It is perfectly ok NOT to be perfect
ಅಕ್ಷರಗಳನ್ನು ಪದಗಳಾಗಿಸಿ, ಪದಗಳನ್ನು ವಾಕ್ಯಗಳನ್ನಾಗಿಸಿ, ವಾಕ್ಯಗಳನ್ನು ಸೇತುವೆಗಳಾಗಿಸಲು ಹೊರಡುವಾಗ ಎಲ್ಲೋ ನಡುವಲ್ಲಿ ಒಂದು ಪದ ಸಿಗದೆ ಸತಾಯಿಸಿಬಿಡುತ್ತದೆ. ಬೇರೆ ಸಮಾನ ಅರ್ಥ ಕೊಡುವ ಪದ ಹಾಕಿದರೆ, ಜೋರಾಗಿ ಓದುವಾಗ ನಾಲಿಗೆ ತಡವರಿಸುತ್ತದೆ, ಯಾಕೋ ಸಿಕ್ಕ ಪದ ಅಳ್ಳಕವಾಗಿದೆ ಅನಿಸಿತ್ತದೆ, ಇದು ಇನ್ನೊಂದು ಅರ್ಥ ಕೊಟ್ಟುಬಿಡಬಹುದಲ್ಲವಾ ಅನ್ನಿಸುತ್ತದೆ. ಯಾಕೋ ಆ ಒಂದು ಪದದ ಹಂಬಲದಲ್ಲಿ ಕೈ ಮುಂದೆ ಓಡದೆ, ಅಲ್ಲೇ ನಿಂತುಬಿಡುತ್ತದೆ ಶಬರಿಯ ಹಾಗೆ, ಜಾತ್ರೆಯಲ್ಲಿ ಬಲೂನ್ ಅಂಗಡಿಯನ್ನು ದಾಟದೆ ರಚ್ಚೆ ಹಿಡಿದ ಮಗುವಿನ ಹಾಗೆ.
ಪುಸ್ತಕದ ಕಪಾಟಿನಲ್ಲಿ ಪುಸ್ತಕಗಳನ್ನು ಜೋಡಿಸುತ್ತಿರುತ್ತೇನೆ, ನಡು ನಡುವೆ ಒಂದೊಂದು ಮಣ್ಣಿನ ಆನೆ, ಕುದುರೆ, ಗಣಪ.. ಎಲ್ಲಾ ಜೋಡಿಸಿ ಬಂದು ದೂರದಿಂದ ನೋಡಿದರೆ ಎಲ್ಲೋ ಏನೋ ಹೊಂದುತ್ತಿಲ್ಲ ಅನ್ನಿಸಿ ಮತ್ತೆ ಅಲ್ಲೇ ಹೋಗಿ ನಿಲ್ಲುತ್ತೇನೆ.
ಬಿಳಿ ಹಾಳೆ, ಬಣ್ಣ, ಒಂದು ಬಟ್ಟಲಲ್ಲಿ ನೀರು, ಅಲ್ಲೇ ಪಕ್ಕದಲ್ಲಿ ಸಣ್ಣ ಸಣ್ಣ ಬ್ರಷ್ ಗಳು, ನೆಲದ ಮೇಲೆ ಕಾರ್ಡ್ ಬೋರ್ಡನ್ನಿಟ್ಟು, ಮುಂದೆ ಬಗ್ಗಿ, ಏಕಾಗ್ರತೆಯಲ್ಲಿ ಕಣ್ಣು ನೆಟ್ಟು ಬಣ್ಣ ತುಂಬುತ್ತಿರುವ ಪೋರ, ಅವನ ಕೈ ಬೆರಳ ತುದಿಯಲ್ಲಿ, ಕೆನ್ನೆಯ ಉಬ್ಬಿನಲ್ಲಿ ಇಷ್ಟು ಬಣ್ಣ ಮೆತ್ತಿದೆ, ಆಕಾಶದ ನೀಲಿಯ ನಡುವೆ ಅಂದು ಸಂಜೆ ಕಂಡ ಕಿತ್ತಳೆ ಬಣ್ಣವೇ ಬೇಕು ಎಂದು ಬಣ್ಣ ಕಲೆಸುತ್ತಾ, ಹಾಳೆಯ ಮೇಲೆ ಗೆರೆ ಎಳೆದು ಪರೀಕ್ಷೆ ಮಾಡುತ್ತಾ ಇದ್ದಾನೆ.
ಅಪರೂಪಕ್ಕೊಮ್ಮೆ ರಂಗೋಲಿ ಹಾಕಲು ಚುಕ್ಕೆ ಬರೆದ ಪುಟ್ಟಿ ಹೆಚ್ಚಾದ ಒಂದು ಚುಕ್ಕೆಯ ಸಾಲನ್ನು ನೋಡಿ, ಹಾಗೆ ಅಳಿಸಿ ಬಿಟ್ಟು ಬಿಡಲು ಮನಸ್ಸಾಗದೆ ನೀರು ಹಾಕಿ, ನೆಲ ಒರೆಸಿ, ಮತ್ತೆ ಚುಕ್ಕೆಯಿಡುತ್ತಿದ್ದಾಳೆ.
ಒಳ್ಳೆ ಆಟಗಾರನಾಗಲು ತಯಾರಿ ನಡೆಸುತ್ತಿರುವವರು ಇನ್ನೊಂದೇ ಒಂದು ಸುತ್ತು ಎಂದು ಬೆವರು ಸುರಿಸುತ್ತಾ ಆಡುವುದು, ಶಿಲ್ಪಿಯೊಬ್ಬ ಸುಂದರ ಮೂರ್ತಿಗಾಗಿ ಕಲ್ಲಿನ ಜೊತೆ ನಿರಂತರ ಮಾತಿಗಿಳಿಯುವುದು, ನಿರ್ದೇಶಕ / ನಿರ್ದೇಶಕಿ / ನಟ / ನಟಿ ತಮಗೆ ಸಮಾಧಾನವಾಗುವವರೆಗೂ ಅದನ್ನೇ ಮತ್ತೆ ಮತ್ತೆ, ಮತ್ತೆ ಮತ್ತೆ ಹಟ ಹೊತ್ತು ಪುನರಾವರ್ತಿಸುವುದು ಇವೆಲ್ಲವೂ ಶ್ರೇಷ್ಠತೆಯೆಡೆಗಿನ ತುಡಿತವೇ.
ಇಲ್ಲೆಲ್ಲಾ ಕಾಣುವುದು ಹಿಡಿದ ಕೆಲಸವನ್ನು ಚೆಂದಗಾಣಿಸುವ ಆಸೆ, ಪ್ರೀತಿ, ಹಟ ಮತ್ತು ಕಸುಬುದಾರಿಕೆ. ಸಾಮಾನ್ಯವನ್ನು ಅಸಾಮಾನ್ಯವಾಗಿಸುವ, ಸಾಧಾರಣಕ್ಕೊಂದು ಅಸಾಧಾರಣತೆಯನ್ನು ತಂದುಕೊಡುವ ಆ ಹಟಕ್ಕೆ, ತಪಸ್ಸಿಗೆ ನನ್ನ ಸಲಾಂ. ಆದರೆ ಕೆಲವು ಸಲ ಈ ಚಂದಗಾಣಿಸುವ, ಮಾಡುವ ಕೆಲಸವನ್ನು ಶ್ರೇಷ್ಟವಾಗಿಸುವ ತಪನೆ ಗೀಳಾದಾಗ, ವ್ಯಸನವಾದಾಗ, ಆಗ ಈ ಎಲ್ಲಾ ಚಂದ ಪ್ಲಾಸ್ಟಿಕ್ಕಿನಂತೆ ಕಾಣಿಸಲು ಶುರುವಾಗಿಬಿಡುತ್ತದೆ. ಎಲ್ಲವನ್ನೂ ಅತ್ಯುತ್ಕೃಷ್ಟ ಮಾಡುವ ಹಠ ಕಲೆಯಲ್ಲಿನ ಜೀವ ಮಂಕಾಗುವಂತೆ ಮಾಡಿಬಿಡುತ್ತದೆ. ಕೃತಿಗಿಂತ ಕೃತಿಕಾರನ ಅಹಂ ದೊಡ್ಡದಾದಾಗ ಕೃತಿ ಮತ್ತು ಕೃತಿಕಾರ ಇಬ್ಬರೂ ಸೋತುಬಿಡುತ್ತಾರೆ. ಇಲ್ಲಿ ಈ ವ್ಯಸನ ಕಲೆಗೆ ಮಾತ್ರ ಅನ್ವಯಿಸುವುದಿಲ್ಲ, ವ್ಯಕ್ತಿಯ ಬದುಕಿಗೆ, ದೇಹಕ್ಕೆ, ಮನಸ್ಸಿಗೆ ಎಲ್ಲಕ್ಕೂ ಅನ್ವಯವಾಗುತ್ತದೆ.
ಏನಿದು ಶ್ರೇಷ್ಠತೆಯ ವ್ಯಸನ ಅಂದರೆ? ಯಾವಾಗ ಶ್ರೇಷ್ಠತೆಯ ಬಯಕೆ ವ್ಯಸನವಾಗುತ್ತದೆ? ಬಯಕೆಗೂ, ವ್ಯಸನಕ್ಕೂ ನಡುವೆ ಇರುವುದು ತುಂಬಾ ಸಣ್ಣ ಗೆರೆ.
ಯಾವಾಗ ಬದುಕುವ ಅರ್ಹತೆ ಮತ್ತು ಹಕ್ಕು ಶ್ರೇಷ್ಠತೆಗೆ ಮಾತ್ರ ಇದ್ರೆ, ಕುಂದು ಕೊರತೆಗೆ, ಲೋಪ ದೋಷಗಳಿಗೆ ಜಾಗ ಇಲ್ಲ ಎಂದುಕೊಳ್ಳುತ್ತೇವೆಯೋ ಆಗ ಅದು ವ್ಯಸನವಾಗುತ್ತದೆ. ನನ್ನ ಸುತ್ತಲಿನ ಪ್ರಪಂಚ ಸುಂದರವಾಗಿರಬೇಕು ಎನ್ನುವುದು ಬಯಕೆ, ಆದರೆ ಕುರೂಪವಾಗಿರುವುದಕ್ಕೆ, ಶ್ರೇಷ್ಠವಾಗಿಲ್ಲದ್ದಕ್ಕೆ ನನ್ನ ಪ್ರಪಂಚದಲ್ಲಿ ಜಾಗ ಇಲ್ಲ, ಅದು ನನ್ನದಲ್ಲ, ಅದರೊಡನೆ ನಾನು ನನ್ನನ್ನು ಗುರುತಿಸಿಕೊಳ್ಳುವುದಿಲ್ಲ ಎಂದರೆ ಅದು ವ್ಯಸನ. ಊರು ಸುಂದರವಾಗಿರಬೇಕು ಎಂದು ಕೊಂಡರೆ ಸರಿ, ಆದರೆ ನನ್ನ ಊರಿನ ಚಂದಕ್ಕೆ ಕುಂದು ಬರುತ್ತದೆ, ಊರಿನ ಗುಡಿಸಲುಗಳನ್ನೆಲ್ಲಾ ಸುಟ್ಟುಬಿಡಿ ಎಂದರೆ ಅದು ಪಾಶವೀಯತೆ.
ಇದು ಸಮಾಜದ ಮಟ್ಟಿಗೆ ಈ ವ್ಯಸನ ಹೇಗೆ ಪಾಶವೀಯತೆಯಾಗುತ್ತದೆ ಎನ್ನುವುದಾಯಿತು, ಆದರೆ ಈ ವ್ಯಸನ ಆ ವ್ಯಕ್ತಿಯನ್ನೂ ಬಿಡುವುದಿಲ್ಲ. ಶ್ರೇಷ್ಠತೆಯ ಅಳತೆಗೋಲು ಎತ್ತರೆತ್ತರ ಆದಷ್ಟೂ ಅದಕ್ಕಾಗಿ ತಳಮಳಿಸುವ ವ್ಯಕ್ತಿಯ ತಹತಹವೂ ಹೆಚ್ಚಾಗುತ್ತಾ ಹೋಗುತ್ತದೆ. ಅದು ಕೈಗೆಟುಕದಾಗ ಖಿನ್ನತೆ, ನೋವು, ಅವಮಾನ ಎಲ್ಲವೂ ಕಾಡತೊಡಗುತ್ತದೆ. ಆ ಮರೀಚಿಕೆಯ ಹಂಬಲದಲ್ಲಿ ಉಳಿದೆಲ್ಲಾ ಸಂಬಂಧಗಳೂ ನಗಣ್ಯವಾಗುತ್ತಾ ಹೋಗುತ್ತದೆ. ಹಂತ ಹಂತವಾಗಿ ವ್ಯಕ್ತಿ ದ್ವೀಪವಾಗುತ್ತಾ ಹೋಗುತ್ತಾನೆ. ಎತ್ತರೆತ್ತರ ಹೋದಂತೆಲ್ಲಾ ವ್ಯಕ್ತಿ ಒಂಟಿಯಾಗುತ್ತಾ ಹೋಗುತ್ತಾನೆ ಅನ್ನುವುದು ಇದಕ್ಕೇನಾ?

ಶ್ರೇಷ್ಠತೆ ಅಥವಾ ಪರಿಪೂರ್ಣತೆ ಎಂದರೆ ಕುಂದಿಲ್ಲದ್ದು ಎಂದು ಅರ್ಥ. ಒಂದು ಗುರಿಯಿಟ್ಟುಕೊಂಡು ಅದರಲ್ಲಿ ಪರಿಪೂರ್ಣತೆಗಾಗಿ ತುಡಿಯುವುದು, ಅದಕ್ಕಾಗಿ ಶ್ರಮಿಸುವುದು ತಪ್ಪಲ್ಲ, ಆದರೆ ಇಡೀ ಜೀವನ ಹಾಗೆ ಇರಬೇಕು, ಇರಲೇ ಬೇಕು ಎಂದು ಹಟ ಹಿಡಿಯುವುದು ಸ್ವಾಭಾವಿಕವಲ್ಲ, ಸಹಜವಲ್ಲ. ಹಾಗೆ ೧೦೦ ಕ್ಕೆ ೧೦೦ ರಷ್ಟು ಪರಿಪೂರ್ಣತೆ ಯಂತ್ರಗಳಿಗೆ ಮಾತ್ರ ಸಾಧ್ಯ, ಮನುಷ್ಯರಿಗಲ್ಲ. ಓರೆ ಕೋರೆಗಳೇ ಮನುಷ್ಯರನ್ನು ಮನುಷ್ಯರನ್ನಾಗಿಸುವುದು. ನಿಂಬೆಹಣ್ಣಿನ ಶರಬತ್ತಿನಲ್ಲಿ, ಸ್ವಲ್ಪ ಸಿಹಿ, ಸ್ವಲ್ಪ ಹುಳಿ, ಸ್ವಲ್ಪ ಉಪ್ಪು, ನೀರು, ಏಲಕ್ಕಿ ಎಲ್ಲಾ ಬೆರೆತಿರುವುದರಿಂದಲೇ ಅದಕ್ಕೆ ಅಷ್ಟು ರುಚಿ. ಸಕ್ಕರೆ ಚಂದ ಎಂದು ಅದೊಂದನ್ನೇ ಸುರಿದರೆ ಅದು ಶರಬತ್ತಾಗಿರಲಿಕ್ಕಿಲ್ಲ.
ಪರಿಪೂರ್ಣತೆ ಒಂದು ಗೀಳಾದಾಗ ಅದು ಇನ್ನೊಂದು ಅರ್ಥವನ್ನೂ ಧ್ವನಿಸುತ್ತದೆ. ಅದು ನಾನು ಈಗ ಇರುವ ಹಾಗೆ ಸರಿಯಿಲ್ಲ ಎಂದೂ ಹೇಳುತ್ತದೆ. ತನ್ನ ಮಿತಿಯನ್ನು ಒಪ್ಪಿಕೊಳ್ಳಲು ಬಿಡದ ಮನೋಭಾವ ಅವರನ್ನು ಹಣಿದು ಹಾಕುತ್ತದೆ. ಬದುಕಿನ ಸುಂದರತೆ ಇರುವುದು ’ಇಂದು’ ಬದುಕುವುದರಲ್ಲಿ, ಆದರೆ ನಾಳೆಯ ಮರೀಚಿಕೆಯ ಹಿಂದಿನ ಓಟ ಇಂದನ್ನು ನಗಣ್ಯವಾಗಿಸಿಬಿಡುತ್ತದೆ.
ಓದಿನಲ್ಲಿ, ತೆಗೆಯುವ ಅಂಕಗಳಲ್ಲಿ, ಪಡೆಯಬೇಕಾದ ಪ್ರೊಮೋಷನ್ ಗಳಲ್ಲಿ, ಏರಬೇಕಾದ ಎತ್ತರಗಳಲ್ಲಿ ಪರಿಪೂರ್ಣತೆಯ ತುಡಿತ ಇರುವುದು ಒಂಡೆಡೆ ಇರಲಿ, ಆದರೆ ಅದು ಈಗೀಗ ತಲುಪುತ್ತಿರುವ ಮಟ್ಟ ನೋಡಿದರೆ ಗಾಬರಿ ಆಗುತ್ತದೆ. ಎಲ್ಲರೆಡೆಗೂ ತನ್ನ ಕಬಂಧ ಬಾಹು ಚಾಚುತ್ತಲಿದೆ ಈ ತಹತಹ.
ಮಕ್ಕಳಿಗೆ ಓದಿನ ಒತ್ತಡ, ಪಕ್ಕದ ಮನೆಯ ಹುಡುಗ, ಮುಂದಿನ ಬೆಂಚಿನ ಹುಡುಗಿ ತೆಗೆಯಬಹುದಾದ ಅಂಕಗಳ ಒತ್ತಡ. ಮೊದಲು ಸೌಂದರ್ಯ ಮತ್ತು ಹೇಗೆ ಕಾಣುತ್ತೇವೆ ಅನ್ನುವುದು ಹೆಣ್ಣು ಮಕ್ಕಳಿಗೆ ಮುಖ್ಯ ಅಂತ ಹೇಳುತ್ತಿದ್ದರು. ಆದರೆ ಈಗ ಅದು ಸುಳ್ಳಾಗಿದೆ. ಕಟ್ಟು ಮಸ್ತು ದೇಹ, ಬೈಸೆಪ್ಸ್ ಸುತ್ತಳತೆ, ಹೊಟ್ಟೆ ಮೇಲಿನ ಸಿಕ್ಸ್ ಪ್ಯಾಕ್ ಹುಡುಗರ ನಿದ್ದೆಯನ್ನೂ ಕೆಡಿಸುತ್ತಿದೆ, ಮಧ್ಯವಯಸ್ಕರ ನೆಮ್ಮದಿಯನ್ನು ಕೊಂದು ಹಾಕಿದೆ. ಇದ್ದಕ್ಕಿದ್ದಂತೆ ಎಲ್ಲರಿಗೂ ಎಲ್ಲವೂ ’ಪರ್ಫೆಕ್ಟ್’ ಆಗಿರಬೇಕಿದೆ.
ಇದರ ಅತಿರೇಕ ಎಂದರೆ ಮಕ್ಕಳು ಅದಕ್ಕಾಗಿ ಸ್ಟೆರಾಯ್ಡ್ ಗಳ ಮೊರೆ ಹೋಗುವುದು, ಹದಿ ವಯಸ್ಸಿನ ಹುಡುಗಿಯರು ’ಕರೆಕ್ಟಿವ್ ಸರ್ಜರಿ’ ನಡೆಯುವ ಆಸ್ಪತ್ರೆಗಳಿಗಾಗಿ ಅಂತರ್ಜಾಲದಲ್ಲಿ ಜಾಲಾಡುವುದು. ಕೆಲವು ವೃತ್ತಿಗಳಲ್ಲಿ ಅದು ಅಗತ್ಯ ಮತ್ತು ಅನಿವಾರ್ಯ, ಆದರೆ ಪರಿಪೂರ್ಣತೆಯ ಹುಚ್ಚಿನಿಂದ ಅಂತಹ ಸರ್ಜರಿಗಳ ಇತರ ಪರಿಣಾಮಗಳ ಕಡೆ ಗಮನ ಕೊಡದೆ, ಅದನ್ನು ಮಾಡುವ ವೈದ್ಯರ ಬಗ್ಗೆ ಏನೇನೂ ತಿಳುವಳಿಕೆ ಇಲ್ಲದೆ ಅಲ್ಲಿನ ಮೆಟ್ಟಿಲು ಹತ್ತುವ ನಮ್ಮ ನಿಮ್ಮ ಮನೆಗಳಲ್ಲಿನ ಹುಡುಗಿಯರ ಬಗ್ಗೆ ನನ್ನ ಆತಂಕ. ಹಾಗೆ ಬಣ್ಣದ ಕಾರಣದಿಂದಲೋ, ದೈಹಿಕ ಭಿನ್ನತೆಯ ಕಾರಣದಿಂದಲೋ, ಕಳೆದುಕೊಂಡ ಅಂಕಗಳ ಕಾರಣದಿಂದಲೋ, ಒಂದು ಹೆಜ್ಜೆ ಹಿಂದೆ ನಿಲ್ಲುವ ಹುಡುಗ ಹುಡುಗಿಯರ ಹಿಂಜರಿಕೆಯಲ್ಲಿ ನನ್ನ ಕಳವಳ.
ಸೌಂದರ್ಯವಿರುವುದು ಏಕತೆಯಲ್ಲಿ ಅಲ್ಲ, ಪರಿಪೂರ್ಣತೆಯಲ್ಲಲ್ಲ, ವ್ಯಕ್ತಿಯ ವ್ಯಕ್ತಿತ್ವ ಅದಕ್ಕೆ ಜೊತೆಗೂಡಿದಾಗ. ರೇಖಾ, ಜೀನತ್, ಪರ್ವೀನರ ಸಮಯದಲ್ಲಿ ನನಗೆ ಸ್ಮಿತಾ ಮತ್ತು ಶಬಾನ ಇಷ್ಟ ಆಗಿದ್ದರು, ಪರ್ಫೆಕ್ಟ್ ಆಗಿರುವ ಐಶ್ವರ್ಯಾ ಗಿಂತ, ಅಪ್ಪಟ ಜೀವಂತಿಕೆಯ ಸುಷ್ಮಿತಾ ನನಗಿಷ್ಟ.
ಸ್ವಲ್ಪ ನೆನಪು ಮಾಡಿಕೊಳ್ಳಿ, ಮಾಲಾಶ್ರೀಯ ಆ ಸಾಲು ತಪ್ಪಿಸಿಕೊಂಡ ಹಲ್ಲು, ರಾಜ್ ಕುಮಾರ್ ಮೂಗು, ಜೀರೋ ಸೈಜ್ ಪ್ರೋಟೋ ಟೈಪ್ ಗಳ ನಡುವೆ ಹೆಣ್ತನದ ಸೌಂದರ್ಯದ ವಿದ್ಯಾ ಬಾಲನ್, ಸೋನಾಕ್ಷಿ. ಸೊಟ್ಟ ಸೊಟ್ಟ ಮೆಟ್ಟಿಲೇರುತ್ತಿದ್ದ ಅಂಬರೀಷ್, ಸೊಟ್ಟ ನಗೆಯ ಶಂಕರ, ಮೂಗಿನ ತುದಿ ಕೊಂಚ ಒಂದು ಕಡೆಗೆ ಬಾಗಿದ್ದರಿಂದಲೇ ಅಷ್ಟು ಚಿತ್ತಾಕರ್ಷಕ ನಗೆ ಹೊಂದಿದ್ದ ವಿಷ್ಣುವರ್ಧನ್ ಸಾಲಿನಿಂದ ದೂರ ಇದ್ದಿದ್ದರಿಂದಲೇ ಎಷ್ಟು ಚಂದ ಕಾಣುತ್ತಿದ್ದರು. ಪರಿಪೂರ್ಣವಾಗಿರುವ ಹೋಟೆಲ್ ಕೋಣೆಯ ವೈಭವಕ್ಕಿಂತ ಯಾಕೆ ನಮ್ಮ ಮನೆಯ ಕೋಣೆ ನಮಗೆ ಹೆಚ್ಚು ಆಪ್ತವಾಗುತ್ತದೆ?
ಅಂದೆಂದೋ ಓದಿದ್ದ ದೇವನೂರರ ಕುಸುಮಬಾಲೆ ನೆನಪಾಯಿತು. ’ಸಿವ ಸಿವಾ ಅವಳು ನಕ್ಕರೋ, ಅವಳ ಹಲ್ಲಿನ ಮ್ಯಾಗಲ ಆ ಒಂಚುಟ್ಟಿ ಸಿಂಗಲ್ಲಿನಲ್ಲೆ ಈ ಲೋಕದ ಚಲೂನೆಲ್ಲ ಆ ಭಗವಂತ ಇಟ್ಟೂ… ಆ ರತಿ ಅಂಬವಳ್ಗೇಯಾ ಅದ್ನೀಗ ಹೆಂಗಾರೂ ಮಾಡಿ ಕಿತ್ಕಂಡು ತನ್ನ ಹಲ್ ನ ಮ್ಯಾಕ್ಕ ಇಟ್ಟಗಬೇಕು ಅನ್ಸಂಗ ಇದ್ದವಳೂ’ ಹಲ್ಲಿನ ನೀಟಾದ ಸಾಲುಗಳಿಗಿಂತ ಒಂಚೂರು ಮೇಲೆ ಇದ್ದ ಕುಸುಮೆಯ ಹಲ್ಲು ಮತ್ತು ಅದರಿಂದ ಅವಳ ಮುಖದ ಸೌಂದರ್ಯ ಇನ್ನೂ ಹೆಚ್ಚಾಯಿತಂತೆ.
ಯಾರಿಗ್ಗೊತ್ತು ಒಂದೊಮ್ಮೆ, a slight imperfection may be more desirable in the land of perfection! ಪರಿಪೂರ್ಣತೆಯೇ ತುಂಬಿರುವ ಜಗದಲ್ಲಿ ಒಂದು ಅಪರಿಪೂರ್ಣತೆ ಜಾಸ್ತಿ ಮುದ್ದು ಹುಟ್ಟಿಸಬಹುದು. ಪೂರ್ಣತೆಯ ಬಯಕೆ ಒಳ್ಳೆಯದೇ, ಆದರೆ ಅದು ವ್ಯಸನವಾಗದೇ ಇದ್ದಾಗ ಅದು ಇನ್ನೂ ಒಳ್ಳೆಯದು.



ಸಂಧ್ಯಾರಾಣಿ ಸಿಡಿಸಿದ ಮತ್ತೊಂದು ಸಿಕ್ಸರ! ಈ ಶ್ರೇಷ್ಠತೆ ಎರಡು ಬದಿಯ ಹರಿತ ಅಲುಗಿನ ಕತ್ತಿ ಇದ್ದಂತೆ. ಅತೀ ಆದರೆ ಕತ್ತೆ, ಹಿತಮಿತವಾಗಿದ್ದರೆ ತೃಪ್ತತೆ! ಈ ಗೀಳಿನವರಿಗೆ ಜೀವನದಲ್ಲಿ ಮುಂದೊಮ್ಮೆ ಗೋಳು ತಪ್ಪಿದ್ದಲ್ಲ!
~ಅನಿಲ
thumba hidisithu baraha-smitha
Sensible thoughts about perfection. nothing is perfect, not even machines. idannu artha maadiknodre badukanna swalpa light agi tegedukolla bahudu. Sandhya, :-))
Chennqagide..
ಒಬ್ಬ ಕವಿ ಹೇಳ್ತಾನೆ…
ಸುಮ್ಮನೇ ಬೆಳೆಯುತ್ತಾ ಹೋದೆ
ಬಿದುರಿನ ಮೇಳೆಯ ಹಾಗೆ
ಒಂಟಿಯಾಗಿದ್ದು ಗೊತ್ತಾಗಲೇ ಇಲ್ಲ
ಪುಟ್ಟ ಹಕ್ಕಿಯೊಂದು ಬಂದು ಹಾಡುವವರೆಗೆ…
ಬಹುಶಃ ಅದೇ ಶ್ರೇಷ್ಟತೆಯ ವ್ಯಸನವಿರಬೇಕು… Good and pleasent personality is very much required, Problem of today’s generation is they confuse good personality with good physique
ಸೌಂದರ್ಯವಿರುವುದು ಏಕತೆಯಲ್ಲಿ ಅಲ್ಲ, ಪರಿಪೂರ್ಣತೆಯಲ್ಲಲ್ಲ, ವ್ಯಕ್ತಿಯ ವ್ಯಕ್ತಿತ್ವ ಅದಕ್ಕೆ ಜೊತೆಗೂಡಿದಾಗ.
ಪೂರ್ಣತೆಯ ಬಯಕೆ ಒಳ್ಳೆಯದೇ, ಆದರೆ ಅದು ವ್ಯಸನವಾಗದೇ ಇದ್ದಾಗ ಅದು ಇನ್ನೂ ಒಳ್ಳೆಯದು.
Perfect Sandhya..
ಅವ್ವೇ.. ಹೌದಲ್ಲ.. ಕಥೆಯ ಕುಸುಮಬಾಲೆಗೂ ಹಲ್ಲು ಚೂರು ಮುಂದು..perfect.
A beautiful thought. A thoughtful article.