿವ್ಯಕ್ತಿ ಹಾಗು ಚೌಕಟ್ಟು ಹೀಗೆ ಬದಲಾಗಿದೆಯಾ ಅಂತ ಒಂದು ಪ್ರಶ್ನೆ ಸಹ ಮೂಡಿತ್ತು ನನಗೆ. ಇನ್ನು ನಾಟಕದ ವಿಷಯಕ್ಕೆ ಬರುವುದಾದರೆ,
ಇದು ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್ ಅವರು ಬರೆದ ನಾಟಕ, ಹಸಿಹಸಿ ದೃಶ್ಯಗಳನ್ನು ಅಷ್ಟೇ ಹಸಿಹಸಿಯಾಗಿ ಕಟ್ಟಿಕೊಟ್ಟ ನಾಟಕ. ನಿಜಜೀವನವನ್ನು ಒಂದು ಕಲಾಕೃತಿ ಮಾಡುವಾಗ ಹಿಂಸೆ ಮತ್ತು ಕ್ರೌರ್ಯವನ್ನು ಹಾಗೇ ಕಟ್ಟಿಕೊಡಬೇಕೆ ಅಥವಾ ಅವುಗಳ ತೀವ್ರತೆಯನ್ನು ಕಡಿಮೆ ಮಾಡಬೇಕೆ ಎನ್ನುವ ವಿಷಯದಲ್ಲಿ ಸುಮಾರು ಚರ್ಚೆ ನಡೆದಿದೆ. ರಂಗದ ಮೇಲೆ ಏನು ತೋರಿಸುತ್ತೇವೆ ಎನ್ನುವುದರ ಬಗ್ಗೆ ಎಚ್ಚರವಿರಬೇಕು ಎನ್ನುವುದು ಒಂದು ವಾದವಾದರೆ, ಪ್ರೇಕ್ಷಕನ ಪ್ರಜ್ಞಾವಂತಿಕೆಯ ಮೇಲೆ ನಮಗೆ ನಂಬಿಕೆ ಇದೆ, ನಾವು ಅಭಿವ್ಯಕ್ತಿಸುವ ವಿಷಯ ಮತ್ತು ರೀತಿ ಎರಡನ್ನೂ ನೋಡಿ ಆತ ತನ್ನದೊಂದು ಕಥೆ ಕಟ್ಟಿಕೊಳ್ಳಬಲ್ಲ ಎನ್ನುವ ವಿಶ್ವಾಸ ನಮಗಿದೆ ಎನ್ನುವುದು ಇನ್ನೊಂದು ವಾದ. ೧೯೭೨ ರಲ್ಲಿ ಈ ನಾಟಕ ರಚನೆಯಾಗಿ ಪ್ರದರ್ಶನಗೊಂಡಾಗ ಅದು ಆಗಿನ ಸಮಾಜಕ್ಕೆ ಯಾವ ರೀತಿ ಆಘಾತ ಕೊಟ್ಟಿರಬಹುದು ಎಂದು ನಾನು ಊಹಿಸಬಲ್ಲೆ.
ಪರಸ್ಪರ ಸಮ್ಮತಿಯೊಂದಿಗೆ ಮದುವೆಯ ಹಂಗಿಲ್ಲದೆ ಒಟ್ಟಿಗಿರುವುದು ಸಾಮಾಜಿಕ ಒಪ್ಪಿಗೆಯನ್ನು ಪಡೆದುಕೊಳ್ಳದಿದ್ದರೂ, ತೀವ್ರ ವಿರೋಧವನ್ನು ಹುಟ್ಟಿಸದ ಈ ಕಾಲದಲ್ಲಿ ಸಖಾರಾಂ ನ ಈ ’ಜೊತೆಯಲ್ಲಿ ಇರುವಿಕೆ’ಗೆ ನಮ್ಮ ತಕರಾರಿಲ್ಲದಿದ್ದರೂ, ಅವನ ಪುರುಷಾಹಂಕಾರ ಮೂಲದಿಂದ ಬಂದ ಹಿಂಸೆಗೆ ಮಾತ್ರ ಮನಸ್ಸು ಒಪ್ಪುವುದಿಲ್ಲ. ಆದರೆ ೧೯೭೨ ರ ಕಾಲವನ್ನೇ ತೆಗೆದುಕೊಳ್ಳಿ, ಆಗ ಈ ನಾಟಕದ ಪ್ರತಿ ದೃಶ್ಯ, ಪ್ರತಿ ಮಾತೂ ಶಾಕ್ ಕೊಟ್ಟಿರುತ್ತದೆ, ಇಲ್ಲಿ ಸಖಾರಾಂ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದವ, ಅವರನ್ನೇ ಇನ್ನಿಲ್ಲದಂತೆ ಬೈಯ್ಯುತ್ತಾನೆ, ವಿವಾಹ ವ್ಯವಸ್ಥೆಯನ್ನೇ ಅಲ್ಲಗಳೆದು ಈಗಾಗಲೇ ಆರು ಹೆಂಗಸರ ಜೊತೆ ಇದ್ದಾನೆ, ನಾಟಕ ಮುಗಿಯುವಾಗ ೭ನೆಯ ಹೆಣ್ಣು ಮನೆಗೆ ಬಂದಿರುತ್ತಾಳೆ, ಕುಡಿದು ತೂರಾಡುತ್ತಾ ಗಣಪತಿಯ ಪೂಜೆ ಮಾಡುತ್ತಾನೆ, ಇವನ ಮುಸಲ್ಮಾನ ಗೆಳೆಯ ಗಣಪತಿ ಎದಿರು ’ಗಜದು ಮುಖನೆ, ಗಣದು ಪತಿಯೆ’ ಎಂದು ಹಾಡುತ್ತಾನೆ, ಹೆಣ್ಣು ಕುಡಿಯುತ್ತಾಳೆ, ಗಂಡನನ್ನು ಹೊಡೆಯುತ್ತಾಳೆ, ಒದೆಯುತ್ತಾಳೆ, ಗಂಡನನ್ನು ಬಿಟ್ಟು ಬರುತ್ತಾಳೆ, ಕರೆಯಲು ಬಂದರೆ ಉಗಿದು ಓಡಿಸುತ್ತಾಳೆ, ಸೀರೆ ಎತ್ತಿ ಕೂಗಾಡುತ್ತಾಳೆ, ಹೀಗೆ ಪೋಣಿಸುತ್ತಾ ಹೋಗಬಹುದು. ಇವುಗಳಲ್ಲಿ ಒಂದು ದೃಶ್ಯ ಸಾಕು, ಪ್ರತಿಭಟನೆ ವ್ಯಕ್ತವಾಗಲು, ಇನ್ನು ಇವೆಲ್ಲಾ ಒಟ್ಟಿಗೆ, ಒಂದೇ ನಾಟಕದಲ್ಲಿದ್ದರೆ ಹೇಗಿರುತ್ತದೆ? ಇದನ್ನು ಊಹಿಸಬಹುದಾದರೆ, ಆಗ ಆ ನಾಟಕಕ್ಕೆ ಬಂದ ಪ್ರತಿಭಟನೆಯನ್ನೂ ಊಹಿಸಬಹುದು.
