ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ’ಕೃಷ್ಣ ನಿನ್ನ ಕೂಡಿದವರು ಹೇಳೋ ಏನಾದರು?’

ಮಂದ ಬೆಳಕಿನ ರಂಗ ಮಂಚ, ಅಲ್ಲಿದ್ದದ್ದು ಎರಡು ಖುರ್ಚಿ ಮತ್ತು ಒಂದು ಮೇಜು. ಖುರ್ಚಿ ಮೇಲೆ ಶಬಾನ ಅಜ್ಮಿ ಮತ್ತು ಫರೂಕ್ ಶೇಕ್. ಇಬ್ಬರೂ ಕೂತು ಪತ್ರಗಳನ್ನು ಓದುತ್ತಾ ಹೋಗುತ್ತಾರೆ … ಒಂದು ಜೀವಮಾನದ ಪತ್ರಗಳು … ಎರಡು ಜೀವನಗಳ ಮೂಲಕ ಎರಡು ಜಗತ್ತನ್ನು ಬೆಸೆದಿಟ್ಟ ಪತ್ರಗಳು. ಹೌದು ಎರಡು ಜಗತ್ತು, ’ಅವನ’ ಮತ್ತು ’ಅವಳ’ ಜಗತ್ತುಗಳು. ಆಂಗಿಕದ ನೆರವಿಲ್ಲದೆ, ಕೇವಲ ವಾಚಿಕವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುವ ಎರಡು ಜಗತ್ತುಗಳು ಮತ್ತು ಒಂದು ಜೀವನದುದ್ದದ ಕಾಲಮಾನ…
’ಗಂಡಸಿನ ಪ್ರಪಂಚ ’ಅವಳಿಂದ’ ಪ್ರಾರಂಭವಾಗಿ ಇಡೀ ಜಗವನ್ನೇ ಆಳಬೇಕು ಅನ್ನುತ್ತದೆ, ಅದೇ ಹೆಣ್ಣಿನ ಪ್ರಪಂಚ ಜಗವನ್ನು ಒಳಗೊಂಡೂ ಕೊನೆಗೆ ’ಅವನ’ಲ್ಲಿ ಪೂರ್ಣವಾಗುತ್ತದೆ.’ – ಹೀಗನ್ನಿಸಿದ್ದು ಈ ನಾಟಕ ನೋಡುವಾಗ. ಅದು ಒಂದು ವಿಶಿಷ್ಟವಾದ ನಾಟಕ, ಮೂರು ಬೇರೆ ಬೇರೆ ಭಾಷೆಗಳಲ್ಲಿ, ಮೂರು ವಿಭಿನ್ನ ಸಂಸ್ಕೃತಿಗಳಲ್ಲಿ ಒಡಮೂಡಿದ್ದರೂ ಮೂರೂ ಕಡೆಗೂ ಸಂದಂತಹ ನಾಟಕ. ನಾಟಕದ ಮೂರೂ ಪ್ರಯೋಗಗಳನ್ನೂ ನಾನು ನೋಡಿದ್ದೆ, ಮೂರೂ ಸಲವೂ ನಾಟಕ ಮುಗಿಯುವಷ್ಟರಲ್ಲಿ ಕಣ್ಣು, ಮನಸ್ಸು ಎರಡೂ ಒದ್ದೆ…. ನಾಟಕ ಮೊದಲು ಬಂದದ್ದು ಇಂಗ್ಲಿಶ್ ನಲ್ಲಿ, ’ಲವ್ ಲೆಟರ್ಸ್’ ಅಂತ, ಎ ಆರ್ ಗುರ್ನೀ ಬರೆದದ್ದು. ಅದನ್ನು ರಜತ್ ಕಪೂರ್ ಮತ್ತು ಶೆಹನಾಜ಼್ ಪಟೇಲ್ ರಂಗ ಶಂಕರದಲ್ಲಿ ಅಭಿನಯಿಸಿದ್ದರು. ಶೆಹನಾಜ಼್ ಪಟೇಲಳ ಜೀವಂತಿಕೆ, ರಜತ್ ಕಪೂರ್ ನ ತೀವ್ರತೆ ಎರಡೂ ಮನಸ್ಸನ್ನು ತಟ್ಟಿತ್ತು. ಜಾವೇದ್ ಸಿದ್ದಿಕಿ ಅದನ್ನು ಭಾರತದ ಸಂಸ್ಕೃತಿ, ಸಮಾಜಕ್ಕೆ ಒಗ್ಗಿಸಿ ’ತುಮ್ಹಾರಿ ಅಮೃತಾ’ ಎನ್ನುವ ನಾಟಕ ಬರೆದರು. ಅದರಲ್ಲಿ ಅಭಿನಯಿಸಿದ್ದು ಶಬನಾ ಮತ್ತು ಫರೂಕ್ ಶೇಕ್. ಅದು ಪುಸ್ತಕವಾಗಿ ಮುದ್ರಣವಾಗುವ ಮೊದಲೇ ಜಯಂತ ಕಾಯ್ಕಿಣಿ ಇದನ್ನು ’ಇಂತಿ ನಿನ್ನ ಅಮೃತಾ’ ಎನ್ನುವ ನಾಟಕವಾಗಿ, ಅದನ್ನು ಪುಸ್ತಕ ರೂಪಕ್ಕೂ ಇಳಿಸಿದರು. ಅದನ್ನು ನೋಡಿದ್ದು ರಂಗಶಂಕರದಲ್ಲಿ. ಅರುಂಧತಿ ನಾಗ್ ಮತ್ತು ಶ್ರೀನಿವಾಸ ಪ್ರಭು ರಂಗದ ಮೇಲಿದ್ದರು. ಶ್ರೀನಿವಾಸ್ ಪ್ರಭು ಅವರ ಕಂಠದಲ್ಲಿ ಪ್ರೇಮ ಪತ್ರಗಳು ಘಜ಼ಲ್ ನಂತೆ ಕೇಳಿಸುತ್ತಿದ್ದವು! ಮೂರು ವಿಭಿನ್ನ ಭಾಷೆ, ಸಂಸ್ಕೃತಿಗಳಲ್ಲಿದ್ದರೂ ನಾಟಕದ ಭಾವ ಮತ್ತು ಸತ್ವ ಹಾಗೆ ಇತ್ತು. ಅಂದರೆ ಮೂರೂ ಸಂಸ್ಕೃತಿಗಳಲ್ಲೂ ಹೆಣ್ಣಿನ ಮತ್ತು ಗಂಡಿನ ಮನೋಭಾವ ಮತ್ತು ಜಗತ್ತು ಹಾಗೇ ಇತ್ತು!
ಬಾಲ್ಯದ ಹುಡುಗಾಟಿಕೆಯಲ್ಲಿ ಪರಿಚಿತರಾಗುವ ಝುಲ್ಫಿ ಮತ್ತು ಅಮೃತಾ, ದಿನ ಕಳೆದಂತೆ ಆತ್ಮೀಯರಾಗುತ್ತಾ, ಆಮೇಲೆ ಸ್ನೇಹಿತರಾಗಿ ಕೊನೆಗೆ ಪ್ರೇಮಿಗಳಾಗುತ್ತಾರೆ. ಝುಲ್ಫಿಯ ತಂದೆ ಒಬ್ಬ ಮಹತ್ವಾಕಾಂಕ್ಷಿ ವ್ಯಕ್ತಿ, ಒಂದು ಗುರಿಯನ್ನಿಟ್ಟುಕೊಂಡು, ಮಗನಿಗಾಗಿ ಒಂದು ಅರಮನೆ ಕಟ್ಟಿ, ಅದಕ್ಕೆ ಅನುಸಾರವಾಗಿ ಮಗನನ್ನು ಬೆಳೆಸುತ್ತಾ ಹೋಗುತ್ತಾರೆ. ಆದರೆ ಅಮೃತಾ ನತದೃಷ್ಟೆ, ಅವಳೊಂದು ಒಡೆದ ಮನೆಯ ಕೂಸು. ಅವಳ ತಂದೆ ಗಾಯಕಿಯೊಬ್ಬಳನ್ನು ಸಂಗಾತಿಯನ್ನಾಗಿಸಿಕೊಂಡು ಮನೆಗೆ ಕರೆ ತಂದಿರುತ್ತಾರೆ. ತಾಯಿ ದುಃಖದಲ್ಲಿ ಸೋತು ಸಂಪೂರ್ಣವಾಗಿ ದೇವರಿಗೆ ಶರಣಾಗಿರುತ್ತಾರೆ. ಇಬ್ಬರಿಗೂ ಬಾಲಕಿ ಅಮೃತಾಳ ಬಗ್ಗೆ ಗಮನ ಇಲ್ಲ, ಆಕೆಗಿರುವ ಒಬ್ಬನೇ ಆತ್ಮೀಯ ಅಂದರೆ ಝುಲ್ಫಿ. ಅವಳ ದೋಸ್ತ, ಒಡನಾಡಿ, ಭವಿಷ್ಯದ ಸಂಗಾತಿಯ ಒಂದು ಅಸ್ಪಷ್ಟ ಮುಖದ ಛಾಯೆ. ಅವಳ ಮಟ್ಟಿಗೆ ಅವನೇ ಗೆಳೆಯ, ಸಂಗಾತಿ, ಪ್ರೇಮಿ, ಮತ್ತು ಜಗತ್ತು…. ಆದರೆ ಝುಲ್ಫಿ ತನ್ನ ಜೀವನವನ್ನು ತಂದೆ ನಿರ್ಮಿಸಿದ ಪಾತ್ರಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಂಡವನು. ಆತ ಆಕೆಗೆ ಒಬ್ಬ ಪ್ರೇಮಿ ಮಾತ್ರ ಆಗಬಲ್ಲ. ಅದೂ ಪತ್ರದಲ್ಲಿ ಮಾತ್ರ. ಅವನ ಜಗತ್ತಿನಲ್ಲಿ ಆಕೆ ಒಂದು ಭಾಗ ಮಾತ್ರ. ಅವನೆಡೆಗಿನ ತನ್ನ ಅದಮ್ಯ ತುಡಿತವನ್ನು ಮೀರಲು ಆಕೆ ನಿರಂತರ ಪ್ರಯತ್ನಿಸುತ್ತಲೇ ಹೋಗುತ್ತಾಳೆ, ನಿರಂತರ ಸೋಲುತ್ತಳೇ ಹೋಗುತ್ತಾಳೆ. ಬದುಕು ಮತ್ತು ಪ್ರೇಮವನ್ನು ಬೇರೆ ಬೇರೆಯಾಗಿ ನೋಡಲಾಗದ ಆಕೆ ಅದಕ್ಕೆ ಬಲಿಯಾಗುತ್ತಾಳೆ. ನಾಟಕ ದುರಂತರದಲ್ಲಿ ಮುಗಿಯುತ್ತದೆ.
ಆಮೇಲೆ ನನ್ನ ಯೋಚನೆ ನಾಟಕಕ್ಕಷ್ಟೇ ನಿಲ್ಲಲಿಲ್ಲ..
ಕೃಷ್ಣನೊಡನೆ ತನ್ನ ಹೆಸರನ್ನು ಪೋಣಿಸಿದ ರಾಧೆಗೆ ಕೃಷ್ಣನನ್ನು ಹೊರತು ಪಡಿಸಿ ಬೇರೆ ಅಸ್ತಿತ್ವವೇ ಇಲ್ಲ… ಕೊಳಲನ್ನು ಕೆಳಗಿಟ್ಟು, ಪಾಂಚಜನ್ಯ ಕೈಗೆತ್ತಿಕೊಂಡು ಆತ ಮಧುರೆಗೆ ಹೋದ ಮೇಲೆ ರಾಧೆ ಏನಾದಳು? ಅಂದರೆ ಆಮೇಲೆ ರಾಧೆಗೆ ಇರುವಿಕೆಯೇ ಇಲ್ಲ. ಆದರೆ ಕೃಷ್ಣನ ಜೀವನದಲ್ಲಿ ಆಮೇಲೂ ಹಲವಾರು ಹೆಣ್ಣುಗಳು ಬರುತ್ತಾರೆ, ಆದರೆ ಕೃಷ್ಣ ಎಲ್ಲೂ ರಾಜಕಾರಣವನ್ನು, ರಾಜ್ಯ ಕಾರಣವನ್ನೂ ಮರೆಯುವುದೇ ಇಲ್ಲ … ಒಂದು ಕೈಯಲ್ಲಿ ಕೊಳಲು, ಮತ್ತೊಂದು ಕೈಯಲ್ಲಿ ಪಾಂಚಜನ್ಯ ಹಿಡಿಯುವುದು ಕೃಷ್ಣನಿಗೆ ಸಾಧ್ಯ, ಆದರೆ ಅದು ರಾಧೆಗೆ ಏಕೆ ಆಗುವುದಿಲ್ಲ? ಪ್ರೇಮದ ಜೊತೆ ಜೊತೆಯಲ್ಲೇ ಬಿಲ್ಲು ಬಾಣ ಕೈಗೆತ್ತಿಕೊಂಡ ಸತ್ಯಭಾಮೆ ಏಕೆ ಅಹಂಕಾರಿಯಂತೆ ಕಾಣುತ್ತಾಳೆ? ಕೃಷ್ಣ ಮತ್ತು ಕೃಷ್ಣ ಮಾತ್ರ ಪ್ರಪಂಚ ಅಂದುಕೊಳ್ಳುವ ರುಕ್ಮಿಣಿ ಮಾತ್ರ ಯಾಕೆ ದೇವಿಯಾಗುತ್ತಾಳೆ? ನಾವು ಒಂದು ಸಿದ್ಧ ಮಾದರಿಯನ್ನಿಟ್ಟುಕೊಂಡೇ ಹೆಣ್ಣು ಗಂಡುಗಳ ಪಾತ್ರವನ್ನು ನಿರ್ಧರಿಸುತ್ತೇವಾ?

ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಮಹತ್ವಾಕಾಂಕ್ಷೆ ಪುರುಷನಲ್ಲಿ ಒಂದು ಗುಣವಾದರೆ, ಹೆಣ್ಣಿನಲ್ಲಿ ಯಾಕೆ ಒಂದು ಅವಗುಣವಾಗುತ್ತದೆ? ಇಲ್ಲಿ ಶಬನಾ ಆಜ್ಮಿ ಒಂದು ಸಂದರ್ಶನದಲ್ಲಿ ಹೇಳಿದ ಮಾತು ನೆನಪಾಗುತ್ತದೆ, ಜಾವೇದ್ ಜೊತೆ ಮದುವೆಯ ನಂತರ ತನ್ನೆಲ್ಲಾ ಆಸಕ್ತಿ, ಹವ್ಯಾಸ, ಕಲೆ, ಸಾಹಿತ್ಯ, ಚಳುವಳಿ ಎಲ್ಲದರ ನಡುವೆಯೂ ತಾನು ಒಳ್ಳೆಯ ಗೃಹಿಣಿಯಾಗಲೇಬೇಕು ಎನ್ನುವ ’ಸೂಪರ್ ವುಮನ್’ ಸಿಂಡ್ರೋಮ್ ಗೆ ಸಿಲುಕುವ ಆಕೆ, ಆ ಪ್ರಯತ್ನದಲ್ಲಿ ತನ್ನನ್ನು ವಿಪರೀತ ಶ್ರಮಕ್ಕೆ, ಒತ್ತಡಕ್ಕೆ ಸಿಲುಕಿಸಿಕೊಳ್ಳುತ್ತಾ ಹೋಗುತ್ತಾಳೆ. ಅಂದರೆ ಶಬನಾಳಂತಹ ಶಬನಾಗೂ ತನ್ನೆಲ್ಲಾ ಸಾಧನೆಗಿಂತಾ ಮನೆಯಲ್ಲಿ ತಾನು ಒಳ್ಳೆ ಗೃಹಿಣಿ ಆದರೆ ಮಾತ್ರ ಹೆಣ್ಣಾಗಿ ತಾನು ಗೆದ್ದಂತೆ ಅನ್ನಿಸಿಬಿಡುತ್ತದೆ. ಕಡೆಗೆ ಪತಿ ಜಾವೇದ್ ಅವಳನ್ನು ಕೂರಿಸಿಕೊಂಡು ನಿನ್ನಲ್ಲಿ ನಾನು ಮೆಚ್ಚಿದ್ದು, ನೀನು ಮನೆ ಹೇಗೆ ಇಟ್ಟುಕೊಳ್ಳುವೆ ಎಂಬುದನ್ನಲ್ಲ, ನಿನ್ನ ವ್ಯಕ್ತಿತ್ವವನ್ನು ಎಂದು ಹೇಳಬೇಕಾಗುತ್ತದೆ.
ಅಂದರೆ ಗಂಡಸಿಗೆ ಸಹಜವಾಗಿ ಕಾಣುವ, ಸಾಧ್ಯವಾಗುವ ವೈಯಕ್ತಿಕ ಮತ್ತು ವೃತ್ತಿಬದುಕಿನ ಸಮನ್ವಯ ಹೆಣ್ಣಿಗೇಕೆ ಇಷ್ಟು ಕಷ್ಟ ಆಗುತ್ತದೆ? ಹೆಣ್ಣು ಯಾಕೆ ತನ್ನ ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿಸಿಕೊಂಡು ವೃತ್ತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗುವುದಿಲ್ಲ? ನನ್ನ ಗೆಳತಿ ಒಬ್ಬಳಿದ್ದಾಳೆ, ಪ್ರತಿಭಾವಂತೆ. ಮನಸ್ಸಿಟ್ಟು ಕೂತರೆ ಅದ್ಭುತವಾಗಿ ಬರೆಯಬಲ್ಲವಳು. ಆದರೆ ಅವಳ ಬರವಣಿಗೆಯ ವೇಗ ನಿರ್ಧಾರವಾಗುವುದು ಅವಳ ಪ್ರೇಮಿಯ ಅಂದಿನ ಮನಸ್ಥಿತಿ ಮತ್ತು ಅವನ ಅಂದಿನ ಇವಳೆಡೆಗಿನ ಭಾವನೆಗಳ ಮೇಲೆ .. ’ಪ್ರೇಮದಲ್ಲಿ ಘಾಸಿಗೊಳ್ಳದೆ ಇರಬೇಕಾದರೆ ’ಸಾಕು’ ಅನ್ನಿಸಿಕೊಳ್ಳುವ ಮೊದಲೇ ’ಸಾಕು’ ಅಂದುಬಿಡಬೇಕು’ ಅಂದೊಮ್ಮೆ ಬರೆದಿದ್ದಳಲ್ಲ ಗೆಳತಿ, ಅವಳ ಮಾತು ನನಗೆ ಜಾಣತನವಾಗಿ ಕಾಣಿಸದೆ ನೋವಿನ ಒಸರಿನಂತೆ ಯಾಕೆ ಕಾಣಿಸಿತು?
ಮೂಲಭೂತವಾಗಿ ಗಂಡು ಒಬ್ಬ ’ಪ್ರೊವೈಡರ್’ ಹಾಗು ಹೆಣ್ಣು ಒಬ್ಬ ’ಕನ್ಸರ್ವೇಟರ್’ ಅನ್ನುವುದು ನಿಜವಾ? ಮತ್ತು ಆ ಗುಣಗಳೇ ನಮ್ಮ ನಡುವಳಿಕೆಗಳನ್ನು, ಧೋರಣೆಗಳನ್ನೂ ನಿರ್ಣಯಿಸುತ್ತದಾ? ಈ ’ಒದಗಿಸುವವ’ನಾಗಿರಬೇಕಾದ ಗುಣದಿಂದಲೇ ಗಂಡಿನ ಜಗತ್ತಿನಲ್ಲಿ ಮಿಕ್ಕೆಲ್ಲ ಗೌಣವಾಗಿ ತನ್ನ ಸಾಧನೆ, ಅಧಿಕಾರ, ಸಂಪಾದನೆ ಇವೆಲ್ಲಾ ಮುಖ್ಯವಾಗುತ್ತದಾ? ಇಲ್ಲ ಹೆಣ್ಣನ್ನು ’ಗೆಲ್ಲುವ’, ಒಲಿಸಿಕೊಳ್ಳುವ ಕ್ರಿಯೆಯನ್ನು ಪಣ ತೊಟ್ಟಂತೆ ಮಾಡುವ ಗಂಡು, ಅವಳು ಒಲಿದ ಮೇಲೆ ಗೆಲುವನ್ನು ಹೊಸಿಲಿನಾಚೆಗೆ ಹೊರಪ್ರಪಂಚಕ್ಕೆ ವಿಸ್ತರಿಸಿಕೊಳ್ಳುತ್ತಾನಾ?

’ಭಾವನೆ’ಗಳಿಗಾಗಿ ಹಂಬಲಿಸುವ ಹೆಣ್ಣು ಮತ್ತು ’ಅಭಿಪ್ರಾಯ’ಗಳನ್ನು ಕೊಡುವ ಗಂಡು ಇವರಿಬ್ಬರಿಗೂ ಇವು ಅರಿವಿಲ್ಲದಂತೆ ಮಿತಿಗಳಾಗಿ ಬಿಡುತ್ತದೆಯೇನೋ ಅನ್ನಿಸಿಬಿಡುತ್ತದೆ. ಇದೇ ಸಮಯದಲ್ಲಿ ಫೇಸ್ ಬುಕ್ಕಿನಲ್ಲಿ ಒಬ್ಬ ಸ್ನೇಹಿತ ಬರೆದಿದ್ದ ಸಾಲುಗಳನ್ನು ಓದಿದೆ, “ಈ ಹಾಯ್ಕುಗಳು ಅದೆಷ್ಟು ಚೆಂದ.ಝೆನ್ ಕತೆಗಳಿಗೂ,ಹಾಯ್ಕುಗಳಿಗೂ ವಿಚಿತ್ರ ಸಂಬಂಧವಿದೆ ಅಂತ ಅನಿಸುತ್ತಿದೆ.ಆದರೆ ಅಲ್ಲೊಂದು ಅಗೋಚರ ಅಂತರವಿದೆ. ಬರೀ ನಿಸರ್ಗದ ಸುಕೋಮಲ ಬೆಳವಣಿಗೆಗಳನ್ನು ಮಾತ್ರ ಉಲ್ಲೇಖಿಸುವ ಹಾಯ್ಕು ಹೆಣ್ಣಿನಂತೆಯೂ, ಸೂರ್ಯನ ಅಂಗಳದಲ್ಲಿನ ಸಮಸ್ತ ಚರಾಚರಗಳನ್ನು ಪ್ರತಿನಿಧಿಸುವ ಝೆನ್, ಯಾವುದನ್ನೂ ಬಿಡಲಾರೆ ಎನ್ನುವ ಥೇಟ್ ಗಂಡಿನಂತೆ ಭಾಸವಾಗುತ್ತಿದೆ………”, ಇಲ್ಲಿ ಬುದ್ಧಿಪೂರ್ವಕ ಜ಼ೆನ್ ಕಥೆಗಳು ಗಂಡಿಗೂ, ಭಾವ ಪೂರ್ವಕ ಹೈಕುಗಳು ಹೆಣ್ಣಿಗೂ ಹೋಲಿಕೆಯಾಗಿರುವುದು ಎಷ್ಟು ಸತ್ಯ ಅಲ್ಲವೇ?
ಮತ್ತೆ ನಾಟಕಕ್ಕೇ ಹಿಂದಿರುಗಿದರೆ ಝುಲ್ಫಿ ಅಪ್ಪ ಹೇಳಿದಂತೆ ನಡೆಯುತ್ತಾನೆ, ಭವಿಷ್ಯದ ಏಳಿಗೆಯನ್ನೇ ದೃಷ್ಟಿಯಾಗಿಟ್ಟುಕೊಂಡು ಅಪ್ಪ ಹೇಳಿದ್ದನ್ನೇ ಓದುತ್ತಾನೆ, ಸಿವಿಲ್ ಸರ್ವೀಸಿಗಾಗಿ ಓದುತ್ತಿದ್ದವನು, ಜವಹರ ಲಾಲ ನೆಹರುವನ್ನು ಭೇಟಿ ಮಾಡಿದ ನಂತರ ಅಪ್ಪ ಹೇಳಿದಂತೆ ವಕೀಲಿಯನ್ನು ಓದುತ್ತಾನೆ, ರಾಜಕ್ಕೀಯಕ್ಕಿಳಿಯುತ್ತನೆ, ಅಪ್ಪ ಹೇಳಿದಂತೆ ತನ್ನ ಭವಿಷ್ಯಕ್ಕೆ ನೆರವಾಗುವ ಪ್ರಭಾವಶಾಲಿ ಮನೆತನದ ಹೆಣ್ಣನ್ನೇ ಮದುವೆ ಆಗುತ್ತಾನೆ. ಇದರ ನಡು ನಡುವೆ ಅಮೃತಾಳಿಗೆ ಪತ್ರ ಮಿತ್ರ, ಗುಟ್ಟಿನ ಪ್ರೇಮಿಯೂ ಆಗಿರುತ್ತಾನೆ. ಅವನನ್ನು ಪ್ರೀತಿಸದೆ ಇರಲಾಗದೆ, ಅವನನ್ನು ಕಳೆದುಕೊಳ್ಳುವುದನ್ನು ತಡೆದುಕೊಳ್ಳಲಾಗದೆ ಅಮೃತಾ ಓದಲೆಂದು ಮುಂಬೈಗೆ ಹೋಗುತ್ತಾಳೆ, ಅಲ್ಲಿಂದ ಪ್ಯಾರಿಸ್, ಅಲ್ಲಿ ಯಾರನ್ನೋ ಮದುವೆಯಾಗುತ್ತಾಳೆ, ವಾಪಸ್ಸಾಗಿ, ಮಣ್ಣಿನಲ್ಲಿ, ಕ್ಯಾಮೆರಾದಲ್ಲಿ ಎಲ್ಲೆಲ್ಲೂ ತನ್ನ ಬದುಕಿಗೆ ಒಂದು ಕಾರಣವನ್ನು, ಒಂದು ಆಸರೆಯನ್ನು ಹುಡುಕುತ್ತಾ ಹೋಗುತ್ತಾಳೆ. ಇಷ್ಟರ ನಡುವೆ ಒಂದು ಅನಾಹುತವಾಗಿ ಅವಳು ಬರೆದಿದ್ದ ಪತ್ರಗಳು ಒಬ್ಬ ಪತ್ರಕರ್ತನ ಕೈಗೆ ಸಿಗುತ್ತದೆ. ತನ್ನ ಮೇಲೆ ಬರಬಹುದಾದ ಅಪವಾದ ಮತ್ತು ಆ ಮೂಲಕ ತಪ್ಪಿ ಹೋಗಬಹುದಾದ ಅಧಿಕಾರ ಎಲ್ಲವನ್ನೂ ಯೋಚಿಸಿದ ಝುಲ್ಫಿ ಅಮೃತಾಳನ್ನು ಗುಟ್ಟಾಗಿ ಮದುವೆಯಾಗಿ, ಮದುವೆಯ ತಾರೀಖನ್ನು ಹತ್ತು ವರ್ಷಗಳ ಹಿಂದಿನ ದಿನಕ್ಕೆ ಹಾಕಿಸುವ ಯೋಜನೆ ಹೂಡುತ್ತಾನೆ. ಇಲ್ಲಿ ಝುಲ್ಫಿಯೂ ಕೆಟ್ಟವನಲ್ಲ, ಅವನ ಪ್ರಯಾರಿಟಿಗಳು ಯಾವಾಗಲೂ ಸ್ಪಷ್ಟವಾಗಿಯೇ ಇರುತ್ತವೆ, ಆದರೆ ಪ್ರೀತಿಯೆದುರಲ್ಲಿ ಎಲ್ಲಾ ಕಾರಣಗಳನ್ನೂ, ತರ್ಕವನ್ನೂ, ಬುದ್ಧಿಮಾತನ್ನು ಕಾಲಬುಡಕ್ಕೆ ಒತ್ತಿ ನಿಂತವಳು ಅಮೃತಾ, ಹೀಗೆ ತನ್ನ ’ವೃತ್ತಿ ಬದುಕಿನ ಭದ್ರತೆಗಾಗಿ’ ಇಷ್ಟು ದಿನ ತನ್ನನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳದ ಝುಲ್ಫಿ, ತನ್ನ ಪ್ರೇಮವನ್ನು, ಯಾಚನೆಯನ್ನು, ಆರಾಧನೆಯನ್ನೂ ಇಷ್ಟು ದಿನ ಕಡೆಗಣಿಸಿದ ಝುಲ್ಫಿ ಈಗ ತನ್ನ ಅದೇ ವೃತ್ತಿ ಬದುಕಿಗಾಗಿ ತನ್ನನ್ನು ಗುಟ್ಟಾಗಿ ಮದುವೆಯಾಗಲು ಸಿದ್ಧನಾದ ಎನ್ನುವುದನ್ನು ತಡೆದುಕೊಳ್ಳುವುದು ಅವಳಿಗೆ ಸಾಧ್ಯವೇ ಆಗುವುದಿಲ್ಲ, ಅಮೃತಾ ಸಾಯುತ್ತಾಳೆ…
ಇಲ್ಲಿ ಯಾಕೋ ಎಚ್ ಎಸ್ ವಿ ಯವರ ಕವನದ ಸಾಲುಗಳು ನೆನಪಾಗುತ್ತಿವೆ,
ಕೃಷ್ಣ ನಿನ್ನ ಬೇಡಿದವರು
ಭಾಗ್ಯವಂತರಾದರು
ಕೃಷ್ಣ ನಿನ್ನ ಕಾಡಿದವರು
ಕೀರ್ತಿವಂತರಾದರು
ಕೃಷ್ಣ ನಿನ್ನ ಕೂಡಿದವರು
ಹೇಳೋ ಏನಾದರು?

‍ಲೇಖಕರು avadhi

12 April, 2013

30 Comments

  1. Ahalya Ballal

    ಆಹ್….ಇತಿ ನಿನ್ನ ಅಮೃತಾ!
    “ಹವೇಲಿಯ ಬದಿಗೆ ಹಾದರೆ, ಗೇಟಿನ ಎದುರು ನಿಂತು ಹವೇಲಿಯನ್ನೊಮ್ಮೆ ನನ್ನ ಕಣ್ಣಿಂದ ನೋಡು….”
    ” ನೋವಿನ ಎಷ್ಟೊಂದು ನಮೂನೆಗಳು ಝುಲ್ಫೀ. ಅಥವಾ ಒಂದೇ ನೋವೇ ತನ್ನ ರೂಪಗಳನ್ನು ಬದಲಿಸುತ್ತದೆಯೇ?”
    “ಮತ್ತು ಕ್ಯಾಲೆಂಡರಿನ ಹಾಳೆಗಳಂತೆ ಸರಿದು ಹೋದ ಎಲ್ಲ ಋತುಮಾನಗಳ ಬಗ್ಗೆ ಮಾತನಾಡುತ್ತೇನೆ. ಶಿಶಿರದಲ್ಲಿ ಉದುರಿದ ಎಲೆಗಳು ನನ್ನ ಕಾಲಡಿಯಲ್ಲಿ ಇನ್ನೂ ಇವೆ ಝುಲ್ಫೀ….”
    ಕಾವ್ಯ, ಕಥೆ, ಕಾದಂಬರಿ, ಶಿಲ್ಪಕಲೆ, ಪೈಂಟಿಂಗ್…..ಇವೆಲ್ಲವುಗಳ ನಾಟ್ಯಾಯಮಾನತೆಯನ್ನು ಒಳಗೊಂಡ ಅದ್ಭುತ ಪಾತ್ರ, ಈ ಅಮೃತ! ಎಂತಹ ಪರಿಣಾಮ!
    ಅವಳ ಆತ್ಮನಿರೀಕ್ಷಣೆಯ ನಂತರದ ಮಾತುಗಳು…”ನಾನ್ಯಾವ ಮಹಾತ್ಯಾಗವನ್ನೂ ಮಾಡುತ್ತಿಲ್ಲ ಝುಲ್ಫೀ.ಆ ಶೋಕಿ ನನಗಿಲ್ಲ. ಶಾಹಿನ್ ಗೆ ಕೊಡಲು ನನ್ನ ಬಳಿ ಬೇರೇನೂ ಇಲ್ಲ, ಅಷ್ಟೆ.”
    ನೆನಪಿಸಿದ್ದಕ್ಕೊಂದು thanks,ಸಂಧ್ಯಾ!ಈ ನಾಟಕದ ಮರುಓದು ನನಗಾಗಿ ಕಾದಿದೆ…
    ಇನ್ನು ಕೃಷ್ಣ ರಾಧೆಯರ ವಿಚಾರ. ಎಚ್ಎಸ್ವಿ ಕವನದ ಸಾಲುಗಳೇ ಹೇಳುತ್ತಿವೆಯಲ್ವೆ… ಸ್ಥಾಪಿತ ಚಿಂತನೆಗಳನ್ನು ಪ್ರಶ್ನಿಸಲಾಗುತ್ತಿದೆ. ಮರುವ್ಯಾಖ್ಯಾನ ನಡೀತಾ ಇದೆ ಅನಿಸುತ್ತೆ ನನಗೆ….

  2. ಅಶೋಕ ಶೆಟ್ಟರ್

    ಇದನ್ನು ಓದಿ ಸ್ವಲ್ಪ ಹೊತ್ತು ಹಾಗೇ ಕುಳಿತು ಬಿಟ್ಟೆ…!

  3. Ramesh Gururajarao

    ಸಂಧ್ಯಾ ಮೇಡಂ…. ಲೇಖನ ಚೆನ್ನಾಗಿದೆ… ತುಮ್ಹಾರಿ ಅಮೃತಾ ನಾಟಕ ನೋಡಿದಾಗ ನಾನೂ ಕೂಡ ಕಳೆದುಹೋದದ್ದು ನಿಜ…. ರಾಮ್ ತೆರಿ ಗಂಗಾ ಮೈಲಿ ಸಿನೆಮಾದ “ಏಕ್ ರಾಧ ಏಕ್ ಮೀರಾ…” ಹಾಡು ನೆನಪಾಯ್ತು…. ಪ್ರೇಮದ ತೀವ್ರತೆ, ದುರಂತ, ಎಲ್ಲವನ್ನೂ ಈ ಗೀತೆ ಹಾಸಿಕೊಂಡು ಹೊದ್ದುಕೊಂಡಿದೆ… ಈ ನಾಟಕ ನೋಡಿದಾಗ, ಈ ಹಾಡು ತುಂಬಾ ಕಾಡಿತ್ತು…..

  4. Jayalaxmi Patil

    ಸಂಧ್ಯಾ, ನೀವು ಸಿಗ್ರಿ ನನ್ನ ಕೈಗಿವತ್ತು ಇದೆ ನಿಮಗೆ, ಏನ್ ತೀರಾ ನೀವು?! ಬರೆಯೋದು ಅಂದ್ರೆ ಹೀಗೆ, ಇಷ್ಟು ಚೆನ್ನಾಗಿ ಬರೆಯೋದಾ!!! 🙂

  5. sunitha.a

    superb sandhya………manthana………

  6. chalam

    ತುಂಬಾ ಅತ್ಯುತ್ತಮ ಲೇಖನ…ಏನು ಹೇಳಬೇಕೋ ತಿಳಿಯುತ್ತಿಲ್ಲ.ಥ್ಯಾಂಕ್ಸ್ ಸಂದ್ಯಾ ಮೇಡಮ್

  7. Sumathi

    Sandhya…the above written comments say it much better than I probably could. Very effective! I’ve always liked your theater reviews. This one seems to top the list. Kudos!!

  8. bharathi bv

    Nanna alisida baraha idu …

  9. Vasuki

    Very well written…and ending the article with a lovely poem…superb!

  10. Anjali Ramanna

    tuMbaa chennaagide Sandhya 🙂

  11. ಮಂಜುಳಾ ಬಬಲಾದಿ

    ಸಂಧ್ಯಾ… ನಿಮ್ಮ ಹೆಸರಲ್ಲಿರೋ Mystic touch, ಈ ಬರಹದ ಮೂಲೆ-ಮೂಲೆಯಲ್ಲೂ ಕಾಣ್ತಾ ಇದೆ… Just love it… 🙂

  12. samyuktha

    superru!

  13. Rj

    This is ಸಂಧ್ಯಾರಾಣಿ!
    ನಾಟಕದ ರಿವ್ಯೂ ಕೂಡ ಇಷ್ಟು ಚೆಂದ ಮಾಡಿ ಬರೀತೀರಲ್ಲ?
    ತಲಿ ಕೆಟ್ ಹೊಯ್ತಪ:ಖುಷಿಯಿಂದ..
    -Rj

  14. Sandhya Bhat

    ….. mounavashte ulididdu… Tumbaa chennaagide…

  15. Shwetha Hosabale

    ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ;ನೀವು ಹೇಳಿದಂತೆ “ಮಹತ್ವಾಕಾಂಕ್ಷೆ ಪುರುಷನಲ್ಲಿ ಒಂದು ಗುಣವಾದರೆ, ಹೆಣ್ಣಿನಲ್ಲಿ ಯಾಕೆ ಒಂದು ಅವಗುಣವಾಗುತ್ತದೆ? ಗಂಡಸಿಗೆ ಸಹಜವಾಗಿ ಕಾಣುವ, ಸಾಧ್ಯವಾಗುವ ವೈಯಕ್ತಿಕ ಮತ್ತು ವೃತ್ತಿಬದುಕಿನ ಸಮನ್ವಯ ಹೆಣ್ಣಿಗೇಕೆ ಇಷ್ಟು ಕಷ್ಟ ಆಗುತ್ತದೆ? ಹೆಣ್ಣು ಯಾಕೆ ತನ್ನ ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿಸಿಕೊಂಡು ವೃತ್ತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗುವುದಿಲ್ಲ?” ಈ ಪ್ರಶ್ನೆಗಳು ಯಾವಾಗಲೂ ಕಾಡುತ್ತಲೇ ಇರುತ್ತವೆ. ಹೆಣ್ಣು ಎಷ್ಟೇ ಸಾಧನೆ ಮಾಡಿದರೂ ಒಂದು ಮಗು ಹೆತ್ತು ಅದರ ಲಾಲನೆ ಪಾಲನೆ ಮಾಡದಿದದ್ದರೆ ಗಂಡನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಸಮಾಜದೆದುರು ಆಕೆ ಅಪರಿಪೂರ್ಣಳು ಎಂಬಂತೆಯೇ ನೋಡಲಾಗುತ್ತದೆ. ಹಾಗಾಗಿಯೇ ವೃತ್ತಿಬದುಕು ವೈಯಕ್ತಿಕ ಬದುಕುಗಳ ನಡುವಿನ ಹೊಯ್ದಾಟ…ಗಂಡಸು ಆಫೀಸ್ ಕೆಲಸದಲ್ಲಿ ಬ್ಯುಸಿ ಇದೆ ಎಂದು ಮನೆಕೆಲಸಗಳನ್ನು ಮಾಡದೇ ಇರಬಹುದು, ಅದೇ ಹೆಂಗಸಿಗಾದರೆ ಆಫೀಸ್ ಕೆಲಸ ಜಾಸ್ತಿ ಇದ್ದರೂ ಮನೆಕೆಲಸಗಳನ್ನೂ ಮಾಡಲೇಬೇಕು, ಅದರಿಂದ ವಿನಾಯಿತಿ ಇರುವುದಿಲ್ಲ…

  16. malathi S

    ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಬರಹ ಸಂಧ್ಯಾ.Loved the way you have brought in Krishna and Radhe here. just loved it
    🙂
    malathi S

  17. Vanamala V

    ಹೌದು. ನಮ್ಮ basic qualities/abilities/habits ಮದುವೆಯಾದ ಮೇಲೆ ಸ್ವಲ್ಪ ಹಿಂದೆ ಹೋಗಿರತ್ತೆ. 40-45 ವರ್ಷಕ್ಕೆ ಸ್ವಲ್ಪ ಜ್ಞಾಪಕ ಆಗ್ತಾ ಇರತ್ತೆ. 50-55 ವರ್ಷಕ್ಕೆ ಮತ್ತೆ ಅದನ್ನ ವಾಪಸ್ಸು ತರೋದಕ್ಕೆ ನಾವೇ ಮನಸ್ಸು / ಪ್ರಯತ್ನ ಮಾಡ್ಬೇಕು.

  18. umasekhar

    enu comment madali gothaguthilla. vodi summane kulithe.

  19. Anitha Naresh manchi

    tumbaa chendada baraha Sandhya… ishta aaytu 🙂

  20. c.suseela

    Fantastic sandya.I donot know the words to say.Great Dear.

  21. ಉದಯ್ ಇಟಗಿ

    ಅಬ್ಬಾ, ಎಷ್ಟು ಚೆಂದದ ನಿರೂಪಣೆ! ನಾನು ಈ ಹಿಂದೆ ರಂಗಶಂಕರದಲ್ಲಿ “ಇತಿ ನಿನ್ನ ಅಮೃತಾ” ನೋಡಿದ್ದು ನೆನಪಾಯಿತು. ಅದರಲ್ಲಿ ಶ್ರೀನಿವಾಸಪ್ರಭು ಮತ್ತು ಅರುಂಧತಿ ನಾಗ್ ಅವರ ಅಭಿನಯ ಅಮೋಘವಾಗಿದೆ.

  22. ಉಷಾಕಟ್ಟೆಮನೆ

    ತುಂಬಾ ಚೆನ್ನಾಗಿದೆ ಸಂಧ್ಯಾ.

  23. ನಿವೇದಿತ ರವೀಶ್

    ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಸಂಧ್ಯಾ ಅವರೇ ಅಭಿನಂದನೆಗಳು
    ನಿವೇದಿತ ರವೀಶ್ .

  24. Usha Rai

    beautiful narration Sandhya. I have seen this dram in Hindi.You made me to recollect it so well. lekhana bahala iShtavaayithu.

  25. sugunamahesh

    tumba chennagide lekhana… odisikondu hogutte…

  26. suvarna.c

    ಸಂಧ್ಯಾರಾಣಿ ನಿಮ್ಮ ಲೇಖನ ತುಂಬಾ ಚನ್ನಾಗಿದೆ. ನಿಮ್ಮ ಲೇಖನಿಯಲ್ಲಿ ಮತ್ತಷ್ಟು ಅದ್ಬುತ ಲೇಖನಗಳು ಮುಡಿಬರಲಿ
    suvarna.c
    hassan

  27. ಎನ್ ಸಂಧ್ಯಾ ರಾಣಿ

    ಪ್ರೀತಿಯಿಂದ ಲೇಖನ ಓದಿದ, ಪ್ರತಿಕ್ರಯಿಸಿದ ನಿಮಗೆ ಧನ್ಯವಾದಗಳು ..

  28. sunil rao

    just still…..after reading this…
    thousands of claps….without exaggeration

  29. ಶಮ, ನಂದಿಬೆಟ್ಟ

    “ಕೃಷ್ಣ ನಿನ್ನ ಕೂಡಿದವರು
    ಹೇಳೋ ಏನಾದರು?”
    ಸಂಧ್ಯಾ ನಿಜ್ಜ ನಿಜ್ಜ… ಕೃಷ್ಣನ್ನ ಕೂಡಿದವರಿಂದ ನನ್ನ ಕಾಡಿದ ಬರಹ – ಇಂತಿ ನಿನ್ನ ಶಮಾ

  30. Anonymous

    Nice ಸಂಧ್ಯಾ ಮ್ಯಾಮ್.
    ಕೂಡಿದವರು ಅನುಭೂತಿಗೆ ಒಳಗಾದರು. ತಮ್ಮ ಅಸ್ಥಿತ್ವವನ್ನೆ ಕಳೆದುಕೊಂಡು ತಮ್ಮತನವೆಂಬುದಿಲ್ಲದೆ ಕೃಷ್ಣೆಯರೇ ಆದರು. ಇಂದಿನ ಮಥುರೆಯ ಗೋಪಿಕೆಯರಾದರು. ಗತಿ ಇಲ್ಲದೆ ಮಾಧವ ಎಂದು ಜಪಿಸುವಂತವರಾದರು.
    ನಿ ಯಾಕೆ ಬೇಕು? ನನ್ನ ನಾ ಕಾಣದಾದರೆ, ಕಟ್ಟಿಕೊಳ್ಳಲಾಗದಿದ್ದರೆ, ಅಸ್ತಿತ್ವ ಇಲ್ಲದ ಬದುಕಾದರೆ ನೀ ಯಾಕೆ ಬೇಕು ಕೃಷ್ಣ? ಬೇಡ ನಡಿ ರವಿ ಇದ್ದಾನೆ. ಬೈದರು ಅತ್ತಾಗ, ಬೇಸರಾದಾಗ. ಹೀಗೆ ಸುಮ್ಮನೆ.
    ಗೆಳತಿ . ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading