
‘Rest in Peace Robin, you brought dignity to male tears!!’ – ’ನೆಮ್ಮದಿಯಿಂದ ವಿಶ್ರಮಿಸು ರಾಬಿನ್, ಗಂಡಿನ ಕಂಬನಿಗೊಂದು ಘನತೆಯನ್ನು ತಂದು ಕೊಟ್ಟವ ನೀನು’, ಆಗಸ್ಟ್ ಹನ್ನೊಂದರಂದು ರಾಬಿನ್ ಜಗತ್ತಿಗೆ ವಿದಾಯ ಹೇಳಿದಾಗ ಕಮಲ್ ಹಾಸನ್ ಹೇಳಿದ ಮಾತುಗಳು ಇವು. ಒಬ್ಬ ಕಲಾವಿದನ ಬಗ್ಗೆ ಇನ್ನೊಬ್ಬ ಕಲಾವಿದ ಹೇಳಿದ ಮಾತುಗಳಷ್ಟೇ ಅಲ್ಲ ಇವು, Mrs.Doubtfire ನ ರಾಬಿನ್ ನನ್ನು ಭಾರತಕ್ಕೆ ಪರಿಚಯಿಸಿದ ’ಅವ್ವೈ ಶಣ್ಮುಖಿ’ ಯ ಕಮಲ್ ನ ಮಾತುಗಳು ಇವು. ಅವರಿಬ್ಬರ ನಡುವೆ ಆ ತಂತು ಸಹ ಇತ್ತು. ಅಲ್ಲಾದ್ದೀನನ ಜಿನಿ, ಮಕ್ಕಳಿಗಾಗಿ ಹಂಬಲಿಸಿ, ಹೆಣ್ಣು ವೇಷ ಧರಿಸಿ, ಮಕ್ಕಳ ಪಾಲಕಿಯಾಗಿ ಬರುವ Mrs.Doubtfire, ಅತ್ಯಂತ ಉಡಾಳ ಮಗ ತೀರಿಕೊಂಡಾಗ ಅವನ ಸಾವಿನಲ್ಲಾದರೂ ಅವನಿಗೊಂದು ಘನತೆ ಸಿಗಲೆಂದು ಅವನ ಹೆಸರಿನಲ್ಲಿ ಒಂದು ಅಂತಿಮ ಪತ್ರ ಬರೆದು, ಆ ಸುಳ್ಳನ್ನು ಸತ್ಯವಾಗಿಸಲು ಹೆಣಗುವ World’s Best Father ನ ಅಪ್ಪ…. ಯಾಕೋ ರಾಬಿನ್ ನೆನಪಲ್ಲಿ ಉಳಿಯುವುದು ಆತ ಸೃಷ್ಟಿಸುತ್ತಿದ್ದ ಹಾಸ್ಯಕ್ಕಿಂತ ಹೆಚ್ಚಾಗಿ ಅವನ ಕಣ್ಣಿನಲ್ಲಿರುತ್ತಿದ್ದ ಖಾಲಿತನಕ್ಕೆ ಮತ್ತು ಆಗಾಗ ಇಣುಕಿದರೂ ದಟ್ಟವಾಗಿ ಅನುಭವಕ್ಕೆ ಬರುತ್ತಿದ್ದ ನೋವಿಗೆ. ಬದುಕಿನಲ್ಲಿ ಒಂದು ಪ್ಲಾನ್ ಸೋತರೆ ಇನ್ನೊಂದು ಎಂದು ಪ್ಲಾನ್ ಬಿ ಸಿದ್ಧವಾಗಿಟ್ಟುಕೊಳ್ಳುವವರನ್ನು ನಾವು ಕಂಡಿದ್ದೇವೆ, ಆದರೆ ಈತ ಸಾವಿಗೂ ಒಂದು ಪ್ಲಾನ್ ಬಿ ಇಟ್ಟುಕೊಂಡವನು, ಮಣಿಕಟ್ಟಿನ ನರ ಕತ್ತರಿಸಿಕೊಂಡು, ಅಕಸ್ಮಾತ್ ಅದು ಕೆಲಸ ಮಾಡದಿದ್ದರೆ ಎನ್ನುವ ಎಚ್ಚರದಲಿ, ತನ್ನ ಬೆಲ್ಟಿನ ಕುಣಿಕೆಗೆ ಕತ್ತು ಕೊಟ್ಟವನು. ಇನ್ಯಾವ ನೋವು ಹಿಂಡಿ ಹಿಪ್ಪೆ ಮಾಡಿರಬಹುದು ಅವನನ್ನು?
’ಆತ್ಮಹತ್ಯೆ’ ಎಂದ ಕೂಡಲೇ ಬರುವ ಜೋಡಿಪದ ’ಹೇಡಿತನ’. ಆದರೆ ಯಾಕೋ ನನಗೆ ಹಾಗೆ ನಿರ್ಧಾರಕ್ಕೆ ಬಂದು ಶರಾ ಬರೆಯಲು ಆಗುವುದೇ ಇಲ್ಲ. ಹಾಗೆಂದು ಅದು ಅತ್ಯಂತ ಧೈರ್ಯದ ಕೆಲಸ ಎಂದೂ ಹೇಳಲಾರೆ. ಆತ್ಮಹತ್ಯೆ ಅನೇಕ ಹತಾಶೆಗಳ ಸಾಂದ್ರೀಕೃತ ಪರಿಣಾಮ. ತಾವು ಬಯಸಿದ್ದು ಆಗಲಿಲ್ಲವೆಂಬ ನಿರಾಸೆಯಿಂದ, ಕೋಪದಿಂದ ಅಥವಾ ಹಟದಿಂದ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಅವರ ನಿರ್ಧಾರ ಒಂದು ಘಟನೆಯ ಅಥವಾ ಜೀವನದ ಒಂದು ಘಟ್ಟದ ಪರಿಣಾಮ. ಆದರೆ ಇನ್ನೂ ಕೆಲವರಿದ್ದಾರೆ, ಅವರು ಕೆಂಡವನ್ನು ಮಡಿಲಲ್ಲಿ ಕಟ್ಟಿಕೊಂಡೇ ಪ್ರತಿ ಹೆಜ್ಜೆ ಇಡುವವರು, ಮಳೆ ಬಂದಾಗ ಕೆಂಡದ ಕಾವು ತಣಿಯುತ್ತದೆ, ಆದರೆ ಆರುವುದಿಲ್ಲ, ಬಿಸಿಲಲ್ಲಂತೂ ಕೇಳುವುದೇ ಬೇಡ. ನಾನು ಇಲ್ಲಿ ಖಿನ್ನತೆಯಿಂದ ಬಳಲುವವರ ಬಗ್ಗೆ ಮಾತನಾಡುತ್ತಿದ್ದೇನೆ. ಹೌದು, ಖಿನ್ನತೆ, Depression… ಈ ಖಿನ್ನತೆ ತಂದ ಆತ್ಮಹತ್ಯೆ ಇದು.
ಖಿನ್ನತೆ ಎಂದರೆ ಆ ಕ್ಷಣದ ಯಾವುದೋ ಕ್ರಿಯೆಗೋ, ಕಾರಣಕ್ಕೋ ಬರುವ ನೋವು, ನಿರಾಸೆ, ಆಘಾತವಲ್ಲ. ಅದು ಅನದಿನವು ಮನದಲ್ಲಿರುವ ದಾವಾನಲ. ಅದು ಒಂದು ಬಂದು ಹೋಗುವ ಖಾಯಿಲೆ ಅಲ್ಲ, ಅದೊಂದು ಮಾನಸಿಕ ಸ್ಥಿತಿ. ಔಷಧಿಗಳು ಅವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದೇ ಹೊರತು, ನಿವಾರಿಸುವುದು ಕಷ್ಟ. ’ಅಯ್ಯೋ ನಮಗೂ ಒಮ್ಮೊಮ್ಮೆ ಎಷ್ಟು ಬೇಸರ, ನೋವು ಆಗುತ್ತದೆ, ಆದರೆ ನಾವು ಹೀಗೆ ಕೂರುತ್ತೇವಾ’ ಎನ್ನುವ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ, ಜ್ವರ ಬಂದ ರೋಗಿಯೊಬ್ಬ ತನ್ನನ್ನು ಕ್ಯಾನ್ಸರ್ ರೋಗಿಗೆ ಸಮೀಕರಿಸಿಕೊಂಡು ಹೇಳುವ ಹಾಗೆ ಅದು. ಎರಡೂ ಖಾಯಿಲೆಗಳೇ ಅನ್ನುವುದು ನಿಜವಾದರು, ಎರಡರ ಕಾರಣ ಮತ್ತು ಪ್ರಭಾವ ಎರಡೂ ಬೇರೆ ಬೇರೆ.
ರಾಬಿನ್ ಈ ಕಡು ಖಿನ್ನತೆಯಿಂದ ಬಳಲುತ್ತಿದ್ದ. ’ಅರೆ, ಅವನಿಗೇನು ಕಮ್ಮಿ ಆಗಿತ್ತು, ಹಣ, ಪ್ರತಿಭೆ, ಪ್ರಸಿದ್ಧಿ, ಹೆಂಡತಿ, ಮಕ್ಕಳು ಎಲ್ಲಾ ಇದ್ದರಲ್ಲ’ ಎನ್ನುವ ಪ್ರತಿಕ್ರಿಯೆ ಸಾಮಾನ್ಯ. ಆದರೆ ಖಿನ್ನತೆಗೆ ಇವು ಯಾವುವೂ ತಡೆಗೋಡೆ ಅಲ್ಲ, ಪರಿಹಾರವೂ ಅಲ್ಲ. ಖಿನ್ನತೆ ಒಂದು ಮನೋಸ್ಥಿತಿ, ಅದು ’ಆಗಿದೆ’ ಎನ್ನುವುದಕ್ಕಿಂತ ಮಿಗಿಲಾಗಿ, ಅದು ’ಇದೆ’. ಹಣ, ಪ್ರತಿಭೆ, ವಿಜಯ, ಸಂಸಾರ, ದಾಂಪತ್ಯ, ಸಾಂಗತ್ಯ ಇವೆಲ್ಲದರ ಅನುಪಸ್ಥಿತಿ ಖಿನ್ನತೆಯನ್ನು ಹೆಚ್ಚು ಮಾಡುವುದು ಸಾಧ್ಯ ಆದರೆ ಅವೆಲ್ಲದರ ಉಪಸ್ಥಿತಿ ಖಿನ್ನತೆಯನ್ನು ನಿವಾರಣೆ ಮಾಡುವುದಿಲ್ಲ. ಮುದುಡಿದ ಮನಸ್ಸಿಗೆ ಯಾವ ತರ್ಕವೂ ಸಾಂತ್ವನ ನೀಡುವುದಿಲ್ಲ. ಇದು ಇಲ್ಲಿನ ದುರಂತ. ರಾಬಿನ್ ಗಾಗಿದ್ದು ಅದೆ. ’ಆತ್ಮಹತ್ಯೆ ತಾತ್ಕಾಲಿಕ ಸಮಸ್ಯೆಗಳಿಗೊಂದು ಶಾಶ್ವತ ಪರಿಹಾರ’ ಎಂದವ, ಅದೇ ಪರಿಹಾರವನ್ನು ಬಯಸಿ, ಕರೆದು ತನ್ನದಾಗಿಸಿಕೊಂಡ.
ವ್ಯಕ್ತಿಯ ವ್ಯಕ್ತಿತ್ವದ ಬೇರುಗಳು ಬಾಲ್ಯದಲ್ಲಿ ಎನ್ನುತ್ತಾರೆ. ರಾಬಿನ್ ನ ವಿಷಯದಲ್ಲಿ ಇದು ಸತ್ಯ. ಒಳ್ಳೆಯ ಕೌಟುಂಬಿಕ ಹಿನ್ನಲೆಯಿಂದ ಬಂದ ರಾಬಿನ್ ಶಾಲೆಯಲ್ಲಿ ಬುದ್ಧಿವಂತ, ಆಟೋಟದಲ್ಲೂ ಮುಂದು. ಆದರೆ ಕಾಲೇಜಿನ ದೊಡ್ಡ ಹುಡುಗರು ಸತಾಯಿಸಿ, ಗೋಳಾಡಿಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ದಾರಿ ಹುಡುಕಿ ಮನೆಗೆ ಓಡುತ್ತಿದ್ದವನು, ಸೋದರರ ನಡುವೆ ಕಳೆದು ಹೋಗುತ್ತಿದ್ದ ಅಮ್ಮನ ಗಮನ ತನ್ನ ಕಡೆ ಹರಿಯಲಿ ಎನ್ನುವ ಕಾರಣಕ್ಕೆ ಕಥೆ ಕಟ್ಟಿ, ತಮಾಷೆ ಮಾಡಿ ಅಮ್ಮನನ್ನು ನಗಿಸುತ್ತಿದ್ದವನು. ೪೦ ಕೋಣೆಗಳ ಹಳ್ಳಿ ಮನೆಯಲ್ಲಿ ಈತನ ಸಂಗಾತಿಗಳು ಈತನ ಬೊಂಬೆಗಳು ಮಾತ್ರ. ಮನೆಯಿಂದ ಹೆಚ್ಚಾಗಿ ದೂರವೇ ಇರುತ್ತಿದ್ದ ಅಪ್ಪ ಅಪರೂಪಕ್ಕೆ ಮನೆಯಲ್ಲಿದ್ದರೆ ಈತ ನಡುಗುತ್ತಿದ್ದ. ಅಮ್ಮ ತಾನೂ ಕೆಲಸ ಮಾಡುತ್ತಿದ್ದರಿಂದ ಕೆಲಸದವರ ಮೇಲೆ ಮಗನನ್ನು ಬಿಟ್ಟು ಹೋಗುತ್ತಿದ್ದಳು. ಆತನೇ ಹೇಳುವಂತೆ ಆಗಿನಿಂದ ಅವನಿಗೆ ಸದಾ ’ನನ್ನನ್ನು ಪ್ರೀತಿಸಿ’ ಎನ್ನುವುದೇ ಖಾಯಿಲೆ, ಗೀಳು. ಪ್ರೀತಿಯ ನಿರಂತರ ಹುಡುಕಾಟ ಅವನದ್ದು. ಒಂದೊಮ್ಮೆ ಶಾಲೆಗೆ ಮೊದಲಿಗನಾಗಿದ್ದ ಹುಡುಗ ಪದವಿ ಪಡೆಯುವ ವೇಳೆಗೆ ಯಾವ ಪರಿ ಕುಸಿದಿದ್ದ ಎಂದರೆ, ಇಡೀ ತರಗತಿ ಅವನನ್ನು ’ನಿಸ್ಸಂದೇಹವಾಗಿ ಜೀವನದಲ್ಲಿ ಸೋಲುವ ವ್ಯಕ್ತಿ’ ಎಂದು ಚುನಾಯಿಸಿತ್ತಂತೆ. ತನ್ನ ಅಷ್ಟು ಪ್ರಸಿದ್ಧಿ, ವಿಜಯಗಳ ನಂತರವೂ ಸ್ನೇಹಿತರ ಈ ಮಾತನ್ನು ನಿಜ ಮಾಡಲು ಪಣ ತೊಟ್ಟವನಂತೆ ಹೊರಟುಬಿಟ್ಟ ರಾಬಿನ್.

ಇರಲಿ, ಆನಂತರ ರಾಬಿನ್ ಹೊರಳಿದ್ದು ರಂಗಭೂಮಿಯ ಕಡೆ. ಈತ ನಟಿಸಿದ್ದ ಒಲಿವಿಯರ್ ನಾಟಕ ಈತನಲ್ಲಿದ್ದ ಕಲಾವಿದನಿಗೆ ರಂಗು ಹಚ್ಚಿತು. ಅತ್ಯಂತ ನಾಚಿಕೆ ಸ್ವಭಾವದ ರಾಬಿನ್ ತನ್ನ ವ್ಯಕ್ತಿತ್ವಕ್ಕೆ ಬೇರೆ ಬೇರೆ ಪಾತ್ರಗಳ ದೇಹ ತೊಡಿಸಿ ನಾಚಿಕೆಯನ್ನು ಗೆಲ್ಲತೊಡಗಿದ್ದ. ಇವನ ಪ್ರತಿಭೆಯನ್ನು ಕಂಡ ಜೂಲಿಯರ್ಡಿನ ರಂಗಶಾಲೆಯ ಗುರುಗಳು ಅವನಿಗೆ ’ಇನ್ನು ನಿನಗೆ ನಾವು ಕಲಿಸುವುದೇನೂ ಉಳಿದಿಲ್ಲ, ಹೋಗು ರಂಗದ ಮೇಲೆ’ ಎಂದು ಇವನನ್ನು ಕಳಿಸಿಕೊಟ್ಟರು.
೧೯೭೦ರಿಂದ ಕ್ಯಾಲಿಫೋರ್ನಿಯಾದಲ್ಲಿ ಈತ ಹಾಸ್ಯಪ್ರಧಾನ ಕಾರ್ಯಕ್ರಮಗಳನ್ನು, ರಂಗ ಪ್ರದರ್ಶನಗಳನ್ನು ಕೊಡಲು ಪ್ರಾರಂಭಿಸಿದ. ಆಗ ಕ್ಯಾಲಿಫೋರ್ನಿಯ ಹಿಪ್ಪಿ, ಮಾದಕ ಪದಾರ್ಥ ಮತ್ತು ಮಾದಕ ಜೀವನದ ನೆಲೆ ಆಗಿದ್ದ ಕಾಲ. ರಾಬಿನ್ ತನ್ನನ್ನು ಆಗಿನ ಆ ಪ್ರಚಂಡ ಸುಳಿಗೆ ಒಪ್ಪಿಸಿಕೊಂಡುಬಿಟ್ಟ. ಡ್ರಗ್ಸ್ ಈತನ ಪ್ರದರ್ಶನವನ್ನು ಉದ್ಧೀಪಿಸುತ್ತಾ, ವ್ಯಕ್ತಿತ್ವನ್ನು ಇನ್ನೂ ಹೆಚ್ಚಿನ ತಳಮಳಕ್ಕೊಡ್ಡುತ್ತಾ ಹೋಯಿತು. ಅಲ್ಲಿಂದ ಆತ ನಡೆದದ್ದು ಲಾಸ್ ಏಂಜಲೀಸ್ ಗೆ. ಅಲ್ಲಿ ಈತನ ಪ್ರತಿಭೆ ಒಬ್ಬ ಟಿವಿ ನಿರ್ಮಾಪಕನ ಕಣ್ಣಿಗೆ ಬಿತ್ತು. ಆತ. ’ಒಂದಲ್ಲ ಒಂದು ದಿನ ಇವನು ಮನೋರಂಜನೆ ಕ್ಷೇತ್ರವನ್ನು ಆಳುತ್ತಾನೆ’ ಎಂದು ಭವಿಷ್ಯ ನುಡಿದು ಈತನನ್ನು ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾನೆ. ಅಲ್ಲಿಂದಾಚೆಗೆ ಅವನು ಒಂದೊಂದಾಗಿ ಎತ್ತರಗಳನ್ನು ಏರುತ್ತಾ, ಹೊಸ ಹೊಸ ಎತ್ತರಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ.
ಇವನದೇ ಟಿವಿ ಶೋಗಳು ನಡೆಯುತ್ತವೆ, ಚಲನಚಿತ್ರಕ್ಕೆ ಈತ ಲಗ್ಗೆ ಹಾಕುತ್ತಾನೆ. ಈತನ ಶೋಗಳಿಗೆ ಇನ್ನಿಲ್ಲದ ಬೇಡಿಕೆ. ಮಾರಾಟ ಪ್ರಾರಂಭವಾದ ಅರ್ಧ ಗಂಟೆಯೊಳಗೆ ಟಿಕೇಟುಗಳು ಖರ್ಚಾಗಿ ಹೊಸ ದಾಖಲೆಯನ್ನೇ ಸೃಷ್ಟಿಸುತ್ತವೆ, ಇದು ಆನ್ ಲೈನ್ ಬುಕಿಂಗ್ ಇಲ್ಲದ ಕಾಲದ ಕಥೆ. ಈ ಎಲ್ಲಾ ವಿಜಯಗಳ ನಡುವೆ ಇವನ ಕುಡಿತ, ಮಾದಕ ಪದಾರ್ಥಗಳ ಸೇವನೆಯೂ ನಡೆಯುತ್ತಾ ಹೋಯಿತು. ಆದರೆ ಏನಾಯಿತೋ. ಎಲ್ಲಿ ಯಾವ ಸತ್ಯ ಸಾಕ್ಷಾತ್ಕಾರವಾಯಿತೋ ಈತ ಕೊಕೆನ್ ಅನ್ನು ತ್ಯಜಿಸಿದ, ಮತ್ತೆ ಅದನ್ನು ಮುಟ್ಟುವುದಿಲ್ಲ ಎಂದು ತನಗೆ ತಾನೆ ಹೇಳಿಕೊಂಡ. ಕುಡಿತವನ್ನು ಬಿಡಲು ಮತ್ತೆ ಮತ್ತೆ ರಿ ಹ್ಯಾಬಿಲಿಟೇಶನ್ ಸೆಂಟರ್ ಗೆ ಸೇರಿದರೂ, ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಆತನಿಗೆ ಸಾಧ್ಯವಾಗಲಿಲ್ಲ.
ಪ್ರತಿ ದಿನ ರಂಗವನ್ನೇರಿ ನಗಿಸುವುದು ಸುಲಭವಲ್ಲ. ಸೋಲಿನ ಭಯ, ಮತ್ಯಾರೋ ಗೆದ್ದು ಬಿಡುವ ಭಯ, ಅತಂತ್ರತೆ, ಅಭದ್ರತೆ, ಇಂದು ಕಿವಿಯನ್ನು ಬೆಚ್ಚಗಿಡುವ ಚಪ್ಪಾಳೆಗಳು ನಾಳೆ ತನ್ನನ್ನು ನಿರಾಕರಿಸಿದರೆ ಎನ್ನುವ ಭಯ, ಒಂದೊಮ್ಮೆ ಒಂದಾನೊಂದು ದಿನ ತನ್ನನ್ನು ಯಾರೂ ಗುರುತಿಸದಿದ್ದರೆ ಎನ್ನುವ ಭಯ… ಯಾವುದೇ ಕಲಾವಿದ ಎದುರಿಸುವ ಹೆದರಿಕೆ, ಶಂಕೆ, ಆತಂಕಗಳು ಇವನನ್ನೂ ಕಾಡುತ್ತಿದ್ದವು, ಈತ ಇನ್ನಷ್ಟು, ಮತ್ತಷ್ಟು ತೀವ್ರವಾಗಿ ತನ್ನನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಆಗ ಇವನನ್ನು ಕಂಡ ಒಬ್ಬ ವಿಮರ್ಶಕ, ’ಈತನ ಸ್ವಗತಗಳ ತೀವ್ರತೆ ಗಾಬರಿಗೊಳಿಸುತ್ತದೆ. ಎಲ್ಲಿ ಯಾವ ಘಳಿಗೆಯಲ್ಲಿ, ಯಾವ ತಂತು ಕಡಿದುಬಿಡುತ್ತದೋ ಎಂದು ಹೆದರಿಕೆ ಆಗುತ್ತದೆ’ ಎಂದು ಹೇಳುತ್ತಿದ್ದ. ಆದರೆ ರಾಬಿನ್ ಗೆ ತನ್ನ ಪ್ರತಿಭೆಯ ಬಗ್ಗೆ ಇನ್ನಿಲ್ಲದ ನಂಬಿಕೆ ಇತ್ತು. ಆ ನಂಬಿಕೆಯೇ ಇವನಿಗೆ ’ಗ್ರಾಮಿ ಪ್ರಶಸ್ತಿ’ ಗೆಲ್ಲಿಸಿಕೊಟ್ಟಿತು, ’ಆಸ್ಕರ್’ ಗೆಲ್ಲಿಸಿಕೊಟ್ಟಿತು. ಆದರೆ ಇದ್ಯಾವುದೂ ಅವನ ಹೃದಯದಲ್ಲಿದ್ದ ಖಾಲಿತನವನ್ನು ತುಂಬಲಿಲ್ಲ.
ಆಗಸ್ಟ್ ೧೧, ೨೦೧೪, ಈತ ತನ್ನ ಆಳದ ಆತಂಕವನ್ನು, ಖಿನ್ನತೆಯನ್ನು ಸೋಲಿಸಲು ಹೊರಟೇಬಿಟ್ಟ….
One Hour Photo, Dead Poets Society, World’s Greatest Dad, Good Morning, Vietnam, Insomnia, Aladdin, Good Will Hunting… ಮರೆತೇನೆಂದರ ಮರಿಯಲಿ ಹ್ಯಾಂಗ?
’ಜೀವನದ ದೊಡ್ಡ ದುರಂತ ಎಂದರೆ ಒಂಟಿಯಾಗಿ ಉಳಿದು ಬಿಡುವುದು ಎಂದುಕೊಳ್ಳುತ್ತಿದ್ದೆ. ಅದಲ್ಲ, ಜೀವನದ ದುರಂತ ಎಂದರೆ ’ನೀನು ಒಂಟಿ’ ಎಂದು ಭಾವಿಸುವಂತೆ ಮಾಡುವ ಜನಗಳ ಜೊತೆ ಉಳಿಯುವುದು’ ಎಂದ ರಾಬಿನ್ ಯಾಕೋ ನನ್ನನ್ನು ಬಿಡುತ್ತಿಲ್ಲ.



The best obituary about Robin I have read so far… 🙁
Enu helali anthale thilithilla ….
‘’ಜೀವನದ ದೊಡ್ಡ ದುರಂತ ಎಂದರೆ ಒಂಟಿಯಾಗಿ ಉಳಿದು ಬಿಡುವುದು ಎಂದುಕೊಳ್ಳುತ್ತಿದ್ದೆ. ಅದಲ್ಲ, ಜೀವನದ ದುರಂತ ಎಂದರೆ ’ನೀನು ಒಂಟಿ’ ಎಂದು ಭಾವಿಸುವಂತೆ ಮಾಡುವ ಜನಗಳ ಜೊತೆ ಉಳಿಯುವುದು’ ಎಂದ ರಾಬಿನ್ ಯಾಕೋ ನನ್ನನ್ನು ಬಿಡುತ್ತಿಲ್ಲ.”
ನಿಜ ಎಂತಹ ಮಾತು, ಸಂಧ್ಯಾಜಿ, ಮೊನ್ನೆ ಇದೇ ರೀತಿ ನಮ್ಮ ಸಮೀಪದ ಬಂಧುಗಳಲ್ಲಿ ಇಂಥದೊಂದು ಘಟನೆ ಜರುಗಿದ್ದು, ಈ ಜಗತ್ತು ಅಂದುಕೊಳ್ಳುವ ಎಲ್ಲಾ ಸುಖಗಳನ್ನು ಹೊಂದಿ, ಎಲ್ಲ ಬಂಧುಗಳ ಮಧ್ಯೆ ಇದ್ದುಕೊಂಡೇ ಒಂದು ಜೀವ ತನ್ನ ಕೈಯಾರೆ ಇಹಲೋಕ ತ್ಯಜಿಸುವಂತೆ ಮಾಡುಕೊಂಡ ಆ ಬಂಧುವಿನ ದು:ಖದಿಂದ ಇನ್ನೂ ಹೊರಬರಲಿಕ್ಕೆ ಆಗುತ್ತಿಲ್ಲ ನಮಗೆ, ಈಗ ರಾಬಿನ್ ಮತ್ತೆ ಅಂಥದೇ ಕೃತ್ಯವೆಸಗಿ ನಮಗೆಲ್ಲ ಅನ್ಯಾಯ ಮಾಡಿದನಲ್ಲವೇ? ಈ ಖಿನ್ನತೆಯ ಘೋರತೆ, ರಾಬಿನ್ ಬದುಕಿನ ಕುರಿತು ಮನತಟ್ಟುವ ಲೇಖನ. ವಿಷಾದದ ಛಾಯೆ ಮನವೆಲ್ಲ ಹರಡಿತು. ಮನತಟ್ಟುವ ಬರಹ.
simply good writeup.
So moving Madam. Intense, poignant and compassionate.
Best article i had ever read in AVADHI.. Thanks
Manamuttuva baraha mam thumbs eshtavaytu
The last pyara is the miror of our sense and sensibility… Im speechless… Ella padeda manushyana baduku shoonyadatta horalibiduttade… Adakke naavu namma antima usiru eleyuva tanakavu ondillondu samasyegalalli enagege agirutteve. Manadalli uloda apoorna ase yaavudannu geddaru tannannu gellalilla annodanna bahala chennagi helidira madam.
ಸಂಧ್ಯಾ, ರಾಬಿನ್ ಬಗ್ಗೆ ಯಾರಾದರು ಬರೆದಾರಾ ಅಂತ ಅಂದುಕೊಳ್ಳುವಾಗಲೆ ನೀವು ಬರೆದಿರಿ, ನನಗೆ ಈ ಕಲಾವಿದ ಆತ್ಮಹತ್ಯೆ ಮಾಡಿಕೊಂಡಿದ್ದು ನಂಬಲಾಗದ ಸುದ್ದಿ. ಎಂಥ ನಟ, ಈತನ ಡೌಟ್ ಫೈರ್ ನೋಡಿದಾಗೆಲ್ಲ ನನಗೆ ತುಂಬ ಖುಷಿಯಾಗುತ್ತಿತ್ತು. ಎಷ್ಟೊ ಸಲ ನಮ್ಮ ಕಮಲ್ ಇದಕ್ಕಿಂತ ಚೆನ್ನಾಗಿ ಮಾಡಿದ್ದಾರಲ್ಲ ಅಂತನ್ನಿಸಿದರೂ ರಾಬಿನ್ ಒರಿಜಿನಲ್ ಅಂತ ಕೂಡಾ ಅನ್ನಿಸುತ್ತಿತ್ತು. ನಿಮ್ಮ ಲೇಖನ ನನಗೆ ಸಮಾಧಾನ ಕೊಟ್ಟಿದೆ, ಆತನ ಸಾವಿಗಲ್ಲ , ನಮ್ಮ ಕನ್ನಡಿತಿ ಅವರ ಬಗ್ಗೆ ಬರೆದರಲ್ಲ ಅಂತ , ಥ್ಯಾಂಕ್ಯೂ.
Excellent piece of writing. Yes sometime some of us do feel lonely in the midst of all luxury and people.
Dead Poet’s Society is one of my favorite one.
Thanks for the writing.
ರಾಬಿನನ ವ್ಯಕ್ತಿತ್ವಕ್ಕೆ ಔಚಿತ್ಯಪೂರ್ಣವಾದ ಶ್ರದ್ಧಾಂಜಲಿಯಿದು.
-ಅನಿಲ
ನನ್ನನ್ನು ನೋವಿನಲ್ಲಿ ಮುಳುಗಿಸಿದ ನಿರ್ಗಮನ ಅದು… ಅವನ ನೋವು ನಿಮ್ಮನ್ನೂ ತಾಕಿತಲ್ಲಾ.. ನನ್ನ ಕೃತಜ್ಞತೆಗಳು ನಿಮಗೆಲ್ಲಾ.
ಮನ ಕಲಕುವ ಬರಹ, ಸಂಧ್ಯಾ!
ಶ್ರದ್ಧಾಂಜಲಿ…..!
What a great Man….meaning full article
koneya saalugagaLu..kanna jotege manavannu nenisidavu..
ಸೂಪರ್ ಬೆಸ್ಟ್.ಮೂಕಳಾದೆ.
ಕೊನೆ ಸಾಲುಗಳು ಹಿಡಿದು ನಿಲ್ಲಿಸಿ ಬಿಟ್ಟಿವೆ ನನ್ನನ್ನು….