ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಮಾತು ಮಾತು ಮಥಿಸಿ ಬಂದ ಮೌನದ ನವನೀತ


“ಆಡುವ ಮಾತುಗಳು ಹೇಗೆ ಒಂದು ಬದುಕನ್ನು ನಿರ್ಮಿಸಲು ಶಕ್ತವಾಗಿರುತ್ತದೆಯೋ ಹಾಗೆ ಆಡಲಾಗದ ಮಾತುಗಳು ಸಹ ಶಕ್ತವಾಗಿರುತ್ತದೆ. ಆದರೆ ಹಾಗೆ ಉಳಿದ ಮಾತುಗಳು ನಿರ್ಮಿಸಿದ ಬದುಕು ಕತ್ತಲಲ್ಲಿರುತ್ತದೆ, ಮೃತ ಸರೋವರದ ಹಾಗೆ ಜಡವಾಗಿರುತ್ತದೆ” … ಬಹುಶಃ ವ್ಯಾಸರ ಕಥೆಯ ಸಾಲುಗಳಿರಬೇಕು ಇದು. ನಾನು ಈ ಸಾಲುಗಳನ್ನು ಮೊದಲ ಸಲ ಓದಿದಾಗ ಈ ಸಾಲುಗಳ ಧ್ವನಿಗೆ ರೋಮಾಂಚಿತಳಾಗಿದ್ದೆ, ಅದನ್ನು ಹಾಗೆ ನನ್ನ ನೋಟ್ ಬುಕ್ಕಿನ ಕಡೆಯ ಪೇಜಿನಲ್ಲಿ ಬರೆದಿಟ್ಟುಕೊಂಡಿದ್ದೆ. ಎಲ್ಲ ಭಾವಗಳಿಗೂ ಮಾತಾದಾಗಲೇ ಮುಕ್ತಿ ಅನ್ನಿಸುವ ವಯಸ್ಸು ಆಗ. ಮಾತು, ಮಾತು, ಮಾತು…. ನನ್ನ ಪುಟ್ಟ ಪ್ರಪಂಚದಲ್ಲಿ ಆಗ ಸಂವಹನಕ್ಕಿದ್ದ ಒಂದೇ ಅರ್ಥ ಮಾತು. ನನ್ನ ಜಗತ್ತಿನಲ್ಲಿ ಎಲ್ಲಾ ಬಣ್ಣಗಳಿಗೂ ಒಂದು ಹೆಸರಿತ್ತು, ಎಲ್ಲಾ ಅನಿಸಿಕೆಗಳಿಗೂ ಒಂದು ಮಾತಿತ್ತು. ಅಥವಾ ಮಾತಿಗೆ ಸಿಗುತ್ತಿದ್ದ ಅನಿಸಿಕೆಗಳು ಮಾತ್ರ ಆಗ ನನ್ನದಾಗಿದ್ದವಾ? ಅದು ಈಗಿನ ಪ್ರಶ್ನೆ.