ಈ ಕಾರಣಗಳನ್ನೂ ಮೀರಿ ಈ ನಾಟಕ ನಮ್ಮನ್ನು ಡಿಸ್ಟರ್ಬ್ ಮಾಡಲು ಇನ್ನೊಂದು ಕಾರಣ ಇದೆ, ಅದು ಸಖಾರಾಂ ನ ಕ್ರೌರ್ಯ ಮತ್ತು ಆತ ಲಕ್ಷ್ಮಿಗೆ ನೀಡುವ ದೈಹಿಕ ಹಿಂಸೆ ಮತ್ತು ಆತನ ಹಿಂಸಾರತಿ. ಆದರೆ ಅದೇ ದೈಹಿಕ ಹಿಂಸೆ ಈ ಸಮಾಜದ ಒಂದು ಭಾಗವೇ ಅಲ್ಲವೆ, ನಮ್ಮ ಮೃದು ಮನೋಭಾವಕ್ಕೆ ಅದು ಒಗ್ಗದೆ ಹೋಗಬಹುದು, ಎರಡು ಗಂಟೆ ಅದನ್ನೇ ನೋಡುವುದೇ ಒಂದು ಹಿಂಸೆ ಅನ್ನಿಸಬಹುದು, ನಿಜ, ಆದರೆ ಇಡೀ ಜೀವನ ಹಾಗೆ ಬದುಕಿದ ಜೀವಗಳೆಷ್ಟಿಲ್ಲ ನಮ್ಮ ನಡುವೆ? ವೈವಾಹಿಕ ಹಿಂಸೆಯ ಎಷ್ಟು ಘಟನೆಗಳು ನಡೆದಿಲ್ಲ ನಮ್ಮ ನಡುವೆಯೇ…? ಏರು ಸ್ವರಗಳ ನಡುವೆ ಇದ್ದಕ್ಕಿದ್ದಂತೆ ಒಂದು ಮನೆಯ ಟಿವಿ ವಾಲ್ಯುಮ್ ಹೆಚ್ಚಾಗುತ್ತದೆ, ಮರುದಿನ ಆ ಮನೆಯ ಮಗು ಗೆಳೆಯರ ನಡುವೆ ಕಣ್ಣು ತಪ್ಪಿಸಿಕೊಳ್ಳುತ್ತಾ ಆಟವಾಡುತ್ತಿರುತ್ತದೆ, ’ಅದು, ಬಚ್ಚಲು ಮನೆಯಲ್ಲಿ ಜಾರಿ ಬಿದ್ದೆ’ ಎಂದು ಕತ್ತಿನ ಮೇಲಾದ ಗಾಯಕ್ಕೆ ಒಬ್ಬಾಕೆ ಸಬೂಬು ಹೇಳುತ್ತಿರುತ್ತಾಳೆ, ವೈವಾಹಿಕ ಹಿಂಸೆಯ ಬಗ್ಗೆ ಯಾವುದೋ ದೃಶ್ಯ ಟಿವಿಯಲ್ಲಿ ಬಂದರೆ ಇದ್ದಕ್ಕಿದ್ದಂತೆ ಮಗು ಮ್ಲಾನವಾಗುತ್ತದೆ.. … ಇವೆಲ್ಲಾ ಹಿಂಸೆಗಳೇ.. ದನಿ ಆಗದ ಹಿಂಸೆಗಳೇ… ಗಂಡ ಆಗಲಿ ಹೆಂಡತಿ ಆಗಲಿ ದನಿ ಏರಿಸದೆಯೆ, ಕೈ ಎತ್ತದೆಯೇ ಜೊತೆಯಲ್ಲಿರುವವರ ಜೀವನವನ್ನು ನರಕ ಮಾಡಿಬಿಡಬಲ್ಲರು, ಮಾತಿನಲ್ಲಲ್ಲ, ಮೌನದಲ್ಲೂ ಕೊಲ್ಲಬಹುದು, ಮುಟ್ಟದೆಯೂ, ಮುಟ್ಟಲು ಬಿಡದೆಯೂ ಹಣಿದು ಹಾಕಬಹುದು, ಹಿಂಸೆ ಇಲ್ಲೂ ಇರುತ್ತದೆ. ಅದನ್ನೆಷ್ಟು ನಿರಾಕರಿಸಲು ಸಾಧ್ಯ?

ನಾಟಕ ನೋಡುವಾಗ, ನೋಡಿದ ಮೇಲೆ, ನಾಟಕದ ಬಗ್ಗೆ ಆಮೇಲೆ ಓದಿದಾಗ ನಾನು ಗಮನಿಸಿದ್ದ ಇನ್ನೊಂದು ಅಂಶ ಎಂದರೆ ಎಲ್ಲರೂ ಸಖಾರಾಂ ನ ವ್ಯಕ್ತಿತ್ವದೊಳಗಿನ ಕ್ರೌರ್ಯವನ್ನು ಮಾತ್ರ ಗುರ್ತಿಸಿದ್ದರು, ಆದರೆ ನನಗನ್ನಿಸಿದ್ದು ಆ ನಾಟಕ ಹಾಗೆ ಕೇವಲ ಕಪ್ಪು ಬಿಳುಪುಗಳ ಪಾತ್ರಗಳ ನಾಟಕ ಅಲ್ಲ. ಅಲ್ಲಿನ ಮೂರು ಮುಖ್ಯ ಪಾತ್ರಗಳೂ ಸಂಕೀರ್ಣ ಪಾತ್ರಗಳೇ. ಮೂರು ಪಾತ್ರಗಳಲ್ಲೂ ಗ್ರೇ ಶೇಡ್ಸ್ ಇತ್ತು. ಹಾಗೆ ನಿಧಾನಿಸಿ ಯೋಚಿಸಿದಾಗ ಅಲ್ಲಿ ದುರಂತ ಪಾತ್ರವಾಗಿದ್ದು ಲಕ್ಷ್ಮಿ ಅಲ್ಲ, ಚಂಪಾ. ಈಗ ಒಂದೊಂದಾಗಿ ಆ ಪಾತ್ರಗಳ ಬಗ್ಗೆ ಯೋಚಿಸೋಣ.
ಈ ನಾಟಕದಲ್ಲಿ ಸಖಾರಾಂ ಮುಕ್ತ ಬದುಕಿನ ಆಕಾಂಕ್ಷಿ, ಅದಕ್ಕೆ ಪೂರಕವಾಗಿ ಇವನೊಂದು ಹುಸಿ ಸಂಸಾರದ ವ್ಯವಸ್ಥೆ ನಿರ್ಮಿಸಿಕೊಳ್ಳುತ್ತಾನೆ. ತನ್ನನ್ನು ಬಂಧಿಸಲೂ ಕೂಡದು, ಆದರೆ ಸಂಸಾರದ ಸಕಲ ಸವಲತ್ತುಗಳೂ ಸಿಗಬೇಕು ಎನ್ನುವ ಉದ್ದೇಶ ಇವನದು. ಅದರ ಹೊಣೆಯನ್ನೂ ತಪ್ಪಿಸಿಕೊಳ್ಳುವುದಿಲ್ಲ, ಆದರೆ ಹೊಣೆಯನ್ನು ಇವನ ನಿಭಂದನೆಗಳೊಂದಿಗೆ ಹೊರುತ್ತಾನೆ. ಮತ್ತು ಆ ನಿಭಂದನೆಗಳನ್ನು ಒಪ್ಪಿಕೊಳ್ಳುವ ದರ್ದು ಇರುವವರನ್ನೇ ಇವನು ಆರಿಸಿಕೊಳ್ಳುತ್ತಾನೆ. ಹಾಗೆ ಬಂದವರು ಇವನ ಮನೆ ಒಪ್ಪವಾಗಿಡಬೇಕು, ಇವನಿಗೆ ಸಮಯಕ್ಕೆ ತಕ್ಕಂತೆ ಚಹ, ಚಪಾತಿ, ಅನ್ನ ಆಗಬೇಕು, ಅವನು ಅಂಗಿ ಕಳಚಿದಾಗ ಒಂದು ಹೆಣ್ಣು ದೇಹ ಬೇಕು, ಆದರೆ ಅವಳು ಇವನಿಗೆ ಎದಿರು ಮಾತನಾಡಬಾರದು, ಯಾರದರೂ ಬಂದರೆ, ತಲೆ ಮೇಲೆ ಸೆರಗಿಲ್ಲದೆ ಹೊರಗೆ ಬರಬಾರದು! ಅಂದರೆ ಇವನು ಬಯಸುವುದು, ಶಾಸಿಸುವುದು ’ಗಂಡ’ನ ಸವಲತ್ತುಗಳನ್ನು, ಹಕ್ಕುಗಳನ್ನು. ಆದರೆ ಅದಕ್ಕೆ ಪ್ರತಿಯಾಗಿ ಆಕೆ ಹೆಂಡತಿಯ ಸ್ಥಾನ ಮಾನ ನಿರೀಕ್ಷಿಸುವ ಹಾಗಿಲ್ಲ. ಅವನ ಕ್ರೌರ್ಯ ಇರುವುದು ಇಲ್ಲಿ. ಇದು ಒಂಥರ ಬಂಧವಿಲ್ಲದ ಸಂಸಾರ. ಯಾರಿಗೇ ಇಷ್ಟವಿಲ್ಲದಿದ್ದರೂ ಅವರು ಹೊರಗೆ ಹೋಗಬಹುದು, ಅವರು ಹೋಗುವ ಊರಿಗೆ ಟಿಕೇಟು, ಎರಡು ಸೀರೆ ಕೊಡಿಸುವುದು ಇವನ ಜವಾಬ್ದಾರಿ! ಅದಕ್ಕೆ ಪ್ರತಿಯಾಗಿ ಇವನು ಬಂದ ಹೆಣ್ಣಿನ ಹೊಟ್ಟೆ, ಬಟ್ಟೆ ನೋಡಿಕೊಳ್ಳುತ್ತಾನೆ. ಅವರು ಎದುರು ಮಾತನಾಡಿದರೆ ಮಾತ್ರ ರಾಕ್ಷಸ, ಆದರೆ ಹೀಗೆ ಬಂದ ಒಬ್ಬಳು ಹೆಣ್ಣು ಕಾಯಿಲೆಯಾಗಿ ಹಾಸಿಗೆ ಹಿಡಿದಾಗ ಬೀದಿಗೆ ನೂಕದೆ, ಸಾಯುವ ವರೆಗೂ ನೋಡಿಕೊಂಡದ್ದೂ ಇದೆ. ಅಷ್ಟೇ ಅಲ್ಲ ದೇವರನ್ನೇ ನಂಬದ ಇವನು ಲಕ್ಷ್ಮಿಗಾಗಿ ಮನೆಗೆ ಗಣಪತಿ ತರುತ್ತಾನೆ, ಲಕ್ಷ್ಮಿ ತನ್ನ ಗೆಳೆಯ ಮುಸಲ್ಮಾನನಾದ ಕಾರಣ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳಬಾರದು ಎಂದಾಗ ರಂಪ ಮಾಡುತ್ತಾನೆ, ’ನನ್ನಂತಹ ನಾನೆ ಪೂಜೆ ಮಾಡಬಹುದಾದರೆ, ಅವನ್ಯಾಕೆ ಮಾಡಬಾರದು’ ಅನ್ನುವ ಪ್ರಜ್ಞೆ ಅವನಿಗಿದೆ.
ಅಲ್ಲದೆ ಅವನಿಗೆ ತಾನು ಇರುವ ಹಾಗೆ ಇರುವ ಚಂಪಳನ್ನು ಕಂಡರೆ ಒಳಗೊಳಗೆ ಒಂದು ಮೆಚ್ಚುಗೆ ಇರುತ್ತದೆ ಅನ್ನಿಸುತ್ತದೆ, ಅವಳಿಗಾಗಿ ಈ ’ಪುರುಷ ಸಿಂಹ’ ಅನ್ನ ಬಡಿಸಿಕೊಡುತ್ತಾನೆ, ಅವನ ಮಟ್ಟಿಗೆ ಅದು ಕ್ರಾಂತಿಯೇ. ಲಕ್ಷ್ಮಿಯೊಡನೆ ಇನ್ನು ಹೊಂದಾಣಿಕೆ ಸಾಧ್ಯವಿಲ್ಲ ಎಂದಾಗ ಸಹ ಅವನು ಅವಳನ್ನು ಹೊರಗೆ ನೂಕುವುದಿಲ್ಲ, ಅವಳನ್ನು ಎಬ್ಬಿಸಿ, ನಡುರಾತ್ರಿ ಕೂರಿಸಿಕೊಂಡು ಅವರಿಬ್ಬರು ಯಾಕೆ ಬೇರೆ ಆಗಬೇಕು ಎಂದು ಕನ್ವಿನ್ಸ್ ಮಾಡುತ್ತಾನೆ. ಮನೆಬಿಟ್ಟು ಹೋಗುವಾಗ ಲಕ್ಷ್ಮಿ ’ಜಾಸ್ತಿ ಕುಡಿಯಬೇಡಿ’ ಎಂದಾಗ ಒಂದು ಕ್ಷಣ ಆತ ಕೊಡುವ ಪ್ರತಿಕ್ರಿಯೆ ಅವನಲ್ಲಿನ ಅವನನ್ನು ತಂದು ಹೊರಗೆ ನಿಲ್ಲಿಸುತ್ತದೆ. ಅವನ ಪಾತ್ರದ ಈ ಸಂಕೀರ್ಣತೆಗೆ ಪೂರಕವಾಗಿ ಅವನ ಬಾಲ್ಯದ, ಅಥವಾ ಹಿಂದಿನ ಜೀವನದ ಏರು ಪೇರುಗಳ ಸೂಚನೆಯಾದರೂ ಇದ್ದಿದ್ದರೆ ನಾಟಕ ಇನ್ನೂ ಗಟ್ಟಿಯಾಗುತ್ತಿತ್ತು ಅನ್ನಿಸುತ್ತದೆ.

ಇನ್ನು ಲಕ್ಷ್ಮಿ, ಅತ್ಯಂತ ಸಾಧುವಿನಂತೆ ಕಂಡರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಜಾಣತನ, ಸಮಯಸಾಧಕತನ ಇರುವ ಹೆಣ್ಣು. ಸಖಾರಾಂ ಹೊಡೆತ ಬಡಿತದಲ್ಲಿ ಎಲ್ಲೋ ಕೆಲವೆಡೆ ಇವಳ ಪ್ರಚೋದನೆಯೂ ಇರುವುದೇನೋ ಎನ್ನುವಷ್ಟರ ಮಟ್ಟಿಗೆ ಒಮ್ಮೊಮ್ಮೆ ನಡೆದುಕೊಳ್ಳುತ್ತಾಳೆ, ಅವನ ಆ ಹಿಂಸಾಗುಣವನ್ನು ಅವನ ವಿರುದ್ಧವಾಗಿ ಪ್ರಯೋಗಿಸುವ ರೀತಿ ಸಹ ಕುತೂಹಲಕಾರಿ. ಸಖಾರಾಂ ನ ಎಲ್ಲಾ ನಿಭಂದನೆಗಳನ್ನೂ ಕೇಳಿ, ಒಂದನ್ನೂ ವಿರೋಧಿಸದೆ ಒಳಗೆ ಬರುವ ಇವಳು ಕೇಳುವುದು ಒಂದೇ ಪ್ರಶ್ನೆ, ’ನನಗಿಂತ ಮೊದಲಿದ್ದವಳು ಹೇಗಿದ್ದಳು?’. ಗಣೇಶನ ಪೂಜೆಯಲ್ಲಿ ಸಖಾರಾಂ ನ ಮುಸ್ಲಿಂ ಗೆಳೆಯ ಪೂಜೆಯಲ್ಲಿ ಪಾಲ್ಗೊಳ್ಳಬಾರದು ಎಂದು ಹಠ ಹಿಡಿಯುವ ಈ ಹೆಣ್ಣು ಹೇಳುವುದು, ’ನನ್ನ ಮನೆಯಲ್ಲಿ ಹೀಗೆ ಆಗಲು ನಾನು ಬಿಡುವುದಿಲ್ಲ’, ಅವಳ ಈ ಅವುಚಿ ಉಸಿರುಗಟ್ಟಿಸುವ ಸ್ವಭಾವ ಸಖಾರಾಂ ನನ್ನು ರೊಚ್ಚಿಗೆಬ್ಬಿಸುತ್ತದೆ. ಹಾಗೆ ಸಖಾರಾಂನನ್ನು ಹೇಗೆ ರೊಚ್ಚಿಗೆಬ್ಬಿಸಬಹುದು ಎನ್ನುವ ಅರಿವಿನ ಪೂರ್ಣ ಪ್ರಯೋಜನ ಅವಳು ಪಡೆದುಕೊಳ್ಳುವುದು ಕೊನೆಯಲ್ಲಿ ಚಂಪಾ ಬಗ್ಗೆ ಅವನಲ್ಲಿ ಚಾಡಿ ಹೇಳುವಾಗ. ಆ ಮಾತು ಹೇಳುವಾಗ ಅದರ ಪರಿಣಾಮದ ಪೂರ್ಣ ಅರಿವಿನೊಂದಿಗೇ ಮಾತನಾಡಿರುತ್ತಾಳೆ ಅವಳು.
ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು, ಅದು ಲಕ್ಷ್ಮಿಯ ’ಸೆಲೆಕ್ಟಿವ್ ನೈತಿಕತೆ’. ವಿವಾಹಿತೆಯಾಗಿದ್ದ ಅವಳನ್ನು ಅಬಲಾಶ್ರಮದಿಂದ ಸಖಾರಾಂ ಕರೆದುಕೊಂಡು ಬಂದಿರುತ್ತಾನೆ. ಅವನ ಆಶ್ರಯದ ಜೊತೆ ಜೊತೆಯಲ್ಲೇ ಅವನೊಡನೆ ದೈಹಿಕ ಸಂಬಂಧವನ್ನೂ ಅವಳು ಪ್ರತಿಭಟಿಸದೆ ಒಪ್ಪಿಕೊಂಡು ಬಿಡುತ್ತಾಳೆ. ಗಂಡನಲ್ಲದವನ ಜೊತೆ ಸೇರುವುದು ಅವಳಿಗೆ ತಪ್ಪು ಅನ್ನಿಸುವುದಿಲ್ಲ, ಅವಳಿಗೆ ಆಯ್ಕೆಯ ಪ್ರಶ್ನೆ ಇರಲಿಲ್ಲ ನಿಜ, ಆದರೆ ಅವಳು ಅದಕ್ಕೆ ಯಾವುದೇ ಪ್ರತಿರೋಧ ಒಡ್ಡುವುದಿಲ್ಲ ಅನ್ನುವುದೂ ನಿಜ. ಎಲ್ಲರ ಕಣ್ಣಿಗೆ ಅನೈತಿಕ ಹೆಣ್ಣಾಗಿ ಕಂಡ ಚಂಪ ಹಾಗೆ ಸಖಾರಾಂ ಬಯಸುವ ದೈಹಿಕ ಸಂಬಂಧವನ್ನು ಪ್ರತಿಭಟಿಸುತ್ತಾಳೆ, ಆಮೇಲೆ ಒಪ್ಪಿಕೊಳ್ಳುತ್ತಾಳೆ, ಮದಿರೆಯ ಸಹಾಯದಲ್ಲಿ ಮೈ ಮರೆಸಿಕೊಂಡು. ಇಲ್ಲಿ ಇನ್ನೊಂದು ಪ್ರಶ್ನೆ, ಅಕಸ್ಮಾತ್ ಲಕ್ಷ್ಮಿ ಹುಡುಕಿ ಹೋದ ಸಂಬಂಧಿಕರ ಮನೆಯಲ್ಲಿ ಇವಳ ಮೇಲೆ ಕಳ್ಳತನದ ಆರೋಪ ಹೊರಿಸದೆ, ಇವಳನ್ನು ಸ್ವೀಕರಿಸಿ, ಸಖಾರಾಂಗಿಂತ ಚೆನ್ನಾಗಿ ನೋಡಿಕೊಂಡಿದ್ದರೆ ಆಗ ಇವಳು ಅವರಿಗೆ ಬೇಕಾದ ಎಲ್ಲಾ ರೀತಿಯಲ್ಲೂ ತನ್ನನ್ನು ಒಪ್ಪಿಸಿಕೊಂಡು ಅಲ್ಲಿರುತ್ತಿದ್ದಳಾ ಅಥವಾ ’ನಿನ್ನ ಹೆಸರಲ್ಲಿ ನಾನು ತಾಳಿ ಕಟ್ಟಿಕೊಂಡಿದ್ದೀನಿ’ ಎಂದು ಸಖಾರಾಂ ಬಳಿ ವಾಪಸ್ ಬರ್ತಾ ಇದ್ದಳಾ?
ಹಾಗೆ ಅವಳು ವಾಪಸ್ ಬಂದಾಗ ಸಖಾರಾಂ ಅವಳನ್ನು ಬೈದು, ಮನೆಯಿಂದ ಅಟ್ಟಿರುತ್ತಾನೆ, ಅವಳಿಗೆ ಆಶ್ರಯ ಕೊಡುವವಳು ಚಂಪಾ. ಈಕೆ ತನಗಿಂತ ಮೊದಲು ಅವನ ಜೊತೆ ಇದ್ದವಳು ಎಂದು ತಿಳಿದೂ ಸಹ ಅವಳನ್ನು ಮನೆಯಲ್ಲೇ ಇರಿಸಿಕೊಳ್ಳಬೇಕು ಎಂದು ಹಠ ಮಾಡಿ ಉಳಿಸಿಕೊಳ್ಳುತ್ತಾಳೆ. ಒಂದು ಸೂಕ್ಷ್ಮ ಎಂದರೆ ಹಾಗೆ ಇರುವ ಮೊದಲ ದಿವಸವೇ ಅವರಿಬ್ಬರೂ ಜೊತೆಯಲ್ಲಿದ್ದಾರೆ ಎಂದು ತಿಳಿದೂ, ಸಖಾರಾಂ ನಲ್ಲಿ ತನ್ನ ಬಗೆಗಿನ ಒಂದು ಗಿಲ್ಟ್ ಹುಟ್ಟಿಸಬೇಕು ಎಂದೇ ಜೋರಾಗಿ ರಾಮನಾಮ ಜಪ ಮಾಡುತ್ತಾ ಕೂರುತ್ತಾಳೆ. ಅದು ಫಲಿಸುತ್ತದೆ ಕೂಡ. ಎಲ್ಲಾ ಹೆಣ್ಣುಗಳಲ್ಲೂ ಕೇವಲ ದೇಹವನ್ನು ಮಾತ್ರ ಗುರ್ತಿಸಿ, ಸ್ಪಂದಿಸುತ್ತಿದ್ದ ಸಖಾರಾಂ ಅಂದು ಮೊದಲ ಬಾರಿಗೆ ಹೆಣ್ಣಿನೆದಿರು ನಿಷ್ಕ್ರಿಯನಾಗುತ್ತಾನೆ. ಹಾಗೆ ತನ್ನ ಮೈಂಡ್ ಗೇಮ್ ಪ್ರಾರಂಭಿಸಿರುತ್ತಾಳೆ ಲಕ್ಷ್ಮಿ. ಅವಳಿಗೆ ತನ್ನ ಅಸ್ತಿತ್ವ ಮುಖ್ಯ, ಅದಕ್ಕಾಗಿ ಚಂಪಾಳ ಮೇಲೆ ಆಪಾದನೆ ಹೊರಿಸಲು ಅವಳು ಒಂದು ಕ್ಷಣವೂ ಯೋಚಿಸುವುದಿಲ್ಲ. ಆ ಕ್ರಿಯೆಗೆ ಮುಲಾಜಿಲ್ಲದೆ ದೇವರನ್ನೂ ತನ್ನ ಪಾರ್ಟಿಗೆ ಎಳೆದುಕೊಳ್ಳುತ್ತಾಳೆ!

ಇಲ್ಲಿ ಇನ್ನೊಂದು ವಿಷಯ ಇದೆ, ಸಖಾರಾಂ ನ ಗೆಳೆಯನ ಜೊತೆ ಚಂಪಾಳ ಸಂಬಂಧ ಇದೆ ಎನ್ನುವುದು ನಮಗೆ ತಿಳಿಯುವುದು ಲಕ್ಷ್ಮಿಯ ಮೂಲಕ ಮಾತ್ರ. ನಾಟಕಕಾರನಾಗಲಿ ಅಥವಾ ನಿರ್ದೇಶಕನಾಗಲಿ ಅದನ್ನೂ ಎಲ್ಲೂ ನಮಗೆ ನೇರವಾಗಿ ಹೇಳುವುದಿಲ್ಲ. ಹಾಗಿರುವಾಗ ಚಂಪಾ ಮತ್ತು ಆ ಸಂಬಂಧದ ಸ್ವರೂಪ ಏನಿತ್ತು, ಅದು ಕಾಮವೇ ಅಥವಾ ಸಾಂಗತ್ಯವೇ, ಅಥವಾ ಲಕ್ಷ್ಮಿಯ ಕಣ್ಣಲ್ಲಿ ಅದು ವ್ಯಭಿಚಾರವೇ ಇವ್ಯಾವುದೂ ನಮಗೆ ಸ್ಪಷ್ಟವಾಗುವುದಿಲ್ಲ. ಲಕ್ಷ್ಮಿ ನೋಡಿದ್ದೇನು ಎನ್ನುವುದು ಅವಳಿಗೆ ಮಾತ್ರ ಗೊತ್ತಿರುತ್ತದೆ. ಗೆಳೆಯನಿಗೆ ಟೀ ಕೊಡುವಾಗ ತಲೆ ಮೇಲೆ ಸೆರಗಿಲ್ಲದಿದ್ದರೇ ಸಿಟ್ಟಿಗೇಳುವ ಸಖಾರಾಂ ಇಂತಹ ಸುದ್ದಿಗೆ ಹೇಗೆ ಪ್ರತ್ರಿಕ್ರಯಿಸುತ್ತಾನೆ ಎನ್ನುವುದರ ಸಂಪೂರ್ಣ ಅರಿವಿನೊಂದಿಗೇ ಅವಳು ಅವನಿಗೆ ವಿಷಯ ತಿಳಿಸುತ್ತಾಳೆ. ಅವಳಲ್ಲಿರುವ ’ಕೋಲ್ಡ್ ಬ್ಲಡೆಡ್ ನೆಸ್’ ನಮಗೆ ಅರ್ಥವಾಗುವುದು ಚಂಪಳ ಸಾವಿನ ನಂತರ ಅವಳು ಪ್ರತಿಕ್ರಯಿಸುವ ರೀತಿಯಿಂದ.
ಒಂದಿಷ್ಟೂ ಗಿಲ್ಟ್ ಇಲ್ಲದೆ, ನೋವಿಲ್ಲದೆ, ಅಳುಕಿಲ್ಲದೆ ಅವಳು ಆ ಕೊಲೆಯನ್ನು ಮುಚ್ಚಿ ಹಾಕಲು ನಿಲ್ಲುತ್ತಾಳೆ ಮತ್ತು ಆ ಮೂಲಕ ಸಖಾರಾಂನನ್ನು ಸಂಪೂರ್ಣವಾಗಿ ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಹೊರಡುತ್ತಾಳೆ.
ಇನ್ನು ಚಂಪಾ, ಇವಳ ಇಂದಿನ ನಡುವಳಿಕೆಗೆ ನಿನ್ನೆಯ ಹಿನ್ನೆಲೆ ಇದೆ, ಹಾಗಾಗಿ ನಾಟಕಕಾರ ಈ ಪಾತ್ರವನ್ನು ಹೆಚ್ಚು ಸಹಾನುಭೂತಿಯಿಂದ ನೋಡಿರಬಹುದಾ ಅನ್ನಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ, ಪ್ರಪಂಚ ಏನು ಅಂದರೆ ಗೊತ್ತಿಲ್ಲದಾಗ ಆದ ಮದುವೆ, ಎದೆಯ ಮೇಲೆ ಸೂಜಿಯಿಂದ ಚುಚ್ಚುತ್ತಾ, ’ಸಂಸಾರ ಮಾಡುವ ಕಡೆ’ ಮೆಣಸಿನ ಪುಡಿ ತುಂಬಿ ಹಿಂಸಿಸಿ ಆನಂದಿಸುತ್ತಿದ್ದ ಸ್ಯಾಡಿಸ್ಟ್ ಗಂಡ, ಅದೂ ಸಾಲದು ಎಂದು ಆಮೇಲೆ ಇವಳನ್ನು ದಂಧೆಗಿಳಿಸಲು ನೋಡಿದಾಗ ಮನೆ ಬಿಟ್ಟು ಬಂದಿರುತ್ತಾಳೆ. ನಂತರ ಇವಳಿಗೆ ಸಿಕ್ಕುವವನು ಸಖಾರಾಂ. ಇವಳ ಸೌಂದರ್ಯಕ್ಕೆ, ಮಾದಕತೆಗೆ ಸೋತಿರುತ್ತಾನೆ. ಅವನಿಗೆ ಬೇಕಾಗಿರುವುದು ಇವಳ ದೇಹ ಮಾತ್ರ. ಮೊದಲು ಪ್ರತಿಭಟಿಸುತ್ತಾಳೆ, ಆಮೇಲೆ ಶರಾಬಿನ ಅಮಲಿನಲ್ಲಿ ಅವನನ್ನು ಸಹಿಸಿಕೊಳ್ಳುತ್ತಾಳೆ. ಆಮೇಲಾಮೇಲೆ ಶರಾಬು ಇವಳ ಸಂಗಾತಿ ಆಗತೊಡಗುತ್ತದೆ. ಕುಡಿದಾಗ ಸಖಾರಾಂಗಿಂತ ಕೀಳಾಗಿ ಮಾತನಾಡಬಲ್ಲಳು ಇವಳು. ತಮಾಶೆ ಎಂದರೆ ಸಖಾರಾಂಗಿರಲಿ ನಾಟಕ ನೋಡುತ್ತಿದ್ದ ಪ್ರೇಕ್ಷಕರಿಗೂ ಇವಳನ್ನು ಹೇಗೆ ಸಂಭಾಳಿಸುವುದು ಅಂತ ಗೊತ್ತಾಗುತ್ತಿರಲಿಲ್ಲ! ಎಲ್ಲಾ ಸಿದ್ಧಮಾದರಿಗಳನ್ನೂ ಒಡೆದು ಒಡಮೂಡಿದ್ದ ಪಾತ್ರ ಇದು. ಇವಳಿಗೆ ತನ್ನ ಯಾವುದೇ ನಡವಳಿಕೆಯ ಬಗ್ಗೆ ಅಳುಕಿಲ್ಲ.
ನೆಲೆ ಇಲ್ಲದೆ ಲಕ್ಷ್ಮಿ ಮನೆಗೆ ಬಂದಾಗ ಸಖಾರಾಂನನ್ನು ಹಠ ಹಿಡಿದು ಒಪ್ಪಿಸಿ ಮನೆಯಲ್ಲಿರಿಸಿಕೊಳ್ಳುತ್ತಾಳೆ. ಅಕಸ್ಮಾತ್ ಇವಳ ಮತ್ತು ಲಕ್ಷ್ಮಿಯ ಪಾತ್ರಗಳು ಅದಲು ಬದಲಾಗಿದ್ದಿದ್ದರೆ ಲಕ್ಷ್ಮಿ ಹಾಗೆ ಮನೆಗೆ ಬಂದ ಹೆಣ್ಣನ್ನು ಒಪ್ಪಿಕೊಳ್ಳುತ್ತಿದ್ದಳಾ ಅದು ಪ್ರಶ್ನೆ. ಇವಳ ದೇಹಕ್ಕೆ ಇನ್ನಿಲ್ಲದಂತೆ ಹಾತೊರೆಯುತ್ತಿದ್ದ ಸಖಾರಾಂ ಲಕ್ಷ್ಮಿ ಮನೆಗೆ ಬಂದ ನಂತರ ಇವಳೆದುರಲ್ಲಿ ಸೋಲುತ್ತಾ ಹೋಗುತ್ತಾನೆ. ಅವನ ಆ ಸೋಲಿನ ಅನುಭವದ ಉರಿಗೆ ತುಪ್ಪ ಸುರಿದಂತೆ ಲಕ್ಷ್ಮಿ ಚಂಪಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಪಾದನೆ ಹೊರಿಸುತ್ತಾಳೆ. ಮೊದಲೇ ಇವಳ ಮುಂದೆ ಸೋತ ಅವಮಾನ, ಜೊತೆಗೆ ಈ ಮಾತು, ಸಖಾರಾಂ ಅವಳ ಕತ್ತು ಹಿಸುಕಿ ಸಾಯಿಸುತ್ತಾನೆ.
ಆ ಒಂದು ದೃಶ್ಯ ಮೂರು ಪಾತ್ರಗಳ ಅಂತರ್ಗತ ಗುಣವನ್ನು ಹೊರಹಾಕುತ್ತದೆ. ಕೊಲ್ಲಲು ಬಂದ ಸಖಾರಾಂಗೆ ಒಂದು ಸಣ್ಣ ಪ್ರತಿಭಟನೆಯನ್ನೂ ಒಡ್ಡದೆ ಚಂಪ ಸಾಯುತ್ತಾಳೆ, ತಾನು ಕಾದಿದ್ದ ಬಿಡುಗಡೆ ಇದೇ ಏನೋ ಎನ್ನುವಂತೆ, ಅವಳನ್ನು ಕೊಂದ ಸಖಾರಾಂ ಸೋತು ಕೈಚೆಲ್ಲಿ ಕೂರುತ್ತಾನೆ, ಅವನ ಚೇತನ ಇಡಿಯಾಗಿ ಸೋರಿ ಹೋಯಿತೆನೋ ಎನ್ನುವಂತೆ, ಅತ್ಯಂತ ಮುಗ್ಧೆ, ಪಾಪದ ಹೆಣ್ಣು ಎಂದುಕೊಂಡ ಲಕ್ಷ್ಮಿ ಇಡೀ ಸನ್ನಿವೇಶವನ್ನು ಕೈಗೆ ತೆಗೆದುಕೊಂಡು ಚಂಪಾಳ ದೇಹ ಹೂಳಲು ಅಡಿಗೆ ಮನೆಯಲ್ಲಿ ನೆಲ ಅಗಿಯ ತೊಡಗುತ್ತಾಳೆ.
ಅಲ್ಲಿಗೆ ನಾಟಕ ಮುಗಿಯುತ್ತದೆ. ಮನುಷ್ಯರ ಸ್ವರೂಪ, ನಡವಳಿಕೆ, ಒಳ ತೋಟಿ, ಮೂಲ ಧಾತು ಎಲ್ಲವನ್ನೂ ನಾಟಕ ಕಟ್ಟಿಕೊಡುತ್ತಾ ಹೋಗುತ್ತದೆ. ಗೀತಾ ತೆಕ್ಕೇವಾರಿ ಅವರ ಅನುವಾದ ಇಲ್ಲಿನ ಭಾಷೆಯಲ್ಲೇ ಬರೆದದ್ದೇನೋ ಅನ್ನುವಂತಿದೆ. ಪ್ರದೀಪ್ ತಿಪಟೂರು ಅವರ ನಟನೆ ಮತ್ತು ನಿರ್ದೇಶನ ಎರಡೂ ಅತ್ಯಂತ ಪರಿಣಾಮಕಾರಿ. ಲಕ್ಷ್ಮಿ ಆಗಿ ರಾಜೇಶ್ವರಿ ತಳವಾರ ಹಾಗು ಚಂಪಾ ಪಾತ್ರದಲ್ಲಿ ಪ್ರಜ್ಞಾ ಬ್ರಹ್ಮಾವರ್ ಅದ್ಭುತವಾಗಿ ನಟಿಸಿದ್ದಾರೆ. ಇದು ಮೊದಲನೆಯ ಪ್ರದರ್ಶನ ಅನ್ನುವ ಸುಳಿವೂ ಸಿಗದಂತೆ ಪ್ರದರ್ಶನ ನೀಡಿದ ವೈಖರಿ ತಂಡಕ್ಕೆ ಅಭಿನಂದನೆಗಳು.
ಬೆಳಕು ಮತ್ತು ದನಿ ಇನ್ನೂ ಉತ್ತಮಗೊಳಿಸಬಹುದಾಗಿತ್ತು, ಕಡೆಯ ದೃಶ್ಯದಲ್ಲಿ ಲಕ್ಷ್ಮಿ ಅಡಿಗೆ ಮನೆಯ ನೆಲ ಅಗಿಯುವಾಗ ಆ ಸದ್ದನ್ನು ಮಾತ್ರ ಬಳಸಿಕೊಂಡು ನಾಟಕ ನಿಲ್ಲಿಸಿದ್ದರೆ ಅಂತ್ಯ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತೋ ಏನೋ. ಬಹುಷಃ ಈ ಸಣ್ಣ ಪುಟ್ಟ ಕೊರತೆಗಳು ಮುಂದಿನ ಪ್ರದರ್ಶನದಲ್ಲಿ ಸುಧಾರಿಸಿಕೊಳ್ಳಬಲ್ಲಂತಹವು.
ಕಡೆಯದಾಗಿ ಒಂದು ಮಾತು, ಇಲ್ಲಿ ಲಕ್ಷ್ಮಿ, ಚಂಪಾಳಂತೆ ಸಖಾರಾಂ ಸಹ ಒಂದು ಹೆಸರು, ಅಲ್ಲಿ ’ಬೈಂಡರ್’ ಎನ್ನುವ ವೃತ್ತಿವಾಚಕ ಕೇವಲ ಇನ್ಸಿಡೆಂಟಲ್ ಅಷ್ಟೆ, ಅಲ್ಲಿ ಸಖಾರಾಂ ಆಫೀಸ್ ವಾಲ, ಸಖಾರಾಂ ಪೈಂಟರ್, ಸಖಾರಾಂ ಟೆಕ್ಕಿ, ಸಖಾರಾಂ ಕಾರ್ಪೆಂಟರ್, ಸಖಾರಾಂ ರೈಟರ್ ಯಾವುದೇ ಹೆಸರಾದರೂ ಅದು ಪ್ರಸ್ತುತವೇ. ಕ್ರೌರ್ಯಕ್ಕೆ, ಸ್ವಾರ್ಥಕ್ಕೆ ಪರಿಸರದ ಆವರಣ ತಡೆಯಾಗುವುದಿಲ್ಲ, ಅಸ್ತಿತ್ವ ಇದ್ದೇ ಇರುತ್ತದೆ, ಆದರೆ ಅದನ್ನು ಎಷ್ಟರ ಮಟ್ಟಿಗೆ ವ್ಯಕ್ತ ಪಡಿಸುತ್ತಾರೆ, ಎಷ್ಟರ ಮಟ್ಟಿಗೆ ಪೋಷಾಕು ತೊಡಿಸಿ, ಜಗತ್ತಿನಿಂದ ಮುಚ್ಚಿಡುತ್ತಾರೆ ಎನ್ನುವುದು ನಾಗರೀಕತೆಗೆ ಬಿಟ್ಟ ವಿಷಯ.
ಒಂದು ಒಳ್ಳೆಯ ನಾಟಕ ತೋರಿಸಿದ ಸರ್ವಸ್ವ ತಂಡಕ್ಕೆ ಅಭಿನಂದನೆಗಳು
ಎಲ್ಲರಿಗೂ ವಿಶ್ವ ರಂಗಭೂಮಿ ದಿನದ ಶುಭಾಶಯಗಳು.
ಸಂಧ್ಯಾರಾಣಿ ಕಾಲಂ : ಸುಮ್ಮನೆ ಮರೆಯಲಾಗದ ’ಸಖಾರಾಂ ಬೈಂಡರ್’
ನಿಮಗೆ ಇವೂ ಇಷ್ಟವಾಗಬಹುದು…

ನಾಟಕದ ಚಿತ್ರಣ ಅದ್ಭುತವಾಗಿ ಮೂಡಿದೆ.ನಾಟಕ ನೋಡಿದ್ದರೂ ಇಷ್ಟು ಹಿಡಿಸುತ್ತಿತ್ತೋ ಇಲ್ಲವೋ..Excellent. 🙂
-Rj
Nijavaagi natakavanna natakada prathi kshnavanna estu channagi nodiddiri waw thanku so much nimntha kaleya prothsaha niduva mandi irabeku.patragala prthi gattagalannu prathi kriyeyannu nodiddiri anumanave illa ….. prithiya Dhnayavada: )
nodida naatakavannu eshtu manamuttuvante baribahudu antha anisiddu edannu odiye… sangeetha raviraj
Mukhyavagi manushya thanagada Aaghathakke, avaninda ondu paryaya ghatha ghatisuttade. Adu avanathanavanne badalayisuttade. Bidiyada putagalannu serisi, bind maduva binder heege thanna badukina putagalannu bind maduvude illa. hege ramana jeevan bind aagalillavo, haage avana sakharagi bandavar badukoo bind aagalilla. Adakke avanu skharama. Nimma drshtiya vishleshane chennagide. Shubhavirali.
ಸರ್, ಸಖಾರಾಂ ನ ಪೂರ್ಣ ಹೆಸರು ಮತ್ತು ಅವನ ಸ್ವಭಾವದ ವೈರುಧ್ಯ ನಿಜಕ್ಕೂ ಗಮನ ಸೆಳೆಯುವಂತಿದೆ. ವಂದನೆಗಳು.
india ge bandaaga nodalebeku.
ನಾಟಕದ ಚಿತ್ರಣ ಅದ್ಭುತವಾಗಿ ಮೂಡಿದೆ.ನಾಟಕ ನೋಡಿದ್ದರೂ ಇಷ್ಟು ಹಿಡಿಸುತ್ತಿತ್ತೋ ಇಲ್ಲವೋ..! adbhutha vimarshe madam :).mundina pradarshanaviddaga nodabeku anisuvanthe maadide 🙂
OMG its awesome…. felt like watching it again…
awesome it is .
ಓದಿ, ಮೆಚ್ಚಿಕೊಂಡಿದ್ದಕ್ಕೆ, ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.
ನಾಟಕ ನೊಡಲೇಬೇಕು ಅನಿಸ್ತಿದೆ. ಅದರರ್ಥ ಈ ಬರಹ ಗೆದ್ದಿದೆ.
ತುಂಬಾ ಚೆನ್ನಾಗಿದೆ
“ಕ್ರೌರ್ಯಕ್ಕೆ, ಸ್ವಾರ್ಥಕ್ಕೆ ಪರಿಸರದ ಆವರಣ ತಡೆಯಾಗುವುದಿಲ್ಲ, ಅಸ್ತಿತ್ವ ಇದ್ದೇ ಇರುತ್ತದೆ, ಆದರೆ ಅದನ್ನು ಎಷ್ಟರ ಮಟ್ಟಿಗೆ ವ್ಯಕ್ತ ಪಡಿಸುತ್ತಾರೆ, ಎಷ್ಟರ ಮಟ್ಟಿಗೆ ಪೋಷಾಕು ತೊಡಿಸಿ, ಜಗತ್ತಿನಿಂದ ಮುಚ್ಚಿಡುತ್ತಾರೆ ಎನ್ನುವುದು ನಾಗರೀಕತೆಗೆ ಬಿಟ್ಟ ವಿಷಯ.”
ಸತ್ಯ.. ಯಾವತ್ತಿಗೂ ಇನ್ನು ಈ ನಾಟಕ ನೋಡಬೇಕು ಅನ್ನಿಸದೇನೋ.. ಎಂತ ಕ್ರೌರ್ಯವಿದು ???
ಸಂದ್ಯಾ ಅವರೇ,ಒಂದು ನಾಟಕವನ್ನು, ನಮ್ಮ ಕಣ್ಣಮುಂದೆ ನಡೆಯುತಿದೆಯೇನೋ ಎನ್ನುವಂತೆ ಬರೆದಿದ್ದೀರಿ.ಜೊತೆಗೆ ಪ್ರೇಕ್ಷ್ಕಕನಿಗೆ ಬರಬಹುದಾದ ಅನುಮಾನಗಳಿಗೆ,ಪರಿಹಾರವೂ ಇದೆ. ಆದರೂ ಹಿಂಸೆ,ದೌರ್ಜನ್ಯಗಳಿಗೆ,ಅಂತ್ಯವೇ ಇಲ್ಲವೇ ಅನ್ನಿಸುತದೆ. ನಿಮ್ಮಕಾಲಂ ಅದ್ಬುತ.