ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಭಿನ್ನತೆ ಅನ್ಯತೆಯೇ ಹೊರತು ಅವಮಾನ ಅಲ್ಲ


ಕಳೆದ ವಾರ ಶಿವಮೊಗ್ಗೆಯಲ್ಲಿ. ಅಲ್ಲಿನ ಕರ್ನಾಟಕ ಸಂಘದ ಕಾರ್ಯಕ್ರಮಕ್ಕೆ ಬಂಜಗೆರೆ ಜಯಪ್ರಕಾಶ್ ಬಂದಿದ್ದರು. ಅವರದೇ ಅಧ್ಯಕ್ಷ ಭಾಷಣ. ಮಾತನಾಡುತ್ತಾ ಆಡುತ್ತಾ ಅವರು ಹೇಳಿದ ಒಂದು ವಿಷಯ ನನ್ನನ್ನು ಬಹಳ ಕಾಡಿತ್ತು. ಕಾಡಿದ್ದು ಯಾಕೆಂದರೆ ಆ ಬಗ್ಗೆ ನಾನು ಅನೇಕ ಸಲ ಯೋಚಿಸಿದ್ದೆ, ನನ್ನಲ್ಲೇ ಚರ್ಚಿಸಿದ್ದೆ, ಸ್ನೇಹಿತರು ಮಾತನಾಡುವಾಗ, ಚರ್ಚೆ ಮಾಡುವಾಗ ಗಮನಿಸಿದ್ದೆ. ಇರಲಿ, ಮೊದಲು ಬಂಜಗೆರೆಯವರು ಹೇಳಿದ ವಿಷಯ ಏನು ಎಂದು ಹೇಳಿಬಿಡುತ್ತೇನೆ.
ನಾಗಾಲ್ಯಾಂಡ್ ನಲ್ಲಿ ಸುಮಾರು ೩೨ ಬುಡಕಟ್ಟುಗಳಿವೆ, ಜೊತೆಗೆ ಪರಸ್ಪರ ಶತೃತ್ವ ಸಹ. ಅದರಲ್ಲೂ ಕೆಲವು ಬುಡಕಟ್ಟುಗಳ ನಡುವೆ ಅಂತೂ ಕಂಡರೆ ಕೊಲ್ಲುವಷ್ಟು ಆಕ್ರೋಶ. ಆದರೆ ಆ ಬುಡಕಟ್ಟುಗಳ ಯಾರೇ ಆಗಲಿ, ಯಾವುದೇ ಬುಡಕಟ್ಟಿಗೆ ಸೇರಿದವರಾಗಲಿ ಇನ್ನೊಂದು ಬುಡಕಟ್ಟಿನವರ ಬಗ್ಗೆ ಮಾತನಾಡುವಾಗ ಅವರನ್ನು ಕೆಟ್ಟವರು ಅಥವಾ ಕೀಳು ಎನ್ನುವುದಿಲ್ಲ. ಅವರು ಇವರ ಪಾಲಿಗೆ ’ಅನ್ಯ’ರು ಅಷ್ಟೇ. ಹಾಗೆ ಅನ್ಯರು, ಭಿನ್ನರು ಕೀಳಲ್ಲ ಎನ್ನುವುದು ಅವರ ಮನೋಭಾವ. ಹಾಗೆ ’ಭಿನ್ನ’ತೆಯನ್ನು, ’ಅನ್ಯ’ತೆಯನ್ನು ಕೇವಲ ಹಾಗೆ ನೋಡಿ ಸಹಿಸಿಕೊಳ್ಳಬಲ್ಲರು ಎನ್ನುವುದೇ ದೊಡ್ಡದು ಅಲ್ಲವೇ?
ಹೆಚ್ಚುಕಮ್ಮಿ ಇದೇ ಅರ್ಥ ಬರುವ ಒಂದು ಸಂಭಾಷಣೆಯನ್ನು ಇತ್ತೀಚಿಗೆ ಒಂದು ಪುಸ್ತಕದಲ್ಲಿ ಓದಿದ್ದೆ, They may be different, but that does not make them evil – ಅವರು, ಅವರ ಭಾಷೆ, ಅವರ ಆಚರಣೆ ಭಿನ್ನವಿರಬಹುದು, ಆದರೆ ಅದು ಅವರನ್ನು ಭಿನ್ನರಾಗಿಸುತ್ತದೆಯೇ ಹೊರತು, ದುಷ್ಟರನ್ನಾಗಿಸುವುದಿಲ್ಲ ಅಂತ.
ಇದೇ ಉದಾಹರಣೆಯನ್ನು ಬಂಜಗೆರೆ ಮತ್ತೆ ನಮ್ಮ ಭಾಷಾ ಬಳಕೆಗೂ ವಿಸ್ತರಿಸಿದರು. ಕನ್ನಡದಲ್ಲಿ ಒಂದು ಬಗೆಯ ಭಾಷೆ ಮಾತ್ರ ಒಂದು ಬೆಂಚ್ ಮಾರ್ಕ್ ಎನ್ನುವ ಹಾಗೆ ಬಳಕೆಯಾಗುತ್ತದೆ. ಮಿಕ್ಕ ಕನ್ನಡಗಳು ಯಾಕೆ ಒಂದು ಹಾಸ್ಯಕ್ಕೆ ವಸ್ತುವಾಗುತ್ತಿದೆ ಎಂದು ವಿಷಾದಿಸಿದರು. ಹಾಸ್ಯ ಪಾತ್ರಗಳಿಗೆ ಅಥವಾ ಒರಟುತನದ ವಿಲನ್ ಪಾತ್ರಗಳಿಗೆ ಇತರ ಕನ್ನಡಗಳು ಬಳಕೆಯಾಗುವುದು ಯಾಕೆ ಎಂದು ಪ್ರಶ್ನಿಸಿದರು.
ಇದೇ, ಈ ಮಾತೆ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದುದ್ದು. ನನಗೆ ತಿಳಿದ ಹಾಗೆ ಕನ್ನಡ ಎಂದರೆ ಅದು ಒಂದೇ ಕನ್ನಡವಲ್ಲ, ಅದು ಹಲವು ಕನ್ನಡ. ಪ್ರತಿ ೨೦ ಕಿಲೋಮೀಟರ್ ಗಳಿಗೆ ಬದಲಾಗುತ್ತಾ ಹೋಗುವ ಭಾಷೆ ನಮ್ಮದು. ಮಂಡ್ಯದ ಗಂಡು ಭಾಷೆ, ಧಾರವಾಡ, ಬಿಜಾಪುರ, ಗುಲ್ಬರ್ಗ, ಗದಗಿನ ಗಾಢ ಕಪ್ಪು ಮಣ್ಣಿನ ಜವಾರಿ ಭಾಷೆ, ಮಂಗಳೂರಿಗರ ನಾಜೂಕು ಪುಸ್ತಕ ಭಾಷೆ, ಚಾಮರಾಜ ನಗರದ ಮನಸ್ಸಿನ ಭಾಷೆ, ಮೈಸೂರಿನ ರಾಜ ಭಾಷೆ, ನಮ್ಮ ಬೆಂಗಳೂರಿನ ಕಂಗ್ಲಿಶ್ ಭಾಷೆ, ಕುಂದಾಪ್ರ ಕನ್ನಡದ ಸೊಗಸು ಭಾಷೆ, ಹವ್ಯಕರ ಹಾಡು ಭಾಷೆ, ಮಲೆಗಳಲ್ಲಿ ಮದುಮಗಳ ಮಲೆನಾಡ ಭಾಷೆ, ಎಷ್ಟು ಭಾಷೆಗಳು, ಎಷ್ಟು ಕನ್ನಡಗಳು.
ಅದರಲ್ಲಿ ಸಾಧಾರಣವಾಗಿ ಗಮನಕ್ಕೆ ಬಾರದ ಇನ್ನೊಂದು ಕನ್ನಡ ಇದೆ, ಅದು ಕೋಲಾರ ಜಿಲ್ಲೆಯ ಕನ್ನಡ ಭಾಷೆ. ಗಡಿಯ ತೆಲುಗಿನ ಪದಗಳನ್ನು ಮುಲಾಜಿಲ್ಲದೆ ಎಳೆದುಕೊಂಡು, ಮೈಸೂರು ಮಲ್ಲಿಗೆ ಮುಡಿಸಿದ ಕನ್ನಡ ಅದು. ಹೀಗೆ ಗಮನಕ್ಕೆ ಬಾರದ ಕನ್ನಡವನ್ನು ನಿರ್ದೇಶಕ ಗುರುಪ್ರಸಾದ್ ಅವರು ತಮ್ಮ ’ಡೈರೆಕ್ಟರ್ ಸ್ಪೆಷಲ್’ ಚಿತ್ರದಲ್ಲಿ ರಂಗಾಯಣ ರಘು ಮೂಲಕ ಮಾತನಾಡಿಸಿದ್ದಾರೆ. ಮೊದಲ ಸಲ ಆ ಭಾಷೆ ಕೇಳಿದಾಗ ನನಗಾದ ಬೆರಗು, ಖುಷಿ ಅಷ್ಟಿಷ್ಟಲ್ಲ. ಎಲ್ಲವೂ ಕನ್ನಡವೇ, ಎಲ್ಲಕ್ಕೂ ಅವುಗಳ ಸೊಬಗು ಅವುಗಳಿಗಿರುತ್ತವೆ. ಅವು ಅನ್ಯವೇ ಹೊರತು ಕೀಳಲ್ಲ.
ಗುರುರಾಜ ಹೊಸಕೋಟಿಯವರ ಹಾಡು ಕೇಳಿದಾಗ, ಕುಂದಾಪ್ರ ಕನ್ನಡದ ಸೊಗಡು ಅನುಭವಿಸಿದಾಗ, ಮೈಸೂರು ಮಲ್ಲಿಗೆಯ ಘಮ ಉಸಿರೊಳಕ್ಕೆ ಎಳೆದುಕೊಂಡಾಗ, ಯಕ್ಷಗಾನ, ತಾಳಮದ್ದಲೆ ಕೇಳಿದಾಗ, ಮಂಟೇಸ್ವಾಮಿ ಕೇಳಿದಾಗ, ಮಂಡ್ಯ ಭಾಷೆ ಒರಟುತನದಲ್ಲೇ ಆತ್ಮೀಯತೆಯನ್ನು ತೋರಿದಾಗ, ಚಾಮರಾಜನಗರದ ಗ್ರಾಮ್ಯತೆ ಮನಸ್ಸನ್ನು ತಾಕಿದಾಗ… ಯಾವ ಸುಖ ಹೆಚ್ಚು, ಯಾವುದು ಕಡಿಮೆ?
ಇಲ್ಲಿ ಇನ್ನೊಂದು ಪ್ರಶ್ನೆ ನನ್ನಲ್ಲಿ ಏಳುತ್ತದೆ. ಈಗ ಒಂದು ಕನ್ನಡ ’ಸರಿ’ ಎಂದು ಹೇಳಬೇಕಾದರೆ ಆಧಾರಗಳು ಏನು? ಒಂದು ಕಾಲಕ್ಕೆ ಭಾಷೆಯ ಸ್ವರೂಪ ರೂಪಿಸಲೆಂದು ಒಂದು ವಿದ್ಯಾವಂತ ಸಮಾಜ ಅದನ್ನು ಮಾದರಿ ಎಂದು ಹೇಳಿದರೆ, ಉಳಿದವರೆಲ್ಲರೂ ಅದನ್ನು ಮಾನ್ಯ ಮಾಡಲೇ ಬೇಕು ಎನ್ನಲು ಅದಕ್ಕಿರುವ ಅಧಿಕಾರ ಏನು? ಸಮಾಜದ ಒಂದು ವಾಹಿನಿ ಅದನ್ನು ಬಳಸುತ್ತದೆ ಎನ್ನುವ ಒಂದೇ ಕಾರಣಕ್ಕೆ ಒಂದು ಭಾಷೆ ಮಾದರಿ ಆಗಬಹುದಾದರೆ, ಸಂಖ್ಯೆಯಲ್ಲಿ ಅದಕ್ಕಿಂತಲೂ ಹೆಚ್ಚಿರುವ ಗ್ರಾಮ್ಯ ಭಾಷೆ ಯಾಕೆ ನಮಗೆ ಮಾದರಿ ಆಗಬಾರದು? ಮಾದರಿ ಆಗದಿದ್ದರೆ ಹೋಗಲಿ, ಅದು ಯಾಕೆ ಅವಹೇಳನಕಾರಿ ಆಗಬೇಕು? ಇಲ್ಲಿ ಇನ್ನೊಂದು ವಿಷಯ ಹೇಳಬೇಕು ನಾನು, ಹೊರಗೆ ನಾವು ಎಷ್ಟೇ ಶಿಷ್ಟಭಾಷೆಯಲ್ಲಿ ಮಾತನಾಡಲಿ, ಒಂದು ಸಲ ಹೊಸಿಲು ದಾಟಿ ಒಳಬಂದಾಗ ನಾವಾಡುವುದು ನಮ್ಮ ನಮ್ಮ ಮನೆಯ ಭಾಷೆ. ಹೌದು, ನಮ್ಮ ವಿದ್ಯಾಭ್ಯಾಸ, ಸ್ಥಾನ – ಮಾನ, ವೃತ್ತಿ ಎಲ್ಲದರ ಆಚೆಗೂ ನಮ್ಮಲ್ಲಿ ಉಳಿಯುವುದು ನಾವು ಚಿಕ್ಕಂದಿನಿಂದ ಆಡಿದ ಭಾಷೆ. ಹಳ್ಳಿಗಾಡಿನಿಂದ ಬಂದ ಎಷ್ಟೋ ಜನ ಇಂದಿಗೂ ತಮ್ಮ ಭಾಷೆಯಲ್ಲಿ ಅದೇ ದೇಸಿತನವನ್ನು ಉಳಿಸಿಕೊಂಡಿರುತ್ತಾರೆ. ಅದನ್ನು ಇಂಗ್ಲಿಷ್ ನಲ್ಲಿ ಸ್ಲ್ಯಾಂಗ್ ಎನ್ನುತ್ತೇವೆ, ತೆಲುಗನ್ನಡದಲ್ಲಿ ’ಯಾಸೆ’ ಎನ್ನುತ್ತೇವೆ. ಅಂದರೆ ಭಾಷೆಯ ಬರಹಕ್ಕಿಂತ ಭಿನ್ನವಾಗಿ, ಭಾಷೆಯ ಆಡುತನವನ್ನು ಅವಲಂಬಿಸಿದ ಭಾಷೆ. ಹಾಗಿರುವಾಗ ಆ ಭಾಷೆ ಯಾಕೆ ತಪ್ಪಾಗುತ್ತದೆ?
ಭಾಷೆ ಭಾವನೆಗಳ ಅಭಿವ್ಯಕ್ತಿಯೇ ಹೊರತು, ಭಾವನೆಗಳು ಅಸ್ತಿಭಾರವಲ್ಲ. ಅದಕ್ಕೆ ಒಂದು ವಾಹಕಕ್ಕಿರುವ ಬೆಲೆ ಕೊಡೋಣ, ಆದರೆ ಅದು ಬಾವನೆಗಿಂತ ಮುಖ್ಯವಾದದ್ದಲ್ಲ. ಎಷ್ಟೋ ಸಲ ಉಚ್ಛಾರದಲ್ಲಿ ಬರವಣಿಗೆಯಲ್ಲಿ ಸಣ್ಣ ಪುಟ್ಟ ಹೆಚ್ಚು ಕಡಿಮೆ ಆಗಬಹುದು. ಆದರೆ ಅದು ಅರ್ಥವ್ಯತ್ಯಾಸ ಮಾಡದಿದ್ದಾಗ ಅದರ ಬಗ್ಗೆ ಅವಹೇಳನ, ಆಡಿಕೊಳ್ಳುವುದು ಸರಿ ಅಲ್ಲ ಎಂದೇ ನನ್ನ ಭಾವನೆ.

ಈ ಉಚ್ಛಾರಣಾ ವ್ಯತ್ಯಾಸ ಕನ್ನಡ ಭಾಷೆಯಲ್ಲಿ ಮಾತ್ರ ಇಲ್ಲ, ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಇದೆ. ಒಂದು ಕಾಲದಲ್ಲಿ ಬ್ರಿಟಿಷರ ಇಂಗ್ಲಿಷ್ ನಮಗೆ ಅನುಕರಣೀಯವಾಗಿತ್ತು, ಈಗ ಅಮೆರಿಕನ್ ಇಂಗ್ಲಿಷ್ ಆ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಒಮ್ಮೆ ಕುಪ್ಪಳಿಯಲ್ಲಿ ಕೆ ವಿ ನಾರಾಯಣ್ ಅವರೊಂದಿಗೆ ಕೇಳಿದಾಗ ಅವರೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾಷೆಯ ಒಂದು ಧಾರೆಯನ್ನು ಮಾತ್ರ ಸಮರ್ಥಿಸಿಕೊಳ್ಳಲು, ಅದನ್ನೇ ಮಾದರಿ ಎನ್ನಲು ನಮ್ಮಲ್ಲಿ ಇರುವ ಆಧಾರಗಳಾದರೂ ಏನು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಿನುವಾ ಅಚಿಬೆ ಒಂದೆಡೆ ಬರೆಯುತ್ತಾರೆ, ’ಸಿಂಹಗಳಿಗೆ ಅವರದೇ ಆದ ಚರಿತ್ರಕಾರರು ಇರುವವರೆಗೂ ಬೇಟೆ ಎನ್ನುವುದು ಬೇಟೆಗಾರರನ್ನು ಮಾತ್ರವೇ ವಿಜೃಂಭಿಸುತ್ತದೆ’ ಎಂದು. ಹಾಗೆ ಕನ್ನಡ ಹೀಗೆ ಇರಬೇಕು ಎಂದು ಒಂದು ಭಾಗದ ಜನ ಹೇಳಿದರೆ ಅದು ಅವರ ಪಾಲಿನ ಸತ್ಯವೇ ಹೊರತು ಎಲ್ಲರ ಪಾಲಿನ ಅಂತಿಮ ಸತ್ಯವಾಗಬೇಕಿಲ್ಲ ಅಲ್ಲವೆ?
ಕನ್ನಡ ಹೀಗೆ ಇರಬೇಕು ಎಂದು ತೀರ್ಮಾನ ಮಾಡಿದವರು ಈ ಪ್ರದೇಶ ಬಿಟ್ಟು ಕರ್ನಾಟಕದ ಹೃದಯ ಭಾಗವಾದ ಹಳ್ಳಿಗಳಿಗೆ ಹೋದರೆ, ಬಹುಸಂಖ್ಯಾತ ಹಳ್ಳಿಗರ ನಡುವೆ ಈ ಶಿಷ್ಟ ಭಾಷೆ ಬಹುಷಃ ಅವಮಾನಕ್ಕೀಡಾಗಬಹುದು, ಅಥವಾ ಹಾಸ್ಯಕ್ಕೆ ವಸ್ತುವಾಗಬಹುದು. ಇಲ್ಲಿ ಯಾವುದು ಸರಿ, ಅಥವಾ ಯಾವುದು ತಪ್ಪು? ಅಸಲಿಗೆ ಅಂತಿಮ ಸತ್ಯ ಅನ್ನುವ ಮಾತೇ ಸುಳ್ಳು ಅಲ್ಲವೆ? ಇಲ್ಲಿರುವುದೆಲ್ಲಾ ರಿಲೇಟಿವ್ ಆದ ಮಾತುಗಳು ಮತ್ತು ಸಿದ್ಧಾಂತಗಳು.
ನನಗೆ ಪರಿಚಯವಿರುವ ಒಬ್ಬರು ಚಿಂತಕರಿದ್ದಾರೆ. ಅವರ ಕ್ಷೇತ್ರದಲ್ಲಿ ಅವರ ಜ್ಞಾನ ಅತ್ಯಂತ ಆಳವಾದದ್ದು. ಆದರೆ ಗ್ರಾಮ್ಯ ಹಿನ್ನಲೆಯಿಂದ ಬಂದ ಅವರಲ್ಲಿ ಈ ಉಚ್ಛಾರಣಾ ವ್ಯತ್ಯಾಸ ಕಂಡುಬರುತ್ತದೆ. ಅವರೇ ಅಂತಲ್ಲ, ಬಹುಪಾಲು ಗ್ರಾಮ್ಯ ಹಿನ್ನಲೆಯವರಲ್ಲಿ ಈ ವ್ಯತ್ಯಾಸ ಕಾಣುತ್ತದೆ. ’ಅವನು ಹೇಗಿದ್ದಾನೆ?’ ಬಳಕೆಯಾದಂತೆ ’ಅವ್ನ್ ಎಂಗವ್ನೆ’ ಸಹ ಬಳಕೆ ಆಗುತ್ತದೆ. ದಯವಿಟ್ಟು ಗಮನಿಸಿ, ಉಚ್ಛಾರಣ ವ್ಯತ್ಯಾಸ, ಅರ್ಥ ವ್ಯತ್ಯಾಸವಲ್ಲ. ಹಾಗಿರುವಾಗ ಅವರ ಆ ವ್ಯತ್ಯಾಸವನ್ನು ಯಾರಾದರೂ ಅವಹೇಳನ ಮಾಡಿದರೆ, ಅಥವಾ ತಪ್ಪು ಎಂದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ?
ಇಲ್ಲಿ ಭಾಷೆ ಎನ್ನುವುದು ಒಂದು ಉದಾಹರಣೆ ಮಾತ್ರ. ಈ ಮಾತು ಬೇರೆ ಬೇರೆ ಸಂಸ್ಕೃತಿ, ಆಚರಣೆ, ನಡುವಳಿಕೆ, ಅಡಿಗೆ, ಉಡುಗೆ ಎಲ್ಲಕ್ಕೂ ಅನ್ವಯವಾಗುತ್ತದೆ. ಒಬ್ಬರು ನಮಗಿಂತ ಬೇರೆಯಾಗಿದ್ದಾರೆ ಎಂದರೆ ಅದು ಅನ್ಯವೇ ಹೊರತು ಕೀಳು ಅಥವಾ ಕೆಡುಕು ಆಗಬೇಕಿಲ್ಲ ಅಲ್ಲವೇ?
ಕಡೆಯದಾಗಿ ಒಂದು ಮಾತು, ಮಲೆ ಮಾದೇಸ್ವರ ಎನ್ನಲಿ, ಮಲೆ ಮಹದೇಶ್ವರ ಎನ್ನಲಿ ಅರ್ಥ ಅವನೇ ಅಲ್ಲವೇ?
 

‍ಲೇಖಕರು G

11 July, 2014

10 Comments

  1. Ahalya Ballal

    ಹ್ವಾಯ್ ಸಂಧ್ಯಾ… ನೀವ್ ಇದ್ರ ಬಗ್ಗೆ ಬರ್ದಿದ್ದ್ ಕಂಡ್ ಮssಸ್ತ್ ಖುಶೀ ಆಯ್ತ್ ಕಾಣಿ!

  2. kusumabaale

    ಬೆಂಗಳೂರಲ್ಲಿ ಟಿವಿದಾರಾವಾಹಿ ಬರೀತಾ,ನಾಟಕ,ಸಾಹಿತ್ಯ ಅಂತ ಶಿಷ್ಟಭಾಷೆಯಲ್ಲಿ ಮಾತಾಡುವ ನಾನು ನಮ್ಮೂರಿಗೆ ಹೋದಾಗ ಥೇಟು ಅಲ್ಲಿಯದ್ದೇ ಭಾಷೆಯನ್ನ ಪ್ರೀತಿಯಿಂದ ಮಾತಾಡುತ್ತೇನೆ. ಬಳಸದಿದ್ದರೆ ಭಾಷೆ ಸತ್ತುಹೋಗುತ್ತದೆ.

  3. Radhika

    Those who speak supposedly bench mark language look down upon other dialects. But other way round is not true 🙂
    News channels should provide a slot for news in various dialects every day. That will make us familiar with other dialects and they will not be different any more.

  4. Ganesh Shenoy

    Good thoughts, practical approach, realistic sentiments and a well thought-out and written article. Thanks Sandhya Rani Avare.

  5. yash

    uttama,atyagatyavagidda chinthana baraha.

  6. venkatesh malhar

    Tumba channagide medam nimma artical

  7. Anil Talikoti

    ಕೂಪಮಂಡೂಕಗಳು ಮಾತ್ರ ತಮ್ಮದೆ ಮಾದರಿ,ಹೀಗೆ ಇರಬೇಕು ಎನ್ನುತ್ತಾರೆ ಎನಿಸುತ್ತದೆ -ಆ ಮಂಡೂಕಗಳು ಅಲ್ಲೇ ಮಡಗಲಿ -ನಷ್ಟವೇನಿಲ್ಲ! ಆಪ್ತ ಲೇಖನ.
    -ಅನಿಲ

  8. Ramesh Megafravalli

    Houdalla maaraayre. baase samskruti bagge eshtu chenda bardiddeeri. Very nice writeup Sandhya madam. Really on that day Banjagere jayaprakash spoke very well.

  9. Kiran

    Very good thoughts and these thoughts apply universally in all spheres of human lives.
    ನಮ್ಮಂತೆ ಇತರರು, ಅವರು ಬೇರೆಯವರೇ ಹೊರತು ಕೆಟ್ಟವರಲ್ಲ ಎಂಬುದು ವಿಶ್ವ ಮಾನವ ಮಂತ್ರವಾಗಬೇಕು.

  10. hg malagi

    ಹೌದು ನೀವು ಅಂದದ್ದು ಸರಿ. ಬಯಲುಸೀಮೆಯ ಧಾರವಾಡದವನಾದ ನಾನು ಕೆಲಸಕ್ಕೆ ಸೇರಿ ಮೊದಲ ಸಲ ಮಂಗಳೂರಿಗೆ ಬಂದಾಗ ಬಂದಾಗ ಅಲ್ಲಿನ ಜನ ನನ್ನನ್ನು ಕಾಡು ಪ್ರಾಣಿಯಂತೆ ನೋಡಿದ್ದು ಸುಳ್ಳಲ್ಲ. ಗಟ್ಟದಕ್ಕಲು ಅಂತ ನನ್ನಂತೆ ಅಲ್ಲಿರುವವರನ್ನು ಹೀಯಾಳಿಸಿದ ಕಹಿ ಅನುಭವಗಳು ಅಲ್ಲಿ ನನಗೆ ಸಾಕಷ್ಟಾಗಿವೆ. ಬೆಂಗಳೂರಿನಲ್ಲಿಯೂ ಉತ್ತರ ಕರ್ನಾಟಕದಿಂದ ಬಂದಂತಹ ನಮ್ಮಂತಹ ಲಕ್ಷಾಂತರ ಜನರು ಅವರ ಅವಗಣನೆಗೆ ಪಾತ್ರರಾದದ್ದು ಕಟುಸತ್ಯ. ಇದೆಲ್ಲವೂ ಬ್ರಿಟಿಷರು ನಮ್ಮನ್ನು ಕೀಳಾಗಿ ಕಂಡಂತೆ ಅಂತ ನನಗೆ ಎಷ್ಟೋ ಸಲ ಅನ್ನಿಸಿದ್ದಿದೆ. ಏನು ಮಾಡುವುದು ನಮ್ಮ ಅಸಹಾಯಕತೆ. ಬಡತನವೋ, ಅನಕ್ಷರತೆಯೋ ಬಣ್ಣವೋ ನಮ್ಮ ಪ್ರಾಂತ್ಯದವರನ್ನು ನಮ್ಮ ರಾಜ್ಯದಲ್ಲಿಯೇ ಹಿಂದುಳಿದವರನ್ನಾಗಿಸಿದೆ. ಈ ತಾರತಮ್ಯಕ್ಕೆ ಬ್ರಾಹ್ಮಣರಿಂದ ಹಿಡಿದು ಎಲ್ಲ ವರ್ಗದವರೂ ಬಲಿಯಾಗಿದ್ದಾರೆ. ಆದರೂ ಅವರೊಂದಿಗೆ ಅವರದೇ ಭಾಷೆಯಲ್ಲಿ ಸಂವಹನ ಮಾಡಲು ನಿರಂತರವಾಗಿ ಹೆಣಗಾಡುತ್ತಿದ್ದೇವೆ ಎನ್ನುವುದು ಕಟುಸತ್ಯ

Trackbacks/Pingbacks

  1. ಕುಸಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಭಾಷೆಯೆಂಬುದು ನದಿಯ ಹಾಗೆ ಅನ್ನುವುದು ಸುಳ್ಳಲ್ಲ! « ಅವಧಿ / Avadhi - [...] ಮೊನ್ನೆ ಅವಧಿಯಲ್ಲಿ ಸಂಧ್ಯಾರಾಣಿಯವರ “ಭಿನ್ನವೆಂದ ಮಾತ್ರಕ್ಕೇ ಕೀಳಲ್ಲ” ಅನ್ನುವ ಬಂಜಗೆರೆ ಜಯಪ್ರಕಾಶ್ ಮಾತನ್ನ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading