
“ನನ್ನ ದುಃಸ್ವಪ್ನದಂಥ ದಿನಗಳಲ್ಲಿ ನಾನು ನಿಧಾನಕ್ಕೆ integrity ಕಳೆದುಕೊಳ್ಳಬಹುದೆಂಬ ಭೀತಿ ಆವರಿಸುತ್ತಿತ್ತು… ನನ್ನ ಸಿಟ್ಟು ಬರೀ ವ್ಯಂಗ್ಯದಲ್ಲಿ ಮುಗಿಯುತ್ತಿತ್ತು. ನನ್ನ ನೋವಿನ ಮಾತುಗಳಿಗೆ ಜನ ತಮಾಷೆ ಎಂಬಂತೆ ನಗುತ್ತಿದ್ದರು, ಚಾಪ್ಲಿನ್ ನಿಧಾನಕ್ಕೆ ಚಾರ್ಲಿ ಆಗುತ್ತಿದ್ದ, ಇದೆಲ್ಲವನ್ನೂ ನಾನು ’ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕದಲ್ಲಿ ಬರೆದೆ”, ಎಂದು ಟಿ ಎನ್ ಸೀತಾರಾಂ ಅವರು ಈ ನಾಟಕದ ಬಗ್ಗೆ ಬರೆದಿದ್ದರು. ಈ ನಾಟಕ ಅವರು ಬರೆದದ್ದು ೨೫ ವರ್ಷಗಳ ಮೊದಲು. ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ಈ ನಾಟಕ ಸ್ವತಃ ತಾನೆ ತೆರೆಯ ಮರೆಗೆ ಸರಿದಿತ್ತು. ತೀರ ಇತ್ತೀಚಿಗಷ್ಟೇ ನಾಟಕದ ಮರು ಪ್ರದರ್ಶನಗಳು ಆರಂಭವಾಗಿದ್ದವು. ನೋಡಬೇಕು ಅಂದುಕೊಂಡರೂ ಸಾಧ್ಯವಾಗಿರಲಿಲ್ಲ, ಮೊನ್ನೆ ನಾಟಕ ಸಂಭ್ರಮದಲ್ಲಿ ನಾಟಕ ಪ್ರದರ್ಶನಗೊಂಡಾಗ ಅಂತೂ ಇಂತೂ ನಾಟಕ ನೋಡಿದೆ.
ನೋಡಿದೆ ಮತ್ತು ಒಂದು ಭಾರವಾದ ವಿಷಾದವನ್ನು ಹೆಗಲ ಮೇಲೆ ಹೊತ್ತು ಮನೆಗೆ ಮರಳಿದ್ದೆ. ಪ್ರತಿಯೊಂದು ಪ್ರದರ್ಶನ ಕಲೆಗೂ ಮತ್ತು ಅದು ರಚಿತಗೊಂಡ ಹಾಗು ಪ್ರದರ್ಶನಗೊಂಡ ಕಾಲಕ್ಕೂ ಒಂದು ಸಂಬಂಧವಿರುತ್ತದೆ. ಕಾಲ ಮೀರಿದ ಮೇಲೆ ಅದು obsolete ಆಗಿಬಿಡುತ್ತದೆ ಎನ್ನುತ್ತಾರೆ. ಚಲನ ಚಿತ್ರಗಳ ವಿಷಯದಲ್ಲಿ ಅದು ನಿಜವೂ ಇರಬಹುದು. ಆದರೆ ಈ ನಾಟಕದ ವಿಷಯದಲ್ಲಿ ಅದು ಸುಳ್ಳಾಗಿತ್ತು. ಆಗ ೨೫ ವರ್ಷಗಳ ಮೊದಲು ಈ ನಾಟಕ ಪ್ರದರ್ಶಿತಗೊಂಡಾಗ ಅದು ಉಂಟು ಮಾಡಿದ ಪರಿಣಾಮಗಳ ಬಗ್ಗೆ, ಸ್ಪೋಟಗೊಂಡ ತಲ್ಲಣಗಳ ಬಗ್ಗೆ ಕೇಳಿದ್ದೆ. ಆಮೇಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ನೈತಿಕ ಮೌಲ್ಯಗಳ ವಿಷಯದಲ್ಲೂ ಭಾರತದಲ್ಲಿ ಸುಮಾರು ಬದಲಾವಣೆಗಳಾಗಿವೆ. ಹೀಗಾಗಿ ಈಗ ಆ ನಾಟಕ ಅಷ್ಟೇ ಪರಿಣಾಮ ಉಂಟು ಮಾಡಬಹುದೇ ಎನ್ನುವ ಸಂದೇಹ ಸಹ ನನ್ನಲ್ಲಿತ್ತು. ಆದರೆ ವ್ಯವಸ್ಥೆಯ ಆ ಕ್ರೌರ್ಯ ಮತ್ತು ವ್ಯವಸ್ಥೆಯ ವಿರುದ್ಧ ಹೋರಾಡುವವರ ನಿಸ್ಸಹಾಯಕತೆ ಇಂದೂ ಹಾಗೇ ಇತ್ತು ಮತ್ತು ನಾಟಕ ಇಂದೂ ಪ್ರಸ್ತುತವಾಗಿತ್ತು.
ನನಗ್ಯಾಕೋ ಸಿದ್ಧಲಿಂಗಯ್ಯನವರ ಹಾಡಿನ ಸಾಲುಗಳು ನೆನಪಾದವು. ’ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ, ಗೋಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ, ಹಣವಂತರು ಕೈ ಸನ್ನೆ ಮಾಡಿದರೆ ಕತ್ತಲೆಯಲ್ಲೇ ಬೆತ್ತಲೆಯಾಯಿತು ನಲವತ್ತೇಳರ ಸ್ವಾತಂತ್ರ್ಯ… ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ…’.
ನಾಟಕ ನನ್ನನ್ನು ಆಳದಲ್ಲಿ ಕಲಕಿತ್ತು. ನನ್ನ ನಂಬಿಕೆಗಳನ್ನು ಮರುಪ್ರಶ್ನಿಸಿತ್ತು. “ನೈತಿಕತೆಯ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ” ಎಂದು ಓದಿದ್ದೆ. ಆ ಸಾಲು ನನ್ನಲ್ಲಿ ಪ್ರಶ್ನೆಗಳ ತರಂಗಗಳನ್ನೇ ಸೃಷ್ಟಿಸುತ್ತಿತ್ತು. ಕಾಲದಿಂದ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ನೈತಿಕತೆಯ ವ್ಯಾಖ್ಯಾನ ಬದಲಾಗುವುದು ಹೌದ?
ಸುಳ್ಳು ಹೇಳಬಾರದು, ಆತಂಕದ, ಭಯಹುಟ್ಟಿಸುವ ಸಂದರ್ಭಗಳಲ್ಲೂ ನೀವು ಕಾದುಕೊಳ್ಳುವ ನಿಮ್ಮ ಸತ್ಯ ನಿಮ್ಮ integrity ಯ ಸಂಕೇತ. ನಿಜ. ಆದರೆ ಇದನ್ನು ಕಲ್ಪಿಸಿಕೊಳ್ಳಿ, ಊರಲ್ಲಿ ದೊಂಬಿ ನಡೆಯುತ್ತಿದೆ, ಜನ ಕತ್ತಿ ಹಿಡಿದು ಕೊಲ್ಲುವುದನ್ನೇ ಮಹಾಸಂಭ್ರಮ ಮಾಡಿಕೊಳ್ಳುವ ಆವೇಶದಲ್ಲಿ ತೂರಾಡುತ್ತಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದ ಜೀವವೊಂದು ನಿಮ್ಮ ಮನೆಯಲ್ಲಿ ಆಶ್ರಯ ಪಡೆದಿದೆ. ಅವರು ಬಂದು ನಿಮ್ಮನ್ನು ಕೇಳುತ್ತಾರೆ, ’ಓಡಿ ಬಂದ ಅವನು / ಅವಳು ಈ ಕಡೆ ಬಂದರಾ?’. ಸತ್ಯ ಹೇಳಿದರೆ ಕೊಲೆಗಾರರಾಗುತ್ತೀರಿ, ಹೇಳದಿದ್ದರೆ ಸುಳ್ಳುಗಾರರಾಗುತ್ತೀರಿ. ಆಗ ನೈತಿಕತೆಯ ವ್ಯಾಖ್ಯಾನ ಏನು? ಗಲಭೆಯ ಸಂಗತಿ ಬಿಡಿ, ಯಾರೋ ಒಬ್ಬ ಓಡಿ ಬಂದು ಅವಿತುಕೊಂಡಿರುತ್ತಾನೆ, ಅವನನ್ನು ಹುಡುಕುತ್ತಾ ಜನ ಬರುತ್ತಾರೆ. ಇಲ್ಲಿ ನಿಮಗೆ ಅವನ ಅಪರಾಧವೂ ಗೊತ್ತಿಲ್ಲ, ಮುಗ್ಧತೆಯೂ ಗೊತ್ತಿಲ್ಲ. ಹೇಳಿ ಆಗ ಅವನನ್ನು ತೋರಿಸಿಕೊಡಬೇಕೋ ಅಥವಾ ಸುಳ್ಳು ಹೇಳಬೇಕೋ? ನಿಜ ನೈತಿಕತೆಯ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಹೋಗುತ್ತದೆ.
ನಾಟಕದಲ್ಲಿಯೂ ಅಷ್ಟೆ, ಇಂತಹುದೇ ಸಂದರ್ಭ. ನಾಟಕದ ನಾಯಕ ಪತ್ರಕರ್ತ, ಕಟು ನೈತಿಕತೆಯ ಆತ್ಮಾಭಿಮಾನಿ, ಒಲ್ಲದ ಕೆಲಸ ಮಾಡಲಾರ, ಒಲ್ಲದ ಕಡೆ ಕೆಲಸ ಮಾಡಲಾರ. ತನ್ನ ಕಾರ್ಖಾನೆಯ ವಸ್ತು ಕೊಳ್ಳಲು ಯಾವುದೇ ಪರ್ಚೇಸ್ ಆಫೀಸರ್ ಗೆ ಲಂಚ ಕೊಡಲಾರ. ಭ್ರಷ್ಟನೊಬ್ಬ ಮನೆಗೆ ಬಂದರೆ ಅವನ ಕೈ ಕುಲುಕಲೂ ಆರ. ಅವನ ಸ್ಪರ್ಶವೂ ಅಸಹ್ಯ ಅವನಿಗೆ. ಆದರೆ ವ್ಯವಸ್ಥೆಗೆ ಅನಂತ ತಾಳ್ಮೆ. ಅದು ಸಿಟ್ಟಿಗೇಳುವುದಿಲ್ಲ, ಅವನನ್ನು ಛೀ ಕರಿಸಿ ಹೊರನೂಕುವುದಿಲ್ಲ, ಅದರ ಕ್ರೌರ್ಯವಿರುವುದು ಅದು ತನ್ನ ಅನಂತ ಸಹನೆಯಲಿ, ಮಿಣ್ಣನೆಯ ನಗುವಿನಲ್ಲಿ, ಹೊಗಳಿಕೆಯ ಮಾತುಗಳಲ್ಲಿ, ಅವನ ಜೀವಸೆಲೆಯ ಒಂದೊಂದೆ ತಂತುಗಳನ್ನು ಕತ್ತರಿಸುವಲ್ಲಿ. ಅವನ ಬದುಕಿನ ಒಂದೊಂದೇ ದಾರಿಗಳನ್ನು ಮುಚ್ಚಿ, ಅವನನ್ನು ಅಸಹಾಯಕನನ್ನಾಗಿಸಿ, ಮಂಡಿಯೂರಿ ಕೂರಿಸುವಲ್ಲಿ, ಅವನ ಕಣ್ಣೆದಿರಿನಲ್ಲೇ ಮಂತ್ರಿ ಅವನ ಹೆಂಡತಿಯನ್ನು ತನ್ನೊಡನೆ ಕಾಶ್ಮೀರಕ್ಕೆ ಕರೆದುಕೊಂಡು ಹೋಗುವ ಹುನ್ನಾರ ನಡೆಸಿದರೂ ಅದನ್ನು ಪ್ರತಿಭಟಿಸಲಾಗದ ಅಸಹಾಯಕತೆಯನ್ನು ಅವನಲ್ಲಿ ಹುಟ್ಟಿಸುವಲ್ಲಿ, ಅವನಿಂದ ತನ್ನ ಶೂ ತರಿಸಿಕೊಳ್ಳುವುದರಲ್ಲಿ. ಇದೆಲ್ಲವನ್ನೂ ಅದು ನಗುನಗುತ್ತಲೇ ಮಾಡುತ್ತದೆ, ತಾಳ್ಮೆಯಿಂದಲೇ ಮಾಡುತ್ತದೆ. ಇಂತಹ ನೂರು ಶಿವಪ್ರಸಾದರನ್ನು ನಾಜೂಕಯ್ಯನನ್ನಾಗಿಸಿದ ಅನುಭವ ಅದಕ್ಕೆ.
ನಾಟಕದಲ್ಲಿ ಶಿವಪ್ರಸಾದ್ ಒಬ್ಬ ಪತ್ರಕರ್ತ. ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತನ್ನ ನಿಷ್ಠೆಗೆ ಧಕ್ಕೆ ಬರುತ್ತಿತ್ತು ಎಂದು ಆ ಕೆಲಸ ಬಿಟ್ಟು ಒಂದು ಕಾರ್ಖಾನೆ ಪ್ರಾರಂಭಿಸಿರುತ್ತಾನೆ. ಹತ್ತು ವರ್ಷ ಕಷ್ಟ ಪಟ್ಟು ಸಂಶೋಧನೆ ನಡೆಸಿ ಪರದಾಡಿದ ಮೇಲೆ ಉತ್ಪನ್ನ ತಯಾರಾಗುತ್ತದೆ. ಇದಕ್ಕಾಗಿ ಜಮೀನನ್ನು ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ತೆಗೆದಿರುತ್ತಾರೆ. ೩೦ ಲಕ್ಷ ಅಸಲಿಗೆ ನಲವತ್ತು ಲಕ್ಷ ಬಡ್ಡಿ, ಚಕ್ರಬಡ್ಡಿ ಸೇರಿ ಒಟ್ಟು ೭೦ ಲಕ್ಷ ಸಾಲ ತಲೆ ಮೇಲೆ ಕೂತಿರುತ್ತದೆ. ಅಷ್ಟರಲ್ಲಿ ಊರಲ್ಲಿ ತಂಗಿಯ ಮದುವೆ ನಿಶ್ಚಯವಾಗಿರುತ್ತದೆ. ಜಮೀನು ಮಾರಿ ಮದುವೆ ಮಾಡಬಹುದು ಎನ್ನುವುದು ಅಮ್ಮನ ಯೋಚನೆ. ಜಮೀನನ್ನು ಬ್ಯಾಂಕಿನಲ್ಲಿ ಅಡ ಇಟ್ಟಿರುವ ವಿಷಯ ಅಮ್ಮನಿಗೆ ಮಗ ಹೇಳಿರುವುದಿಲ್ಲ.

ಯಾವುದೇ ಕಂಪನಿಯ ಪರ್ಚೇಸ್ ಆಫೀಸರ್ ಗೆ ಲಂಚ ಕೊಡಲೊಲ್ಲದ ಈತ ಆ ಕಂಪನಿಯ ಉತ್ಪನ್ನವನ್ನು ರಕ್ಷಣಾ ಇಲಾಖೆಗೆ ಸರಬರಾಜು ಮಾಡಲು ಪೂನಾಕ್ಕೆ ಹೋಗಿರುತ್ತಾನೆ. ಅದೃಷ್ಟವಶಾತ್ ಆಗ ಅಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯೇ ಇರುವುದರಿಂದ ಆ ಆರ್ಡರ್ ಆತನಿಗೆ ಸಿಗುತ್ತದೆ. ಗಂಡ ಹೆಂಡತಿ ಇಬ್ಬರಿಗೂ ಸಂತೋಷ. ತಮ್ಮೆಲ್ಲಾ ಕಷ್ಟ ಕಳೆಯುತ್ತದೆ ಎನ್ನುವ ಖುಷಿ. ಒಂದು ಪುಟ್ಟ ಮನೆ, ಸ್ವಲ್ಪ ದೊಡ್ಡದಾದ ಪುಟ್ಟ ಮನೆ, ಮನೆಯ ಸುತ್ತ ತೋಟ, ತೋಟದಲ್ಲಿ ಒಂದು ಕಾರು… ಹೀಗೆ ಕನಸಿನ ದಾರಿಯಲ್ಲಿ ನಡಿಗೆ ಶುರು ಮಾಡುವ ಹೊತ್ತಿಗೆ ಆ ಕಂಪನಿಯಿಂದ ಒಂದು ಪತ್ರ ಬರುತ್ತದೆ, ಈತ ಹತ್ತು ವರ್ಷಗಳ ಹಿಂದೆ ಬಿಟ್ಟ ಕಂಪನಿಯಿಂದ ಒಂದು ಕ್ಲಿಯರೆನ್ಸ್ ಸರ್ಟಿಫಿಕೇಟು ತಂದ ಮೇಲೆ ಸರಬರಾಜು ಆರಂಭಿಸಬಹುದು ಎನ್ನುವ ಪತ್ರ.
ಮೇಲೆ ಕಾಣಿಸುವುದು ಇಷ್ಟೇ. ಸರಿ ತಂದರಾಯಿತು ಅಂದುಕೊಳ್ಳುತ್ತಾನೆ ನಾಯಕ. ಆದರೆ ಹಾಗೆ ಸರ್ಟಿಫಿಕೇಟು ತರಲು ಹೋದಾಗ ತನಗೇ ಅರಿವಿಲ್ಲದಂತೆ ವ್ಯೂಹದೊಳಕ್ಕೆ, ಆಳಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುತ್ತಾನೆ. ತಾನು ಪತ್ರಿಕೆಯಲ್ಲಿ ಯಾರ ವಿರುದ್ಧ ಬರೆಯುತ್ತಿದ್ದನೋ ಅದೇ ಚಬಲಾನಿ, ಇವನ ಕಂಪನಿಯ ಡೈರೆಕ್ಟರ್, ಕಾರ್ಮಿಕ ನಾಯಕ ಎಲ್ಲರೂ ಒಂದೊಂದೇ ಕಾಯಿ ನಡೆಸುತ್ತಾ ಇವನನ್ನು ಹತಾಶೆಯ ಅಂಚಿಗೆ ತಂದು ನಿಲ್ಲಿಸಿಬಿಡುತ್ತಾರೆ. ಮೊದಲು ನೆಮ್ಮದಿ, ಆಮೇಲೆ ಆತ್ಮವಿಶ್ವಾಸ, ನಂತರ ಆತ್ಮ ಗೌರವ, ಕಡೆಗೆ ತನ್ನ ನೈತಿಕತೆ ಎಲ್ಲವನ್ನೂ ಕಳೆದುಕೊಳ್ಳುತ್ತಾ ಅಸಹಾಯಕನಾಗಿ ನಿಲ್ಲುತ್ತಾನೆ ಪ್ರಸಾದ್.
ಯಾವ ಭ್ರಷ್ಟ ಮನೆಗೆ ಬಂದಿದ್ದಾಗ ಅವನ ಕೈ ಕುಲುಕಲೂ ನಿರಾಕರಿಸಿರುತ್ತಾನೋ, ಯಾರನ್ನು ತಲೆಹಿಡುಕ ಎಂದು ಕರೆದು ಜರೆದಿರುತ್ತಾನೋ, ಅವನನ್ನು ಮನೆಗೆ ಕರೆಯಲು ಹೆಂಡತಿಗೆ ಹೇಳುತ್ತಾನೆ. ಆತನ ಮಾತಿನ ಮೇರೆಗೆ ಉಪಮುಖ್ಯಮಂತ್ರಿಯ ಮನೆಗೆ ಹೋಗಿ ಆತನ ಕಳಪೆ ಕಾದಂಬರಿಯನ್ನು ಹೊಗಳುತ್ತಾನೆ, ದೈನೇಸಿಯಂತೆ ಕೈ ಕಟ್ಟಿ ನಿಲ್ಲುತ್ತಾನೆ. ಕಡೆಗೆ ಉಪ ಮುಖ್ಯ ಮಂತ್ರಿ ಹುನ್ನಾರ ಹಾಕಿ ಇವನ ಹೆಂಡತಿಯನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗುವ ಯೋಜನೆ ಹಾಕಿದ ಮೇಲೆ ಸಹ ಅಸಹಾಯಕನಂತೆ ತಲೆ ಆಡಿಸುತ್ತಾ ನಿಲ್ಲುತ್ತಾನೆ. ತನ್ನ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಯಾವ ಚಬಲಾನಿಯ ಅನಾಚಾರಗಳನ್ನು ಇಲ್ಲಿಯವರೆಗೂ ಬರೆದು, ಬೀದಿಗೆ ತಂದಿರುತ್ತಾನೆಯೋ ಅದೇ ಚಬಲಾನಿಯನ್ನು ಹೊಗಳಿ ಬರೆಯಲು ಒಪ್ಪಿಕೊಳ್ಳುತ್ತಾನೆ. ಒಂದೇ ಸಲಕ್ಕೆ ತನ್ನ ಹೆಂದತಿ ಮತ್ತು ತನ್ನ ನೈತಿಕತೆ ಎರಡನ್ನೂ ಅಡ ಇಡುವ ಸ್ಥಿತಿಗೆ ತಲುಪಿ ಬಿಟ್ಟಿರುತ್ತಾನೆ.
ಈ ನಾಟಕದಲ್ಲಿ ಫೋಟೋಗ್ರಫರನ ಪಾತ್ರ ಒಂದಿದೆ. ಇಡೀ ನಾಟಕದ ನೈತಿಕ ಪ್ರಜ್ಞೆಯ ರೂಪಕ ಆ ಪಾತ್ರ. ಅದೂ ಸಹ ಹಣವುಳ್ಳವರ, ಅಧಿಕಾರ ಉಳ್ಳವರ ಕೈಲಿ ಬೈಸಿಕೊಳ್ಳುತ್ತಾ, ಛೀ ಥೂ ಅನ್ನಿಸಿಕೊಳ್ಳುತ್ತಾ ಇರುತ್ತದೆ. ಯಾವ ಪ್ರತಿಭಟನೆಯೂ ಇಲ್ಲದೆ. ಆದರೆ ಕೊನೆಯಲ್ಲಿ ಮಂತ್ರಿ ನಾಯಕನ ಹೆಂಡತಿಯ ಸುತ್ತಾ ಬಲೆಬೀಸುತ್ತಾ, ಅದನ್ನು ಹಿಡಿದು ಸೆಳೆಯುತ್ತಾ ಇದ್ದಾಗ, ’ಒಂದು ಫೋಟೋ ತೆಗೆ’ ಅಂದಾಗ ’ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಸರ್’ ಎಂದು ತೊದಲಿ ತನ್ನ ಪ್ರತಿಭಟನೆಯನ್ನು ತೋರಿಸುತ್ತಾನೆ. ಅವನಿಂದ ಸಾಧ್ಯವಾಗುವುದು ಅದು ಮಾತ್ರ.

ನಾಟಕ ನಮ್ಮನ್ನು ಡಿಸ್ಟರ್ಬ್ ಮಾಡುವುದು ಇಲ್ಲಿ… ಇಲ್ಲಿ ಯಾವುದೂ ಕಪ್ಪು ಅಥವಾ ಬಿಳುಪಲ್ಲ. ಇಲ್ಲಿ ಯಾರನ್ನೂ ನಾವು ’ಭ್ರಷ್ಟ’ ಎಂದು ದೂಷಿಸಿ ಸುಲಭವಾಗಿ ನಮ್ಮ ನೈತಿಕ ಪ್ರಜ್ಞೆಯನ್ನು ನೇವರಿಸಿಕೊಳ್ಳುತ್ತಾ ಸಂತೃಪರಾಗಿ ಕೂರುವಂತಿಲ್ಲ. ಇಲ್ಲಿ ನಾವು ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಯಾರ ಮೇಲೋ ಕ್ರಾಂತಿಯ ದೊಂದಿ ಹಿಡಿಯುವ ಜವಾಬ್ದಾರಿ ಹೊರಿಸಿ ನಾವು ನಿಶ್ಚಿಂತರಾಗಿ ಮನೆಗೆ ಹೋಗಿ ಊಟ ಮಾಡಿ, ಮಲಗುವಂತಿಲ್ಲ. ನಾವು ನೇರವಾಗಿ ಕುರುಕ್ಷೇತ್ರಕ್ಕಿಳಿಯಲೇಬೇಕು, ಅಲ್ಲಿ ತಟಸ್ಥರಾಗಿರಲು ಸಾಧ್ಯವಿಲ್ಲ. ಹಾಗೆ ನಮ್ಮ ನೈತಿಕ ಪ್ರಜ್ಞೆಯನ್ನು ನಿಕಶಕ್ಕೊಡ್ಡುವುದರಿಂದಲೇ ನಾಟಕ ನಮ್ಮನ್ನು ಡಿಸ್ಟರ್ಬ್ ಮಾಡುತ್ತದೆ, ನಮ್ಮಲ್ಲೂ ಇರುವ ನಾಜೂಕಯ್ಯ ನಮ್ಮನ್ನು ಕಂಡು ಲೇವಡಿ ಮಾಡ ತೊಡಗುತ್ತಾನೆ. ಯಾರೋ ಹುಡುಗಿ ನಾಟಕ ನೋಡಿ, ಟಿನ್ ಎಸ್ ಅವರಿಗೆ ’ಐ ಹೇಟ್ ಯು ಫಾರ್ ದಿಸ್ ಪ್ಲೇ’ ಎಂದು ಮೆಸೇಜ್ ಕಳಿಸುತ್ತಾಳೆ. ಸಾಮಾಜಿಕವಾಗಿ ಪ್ರಾಮಾಣಿಕತೆಯ ಘೋಷಣೆ ಕೂರುವ ನಾವು ವೈಯಕ್ತಿಕವಾಗಿ ನಿಧಾನವಾಗಿ ವ್ಯವಸ್ಥೆಯ ಭಾಗವಾಗುತ್ತಾ ಹೋಗಿರುತ್ತೇವೆ. ಇದು ನಮ್ಮನ್ನು ಕುಟುಕುತ್ತದೆ.
ನಮಗೆಲ್ಲರಿಗೂ ಒಬ್ಬ ನಾಯಕ ಬೇಕು, ನಮ್ಮಲ್ಲಿಲ್ಲದ ಗುಣವನ್ನು ಅವನಲ್ಲಿ ಕಂಡು ಅವನೊಡನೆ ನಮ್ಮನ್ನು ಐಡೆಂಟಿಫೈ ಮಾಡಿಕೊಳ್ಳಲು. ಹಾಗೆ ನಮಗೊಬ್ಬ ವಿಲನ್ ಬೇಕು, ಅವನ ಕೆಟ್ಟತನಕ್ಕೆ ನಮ್ಮನ್ನು ಹೋಲಿಸಿಕೊಂಡು ನಮ್ಮನ್ನು ಮೇಲಿತ್ತಿ ನಿಲ್ಲಿಸಿಕೊಂಡು ಸಮಾಧಾನ ಪಟ್ಟುಕೊಳ್ಳಲು. ಆದರೆ ಈ ನಾಟಕದ ಶಕ್ತಿ ಎಂದರೆ ಇಲ್ಲಿ ನಾಯಕನೂ ಅವನೆ, ವಿಲನ್ ಸಹ ಅವನೆ, ಬಲಿಪಶು ಸಹ ಅವನೆ. ಅವನನ್ನು ವಿಲನ್ ಮಾಡಿ ನಮ್ಮ ಕೈ ತೊಳೆದುಕೊಳ್ಳಲು ಬಿಡದಂತೆ ಪರಿಸ್ಥಿತಿಗಳು ನಮ್ಮೆದುರಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವನು ಹಾಗೆ ಮಾಡಬಾರದು ಎಂದು ಹೇಳುವುದು ಸುಲಭ. ಆದರೆ ಅವನು ಹಾಗೆ ಮಾಡಬಾರದು ಎನ್ನುವಾಗ ಅದಕ್ಕೆ ಪರ್ಯಾಯವಾಗಿ ಪರಿಹಾರ ಏನೂ ಇರುವುದಿಲ್ಲ. ಅವನು ನಾಜೂಕಯ್ಯನಾಗದೆ ವಿಧಿಯೇ ಇಲ್ಲ. ಅಮ್ಮನ ಮುಖಕ್ಕೆ ಎಂಜಲು ತಟ್ಟೆ ಎಸೆಯದಿರಲು, ತಂಗಿಯ ಮದುವೆ ನಿಲ್ಲದಿರಲು, ಕಾರ್ಮಿಕರನ್ನು ಕೊಂದು ಇನ್ಶೂರೆನ್ಸ್ ಹಣ ಬಾಚಿಕೊಳ್ಳದಿರಲು, ಜಮೀನು ಹರಾಜಾಗದೆ ಇರಲು ಅವನು ನಾಜೂಕಯ್ಯನಾಗಲೇ ಬೇಕು. ಆದರೆ ಇಲ್ಲಿ ಅವನು ನಾಜೂಕಯ್ಯನಾಗುವ ಪ್ರಕ್ರಿಯೆಯಲ್ಲಿ ಎಲ್ಲೋ ನಾವು ಸಹ ನಮ್ಮೊಳಗಿರುವ ನಾಜೂಕಯ್ಯನನ್ನು ಕಾಣತೊಡಗಿರುತ್ತೇವೆ ಮತ್ತು ಬೆಚ್ಚತೊಡಗಿರುತ್ತೇವೆ.
“ಮಲಿನವಾದಳೆ ಗಂಗೆ
ಖಿನ್ನವಾಯಿತೆ ಮನಸು ?
ಕೆನ್ನೆ ಜಾರಿದ ರಕ್ತ
ನೀರಿನಂತೆ ಕಂಡಿತೇನು ?
ಮತ್ತೆ ಗಂಗೆ ಸೇರಿತೇನು ?
ತೊಳೆಯಲಾರಳು ಗಂಗೆ
ಇಲ್ಲಿ ರಹದಾರಿ ಮುಗಿದಿದೆ
ಇಡು ಕತ್ತಿ ಕೆಳಗೆ
ನಡೆ ಮೆಲ್ಲ ಹೊರಗೆ”
ಎನ್ನುವ ಸೀತಾರಾಂ ಅವರ ಸಾಲುಗಳು ಯಾಕೋ ಕನ್ನಡಿಯಂತೆ ಕಾಣತೊಡಗಿತ್ತು. ನಾಟಕ ನಡೆಯುತ್ತಿದ್ದಾಗ ಆಳ ವಿಷಾದ ಮಡುಗಟ್ಟಿಸುವ ಸಂದರ್ಭದಲ್ಲಿ, ಮೇಲೆ ಹಾಸ್ಯವನ್ನೂ ಒಳಗಡೆ ಅಸಹಾಯಕತೆಯನ್ನು ತುಂಬಿಕೊಂಡ ಮಾತುಗಳಿಗೆ ಜನ ನಗುವಾಗ ಮನಸ್ಸು ಇನ್ನಷ್ಟು ಮುದುಡುತ್ತಿತ್ತು. ನಾಟಕದ ಗುಣ ಇದ್ದದ್ದು ಅದು ಎಲ್ಲೂ ವಾಚ್ಯವಾಗದೆ ಇದ್ದದ್ದರಲ್ಲಿ. ಮಾತುಗಳು, ಮಾತುಗಳು ಅನ್ನಿಸಿದರೂ ಆ ಮಾತುಗಳು ಸನ್ನಿವೇಶವನ್ನು ಕಟ್ಟಿಕೊಡುತ್ತಿದ್ದವೇ ಹೊರತು ಅಲ್ಲಿ ಏನಾಗುತ್ತಿದೆ ಎಂದು ವಿವರಿಸುವ ಪ್ರಯತ್ನ ಮಾಡುತ್ತಿರಲಿಲ್ಲ, ಆದ್ದರಿಂದಲೇ ನಾಟಕ ಅಷ್ಟು ಪರಿಣಾಮಕಾರಿಯಾಗಿತ್ತು.
ನಾಟಕ ನೋಡುತ್ತಿದ್ದ ನನ್ನಲ್ಲಿ ಇಂತಹ ನಾಟಕ, ಮತದಾನದಂತಹ ಚಿತ್ರಗಳನ್ನು ಮಾಡಿದ ಟಿ ಎನ್ ಎಸ್, ಕಡೆಗೆ ಟಿವಿಯ ಟಿಆರ್ ಪಿ ಕಸರತ್ತಿಗೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾದಾಗ ಅವರಿಗೂ ಹೀಗೆ ಆಗಿರಬಹುದಾ ಅನ್ನಿಸಿತು. ಇಲ್ಲ, ನಾನಿಲ್ಲಿ ನಾಟಕದ ವಿಮರ್ಶೆ ಮಾಡುತ್ತಿಲ್ಲ, ನನ್ನನ್ನು ಕಾಡುತ್ತಿರುವುದು ನಾಟಕ ಎತ್ತಿದ ಪ್ರಶ್ನೆ. ನೈತಿಕತೆಯ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದಾ? ಹಾಗೆ ಬದಲಾದಾಗ ಅದನ್ನು ಸೋಲು ಎಂದು ಕೊಳ್ಳಬೇಕಾ ಅಥವಾ ಅನಿವಾರ್ಯ ಎಂದು ಒಪ್ಪಿಕೊಳ್ಳಬೇಕಾ? ಕಾಲ ಕಳೆದಂತೆ ಕತ್ತಿಗಳು ಮೊಂಡಾಗುವುದು, ಪ್ರಭಾವಳಿಗಳು ಮಸುಕಾಗುವುದು ಅನಿವಾರ್ಯವಾ? ಹಾಗಾದಾಗ ಅದು ವ್ಯಕ್ತಿಯ ಸೋಲಾ ಅಥವಾ ವ್ಯವಸ್ಥೆಯ ಗೆಲುವಾ? ಈ ಪ್ರಶ್ನೆಗಳು ನನ್ನನ್ನು ಇನ್ನೂ ಡಿಸ್ಟರ್ಬ್ ಮಾಡುತ್ತಲೇ ಇದೆ.
ಸಂಧ್ಯಾರಾಣಿ ಕಾಲಂ : ನಮ್ಮಲ್ಲಿ ನಿಮ್ಮಲ್ಲಿ ಒಬ್ಬ ನಾಜೂಕಯ್ಯ ಮತ್ತು ಒಂದು ನೈತಿಕ ಪ್ರಜ್ಞೆ
ನಿಮಗೆ ಇವೂ ಇಷ್ಟವಾಗಬಹುದು…

ನಾಟಕದಲ್ಲಿ ಅತ್ಯಂತ ಗಾಢ ವಿಷಾದವನ್ನೂ ಹಾಸ್ಯವೆಂಬಂತೆ ಜನ ನಗುತ್ತಿದ್ದಾಗ ನಾನು-ನೀನು ಬೆಪ್ಪರಂತೆ ಮುಖ ನೋಡಿಕೊಂಡು- ನಿನ್ಗೆ ನಗು ಬರ್ತಿದ್ಯಾ ಅಂತ ಕೇಳಿಕೊಂಡಿವೆಲ್ಲ …ಅದು ನೆನಪಾಯ್ತು. ಆವರಿಸುವ ನಾಟಕ ಮತ್ತು ಅದ್ಭುತ ಲೇಖನ ಸಂಧ್ಯಾ …
ನಾಜೂಕಯ್ಯ ಆಗೋದು ಅಂದ್ರೆ ಈಗಿನ ಕಾಲದಲ್ಲಿ ಪ್ರಬುದ್ಧನಾಗೋದು, ಮ್ಯೆಚುರ್ ಆಗೋದು… ಅಂದ ಹಾಗೆ ಇಂದು ಬಸವಶ್ರೀ ಪ್ರಶಸ್ತಿ ಪ್ರಧಾನ ಇರಬೇಕು ಆಲ್ವಾ ?
Bahala bahala ishta aaytu.
Naavu corruption ge oggi hogiddeve…kadege asahaayakaraagi reluctant being aagi..ishta illada kelsa maadabeku.just for existence
ಕಾಲ ಕಳೆದಂತೆ ಕತ್ತಿ ಮೊಂಡಾಗದು.,ಪ್ರಭಾವಳಿ ಮಸುಕಾಗದು..ಹಾಗೆ ಭಾಸವಾಗತ್ತದೆ.
ಮಹಾಭಾರತದ ಕಾಲ್ಿೀದಲ್ಲಿ ಇದ್ದ ಲಂಚ ಈಗಲೂ ಇಲ್ಲವೇ ?
ಲಂಚ ಮಸುಕಾಗಿದೆಯೇ ?
ವ್ಯಕ್ೆ
ಸಂಧ್ಯಾ..ಈ ನಾಜೂಕಯ್ಯ ಆಗುವ ಅರಿವಿಗೆ ದುಃಖಿಯಾಗಬೇಕಾ? ಅಥವಾ..ಕಡೆಗೂ ಅರಿವು ಆಯಿತು ಅಂತ ಸಂತೋಷ ಪಡಬೇಕಾ?ಚಲಾವಣೆಯಲ್ಲಿ ಯಾವುದಕ್ಕೆ ಬೆಲೆ? ಪ್ರತಿಯೊಬ್ಬರೂ ನಾಜೂಕಯ್ಯ ನಾಗಿ ದಿನಾ ದಿನಾ ಸತ್ತು, ತೋರಿಕೆಯ ತೊಗಲಿನ ಮುಖವಾಡ ಹೊತ್ತು ಬದುಕುವ..ರೋಬೋಟ್ ಪ್ರಪಂಚದಲ್ಲಿ ನಾವಿದ್ದೀವಿ..ಅಂತ ನೆನಪಿಸುವ ಈ ನಾಟಕ ನೋಡಿ..ಆ ಯಾವುದೋ ಹುಡುಗಿ ‘ಐ ಹೇಟ್ ಯು ಫಾರ್ ದಿಸ್ ಪ್ಲೇ’ ಅಂದಿದ್ದರಲ್ಲಿ ಆಶ್ಚರ್ಯ ಖಂಡಿತ ಇಲ್ಲ.. ನಿಮ್ಮ ಅರ್ಥೈಸುವಿಕೆ ನಮ್ಮನ್ನು ನಾಟಕದ ಒಳ ಹೊರಗೆ ಸುತ್ತಾಡಿಸಿಕೊಂಡು ಬರುವ ಕೆಲಸ ಮಾಡಿದೆ..ಸಾಧ್ಯವಾದಾಗ ತಪ್ಪಿಸದೇ ನಾಟಕ ನೋಡಬೇಕು.
Nimma lekhana natakada antaryavannu vasthunishtavagi bimbiside. Inthaha sarvakalika natakavannu kottanthaha sitharam avaru mattashtu natakagalannu bateyabelu.
ಇದೇ ಈ ಪ್ರಸ್ತುತವೇ? ಅನ್ನುವ ದೊಡ್ಟ ಡೌಟಿನೊಂದಿಗೇ ನಾನೂ ನಾಟಕ ನೋಡಲು ಹೋಗಿದ್ದು.ಅದೇ ಪ್ರಾಮಾಣಿಕ ಮತ್ತು ಅದೇ ವ್ಯೂಹ.ಈ ಪ್ರಾಮಾಣಿಕತೆ ಮತ್ತು ವ್ಯೂಹಗಳು.ಪ್ರೀತಿ,ದ್ವೇಷ,ಸಂಚುಗಳಷ್ಟೇ ಸಾರ್ವಕಾಲಿಕವೇ?ಪ್ರಶ್ನೆ ಕಾಡಿತು.ನಾಟಕದ ಟಿಕೆಟ್ ಗಾಗಿ ಸುಮಾರು ಜನ ಪರದಾಡಿದ್ದು.ಸಿಗದೇ ವಾಪಾಸು ಹೋಗಿದ್ದು ಎಲ್ಲವೂ ಮತ್ತೊಂದಿಷ್ಟು ಪ್ರಶ್ನೆಗಳನ್ನು ಹುಟ್ಟಿಸಿತು.ಎಂತದೋ ಸಮಾಧಾನವನ್ನೂ.
ಪರಂಪರಾನುಗತವಾದ ಜಡತೆಗೆ ತುಕ್ಕು ಹಿಡಿಯದಂತೆ ಮಾಡುವದು ಸುಲಭವಲ್ಲವಲ್ಲ -ಇದು ನಿರಂತರವಾದ ಹೋರಾಟ -ಪರಿಹಾರ ಕೂಡಾ ಆಯಾ ಕಾಲಕ್ಕೆ ತಕ್ಕಂತೆ -ಎಲ್ಲ ಒಳ್ಳೆ ಯ್ಯಾಂಗ್ರಿ ಯಂಗಮ್ಯಾನಗಳು ಕಾಲಕ್ರಮೇಣ ನಾಜುಕಯ್ಯಗಳಾಗದಂತೆ ತಡೆಯುವದು ಹೇಗೋ? ಚಿಂತನಗೆ ಒಡ್ಡುವ ಒಳ್ಳೆಯ ಲೇಖನ.
-ಅನಿಲ