’ಬಸ್ಸು ಹೊರಟಿತು, ನನ್ನ ಮಗನ ತುಂಟತನ ಗೊತ್ತಲ್ಲ, ಅವನನ್ನು ಸಂಭಾಳಿಸುತ್ತಾ ೮ ಗಂಟೆ ಹೇಗೆ ಕಳೆಯುವುದು ಅಂತ ಒದ್ದಾಡುತ್ತಿದ್ದೆ. ನಿಮಿಷ ನಿಮಿಷಕ್ಕೂ ಇವನ ಗಲಾಟೆ ಜಾಸ್ತಿ ಆಗ್ತಾ ಇತ್ತು. ಹಿಂದಿನ ಸೀಟಿನಲ್ಲಿ ಒಬ್ಬ ಹುಡುಗ ಕೂತಿದ್ದ. ನೋಡುವಷ್ಟು ನೋಡಿ, ಆಮೇಲೆ ಇವನನ್ನು ಕರೆದ, ಇವನಿಗೂ ನನ್ನ ಕಾಟ ಸಾಕಾಗಿತ್ತೇನೋ, ಅವನು ಕರೆದ ಕೂಡಲೇ ಹೋದ. ಅಮ್ಮನಾದ ನನಗೆ ತಿಳಿಯದ, ಅಪ್ಪನಾದ ಇವರು ಎಂದೂ ಕಲಿಯದೇ ಹೋದ ಅದ್ಯಾವ ಮೋಡಿ ಆ ಹುಡುಗನಲ್ಲಿತ್ತೋ ಕಾಣೆ, ಹತ್ತು ನಿಮಿಷದಲ್ಲಿ ನನ್ನ ಮಗ ಜೀವಮಾನದ ಮಾತುಗಳನ್ನೆಲ್ಲಾ ಅವನ ಬಳಿ ಆಡುತ್ತಿದ್ದ. ಯಾಕೋ ಒಂದು ಘಳಿಗೆ ಎದೆ ಹಿಂಡಿದಂತಾಯ್ತು ಕಣೆ.’
’ಆಮೇಲೆ ಸಕಲೇಶಪುರದಲ್ಲಿ ಊಟಕ್ಕೆ ನಿಲ್ಲಿಸಿದ್ದರು. ಇವನ್ನ ಟಾಯ್ಲೆಟ್ಟಿಗೆ ಕರೆದು ಕೊಂಡು ಹೋದೆ. ಅಲ್ಲಿ ಜನವೋ, ಜನ, ಬರೋಷ್ಟ್ರಲ್ಲಿ ಬಸ್ ಹೊರಟಿತ್ತು. ಕಿಟಕಿಯಿಂದ ಬಗ್ಗಿ ನೋಡುತ್ತಿದ್ದ ಆ ಹುಡುಗನ ಕಣ್ಣಲ್ಲಿದ್ದ ಆತಂಕ, ಹುಡುಕಾಟ, ಕಳವಳಗಳನ್ನು ನನ್ನ ಕೈಲಿ ಮರೆಯಲೇ ಆಗಲಿಲ್ಲ. ಹಾಗೆ ನನಗಾಗಿ ಯಾರೋ ಹುಡುಕಾಡುತ್ತಿದ್ದಾರೆ ಅನ್ನೋದು ಯಾಕೋ ನನ್ನ ಕಣ್ಣಲ್ಲಿ ನೀರು ತುಂಬಿತು…’, ಹೀಗೆ ಸಾಗಿತ್ತು ಅವಳ ಪತ್ರ.
ಸುಮಾರು ೨೦ ವರ್ಷಗಳ ಹಿಂದಿನ ಮಾತು, ನನ್ನ ಮನೆಗೆ ಗೆಳತಿಯೊಬ್ಬಳು ಬಂದಿದ್ದಳು, ತನ್ನ ಮಗನೊಡನೆ. ವಾಪಸ್ಸು ಹೊರಟವಳನ್ನು ಬಸ್ಸು ಹತ್ತಿಸಿ ಬಂದಿದ್ದೆ. ಫೋನುಗಳು ಮನೆ ಮನೆಯಲ್ಲಿ ಮೊಳೆಯದಿದ್ದ ಕಾಲದಲ್ಲಿ ಪತ್ರಗಳೇ ನಮ್ಮ ಪಾಲಿಗೆ ಮೇಘಸಂದೇಶ. ಅವಳ ಪತ್ರ ಅವಳು ಹೊರಟ ಮೂರು ದಿನಕ್ಕೆ ಬಂದಿತ್ತು. ಪತ್ರ ಓದಿದವಳು ಸುಮ್ಮನೆ ಕುಳಿತೆ. ಇಲ್ಲ ಅವಳು ಆ ಹುಡುಗನನ್ನು ಮಾತನಾಡಿಸಿರಲಿಲ್ಲ, ಅವನೂ ಇವಳನ್ನು ಮಾತನಾಡಿಸುವ ಪ್ರಯತ್ನ ಮಾಡಿರಲಿಲ್ಲ’ ಊರು ತಲುಪಿದ ಮೇಲೆ, ಸುಮ್ಮನೆ ಇವಳ ಕಡೆಗೊಮ್ಮೆ ನೋಡಿ, ಆ ಪೋರನಿಗೆ ಟಾಟಾ ಹೇಳಿ ಆ ಹುಡುಗ ಇಳಿದುಹೋಗಿದ್ದ. ಮಾತೇ ಆಡದೆ, ಏನೂ ಆಗದೆ ಒಂದು ಮಧುರ ನೆನಪು ಅವಳ ಎದೆಯ ಪುಟದಲ್ಲಿ ಸೇರಿಹೋಗಿತ್ತು. ಮತ್ಯಾವತ್ತೂ ಅವರಿಬ್ಬರೂ ಭೇಟಿ ಆಗಲಿಲ್ಲ, ಆಗುವ ಸಂಭವವೂ ಇರಲಿಲ್ಲ.
ನಾನು ಮರೆತೇ ಹೋಗಿದ್ದ ಈ ಘಟನೆ ನನಗೆ ನೆನಪಾಗಿದ್ದು ಮೊನ್ನೆ ಲಂಚ್ ಬಾಕ್ಸ್ ಚಿತ್ರ ನೋಡುವಾಗ. ’ಎಷ್ಟೋ ಸಲ ತಪ್ಪು ರೈಲು, ನಮ್ಮನ್ನು ಸರಿಯಾದ ಕಡೆಯಲ್ಲಿ ಇಳಿಸಿಬಿಡುತ್ತದೆ’ ಎನ್ನುವ ಮಾತನ್ನು ಕೇಳಿದಾಗ. ಆ ಚಿತ್ರದ ಬಗ್ಗೆ ತುಂಬಾ ಕೇಳಿದ್ದೆ, ಮಿಸ್ ಮಾಡಲೇ ಬರದ ಚಿತ್ರ ಅನ್ನುವ ಮೂರು ಎಸ್ ಎಮ್ ಎಸ್ ಗಳು ನನ್ನ ಫೋನಿನಲ್ಲಿ ಕೂತಿದ್ದವು.
ಅದೊಂದು ಮಾಮೂಲಲ್ಲದ, ಮಾಮೂಲು ಕಥೆಗಳ ದಾಟಿ ಇಲ್ಲದ ಕಥೆ. ವಿಳಾಸ ತಪ್ಪಿಸಿಕೊಳ್ಳುವ ಒಂದು ಲಂಚ್ ಬಾಕ್ಸ್ ಎರಡು ಹೃದಯಗಳ ವಿಳಾಸ ಆಗುವ ಕಥೆ.
ಅದು ಮುಂಬೈ. ಅವಳು ಮಧ್ಯಮ ವರ್ಗದ ಹೆಣ್ಣು, ಒಂದು ಮಗುವಿದೆ. ಗಂಡ ಮದುವೆಯ ಹೊಸತನದ ಮೋದ ದಾಟಿ ಸಂಪೂರ್ಣವಾಗಿ ತನ್ನ ಪ್ರಪಂಚ ಸೇರಿಕೊಂಡಾಗಿರುತ್ತದೆ. ಹೇಗಾದರೂ ಗಂಡನ ಜಗತ್ತಿನೊಳಗೆ ಒಂದು ದಾರಿ ಹುಡುಕಿ ಕೊಳ್ಳಬೇಕೆಂದು ಈ ಹೆಣ್ಣು ತನ್ನ ಫ್ಲಾಟ್ ನ ಮೇಲಿನ ಮನೆಯ ಅಜ್ಜಿಯ ಹತ್ತಿರ ಹೊಸ ರುಚಿ ಕಲಿತು, ಊಟ ತಯಾರು ಮಾಡಿ, ಡಬ್ಬಾವಾಲಾನಿಗೆ ಕೊಡುತ್ತಾಳೆ. ಹೇಗೊ ಏನೋ ಅದು ಹಾದಿ ತಪ್ಪಿ ಇನ್ಯಾರದೋ ಊಟದ ಮೇಜು ಹತ್ತುತ್ತದೆ. ಡಬ್ಬಿ ತೆಗೆದ ಕೂಡಲೆ ಆತನಿಗೆ ಇದು ತನ್ನ ಮಾಮೂಲಿ ಹೋಟಲಿನ ಡಬ್ಬಿ ಅಲ್ಲ ಅನ್ನಿಸುತ್ತದೆ. ಅವನೋ ಒಬ್ಬ ವಿಧುರ, ತನ್ನ ನಿವೃತ್ತಿಯಿಂದ ಒಂದು ತಿಂಗಳ ದೂರವಿರುತ್ತಾನೆ. ಒಂಟಿತನ ಅವನ ಎಲ್ಲಾ ಭಾವಕೋಶಗಳನ್ನೂ ಮುರುಟಿ ಹಾಕಿರುತ್ತದೆ. ’ಭಾವತೇವವಿಲ್ಲದ ಎದೆಯು ಹೂವಿಲ್ಲದ ಮುಳ್ಳಿನ ಪೊದೆಯು…’, ಅವನ ಸಿಡುಕು, ಅಸಹನೆ, ಯೌವನವನ್ನು ಕಂಡರೆ ಏನೋ ಆಕ್ರೋಶ, ತನ್ನ ಜಾಗಕ್ಕೆ ಬಂದವನಿಗೆ ಕೆಲಸ ಕಲಿಸದ ಅಸಹನೆ. ಕಡೆಗೆ ಚಿಕ್ಕ ಮಕ್ಕಳು ಆಡುವ ಚೆಂಡು ಇವನ ಮನೆ ಅಂಗಳಕ್ಕೆ ಬಂದರೆ ಅದನ್ನು ಮರಳಿಸದ ಕಠೋರತೆ. ಅವನದು ’ಕಾರಿರುಳಲಿ ನರಳುವ ಬಾನು, ಭಯಗಳು ಹೆಡೆಯಾಡುವ ಕಾನು..’
ಸಂಜೆ ಗಂಡ ಬಂದಾಗ ಇವಳಿಗೆ ಅವನ ಮಾತಿನಿಂದ ಡಬ್ಬಿ ಬೇರೆಲ್ಲೋ ಹೋಗಿದೆ ಎಂದು ಗೊತ್ತಾಗುತ್ತದೆ, ಆದರೆ ಏನನ್ನೂ ಹೇಳುವುದಿಲ್ಲ. ಮೇಲಿನ ಮನೆ ಅಜ್ಜಿಗೆ ವಿಷಯ ತಿಳಿದಾಗ, ಎಲ್ಲಾ ವಿವರಿಸಿ, ಊಟವನ್ನು ಮಾಡಿ, ಅದರ ಋಣ ಸಂದಾಯ ಮಾಡಿದ್ದಕ್ಕೆ, ಒಂದು ಥ್ಯಾಂಕ್ಯೂ ಬರೆದು ಮರುದಿನ ಕಳಿಸಲು ಹೇಳುತ್ತಾಳೆ. ಮೊದಲು ಹಿಂಜರಿದ ಹೆಣ್ಣು ಕೊನೆಗೆ ಹಾಗೆ ಬರೆದು ಕಳಿಸುತ್ತಾಳೆ. ಅದಕ್ಕೆ ಉತ್ತರವಾಗಿ ಅವನು ಒಂದು ಶೀತಲವಾದ, ಭಾವಗಳೇ ಇಲ್ಲದ ಉತ್ತರ ಕಳಿಸುತ್ತಾನೆ, ’ಊಟ ಸಿಕ್ಕಿತು, ಉಪ್ಪು ಸ್ವಲ್ಪ ಜಾಸ್ತಿ ಇತ್ತು’ ಅಂತ!. ಅಂತಹ ನಿರ್ಭಾವುಕನ ಎದೆಯಲ್ಲೂ ಇವಳ ಪತ್ರ ಒಂದು ಆರ್ದ್ರತೆಯನ್ನು ತುಂಬುತ್ತಾ ಹೋಗುತ್ತದೆ. ಹಾಗೆ ಶುರುವಾಗುತ್ತದೆ ಒಂದು ಸ್ನೇಹ.
ಇವಳ ಜೀವನವನ್ನು ಅರಿತ ಆ ವಯಸ್ಕ ತನಗೇ ಗೊತ್ತಿಲ್ಲದಂತೆ ತನ್ನ ಮಾತುಗಳಿಂದ ಇವಳಲ್ಲಿ ಆತ್ಮವಿಶ್ವಾಸವನ್ನು, ಒಂದು ಗೆಳೆತನವನ್ನು ತುಂಬುತ್ತಾ ಹೋಗುತ್ತಾನೆ. ಹಾಗೆ ತನಗೇ ಗೊತ್ತಿಲ್ಲದಂತೆ ಆ ಊಟದ ಡಬ್ಬಿಯಿಂದ ತನ್ನ ಎದೆಗೆ ಬಿಸುಪನ್ನು ತುಂಬಿಸಿಕೊಳ್ಳುತ್ತಾ ಹೋಗುತ್ತಾನೆ. ’ಮಳೆ ಬರಲಿ ಪ್ರೀತಿಯ ಬನಕೆ, ಅರಳಲಿ ಹೂ ಗಿಡ ಲತೆ ಮರಕೆ… ಅರಳದೇನು ಜೀವದ ಹೂವು ಎರೆಯಲೆದೆಗೆ ಪ್ರೀತಿಯ ಕಾವು…’ ಅವನೆದೆಯಲ್ಲೂ ಒಂದು ಹೂವು ಅರಳತೊಡಗುತ್ತದೆ.
ಮೊದಲು ಅವನು ತನ್ನ ಜಾಗಕ್ಕೆ ಕೆಲಸಕ್ಕೆ ಬಂದವನನ್ನು ಒಪ್ಪಿಕೊಳ್ಳುತ್ತಾನೆ, ಅವನಿಗೆ ಕೆಲಸ ಕಲಿಸ ತೊಡಗುತ್ತಾನೆ. ಒಮ್ಮೆ ಆಫೀಸಿನ ದಾರಿಯಲ್ಲಿ ಯಾವುದೋ ಮಹಡಿಯಿಂದ ಯಾರೋ ತಾಯಿ ಮಗು ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ವಿಲ ವಿಲ ಒದ್ದಾಡಿ ಹೋಗುತ್ತಾನೆ. ಯಾರನ್ನು ಕೇಳುವುದು, ಕೇಳದೆ ಹೇಗಿರುವುದು?? ಕೊನೆಗೆ ಅಂದು ಮಧ್ಯಾಹ್ನ ಇವನ ಮೇಜಿನ ಮೇಲೆ ಊಟದ ಡಬ್ಬಿ ಬರುತ್ತದೆ, ಎದೆ ತುಂಬ ಕಟ್ಟಿಕೊಂಡಿದ್ದ ಉಸಿರನ್ನು ಬಿಟ್ಟು ಇವನು ನಿರಾಳನಾಗುತ್ತಾನೆ.
ಬದುಕಿನ ಏಕತಾನತೆ, ಗಂಡನ ನಿರ್ಲಕ್ಷ್ಯದಿಂದ ನೊಂದ ಇವಳು ಅವನಿಗೆ ಒಮ್ಮೆ ಬರೀತಾಳೆ. ’ಭೂತಾನ್ ನಲ್ಲಿ ದೇಶದಲ್ಲಿ ಒಟ್ಟು ಆಸ್ತಿಗಿಂತ, ದೇಶದ ಒಟ್ಟು ನೆಮ್ಮದಿ ಪ್ರಗತಿಯ ಅಳತೆಗೋಲಂತೆ. ಅಲ್ಲದೆ ನಮ್ಮ ಒಂದು ರೂಪಾಯಿ ಅಲ್ಲಿನ ಐದು ರೂಪಾಯಿಗೆ ಸಮ ಅಂತೆ. ಮಗಳ ಜೊತೆ ಅಲ್ಲಿಗೆ ಹೊರಟು ಬಿಡಬೇಕು ಅನ್ನಿಸುತ್ತದೆ’ ಅಂತ. ಆಗ ಇವನು ’ನಿಮ್ಮ ಜೊತೆ ನಾನು ಬಂದರೆ….?’ ಅಂತಷ್ಟೇ ಬರೀತಾನೆ. ತುಂಬಾ ಸೂಕ್ಷ್ಮವಾಗಿ ಅಲ್ಲಿಂದ ಇವರಿಬ್ಬರ ಪತ್ರಗಳು ಹೆಚ್ಚು ಆತ್ಮೀಯವಾಗುತ್ತಾ ಹೋಗುತ್ತವೆ.
ಇದರ ನಡುವೆ ಅವಳಿಗೆ ಗಂಡನಿಗೆ ಇನ್ನ್ಯಾರೋ ಹೆಂಗಸಿನ ಜೊತೆ ಸಂಬಂಧ ಇದೆ ಎಂದು ತಿಳಿಯುತ್ತದೆ. ಉಪೇಕ್ಷೆ ಸಹಿಸಬಹುದು, ಆದರೆ ನಿರಾಕರಣೆ ತಾಳುವುದು ಹೇಗೆ? ತನ್ನ ಗಂಡನೊಡನೆ ತನ್ನನ್ನು ಬಂಧಿಸಿಟ್ಟಿದ್ದ ತಂತು ಕಡಿದೇ ಹೋಯಿತು ಅನ್ನಿಸುತ್ತದೆ ಅವಳಿಗೆ. ಅಂದು ಡಬ್ಬಿಯಲ್ಲಿ ಆ ವಯಸ್ಕನಿಗಿಷ್ಟವಾದ ಖಾರ ತುಂಬಿದ ಬದನೆಕಾಯಿ ಮಾಡಿ ಕಳಿಸಿರುತ್ತಾಳೆ. ನೋಡಿದ ಕೂಡಲೇ ಕಣ್ಣು, ಮೂಗು ಅರಳಿಸಿದ ಆತ, ಇವಳ ಪತ್ರದಲ್ಲಿ ಗಂಡನ ವಿಷಯ ಓದಿ ಊಟ ಮುಂದುವರೆಸಲಾಗುವುದಿಲ್ಲ. ಡಬ್ಬಿ ಹಾಗೇ ವಾಪಸ್ ಬರುತ್ತದೆ.
ಜಯಂತ್ ಕಾಯ್ಕಿಣಿ ’ಬೊಗಸೆಯಲ್ಲಿ ಮಳೆ’ ಅಂಕಣ ಬರೆಯುತಿದ್ದಾಗ, ’ಮಾತಿರದ ನಲುಮೆ’ ಎಂದು ಒಂದು ಲೇಖನ ಬರೆದಿದ್ದರು. ಮಾತೇ ಆಡದೆ, ಕೇವಲ ತನ್ನ ಇರುವಿಕೆಯಿಂದಲೇ ಇನ್ನೊಂದು
ಜೀವನವನ್ನು ಸಂತೈಸುವ, ಆ ಜೀವದ ಬದುಕನ್ನು ಸಹನೀಯಗೊಳಿಸುವ ಅಮೂರ್ತ ಇರುವಿಕೆಗಳ ಬಗ್ಗೆ. ಅಲ್ಲಿ ಅವರು ’ಇಂತಹ ನೂರಾರು ಮೋಹಪಾಶಗಳಿಂದಲೇ ನಡಿತಿದೆ ಈ ಜಗತ್ತು’ ಅನ್ನುತ್ತಾರೆ. ಈ ಚಿತ್ರ ನೋಡುವಾಗ ಜಯಂತರ ಅಂಕಣದ ನೆನಪಾಯ್ತು. ಇಂತಹ ಮೌನ ಸಂತೈಕೆಗಳು ಅಮೂರ್ತವಾಗಿದ್ದಾಗ ಅವುಗಳಿಗೆ ಭೌತಿಕತೆಯ ಯಾವ ರಾಗ ದ್ವೇಷಗಳೂ ಅಷ್ಟಾಗಿ ತಟ್ಟುವುದಿಲ್ಲ. ಆದರೆ ಹೀಗೆ ಕಾಡಿದ ಅಥವಾ ಸಂತೈಸಿದ ರಾಗದ ಬೆನ್ನು ಹತ್ತಿ ಹೋಗೇ ಬಿಟ್ಟರೆ, ಆ ರಮ್ಯತೆ ಹಾಗೇ ಉಳಿಯಬಹುದೆ.. ಇದು ನನ್ನನ್ನು ಕಾಡುವ ಪ್ರಶ್ನೆ.’ಸಿರ್ಫ್ ಎಹಸಾಸ್ ಹೈ, ರೂಹ್ ಸೆ ಮೆಹಸೂಸ್ ಕರೋ..’, ಮನುಷ್ಯರ ಸ್ಪರ್ಷಕ್ಕೆ ಸಿಕ್ಕಿದರೆ ದೇವತೆಗಳು ಸಹ ತಮ್ಮ ದೈವತ್ವ ಕಳೆದುಕೊಂಡುಬಿಡುತ್ತಾರಂತೆ..
ತುಂಬಾ ಹಿಂದೆ ನೇಮಿಚಂದ್ರ ಅವರ ಕಥೆ ಒಂದನ್ನು ಓದಿದ್ದೆ. ’Men never age, they only mature’ ಎನ್ನುವ ವಿವಾಹಿತ ಪುರುಷನೊಬ್ಬನನ್ನು ಪ್ರೀತಿಸಿದ ಹೆಣ್ಣೊಬ್ಬಳ ಕಥೆ. ಆತನ ಹೆಂಡತಿ ಅವನನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಅವನ ರಸಿಕತೆಗೆ ಅವಳು ಸಾಟಿ ಅಲ್ಲ, ಅವ ತನ್ನ ಜೊತೆ ಮಾತ್ರ ಸುಖವಾಗಿರಬಲ್ಲ ಎಂದು ತನ್ನನ್ನೇ ತಾನು ನಂಬಿಸಿಕೊಳ್ಳುತ್ತಾಳೆ ಆಕೆ. ಒಮ್ಮೆ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಎಲ್ಲಾ ಅರ್ಥಮಾಡಿಕೊಂಡವಳಂತೆ ತಮ್ಮ ಮದುವೆ ಆಲ್ಬಂ, ಹನಿಮೂನ್ ಆಲ್ಬಂ ತಂದು ಈಕೆಯ ಕೈಯಲ್ಲಿಡುತ್ತಾಳೆ. ಒಂದೊಂದಾಗಿ, ಒಂದೊಂದಾಗಿ ಪುಟ ತಿರುಗಿಸಿದ ಈ ಹುಡುಗಿ ದಂಗಾಗುತ್ತಾ, ಎಚ್ಚೆತ್ತುಕೊಳ್ಳುತ್ತಾ ಹೋಗುತ್ತಾಳೆ. ಆ ಎಲ್ಲಾ ಫೋಟೋಗಳಲ್ಲೂ ಅವನ ಮುಖದಲ್ಲಿ ಅವನು ಇವಳ ಜೊತೆಯಲ್ಲಿರುವಾಗ ಹೊಮ್ಮುವ ಅದೇ ನಗು, ಅದೇ ಪ್ರೀತಿ, ಅದೇ ತಲ್ಲೀನತೆ. ಆ ಹುಡುಗಿಗೆ ತಾನು ಹೆಂಡತಿಯ ಭೂತಕಾಲದಂತೆ, ಹೆಂಡತಿ ತನ್ನ ಭವಿಷ್ಯತ್ತಿನಂತೆ ಕಾಣುತ್ತಾಳೆ.
ಯಾವುದೇ ಸಂಬಂಧ ದೈನಂದಿನ ಪರಿಚಯದ, ಜೊತೆಗೆ ಬದುಕುವ ಸುಳಿಗೆ ಬಿದ್ದ ಮೇಲೆ ಮೊದಲಿನ ರೋಚಕತೆ ಕಮ್ಮಿ ಆಗುತ್ತಾ ಹೋಗುತ್ತದೆ. ನದಿಯಲ್ಲಿ ಸಾಗುವ ದೋಣಿಗೆ, ಲಂಗರು ಹಾಕಿದ ದೋಣಿಗಿಂತ ಮೋಹಕತೆ ಮತ್ತು ಚಲನಶೀಲತೆ ಹೆಚ್ಚು. ಆದರೆ ಎಲ್ಲಾ ದೋಣಿಯೂ ಕಡೆಗೊಮ್ಮೆ ದಡ ಸೇರಲೇಬೇಕು, ಲಂಗರು ಹಾಕಲೇ ಬೇಕು, ಇದು ಜೀವನದ ಸತ್ಯ.
ನನ್ನ ಗೆಳತಿ ಮಾತೇ ಆಡದೆ ಇಳಿದು ಹೋದದ್ದರಿಂದ ಆ ಹುಡುಗನ ಕಣ್ಣಿನಲ್ಲಿನ ಹುಡುಕಾಟದ ನೆನಪು ಇಂದಿಗೂ ಒಂದು ವಸಂತದ ಮಳೆಯಂತೇ ಇದೆ, ಅಕಸ್ಮಾತ್ ಅವಳು ಅವನನ್ನು ಮಾತನಾಡಿಸಿದ್ದರೆ…? ಅದನ್ನು ಮುಂದುವರಿಸಿದ್ದರೆ…? ಗೊತ್ತಿಲ್ಲ ನನಗೆ. ’ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂದು ಹೊರಟ ಅವಳಿಗೆ ಅರಮನೆಯ ಬಾಗಿಲು ತೆಗಿಯಿತಾ? ಜಯಂತರ ಸಾಲುಗಳು ನೆನಪಾಗುತ್ತಿವೆ, ಬೇಡ, ಇವೆಲ್ಲಾ ಮಾತಿಗೆ ಬಂದು ಮೊಂಡಾಗುವುದು ಬೇಡ… ಇಷ್ಟದೈವಗಳು ಐಹಿಕದ ದುರ್ಗಂಧದಲ್ಲಿ ನಾರಿ, ಸ್ಪೂರ್ತಿಯ ಚಿಲುಮೆಗಳು ಪಾತ್ರಧಾರಣೆಯಲ್ಲಿ ಒಣಗುವುದು ಬೇಡ…. ಅಮೂರ್ತ ಕಾಮನೆಗಳು ಮೂರ್ತವಾಗದಿರಲಿ, ಮಾತಿರದ ನಲುಮೆ ಜಗವ ನಡೆಸಲಿ..
ಕಲೆ : ಸೃಜನ್
ಮತ್ತೆ ಚಿತ್ರಕ್ಕೆ ಮರಳುವುದಾದರೆ, ಅಮೂರ್ತವಾಗಿದ್ದ ಈ ಪರಿಚಯವನ್ನು ಮೂರ್ತರೂಪಕ್ಕಿಳಿಸಲು ಆಕೆ ಇಷ್ಟ ಪಡುತ್ತಾಳೆ. ಒಮ್ಮೆ ಭೇಟಿಯಾಗೋಣ ಅನ್ನುತ್ತಾಳೆ. ಗೊತ್ತುಪಡಿಸಿದ ಜಾಗದಲ್ಲಿ ಬಂದು ಕಾಯುತ್ತಾ ಕೂರುತ್ತಾಳೆ. ಆದರೆ ವಯಸ್ಸು ಅವನನ್ನು ಮಾಗಿಸಿದೆ. ಅವಳನ್ನು ಭೇಟಿಯಾಗುವ ದಿನ ಗಡ್ಡದ ಮೇಲಿದ್ದ ಶೇವ್ ಆದಾಗ ತಪ್ಪಿಸಿಕೊಂಡ ಕೂದಲನ್ನು ಶೇವ್ ಮಾಡಲು ಆತ ಮತ್ತೆ ಬಚ್ಚಲು ಮನೆಗೆ ಹೋಗುತ್ತಾನೆ. ಅವನ ಅಜ್ಜ ಬಚ್ಚಲು ಮನೆಗೆ ಹೋಗಿ ಬಂದ ಮೇಲೆ ಅಲ್ಲಿ ಉಳಿಯುತ್ತಿದ್ದ ವೃದ್ಧಾಪ್ಯದ ವಾಸನೆ ಅವನನ್ನು ಆವರಿಸುತ್ತದೆ. ಅರೆ ಕನ್ನಡಿಯೊಳಗಿನ ವೃದ್ಧ ತಾನು ಎನ್ನುವುದರ ಅರಿವಾಗುತ್ತದೆ. ಹೋಟಲ್ ಗೆ ಬಂದ ಆತ ಅವಳನ್ನು ಮಾತನಾಡಿಸುವುದಿಲ್ಲ, ದೂರವೇ ಕೂತು, ಅವಳನ್ನು ತನ್ನ ಕಣ್ಣ ತುಂಬಾ, ಮನಸ್ಸಿನ ತುಂಬಾ ತುಂಬಿಕೊಳ್ಳುತ್ತಾನೆ, ಆ ನೆನಪು ತನ್ನ ಪಾಲಿಗೆ ಸಾಕು ಅಂದುಕೊಳ್ಳುತ್ತಾನೆ. ಅದನ್ನೇ ಅವಳಿಗೆ ಬರೆದು ಕಳುಹಿಸುತ್ತಾನೆ ಸಹ.
ಆದರೆ ಇಬ್ಬರ ಜೀವನದಲ್ಲೂ ಈ ಮೌನವನ್ನು ಮಾತಾಗಿಸುವ ಎರಡು ಘಟನೆಗಳು ಸಂಭವಿಸುತ್ತವೆ.
ಈ ಹೆಣ್ಣಿನ ಮನೆಯ ಮೇಲಿನ ಮನೆಯ ಅಜ್ಜ ಮಂಚದ ಮೇಲೆ ಮಲಗಿ, ಸೂರಿನ ಮೇಲಿನ ಫ್ಯಾನ್ ದಿಟ್ಟಿಸುತ್ತಾ ಇರುತ್ತಾನೆ, ಅವನ ಯಾವ ಅಂಗಗಳೂ ಕೆಲಸ ಮಾದುತ್ತಿಲ್ಲ, ಉಸಿರಾಟ ಮಾತ್ರ ಅವನನ್ನು ಬದುಕಿಸಿರುತ್ತದೆ. ನಮಗೆ ಕೇಳಿಸುವುದು ಆ ಅಜ್ಜಿಯ ದನಿ ಮಾತ್ರ, ಆದರೆ ಆಕೆಯ ದನಿಯ ಲವಲವಿಕೆ, ಪ್ರೀತಿ, ಇಣುಕುವ ತುಂಟತನ, ಜೀವಂತಿಕೆ ಎಷ್ಟಿರುತ್ತವೆ ಅಂದರೆ ಅವಳ ಪಾಲಿಗೆ ಗಂಡ ಹಾಗಿರುವುದು, ತಾನು ಅವನನ್ನು ಮಗುವಿನಂತೆ ಸಲಹಬೇಕಾಗಿರುವುದು ಒಂದು ಕಷ್ಟವೇ ಅಲ್ಲ. ಅದನ್ನು ಅವಳು ’ಒಪ್ಪಿಕೊಂಡಿದ್ದಾಳೆ’. ಹೀಗೆ ಒಪ್ಪಿಕೊಂಡು, ಅಪ್ಪಿಕೊಂಡ ಬದುಕಿನಲ್ಲಿ ಯಾವುದೂ ಕಷ್ಟ ಅಲ್ಲ.
ಅದಕ್ಕೆ ಸಂಪೂರ್ಣ ವಿರುದ್ಧವಾಗಿ ಆ ಹೆಣ್ಣಿನ ಅಮ್ಮನ ಬದುಕು. ಗಂಡನಿಗೆ ಕ್ಯಾನ್ಸರ್ ಆಗಿರುತ್ತದೆ, ಆಕೆ ಗಂಡನನ್ನು ಚೆನ್ನಾಗೇ ನೋಡಿಕೊಳ್ಳುತ್ತಿರುತ್ತಾಳೆ. ತನ್ನ ’ಕರ್ತವ್ಯ’ವನ್ನು ಪೂರ್ಣವಾಗಿ
ನಿಭಾಯಿಸುತ್ತಿರುತ್ತಾಳೆ, ಕರ್ತವ್ಯ ಎಂದೇ ನಿಭಾಯಿಸುತ್ತಿರುತ್ತಾಳೆ. ಕೊನೆಗೊಮ್ಮೆ ಗಂಡ ತೀರಿಕೊಳ್ಳುತ್ತಾನೆ. ಮಗಳು ಅಪ್ಪನನ್ನು ನೋಡಲು, ಅಮ್ಮನನ್ನು ಸಂತೈಸಲು ಧಾವಿಸಿ ಹೋಗುತ್ತಾಳೆ. ಆದರೆ ಅವಳಿಗೆ ಅಮ್ಮನ ಮುಖದಲ್ಲಿ, ಮಾತಿನಲ್ಲಿ ದುಃಖಕ್ಕಿಂತ ಹೆಚ್ಚಾಗಿ ನಿರಾಳತೆ ಕಾಣಿಸುತ್ತದೆ. ’ಸಧ್ಯ ಮುಗಿಯಿತು’ ಅನ್ನುವ ಭಾವ ಕಾಣಿಸುತ್ತದೆ. ಆಗ ಇವಳಿಗೆ ಬದುಕು ಕರ್ತವ್ಯ ಆಗದೆ, ಆಯ್ಕೆ ಆಗಿದ್ದರೆ ಎಷ್ಟು ಸಹನೀಯ ಅನ್ನಿಸಿಬಿಡುತ್ತದೆ. ಅವಳ ಮಟ್ಟಿಗೆ ಅದು ಅವಳ ನಿರ್ಧಾರದ ಘಟ್ಟ.
ವಿಳಾಸ ತಪ್ಪಿಸಿದ ಅದೇ ಡಬ್ಬಾವಾಲನನ್ನು ಹಿಡಿದು, ಆತನ ಆಫೀಸ್ ಹುಡುಕಿಕೊಂಡು ಬರುತ್ತಾಳೆ. ಅಷ್ಟರಲ್ಲಿ ಆತ ನಿವೃತ್ತನಾಗಿ ಹೊರಟುಬಿಟ್ಟಿರುತ್ತಾನೆ.
ಹಾಗೆ ಹೊರಟ ಆತ ರೈಲಿನಲ್ಲಿ ಕೂತಿರುತ್ತಾನೆ. ಎದುರಿನ ಸೀಟಿನಲ್ಲಿ ಒಬ್ಬ ವೃದ್ಧ ಕೂತಿರುತ್ತಾನೆ. ’ನಾನು ಸಹ ನಿವೃತ್ತನಾಗಿದ್ದೇನೆ, ಮಗನನ್ನು ನೋಡಲು ಮುಂಬೈಗೆ ಬಂದಿದ್ದೆ, ಈಗ ವಾಪಸ್ ಹೋಗುತ್ತಿದ್ದೇನೆ’ ಅನ್ನುತ್ತಾನೆ. ರೈಲಿನ ಮರದ ಹಲಗೆಯ ಮೇಲೆ ಆ ಮುದುಕನ ಚಾಚಿದ, ವಯಸ್ಸಿನ ಆಘಾತದಿಂದ ನೂರು ಸುಕ್ಕುಗಳನ್ನು ಭರಿಸಿದ, ಗಂಟು ಗಂಟಾದ ಒಂಟಿ ಬೆರಳು ಅನಿಯಂತ್ರಿತವಾಗಿ ಬಡಿದುಕೊಳ್ಳುತ್ತಿರುತ್ತದೆ. ಪಟ ಪಟ ಹೊಡೆದುಕೊಳ್ಳುವ ಆ ಬೆರಳಿನ ಒಂಟಿತನ, ಒಂಟಿ ಬದುಕಿನ ನರಳಾಟದಂತೆ ಇವನಿಗೆ ಕಾಣಿಸುತ್ತದೆ. ಇವನು ಟ್ರೇನು ಇಳಿದು ಬಿಡುತ್ತಾನೆ. ಬದುಕನ್ನು ನಿರಾಕರಿಸುವ ಬದಲು ಒಪ್ಪಿಕೊಳ್ಳುವ, ತನ್ನನ್ನು ಅದಕ್ಕೆ ಒಡ್ಡಿಕೊಳ್ಳುವ ನಿರ್ಧಾರ ಮಾಡುತ್ತಾನೆ. ತನ್ನ ಮುಂಬೈನ ಮನೆಗೆ ವಾಪಸ್ಸಾಗುತ್ತಾನೆ, ಮನೆಮುಂದೆ ಆಡುತ್ತಿದ್ದ ಮಕ್ಕಳ ಜೊತೆ ದೋಸ್ತಿ ಮಾಡಿಕೊಳ್ಳುತ್ತಾನೆ.
ಮರುದಿನ ಅದೇ ಡಬ್ಬಾವಾಲಾನನ್ನು ಹಿಡಿದು ಅವಳ ಮನೆ ಹುಡುಕುತ್ತಾ ಹೊರಡುತ್ತಾನೆ.
ಅವನು ಊರುಬಿಟ್ಟು ಹೋಗಿದ್ದಾನೆಂದುಕೊಂಡ ಆಕೆ ಅವನಿಗೆ ಅಂತ ಕೊನೆಯದಾಗಿ ಒಂದು ಪತ್ರ ಬರೀತಾಳೆ. ತನ್ನ ಒಡವೆಗಳನ್ನೆಲ್ಲಾ ಆಕೆ ಮಾರಿದ್ದಾಳೆ. ಸಂಜೆ ಮಗಳು ಬಂದ ಕೂಡಲೇ ಅವಳನ್ನು ಕರೆದುಕೊಂಡು ಭೂತಾನ್ ಗೆ ಹೊರಟುಬಿಡುತ್ತೇನೆ ಅಂತ ಬರೆದಿರುತ್ತಾಳೆ. ಅದನ್ನು ಅವನಿಗೆ ತಲುಪಿಸುವ ಯಾವ ಉಮ್ಮೀದ್ ಇಲ್ಲದೆ, ಕೇವಲ ತನ್ನಲ್ಲಿನ ಅವನಿಗಾಗಿ ಆ ಪತ್ರ ಬರೆದಿರುತ್ತಾಳೆ. ಮಗಳನ್ನು ಕಾಯುತ್ತಾ ಕೂತಿರುತ್ತಾಳೆ…. ಅವನು ಟ್ರೇನಿನಲ್ಲಿ ಡಬ್ಬಾವಾಲಾಗಳ ಜೊತೆ, ಮನೆಗೆ ಹಿಂದಿರುವ ಖಾಲಿ ಡಬ್ಬಗಳ ಜೊತೆ ಕೂತಿರುತ್ತಾನೆ.
ಇಲ್ಲಿಗೆ ಚಿತ್ರ ಮುಗಿಯುತ್ತದೆ.
ಅವರಿಬ್ಬರೂ ಸಂಧಿಸುತ್ತಾರಾ? ಭೂತಾನ್ ಎನ್ನುವ ಶಾಂಗ್ರೀಲಾ ಅವರ ಪಾಲಿಗೆ ಸಿಗುತ್ತದಾ, ಬದುಕು ಅವರಿಬ್ಬರಿಗೂ ಇನ್ನೊಂದು ಅವಕಾಶ ಕರುಣಿಸುತ್ತದಾ? ಇದು ಪ್ರಶ್ನೆ.
ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಯಾವುದು ಈ ರಾಗ? ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ.. ಹಾಗೆ ಕಾಡುವ ರಾಗಗಳಲ್ಲಿ ಎಷ್ಟು ರಾಗಗಳಿಗೆ ಒಂದು ಅರ್ಥ ಸಿಕ್ಕಿ, ರಾಗಗಳು ಹಾಡಾಗುತ್ತದೆ, ಎಷ್ಟು ರಾಗಗಳು ಖಾಲಿಯಾಗೇ ಉಳಿದುಬಿಡುತ್ತವೆ ಇದು ಅದಕ್ಕಿಂತ ದೊಡ್ಡ ಪ್ರಶ್ನೆ…


ಚಿತ್ರ ವಿವರಣೆ ಚೆನ್ನಾಗಿದೆ ಅಕ್ಕ , ಅವರಿಬ್ಬರೂ ಸಂಧಿಸಬಾರದು ಅನ್ನೋದೇ ನಿರ್ದೇಶಕನ ಆಶಯ ಅನ್ನಿಸುತ್ತೆ . ಅವರಿಬ್ಬರ ನಡುವೆ ಇದ್ದಿದ್ದು ಒಂದು ಬಾಂಧವ್ಯ , ಅದು ಹಾಗೆ ಉಳಿಯಲು ಅವರಿಬ್ಬರೂ ಒಂದಾಗದೇ ಇರೋದೇ ಉತ್ತರ. ಇಲ್ಲ ಮತ್ತೆ ಸಮಾಜಕ್ಕೆ ಇನ್ನೊಂದು ರೀತಿಯ ಮೆಸೇಜ್ ಕೊಟ್ಟ ಹಾಗೆ ಆಗುತ್ತೆ. ಅಂತ ಬಿಗುವಾದ ಚಿತ್ರಕಥೆ ಇದೆ ಅನಿಸಲಿಲ್ಲ , ಚಿತ್ರ ಬಹಳ ನಿಧಾನಗತಿಯಲ್ಲಿ ಸಾಗುತ್ತದೆ.ಇರ್ಫಾನ್ ಖಾನ್ ನಟನೆ ಅದ್ಭುತ .
ವಿನಯಾ ಅಕಸ್ಮಾತ್ ಅವರಿಬ್ಬರೂ ಸಂಧಿಸುತ್ತಾರೆ ಅನ್ನೋದು ನಿರ್ದೇಶಕರ ಸೂಚನೆ ಆಗಿರಬಹುದಾ?! ಮಗಳು ಬಂದ ಮೇಲೆ ಹೊರಡುತ್ತೇನೆ ಎಂದು ಅವಳು ಪತ್ರ ಬರೆದಿರುತ್ತಾಳೆ, ಆದರೆ ಯಾವಾಗಲೂ ಡಬ್ಬಾವಾಲ ಬಂದ ಮೇಲೇ ಅಲ್ವಾ ಮಗಳು ಶಾಲೆಯಿಂದ ಬರೋದು? ಆಕೆ ಮಗಳ ಇರುವಿಕೆಯಲ್ಲಿ ಪತ್ರ ಓದುವುದು ಒಂದೇ ಸಲ, ಅದೂ ಅವಳು ಮಗಳ ಶಾಲೆ ತಪ್ಪಿಸಿ ಅವಳನ್ನು ಅಜ್ಜಿ ಮನೆಗೆ ಕರೆದುಕೊಂಡು ಹೋಗಿರುವಾಗ…. ಅಥವಾ ಕಥೆ ಅಪೂರ್ಣವಾಗಿದ್ದಾಗಲೇ ಅದು ಅರ್ಥಪೂರ್ಣ ಇರಬಹುದಾ?
ತುಂಬಾ ಚೆನ್ನಾಗಿದೆ ಸಂಧ್ಯಾ .. ನಾನು ಲಂಚ್ ಬಾಕ್ಸ್ ಚಿತ್ರ ಇನ್ನೂ ನೋಡಿಲ್ಲ . ನಿಮ್ಮ ಈ ಲೇಖನ ಓದಿದ ಮೇಲೆ ಆ ಚಿತ್ರ ನೋಡುವುದರಲ್ಲಿ ಹೆಚ್ಚಿನ ಖುಷಿ ಇದೆ ಅನ್ನಿಸುತ್ತದೆ . ನಿಮ್ಮ ಭಾವನೆಗಳ ಬಾಕ್ಸ್ ನಿಂದ ವಿಭಿನ್ನ ಭಾವನೆಗಳ ಲಂಚ್ ನನ್ನನ್ನು ಸ್ವಾಗತಿಸಿತು . ಅಭಿನಂದನೆಗಳು .
ನಾನಿರುವುದು ಮುಂಬೈಯಲ್ಲಿ. ಈ ಚಿತ್ರದ ಚಿತ್ರೀಕರಣ ನಡೆದಿದ್ದು ನಾನಿರುವ ಏರಿಯದಲ್ಲಿಯೆ. ಮುಂಬೈ ಜನರ ದೈನಂದಿನ ಬದುಕನ್ನು ಈ ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಕೆಲಸ ಆರಿಸಿ ಬರುವ ಜನ, ಜನಭರಿತ ಲೋಕಲ್ ಟ್ರೈನ್ಗಳು, ಬಸ್ಗಳು, ಡಬ್ಬಾವಾಲಾ, ಚೈವಲಾ, ರೆಸ್ಟೋರೆಂಟ್ ಕೇಟರಿಂಗ್, ಮಧ್ಯಾಹ್ನ ಊಟಕ್ಕೆ ಬಾಳೆ ಹಣ್ಣು, ಅಪಾರ್ಟ್ ಮೆಂಟ್ ಸೊಸೈಟಿ ಗಳು, ಮಕ್ಕಳ ಆಟಕ್ಕಾಗಿ ಗ್ರೌಂಡ್ ಕೊರತೆ, ಹೀಗೆ ಹತ್ತು ಹಲವು. . ನೀವು ಈ ಚಿತ್ರವನ್ನು ಈ ಲೇಖನದಲ್ಲಿ ಚೆನ್ನಾಗಿ ವಿಶ್ಲೇಸಿದ್ದೀರಿ . ತುಂಬಾ ಇಷ್ಟವಾಯ್ತು ನಿಮ್ಮ ಬರಹ. . .
ನದಿಯಲ್ಲಿ ಸಾಗುವ ದೋಣಿಗೆ, ಲಂಗರು ಹಾಕಿದ ದೋಣಿಗಿಂತ ಮೋಹಕತೆ ಮತ್ತು ಚಲನಶೀಲತೆ ಹೆಚ್ಚು. ಆದರೆ ಎಲ್ಲಾ ದೋಣಿಯೂ ಕಡೆಗೊಮ್ಮೆ ದಡ ಸೇರಲೇಬೇಕು, ಲಂಗರು ಹಾಕಲೇ ಬೇಕು, ಇದು ಜೀವನದ ಸತ್ಯ….superrrr lines…ಸಂಧ್ಯಾ…ಕೆಲವೊಮ್ಮೆ ಅಮೂರ್ತ ಭಾವಗಳೇ ಹೆಚ್ಚು ಆಪ್ಯಾಯವಾಗಿರುತ್ತವೆ ವಾಸ್ತವದ ಕಠೋರತೆಗಿಂತ. lunchbox….ನೋಡಬೇಕು..ಇನ್ನೂ ಕಾಯತಾ ಇದೀನಿ….
ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ .
ನದಿಯಲ್ಲಿ ಸಾಗುವ ದೋಣಿಗೆ, ಲಂಗರು ಹಾಕಿದ ದೋಣಿಗಿಂತ ಮೋಹಕತೆ ಮತ್ತು ಚಲನಶೀಲತೆ ಹೆಚ್ಚು. ಆದರೆ ಎಲ್ಲಾ ದೋಣಿಯೂ ಕಡೆಗೊಮ್ಮೆ ದಡ ಸೇರಲೇಬೇಕು, ಲಂಗರು ಹಾಕಲೇ ಬೇಕು, ಇದು ಜೀವನದ ಸತ್ಯ.
ನನಗೆ ಇನ್ನು ಸಿನಿಮ ಸಿಕ್ಕಿಲ್ಲ. ನೋಡಲೇಬೇಕಾದ ಸಿನಿಮಾ
ಚಿತ್ರನೋಡದೆಯೂ ನೋಡಿದ ಅನುಭವವನ್ನು ಬರಹ ದಾಟಿಸಿತು. ಲಂಚ್ ಬಾಕ್ಸ್ ನೋಡಬೇಕೆಂಬ ಆಸೆಯ ತೀವ್ರತೆಯೂ ಹೆಚ್ಚಿದೆ. ಬರಹ ಆಪ್ತವೆನ್ನಿಸಿತು. ದಿ ಇಸ್ಲೆ ಎನ್ನುವ ಕೋರಿಯನ್ ಚಿತ್ರ ನೆನಪಾಯಿತು.
Enu helali antha kooda gottaagada bhaava …. thanks sandhya
ಇಡೀ ಸಿನಿಮಾವನ್ನೆ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ, ಜೊತೆಗೆ ಹಿರಿತೆರೆಯಲ್ಲಿ ನೋಡುವ ಕುತೂಹಲವನ್ನೂ ಹುಟ್ಟಿಸಿದ್ದೀರಿ! ನಿಮ್ಮ ಒಟ್ಟಾರೆ ನೇಯ್ಗೆ ಇಷ್ಟವಾಗುತ್ತದೆ.
-ಸುಮಂಗಲಾ
ರಾಗದ ಗುಂಗಿನ ಬೆನ್ನು ಹತ್ತಿ ರಮಣೀಯಯಾಗಿ ನಿರೂಪಿಸಿದ್ದಿರಿ , ಇದರ ಇಂಗ್ಲಿಶ್ review ಓದಿದ್ದೆ, ನಿಮ್ಮ ಬರಹದ ಧ್ವನಿ ಅವೆಲ್ಲವುಗಳಿಗಿಂತ ಎಷ್ಟು ಆಪ್ತವಾಗಿದೆಯೆಂದರೆ ಹೇಗಾದರೂ ಮಾಡಿ ಇದನ್ನು ನೋಡಲೆಬೇಕೆಂದು ಅನಿಸುವಂತಿದೆ. ಮನಮೋಹಕ ಬರಹ – ಬಹಳ ನೆನಪಿನಲ್ಲಿ ಉಳಿಯುವ ಸಾಲುಗಳಿವು-
“ಮನುಷ್ಯರ ಸ್ಪರ್ಷಕ್ಕೆ ಸಿಕ್ಕಿದರೆ ದೇವತೆಗಳು ಸಹ ತಮ್ಮ ದೈವತ್ವ ಕಳೆದುಕೊಂಡುಬಿಡುತ್ತಾರಂತೆ…”,
“ಅಮೂರ್ತ ಕಾಮನೆಗಳು ಮೂರ್ತವಾಗದಿರಲಿ, ಮಾತಿರದ ನಲುಮೆ ಜಗವ ನಡೆಸಲಿ..”
“ಬದುಕು ಕರ್ತವ್ಯ ಆಗದೆ, ಆಯ್ಕೆ ಆಗಿದ್ದರೆ ಎಷ್ಟು ಸಹನೀಯ ಅನ್ನಿಸಿಬಿಡುತ್ತದೆ”
ಬರಹ ಚೆನ್ನಾಗಿದೆ, ಇಷ್ಟವಾಯ್ತು
ಇನ್ನು ವಿದಿಯಿಲ್ಲ…ಚಿತ್ರ ನೋಡಲೇಬೇಕು.
Sandhya
Nimmalli photography jotege baravanige kaushalya adagideyanta gottiralilla.
Yele yeleyaagi bhawanegalu bidisi ittiddara…super baravanige
ನಿಮ್ಮ ಈ ಲೇಖನವನ್ನ ಮೊನ್ನೆಯೇ ಓದಿದ್ದೆ.. ನೀವು ಬರೆದ ಚಿತ್ರವಸ್ತುವಿನ ವಿಚಾರ ಅದ್ಯಾವ ಪರಿ ನನ್ನನ್ನು ಸೆಳೆದಿತ್ತು ಅಂದ್ರೆ ಈ ಚಿತ್ರವನ್ನ ಅದ್ಯಾವಾಗ ನೋಡಿಯೇನು ಅನಿಸಿತ್ತು.. ಅದಕ್ಕೆಂದೇ ನಿನ್ನೆ ಬೆಂಗಳೂರು ಕಡೆಗೆ ಬಂದವನು ಚಿತ್ರದ ಡೀವೀಡಿ ಯನ್ನ ಖರೀದಿಸಿ ತಂದಿದ್ದೇನೆ. ಆ ಚಿತ್ರವನ್ನ ನೋಡುವ ಮೊದಲು ಮತ್ತೊಮ್ಮೆ ನಿಮ್ಮ ಈ ಬರಹ ಓದುವ ಮನಸ್ಸಾಯ್ತು. ಮೊತ್ತೊಮ್ಮೆ ಓದಿದೆ. ಇನ್ನು ಆ ಚಿತ್ರ ಇಷ್ಟವಾಗಬಹುದೆನ್ನುವ ಸಮಾಧಾನವಿದೆ. 🙂 🙂