ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ’ಒಗ್ಗರಣೆ’ ಘಮದ ನಡುವೆಯೇ…

ಸುಲಭವಲ್ಲ ನಲ್ವತ್ತರ ನಂತರದ ಪ್ರೇಮ

ಮೊದಲಿಗೆ ನಲ್ವತ್ತರ ನಂತರ ಪ್ರೇಮ ಯಾಕೆ ಆಗಬೇಕು ಅನ್ನುವುದು ನಿಮ್ಮ ಪ್ರಶ್ನೆ ಆಗಿದ್ದರೆ, ಕ್ಷಮಿಸಿ ನಾನು ನಿರುತ್ತರೆ. ಪ್ರೇಮದ ತೀವ್ರತೆಗೆ ಒಂದು ಎಕ್ಸ್ಪೈರಿ ಡೇಟ್ ಇದೆ ಎಂದರೆ ನಾನು ಒಪ್ಪಿಯೇನು, ಆದರೆ ಪ್ರೇಮ ಘಟಿಸಲು ಒಂದು ಎಕ್ಪೈರಿ ದಿನಾಂಕ ಇದೆ, ಈ ವಯಸ್ಸಿನ ನಂತರ ಪ್ರೇಮವೆಂಬ ಭಾವ ಅರಳ ಕೂಡದು ಎನ್ನುವ ಮಾತಿಗೆ ನನ್ನ ತಕರಾರಿದೆ!
ಪ್ರೇಮ ಯಾವ ವಯಸ್ಸಿನಲ್ಲಾದರೂ ಘಟಿಸಬಹುದು, ಆದರೆ ನಡುವಯಸ್ಸಿನ ಪ್ರೇಮ ಸುಲಭವಲ್ಲ. ಎಳೆ ವಯಸ್ಸಿಗೆ ತನ್ನ ಬಗ್ಗೆ ಒಂದು ಆತ್ಮವಿಶ್ವಾಸವಿರುತ್ತದೆ, ಬದುಕಿನ ಬಗ್ಗೆ ವಿಶ್ವಾಸವಿರುತ್ತದೆ. ಜಗತ್ತು ತನ್ನ ಸುತ್ತ ತಿರುಗುತ್ತದೆ ಎನ್ನುವ ಭಾವನೆ ಇರುತ್ತದೆ. ಒಮ್ಮೆ ನಾನು ನನ್ನ ಗೆಳತಿ ಹೋಗುತ್ತಿದ್ದೆವು. ನಮ್ಮೆದುರಲ್ಲೇ ಒಂದು ಯುವಜೋಡಿ ಹೋಗುತ್ತಿದ್ದರು. ಅವಳಿಗೆ ಯಾಕೋ ಮುನಿಸು. ಅವಳ ಸಿಟ್ಟು, ಅವನ ಅನುನಯ ಎಲ್ಲಾ ನಡೆದಿತ್ತು. ಅವನ ಎಲ್ಲಾ ವಿನಂತಿ ಮತ್ತು ಬೇಡಿಕೆಗಳ ನಡುವಲ್ಲೇ ಅವಳು ’ಕ್ಯಾರೆ’ ಅನ್ನದೆ ಮುನ್ನಡೆಯುತ್ತಿದ್ದಳು. ಅವಳ ನಡಿಗೆಯಲ್ಲಿ ಆ ವಯಸ್ಸಿಗೆ ಮಾತ್ರ ಸಾಧ್ಯವಾಗುವ ಒಂದು ಮುದ್ದಾದ ಅಹಂಕಾರ ಇತ್ತು. ಆಗಲೇ ನಾನು ಹೇಳಿದ್ದು, ’ಈ ಎಳೆವಯಸ್ಸಿನ ಪ್ರೇಮಕ್ಕೆ ಎಂತಹ ಆತ್ಮವಿಶ್ವಾಸ ಇರುತ್ತದೆ ಅಲ್ಲವಾ? ಅವನಲ್ಲ, ಇಡೀ ಜಗತ್ತೇ ನನ್ನ ’ಹೂ’ಗಾಗಿ ಕಾಯುತ್ತದೆ ಎನ್ನುವ ವಿಶ್ವಾಸ’ ಅಂತ. ಎಲ್ಲವನ್ನೂ ಗಮನಿಸುತ್ತಿದ್ದ ನನ್ನ ಗೆಳತಿ ಮೂಕವಾಗಿ ತಲೆ ಆಡಿಸಿದ್ದಳು. ಅವಳಿಗೂ ಗೊತ್ತಿತ್ತು ಆ ವಿಶ್ವಾಸ ನಡುವಯಸ್ಸಿಗೆ ಕಷ್ಟ ಅಂತ.
ನಡುವಯಸ್ಸಿಗಾಗಲೇ ನಾವು ಈ ಜಗದ ಒಂದು ಅತಿ ಸಣ್ಣ ಭಾಗ ಎನ್ನುವ ಅರಿವಾಗಿರುತ್ತದೆ. ಆ ವಯಸ್ಸಿಗೆ ಒಂದು ’ಇಲ್ಲ’ವನ್ನು ತಡೆದುಕೊಳ್ಳುವುದು ಕಷ್ಟ. ಮತ್ತು ಸದಾ ಕಾಲ ’ಹೂ’ ಅನ್ನೇ ನಿರೀಕ್ಷಿಸುವುದು ಸಹ ಕಷ್ಟ.
ನಡುವಯಸ್ಸಿನ ಆತಂಕ ಒಂದೊಂದಲ್ಲ, ಅದು ದೈಹಿಕವೂ ಹೌದು, ಮಾನಸಿಕವೂ ಹೌದು. ಲೌಕಿಕವೂ ಹೌದು, ಪಾರಮಾರ್ಥಿಕವೂ ಹೌದು. ಅಲ್ಲಿಯವರೆಗೂ ಒಂದು ವ್ಯಕ್ತಿತ್ವ ಬೆಳೆಸಿಕೊಂಡಿರುತ್ತಾರೆ, ಸಾಮಾಜಿಕ ಪ್ರತಿಷ್ಠೆ, ಸ್ಥಾನ ಮಾನ ಬೆಳೆಸಿಕೊಂಡಿರುತ್ತಾರೆ. ಆ ವಯಸ್ಸಿನಲ್ಲಿ ಬಾಗುವುದು, ಬೇಡುವುದು ಎರಡೂ ಸುಲಭವಲ್ಲ. ಆದರೆ ಅಷ್ಟೇ ಕಷ್ಟ ಒದಗಿ ಬಂದ ಪ್ರೀತಿಯನ್ನು ನಿರಾಕರಿಸುವುದು. ಆ ನಡುವಯಸ್ಸಿನ ತಲ್ಲಣಗಳನ್ನು ತೆರೆದಿಡುವ ಪ್ರಯತ್ನವೇ ’ಒಗ್ಗರಣೆ’. ಇದು ಮಲಯಾಳಂ ಚಿತ್ರ ’ಸಾಲ್ಟ್ ಅಂಡ್ ಪೆಪ್ಪರ್’ನ ರೀಮೇಕ್ ಎಂದು ಕೇಳಿದ್ದೇನೆ, ಆದರೆ ನಾನು ಆ ಚಿತ್ರ ನೋಡಿಲ್ಲವಾದ್ದರಿಂದ ಅದರ ಬಗ್ಗೆ ಏನೂ ಹೇಳಲಾರೆ.
ನಾವೇ ಟಿಕೆಟು ಕೊಂಡು ಹತ್ತಿದ ಟ್ರೇನು ನಮ್ಮನ್ನು ಸರಿಯಾದ ನಿಲ್ದಾಣದಲ್ಲಿ ಇಳಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಎಲ್ಲೋ ಒಮ್ಮೊಮ್ಮೆ ಅಪ್ಪಿ ತಪ್ಪಿ ಇಳಿದ ಸ್ಥಳ ನಮ್ಮದಾಗಿಬಿಡುತ್ತದೆ. ನಾವೇ ಹುಡುಕಿ ಡಯಲ್ ಮಾಡಿದ ನಂಬರ್ ಗಳಲ್ಲಿ ಮಾತು ’ಹೌದು’, ’ಸರಿ’, ’ಇಲ್ಲ’ ಗಳ ಮುಂದೆ ಹೋಗುವುದಿಲ್ಲ, ಆದರೆ ಅಪ್ಪಿ ತಪ್ಪಿ ಬಂದ ರಾಂಗ್ ನಂಬರ್ ಒಂದು ಬೊಗಸೆ ತುಂಬಾ ಬೆಳದಿಂಗಳನ್ನು ನಮ್ಮ ಮಡಿಲಿಗೆ ಸುರಿದು ಬಿಡುತ್ತದೆ. ಹಾಗೆ ಅಪ್ಪಿ ತಪ್ಪಿ ಬಂದ ಒಂದು ’ರಾಂಗ್’ ನಂಬರ್ ಇಬ್ಬರ ಜೀವನದಲ್ಲಿ ’ರೈಟ್’ ಆಗುವ ಕಥೆ ಒಗ್ಗರಣೆಯದ್ದು.
ಹೆಣ್ಣು ನೋಡಲೆಂದು ಹೋದ ಮನೆಯಿಂದ ಹುಡುಗಿಯನ್ನು ಬಿಟ್ಟು ಅಡಿಗೆಯವನನ್ನು ಕರೆದುಕೊಂಡು ಬಂದು ಮನೆ ತುಂಬಿಸಿಕೊಂಡವನು ಅವನು. ’ಹೌದು, ನನಗೆ ಸಂಗಾತಿ ಬೇಕು, ಹಾಗಂತ ಬೀದೀಲಿ ಹೋಗೋರನ್ನೆಲ್ಲಾ ನನಗೆ ಜೊತೆ ಬೇಕು ಅಂತ ಕೇಳೋಕ್ಕಾಗುತ್ತಾ’ ಎಂದು ಸಂಕಟ ಪಡುವ ಅವಳು. ಇಲ್ಲಿ ಇನ್ನೊಂದು ವಿಪರ್ಯಾಸವೂ ಇದೆ, ಹೆಣ್ಣು ಒಂಟಿಯಾಗಿದ್ದಾಳೆ ಎಂದರೆ ಅವಳು ಬಯಸುತ್ತಿರುವುದು ಸಾಂಗತ್ಯ ಮತ್ತು ಅದು ದೈಹಿಕವೇ ಎಂದು ಯೋಚಿಸುವ ಪ್ರಪಂಚ. ಇದರ ನಡುವೆಯೇ ಅವರು ತಮ್ಮ ತಮ್ಮ ನೆಲೆಗಳನ್ನು ಕಂಡುಕೊಳ್ಳಬೇಕು, ಸಂಗಾತಿಯನ್ನು ಹುಡುಕಿಕೊಳ್ಳಬೇಕು.
ಮೊದಲೇ ಹೇಳಿದ ಹಾಗೆ ನಲ್ವತ್ತರ ನಂತರದ ಪ್ರೇಮ ಅಂದರೆ ಏನೋ ಹಿಂಜರಿಕೆ, ಏನೋ ಹೆದರಿಕೆ… ಇದುವರೆಗೂ ಹೇಳಿದ ಮಾತು ಕೇಳುತ್ತಿದ್ದ ಮನಸ್ಸು ಈಗ ಹತೋಟಿ ತಪ್ಪುತ್ತಿದೆ,
’ದಿಲ್ ತೋ ಬಚ್ಚಾ ಹೈ ಜೀ…
ಕೋಯಿ ತೊ ರೋಕೆ, ಕೋಯಿ ತೋ ಟೋಕೆ
ಇಸ್ ಉಮ್ರ್ ಮೆ ಅಬ್, ಖಾವೋಗೆ ಧೋಕೆ
ಡರ್ ಲಗ್ತಾ ಹೈ ಇಷ್ಕ್ ಕರ್ನೆ ಮೆ ಜೀ’
ಹರೆಯವನ್ನೆಲ್ಲಾ ಒಂದಿಷ್ಟೂ ಎಡವದೆ ಕಳೆದಾಗಿದೆ, ಈ ಇಳಿವಯಸ್ಸಿನಲ್ಲಿ ಪ್ರೀತಿ ಅಕಸ್ಮಾತ್ ನಾಚಿಕೆಗೇಡಾದರೆ ಅನ್ನುವ ಆತಂಕ, ಪ್ರೀತಿ ಮಾಡಲು ಆತಂಕ, ಪ್ರೀತಿಸುವೆ ಎಂದು ಒಪ್ಪಿಕೊಳ್ಳಲು ಹೆದರಿಕೆ. ನಮ್ಮ ರೂಪ, ಸ್ವರೂಪ, ಭಾವನೆ ನಗೆಪಾಟಲಿಗೀಡಾದೀತ ಎನ್ನುವ ಅನುಮಾನ.

ಆದರೆ ಒಂದೊಂದೇ ಕೇಕ್ ನ ಪದರಗಳು ಸೇರುತ್ತಾ, ಸೇರುತ್ತಾ ಹೋದ ಹಾಗೆ ಒಂದೊಂದಾಗಿ ಭಯಗಳು ಕಳಚಿಕೊಳ್ಳುತ್ತಾ ಹೋಗುತ್ತವೆ, ಕೈ ಜಾರುತ್ತಿರುವ ಕಾಲವನ್ನು, ಏರುತ್ತಿರುವ ವಯಸ್ಸನ್ನೂ ಮೀರಿ ಕೈಲಿರುವ ಕೇಕ್ ನ ತುಣುಕಿನಿಂದ ತಮ್ಮ ಅದೃಷ್ಟಕ್ಕೆ ದಕ್ಕಿದಷ್ಟೂ ಒಮ್ಮೆ ಕಚ್ಚಿಕೊಳ್ಳುವ ಧೈರ್ಯ ಇಬ್ಬರೂ ಮಾಡುತ್ತಾರೆ. ಹೊಸ ಪ್ರೇಮದ ದಿನಗಳಂತೆಯೇ ಅವನ ಆಸಕ್ತಿಗಳನ್ನೆಲ್ಲಾ ಇವಳು ತನ್ನದಾಗಿಸಿಕೊಳ್ಳುತ್ತಾ ಹೋಗುತ್ತಾಳೇ. ಖಾಲಿ ಮನೆಗೆ ಒಂದು ಅಕ್ವೇರಿಯಂ ಬರುತ್ತದೆ, ಮಿಂಚಿನ ಮರಿಗಳಂತಹ ಮೀನುಗಳು ಬರುತ್ತವೆ, ಪುಟ್ಟ ಬೋನ್ಸಾಯ್ ಮರ ಬರುತ್ತದೆ, ಅವಳಿಗಾಗಿ ಅವನ ಮನೆಯಿಂದ ಊಟದ ಡಬ್ಬಿ ಬರುತ್ತದೆ. ಹನಿಯಾಗಿ ಶುರುವಾದ ಮಳೆ ಧಾರೆಯಾಗಿ ಸುರಿವಾಗ ಪುಟ್ಟ ಪುಟ್ಟ ಕಾಗದದ ದೋಣಿ ಬಿಡುತ್ತಾ, ಮುಖ ಎತ್ತಿ ಮಳೆಯ ಮುತ್ತು ಕದಿಯುತ್ತಾ ಇಬ್ಬರೂ ಎರಡು ಕೈ ಅಗಲಿಸಿ ಪ್ರೀತಿಯನ್ನು ಅಪ್ಪಿಕೊಳ್ಳುತ್ತಾರೆ.
ಮುಂದಿನ ಹಂತ ಭೇಟಿಯಾಗಬೇಕು. ಆ ಸಂಭ್ರಮಕ್ಕೆ ಎಲ್ಲಾ ತಯಾರಿಯೂ ಆಗುತ್ತದೆ, ಮನಸ್ಸು ಗರಿ ಬಿಚ್ಚಿ ನಿಲ್ಲುತ್ತದೆ, ಅದುವರೆಗೂ ಮಂಕು ಬಣ್ಣದ ಬಟ್ಟೆಗಳನ್ನೇ ತೊಡುತ್ತಿದ್ದವಳ ಮೈ ತುಂಬಾ ಈಗ ಕಾಮನಬಿಲ್ಲಿನ ರಂಗು, ಅವಳ ಬಟ್ಟೆಯಲ್ಲಿ ರಂಗು, ನಡಿಗೆಯಲ್ಲಿ ಜಗವನ್ನು ಮೆಟ್ಟುವ ಉತ್ಸಾಹ, ಡ್ರೈವಿಂಗ್ ಪರೀಕ್ಷೆಯಲ್ಲಿ ಅವಳನ್ನು ಸಲೀಸಾಗಿ ಪಾಸು ಮಾಡಿಸುವ ಆತ್ಮವಿಶ್ವಾಸ ಅವಳ ನಡೆಯಲ್ಲಿ ನುಡಿಯಲ್ಲಿ. ಅವನೂ ಅಷ್ಟೆ, ಮೊದಲ ಸಲ ತೊಟ್ಟ ಬಟ್ಟೆ ಹೇಗಿದೆ ಎಂದು ನೋಡಿಕೊಳ್ಳುತ್ತಾನೆ, ಎಂದೋ ಅಡಿಗೆಯವನಿಗೆ ಉಪಯೋಗಿಸುವುದಿಲ್ಲ ಎಂದು ಕೊಟ್ಟ ಸೆಂಟಿನ ಡಬ್ಬಿ ಕೇಳುತ್ತಾನೆ. ಇಬ್ಬರ ಮನದಲ್ಲೂ ’ಪ್ರಥಮ’ದ ಸಂಭ್ರಮ. ಮನಸ್ಸಿಗೆ ವಯಸ್ಸಾಗುವುದಿಲ್ಲ, ಆದರೆ ದೇಹ? ಹೃದಯ ಮಗುವೆ, ಆದರೆ ಕಿವಿಯ ಬದಿ ಇಣುಕುವ ಬಿಳಿ ಕೂದಲು, ಕಣ್ಣ ಸುತ್ತಲಿನ ಗೆರೆಗಳ ಸಾಲು, ತುಟಿಗಳ ಅಂಚಿನ ವಯಸ್ಸಿನ ರೇಖೆ, ಜಾರಿದ ಗಲ್ಲ, ಸೊಂಟದ ಸುತ್ತಲೂ ವಯಸ್ಸು ಪೇರಿಸಿದ ವರ್ಷಗಳು ಎಲ್ಲವೂ ಧೈರ್ಯವನ್ನು ಹಣಿದು ಹಾಕುತ್ತವೆ. ವಯಸ್ಸು ನಮ್ಮ ಬಗ್ಗೆ ನಮ್ಮನ್ನು ಎಷ್ಟು ಕ್ರಿಟಿಕಲ್ ಮಾಡಿರುತ್ತದೆ ಎಂದರೆ ಆಚೆಯವರಿಗೆ ನಾವು ಹೇಗೆ ಸರಿಹೋಗಲು ಸಾಧ್ಯ ಎಂದು ನಮ್ಮನ್ನು ನಾವೇ ಪರೀಕ್ಷೆಯಲ್ಲಿ ಫೇಲು ಮಾಡಿಬಿಡುತ್ತೇವೆ. ಪ್ರೀತಿಸಿದವರಿಂದ ನಿರಾಕರಣೆಯನ್ನು ಎದುರಿಸುವುದಕ್ಕಿಂತ ನಮಗೆ ನಾವೇ ನಿರಾಕರಣೆಯ ಶಿಕ್ಷೆ ವಿಧಿಸಿಕೊಳ್ಳುವುದು ಸಹನೀಯ ಅನ್ನಿಸಿಬಿಡುತ್ತದೆ.
ಇಲ್ಲಾಗುವುದೂ ಅದೇ. ಅವಳ ಕಣ್ಣಿಗೆ ಈ ಬಿಳಿಕೂದಲ, ಗೆರೆಗಳ ಮುಖದ ನಾನು ಹೇಗೆ ಕಾಣಬಹುದು ಎನ್ನುವ ಆತಂಕದಲ್ಲಿ ಅವನೂ, ಅವನ ಕಣ್ಣಿಗೆ ಈ ನಡುವಯಸ್ಸಿನ ನಾನು ಇಷ್ಟವಾಗಬಲ್ಲೆನಾ ಎನ್ನುವ ಆತಂಕದಲ್ಲಿ ಅವಳೂ ಭೇಟಿಯಾಗಲು ಹಿಂಜರಿಯುತ್ತಾರೆ. ಅವರ ಜಾಗದಲ್ಲಿ ಭೇಟಿಯಾಗುವ ಹುಡುಗ, ಹುಡುಗಿಯರಿಗೆ ಆ ಸಮಸ್ಯೆಯೇ ಇಲ್ಲ, ’ಬೇಡ ಹೋಗು’ ಎಂದರೂ ಅವನು ಬಂದೇ ಬರುತ್ತಾನೆ ಎನ್ನುವ ನಂಬಿಕೆ ಆ ಹುಡುಗಿಗೆ, ’ಬೇಡ ಹೋಗು’ ಎಂದರೆ ’ನಾಳೆ ಬಾ’ ಎಂದು ಅರ್ಥ ಎನ್ನುವ ವಿಶ್ವಾಸ ಹುಡುಗನಿಗೆ ಇರುತ್ತದೆ. ಅವರಿಬ್ಬರದೂ ಒಂದು ಜಗತ್ತು ಅಲ್ಲಿ ನಿರ್ಮಾಣವಾಗಿಬಿಡುತ್ತದೆ.
ಆದರೆ ಈ ಬಾಳು ಹೀಗೆ ಎಂದು ಅಂದುಕೊಂಡು ಬದುಕುತ್ತಿದ್ದವರ ಬದುಕಿನಲ್ಲಿ ಪ್ರೀತಿಯ ತಂಗಾಳಿ ಬೀಸಿ ಆಗಿದೆ, ಇನ್ನು ಅವರ ಬದುಕು ಮೊದಲಿನಂತೆ ಇರಲು ಸಾಧ್ಯವೇ ಇಲ್ಲ. ಅವಳು ಮತ್ತೆ ತನ್ನ ಮಂಕು ಮಂಕು ಬಟ್ಟೆಗಳ ಜಗತ್ತಿಗೆ ಮರಳಿದ್ದಾಳೆ, ಗೆಳತಿಯರು ಆಡುವ ಮಾತುಗಳ ನೆಪ ಸಾಕು ಅವಳ ಒಂಟಿತನವನ್ನು ಕಣ್ಣೀರಾಗಿಸಲು. ಶಾಂತ ನದಿಯಂತಹ ಹೆಣ್ಣು ಈಗ ಮಾತು ಮಾತಿಗೆ ಸಿಟ್ಟಾಗುತ್ತಾಳೆ, ಸಿಟ್ಟು ಜಗದ ಮೇಲಾ ಅಥವಾ ತನ್ನ ಮೇಲಾ ಅಂತ ಅವಳಿಗೇ ಅರ್ಥವಾಗುವುದಿಲ್ಲ. ಪ್ರೀತಿಯಿಂದ ಅಕ್ಕನ ಮಗನನ್ನು ಮನೆಗೆ ಕರೆದುಕೊಂಡು ಬಂದ ಅವನ ಪರಿಸ್ಥಿತಿಯೂ ಭಿನ್ನವಲ್ಲ, ಈಗೀಗ ಆ ಹುಡುಗ ಇವನಿಗೆ ತನ್ನ ಪ್ರತಿಸ್ಪರ್ಧಿಯಂತೆ, ತನ್ನಲ್ಲಿಲ್ಲದ್ದೆಲ್ಲವನ್ನೂ ಭರಪೂರ ಪಡೆದವನಂತೆ ಕಾಣುತ್ತಾನೆ. ಅವನು ಓದಲೆಂದು ತೆಗೆದುಕೊಂಡ ತನ್ನ ಪುಸ್ತಕವನ್ನು ಬೈದು ವಾಪಸ್ಸು ತೆಗೆದುಕೊಳ್ಳುತ್ತಾನೆ, ತನ್ನದೆಲ್ಲವನ್ನೂ ಇವನು ಕಸಿದುಕೊಳ್ಳುತ್ತಿದ್ದಾನೆ ಎನ್ನುವ ಕನಲಿಕೆಯಲ್ಲಿ. ತಮ್ಮನಂತೆ ನೋಡಿಕೊಂಡಿದ್ದ ಅಡುಗೆಯವನ ಮೇಲೂ ಒಮ್ಮೆ ರೇಗಿಬಿಡುತ್ತಾನೆ, ಇಡೀ ಜಗತ್ತಿನ ಮೇಲೆ ಸಿಟ್ಟಾದವನು ಅವನು ಈಗ.

ಆಗ ಅವನ ಗೆಳತಿ ಅವನ ಸಹಾಯಕ್ಕೆ ಬರುತ್ತಾಳೆ. ಆ ಫೋನ್ ಬಂದಾಗ ಅವನಲ್ಲಿ ಉಕ್ಕುತ್ತಿದ್ದ ಸಂತೋಷ ಈಗ ಖಾಲಿ ಆಗಿರುವುದನ್ನು ಗುರುತಿಸುತ್ತಾಳೆ, ’ನಿನಗೆ ಅವಳು ಸರಿಯಾ ಅಲ್ಲವಾ ಎನ್ನುವುದನ್ನು ನೀನು ನಿರ್ಧರಿಸು, ಅವಳಿಗೆ ನೀನು ಸರಿಯಾ ಅಲ್ಲವ ಎನ್ನುವ ನಿರ್ಧಾರವನ್ನು ಅವಳಿಗೆ ಬಿಡು’ ಎನ್ನುವ ಸ್ನೇಹಿತೆಯ ಮಾತಿನಲ್ಲಿ ಅವನ ಎಲ್ಲಾ ತಾಕಲಾಟವನ್ನೂ ಕರಗಿಸುವ ಔಷಧಿ ಇರುತ್ತದೆ. ಕಡೆಗೂ ಅವಳನ್ನು ಭೇಟಿಯಾಗುವ, ಬದುಕಿಗೆ ನೇರಾನೇರ ಮುಖಕೊಟ್ಟು ಎದುರಿಸುವ ಧೈರ್ಯ ಅವನು ಮಾಡುತ್ತಾನೆ.
ಇದು ಕಥೆಯ ಹಂದರ. ಇದಿಷ್ಟೂ ಮನಸ್ಸನ್ನು ತಟ್ಟುವ ಹಾಗೆ, ನಮ್ಮ ಎದೆಯಲ್ಲಿನ ಖಾಲಿ ಹಾಳೆಯ ಹಾಗೆ, ತುಂಬಾ ದಿನಗಳ ನಂತರ ಕೇಳಿದ ಹಳೆಯ ರಾಗದ ಹಾಗೆ ಮೂಡಿಬಂದಿದೆ.
ಆದರೆ ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ಇನ್ನೊಂದು ಟ್ರ್ಯಾಕ್ ಚಿತ್ರದಲ್ಲಿದೆ, ಮಧುರವಾದ ಹಾಡಿನ ನಡುವೆ ಇನ್ನೊಂದು ರಾಗ ಬಂದು ಸೇರಿ, ಎಲ್ಲಿಗೂ ಹೋಗದೆ, ಯಾವ ಉದ್ದೇಶವನ್ನೂ ಸಾಧಿಸದೆ ನಡುಹಾಡಿನಲ್ಲೇ ತುಂಡಾದ ಹಾಗೆ. ತುಪ್ಪ ಕಾಯಿಸಿ, ಸಾಸಿವೆ, ಜೀರಿಗೆ, ಕರಿಬೇವು ಒಗ್ಗರಣೆ ಹಾಕುವಾಗ ಯಾರೋ ಮರೆತು ಮತ್ಯಾವ ಸಾರಿಗೋ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿದ ಹಾಗೆ. ಆ ಆದಿವಾಸಿಯ ಕಥೆಯ ಎಳೆಯ ಇರುವಿಕೆ ಅಥವಾ ಇಲ್ಲದಿರುವಿಕೆ ಈ ಮುಖ್ಯ ಕಥೆಗೆ ಏನೂ ಮಾಡುವುದಿಲ್ಲ, ಹಾಗಿರುವಾಗ ಅದು ಬೇಕಿತ್ತೆ? ಅದರಿಂದ ನಿರ್ದೇಶಕ ಹೇಳಬಯಸಿರುವುದು ಏನು ಎನ್ನುವುದು ಅರ್ಥವೇ ಆಗುವುದಿಲ್ಲ. ಅದಿಲ್ಲದೆಯೂ ಇದು ಒಂದು ನೀಟಾದ ಕಥೆ ಆಗಬಹುದಿತ್ತು. ಆಗ ಪಾತ್ರಗಳು ಇನ್ನಷ್ಟು ಆಳಕ್ಕಿಳಿಯುವ ಸನ್ನಿವೇಶಗಳನ್ನು ಸೇರಿಸಬಹುದಿತ್ತು ಅನ್ನಿಸುತ್ತದೆ. ಮಂಡ್ಯ ರಮೇಶ್ ಮತ್ತು ಅಚ್ಯುತ ಅವರ ಪಾತ್ರಗಳು ಕಥೆಯ ಏಕತಾನ ತಪ್ಪಿಸಿ, ಕಥೆಗೊಂದು ಲವಲವಿಕೆ ಕೊಟ್ಟಿವೆ, ಆದರೆ ಆ ಆದಿವಾಸಿಯ ಕಥೆ ಯಾವ ರೀತಿಯಲ್ಲೂ ಈ ಕಥೆಗೆ ಪೂರಕವೂ ಅಲ್ಲ, ಪೋಷಕವೂ ಅಲ್ಲ.
ಜಯಂತರ ಹಾಡುಗಳು ಕಥೆಗೆ, ಪಾತ್ರಧಾರಿಗಳಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತವೆ. ನಡುವಯಸ್ಸಿನವನ ಪಾತ್ರದಲ್ಲಿ ಪ್ರಕಾಶ್ ರೈ ಎಷ್ಟು ಆಕರ್ಷಕವಾಗಿ ಕಾಣುತ್ತಾರೆ! ಸಾಧಾರಣವಾಗಿ ಅವರ ಚಿತ್ರದಲ್ಲಿ ಪ್ರಕಾಶ್ ರೈ ಪ್ರಕಾಶ್ ರೈ ಆಗಿಯೇ ನಟಿಸಿರುತ್ತಾರೆ. ಅವರ ಪಾತ್ರ, ಪಾತ್ರದ ಪರಿಮಿತಿಯನ್ನೂ ಮೀರಿ ಪ್ರಕಾಶ್ ರೈ ಆಗಿ ಒಡಮೂಡಿಬಿಡುತ್ತದೆ. ಆದರೆ ಈ ಚಿತ್ರದಲ್ಲಿ ಅವರು ಪಾತ್ರವೇ ಆಗಿದ್ದಾರೆ, ಪ್ರಕಾಶ್ ರೈ ಅನ್ನು ಅವರೊಳಗಿನ ಕಲಾವಿದ ಹಿಮ್ಮೆಟ್ಟಿಸಿದ್ದಾನೆ. ಅದು ಚಿತ್ರದ ಗೆಲುವಿಗೆ ಮುಖ್ಯಕಾರಣ. ಯಾವುದೇ ಡೈಲಾಗ್ ಗಳ ಅಬ್ಬರವಿಲ್ಲದೆ, ಮ್ಯಾನರಿಸಂಗಳ ನೆರವಿಲ್ಲದೆ, ಪ್ರಕಾಶ್ ಇಷ್ಟವಾಗಿಬಿಡುತ್ತಾರೆ.
ಹಲವಾರು ದಿನಗಳ ನಂತರ ಒಂದು ಒಳ್ಳೆ ಚಿತ್ರ ಕನ್ನಡದಲ್ಲಿ ಬಂದಿದೆ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ, ಜನ ಚಿತ್ರಮಂದಿರಕ್ಕೆ ಚಿತ್ರ ನೋಡಲು ಹೋಗುತ್ತಿದ್ದಾರೆ. ಆದರೆ ಚಿತ್ರ ಇನ್ನೂ ಚೆನ್ನಾಗಿ ಆಗಬಹುದಿತ್ತೇ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ’ಹೌದು’ ಅಂತಲೇ ಹೇಳಬೇಕಾಗುತ್ತದೆ. ಆದರೆ ಈ ಕೊರತೆಗಳ ನಡುವೆಯೂ ಒಂದು ಒಳ್ಳೆಯ ಚಿತ್ರ ನೋಡಲು ಸಿಕ್ಕಿದೆ ಎನ್ನುವುದು ಸಂತಸದ ವಿಷಯ.
 
 

‍ಲೇಖಕರು G

13 June, 2014

23 Comments

  1. Anonymous

    Loved the Detailing, awesomely well penned Sandhya 🙂

  2. Radhika

    Well written Sandhya!

  3. Uma Rao

    Nalavtthara nantara prema eke aagabaaradu endu keluvavalu naanu!

  4. ರೇಣುಕಾ ನಿಡಗುಂದಿ

    ಸಂಧ್ಯಾ…ತುಂಬಾ ಮನಮುಟ್ಟುವ…ಆಪ್ತವಾಗುವ ಬರಹ. ಇಷ್ಟವಾಯಿತು…

  5. Chidambar Narendra

    Liked both the Film & the article.

  6. vidyashankar

    A honest and well balanced review. So many artiste needed voice dubbing for this movie, in a way, on lighter note its first unofficially dubbed Kannada movie! 🙂

  7. Anonymous

    ಆದಿವಾಸಿಯು ಪಾಕಜ್ಞಾನದ ಅರಿವಿಗಾಗಿ

  8. siraj bisaralli

    ನನ್ನ ಮಗಳ ಮುಗ್ಧ ವಿಮರ್ಶೆ – ಅಬ್ಬಾಜಿ ಇದು ಸಿನಿಮಾ ಅಲ್ಲ, ಸ್ಟೋರಿ !

    • ಶಮ, ನಂದಿಬೆಟ್ಟ

      ವಸ್ತುನಿಷ್ಠ ವಿಮರ್ಶೆಗಾಗಿ ಅವಳಿಗೊಂದು ಮುತ್ತು

  9. kiran kumari

    ಸಂಧ್ಯಾ ಅವರೇ
    good evening.
    ಒಗ್ಗರಣೆಯ ಘಮಲು ಮೂಗಿಗೆ ತಾಗಿದೆ. ಅದನ್ನು ನಿಮ್ಮ ಬರಹ ಸ್ವರೂಪದಲ್ಲಿ ಆಸ್ವಾದಿಸುತ್ತಿದ್ದೇನೆ.. ನಾನೂ ನನ್ನ ಗಂಡ ಮದುವೆ ಆದಮೇಲೆ ಒಟ್ಟಿಗೆ ಸಿನಿಮಾ ನೋಡಿ ಬಂದ್ವಿ. ಬಹಳ ವರ್ಷಗಳ ಬಳಿಕ ನನ್ನ ಗಂಡನ ಒತ್ತಾಯದ ಮೇರೆಗೆ ಐನಾಕ್ಸ್ ಥಿಯೇಟರ್ನಲ್ಲಿ ಕುಳಿತು ಸಿನಿಮಾ ನೋಡಿ ಬಂದ ಮೇಲೆ ಖುಷಿಯಾಯಿತು.
    ನೀವು ಪ್ರಸ್ತಾಪಿಸಿರುವಂತೆ ೪೦ ರ ಅಂಚಿನಲ್ಲಿರುವವರ ಮನಸ್ಥಿತಿಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ. ಮನುಷ್ಯರಾಗಿ ಹುಟ್ಟಿದ ಮೇಲೆ ಮದುವೆ ಅಥವಾ ಸಾಂಗತ್ಯ ಮುಖ್ಯ ಅನ್ನೋದು ವ್ಯಕ್ತವಾಗಿದೆ. ನಮ್ಮ ಸಮಾಜದಲ್ಲಿ ಮದುವೆಯಾಗದ ಹೆಣ್ಣು ಮಕ್ಕಳನ್ನು ಹೇಗೆ ನೋಡ್ತಾರೆ ಅನ್ನೋದು ಚೆನ್ನಾಗಿ ವಿವರಿಸಿದ್ದಾರೆ. ಕೆಲವೊಮ್ಮೆ ಒಂಟಿತನದಲ್ಲಿ ಕೂಡ ಖುಶಿ/ ಸುಖವಿದೆ ಎನ್ನುತ್ತ ಬದುಕುವವರಿಗೆ ಇದರಿಂದ ಸ್ವಲ್ಪ ಇರುಸು ಮುರುಸಾಗಲೂ ಬಹುದು.
    ಮತ್ತೊಂದು ಕಡೆ ನಾಯಕನಿಗೆ ಆದಿವಾಸಿ ಗಿಡಮೂಲಿಕೆ -ಪರಿಣಿತ ಜ್ನ್ಯಾನಿಯನ್ನು ಬಂಡವಾಳಶಾಹಿ:ಕಾರ್ಖಾನೆ ಮಾಲೀಕರಿಂದ ವಿಮೋಚನೆಗೊಳಿಸಬೇಕು ಎಂದಿದ್ದರೂ ಅದನ್ನು ಅಸಾಹಾಯಕವಾಗಿ ಮುಕ್ತಾಯಗೊಳಿಸಿರುವುದು ಆದಿವಾಸಿ ಜನಾಂಗದ ಸಮಸ್ಯೆಗೆ ಯಾವ ಪರಿಹಾರ ಅಥವಾ ಪರ್ಯಾಯವನ್ನೂ ಸೂಚಿಸದೆ ಹೋಗಿರುವುದು ಸರಿಯಲ್ಲ.
    ಏನೇ ಇರಲಿ, ಸಿನಿಮ ಮನಸಿಗೆ ಮುದ ಕೊಡುತ್ತದೆ.ಸ್ನೇಹ ಮತ್ತು ಪ್ರಕಾಶ್ ರೈ ನಟನೆ ಯತಾರ್ಥವಾಗಿದೆ. ಉಳಿದಂತೆ ಚಿತ್ರದ ಛಾಯಾಗ್ರಹಣ, ಹಿನ್ನಲೆ ಸಂಗೀತ..ಹೊಸ ಮುಖ ಪ್ರತಿಭೆಗಳ ಪರಿಚಯ ಇವೆಲ್ಲವೂ ಪ್ಲಸ್ ಪಾಯಿಂಟ್. ವಿಶೇಶ ಏನಂದ್ರೆ ಇಡೀ ಥಿಯೇಟರ್ ನಲ್ಲಿ ೪೦ ರ ಅಂಚಿನಲ್ಲಿ ಅಥವಾ ಅದಕ್ಕಿಂತ ಹೆಚ್ಚಾದ ವಯೋಮಾನ ದಂಪತಿಗಳು/ಜೋಡೀಗಳು ಫಿಲ್ಮ್ ವಾಚ್ ಮಾಡ್ತಾ ಇದ್ರು ಜೊತೆಗೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಬಂದಿದ್ರು.
    thanks madam
    regards,
    kiran

  10. Maluru Venkataswamy

    ಮೇಡಮ್,‘ಒಗ್ಗರಣೆ’ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ. ಇದರಿಂದ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆನಂದಿಸಲು ಸಾಧ್ಯವಾಗುತ್ತದೆ. ಆದರೆ ಮುಖ್ಯವಾದ ಎರಡು ವಿಷಯಗಳನ್ನು ಮರೆತಿದ್ದೀರಿ. ಇಳಯರಾಜರವರ ಸಂಗೀತ ಮತ್ತು ಪ್ರೀತಾರವರ ಛಾಯಾಗ್ರಹಣ ಚಿತ್ರವನ್ನು ಒಂದು ದೃಶ್ಯ ಕಾವ್ಯವನ್ನಾಗಿ ಮಾಡಿವೆ.

  11. mmshaik

    nice very nice madam….

  12. Anil Talikoti

    ಅನನ್ಯ ಅವಲೋಕನೆ – ಉತ್ತಮ ವಿಮರ್ಶೆ.

  13. lakshmishankarjoshi.

    Nanu cinima nodi bande.really fantastic.baraha kooda.

  14. lakshmishankarjoshi.

    BARAHA APTAVAGIDE MADAM.CINIMA NODI BANDEVU.

  15. ಶಮ, ನಂದಿಬೆಟ್ಟ

    Beautiful Sandhya..

  16. Sushma S.V.

    Sandya, I agree with you. Film nodida mele nanna abhiprayavu ade. It’s a nice movie. But aadivaasi track yaake antha anisthu.

  17. Santhoshkumar Lm

    ಒಗ್ಗರಣೆ ಚಿತ್ರ, ಲೇಖನ ಘಮ್ ಎಂದಿದೆ.

  18. amardeep.p.s.

    oggarane ghama chennaage haradide…..madam

  19. shantha kumari

    ಸಂಧ್ಯಾ ತುಂಬಾ ಚೆನ್ನಾಗಿ ಬರೆದಿದ್ದೀರಿ ಸಿನಿಮಾ ನೋಡಿದ್ದು ಈಗ ಇನ್ನೊಂದು ಸುತ್ತು ಸಿನಿಮಾ ಸುತ್ತ ತಿರುಗಿದಂತಾಯ್ತು. ಆದಿವಾಸಿ ವಿಷಯ ಕತೆಗೆ ಪೂರಕವಾಗಿಲ್ಲ. ನಾನೂ ನನ್ನವರೂ ಹಾಗೆ ಅಂದುಕೊಂಡೆವು. ಇನ್ ಫ಼್ಯಾಕ್ಟ್ ನನ್ನವರು ಸೆನ್ಸಾರ್ ಸರ್ಟಿಫಿಕೇಟ್ ಇಷ್ಯೂ ಮಾಡೋವಾಗ ಅದನ್ನು ಪ್ರಕಾಶ್ ರಾಜ್ ರವರ ಗಮನಕ್ಕೆ ತಂದರಂತೆ. ನಿಮ್ಮ ಬರಹ ಮನಸ್ಸಿಗೆ ಮುಟ್ಟುತ್ತದೆ.

  20. YC Shivakumar

    Madam,
    What a narration? Enjoyed its contents.

  21. Prakash rai

    Thank uuuuu. thumba aaptha vimarshe. Ogaraney thandada vathiyinda thanks again. Nima prakash rai

  22. mandya ramesh

    CHENDADA BARAHA…DHANYAVAADAGALU MATTU ABHINANDANEGALU MAM… AADIVASI PRASANGA ANTARARAASHTREEYA SAMASYE JANA NODADA CINEMAADALLI ADANNU TORISUVUDAKKINTA …ADARA APAAYA MATTU ASHAAYAKATEYANNU SANNA DANIYALLI PAKASH RAI GONAGIKONDIDDARE….KAALIDAASANA JEEVA PREMA MATTU AASAKTIGALU KURITAAGI PAATRA KATTALU P00RAKAVAAGIDE… KATHEGE DHAKKEYAAGILLA ANNUVUDU NANNA NAMBIKE..:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading