
ಒಂದು ಚಿತ್ರದ ಸನ್ನಿವೇಶ. ಎರಡು ಕೋಣೆಗಳು. ನಡುವೆ ಒಂದು ಬಾಗಿಲು. ಬಾಗಿಲ ಈಚೆ ಇವಳು, ಆಚೆ ಅವನು. ಗಾಳಿ ಬೀಸಿ ಬಾಗಿಲು ತೆಗೆದುಕೊಳ್ಳುತ್ತದೆ. ಅವಳು ಬಂದು ಬಾಗಿಲು ಹಾಕುತ್ತಾಳೆ, ಮತ್ತೆ ಬಾಗಿಲು ತೆರೆದುಕೊಳ್ಳಲಿ ಎನ್ನುವ ನಿರೀಕ್ಷೆಯಲಿ. ಬಾಗಿಲು ಮತ್ತೆ ತೆರೆದುಕೊಳ್ಳುತ್ತದೆ. ಈ ಸಲ ಅವನು ಭದ್ರವಾಗಿ ಬಾಗಿಲು ಹಾಕುತ್ತಾನೆ, ಹುಡುಗಿ ಕಾಯುತ್ತಾಳೆ, ಆದರೆ ಸುಮ್ಮನಿರುವುದಿಲ್ಲ …. ಕೋಣೆಯ ಬೇರೆ ಕಿಟಕಿ ಬಾಗಿಲುಗಳನ್ನು ತೆಗೆಯುತ್ತಾಳೆ, ಗಾಳಿ ಬೀಸಿ ಬಂದು ಆ ಬಾಗಿಲ ತೆರೆಯಲಿ ಎಂದು. ತನ್ನ ಹೇರ್ ಪಿನ್ ತೆಗೆದು ಬಾಗಿಲ ಕಿಂಡಿಯಲ್ಲಿ ನುಸುಳಿಸಿ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾಳೆ. ಯಾಕೆ ಬಾಗಿಲು ತೆಗೆಯುತ್ತಿಲ್ಲ ಎಂದು ಕಾಲಪ್ಪಳಿಸಿ, ಬಗ್ಗಿ ಬಾಗಿಲ ಕಿಂಡಿಯಿಂದ ನೋಡುವಾಗ ಆತ ಬಾಗಿಲು ತೆರೆಯುತ್ತಾನೆ. ತಾನೇನು ಬಾಗಿಲು ತೆರೆಯಲು ಪ್ರಯತ್ನಿಸುತ್ತಿರಲಿಲ್ಲ ಎಂದು ಹುಡುಗಿ ತನಗೆ ಬರುವ ನೆಪಗಳನ್ನೆಲ್ಲಾ ಹೇಳಿ, ಕಡೆಗೆ ಅಳಲು ಶುರು ಮಾಡುತ್ತಾಳೆ. ಅವಳ ಕೋಪ, ಹತಾಶೆ, ಸಿಟ್ಟಿನ ನುಡಿ, ಆರೋಪ ಎಲ್ಲವನ್ನೂ ಕೇಳಿಸಿಕೊಳ್ಳುವ ಹುಡುಗ ಕಡೆಯಲ್ಲಿ, ’ನೀನು ಬಾಗಿಲು ಯಾಕೆ ತೆಗೆದುಕೊಳ್ಳುತ್ತಿಲ್ಲಾ ಅಂತ ಕಾಲಪ್ಪಳಿಸುತ್ತಿರುವಾಗ, ನಾನು ಬಾಗಿಲು ಯಾವಾಗ ತೆಗೆದುಕೊಳ್ಳುವುದೋ ಎಂದು ಕಾಯುತ್ತಾ ಕೂತಿದ್ದೆ, ಇದೇ ನನ್ನ ಮತ್ತು ನಿನ್ನಲ್ಲಿರುವ ವ್ಯತ್ಯಾಸ, ನಾನು ನಿನ್ನಂತಲ್ಲ ಹುಡುಗಿ, ನಿನ್ನಂತಿರುವುದು ನನಗೆ ಬರುವುದಿಲ್ಲ’ ಅಂತಾನೆ.
ಅವನೊಬ್ಬ ಬಾಡಿಗೆ ಹಂತಕ. ತಾನು ಮಾಡದ ಹತ್ಯೆಯೊಂದರ ಆರೋಪದಿಂದ ತಪ್ಪಿಸಿಕೊಳ್ಳಲೆಂದು ರೈಲು ಹತ್ತಿರುತ್ತಾನೆ. ರೈಲಿನಲ್ಲಿ ಒಬ್ಬ ಸಹಪ್ರಯಾಣಿಕ, ಬಾಲ್ಯದಲ್ಲೇ ಊರು, ಮನೆ ಬಿಟ್ಟು ಓಡಿಹೋಗಿರುತ್ತಾನೆ. ವರ್ಷಗಳ ಬಳಿಕ ಮನೆಯವರನ್ನೆಲ್ಲಾ ನೋಡಲು ವಾಪಸ್ಸಾಗುತ್ತಿರುತ್ತಾನೆ. ರೈಲು ನಿಲ್ದಾಣದಿಂದ ಈ ಬಾಡಿಗೆ ಹಂತಕನನ್ನು ಕೊಲ್ಲಲು ಪೋಲೀಸರು ಹಾರಿಸುವ ಗುಂಡಿಗೆ ಈ ಪ್ರಯಾಣಿಕ ಬಲಿ ಆಗುತ್ತಾನೆ. ಅವನ ಋಣ ತನ್ನ ಮೇಲಿದೆ ಎಂದುಕೊಂಡ ಈ ಹಂತಕ ಅವನ ಮನೆಗೆ ವಿಷಯ ತಿಳಿಸಲು ಹೋಗುವವನು, ನಿಜ ಹೇಳಲಾಗದೆ, ಆ ಮನೆಯವರಲ್ಲೊಬ್ಬನಾಗಿ ಹೋಗುತ್ತಾನೆ. ಊರನ್ನು, ಆ ಮನೆಯವರನ್ನು ತನ್ನದಾಗಿಸಿಕೊಳ್ಳುತ್ತಾನೆ. ಅವನ ಮಟ್ಟಿಗೆ ಪ್ರೀತಿ, ನಂಬಿಕೆ, ಅವಲಂಬನೆ, ಆಶಾವಾದಗಳ ಆ ಪ್ರಪಂಚವೇ ಹೊಸದು. ಅವನಿದ್ದ ಜಗತ್ತೇ ಬೇರೆ. ಇಲ್ಲಿ ಅವನು ಪ್ರತಿ ಭಾವನೆಯನ್ನೂ ಹೊಸದಾಗಿ ಕಲಿಯುತ್ತಿರುತ್ತಾನೆ.
ಅವಳು ಆ ಮನೆಯ ಹುಡುಗಿ, ತಾರುಣ್ಯದ ಎಲ್ಲಾ ಆಸೆ, ಉತ್ಸಾಹವನ್ನೂ ಸೆರಗಿಗೆ ಗಂಟು ಹಾಕಿಕೊಂಡವಳು. ಬದುಕಿನ ಮಳೆಗಾಲವನ್ನು ಮಾತ್ರ ಕಂಡವಳು. ಆದರೆ ಇವನು ಹಾಗಲ್ಲ, ಬೇಸಿಗೆ, ಗ್ರೀಷ್ಮ, ಶಿಶಿರಗಳನ್ನೇ ಬಾಳೆಲ್ಲಾ ಅನುಭವಿಸಿದವನಿಗೆ ವಸಂತದ ಕನಸ ಕಾಣುವುದೂ ಭಯವೇ, ಕಣ್ಣೆದಿರಿಗಿರುವ ವಸಂತದೆಡೆಗೆ ಕೈ ಚಾಚುವುದೂ ಹೆದರಿಕೆಯೇ..
ಕೆಲವರು ಬಾಗಿಲು ಯಾಕೆ ತೆಗೆಯುತ್ತಿಲ್ಲ ಎಂದು ಹಿಡಿ ಜಗ್ಗುತ್ತಾರೆ, ಮತ್ತೆ ಕೆಲವರು ಬಾಗಿಲು ಯಾವಾಗ ತೆಗೆಯುತ್ತದೆ ಎಂದು ಕಾಯುತ್ತಾ ಕೂರುತ್ತಾರೆ. ಹಾಗೆ ಕಾಯುವುದು ಬಹಳಷ್ಟು ಸಲ ಕೇವಲ ತಾಳ್ಮೆಯಿಂದಲೇ ಅಲ್ಲ, ಬಾಗಿಲು ತೆರೆಯದೇ ಉಳಿದುಬಿಟ್ಟರೆ ಎನ್ನುವ ಹೆದರಿಕೆಯಿಂದ, ತೆರೆಯುವುದಿಲ್ಲ ಎನ್ನುವ ಸತ್ಯ ಎದುರಿಗೆ ಹೆಜ್ಜೆ ಊರಿ ನಿಂತುಬಿಟ್ಟರೆ ಮುಂದೆ ಎದಿರು ನೋಡಲು ಏನೂ ಇರಲಾರದು ಎನ್ನುವ ಆತಂಕದಿಂದ, ಇದುವರೆಗೂ ಸಿಗದ ಉತ್ತರ, ತೆರೆವ ಬಾಗಿಲ ಆಚೆ ಬದಿಯಲ್ಲಿರಬಹುದು ಎನ್ನುವ ವಿಶ್ವಾಸ ಮೂಡದೇ ಇರುವುದರಿಂದ. They also serve who stand and wait ಅಂತೆನೋ ಒಂದು ಮಾತಿದೆ. ಕಾಯುವವರಿಗೆ ಅವರ ಪಾಲು ಸಿಕ್ಕೇ ಸಿಗುತ್ತದೆ ಎಂದು. ಆದರೆ ಹಾಗೆ ಸಿಕ್ಕೇ ಸಿಗುತ್ತದಾ? ಪ್ರತಿಯೊಬ್ಬರ ಹಕ್ಕಿನ ಊಟ, ಹಕ್ಕಿನ ವಸ್ತ್ರ, ಹಕ್ಕಿನ ವಿದ್ಯೆ, ಹಕ್ಕಿನ ಕೆಲಸ, ಹಕ್ಕಿನ ಪ್ರೇಮ… ಸಿಗುತ್ತದಾ? ಇಷ್ಟಕ್ಕೂ ಇಷ್ಟು ಹಣ ಕೊಟ್ಟರೆ, ಇಷ್ಟು ಸಾಮಾನು, ಮಿಕ್ಕ ಚಿಲ್ಲರೆ ಇಷ್ಟು ಎನ್ನುವ ಲೆಕ್ಕಾಚಾರ ಉಂಟೇ ಬಾಳಿಗೆ?
ಇಲ್ಲಿ ಮೇಲಿನ ಉದಾಹರಣೆ ಕೇವಲ ಸಾಂಧರ್ಬಿಕ. ಮುಚ್ಚಿದ ಬಾಗಿಲ ಎದುರು ಮೌನವಾಗಿ ನಿಲ್ಲಲು ನಾನಾ ಕಾರಣಗಳಿರಬಹುದು. ಬದುಕು ಕಲಿಸಿದ ನಿರಾಸೆ, ಬೆಳೆದ ಪರಿಸರ ತಂದ ಹಿಂಜರಿಕೆ, ಪ್ರೀತಿಗಾದ ಅವಮಾನ, ನಂಬಿಕೆ ಮುರಿದ ನೋವು, ಒರಸಿಟ್ಟರೂ ಅಳಿಸದ ಕನ್ನಡಿಯಲ್ಲಿನ ಬಿಂಬದ ಗೆರೆಗಳು… ಹೀಗೆ ಏನೇನೋ.
ಕೆಲವರಿಗೆ ಪ್ರತಿಯೊಂದೂ ಹಕ್ಕಿನಲಿ, ಅಧಿಕಾರದಲಿ ಅವರ ಎದುರಿಗೆ ಬೀಳುತ್ತಾ ಹೋಗುತ್ತದೆ, ಬದುಕು ಕೆಲವರ ಪಾಲಿಗೆ ಬಡಿಸಿಟ್ಟ ಬಾಳೆ ಎಲೆ. ಅದೇ ಬದುಕು ಮತ್ತೆ ಕೆಲವರ ಪಾಲಿಗೆ ಪ್ರತಿ ಹೆಜ್ಜೆಯನ್ನೂ ಮೊದಲು ಬೆರಳನ್ನು ಊರಿ ನೆಲ ಕುಸಿಯುವುದಿಲ್ಲವಾ ಎಂದು ನೋಡೇ ಹೆಜ್ಜೆ ಊರುವ ಉಸುಕಿನ ಹಾದಿ. ಯಾವ ಧೈರ್ಯದ ಮೇಲೆ ಅವರು ಬಾಗಿಲ ಹಿಡಿ ತಿರುಗಿಸಲು ಸಾಧ್ಯ. ಇಡೀ ಜೀವನ ಅವರು ಸೂಟುಕೇಸಿನಿಂದಲೇ ಬಟ್ಟೆ ತೆಗೆಯುತ್ತಾ. ಅದಕ್ಕೆ ಜೋಡಿಸುತ್ತಾ ಬದುಕಬೇಕಾಗುತ್ತದೆ, ಎಲ್ಲೂ ನೆಲೆ ನಿಲ್ಲುವುದು, ನೆಲೆಯನ್ನು ತಮ್ಮದಾಗಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದೇ ಇಲ್ಲ.
ಬೆಳಗ್ಗೆ ತಾನೆ ಓದಿದ ಸು ರಂ ಎಕ್ಕುಂಡಿಯವರ ಸಾಲುಗಳು ನೆನಪಾಗುತ್ತಿವೆ, . “ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೆ ಇಲ್ಲ / ನಂದನ ವನದಲಿ ರೆಕ್ಕೆಯ ಕುದುರೆಯ ಹತ್ತುವವರೆ ಇಲ್ಲ / ಬೀದಿಗೆ ಬಿಸುಡಿದ ಕೂಸಿನ ಬಾಯಿಗೆ ತಾಯಿಯ ಹಾಲಿಲ್ಲ / ಗೌರಿ ಶಂಕರ ಶಿಖರವನೇರಲು ನಮಗೂ ಕಾಲಿಲ್ಲ / ಶಬರಿಯ ಗುಡಿಸಲ ಹಣ್ಣಿನ ರುಚಿಯನು ಕಂಡವರೇ ಇಲ್ಲ / ಒಲುಮೆಯ ಹಾಲು ತಿಳಿವಿನ ಜೇನು ಉಂಡವರೇ ಇಲ್ಲ / ಕಡಲಿನ ಭಗವದ್ಗೀತೆಗೆ ಭಾಷ್ಪವ ಬರೆದವರೇ ಇಲ್ಲ / ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೆ ಇಲ್ಲ…”. ಹೌದು ಹೀಗೆ ಹೃದಯದ ಬಾಗಿಲನ್ನು ಯಾವುದೊಂದು ಕೈಯೂ ಸ್ಪರ್ಶಿಸದೆ ಕತ್ತಲ ಕೋಣೆಯಲ್ಲಿ ಉಳಿದು ಹೋಗುವವರ ಬಗ್ಗೆ ಬರೆಯುತ್ತಿದ್ದೇನೆ.
ಕೆಲವು ದಿನಗಳ ಮೊದಲು ಗೆಳತಿ ಒಂದು ಹಾಡಿನ ಕೊಂಡಿ ಕಳಿಸಿದ್ದಳು, ಅದೊಂದು ಹಿಂದಿ ಹಾಡು, ’ಜಿಸ್ ಪಥ್ ಪೆ ಚಲ ಉಸ್ ಪಥ್ ಪೆ ಮುಝೆ ಆಚಲ್ ತೊ ಬಿಛಾನೆ ದೆ, ಸಾಥಿ ನ ಸಮಜ್ ಕೋಯಿ ಬಾತ್ ನಹಿ, ಮುಝೆ ಸಾಥ್ ತೊ ಆನೆ ದೇ’, ’ನೀ ಹೆಜ್ಜೆ ಇಡುವ ಹಾದಿಗೆ ನನ್ನ ಸೆರಗನ್ನು ಹಾಸಲು ಬಿಡು, ನನ್ನ ಸಂಗಾತಿ ಎಂದು ಕರೆಯದಿದ್ದರೂ ಪರವಾಗಿಲ್ಲ, ಕನಿಷ್ಠ ನಿನ್ನ ಜೊತೆ ಹೆಜ್ಜೆ ಹಾಕಲಾದರೂ ಬಿಡು’, ಅಂತ. ’ಹೇಗಿದೆ’ ಎಂದವಳ ಅರಳುಗಣ್ಣುಗಳ ನೆನಪಿನಲ್ಲಿ ಉತ್ತರಿಸಿದ್ದೆ, ’ಆ ರೀತಿ ಪ್ರೀತಿಸಲು ತುಂಬಾ ಧೈರ್ಯ ಬೇಕಲ್ಲವೇನೆ’ ಅಂತ. ಪ್ರೀತಿಸಲು ಪ್ರೀತಿ ಸಾಕು ಎನ್ನುವ ವಯಸ್ಸು ಅವಳದು, ಆದರೆ ಹಾಗೆ ಪ್ರೀತಿಸಲೂ ಧೈರ್ಯವೂ ಬೇಕು ಎನ್ನುವ ಯೋಚನೆ ನನ್ನದು! ಹೌದು, ತುಂಬಾ ಧೈರ್ಯ ಬೇಕು, ಹಾಗೆ ಹೃದಯ ಎದುರಿಗಿಟ್ಟಾಗ ಅದನ್ನು ಎದುರಿನವರು ತುಳಿಯರು ಎನ್ನುವ ಧೈರ್ಯ, ಚಾಚಿದ ತೋಳಿಗೆ ಬೀಳುವ ಮೊದಲು, ತಾನು ಓಡಿ ಬರುವಾಗ ಆ ಕೈಯಿ ಚಾಚೇ ಇರುತ್ತದೆ ಎನ್ನುವ ಧೈರ್ಯ, ತನ್ನ ಪ್ರೀತಿ ಒಂದು ದೌರ್ಬಲ್ಯದಂತೆ ಪರಿಗಣಿಸದು ಎನ್ನುವ ಧೈರ್ಯ… ಹೌದು ಪ್ರೀತಿಸಲು ತುಂಬಾ ಧೈರ್ಯ ಬೇಕು.

ಹದಿಹರಯದಲ್ಲಿ ಯಾರೂ ಕಲಿಸದೆ, ಯಾರ ಜಾಮೀನೂ ಬೇಕಿಲ್ಲದೆ ಉಕ್ಕುವ ಆ ಧೈರ್ಯ ಬರಬರುತ್ತಾ ಯಾಕೆ ಕೈ ಬಿಟ್ಟುಬಿಡುತ್ತದೆ. ವಯಸ್ಸಾದಂತೆ ಪ್ರೀತಿ ಬೇಡುವುದಿರಲಿ, ಪೂರಾ ಪೂರ ತನ್ನತನ ಕರ್ಪೂರದಂತೆ ಉರಿದು, ನದಿಯ ಕಡೆಯ ಹನಿಯಂತೆ ಹರಿದುಹೋಗುವಂತೆ ಪ್ರೀತಿಸುವ ಧೈರ್ಯ ಯಾಕೆ ಹೊರಟು ಹೋಗುತ್ತದೆ. ಎದುರಿರುವ ಜೀವವನ್ನು ತೀರಾ ಹಚ್ಚಿಕೊಳ್ಳಬಾರದು ಎಂದು ಬುದ್ಧಿಹೇಳುವ, ಎಚ್ಚರಿಸುವ ನಡುವಯಸ್ಸಿನ ಹುಷಾರಿಗೆ ಪ್ರೀತಿಸುವ ನಂಬಿಕೆ ಯಾಕೆ ಕಡಿಮೆ ಆಗಿಬಿಡುತ್ತದೆ? ಬದುಕು ಅರ್ಥವಾಗುವಾಗ ಧೈರ್ಯದ ಬದಲು ಒಂದು ಸಣ್ಣ ಹುಷಾರು ಯಾಕೆ ನಮ್ಮನ್ನು ಆಳಲು ಶುರು ಮಾಡುತ್ತದೆ?
ಮಾತು ಮುಂದುವರಿಸುತ್ತಾ ನನ್ನ ಗೆಳತಿ, ’ ಜೀವನವನ್ನು ಕಂಡ ಮೇಲೆ ಆಶಾಭಾವ ಮತ್ತು ಅವನಿಗಾಗಿ ಅಷ್ಟು ಒಲವು ಉಳಿಸಿಕೊಳ್ಳೋದು ಕಷ್ಟವೇ …ಆದರೂ ನನಗೆ ರಾಜೇಶ್ವರಿ ತೇಜಸ್ವಿ ನೆನಪಾದರು …ಮಿಥುನಂ ನ ಲಕ್ಷ್ಮಿ ನೆನಪಾದರು ಒಲವನ್ನ ಕಾಯ್ದುಕೊಳ್ಳುವುದು ಒಂದು ತಪಸ್ಸು ಅಲ್ಲವಾ ?’ ಅಂದಳು. ಹೌದಾ, ಒಲವು ಒಂದು ತಪಸ್ಸಾ, ಹಾಗೆ ತಪಸ್ಸು ಮಾಡುವುದು, ಮಾಡುತ್ತಲೇ ಇರುವುದು ಅಷ್ಟು ಸುಲಭವಾ? ’ನನ್ನ ತೇಜಸ್ವಿ’ ಬರೆಯಬೇಕೆಂದರೆ ಮೊದಲು ತೇಜಸ್ವಿಯಂತಹ ತೇಜಸ್ವಿ ಸಿಗಬೇಕಲ್ಲವಾ?! ತಪಸ್ಸಿನ ಸಾರ್ಥಕತೆ ಇರುವುದು ತಪಸ್ಸಿನಲ್ಲಾ, ಅಥವಾ ತಪಸ್ಸು ಪೂರ್ಣವಾದಾಗ ಸಿಗುವ ಸಾಕ್ಷಾತ್ಕಾರದ ನಂಬಿಕೆಯಲ್ಲ? ಅಥವಾ ತಪಸ್ಸಿಗೂ ಒಂದು ಫಲವಿದೆ ಎನ್ನುವ ಜಾಮೀನಿನಲ್ಲಾ?
ಹಾಗೆ ಬಾಗಿಲು ಬಡಿಯಲೇ ಅಥವಾ ಬಾಗಿಲು ತೆರೆಯಲು ಕಾಯಲೇ ಎನ್ನುವ ದ್ವಂದ್ವವನ್ನು ಅದ್ಭುತವಾಗಿ ಕಟ್ಟಿಕೊಟ್ಟ ಒಂದು ಹಾಡು ನೆನಪಾಯಿತು. ಅದು ಉಪೇಂದ್ರ ನಿರ್ದೇಶಿಸಿದ್ದ ಚಿತ್ರದಲ್ಲಿನ ಹಾಡು. ಹಾಡಿನಲ್ಲಿ ಚತುರತೆ ಇತ್ತು, ಆದರೆ ಅದು ಬೌದ್ಧಿಕತೆ ಆಗಿರದ, ಭಾವುಕತೆಗೆ ಪೂರಕವಾಗಿತ್ತು, ಪದಗಳ ಜೋಡಣೆ ಕಸರತ್ತಾಗದೆ, ದಂಡೆಯಿಂದ ನದಿಯೊಳಕ್ಕೆ ಕರೆದೊಯ್ಯಲು ತಂತಾನೆ ಕರಗಿದ, ಸವೆದ, ಹೊಂದಿಸಿಕೊಂಡ ಕಲ್ಲುಗಳ ಹಾಗೆ, ಒಂದು ಚಿಪ್ಪಿನಲಿ ಯಾರೋ ಜೋಡಿಸಿಟ್ಟಂತೆ ಬೆಳೆದ ಬಾಳೆಯ ಹಾಗೆ, ಕಟ್ಟಿಟ್ಟ ಹೂವಿನ ಹಾರದ ಹಾಗೆ ಸೇರಿಕೊಂಡಿತ್ತು.
ಆ ಹಾಡು ಹೀಗಿದೆ, ’ಏನಿಲ್ಲ, ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ’, ಒಂದು ನಿರ್ಧಾರಿತ ವಾಕ್ಯದಂತೆ, ಸಂಬಂಧಕ್ಕೆ ಬರೆದ ಭಾಷ್ಯದಂತೆ ಬರುವ ಇದೇ ಸಾಲು, ಮುಂದೆ ಒಂದು ಪ್ರಶ್ನೆಯಾಗಿ ಬದಲಾಗುವ ಮೂಲಕ ಹಾಡಿನ ಅರ್ಥವನ್ನೇ ಬದಲಿಸಿ ಹಾಕಿಬಿಡುತ್ತದೆ, ’ಏನಿಲ್ಲ? ಏನಿಲ್ಲ? ನನ್ನ ನಿನ್ನ ನಡುವೆ ಏನಿಲ್ಲ? ಎನೇನಿಲ್ಲ?”. ಮೊದಲನೆಯ ಸಾಲು ತುಟಿಗಳದ್ದಾದರೆ, ಎರಡನೆಯ ಸಾಲು ಹೃದಯದ್ದು. ’ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ, ಸುಳ್ಳಿನ ನಿಜವು ಸುಳ್ಳಲ್ಲ…’. ಹೌದು, ಸುಳ್ಳೇ ಅನ್ನಿಸಿದರೂ, ಆ ಸುಳ್ಳಿನಲ್ಲಿರುವ ಒಂದು ಸಣ್ಣ ನಿಜ ಸುಳ್ಳಲ್ಲ ಅಲ್ಲವಾ? ಹಾಗೆ ಸುಳ್ಳಿನಲ್ಲಿಯ ನಿಜವನ್ನು, ಸುಳ್ಳಾಗಿಸದ ಪ್ರೀತಿ ಎನ್ನುವ ಮಾಯೆಗೇನು ಹೇಳಲಿ?
ಹಾಡು ಹೀಗೆ ಕೊನೆಯಾಗುತ್ತದೆ, ’ಓ ನಲ್ಲ ನೀನಲ್ಲ, ಕರಿಮಣೆ ಮಾಲಿಕ ನೀನಲ್ಲ’, ಇಲ್ಲ ಹಾಗಲ್ಲ, ನಿಜಕ್ಕೂ ಹಾಡು ಕೊನೆಯಾಗುವುದು ಹೀಗೆ, ’ಓ ನಲ್ಲ, ನೀ, ನಲ್ಲ, ಕರಿಮಣಿ ಮಾಲಿಕ ನೀ, ನಲ್ಲ. ಕರಿ ಮಣಿ ಮಾಲಿಕ ನೀ, ನಲ್ಲ..’. ಬಹುಶಃ ಮಿದುಳು ಹೃದಯಗಳ ನಡುವಿನ ತಾಕಲಾಟವನ್ನು ಈ ಹಾಡಿನಂತೆ ಸುಂದರವಾಗಿ ತೆರೆದಿಡುವ ಹಾಡುಗಳು ತುಂಬಾ ಕಮ್ಮಿ ಅನ್ನಿಸುತ್ತದೆ.
ಹೀಗೆ ಅವ್ಯಕ್ತವಾಗಿ ಉಳಿದ ಎರಡನೆ ಸಾಲನ್ನು, ಹೃದಯದ ಹಾಡನ್ನು ಹಾಡುವ ಧೈರ್ಯ ಯಾಕೆ ಬರುವುದಿಲ್ಲ?
ಮತ್ತೆ ಕಥೆಗೇ ಹಿಂದಿರುಗುವುದಾದರೆ, ಹೌದು, ಹಾಗೆ ಬಾಗಿಲನ್ನು ತೆರೆಯುವುದು, ಯಾಕೆ ತೆಗೆಯುವುದಿಲ್ಲ ಎಂದು ಸವಾಲು ಹಾಕುವುದು ಅವಳಿಗೆ ಸಾಧ್ಯವಾಗುವ ಹಾಗೆ ಅವನಿಗೆ ಸಾಧ್ಯವಾಗುವುದಿಲ್ಲ. ಬಾಗಿಲು ಯಾಕೆ ತೆಗೆಯುತ್ತಿಲ್ಲ ಎಂದು ಕೇಳುವವರಲ್ಲಿ ಒಂದು ವಿಶ್ವಾಸ ಇರುತ್ತದೆ, ತನಗಲ್ಲದೆ ಇನ್ನ್ಯಾರಿಗೆ ಬಾಗಿಲು ತೆಗೆಯಬೇಕು ಎನ್ನುವ ಒಂದು ಧಾರ್ಷ್ಟ್ಯ ಇರುತ್ತದೆ. ಇಲ್ಲೇ ಬಾಗಿಲು ಬಡಿಯುತ್ತಾ ನಿಂತರೆ, ಇಂದಲ್ಲ ನಾಳೆ ಬಾಗಿಲು ತೆಗೆಸೇ ತೆಗೆಸುತ್ತೇನೆ ಎನ್ನುವ ಆತ್ಮ ವಿಶ್ವಾಸ ಇರುತ್ತದೆ. ಆದರೆ ಬಾಗಿಲು ಯಾವಾಗ ತೆಗೆಯುತ್ತದೆ ಎಂದು ಕಾದು ಕೂತವರ ಕಥೆ ಹಾಗಲ್ಲ. ಅವರಲ್ಲಿ ಬಾಗಿಲು ತೆಗೆದೇ ತೆಗೆಯುತ್ತದೆ ಎನ್ನುವ ನಂಬಿಕೆ ಇರುವುದಿಲ್ಲ, ಧೈರ್ಯ ಮಾಡಿ ಬಾಗಿಲ ಬಡಿದರೆ, ಬಾಗಿಲು ತೆರೆಯದೇ ಹೋದರೆ, ಅದನ್ನು ತಡೆದುಕೊಳ್ಳುವ ಧೈರ್ಯ ಇರುವುದಿಲ್ಲ. ಆ ಘಳಿಗೆಯಲ್ಲಿ ಬಾಗಿಲು ತೆರೆಯದೇ ಹೋದರೆ ಅದನ್ನು ತಾಳಿಕೊಳ್ಳುವ ನಿರಾಸೆಗಿಂತ ಬಾಗಿಲನ್ನು ತಟ್ಟದೆ ಹಾಗೆ ಕಾಯುವುದೇ ಮೇಲು ಅನ್ನಿಸಿಬಿಟ್ಟಿರುತ್ತದೆ.
ಬಾಗಿಲು ತಟ್ಟಬೇಕೆಂದರೆ ನಿರೀಕ್ಷೆಯನ್ನು ನಂಬಿಕೆಯಾಗಿಸಬೇಕು, ನಂಬಿಕೆಯನ್ನು ಪಣಕ್ಕಿಡುವ ವಿಶ್ವಾಸ ಇರಬೇಕು, ಬಾಗಿಲಾಚೆಯ ಆ ಜೀವ ನಂಬಿಕೆಯ ಮರ್ಯಾದೆ ಕಾಯುತ್ತದೆ ಎನ್ನುವ ಆತ್ಮವಿಶ್ವಾಸ ಬೇಕು, ಆದರೆ ಕಾಯುವವರಲ್ಲಿರುವುದು ತಾಳ್ಮೆಯೊಂದೇ. ಅವರು ಪಣವಾಗಿಸಬೇಕಿರುವುದು ತಮ್ಮ ಪ್ರೀತಿಯನ್ನು ಮಾತ್ರವೇ. ಅವರಲ್ಲಿರುವುದು ಒಂದು ಆಸೆ ಮಾತ್ರ, ಬಾಗಿಲು ತೆಗೆಯಲಿ ಎನ್ನುವ ಆಸೆ, ಬಾಗಿಲಾಚೆಯ ಬದುಕು ತನ್ನದಾಗಲಿ ಎನ್ನುವ ಆಸೆ, ಬಾಗಿಲಿಗೆ ಕರುಣೆ ಬರಲಿ ಎನ್ನುವ ಆಸೆ ಮತ್ತು ಅದರ ಜೊತೆಯಲ್ಲಿ ಒಂದು ದೀರ್ಘ, ಮೂಕ, ನಿರೀಕ್ಷೆ ಮತ್ತು ಆ ನಿರೀಕ್ಷೆಯ ಉದ್ದದಷ್ಟು ಆಯಸ್ಸು…
ಸಂಧ್ಯಾರಾಣಿ ಕಾಲಂ : ಮುಚ್ಚಿದ ಬಾಗಿಲಿನ ಮುಂದೆ ನಿಂತು…
ನಿಮಗೆ ಇವೂ ಇಷ್ಟವಾಗಬಹುದು…

ಸಂಧ್ಯಾ……. ತುಂಬಾ ತುಂಬಾ ಇಷ್ಟವಾಯಿತು….too good! ನನ್ನ ಪ್ರಕಾರ ತಪಸ್ಸಿನ ಸಾರ್ಥಕತೆ ಇರುವುದು.. ತಪಸ್ಸು ಮಾಡುತ್ತಿದ್ದೇನೆ ಎಂಬ ಒಂದು ತೃಪ್ತಿಯಲ್ಲಿ ಮತ್ತು ಅದು ಸಾಕ್ಷಾತ್ಕಾರಗೊಳ್ಳುತ್ತದೆ ಅನ್ನೋ ಬಲವಾದ ನಂಬಿಕೆಯಲ್ಲಿ… ಇಷ್ಟಿದ್ದರೆ, ಧೈರ್ಯ ಬಂದೇ ಬರುತ್ತದೆ. ಹೆಚ್ಚೇನು ಹೇಳಲೂ ತೋಚುತ್ತಿಲ್ಲ ಅಷ್ಟೇ!
OMG ……………. wonderful…… ಈ ಸಾಲುಗಳಲ್ಲಿ ಹೇಳಬೇಕಾದ್ದನ್ನೆಲ್ಲಾ ಹೇಳೀಬಿಟ್ಟಿದ್ದೀರಿ…
ಹೌದು, ಹಾಗೆ ಬಾಗಿಲನ್ನು ತೆರೆಯುವುದು, ಯಾಕೆ ತೆಗೆಯುವುದಿಲ್ಲ ಎಂದು ಸವಾಲು ಹಾಕುವುದು ಅವಳಿಗೆ ಸಾಧ್ಯವಾಗುವ ಹಾಗೆ ಅವನಿಗೆ ಸಾಧ್ಯವಾಗುವುದಿಲ್ಲ. ಬಾಗಿಲು ಯಾಕೆ ತೆಗೆಯುತ್ತಿಲ್ಲ ಎಂದು ಕೇಳುವವರಲ್ಲಿ ಒಂದು ವಿಶ್ವಾಸ ಇರುತ್ತದೆ, ತನಗಲ್ಲದೆ ಇನ್ನ್ಯಾರಿಗೆ ಬಾಗಿಲು ತೆಗೆಯಬೇಕು ಎನ್ನುವ ಒಂದು ಧಾರ್ಷ್ಟ್ಯ ಇರುತ್ತದೆ. ಇಲ್ಲೇ ಬಾಗಿಲು ಬಡಿಯುತ್ತಾ ನಿಂತರೆ, ಇಂದಲ್ಲ ನಾಳೆ ಬಾಗಿಲು ತೆಗೆಸೇ ತೆಗೆಸುತ್ತೇನೆ ಎನ್ನುವ ಆತ್ಮ ವಿಶ್ವಾಸ ಇರುತ್ತದೆ. ಆದರೆ ಬಾಗಿಲು ಯಾವಾಗ ತೆಗೆಯುತ್ತದೆ ಎಂದು ಕಾದು ಕೂತವರ ಕಥೆ ಹಾಗಲ್ಲ. ಅವರಲ್ಲಿ ಬಾಗಿಲು ತೆಗೆದೇ ತೆಗೆಯುತ್ತದೆ ಎನ್ನುವ ನಂಬಿಕೆ ಇರುವುದಿಲ್ಲ, ಧೈರ್ಯ ಮಾಡಿ ಬಾಗಿಲ ಬಡಿದರೆ, ಬಾಗಿಲು ತೆರೆಯದೇ ಹೋದರೆ, ಅದನ್ನು ತಡೆದುಕೊಳ್ಳುವ ಧೈರ್ಯ ಇರುವುದಿಲ್ಲ. ಆ ಘಳಿಗೆಯಲ್ಲಿ ಬಾಗಿಲು ತೆರೆಯದೇ ಹೋದರೆ ಅದನ್ನು ತಾಳಿಕೊಳ್ಳುವ ನಿರಾಸೆಗಿಂತ ಬಾಗಿಲನ್ನು ತಟ್ಟದೆ ಹಾಗೆ ಕಾಯುವುದೇ ಮೇಲು ಅನ್ನಿಸಿಬಿಟ್ಟಿರುತ್ತದೆ.
ತುಂಬಾ ಇಷ್ಟವಾದ ಸಾಲುಗಳು…
Madam, Chandada baraha.
‘Athadu’ chitrada scenegalannu chennagi kattikottiddiri. Aa chitrada ‘Hero’ paatra nannannu sadaa kaaduttade. Badukina ella aasegaloo ondu nambikeya meLe / Vishwasada meLe nintiruttavalla…
Keevala Ondu athava eradu saalugalu alla…..Ella salugalalli ondondu artha adakavagide, Tumba tumba estavayitu, Katha vastu mattu Hoolike tumba arthapoornavagide Sandhya Rani.
chennagide sandhya. nimma lekhanakke kayuthiruthene.
ಪ್ರೀತಿಸೋಕೆ ಧೈರ್ಯ ಬೇಕು ನಿಜ ಖಂಡಿತಾ ಸತ್ಯ .
ಉಸಿರಾಡೋಕೂ ಧೈರ್ಯ ಬೇಕಲ್ಲವಾ ?
ಗಾಳಿ ಪುಪ್ಪಸವನ್ನು ತುಂಬುತ್ತದೆ
ಕಸುವು ನೀಡುತ್ತದೆ ಎಂಬ ನಂಬಿಕೆ ಬೇಕಲ್ಲವಾ ?
ಬಾಗಿಲ ಆಚೆ ಈಚೆ ಎರಡೂ ಬದಿ ನಿಂತ ಜೀವಗಳಲ್ಲೂ ಅಮೃತವಾಹಿನಿ ಹರಿಯುತ್ತಿದೆ.
ಈ ಹೊತ್ತಿಗೆ ಇಷ್ಟು ಪ್ರಾರ್ಥಿಸಬಲ್ಲೆ :
ಆಚೆ ನಿಂತ ಜೀವಗಳಿಗೆ ಕಾಯುವ ತಾಳ್ಮೆಯ ಜೊತೆ ಹೇಳುವ ಧೈರ್ಯ ಬರಲಿ
ಈಚೆ ಇರುವ ಜೀವಗಳಿಗೆ ಹೇಳುವ ಧೈರ್ಯದ ಜೊತೆ ಕಾಯುವ ತಾಳ್ಮೆ ಒಲಿಯಲಿ
ಸಂಧ್ಯಾ,
ಆರಂಭದಲ್ಲಿ ವರ್ಣಿಸಿರುವ “ಅತಡು” ತೆಲುಗು ಸಿನಿಮಾದ ದೃಷ್ಯವನ್ನು ಅನೇಕ ಬಾರಿ ನೋಡಿದ್ದೇನೆ.
ಸುಮಾರು 20 ನಿಮಿಷಕ್ಕೂ ಹೆಚ್ಚಿರುವ, ತಮಾಷೆ, ತುಡಿತ, ಆಸೆ. ಬಯಕೆ ಜೊತೆಗೆ ಹೇಳಿಕೊಳ್ಳುವ ಹಾತೊರೆತ, ಹೇಳುವುದೂ ತಿಳಿಯದ ಒದ್ದಾಟ, ಅವಳು ಅರ್ಥ ಮಾಡಿಕೊಳ್ಳುತ್ತಿಲ್ಲವೆಂಬ ಕೋಪ ಎಲ್ಲ ತುಂಬಿರುವ ರೊಮ್ಯಾಂಟಿಕ್ ಸನ್ನಿವೇಶ. ಚೆನ್ನಾಗಿ ವರ್ಣಿಸಿದೀರಿ. ನನಗನಿಸುತ್ತದೆ- ಬಾಗಿಲಿಗೆ ತೆರೆದುಕೊಳ್ಳುವ ಗುಣವಿದ್ದರಷ್ಟೇ ಅದು ಬಾಗಿಲು. ಇಲ್ಲದಿದ್ದರೆ ಅದಕ್ಕೆ ಗೋಡೆಯೆಂಬ ಹೆಸರೇ ಲಾಯಕ್ಕು. ಗೋಡೆಯೆಂದುಕೊಂಡಿದ್ದು ಬಾಗಿಲಾಗಿ ತೆರೆದುಕೊಂಡುಬಿಟ್ಟರೆ…? ಅಂಥ ಅದೃಷ್ಟ ಕೆಲವರಿಗಷ್ಟೇ ಸಿಗುತ್ತದೆಂದು ತೋರುತ್ತದೆ.ಮಹೇಶ್ ಬಾಬು.ಶ್ರೀಶ ಅಚ್ಚಳಿಯದೆ ನಿಂತಿದ್ದಾರೆ ಮನದಲ್ಲಿ.
“ಬಾಗಿಲು ತಟ್ಟಬೇಕೆಂದರೆ ನಿರೀಕ್ಷೆಯನ್ನು ನಂಬಿಕೆಯಾಗಿಸಬೇಕು, ನಂಬಿಕೆಯನ್ನು ಪಣಕ್ಕಿಡುವ ವಿಶ್ವಾಸ ಇರಬೇಕು, ಬಾಗಿಲಾಚೆಯ ಆ ಜೀವ ನಂಬಿಕೆಯ ಮರ್ಯಾದೆ ಕಾಯುತ್ತದೆ ಎನ್ನುವ ಆತ್ಮವಿಶ್ವಾಸ ಬೇಕು, ಆದರೆ ಕಾಯುವವರಲ್ಲಿರುವುದು ತಾಳ್ಮೆಯೊಂದೇ. ಅವರು ಪಣವಾಗಿಸಬೇಕಿರುವುದು ತಮ್ಮ ಪ್ರೀತಿಯನ್ನು ಮಾತ್ರವೇ. ಅವರಲ್ಲಿರುವುದು ಒಂದು ಆಸೆ ಮಾತ್ರ, ಬಾಗಿಲು ತೆಗೆಯಲಿ ಎನ್ನುವ ಆಸೆ, ಬಾಗಿಲಾಚೆಯ ಬದುಕು ತನ್ನದಾಗಲಿ ಎನ್ನುವ ಆಸೆ, ಬಾಗಿಲಿಗೆ ಕರುಣೆ ಬರಲಿ ಎನ್ನುವ ಆಸೆ ಮತ್ತು ಅದರ ಜೊತೆಯಲ್ಲಿ ಒಂದು ದೀರ್ಘ, ಮೂಕ, ನಿರೀಕ್ಷೆ ಮತ್ತು ಆ ನಿರೀಕ್ಷೆಯ ಉದ್ದದಷ್ಟು ಆಯಸ್ಸು…”
Sweet Sandhya
ಕಾವ್ಯಾತ್ಮಕ ಬರಹವಿದು. ಸಾಮಾನ್ಯವಾಗಿ ಮೆಚ್ಚುಗೆಯಾದ ಒಂದೋ, ಎರಡೋ ಸಾಲುಗಳನ್ನು ಕಮೆಂಟಲ್ಲಿ ನುಸಳಿಸಬಹುದು- ಇದು ಎಷ್ಟು ಸುಂದರವಾಗಿದೆಯೆಂದರೆ ಇಡೀ ಲೇಖನವನ್ನೆ ಕಮೆಂಟಲ್ಲಿ ಬಳಿಸಬಹುದು.
-ಅನಿಲ ತಾಳಿಕೋಟಿ
Wonderful poetry….all along
ಸಂಧ್ಯಾ….ಧ್ಯಾನಿಸಿ ಬರೆದ ಬರೆಹ. ತುಂಬಾ ಇಷ್ಟವಾಯಿತು. ಬಾಗಿಲು ತೆರೆದ ನಂತರವೂ, ಒಳಗೆ ಬಂದ ನಂತರವೂ ಕೂಡಿ ನಡೆಯಬೇಕಾದ ನಂಬಿಕೆಯಲ್ಲಿ, ನಡೆಯಬಹುದಾ, ತೆರೆದ ಬಾಗಿಲನ್ನು ಮುಚ್ಬಿಬಿಡಬಹುದಾ? ಇಲ್ಲಾ ತೆರೆದ ಬಾಗಿಲಿನಿಂದಾಚೆ ಇಬ್ಬರಲ್ಲಿ ಒಬ್ಬರು ಎದ್ದು ಹೊರಗೆ ಹೊರಟುಬಿಡಲಾರಲಲ್ಲವಾ? ಅನ್ನುವ ಇನ್ನೊಂದು ದ್ವಂದ್ವವೂ ಕಾಡತೊಡಗಿದರೆ? so…ಪ್ರೀತಿಗೆ ಧೈರ್ಯ ಬೇಕು, ಪ್ರೀತಿಯನ್ನು ದೌರ್ಬಲ್ಯವಾಗಿ ಪರಿಗಣಿಸಲಾರ ಎನ್ನುವ ನಂಬಿಕೆ….!!
ತುಂಬ ಹೊತ್ತಿನಿಂದ ಕಾಡುತ್ತಾ ಇದೆ ನಿನ್ನ ಬರಹ … ತುಂಬ ತುಂಬಾ ….
Very interesting madam , tumba ishtavaaytu.
ವಸಂತದ ಕನಸು ಕಾಣಲಿಕ್ಕೂ ಅಂಜುವವರು,ನಿರೀಕ್ಷೆಯನು ನಂಬಿಕೆಯಾಗಿಸುದೂ…ನಂಬಿಕೆಯನು ಪಣಕ್ಕಿಡುವುದು ಅದೆಷ್ಟು ಕಷ್ಟ.!!
ಕಾಡಿದ ಬರಹ. ಬಾಗಿಲ ತೆರೆಸುವ ಹಿಂದಿನ ನಿಜವಾದ ತೊಳಲಾಟಗಳು. ಬರಹ ತುಂಬಾ ಸುಂದರವಾಗಿದೆ.
Tumba avarisitu nanna….excellent!
Article tumba chennagide – navellaroo ondu tara muchhida bagila hinde nintavare >>>>
ಲೇಖನ ತುಂಬಾ ಹಿಡಿಸಿತು.. ಮತ್ತೆ ಓದಿದೆ ….
ಈ ಲೇಖನದಲ್ಲಿ ಏನಿಲ್ಲಾ…?.ಏನೇನಿಲ್ಲಾ….?
ಎಂದು ಬುದ್ಧಿಹೇಳುವ, ಎಚ್ಚರಿಸುವ ನಡುವಯಸ್ಸಿನ ಹುಷಾರಿಗೆ ಪ್ರೀತಿಸುವ ನಂಬಿಕೆ ಯಾಕೆ ಕಡಿಮೆ ಆಗಿಬಿಡುತ್ತದೆ? ಬದುಕು ಅರ್ಥವಾಗುವಾಗ ಧೈರ್ಯದ ಬದಲು ಒಂದು ಸಣ್ಣ ಹುಷಾರು ಯಾಕೆ ನಮ್ಮನ್ನು ಆಳಲು ಶುರು ಮಾಡುತ್ತದೆ?
ನಿಜವಾದ ಮಾತು ಬಾಗಿಲನ್ನು ಬಡಿಯಲೆ ಎನಿಸುವಾಗ ನನ್ನನ್ನ ಸದಾ ಎಚ್ಚರಿಸುವ ಮಾತು ಹುಷಾರು
Sandhya madam,
sogasaada, vichara prachodaka lekhana nimma endina sundara shailiyalli moodi bandide. “ಕೆಲವರಿಗೆ ಪ್ರತಿಯೊಂದೂ ಹಕ್ಕಿನಲಿ, ಅಧಿಕಾರದಲಿ ಅವರ ಎದುರಿಗೆ ಬೀಳುತ್ತಾ ಹೋಗುತ್ತದೆ, ಬದುಕು ಕೆಲವರ ಪಾಲಿಗೆ ಬಡಿಸಿಟ್ಟ ಬಾಳೆ ಎಲೆ. ಅದೇ ಬದುಕು ಮತ್ತೆ ಕೆಲವರ ಪಾಲಿಗೆ ಪ್ರತಿ ಹೆಜ್ಜೆಯನ್ನೂ ಮೊದಲು ಬೆರಳನ್ನು ಊರಿ ನೆಲ ಕುಸಿಯುವುದಿಲ್ಲವಾ ಎಂದು ನೋಡೇ ಹೆಜ್ಜೆ ಊರುವ ಉಸುಕಿನ ಹಾದಿ. ಯಾವ ಧೈರ್ಯದ ಮೇಲೆ ಅವರು ಬಾಗಿಲ ಹಿಡಿ ತಿರುಗಿಸಲು ಸಾಧ್ಯ. ಇಡೀ ಜೀವನ ಅವರು ಸೂಟುಕೇಸಿನಿಂದಲೇ ಬಟ್ಟೆ ತೆಗೆಯುತ್ತಾ. ಅದಕ್ಕೆ ಜೋಡಿಸುತ್ತಾ ಬದುಕಬೇಕಾಗುತ್ತದೆ, ಎಲ್ಲೂ ನೆಲೆ ನಿಲ್ಲುವುದು, ನೆಲೆಯನ್ನು ತಮ್ಮದಾಗಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದೇ ಇಲ್ಲ.”
These lines touched me effectively. In these lines you have unveiled the reality of life!
Hats off Sandhya!
Ramesh Megaravalli.
ಅಳುಕಲೇ
ಕೇಳಿದೆ
‘ಬಾಗಿಲನು ತೆರೆದು…’
ಆ ಕಡೆ ಕೇಳಿಸಲೇ ಇಲ್ಲ
ಅನುಮಾನದಲೇ
ಹಿಡಿ ಹಿಡಿದೆ
ತೆಗೆಯುವ ಧೈರ್ಯ
ಮೂಡಲಿಲ್ಲ
ಬೆಳ್ಳಿ ಕೂದಲು
ದಂಡಿಯಾಗಿ
ಮಂಡಿಯೂರಲು ಬಿಡಲಿಲ್ಲ
ಗೋಡೆಯ ಮೇಲಿನ
ಅಮೂರ್ತ ಚಿತ್ರ
ಕ್ಷಣಕ್ಕೊಂದು ಅರ್ಥ
ಬಹುಶಃ
ಈ ದೇವರ
ನೆಚ್ಚುವ ಬದಲು
ಕಲ್ಲು ದೇವರೇ ವಾಸಿ
ಅವನು ನುಡಿಯುವುದಿಲ್ಲ
ಎಂಬ ನೆಮ್ಮದಿಯ ಖಾತ್ರಿ
ಅದರೂ
ಸರಿರಾತ್ರಿಯಲಿ
ಕಲ್ಲು ದೇವರು ಕರಗಿ
ಮನದೊಳಗೆ
ಈ ದೇವರದೇ ಜಾತ್ರಿ!
ಮತ್ತೆ ಓದಿದೆ — ಮೊದಲಿನ ಕಮೆಂಟನ ಕಾಂತಿ ಹೆಚ್ಚಿತು – “ಕಾವ್ಯಾತ್ಮಕ ಬರಹವಿದು. ಸಾಮಾನ್ಯವಾಗಿ ಮೆಚ್ಚುಗೆಯಾದ ಒಂದೋ, ಎರಡೋ ಸಾಲುಗಳನ್ನು ಕಮೆಂಟಲ್ಲಿ ನುಸಳಿಸಬಹುದು- ಇದು ಎಷ್ಟು ಸುಂದರವಾಗಿದೆಯೆಂದರೆ ಇಡೀ ಲೇಖನವನ್ನೆ ಕಮೆಂಟಲ್ಲಿ ಬಳಿಸಬಹುದು.”
-ಅನಿಲ ತಾಳಿಕೋಟಿ
Super! !
ಬಹಳ ಚಂದದ ಬರಹ.ಇಷ್ಟವಾಯಿತು.
ತುಂಬಾ ಇಷ್ಟವಾಯಿತು.
ಅಭಿನಂದನೆಗಳು.
“…… ಬೀದಿಗೆ ಬಿಸುಡಿದ ಕೂಸಿನ ಬಾಯಿಗೆ ತಾಯಿಯ ಹಾಲಿಲ್ಲ …. ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೆ ಇಲ್ಲ…”…. ಎನ್ನುತ್ತಾ ಕವಿ ಎಕ್ಕುಂಡಿ ಅವರು ಹಲವು ಮನಸ್ಸುಗಳನ್ನು ಮುಟ್ಟಿದ್ದಾರೆ, ತೆರೆದಿದ್ದಾರೆ. ಹಾಗೇ ನಿಮ್ಮ ಲೇಖನ ಬಾಗಿಲನ್ನು ತೆರೆಯದಿದ್ದರೂ, ತೆರೆದ, ತೆರೆಯದ ಮನಸ್ಸುಗಳಿಗೆ ಬಾಗಿಲು ಬಡಿಯುವ ವಿಶ್ವಾಸ ಕೊಡುತ್ತದೆ. ಅವರ ಒಳದನಿಗಳಿಗೆ ಅರ್ಥ ಕೊಡುತ್ತದೆ.
heart touching…tooooooo good..!!!!!!!!!!