ಆಮೇಲೆ ಕಂಡದ್ದು ಒಂದು ಮೌನ ಪರ್ವ. ಮಾತುಗಳೆಲ್ಲಾ ಪ್ರಶ್ನೆಗಳಾಗಬಲ್ಲವು ಮತ್ತು ಮಾತುಗಳೆಲ್ಲಾ ನಮ್ಮ ವಿರುದ್ಧದ ಸಾಕ್ಷಿಗಳಾಗಬಲ್ಲವು ಎನ್ನುವುದು ಸಾಕ್ಷಾತ್ಕಾರವಾದ ಕಾಲ. ಮಾತೆಂದರೆ ಪ್ರಶ್ನೆ, ಮಾತೆಂದರೆ ವಿಚಾರಣೆ, ಮಾತೆಂದರೆ ವಿವರಣೆ, ಮಾತು ಬೇಕೆ ಅನ್ನಿಸಿದ ಕಾಲ. ಮಾತುಗಳೆಲ್ಲಾ ಸೋತು, ಮಂಡಿಯೂರಿ ಕುಳಿತಾಗ, ಮೌನ ಸಾಂತ್ವನ ಹೇಳಿದ ಕಾಲ. ಆಗಲೇ ನನಗೆ ಮೌನದ ಬೆಲೆ ಗೊತ್ತಾಗಿದ್ದು, ಮೌನ ಅಸಹನೀಯವಲ್ಲ, ಮೌನದೊಂದಿಗೂ ಬದುಕು ಸಾಧ್ಯ ಅನ್ನಿಸಿದ್ದು. ಆಗ ಓದಿದ್ದು ಮಧುರ ಚೆನ್ನರ ಈ ಕವಿತೆ, ’ನಿಶ್ಯಬ್ದ, ನಿಶ್ಯಬ್ದ ಶಬ್ದದಾಚೆಯ ಶಬ್ದ, ನಿಶ್ಯಬ್ದವಿದ್ದರೂ ಮೌನವಲ್ಲ…’. ಹೌದು ನಿಶ್ಯಬ್ದದಲ್ಲಿ ಮೌನವಿಲ್ಲದೆಯೂ ಇರಬಹುದು ಎನ್ನುವುದನ್ನು ಬದುಕು ಅಷ್ಟೊತ್ತಿಗೆ ನನಗೆ ಕಲಿಸಿತ್ತು. ಕಾಲೇಜು ದಿನಗಳಲ್ಲಿ ಸುತ್ತೆಂಟು ಗೆಳತಿಯರ ಜೊತೆ ಏಕಾಕಿಯಾಗಿ ಮಾತಿನ ಅಷ್ಟಾವಧಾನ ನಡೆಸುತ್ತಿದ್ದ ನನಗೆ ಮೌನ ಹೊಸ ಭಾಷೆಯಾಗಿ ದಕ್ಕಿತ್ತು.
ಮಾತು ಮಾತು ಮಥಿಸಿದರೆ ನಾದದ ನವನೀತ ಬರುತ್ತದೆ ಎಂದು ಬೇಂದ್ರೆ ಅಂದಿದ್ದರು, ಮಾತು ಮಾತು ಮಥಿಸಿದರೆ ಮೌನದ ನವನೀತ ಎನ್ನುವುದನ್ನು ತೋರಿಸಿ ಕೊಟ್ಟಿದ್ದು ಕವಿ ಬಿ ಎಂ ರಶೀದ್.
ಮಾತಿನೊಳಗೊಂದು
ಮೌನವಿತ್ತು
ಮಾತು
ಮೌನವಾದೊಡನೆ
ಮೌನ…
ಮಾತನಾಡತೊಡಗಿತು
 
ಮೌನದ ಆಳ ತಿಳಿದ ಮನಸ್ಸಿಗೆ ಅದೇ ಹಿತ ಅನ್ನಿಸತೊಡಗಿತ್ತು.
ಕೆಲವರ ಮಾತಿನ ಮೋಡಿಗೆ ನಾನು ಮೂಕಳಾಗಿ ನಿಲ್ಲುತ್ತೇನೆ. ಮಾತಿನಲ್ಲಿ ಅವರು ಜಗತ್ತನ್ನು ಕಟ್ಟಬಲ್ಲರು, ಬೀಳಿಸಲೂ ಬಲ್ಲರು. ಎಷ್ಟೋ ಸಲ ಮಾತಿನಲ್ಲಿ ಸಣ್ಣ ಬಾಣ ಇಟ್ಟು, ಹೆದೆ ಎಳೆದು ಬಿಟ್ಟಿದ್ದರೂ ನನಗೆ ಅದು ಯಾವಾಗಲೋ ಮನೆಗೆ ಹೋದ ಮೇಲೆ ನಾಟಿರುತ್ತದೆ! ಇನ್ನು ನಾನು ಅದಕ್ಕೆ ಮಾತಿನಲ್ಲಿ ಬದಲು ಹೇಳುವುದೆಲ್ಲಿ?! ಹಾಗೆ ಮಾತನಾಡದೆ ಉಳಿದುಕೊಂಡೆ ಎನ್ನುವುದು ನನಗೆ ಅಂತಹ ದೊಡ್ಡ ಪಶ್ಚಾತ್ತಾಪವೇನೂ ಆಗಿಲ್ಲ ಅನ್ನೋದೂ ಸಹ ಸತ್ಯ.. ಮಾತಿಗೆ ಮಾತಿನ ಬದಲು ನೀಡಲೇ ಬೇಕು ಎನ್ನುವ ಹಟವನ್ನು ಒಮ್ಮೆ ಬಿಟ್ಟು ನೋಡಿ, ಇದ್ದಕ್ಕಿದ್ದಂತೆ ಬದುಕು ಸರಳ ಅನ್ನಿಸಲು ಶುರು ಆಗಿಬಿಡುತ್ತದೆ. ಮಾತಿಗೆ ಮಾತಿನ ಉತ್ತರ ನೀಡುವುದು ಕೋಪದಲ್ಲಿ ಅಥವಾ ಸ್ಪಷ್ಟೀಕರಣದಲ್ಲಿ. ಹಾಗೆ ಎಲ್ಲಾ ಸಂಬಂಧಗಳಿಗೂ ಸ್ಪಷ್ಟೀಕರಣ ಕೊಡುತ್ತಲೇ ಹೋಗುವುದು ಎಷ್ಟು ಕಷ್ಟದ ಕೆಲಸ!
ಮಾತಿಗೆ ದಣಿವಾಗಬಹುದು, ಆದರೆ ಮೌನಕ್ಕೆಂತಹ ದಣಿವು?! ಹಾಗಾಗಿಯೇ ಯಾವಾಗಲೂ ನನ್ನಲ್ಲಿ ಆಡಬೇಕಿದ್ದ, ಆದರೆ ಆಡದ ಮಾತುಗಳ ಒಂದು ಪುಟ್ಟ ಗಂಟೇ ಇರುತ್ತದೆ. ಹಾಗೆ ಆಡದ ಮಾತುಗಳೇ ನನ್ನ ಬರವಣಿಗೆ ಆಯ್ತಾ ಅಂತ ಒಮ್ಮೊಮ್ಮೆ ಚಿಂತಿಸುತ್ತೇನೆ. ಸುಮಾರು ಸಲ ನನ್ನ ತೀವ್ರ ಭಾವನೆಗಳೆಲ್ಲಾ ಮೌನದಲ್ಲಿ ಅಥವಾ ಬರಹದಲ್ಲಿ ಅಭಿವ್ಯಕ್ತಗೊಂಡಿವೆ. ಈಗಲೂ ಸಹ ಮಾತು ಮಾತಿನ ನಡುವೆ ನಾನು ಇದ್ದಕ್ಕಿದ್ದಂತೆ ಮೌನವಾದರೆ ನನ್ನ ಸ್ನೇಹಿತ, ’ಹಾಗಾದರೆ ಇಂದು ರಾತ್ರಿ ’ಟಪ್’ ಎಂದು ಒಂದು ಮೇಲ್ ಬಂದು ಬೀಳುತ್ತದೆ’ ಎಂದು ಕಿಚಾಯಿಸುವುದಿದೆ!
’ಮಾತಿಗೇನೋ
ಹೇಳುವುದಿತ್ತು
ಆದರೆ..
ಹೇಳಲಿರುವುದನ್ನು
ಹೇಳದೇ ಬಿಡುವ;
ಹೇಳಲಿಲ್ಲದ್ದನ್ನು
ಹೇಳಿ ಬಿಡುವ
ಭಯದಿಂದ
ಮಾತು ಮೌನವಾಯಿತು’


ಮಾತು ಮಾತು ಮಥಿಸಿದರೆ ನಾದ ಬರುವ ಹಾಗಿದ್ದರೆ, ಮೌನ ಮೌನವ ಮಥಿಸಿದರೆ ಕವನ ಬರಬಹುದ? ’ಕವಿತೆ, ಕವಿತೆ ನೀನೇಕೆ ಪದಗಳಲಿ ಅವಿತೆ’ ಎನ್ನುವುದನ್ನು ನಾನು ’ಕವಿತೆ ಕವಿತೆ ನೀನೇಕೆ ಮೌನದಲಿ ಅವಿತೆ’ ಎಂದೇ ಕೇಳಿಸಿಕೊಂಡಿದ್ದೇನೆ. ಮನಸ್ಸಿನಲ್ಲಿ ಅಡಗಿದ ಕವಿತೆ, ಮಾತು, ಮೌನಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಸಿಕ್ಕಿಬಿದ್ದಾಗ ಅದು ಹಾಡಾಗುತ್ತದೆ ಎನ್ನುವುದು ನನ್ನ ವಿವರಣೆ.
ಇಬ್ಬರ ನಡುವಿನ ಸ್ಪಂದನೆಗೆ ಒಂದು ಸವಾಲು ಅವರಿಬ್ಬರ ನಡುವಿನ ಮೌನ ಎಷ್ಟು ಕಂಫರ್ಟೆಬಲ್ ಎನ್ನುವುದರಲ್ಲಿ. ಮಾತು ತಾನಾಗೇ ಬರಬೇಕು. ಮೌನ ಅಸಹನೀಯವಾಗಿ ಆ ಕಾರಣಕ್ಕೆ, ಮೌನದ ಕೊಳವ ಕದಡಲು ಅಲ್ಲಿ ಮಾತುಗಳನ್ನೆಸೆಯುತ್ತಾ ಹೋದರೆ ಆಗ ಮಾತು ಕೇವಲ ಶಬ್ಧವಾಗುತ್ತದೆ. ಯಾವಾಗ ಇಬ್ಬರ ನಡುವಿನ ಮೌನ ಸಹನೀಯವಾಗುತ್ತದೋ ಆಗ ಇಬ್ಬರ ನಡುವಿನ ಮಾತು ಹೆಚ್ಚು ಧ್ವನಿಪೂರ್ಣವಾಗಿರುತ್ತದೆ. ನೀವು ಬೇಕಾದರೆ ಗಮನಿಸಿ, ಮೌನ ಸಹನೀಯವಾಗಬೇಕಿದ್ದರೆ ಒಂದೋ ಅವರು ಸಂಪೂರ್ಣ ಅಪರಿಚಿತರಾಗಿರಬೇಕು ಅಥವಾ ಪೂರ್ಣ ಪರಿಚಿತರಾಗಿರಬೇಕು. ಅಪರಿಚಿತರ ಮಾತು ಬಿಡಿ, ಪರಿಚಿತರ ನಡುವೆ ಮೌನ ಪ್ರಶ್ನೆಯಲ್ಲದಾಗ, ಪ್ರಶ್ನಾರ್ಹ ಅಪರಾಧವಾಗದೆ ಇದ್ದಾಗ ಆಗ ಅಲ್ಲಿ ಸ್ನೇಹ ಸಾಧ್ಯ. ನನ್ನ ಮೌನವನ್ನು ನೀನು ಅರಿಯಲಾರೆಯಾದರೆ ಬಹುಶಃ ನನ್ನ ಮಾತುಗಳು ನಿನಗೆ ಎಂದೂ ಪೂರ್ಣವಾಗಿ ಅರ್ಥವಾಗುವುದೇ ಇಲ್ಲ. ನಾನಾಡುವ ಮಾತು ನನ್ನ ಜವಾಬ್ದಾರಿ ಎನ್ನುವುದು ಎಷ್ಟು ಸತ್ಯವೋ ನನ್ನ ಮೌನ ನನ್ನ ಪಾಲಿನ ಹಕ್ಕು ಅನ್ನುವುದು ಸಹ ಅಷ್ಟೇ ಸತ್ಯ.
ಮಾತು ನಮ್ಮ ’ಬಲ’ ಆಗಿಲ್ಲದಿರುವಾಗ ನಾವು ನಮ್ಮ ಸಿಟ್ಟಿಗೆ, ಖುಷಿಗೆ, ನೋವಿಗೆ, ಅಳುಕಿಗೆ ಮತ್ತು ಅವಮಾನಕ್ಕೆ ಮಾತನ್ನೇ ಬಳಸುವುದು ಹೇಗೆ? ಕೆಲವರಿಗೆ ಮಾತಿನ ಬಲ, ಮತ್ತೆ ಕೆಲವರಿಗೆ ಮೌನವೇ ಬಲ. ’ಏನಾದ್ರೂ ಇದ್ದರೆ ಮಾತಿನಲ್ಲಿ ಹೇಳು, ಸುಮ್ಮನೆ ಮೌನವಾಗಿರಬೇಡ’ ಎನ್ನುವ ಮಾತನ್ನು ನಾವು ಸುಮಾರು ಸಲ ಕೇಳಿರುತ್ತೇವೆ, ಆಡಿರುತ್ತೇವೆ ಸಹ. ಆದರೆ ಮೌನವೂ ಒಂದು ಭಾಷೆ ಎಂದು ಯಾಕೆ ಪರಿಗಣಿತವಾಗುವುದಿಲ್ಲ ಎನ್ನುವುದು ನನ್ನ ಪ್ರಶ್ನೆ. ಮಾತು ನಿನ್ನ ಭಾಷೆ. ನಿನ್ನನ್ನು ಸಾಬೀತು ಪಡಿಸಿಕೊಳ್ಳಲು ನೀನು ಮಾತನ್ನು ಉಪಯೋಗಿಸುವೆ, ಆದರೆ ನನ್ನ ಭಾಷೆ ಮೌನ, ನನ್ನನ್ನು ನಾನು ಅರ್ಥ ಮಾಡಿಸಲು ನಾನು ಮೌನವನ್ನು ಬಳಸುವೆ. ಮಾತು ಬಲ್ಲವರಿಗೆ ಮಾತು ಸರಾಗ, ಆದರೆ ಮೌನದೊಂದಿಗೆ ದಿನಗಟ್ಟಲೆ ಬದುಕಿದವರಿಗೆ ಮೌನವೂ ಸಂಭಾಷಣೆಯೆ.
ಮೌನದ ಅಂತಸ್ಸತ್ವವನ್ನು ಸಮರ್ಥವಾಗಿ ಕಟ್ಟಿಕೊಟ್ಟವರು ಯು ಆರ್ ಅನಂತಮೂರ್ತಿ, ತಮ್ಮ ’ಮೌನಿ’ ಕಥೆಯಲ್ಲಿ. ಮಾತೇ ಬಲವಾದ ಅಪ್ಪಣ್ಣ ಭಟ್ಟರು ಮತ್ತು ಮಾತಿನ ಶಕ್ತಿಯ ಬಗ್ಗೆ ಭ್ರಮನಿರಸನಗೊಂಡ ಕುಪ್ಪಣ್ಣ ಭಟ್ಟರು. ಬದುಕು ಅವರನ್ನೆಷ್ಟು ದಣಿಸಿದೆ ಅಂದರೆ ಮಾತಿನ ಆಯುಧವನ್ನೆತ್ತಲೂ ಅವರಿಗೆ ತ್ರಾಣವಿಲ್ಲ. ಎಲ್ಲಾ ಇರುವ ಅಪ್ಪಣ್ಣಭಟ್ಟರನ್ನು ಇವರ ಮೌನ ಕುಟುಕುತ್ತಿರುತ್ತದೆ, ಹೇಗಾದರೂ ಇವರನ್ನು ಮಣಿಸಿಯೇ ವಿಶ್ರಾಂತಿ ಎನ್ನುವ ಹಠ ಅವರದ್ದು. ಅಪ್ಪಣ್ಣ ಭಟ್ಟರಿಗೆ ಆ ಅವಕಾಶವೂ ಸಿಗುತ್ತದೆ. ಆದರೆ ಸೋತು, ತಲೆಯ ಮೇಲೆ ಕೈ ಹೊತ್ತು ಜಗಲಿಗೆ ಕೂತ ಕುಪ್ಪಣ್ಣ ಭಟ್ಟರನ್ನು ಕೊನೆಯದಾಗಿ ಹಣಿದು ಬಿಡಬೇಕು ಎಂದು ಬರುವ ಅವರನ್ನು ಎದುರಾಗುವುದು ಒಂದು ದೈತ್ಯಾಕಾರದ ಮೌನ. ಆ ಮೌನ ಮೊದಲು, ಗುರಾಣಿಯಾಗಿ, ಆಮೇಲೆ ಕನ್ನಡಿಯಾಗಿ, ಕಡೆಗೆ ಆಯುಧವಾಗಿ ಅಪ್ಪಣ್ಣ ಭಟ್ಟರನ್ನೇ ಹಣಿದುಬಿಡುತ್ತದೆ. ಮೌನದೆದುರಲ್ಲಿ ಅಪ್ಪಣ್ಣಭಟ್ಟರು ಮೊದಲು ಸಮರ್ಥನೆ, ಆಮೇಲೆ ನಿವೇದನೆ ಮಾಡಿ ಸುಸ್ತಾಗಿ ಸೋತು, ಕುಪ್ಪಣ್ಣ ಭಟ್ಟರ ಪಕ್ಕದಲ್ಲಿ ತಾವೂ ತಲೆ ಮೇಲೆ ವಸ್ತ್ರ ಹೊದ್ದು ಕೂತುಬಿಡುತ್ತಾರೆ.
ಕೆಲವರಿಗೆ ಮಾತು ಬಲವೂ ಅಲ್ಲ, ಬಲಹೀನತೆಯೂ ಅಲ್ಲ. ಹಾಗೆಂದರೆ ಮಾತನಾಡಲಿಕ್ಕೆ ಏನೂ ಇಲ್ಲ ಅಂತ ಅಲ್ಲ, ಅಥವಾ ಮಾತು ಬೇಡ ಅಂತಲೂ ಅಲ್ಲ. ಕೆಲವರು ಫೋನ್ ಮಾಡುತ್ತಾರೆ, ಮತ್ತೆ ಕೆಲವರು ಫೋನ್ ಗಾಗಿ ಕಾಯುತ್ತಾರೆ. ಕೆಲವು ಮುಚ್ಚಿದ ಬಾಗಿಲನ್ನು ತಳ್ಳಿ ಒಳ ಹೋಗುತ್ತಾರೆ, ಮತ್ತೆ ಕೆಲವರು ಬಾಗಿಲ ಈಚೆ ಕೂತು, ತಾಳ್ಮೆಯಿಂದ ಬಾಗಿಲು ತೆರೆಯುವುದನ್ನು ಕಾಯುತ್ತಾರೆ. ಆದರೆ ನೋವಿನ ಸಂಗತಿ ಎಂದರೆ ಬಹಳಷ್ಟು ಸಲ ಹಾಗೆ ಮೌನವನ್ನು ತಾಳದೆ ಸಂಬಂಧಗಳು ಕುಸಿದು ಹೋಗುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೂ ನಾನು ಒಪ್ಪಿಕೊಳ್ಳುವುದು ಮೌನಕ್ಕೂ ಒಂದು ಮಿತಿಯುಂಟು. ಮೌನ ಒಂದು ಭಾಷೆ ಅನ್ನುವುದಾದರೆ ಮೊದಲಿಗೆ ಇಬ್ಬರಿಗೂ ಆ ಭಾಷೆ ಬರಬೇಕು. ಹಾಗೆ ಬರದೆ ಇದ್ದಾಗ ಆಗ ಬಹುಶಃ ಮಾತು ಅಲ್ಲಿ ದುಬಾಶಿಯ ಕೆಲಸ ಮಾಡುತ್ತದೆ.. ಹಾಗಾಗಿ ಮೌನ ಎಲ್ಲ ಕಡೆಯೂ ಚಲಾವಣೆ ಆಗದ ನಾಣ್ಯ.
ಒಳಗೊಂದು ಸಭೆ!
‘ಮಾತು-ಮೌನ’ದ
ನಡುವೆ ಜಟಾಪಟಿ!!
ಮಾತಿಗೆ ಶಬ್ದಗಳಿವೆ: ಅರ್ಥಗಳಿಲ್ಲ
ಮೌನಕ್ಕೋ ಅರ್ಥಗಳಿವೆ; ಶಬ್ದಗಳಿಲ್ಲ
ಎಂದು ಬರೆದ ಬಿ ಎಂ ರಶೀದರನ್ನು ’ಮಾತಿಗ್ಯಾಕೆ ಅರ್ಥಗಳಿಲ್ಲ, ಮೌನಕ್ಕ್ಯಾಕೆ ಶಬ್ಧಗಳಿಲ್ಲ ’ ಎಂದು ಕೇಳಬೇಕಿದೆ.
ನನ್ನ ನಿನ್ನ ನಡುವೆ ಎಲ್ಲವೂ ಅಂತರಂಗದ ಮಾತು’ ಎಂದು ಒಂದು ಮೆಸೇಜ್ ಬಂದಾಗ, ಮರುಗಳಿಗೆಯೇ ನಾನೊಂದು ಮೆಸೇಜ್ ಕಳಿಸಿದ್ದೆ, ’ಮಾತಿನಲ್ಲಿಯ ಮೌನ, ಮೌನದಲ್ಲಿಯ ಮಾತು’ ಅಂತ. ಮಾತಿನಲ್ಲಿ ಮೌನಕ್ಕೊಂದಿಷ್ಟು ಎಡೆಯಿರಲಿ, ಮೌನದಲ್ಲಿ ಮಾತನ್ನು ಆಲಿಸುವ ತಾಳ್ಮೆ ಇರಲಿ.

‍ಲೇಖಕರು G

7 March, 2014

16 Comments

  1. Anil talikoti

    ಮೆದುಳಿನ ತುಟಿಗೂ ಹೃದಯದ ಕಣ್ಣಿಗೂ ಇರುವ ಫರಕು ನನಗೂ ಲಾಯಕ್ಕು. ಮೌನದ ಇ ರಾಗ ಸುಶ್ರಾವ್ಯವಾಗಿದೆ
    -ಅನಿಲ

  2. Anil talikoti

    ಮೆದುಳಿನ ತುಟಿಗೂ ಹೃದಯದ ಕಣ್ಣಿಗೂ ಇರುವ ಫರಕು ನನಗೂ ಲಾಯಕ್ಕು. ಮೌನದ ಇ ರಾಗ ಸುಶ್ರಾವ್ಯವಾಗಿದೆ ……..
    -ಅನಿಲ

  3. bharathi b v

    ಮೌನದಲ್ಲೂ ಎರಡು ಬಗೆ ಇದೆ … ಒಂದು ಮಾತಿನ ನಡುವಿನ ಮೌನ, ಮತ್ತೊಂದು ಮಾತು ಮುಗಿದ ಮೌನ. ಮಾತಿನ ಮಧ್ಯದ ಮೌನದಲ್ಲಿ ಹೃದಯಗಳ ನಡುವೆ ಮಾತು ನಿಂತೇ ಇರುವುದಿಲ್ಲ. ಆದರೆ ಮಾತು ಮುಗಿದ ಮೌನದಲ್ಲಿ ಹೃದಯ ಮಾತು ನಿಲ್ಲಿಸಿರುತ್ತದೆ … ಆ ಮೌನಕ್ಕಿರುವ ಕೊಲ್ಲುವ ಶಕ್ತಿ, ಯಾವ ಮಚ್ಚು, ಲಾಂಗಿಗೂ ಇರುವುದಿಲ್ಲ …

  4. samyuktha

    Wah! loved it! Could well connect myself…

  5. Venkatesha G

    ಗಾದೆಯೇ ಇದೆಯಲ್ಲ. “ಮಾತು ಬೆಳ್ಳಿ ಮೌನ ಬಂಗಾರ” ಅಂತ.ನಾಲ್ಕು ಪದಗಳಲ್ಲೇ ಹಿರಿಯರು ಸಮಸ್ತರ ಅನುಭವಗಳನ್ನು ಕ್ರೂಢಿಕರಿಸಿದ್ದಾರಲ್ಲವೆ?

  6. Mamatha

    …………………. 🙂

  7. sarala

    maatu mattu mounavanna balance maadi badukuvudu kashta. neevu helida haage mounada bhashe ibbarigu barabeku, agale adara samrtha samavahana agatte. tumba ishtavayitu lekhana Sandhya

  8. sunil rao

    Bahala bahala ishtavaayyu akka.
    Wanna preserve this article.

  9. ಜಿ.ಎನ್ ನಾಗರಾಜ್

    460 ಕೋಟಿ ವರ್ಷಗಳ ಈ ಜಗತ್ತಿನಲ್ಲಿ ಮಾತು ಹುಟ್ಟಿ ಕೇವಲ ಒಂದು ಲಕ್ಷ ವರ್ಷವಾಗಿರಬಹುದು. ಜೀವ ಜಾಲವೆಲ್ಲಾ ಮೌನದ ಮೂಲಕವೇ ಮಾತಾಡಿವೆ,ಬೆಳೆದಿವೆ,ಬೆಳೆಸಿವೆ.
    ಇನ್ನೊಂದು ನೀವು ಬೆಳೆದ ನಗರ, ಪಟ್ಟಣಗಳ ಮಾತಾಡುತ್ತಿದ್ದೀರಿ. ತೋಟಗಳ ನಡುವೆ ಮನೆ ಮಾಡಿಕೊಂಡು ಸಾವಿರಾರು ವರ್ಷಗಳಿಂದ ಬದುಕುತ್ತಿರುವ ನಮ್ಮ ಜನರ ಮಾತು-ಮೌನಗಳ ಸಂಬಂಧ,ಪ್ರಮಾಣಗಳ ಬಗ್ಗೆ ಯೋಚಿಸಿ ನೋಡಿ.
    ಕಾರಂತರ ಕಾದಂಬರಿಗಳಲ್ಲಿ ಮೌನದ ಮಹತ್ತನ್ನು ಓದಿಯೇ ಅರ್ಥ ಮಾಡಿಕೊಳ್ಳಬೇಕು. “ಮರಳಿ ಮಣ್ಣಿಗೆ ” ಯಲ್ಲಿ ಅಳಿವೆಯ ಬಳಿ ಕೂತ ವಾರಗಿತ್ತಿಯರು, ಅತ್ತಿಗೆ- ನಾದಿನಿಯರು, ರಾಮ ಮತ್ತು ಅವನ ತಾಯಿಯ ಮೌನವೆಂಬ ಮಾತನ್ನು ಆಲಿಸಿ ನೋಡಿ. ಮಾತು ಬೆಳ್ಳಿ ಮೌನ ಬಂಗಾರ.

  10. Dr.Brahmanand Nayak

    power of silence. well written. congrats madam

  11. malini guruprasanna

    Nimma lekhana odidaaga adeko ayaachitavaagi ee haadu nenapaitu. “MOUNAVE ABHARANA, MUGULU NAGE SHASHIKIRANA”. Hinde naaninnu Highschool hudugi, Taranga Katha shibira shimogadalli Nagatihalli Sir nanage baredu kotta Autograph saalu – JAGATTINA SAMRUDDHA BHASHE YAAVUDU GOTTE? PRAKRUTI ADIYINDALU VYAVAHARISUTTA BANDA MOUNA. Good Article Sandhya avare.

  12. sindhu

    ಮ್… ಸಂಧ್ಯಾ
    ಇದು ವಾಗ್ವೈಭವ.
    ಮಾತೇ ಜ್ಯೋತಿರ್ಲಿಂಗ ಅನ್ನುವ ಒಂದು ಮಾತಿದೆ. ಅದು ನಿಜ. ಆಡಿದ್ದೂ ಮತ್ತು ಆಡದೇ ಇದ್ದಿದ್ದೂ ಎರಡೂ,
    ಎಲ್ಲ ಮಾತಿಗೂ ದನಿಯೇ ಬೇಕಿಲ್ಲ ಅಲ್ಲವಾ.
    ಥಾಟ್ ಪ್ರವೋಕಿಂಗ್..
    -ಸಿಂಧು

  13. vijayaraghavan

    ಬಿ ಎಂ ರಶೀದ್?

  14. Anonymous

    ನಿಮ್ಮ ಬರಹ ಮತ್ತು ಕೆಲವರ ಅಬಿಪ್ರಾಯಗಳು ನನ್ನ ಕಲಿಕೆಗೆ ,ನನ್ನ ನಾಟಕಕ್ಕೆ ಸಹಾಯವಾಗ್ತ ಇದೆ .ಧನ್ಯವಾದಗಳು 🙂

  15. Uma Rao

    Mouna maatu gala sankeernateyannu
    chennagi chitrisiddeeri…

  16. ಶಮ, ನಂದಿಬೆಟ್ಟ

    ಮಾತಾಳಿ ಎಂದೇ ಎಲ್ಲರೂ ಅಂದುಕೊಂಡಿರುವ ನಾಣು ಬಹು ಪ್ರೀತಿಸುವುದು ಮೌನವನ್ನ…
    ಮೊದಲ ವಾಕ್ಯ ಓದಿದಾಗ ನೆನಪಾದ ಸಾಲುಗಳಿವು “You are not only responsible for what you’ve done; but also for what you’ve not done”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading