
’ನನ್ ಕಾಸಿನಲ್ಲಿ ಇವತ್ತೊಬ್ಬ ತ್ಯಾಗರಾಜ ಸಿಕ್ಕಿದ್ದ’ ಎಂದು ನನ್ನ ಗೆಳತಿ ಹೇಳಿದಾಗ ನಾನು ಅವಳೆಡೆಗೆ ಅಚ್ಚರಿಯಿಂದ ದಿಟ್ಟಿಸಿದ್ದೆ. ಅವಳೆಂದರೆ ನನಗೆ ಮೆಚ್ಚುಗೆ. ಇಂಜನಿಯರಿಂಗ್ ಓದಿದವಳು, ಪ್ರೀತಿಸಿ ಮದುವೆಯಾದಳು, ಆ ಹುಡುಗ ಏನು ಓದಿದ್ದ ಎನ್ನುವುದು ಇವಳಿಗೆ ಮುಖ್ಯವಾಗಿರಲೇ ಇಲ್ಲ. ಸ್ವಲ್ಪ ದಿನ ಇಂಜನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕೆಲಸ ಮಾಡಿದಳು, ಮನೆಯಲ್ಲಿ ಮಕ್ಕಳಿಗೆ ತನ್ನ ಅಗತ್ಯ ಇದೆ ಅನ್ನಿಸಿದಾಗ ಕೆಲಸ ಬಿಟ್ಟಳು. ಮಕ್ಕಳು ದೊಡ್ಡವರಾದ ಮೇಲೆ ಮತ್ತೆ ಕೆಲಸಕ್ಕೆ ಸೇರಿಕೊಂಡಳು. ಚಿಣ್ಣಾರಿ ಮುತ್ತುಗಳು ತುಂಬಿರುವ ಒಂದು ಪ್ರಾಥಮಿಕ ಶಾಲೆಯಲ್ಲಿ ’ಮ್ಯಾಮ್’ ಆದಳು. ಅವಳನ್ನು ಕಂಡರೆ ನಂಗಿಷ್ಟ. ಕಾಲೇಜು ಬಿಟ್ಟು, ಸ್ಕೂಲಿನಲ್ಲಿ ಕಲಿಸಲು ನಿಂತಳು ಅಂತ ಅಲ್ಲ. ಸಾಫ್ಟ್ ವೇರ್ ಸೆಳೆತ ಬಿಟ್ಟು ಟೀಚಿಂಗ್ ಕಡೆ ಬಂದಳು ಅಂತ ಸಹ ಅಲ್ಲ. ಬದುಕನ್ನು ತನ್ನ ರೀತಿಯಲ್ಲಿ ಬದುಕುವ ಧೈರ್ಯ ಮಾಡಿದಳು ಅಂತ. ಮತ್ತು ಈ ಬಗ್ಗೆ ಇವತ್ತಿನವರೆಗೂ ಯಾರಿಗೂ ಸಮಜಾಯಶಿ ಕೊಡುವ ಪ್ರಯತ್ನಕ್ಕೇ ಅವಳು ಹೋಗಿಲ್ಲ ಅಂತ. ಯಾರಾದರೂ ಆ ಬಗ್ಗೆ ಕೇಳಿದರೆ, ’ನಂಗಿಷ್ಟ’ ಅಂತ ಮೃದುವಾಗಿ ಆದರೆ ಕಡ್ಡಿ ಮುರಿದ ಹಾಗೆ ಹೇಗೆ ಹೇಳಿಬಿಡುತ್ತಾಳೆ ಅಂದರೆ ಮುಂದೆ ಯಾರಿಗೂ ಪ್ರಶ್ನೆ ಮಾಡುವ ಮನಸ್ಸೇ ಬರಬಾರದು. ಇಂತಹ ಇವಳು ಪಾಠ ಮಾಡುವ ಪುಟಾಣಿಗಳ ಮಧ್ಯ ಇನ್ನ್ಯಾವ ತ್ಯಾಗರಾಜ ಇರ್ಬೇಕಪ್ಪ ಅಂತ ನಾನು ಅವಳ ಕಡೆ ನೋಡಿದೆ.
ಮಕ್ಕಳ ನಡುವೆ ಇರುವುದು ಇಷ್ಟ, ಅವರ ನಗು, ಖುಶಿ, ಮುಗ್ಧತೆ ಎಲ್ಲಾ ಸಂಬಳದ ಜೊತೆಗಿನ ಬೋನಸ್ ಎಂದು ಹೇಳುತ್ತಿದ್ದ ಇವಳು ಒಮ್ಮೊಮ್ಮೆ ಫೋನ್ ಮಾಡಿ ಬೇಸರ ವ್ಯಕ್ತ ಪಡಿಸುತ್ತಿದ್ದುದಿತ್ತು. ’ಯಾಕೆ ಹೀಗಾಗ್ತಾ ಇದೆ, ಸಣ್ಣ ಮಕ್ಕಳ ಅಪ್ಪ-ಅಮ್ಮ ಬಂದು ಮಕ್ಕಳು ಯಾಕೆ ಮೊದಲ rank ಬರ್ತಾ ಇಲ್ಲಾ, ಟ್ಯೂಷನ್ ಗೆ ಬೇಕಾದ್ರೂ ಕಳಿಸ್ತೇವೆ ಅಂತಾರೆ ಕಣೆ. ಏನು ಮಾಡಲಿ ಹೇಳು. ಆ ವಯಸ್ಸಿನಲ್ಲಿ ಮಕ್ಕಳಿಗೆ ನಿನ್ನ ಗೆಳೆಯನನ್ನು ಪ್ರೀತಿಸಬೇಕು, ಜೊತೇಲಿ ಆಟ ಆಡಬೇಕು, ಜಗಳ ಆಡಬಾರದು ಎಂದು ಹೇಳಿಕೊದುವ ಬದಲು, ನಿನ್ನ ಪಕ್ಕದವನಿಗಿಂತ ನಿನಗೆ ಹೆಚ್ಚು ಮಾರ್ಕ್ಸ್ ಬರಬೇಕು, ನಿನ್ನ ನೋಟ್ಸ್ ಮುಚ್ಚಿಟ್ಟುಕೋ, ಅದನ್ನ ಯಾರಿಗೂ ಕೊಡಬೇಡ ಅಂತ ಹೇಳಿಕೊಡುವುದು ಎಷ್ಟು ಕ್ರೌರ್ಯ’ ಅಂತ ಅಲವತ್ತುಕೊಳ್ಳುತ್ತಿದ್ದಳು. ಅಲ್ಲದೆ ಮ್ಯಾನೇಜ್ ಮೆಂಟ್ ಸಹ ಅದನ್ನೇ ಪ್ರೋತ್ಸಾಹಿಸುತ್ತದೆ, ಹಾಗೆ ಮಕ್ಕಳನ್ನು ಎಷ್ಟರ ಮಟ್ಟಿಗೆ ಮೋಟಿವೇಟ್ ಮಾಡುತ್ತೇವೆ ಅನ್ನುವುದು ಶಾಲೆಯ ಹೆಸರು, ಮುಂದಿನ ವರ್ಷದ ಅಡ್ಮಿಶನ್ನು, ಏರಿಸಲಾಗುವ ಫೀಸು ಎಲ್ಲದ್ದಕ್ಕೂ ಹೇಗೆ ತಳುಕು ಹಾಕಿಕೊಂಡಿರುತ್ತದೆ ಅಂತ ವಿವರಿಸಿದ್ದಳು.
ಅಂತಹ ಇವಳು ಸಂತಸ ಚೆಲ್ಲುವ ದನಿಯಲ್ಲಿ ಮಾತಾಡುತ್ತಿದ್ದದ್ದು ನನಗೂ ಖುಶಿ ಆಗುತ್ತಿತ್ತು. ಅವಳು ಮುಂದುವರಿಸಿದಳು, ’ಈ ಪುಟಾಣಿಗಳಿಗೆ ಮೋಟಿವೇಶನ್, ಓರಿಯೆಂಟೇಶನ್, ಮಣ್ಣು ಮಸಿ ಅಂತ ಕ್ಲಾಸ್ ತಗೋತಾರೆ ಕಣೆ. ಇವತ್ತು ಅದ್ಯಾರೋ ಪರ್ಸನಾಲಿಟಿ ಡೆವೆಲಪ್ ಮೆಂಟ್ ನವರು ಬಂದು ಇವರಿಗೆ ಗೋಲ್, ಏಮ್ ಅಂತೆಲ್ಲಾ ಹೇಳ್ತಾ ಇದ್ರು. ಅಮೇಲೆ ’ದೊಡ್ಡವನಾದ ಮೇಲೆ ನೀನೇನಾಗಬೇಕು ಅಂತಿದೀಯ’ ಅನ್ನೋ ಪ್ರಶ್ನೆ, ಅದೇ ಡಾಕ್ಟರು, ಇಂಜನಿಯರ್ ಉತ್ತರಗಳ ನಡುವೆ ಬಂದ ಎಂಎನ್ಸಿ ಯಲ್ಲಿ ಕೆಲಸಕ್ಕೆ ಸೇರಬೇಕು ಅನ್ನುವ ಉತ್ತರ, ’ ಆಮೇಲೆ ’ಈಗ ಬರುವ ಪರೀಕ್ಷೆಯಲ್ಲಿ ಯಾವ ಗ್ರೇಡ್ ಬರ್ಬೇಕು ಅಂತಿದ್ಯಾ’ ಅನ್ನೋ ಪ್ರಶ್ನೆ. ನಾಲ್ಕೈದು ಜನರನ್ನ ನಿಲ್ಲಿಸಿ ಕೇಳಿದರು, ಎಲ್ಲರದೂ ಒಂದೇ ಉತ್ತರ ’ಐ ವಾಂಟು ಬಿ ಫಸ್ಟ್’ ಅಂತ. ಕೊನೇಲಿ ಒಬ್ಬ ಹುಡುಗ ’ಐ ವಾಂಟು ಬಿ ಸೆಕೆಂಡ್’ ಅಂದ. ಆಯಾಚಿತವಾಗಿ ನಾನೆ ’ಯಾಕೆ’ ಅಂತ ಕೇಳಿದೆ. ಅವನು ಕೊಟ್ಟ ಉತ್ತರ, ’ತರುಣ್ ಫಸ್ಟ್ ಬರದೇ ಇದ್ರೆ ಅವರ ಮನೇಲಿ ತುಂಬಾ ಹೊಡೀತಾರೆ ಮ್ಯಾಮ್…’, ತರುಣ್ ಅವನ ಗೆಳೆಯ. ನನಗೆ ಯಾಕೋ ಹೊಟ್ಟೆಯಲ್ಲೆಲ್ಲಾ ಸಂಕಟ ಆಯ್ತು, ನಾಲ್ಕನೆ ಕ್ಲಾಸ್ ಮಕ್ಕಳು ಅವು, ಈಗಿನ್ನೂ ಪರೀಕ್ಷೆ ಅನ್ನೋದು ಶುರು ಆಗ್ತಾ ಇದೆ, ಆ ಮಗು ಫಸ್ಟ್ ಬರದೆ ಇದ್ದರೆ ಏಟು ತಿನ್ನುತ್ತೆ ಅಂದ್ರೆ ಏನನ್ನಲಿ..?’, ಸಂಕಟ ನನಗೂ ಆಗುತ್ತಿತ್ತು, ಆದರೆ ಆ ಘಳಿಗೆ ಹೋಗಿ ’ನಾನು ಸೆಕೆಂಡ್ ಬರ್ಬೇಕು’ ಅಂತ ಅಂದ ಕಂದನ ಅಮ್ಮನನ್ನು ತಬ್ಬಿಕೊಳ್ಳಬೇಕು ಅನ್ನಿಸಿತ್ತು.
ಪರೀಕ್ಷೆಯ ಸೀಜನ್ ನಡೀತಾ ಇದೆ, ಟಿವಿಗಳಿಗೀಗ ಕಡ್ಡಾಯ ರಜ, ಸ್ನೇಹಿತ ವಿದ್ಯಾಶಂಕರ್ ಒಂದು ಕವಿತೆ ಬರೆದಿದ್ದರು,
ಆಟದ ಮೈದಾನಗಳೆಲ್ಲ ಬಣಬಣ
ಜೋಕಾಲಿ, ಜಾರುಬಂಡೆ, ಸೀಸಾ,
ಬ್ಯಾಟು, ಬಾಲು…
ಎಲ್ಲವಕ್ಕೂ ಅನಾಥ ಪ್ರಜ್ಞೆ…
ಪಾರ್ಕಿನಲಿ ಹೂಗಳು ಅರಳುತ್ತಲೇ ಇಲ್ಲ
ಚಿಟ್ಟೆಗಳಿಗೆ ಅಜ್ಞಾತವಾಸ…
ಈ ಹೊಸ ಸನ್ನಿವೇಶಕೆ,
ಆಗಸದಲ್ಲಿನ ಸೂರ್ಯನು ಕಕ್ಕಾಬಿಕ್ಕಿ
ಹಕ್ಕಿಗಳಿಗೀಗ ಹಾಡು ಮರೆತು ಹೋಗಿದೆ
ಗಾಳಿಗೂ ದುಃಖದಿ ಉಬ್ಬಸ…
ಮಕ್ಕಳ ಕಾಲ್ತುಳಿತವಿಲ್ಲದೆ ಭೂತಾಯಿಗೆ ಸಂಕಟ

ತಾತ ಅಜ್ಜಿಯರು ಪೆಚ್ಚಾಗಿದ್ದಾರೆ
ತಂದೆತಾಯಿಂದಿರು ಆತಂಕದಲ್ಲಿದ್ದಾರೆ…
ಪುಟ್ಟ ಮಕ್ಕಳ ಚಿತ್ರವಿಚಿತ್ರ ಬೇಡಿಕೆಗಳಿಂದ
ದೇವರು ಕೂಡ ಕಂಗಾಲು
(ನಾಳೆ ಸೂರ್ಯ ಹುಟ್ಟುವುದೇ ಬೇಡ!
ಕ್ಯಾಲೆಂಡರ್ ಒಂದು ವಾರ ಜಂಪ್ ಮಾಡಲಿ!
ಮ್ಯಾಜಿಕ್ ವಿದ್ಯೆಗೆ ಬೇಡಿಕೆ,
ಓದಿದಷ್ಟೇ ಪರೀಕ್ಷೆಯಲಿ ಕೇಳಲಿ!
ಕರೆಂಟ್ ಹೋಗಲಿ, ಹೋಗುವುದು ಬೇಡ
ಇತ್ಯಾದಿ ಇತ್ಯಾದಿ)
ಎಲ್ಲರ ಮನೆಯಲ್ಲಿಯೂ ಅದೇ ಕಥೆ, ಅದೇ ಹಾಡು. ಮಕ್ಕಳು ಓದುವ ಕಾಲದಲ್ಲಿ ಚೆನ್ನಾಗಿ ಓದಬೇಕು, ಸರಿ. ಓದು ಅವರ ಮುಂದಿನ ಜೀವನವನ್ನು ನಿರ್ಧರಿಸುತ್ತದೆ, ಅದೂ ಸರಿ. ಆದರೆ ಓದು ಎನ್ನುವುದನ್ನು ಕೇವಲ ಮೊದಲ ಸ್ಥಾನಕ್ಕೇ ಸೀಮಿತಗೊಳಿಸುತ್ತೀವಲ್ಲ, ಇದು ಎಷ್ಟರ ಮಟ್ಟಿಗೆ ಸರಿ?
ನಾವು ಓದುವಾಗ ಸ್ಪರ್ಧೆ ಇಷ್ಟು ಭೀಕರ ಆಗಿರಲಿಲ್ಲ, ಬಹುಶಃ ಅದಕ್ಕೇ ಇರಬೇಕು ’ಹೋಗು ಓದ್ಕೋ’ ಮಾತುಗಳನ್ನು ನಾವು ಅಷ್ಟಾಗಿ ಕೇಳಿಲ್ಲ, ನಮ್ಮ ಪರೀಕ್ಷೆಗಳಿಗೆ ಅಪ್ಪ – ಅಮ್ಮ ನಿದ್ದೆ ಕೆಟ್ಟಿರಲಿಲ್ಲ, ’ಅದೆಷ್ಟು ಅಂತ ಓದ್ತೀಯಾ, ಸಾಕು ಮಲ್ಕೋ, ತಲೆ ನೋವು ಬರೋಲ್ವ’ ಅಂತ ಅನ್ನುತ್ತಿದ್ದ ದೇವತೆಯಂತಹ ಅಮ್ಮ, ೭ನೇ ತರಗತಿ ಪರೀಕ್ಷೆ ಹಿಂದಿನ ದಿನ ಸೆಕೆಂಡ್ ಶೋ ಗೆ ಕರೆದುಕೊಂಡು ಹೋಗಿದ್ದ ಅಪ್ಪ, ಆದರೂ ನನಗೆ ಒಳ್ಳೇ ಅಂಕಗಳೇ ಬಂದಿದ್ದ ನೆನಪು!
ನಿಜ ಆಗ ಎಸ್ ಎಲ್ ಸಿ ಯಲ್ಲಿ ೭೫ % ಬಂದರೆ ಅದು ತಾಲೂಕಿಗೆ ಹೈಎಸ್ಟ್. ಈಗ ಹಾಗಲ್ಲ, ೯೦ % ಅಂದರೂ ಕೂಡ ಅದು ನಿನ್ನ ತರಗತಿಯ ೯೦% ಗಳಲ್ಲಿ ನೀನೆಷ್ಟನೆಯ ಸ್ಥಾನದಲ್ಲಿದ್ದೀಯ ಎಂದು ಕೇಳಬೇಕು. ಹಾಗಾಗಿರುವಾಗ ಓದದಿದ್ದರೆ ಹೇಗೆ ಎನ್ನುವ ಮಕ್ಕಳ ಅಪ್ಪ ಅಮ್ಮಂದಿರ ಕಳವಳಕ್ಕೂ ಅರ್ಥ ಇದೆ.
ಆದರೆ ಪ್ರತಿಯೊಬ್ಬರಿಗೂ ಒಂದು ಶಕ್ತಿ, ಒಂದು ಮಿತಿ ಅಂತ ಇರುತ್ತದೆ ಅಲ್ಲವಾ? ಅದರಾಚೆಗೆ ಒತ್ತಡ ಹಾಕುತ್ತಾ ಹೋದರೆ ಎಷ್ಟು ತಾಳಬಹುದು ಮಕ್ಕಳು. ’ನೀವು ಮಕ್ಕಳನ್ನು ಬೆಳೆಸುತ್ತಿದ್ದೀರಾ ಅಥವಾ ರೇಸ್ ಕುದುರೆಗಳನ್ನು ತರಬೇತು ಮಾಡ್ತಾ ಇದ್ದೀರ’ ಅಂತ ’ತಾರೆ ಜಮೀನ್ ಪರ್’ ಚಿತ್ರದಲ್ಲಿ ಅಮೀರ್ ಖಾನ್ ಕೇಳಿದಾಗ ಅದೊಂದು ಚಿತ್ರದ ಸಂಭಾಷಣೆ ಅಷ್ಟೇ ಅನ್ನಿಸಿರಲಿಲ್ಲ ನನಗೆ. ಅದು ತುಂಬಾ ಗಂಭೀರವಾದ ಸಮಸ್ಯೆ ಅನ್ನಿಸಿತ್ತು.
ಆಮೇಲೆ ಓದಿದ ಹಲವಾರು ಸಂಗತಿಗಳು ಆ ಸಮಸ್ಯೆಯ ಆಳವನ್ನು ಬಿಚ್ಚಿಟ್ಟವು, ಮಕ್ಕಳ ಮಿದುಳನ್ನು ಉದ್ದೀಪಿಸುವ ಟಾನಿಕ್ ಗಳು, ಮಿಲ್ಕ್ ಪೌಡರ್ ಗಳು ಇವೆ, ಅಷ್ಟೇ ಅಲ್ಲ ಸ್ವಲ್ಪ ಮುಂದುವರಿದರೆ ಮುಂದಿನ ದಿನಗಳಲ್ಲಿ ನಿದ್ದೆ ಬಾರದಂತೆ ತಡೆಯುವ ಮಾತ್ರೆಗಳಿವೆ, ನೆನಪಿನ ಶಕ್ತಿ ತೀವ್ರವಾಗಿಸುವ, ಗ್ರಹಿಕೆಯನ್ನು ತೀಕ್ಷ್ಣವಾಗಿಸುವ ಔಷಧಿಗಳಿವೆ, ಅಮೀರ್ ಹೇಳಿದ್ದು ನಿಜ, ’ರೇಸ್ ಕುದುರೆಗಳನ್ನು ತಯಾರು ಮಾಡ ಬಯಸುತ್ತಿದ್ದೇವಾ ನಾವು?’. ಐಕ್ಯೂ ಮುಂದೆ ಇಕ್ಯೂ ಎರಡನೆಯ ಸ್ಥಾನ ಪಡೆದುಕೊಳ್ಳುತ್ತಿದೆಯಾ? ಮಕ್ಕಳ ಇಂಟಲಿಜೆಂಟ್ ಕೋಶಂಟ್ ಬೆಳೆಸುವತ್ತ ಪೂರ್ಣ ಗಮನ ಹರಿಸುವ ನಾವು ಅವರ ಎಮೋಶನಲ್ ಕೋಶಂಟ್ ಬೆಳೆಸುವುದನ್ನು ನಿರ್ಲಕ್ಷಿಸುತ್ತಾ ಇದ್ದೇವಾ?
ನನ್ನ ಪರಿಚಿತರ ಮನೆಯಲ್ಲಿ ಮಗ ಓದಲಿ ಎನ್ನುವ ಒಂದೇ ಹಂಬಲದಿಂದ ೬ ನೇ ತರಗತಿಯ ಹುಡುಗನಿಗೆ ಪ್ರತಿ ಭಾನುವಾರ ಬೆಳಗ್ಗೆ ೯ರಿಂದ ಸಂಜೆ ೭ ರವರೆಗೆ ಓರಿಯೆಂಟೇಶನ್ ಕ್ಲಾಸ್, ಓದುವುದು ಹೇಗೆ, ನೆನಪಿಟ್ಟುಕೊಳ್ಳುವುದು ಹೇಗೆ, ಅದನ್ನು ಬರೆಯುವುದು ಹೇಗೆ. ಇರಲಿ ಎಲ್ಲಾ ಒಳ್ಳೆಯದೇ, ಆದರೆ ಆ ಹುಡುಗನ ನೋಡಿದರೆ ಸಂಕಟ ಆಗೋದು ಪಾಪ ಅವನ ಅಪ್ಪ ಅಮ್ಮಂದಿರು ಅವನ ಬಾಲ್ಯವನ್ನು ತಾವು ಬದುಕುವ, ನಿರ್ದೇಶಿಸುವ ಕಳಕಳಿಯಲ್ಲಿ ಅವನಿಂದ ಅವನ ಬಾಲ್ಯವನ್ನು ಕಿತ್ತುಕೊಂಡುಬಿಟ್ಟರಲ್ಲಾ ಅಂತ, ಅವನ ನಾಳೆ ಹೇಗಿರುತ್ತದೋ ನನಗೆ ಗೊತ್ತಿಲ್ಲ, ಆದರೆ ಅವನ ’ಇಂದು’ ಮಾತ್ರ ನರಕವಾಗಿದೆ. ನಿಮಿಷಕ್ಕೆ ನೂರು ಮಾತು ಆಡುತ್ತಿದ್ದ ಹುಡುಗ ಈಗ ಮಾತಿಗೇ ಸಿಗುತ್ತಿಲ್ಲ. ಅವನ ಬಾಯಲ್ಲಿ ಈಗ ಚೆನ್ನೈ ಗೆ ಹೋಗಿ, ಅಲ್ಲಿ ಕೋಚಿಂಗ್ ತೆಗೆದುಕೊಂಡು, ಅಲ್ಲೇ ಐ ಐ ಟಿ ಸೇರುವುದೇ ಮಾತು.
ಇನ್ನೇನು ಪರೀಕ್ಷೆ ಮುಗಿಯುತ್ತದೆ, ಫಲಿತಾಂಶ ಬರುತ್ತದೆ, ಆಮೇಲೇನಿದೆ, ಪೇಪರ್ ನಲ್ಲಿ, ಟಿವಿಯಲ್ಲಿ ಮುಂದಿನ ಪುಟಗಳಲ್ಲಿ rank ಪಡೆದ ವಿದ್ಯಾರ್ಥಿಗಳ ಫೋಟೋ ಬರುತ್ತದೆ, ಒಳಗಿನ ಪುಟಗಳಲ್ಲಿ ಈ ರೇಸಿನಲ್ಲಿ ಸೋತವರ ಹೆಸರು, ಊರು ಕಪ್ಪು ಅಕ್ಷರಗಳಲ್ಲಿರುತ್ತದೆ. ಪೇಪರ್ ನೋಡಲು ಸಂಕಟವಾಗುತ್ತದೆ ನನಗೆ.
ಮಕ್ಕಳು ಗೆಲ್ಲಬೇಕು, ಮುಂದೆ ನುಗ್ಗಬೇಕು, ನಮಗಿಂತ ಒಳ್ಳೆಯ ಜೀವನ ಪಡೆಯಬೇಕು, ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಹಾಗೆ ಇನ್ನೊಂದು ಜವಾಬ್ದಾರಿಯೂ ಇದೆ, ಮಕ್ಕಳು ನಮ್ಮ ಟ್ರೋಫಿಗಳಲ್ಲ ಎಂದು ಅರ್ಥ ಮಾಡಿಕೊಳ್ಳುವ ಜವಾಬ್ದಾರಿ. ಮಕ್ಕಳು ಗೆಲ್ಲಲು ಪ್ರೇರೇಪಿಸೋಣ, ಆದರೆ ಸೋತರೂ ನಾವು ಜತೆಗಿರುತ್ತೇವೆ ಎನ್ನುವ ನಂಬಿಕೆಯನ್ನು ಅವರಿಗೆ ಕೊಡೋಣ. ಜೀವನ ಆ ಸೋಲಿಗಿಂತ ದೊಡ್ಡದು ಎನ್ನುವುದನ್ನು ಮೊದಲು ಕಲಿಸೋಣ.
ಫ಼ಸ್ಟ್ rank ಬರೋ ಹುಡುಗ ಅಷ್ಟೇ ಅಲ್ಲ, ತರುಣ್ ಗಾಗಿ ಸೆಕೆಂಡ್ rank ಬರ್ತೀನಿ ಅನ್ನುವು ಪುಟಾಣಿ ಸಹ ನಮ್ಮ ಕಣ್ಣಿಗೆ ಹೀರೋ ಥರ ಕಾಣಲಿ…
ಸಂಧ್ಯಾರಾಣಿ ಕಾಲಂ : ’ನಾನು ಸೆಕೆಂಡ್ rank ಬರ್ತೀನಿ ಮ್ಯಾಮ್’
ನಿಮಗೆ ಇವೂ ಇಷ್ಟವಾಗಬಹುದು…

This is a very delicate issue. Every parent insists his/her son/daughter to be first in the class, but none of them desire that the kids must be kids first and humane. We promote mugging up, we don’t wish the kids to understand the subject. Yes, we are making our kids race horses. Let us all think over the issue.
ಸಂಧ್ಯಾ ಮ್ಯಾಮ್. ನನ್ನ ಮಗನಿಗೆ ಮಂಗನ ಬಾವು. ಆತನ ಪರೀಕ್ಷೆ ಪ್ರಾರಂಭವಾಗಿದೆ. ಆತ ಹಾಯಾಗಿ ಮನೆಯಲ್ಲಿ ಮಲಗಿದ್ದಾನೆ. ನಂಬರ್,ಅಂಕ ಏನೂ ಗೊತ್ತಿಲ್ಲದೇ. ಆದರೆ ಅತನ ಆತಂಕ ಒಂದೇ. ಈಗ ಆರು ತುಂಬಿರುವ ಆತನನ್ನು ಮತ್ತೆ ಒಂದನೇ ತರಗತಿಗೆ ರಪೀಟ್ ಮಾಡಿಸಬೇಕು ಅಂತಿರುವ ಅಮ್ಮ ಹಾಗೆಯೇ ಮಾಡಿಬಿಟ್ಟರೆ….!! ನಿಮ್ಮ ಅಂಕಣ ಓದಿದಾಗ ನೆನಪಾಗಿದ್ದು ಅದೇ. ಅದರ ಮೇಲೊಂದು ಲೇಖನ ಬರೆದೆ. ಕಳಿಸುವೆ.
chennagide sandhya…parikseya jwardalli beeyuthiruva makkalige hagu poshakarige katu satyada arivu muudisiddiri.
ಬದುಕಿನ ಅವಶ್ಯಕತೆಗಳಿಗಿಂತ ಅವಶ್ಯಕತೆಗಳಿಗಾಗಿಯೇ ಬದುಕುವ ಕಾಲದಲ್ಲಿ ಸೋಲುತ್ತಿರುವುದು ಮಕ್ಕಳ ಖುಷಿಗಳು… ಅರ್ಥವಾಗುವ ಕಾಲ ಬಂದಾಗ ಮಕ್ಕಳು ಮಕ್ಕಳಾಗಿರುವುದಿಲ್ಲ…
ಎಂದಿನಂತೆ ಬರಹ ಇಷ್ಟವಾಯಿತು.
ನಾವು ಶಾಲೆಗೆ ಹೋಗುವಾಗಿನ ದಿನಗಳೇ ಚೆನ್ನಾಗಿದ್ದವು. ಎಂಟನೇ ಕ್ಲಾಸಿನಲ್ಲಿ ನನ್ನನ್ನು ಇಂಗ್ಲಿಷ್ ಗ್ರಾಮರ್ ಟ್ಯೂಷನ್ಗೆ ಸೇರಿಸಿದ್ದರು. ಆಮೇಲೆ ಅಪ್ಪ ನಿನಗೆ ಟ್ಯೂಷನ್ ಹೋಗೋದು ಕಷ್ಟ ಅನಿಸಿದ್ರೆ ಹೋಗ್ಬೇಡ ಅಂತ ಹೇಳಿ ಬಿಟ್ರು…ಆಮೇಲೆ ಟ್ಯೂಷನ್ ಸೆಂಟರ್ನತ್ತ ತಿರುಗಿ ನೋಡಿಲ್ಲ.
ನಮ್ಮೂರಲ್ಲಿ ಟ್ಯೂಷನ್ ಹೋಗೋದು ಅಂದ್ರೆ ನಿನಗೆ ಕಮ್ಮಿ ಮಾರ್ಕ್ಸ್ ಬಂತಾ? ಅಂತ ಕೇಳುತ್ತಿದ್ದರು..ಆದ್ರೆ ಇಲ್ಲಿ ಎಲ್ಲ ಮಕ್ಕಳು ಬೆಳಗ್ಗೆ, ಸಂಜೆ ಟ್ಯೂಷನ್ನಲ್ಲೇ ಕಳೆಯುವಾಗ ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತು ಅಂತ ಅನಿಸುತ್ತಿದೆ. ಸುಂದರ ಬರಹ..
ಚೆನ್ನಾಗಿದೆ, ಓಡುವ ಭರದಲ್ಲಿ ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನೆ ಮರೆತಿದ್ದೇವೆ ಅನ್ನಿಸುತ್ತದೆ.
Is the problem and solution so utopic as thought? It is much much deep rooted. Reservations are narrowing the path for large numbers. Forget educational institutes, every competitive examination looks at marks. Children miss seats in 0.1 marks! Which entrance exam in India looks at the overall personality of a student for enrollment into a course? Even if there is such option, it is after the first round, which is decided again by marks. No parent wishes to steal anything from children. When the Government and our education system builds race-courses instead of academic environment, the children will be trained as racehorses. Otherwise, they will be misfit. Getting a degree with reasonable high scores has higher probability of getting into a job than going out of the way and speculating on a career. It is not enough to give a couple of random examples of people who have gone out of the conventional path and have obtained success. One needs more scientific data to convince the masses. This is a quagmire of Catch-22; there is no beginning or end to it. Articles on humane approach can get some positive replies, but does not change the ground reality even by a gram! We definitely need a solution, but how and where?
ಸಂಧ್ಯಾ ಅಕ್ಕಾ, ಇದು ಹೊಸದಲ್ಲ, ನಾನು ಚಿಕ್ಕವಳಿರುವಾಗ ಯಾವುದೋ ಜನರಲ್ ಸೈನ್ಸ್ ಕಾಂಪಿಟೇಷನ್ನಲ್ಲಿ ಕಾನ್ಸಲೇಷನ್ ಪ್ರೈಜ್ ಬಂತು ಅಂತ ತುಂಬ ಹಂಗಿಸಿಕೊಂಡಿದ್ದೆ, ಕಾರಣ ಆ ಹುಡುಗಿ ಭದ್ರಾವತಿಯವಳು, ನನ್ನೂರಿಗೆ ದಿನಾ ಪೇಪರು ಬರುತ್ತಿರಲಿಲ್ಲ.ಪಾಪ ನೆಂಟರ ಮನೆಗೆ ರಜೆಗೆ ಬಂದು ಹಳ್ಳಿ ಸ್ಕೂಲಿನ ಕಾಂಪಿಟಿಷನ್ನಲ್ಲಿ ಮೊದಲ ಬಹುಮಾನ ಪಡೆದ ಅವಳನ್ನು ನಾನೆಷ್ಟು ದ್ವೇಷಿಸಿದ್ದೆ ಅಂದ್ರೆ ಅವಳ ಫ್ರೆಂಡ್ಲೀ ಸ್ವಭಾವ, ನಮ್ಮೊಂದಿಗೆ ಬೆರೆಯಲು ಪ್ರಯತ್ನ ಪಡುತ್ತಿದ್ದಿದ್ದು ಯಾವುದೂ ಕಾಣಿಸುತ್ತಿರಲಿಲ್ಲ..ಕ್ಲಾಸಲ್ಲಿ ಫಸ್ಟ್ ಬರಲೇಬೇಕು, ಗಣಿತದಲ್ಲಿ ನೂರಕ್ಕೆ ನೂರೇ ತೆಗೆಯಬೇಕು ಅನ್ನುವ ಸ್ಟುಪಿಡ್ ಒತ್ತಡಗಳು, ಭಾಗವಹಿಸುವ ಪ್ರತಿ ಸ್ಪರ್ಧೆಯಲ್ಲೂ ಮೊದಲ ಸ್ಥಾನ ಗಳಿಸಬೇಕು ಅನ್ನುವ ಪೋಷಕರ ಸ್ವಭಾವದಿಂದ ಓದು, ಕರಿಯರ್ ಎಲ್ಲವುದರ ಮೇಲೂ ದ್ವೇಷ ಶುರುವಾಗಿತ್ತು. i hate all those parents who create such pressure in young minds. ಧಿಕ್ಕಾರವಿರಲಿ ಇಂತಹ ಪೋಷಕರಿಗೆ.
Nanage nanna meshtrugalu sikkaga “Yenu neevu manele iddira. Yaake” yendaaga ondishtu novaaguttiralilla. Nanna makkalu indu Hamsageete, Shikari, abachoorina post office, parva muntaada aneka krutigalannu preetiyinda oduvaaga naanu maneyalle iruva bagge tegedukonda nirdhara saarthaka ennisuttade. Maneya pakkadalle iruva Jayanagar Library nannannendoo summane kulitiddene ennuvante maadilla. Sannavalinda I rank baruttidda naanu indu I rank kaapaadikondiddene Nanna maneyalli, nannavara manadalli. Thanks Sandhya. article nanna mana muttitu.
It is really parental choice how to offer learning experiences and opportunities to their children. Their choices and decision reflect their values, beliefs and attitudes towards life too. We send our children to a democratic community school where they are free to participate in their learning, where they decide in how many different ways they can learn to explore their world, creating their own knowledge base and their worldview. We parents are facilitators of their lifelong journey.
ಇದೊಂದು ಅಂತ್ಯಂತ ನೋವಿನ ಸಂಗತಿ . ನನ್ನ ಮಗಳ ಶಾಲೆಯಲ್ಲಿ ಇದುವರೆಗೂ ಹೆಚ್ಚಿನ ಒತ್ತಡವೇನೂ ಇರಲಿಲ್ಲ. ಈ ವರ್ಷ ಅವಳು ಒಂಬತ್ತನೇ ತರಗತಿಗೆ ಬಂದ ನಂತರ ನಿಧಾನವಾಗಿ ಶುರು ಆಗ್ತಿದೆ , ಹೀಗೆ ಓದಿ ಹಾಗೆ ಓದಿ ಎನ್ನುವ ಒತ್ತಡಗಳು , ಬೇಸಿಗೆ ರಜೆಯಲ್ಲೇ ಸ್ಪೆಷಲ್ ಕ್ಲಾಸುಗಳು , ಟ್ಯೂಷನ್ನುಗಳು….ಪೋಷಕರಿಗೂ ಅದೇ ಬೇಕಾಗಿದೆ . ಅರ್ಧ ಮಾರ್ಕ್ ಕಡಿಮೆಯಾಗಿದೆ ಎಂದು ಸರಿಪಡಿಸಿಕೊಳ್ಳಲು ಟೀಚರ್ ಬಳಿ ಬರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಮಗಳ ಗೆಳತಿಯೊಬ್ಬಳು ಕ್ಲಾಸ್ ಟೆಸ್ಟ್ ಗಳಲ್ಲಿ ೨೫ ಕ್ಕೆ ೨೪ ಬಂದರೂ ಅಳುತ್ತಾಳಂತೆ ಅಮ್ಮ ಬೈತಾರೆ ಅಂತ , ಇಂತದ್ದನ್ನು ಕೇಳಿದಾಗ ಸಂಕಟವಾಗುತ್ತದೆ.ಎಲ್ಲ ಉತ್ತರಗಳನ್ನೂ ಬಾಯಿಪಾಠ ಮಾಡಿ ಟೀಚರ್ ಬರೆಸಿದಂತೆಯೇ ಬರೆದು , ೧೦೦ ಕ್ಕೆ ೧೦೦ ಅಂಕ ಗಳಿಸುವಂತೆ ಉಪದೇಶಿಸುವವರೇ ಹೆಚ್ಚು. ಆ ಮಕ್ಕಳಿಗೆ ವಿಷಯ ಎಷ್ಟು ಅರ್ಥವಾಗಿದೆ ಎಂಬುದು ಬೇಕಾಗಿಯೆ ಇಲ್ಲ.
ಸಂಧ್ಯಾ ನನ್ನ ಗೆಳತಿಯೊಬ್ಬಳ ಗೆಳತಿಯ ಕಥೆ ಕೇಳು … ಮಗುವಿಗೆ ಹೊಟ್ಟೆ ಪೂರಾ ಊಟ ಹಾಕಿದರೆ ನಿದ್ರೆ ಬಂದುಬಿಡುತ್ತೆ ಅನ್ನುವ ಕಾರಣಕ್ಕೆ ಮಗನಿಗೆ ಅರೆ ಹೊಟ್ಟೆ ಮಾತ್ರ ಊಟ ಹಾಕ್ತಾಳಂತೆ. ಕೇಳಿ ಸಂಕಟವಾಗಿ ಹೋಗಿತ್ತು …
Bharathi, ಆ ಕ್ರೂರಿಯನ್ನು ಹುಡುಕಿ ತಂದು ಒಂದಷ್ಟು ದಿನ ಪೂರ ುಪವಾಸ ಕೆಡವಿ ಎರಡೇಟು ಹಾಕಿ ಬಿಡ್ಬೇಕು ನೋಡು. ಅಂಥವಳಿಗೆ ಅಮ್ಮ ಎಂಬ ಹೆಸರಾ ?
super Sandhyaa…
i agree 110% on this ಮಕ್ಕಳು ನಮ್ಮ ಟ್ರೋಫಿಗಳಲ್ಲ ಎಂದು ಅರ್ಥ ಮಾಡಿಕೊಳ್ಳುವ ಜವಾಬ್ದಾರಿ.
ಮಕ್ಕಳು ಗೆಲ್ಲಬೇಕು, ಮುಂದೆ ನುಗ್ಗಬೇಕು, ನಮಗಿಂತ ಒಳ್ಳೆಯ ಜೀವನ ಪಡೆಯಬೇಕು, ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಹಾಗೆ ಇನ್ನೊಂದು ಜವಾಬ್ದಾರಿಯೂ ಇದೆ, ಮಕ್ಕಳು ನಮ್ಮ ಟ್ರೋಫಿಗಳಲ್ಲ ಎಂದು ಅರ್ಥ ಮಾಡಿಕೊಳ್ಳುವ ಜವಾಬ್ದಾರಿ. ಮಕ್ಕಳು ಗೆಲ್ಲಲು ಪ್ರೇರೇಪಿಸೋಣ, ಆದರೆ ಸೋತರೂ ನಾವು ಜತೆಗಿರುತ್ತೇವೆ ಎನ್ನುವ ನಂಬಿಕೆಯನ್ನು ಅವರಿಗೆ ಕೊಡೋಣ. ಜೀವನ ಆ ಸೋಲಿಗಿಂತ ದೊಡ್ಡದು ಎನ್ನುವುದನ್ನು ಮೊದಲು ಕಲಿಸೋಣ.
so true.. i will try my level best to keep this always first.
ನೂರಕ್ಕೆ ನೂರು ಸತ್ಯವಿದು -ವೇದನೆಯೆಂದರೆ ನಾವೆ ಗೊತ್ತಿದ್ದು ಗೊತ್ತಿದ್ದು ನಮ್ಮದೆ ಮಕ್ಕಳನ್ನು ಈ ಖೆಡ್ಡಾಕ್ಕೆ ಕೆಡವುತ್ತಿದ್ದೆವೆ-ಕೆಡವಿಯಾದ ಮೇಲೆ ಹಗ್ಗ ಎಸೆಯುವ ಜಾಣರೂ ನಾವೆ.
-Anil
Hats off Sandhya madam.
You have written a wonderful article, which analyses the mind of the childre and an eye opener to parents.
ಚೆಂದದ ರೈಟಪ್ ಸಂಧ್ಯಕ್ಕ. ಈ ಥರ ಓಡಿಸುವ ಅಪ್ಪ-ಅಮ್ಮಂದಿರನ್ನ ನೋಡಿದ್ದೇನೆ, ಆ ಮಕ್ಕಳ ತೊಳಲಾಟಗಳನ್ನು ನೋಡಿದ್ದೇನೆ ಅದೆಲ್ಲವೂ ಸಾಲದೆಂಬಂತೆ ಇಂಥ ಓಡುವಿಕೆಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನೂ ನೋಡಿದ್ದೇನೆ. ಆ ನಂತರವೇ ಈ ಸೀರಿಯಸ್ ನೆಸ್ ಮತ್ತು ಓಡುವಿಕೆಯ ಕರಾಳತೆಯ ಅರಿವಾಯ್ತು! ಬದುಕು ಕಟ್ಟಿಕೊಳ್ಳುವ ಬದಲು ಯಂತ್ರಗಳಾಗುತ್ತಿದ್ದೇವೆ, ರೇಸ್ ಕುದುರೆಗಳಾಗುತ್ತಿದ್ದೇವೆ ಎನ್ನಿಸಿ ಭಯವಾಗುತ್ತೆ. ಯಾವ ಪೇರೆಂಟ್ಸ್ ಆಗಲಿ ಈ ರೀತಿಯ ಓಡುವಿಕೆಗೆ ತಮ್ಮ ಮಕ್ಕಳನ್ನ ಅಣಿಗೊಳಿಸುವ ಮೊದಲು ಅವುಗಳಿಗೆ ಬದುಕನ್ನು ಅರಿತುಕೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು! ಯಾರು ಎಂಥದೇ Rank ಗಳಿಸಿದರೂ ಬದುಕಿನಲ್ಲಿ ತೇರ್ಗಡೆಯಾಗಲಿಲ್ಲ ಎಂದಮೇಲೆ ಏನು ಬಂತು ಭಾಗ್ಯ?!
– ಪ್ರಸಾದ್.ಡಿ.ವಿ.
2 ne rank barteeni anno maguge muttu kodbeku anistide.makkalige moulya mukhya.marksgalalla.
ಮನಮುಟ್ಟುವ ಬರಹ. ಆದರೆ ಇದನ್ನು ಓದುವ ವ್ಯವಧಾನ ಪಾಲಕರಿಗೆ ಇದೆಯೇ?
OhohO….I am not one such god mother….My parents never treated me like a horse, hence I treat my kids as ‘ pieces of divinity’…. Good one Sandy 🙂
ಅಂಜಲಿ, million, trillion loads of Loves to you….
ಸಂವೇದನೆಗಳಿಗೆ ಬೆಲೆಕೊಡದ ,ದೈಹಿಕ ಮಾನಸಿಕ ಆರೋಗ್ಯಕ್ಕೂ ಲೆಕ್ಕಿಸದ, ಸಂಬಂಧಗಳನ್ನು ಗಾಳಿಗೆ ತೂರುವನ್ತ ಪರಿಸ್ತಿತಿ ನಿರ್ಮಾಣ ಮಾಡುವ ಇಂದಿನ ಶಿಕ್ಷಣ ವ್ಯವಸ್ಥೆ .. ಬರೀ ದೊಡ್ಡವರಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಯಂತ್ರದಂತೆ ದುಡಿದು.. ಲಕ್ಷಗಳ ಲೆಕ್ಕದಲ್ಲಿ ಹಣಗಳಿಸುವುದೇ ಮೂಲ ಉದ್ದೇಶ ಅನ್ನುವಂತೆ ತರಬೇತಿ ಕೊಡುತ್ತಾ ಬಂದಿದೆ.. ಅದೇ ಹಳ್ಳಕ್ಕೆ ಪೋಷಕರು ಕುರಿಯಂತೆ ಬೀಳುತ್ತಿರುವುದು ದೊಡ್ಡ ವಿಷಾದ.. ಯಾಕೋ ಈ ಸಂಗತಿ ನೆನೆಸಿಕೊಂಡಾಗಲೆಲ್ಲಾ ಕೈಲಾಸಂ ರವರ ‘ಮಕ್ಕಳ ಇಸ್ಕೂಲ್ ಮನೇಲಲ್ವೇ’ ನಾಟಕದ ತಿರುಳು ಮನಸ್ಸನ್ನು ಆವರಿಸುತ್ತದೆ.
ಯಾವುದೇ ಒಂದು ಸಮಸ್ಯೆಗೂ ಎರಡು ಮುಖಗಳಿರುತ್ತವೆ. ಮಕ್ಕಳನ್ನು ರೇಸ್ ಕುದುರೆಗಳ ರೀತಿ ನೋಡಬಾರದು/ಮಾಡಬಾರದು ಎನ್ನುವುದೂ ಸಹ ಅದೇ ರೀತಿ. ಒಂದು ವೇಳೆ ತಂದೆ-ತಾಯಿಗಳ ಈ ‘ತಾತ್ವಿಕ’ ಅಂಶಗಳು ಕೈ ಕೊಟ್ಟು ಮಕ್ಕಳಿಗೆ ಒಂದು ಕೆಲಸ ಸಿಗದೇ ಒದ್ದಾಡುವಂತಾದರೆ ಅಥವಾ ಅದರಿಂದ ಅವರು ಬೇರೆ ಬೇರೆ ರೀತಿಯ ಸಮಾಜ ವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡರೆ ಏನು ಮಾಡುವುದು? ಅವರು ಸಾತ್ವಿಕರಾಗೇ ಇದ್ದರೂ ಸಹ ಕೆಲಸ ಸಿಗದಿದ್ದರೆ ಏನು ಮಾಡುವುದು?ಅಪ್ಪ ಅಮ್ಮ ಎಷ್ಟು ದಿನ ಅವರ ಜತೆ ಇರಲು ಸಾಧ್ಯ? ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಒಂದು ಕೆಲಸ ಇದ್ದರೆ ಅವರಿಗೊಂದು ರೀತಿ ಭದ್ರತೆ ಮತ್ತು ರಕ್ಷಣೆ ಸಿಕ್ಕಂತೆ. ಇದನ್ನು ಮರೆಯಬಾರದಲ್ಲವೇ?
Taare zameen par cinema matte matte ide kaaranakke nodbeku.
Odu annodu kalikege aagade competition aagirode dodda himse. Adu olagondu krouryavanna huttuhaaktide.
ಮಕ್ಕಳು ಗೆಲ್ಲಲು ಪ್ರೇರೇಪಿಸೋಣ, ಆದರೆ ಸೋತರೂ ನಾವು ಜತೆಗಿರುತ್ತೇವೆ ಎನ್ನುವ ನಂಬಿಕೆಯನ್ನು ಅವರಿಗೆ ಕೊಡೋಣ.
ಜೀವನ ಆ ಸೋಲಿಗಿಂತ ದೊಡ್ಡದು ಎನ್ನುವುದನ್ನು ಮೊದಲು ಕಲಿಸೋಣ.
ಫ಼ಸ್ಟ್ rank ಬರೋ ಹುಡುಗ ಅಷ್ಟೇ ಅಲ್ಲ, ತರುಣ್ ಗಾಗಿ ಸೆಕೆಂಡ್ rank ಬರ್ತೀನಿ ಅನ್ನುವು ಪುಟಾಣಿ ಸಹ ನಮ್ಮ ಕಣ್ಣಿಗೆ ಹೀರೋ ಥರ ಕಾಣಲಿ…
wow ….
what a thought
ತರುಣ್ ಗಾಗಿ ಸೆಕೆಂಡ್ rank ಬರ್ತೀನಿ ಅನ್ನುವು ಪುಟಾಣಿ ಸಹ ನಮ್ಮ ಕಣ್ಣಿಗೆ ಹೀರೋ ಥರ ಕಾಣಲಿ… ಹಾಗಾದಾಗ ಮಾತ್ರ ಸೋತರೂ ನಾವು ಜತೆಗಿರುತ್ತೇವೆ ಎನ್ನುವ ನಂಬಿಕೆಯನ್ನು ಅವರಿಗೆ ಕೊಡಲು ಸಾಧ್ಯ; ಜೀವನ ಆ ಸೋಲಿಗಿಂತ ದೊಡ್ಡದು ಎನ್ನುವುದನ್ನು ಕಲಿಸಲು ಸಾಧ್ಯ.
ಮಗು ಸೆಕೆಂಡ್ ಬಂದರೆ ಅದು ತಮಗೂ ಅವಮಾನ, ಸೋಲು ಎಂಬಂತೆ ಭಾವಿಸಿ ಮಗುವನ್ನು ಹಿಂಸಿಸುವ ಎಲ್ಲ ಪೋಷಕರಿಗೂ ಬುದ್ಧಿ ಬರಲಿ.
ಇಂಥ First Rank ಹುಚ್ಚಿನ ಅಮ್ಮ ಅಲ್ಲದಿರುವದೇ ನನಗೆ ಹೆಮ್ಮೆ ನೋಡಾ 🙂