ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ’ಒಂದು ಸಾರಿ ಅತ್ತುಬಿಡಲೇನು….?’


ಆಗಷ್ಟೇ ಒಂದು ಅತ್ಯಂತ ಪ್ರಾಮಾಣಿಕತೆಯಿಂದ, ಎದೆಯ ಹಾಡನ್ನೆಲ್ಲಾ ಬಸಿದು ಬರೆದ ಒಂದು ಪುಸ್ತಕ ಓದಿದ್ದೆ. ಆಗೆಲ್ಲಾ ಪುಸ್ತಕ ಓದಿದರೆ, ಅದು ಹಾಗೆ ನಮ್ಮಲ್ಲಿ ಮನೆಕಟ್ಟಿಕೊಂಡು ಕುಳಿತರೆ ಅದನ್ನು ಪುಸ್ತಕ ಬರೆದವರಿಗೆ ಹೇಳಬೇಕು ಅನ್ನುವುದೂ ತೋಚುತ್ತಿರಲಿಲ್ಲ. ಮೊದಲ ಬಾರಿ ಹಾಗೆ ಧೈರ್ಯ ಮಾಡಿದ್ದೆ, ’ನಿಮ್ಮ ಪುಸ್ತಕ ನನ್ನಲ್ಲಿ ಮಡುಗಟ್ಟಿದ್ದ, ಹೆಪ್ಪುಗಟ್ಟಿದ್ದ ಎಷ್ಟೋ ನೋವುಗಳಿಗೆ ಬಿಡುಗಡೆ ಕೊಟ್ಟಿತು’ ಅಂತ. ಅದು ನಿಜವೂ ಹೌದು. ಎಷ್ಟೋ ಸಲ ಮನಸ್ಸು ನೋವಿನಿಂದ ಹೆಪ್ಪುಗಟ್ಟಿರುತ್ತದೆ, ಕರಗಲು ಒಂದು ಬಿಸುಪಿನ ಮಾತು, ದೃಶ್ಯ, ಸ್ಪರ್ಶ ಏನಾದರೂ ಸರಿ, ’ಇದರಿಂದೊಮ್ಮೆ ಬಿಡುಗಡೆಗೊಳಿಸಿರೋ’ ಎಂದು ಮನಸ್ಸು ಹುಯ್ಯಲಿಡುತ್ತಿರುತ್ತದೆ. ಆಗ ಕೇಳುವ ಹಾಡು ಯಾರದ್ದಾದರೂ ಆಗಿರಬಹುದು, ಕಥೆ ಯಾರದ್ದಾದ್ರೂ ಆಗಿರಬಹುದು, ರಾಗ ಯಾವುದಾದರೂ ಅಗಿರಬಹುದು, ಅವು ಬಂದು ತಾಕಿದಾಗ ಮನಸ್ಸು ತಪಸ್ಸು ಮಾಡುತ್ತಾ ಕುಳಿತದ್ದೇ ಇದಕ್ಕೇನೋ ಅನ್ನುವ ಹಾಗೆ ಕಂಬನಿ ಹರಿಯತೊಡಗುತ್ತದೆ, ಅಷ್ಟು ಹೊತ್ತು ಎದೆಯ ಮೇಲೆ ಹೊತ್ತಿದ್ದ ನೋವನ್ನೋ ಯಾರೋ ಕೈ ಹಿಡಿದು ಕೆಳಗಿಳಿಸಿದಂತೆ, ಮಂಜುಗಡ್ಡೆ ಕರಗಿದಂತೆ.
ಹಾಗೆ ಒಮ್ಮೆ ಮಾತನಾಡುತ್ತಾ ಹೊಸದಾಗಿ ಪರಿಚಯವಾಗಿದ್ದ ನನ್ನ ಸ್ನೇಹಿತನಲ್ಲಿ ಹೇಳಿದ್ದೆ, ಇದೊಂದು ಕಾರಣಕ್ಕಾಗಿ ನನಗೆ ಜೆರುಸಲೇಂ ನ wailing wall ನೋಡಲೇಬೇಕು ಅಂತ ಕಟ್ಟಾಸೆ, ಒಂದು ಸಲ ಮನಸ್ಪೂರ್ತಿಯಾಗಿ, ಹೃದಯದಾಳದಿಂದ ಬಿಕ್ಕುಗಳನ್ನೆತ್ತಿ, ಹೆಕ್ಕಿ ಅತ್ತುಬಿಡಬೇಕು, ಆಕಾಶಕ್ಕೆ ಕೇಳಿಸುವ ಹಾಗೆ, ಭೂಮಿ ಒಳಗಿಂದ ಬಂದಂತೆ ದನಿ ಎತ್ತಿ, ಕೈ ಚಾಚಿ, ನಾಳೆ ಎನ್ನುವ ನಾಳೆ ಇಲ್ಲ ಅನ್ನುವಂತೆ, ಸುತ್ತಲೂ ಯಾರಿಲ್ಲಾ ಅನ್ನುವಂತೆ, ಅಳುವೇ ಮೂರ್ತರೂಪವಾದಂತೆ ಸದ್ದು ಮಾಡಿ ಅತ್ತುಬಿಡಬೇಕು, ಅದಕ್ಕೆ ಅಲ್ಲಿಗೆ ಹೋಗಬೇಕು ಎಂದಿದ್ದೆ. ಅವನೂ ಸಹ ಅಷ್ಟೇ ಕಾಳಜಿಯಿಂದ, ’ಇಲ್ಲಮ್ಮ ಗುಲ್ಬರ್ಗಾದಲ್ಲಿ ಬಂದೇ ನವಾಜ್ ದರ್ಗ ಇದೆ, ಅಲ್ಲಿ ಸಹ ನಿರಾತಂಕವಾಗಿ, ಪೂಜೆ ಮಾಡಿದಂತೆ ಅಳಬಹುದು’ ಎಂದ. ಅಷ್ಟೇ ಅಲ್ಲ ಮುಂದುವರಿದು, ’ನನಗೆ ಅಳಲು ಅಲ್ಲೆಲ್ಲಾ ಹೋಗೋದು ಬೇಡ, ದಿಂಬು, ಹೊದಿಕೆ ಇದ್ದರೆ ಸಾಕು’ ಎಂದ. ’ಆದರೆ ನನಗೆ ಜೊತೆಗೆ ಏಕಾಂತವೂ ಬೇಕು’ ಎಂದಿದ್ದೆ ನಾನು.
ಹೌದು ಕಂಬನಿ ಎಂದರೆ ಒಂದು ಬಿಡುಗಡೆ, ಒಂದು ನಂಬಿಕೆ. ನಮ್ಮಲ್ಲಿನ ಮಾತಾಗದ ಸಂಕಟಕ್ಕೆ ಮುಕ್ತಿ, ಯಾರ ಮುಂದೆ ನಿರಾತಂಕವಾಗಿ ಅಳಬಲ್ಲೆವೋ ಅವರಲ್ಲಿ ಒಂದು ನಂಬಿಕೆ. ಒಂದು ಮಡಿಲು, ಒಂದು ಹೆಗಲಿನ ಬೇಡಿಕೆ. ಆದರೆ ಏನೆಲ್ಲಾ ಸಿಗುವ ಈ ಜಗತ್ತಿನಲ್ಲಿ ಹಾಗೊಂದು ಅಮ್ಮನಂತಹ ಮಡಿಲನ್ನು, ಅಪ್ಪನಂತಹ ಹೆಗಲನ್ನು ಹುಡುಕುವುದು ಎಲ್ಲೆಲ್ಲಿ?
ಇಲ್ಲಿ ಕಂಬನಿ ಎಂದರೆ ಆನಂದ ಭಾಷ್ಪ ಅಲ್ಲ, ಒಮ್ಮೊಮ್ಮೆ ನಕ್ಕು ನಕ್ಕು ಕಣ್ಣಲ್ಲಿ ಬರುವ ನೀರಲ್ಲ, ’ಇಲ್ಲ ಇನ್ನು ಮುಗಿಯಿತು, ಇಲ್ಲಿ ಇನ್ನೇನೂ ಸಾಧ್ಯವಿಲ್ಲ, ಈ ರಸ್ತೆಗೆ ನೆರಳೇ ಇಲ್ಲ’ ಎಂದು ಕೈ ಚೆಲ್ಲಿ ಕೂತಾಗ, ಧುತ್ತೆಂದು ಎದುರಾದ ತಂಗಾಳಿ ತರುವ ನಿರಾಳತೆಯ ಬಿಡುಗಡೆಯ ಕಣ್ಣ ಹನಿಯಲ್ಲ, ನಿರೀಕ್ಷೆಯೇ ಇಲ್ಲದೆ ನಡೆಯುತ್ತಿರುವಾಗ ಬದುಕು ಹಠಾತ್ತಾಗಿ ಯಾವುದೋ ತಿರುವಿನಲ್ಲಿ ಬೊಗಸೆಗೆ ಸುರಿಯುವ ಅದೃಷ್ಟದ ನಗುವಿನ ಹನಿ ಅಲ್ಲ, ಮೊದಲ ಸಲ ಅವನು ಕೊಟ್ಟ ಪ್ರೀತಿ ಉಡುಗೊರೆಯ ಸಂಭ್ರಮಕ್ಕೆ ಕಣ್ಣಲ್ಲಿ ಕರಗಿ ಒಡಮೂಡುವ ಹನಿ ಅಲ್ಲ, ನಿನ್ನೆ ಮೊನ್ನೆಯವರೆಗೂ ಕಾಲಿಗೆ ತೊಡರಿಕೊಂಡು ಓಡಾಡುತ್ತಿದ್ದ ಮನೆಯ ಪುಟಾಣಿ ಇದ್ದಕ್ಕಿದ್ದಂತೆ ಸ್ಕೂಲ್ ಡೇ ಗೆ ಸ್ಟೇಜ್ ಹತ್ತಿ, ಸಂಪನ್ನನಂತೆ ಕೈಕಟ್ಟಿ ಗಂಭೀರವಾಗಿ ಮಾತನಾಡಿದಾಗ ಬರುವ ಬೆರಗಿನ ಕಣ್ಣೀರಲ್ಲ, ಅರ್ಧ ಬರೆದ ಕಥೆಯನ್ನು ಕಳಿಸಿ ’ಹೇಗಿದೆ’ ಅಂತ ಸ್ನೇಹಿತ ಕೇಳಿ, ಆ ಕಥೆ ಓದುತ್ತಾ ಓದುತ್ತಾ ಯಾವುದೋ ಟ್ರಾನ್ಸ್ ನಲ್ಲಿ ಕಳೆದು ಹೋಗಿ, ಕಥೆಯ ಯಾವುದೋ ಒಂದು ಭಾಗದಲ್ಲಿ ಅದರ ಮೋಹಕತೆಗೆ ಫಕ್ಕನೆ ಅರಿವಿಲ್ಲದಂತೆ ಚಿಮ್ಮಿದ ಕಣ್ಣಲ್ಲಿನ ನೀರಲ್ಲ, ’ಎಲ್ಲ ಓಕೆ ಕಣೆ’ ಎಂದು ಗೆಳತಿ ಫೋನ್ ಮಾಡಿದಾಗ ಎದೆಯ ಮೇಲೆ ಕೈ ಇಟ್ಟುಕೊಂಡಾಗ ಬಂದ ’ಥ್ಯಾಂಕ್ಯೂ’ ಕಣ್ಣೀರಲ್ಲ. ಇದು ನನ್ನಲ್ಲಿನ ಸಂಕಟದ ಘನರೂಪ, ನೋವು ದಿನಮಾನವೆಲ್ಲಾ ಕುದಿದು ಕಟ್ಟಿದ ಕೆನೆ, ಇದು ನನ್ನಲ್ಲಿನ ಯಾರ ಎದಿರೂ ಬರದ ನಾನು.
ಹೌದು ಅಳು ಅತ್ಯಂತ ಖಾಸಗಿ ಕ್ಷಣ. ನಗುವನ್ನು, ತಮಾಷೆಯನ್ನು, ತರಲೆಯನ್ನು, ತಿಂಡಿಯನ್ನು, ಪುಸ್ತಕವನ್ನು ಸಹ ಹಂಚಿಕೊಳ್ಳಬಹುದು, ಆದರೆ ಕಂಬನಿ ಅತ್ಯಂತ ವೈಯಕ್ತಿಕ ಭಾವ. ಅದನ್ನು ಆತ್ಮವನ್ನು ಹಂಚಿಕೊಳ್ಳಬಲ್ಲವರ ಜೊತೆಯಲ್ಲಿ ಮಾತ್ರ ಹಂಚಿಕೊಳ್ಳಬಹುದು. ಅಳುವನ್ನೂ ಭಾಷೆಯ ಒಂದು ಸಾಧನವಾಗಿ ಮಾಡಿಕೊಂಡವರ ಬಗ್ಗೆ ನಾನು ಇಲ್ಲಿ ಮಾತನಾಡುತ್ತಿಲ್ಲ, ಅಳು ಅವರಿಗೆ ಮಹಾಪ್ರಾಣ, ನಾಮಪದವಾಗಿ ಮತ್ತು ಕ್ರಿಯಾಪದವಾಗಿ. ಆದರೆ ಅಳಲಾರದೆ, ಹೇಳಲಾರದೆ ತೊಳಲುವವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರ ಸಂಕಟಕ್ಕೆ ಇವತ್ತಿನದೇ ಕಾರಣ ಅಂತ ಇರಬೇಕಿಲ್ಲ, ಇವತ್ತೇ ಆದ ತಾಜ ಗಾಯವೂ ಬೇಕಂತ ಇಲ್ಲ, ಬೈದಿರಬೇಕಿಲ್ಲ, ಹೊಡೆದಿರಬೇಕಿಲ್ಲ, ಮೌನಕ್ಕೂ ಅಳಿಸುವ ತಾಕತ್ತಿದೆ, ಅ-ಸ್ಪರ್ಶಕ್ಕೂ ಕೊಲ್ಲುವ ಕ್ರೌರ್ಯವಿದೆ, ಅದು ಕಾಲಾಂತರದಲ್ಲಿ ಕಟ್ಟಿದ ಜೇಡರ ಬಲೆಯಂತಹ ದುಗುಡ. ಒಮ್ಮೊಮ್ಮೆ ಇದು ಇದ್ದದ್ದು ಹೌದೆ ಎನ್ನುವ ಹಿಮದಂತಹ ಸಂಕಟವನ್ನು ಯಾವುದೋ ಕವನದ ಸಾಲು ಕಂಡು, ಗುರುತಿಸಿ, ಎಬ್ಬಿಸಿ, ಕರಗಿಸಿ, ಕಣ್ಣೀರಾಗಿಸುವ ಹಿಮ.
ಅಂದೊಮ್ಮೆ ಇನ್ನಿಲ್ಲದ ಸಂಕಟದಲ್ಲಿ, ಎನೂ ತೋಚದೆ, ಏನೂ ಸಾಗದೆ, ಏನೂ ಬೇಕಿಲ್ಲದೆ ಹಾಗೆ ಭೂಮಿಯಲ್ಲಿ ಸೇರಿ ಹೋಗುವಾಸೆಯಲ್ಲಿ ಕೂತಿದ್ದಾಗ ಟಿವಿಯಲ್ಲಿ ತಾರೆ ಜಮೀನ್ ಪರ್ ಸಿನಿಮಾ ಬಂದಿತ್ತು, ಎಷ್ಟನೇ ಸಲವೋ, ನನ್ನಲ್ಲಿನ ಆ ಶಿಲೆಯನ್ನು ಕರಗಿಸಲೇ ಬಂದ ದೇವ ಸ್ಪರ್ಶವೋ ಎನ್ನುವ ಹಾಗೆ ಚಿತ್ರ ನೋಡಿ ಕರಗಿದ್ದೆ, ಹಗುರಾಗಿದ್ದೆ. ನಾವೇ ಆಡಿಕೊಂಡು ನಗುವ ಯಾವುದೋ ಧಾರಾವಾಹಿ ಒಮ್ಮೊಮ್ಮೆ ಸಹಾಯಕ್ಕೆ ಬಂದುಬಿಡುತ್ತದೆ.

’ನೀನು ನನಗೆ ಕೊಟ್ಟ ಸಂತೋಷವನ್ನು ಯಾರೂ ಕೊಡಬಹುದು ಕಚ ಆದರೆ ನೀನು ನನಗೆ ಕೊಟ್ಟ ದುಖಃವನ್ನು ಇನ್ಯಾರೂ ನನಗೆ ಕೊಡಲಾರರು’ ಎಂದ ಪರಮ ಸ್ವಾಭಿಮಾನಿ ದೇವಯಾನಿಯನ್ನು ಹೆಪ್ಪುಗಟ್ಟಿಸಿದ ನೋವು, ಅಂದು ಯಾವತ್ತೋ ಕೇಳಿದ ಹಾಡಿನಲ್ಲಿಯ ಸಾಲುಗಳ ’ತುಝೆ ಕೋಯಿ ಅಪ್ನಾ ತೊ ಕ್ಯಾ, ಬೇಗಾನ ನ ಮಿಲೆ(ನಿನ್ನ ಪಾಲಿಗೆ ನಿನ್ನವರು ಇರಲಿ, ಬೇರೆಯವರು ಸಹ ಇಲ್ಲದಾಗಲಿ)’ ಎಂದು ಶಪಿಸುವ ನೋವು, ’ಟೆಲಿಫೋನು ಬಾರಿಸಿದಾಗ / ಬಾಗಿಲು ತೆರೆಯಲು ಹೋದೆ. / ಒಂಟಿತನ ಕಷ್ಟ ಕಣ್ರೀ..’ ಎನ್ನುವ ಮೂರೇ ಸಾಲುಗಳು ತಮ್ಮ ತಣ್ಣನೆಯ ದನಿಯಲ್ಲೇ ಹೇಳುವ ಕಥೆಯಲ್ಲದ ನೋವು, ಕಂಬನಿಗಿಂತ ಬಿಡುಗಡೆ ಉಂಟೇ ಇವಕ್ಕೆಲ್ಲಾ?
ಕಣ್ಣೀರು ಗಂಡು ಹೆಣ್ಣು ಎಂಬ ಭೇದ ನೋಡುವುದಿಲ್ಲ, ಅದು ಹೃದಯ ಜನ್ಯ ಅಷ್ಟೆ, ಅಳುವ ಗಂಡಸನ್ನು, ನಗುವ ಹೆಂಗಸನ್ನು ನಂಬಬಾರದು ಅನ್ನುವ ಗಾದೆ ಒಂದು ಪೊಳ್ಳು ಮಾತು. ಅಳಬಲ್ಲ ಗಂಡಸು, ತನ್ನ ಕಂಬನಿ ತೋರಿಸಿಕೊಳ್ಳುವ ಧೈರ್ಯ ಮಾಡುವ ಗಂಡಸು ಹೆಚ್ಚು ಹೃದಯವಂತನಂತೆ ಕಾಣುತ್ತಾನೆ. ಯಾವ ಗಂಡು ಮಾನಸಿಕವಾಗಿ ಹೆಚ್ಚು ದೃಢವಾಗಿರುತ್ತಾನೋ ಅವನಲ್ಲಿ ಕಂಬನಿಯನ್ನು ವ್ಯಕ್ತಪಡಿಸುವ ತಾಕತ್ತು ಹೆಚ್ಚಿರುತ್ತದೆ ಅನ್ನುತ್ತಾರೆ ಮನಶ್ಯಾಸ್ತ್ರಜ್ಞರು. ಇನ್ನೊಬ್ಬರನ್ನು ನಂಬಬಲ್ಲಿರಾದರೆ ಅವರೆದುರು ಅಳಲೂ ಸಂಕೋಚವಿರದು ಅಂತಾರೆ. ನಿಜವಿರಬಹುದು… ಎಲ್ಲರನ್ನೂ ನಂಬಬಲ್ಲ ಮಕ್ಕಳು ಹಾಗೆ ಎಲ್ಲರೆದಿರೂ ನಿರಾತಂಕವಾಗಿ ಅಳಬಲ್ಲರು ಸಹ. ಅಳು ಮಕ್ಕಳ ಮಟ್ಟಿಗೆ ಒಂದು ಸಂವಹನದ ಭಾಷೆ, ಆದರೆ ಬೆಳೆಯುತ್ತಾ ಬೆಳೆಯುತ್ತಾ ಬೇರೆ ಭಾಷೆಗಳನ್ನು ಕಲಿತ ಹಾಗೆ ನಾವು ಬಹುಷಃ ಈ ಭಾಷೆಯನ್ನು ಮರೆಯುತ್ತಾ ಹೋಗುತ್ತೇವಾ?
ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ
ಹಾಗೆ ನೋಡಿದರೆ ಯಾರಾದರೂ ಏನನ್ನಾದರೂ ನೋಡಿ ಅತ್ತರೆ ಆ ಅಳು ಕೇವಲ ಎದುರಿಗಿರುವವರಿಗಾಗಿ ಅಲ್ಲವಂತೆ, ಆ ಅಳು ಸ್ವಲ್ಪ ಅವರ ಸ್ವಂತದ್ದಾಗಿಯೂ ಇರುತ್ತದಂತೆ. ಅವರ ಜೀವನದ ಏನೋ ಈ ನೆಪದಲ್ಲಿ ಅಳುವಾಗಿ ಹರಿದಿರುತ್ತದಂತೆ. ಪ್ರತಿ ಸಲ ಕಣ್ಣೀರಿಡುವಾಗಲೂ ನಮ್ಮ ಯಾವುದೋ ಹಳೆಯ ಗಾಯ ’ಕಳಕ್’ ಎಂದಿರುತ್ತದೆ.
ಅಲ್ಲಿ ಜೆರುಸಲೇಂ ನ ಹಳೆಯ ಭಾಗದಲ್ಲಿ ಆ ಗೋಡೆಯ ಬಳಿ ಕೂತು ಇನ್ನಿಲ್ಲದಂತೆ ಉಮ್ಮಳಿಸಿ, ಬಿಕ್ಕಿ ಬಿಕ್ಕಿ ಅಳುತ್ತಾರಲ್ಲಾ ಅವರ ಯಾವ ಯಾವ ನೋವುಗಳು ಅಲ್ಲಿ ಪದಗಳಾಗುತ್ತವೆ? ಅಲ್ಲಿ ಮಂಡಿಯೂರಿ, ಕುಳಿತ ಯಹೂದಿಗಳು ಶತಮಾನಗಳ ತಮ್ಮ ನೋವಿಗೆ, ತಮ್ಮ ಜನಾಂಗದ ಸಾವಿಗೆ, ಇತಿಹಾಸ ಮೌನಿಯಾಗಿ ಕುಳಿತು ನೋಡಿದ ನರಮೇಧಕ್ಕೆ ತಾವೂ ಕಲ್ಲಾಗಿ ಅಲ್ಲಿನ ಕಲ್ಲುಗಳನ್ನು ಮುದ್ದಿಸುತ್ತಾ, ’ತೋರಾಹ್’ (ಜ್ಯೂಗಳ ಪವಿತ್ರ ಗ್ರಂಥ)ನ ೭೯ನೆಯ ಶ್ಲೋಕವನ್ನು ಗುಣುಗುಣಿಸುತ್ತಾ ಹಾಗೆ ಗಂಟೆಗಟ್ಟಲೆ ಅಳುತ್ತಾ ಕೂರುತ್ತಾರಲ್ಲ, ಇನ್ನೆಷ್ಟು ನೋವಿರಬಹುದು ಅವರೊಳಗೆ?
ಸುತ್ತಾಡಲು, ತಿಂಡಿತಿನ್ನಲು, ಪ್ರಾರ್ಥನೆ ಮಾಡಲು, ಆಟ ಆಡಲು, ಕಡೆಗೆ ಪ್ರೀತಿ ಮಾಡಲು ಸಹ ಜಾಗ ಕಟ್ಟುವ ಜಾಣರು ನಾವು, ಅಳಲು ಯಾಕೆ ಒಂದು ಜಾಗ ಕಟ್ಟಿಕೊಳ್ಳಬಾರದು? ಪ್ರಶ್ನೆಗಳನ್ನೆಬ್ಬಿಸದ, ಉತ್ತರಗಳ ನಿರೀಕ್ಷೆಯೇ ಇಲ್ಲದ, ಕಾರಣಗಳ ಜಾಮೀನು ಕೇಳದ ನಿರಾತಂಕ ಅಳುವಿಗೆ ಒಂದು ಜಾಗ.
ಅದಕ್ಕೇ ನನಗೆ ಆ ಹಾಡಿನ ಈ ಸಾಲುಗಳೆಂದರೆ ಅಷ್ಟು ಇಷ್ಟ…
’ಒಂದು ಸಾರಿ ಅತ್ತುಬಿಡಲೇನು?
ತೋಳಿನಲ್ಲೇ…..??’
 

‍ಲೇಖಕರು G

4 April, 2014

23 Comments

  1. ಹರಿ

    ಓದುವಾಗಲೂ….. ಓದಿ ಮುಗಿದ ನಂತರವೂ ಕಾಡುವ ಬರಹ…
    ನನ್ನನ್ನು ಕಾಡುವ ಸಾಲುಗಳು
    ಹೃಷಿ ದಾ ನಿರ್ದೇಶನದ “ಆನಂದ್” ಚಿತ್ರದ “ಕಹಿ ದೂರ್ ಜಬ್ ದಿನ್ ಡಲ್ ಜಾಯೆ”
    ಬಾಲು ಮಹೇಂದ್ರ ನಿರ್ದೇಶನದ “ಸದ್ಮಾ” ಚಿತ್ರದ “ಸುರ್‌ಮಯ್ ಅಖಿಯೋಂ ಮೆ”
    ಈ ಎರಡು ಹಾಡುಗಳು ಯಾವಾಗ ಕೇಳಿದರು ಹಾಡು ಮುಗಿಯುವುದರೊಳಗೆ ಕಣ್ಣು ತುಂಬಿರುತ್ತದೆ.

  2. anupavanje

    ಒಳಗೊಳಗೆ ಹೆಪ್ಪುಗಟ್ಟಿದ್ದು ಅದ್ಯಾಕೆ ಕಣ್ಣೀರಲ್ಲಿ ಬಳಿದುಹೋಗೋಲ್ಲ…..!!!

  3. Renuka Nidagundi

    ಎಂದಿನಂತೆ ಒಂದು ಕ್ಷಣ ನಿಂತು, ಒಳಗೆ ಇಣುಕಿ
    ತಡಕಾಡುವ ಬರಹ…

  4. bharathi

    ನಾನೊಮ್ಮೆ ಜೆರುಸಲೆಂಗೆ ಹೋಗ್ಬೇಕು … ಇಲ್ಲವಾದರೆ ಗುಲ್ಬರ್ಗಕ್ಕಾದರೂ ….

  5. sushma

    ಎಷ್ಟು ಸತ್ಯವಾದ ವಿಷಯಗಳಿರುವ ಬರಹ…… ಯಾವುದೋ ಹಾಡು, ಯಾವುದೋ ನಾಟಕ, ಯಾವುದೋ ಸಿನಿಮಾ ನೋಡ ನೋಡುತ್ತಾ ಎಷ್ಟೋ ಸಾರಿ ಅಳು ಬಂದಿದೆ ನನಗೆ.. ಆದರೆ ಯಾರಿಗೂ ಕಾಣದ ಹಾಗೆ ಅಳಬೇಕೆಂದು, ಅಳು ತಡೆಯುವುದನ್ನೆ ಪ್ರಯತ್ನಿಸಿದ್ದೇನೇ ಹೊರತು ಮನಃಪೂರ್ತಿ ಅತ್ತಿಲ್ಲಾ….. ಹಾಗೆ ಅಳಬೇಕೆಂದರು ಕಣ್ಣೀರು ಬರುವುದೂ ಇಲ್ಲಾ….. ಯಾಕೆ ???????? ಈ ಪ್ರಶ್ನೆಗೆ ಉತ್ತರ ಇನ್ನೂ ನನಗೆ ಸಿಕ್ಕಿಲ್ಲಾ

  6. smitha Amrithraj

    mana thattuva baraha-smitha.

  7. jyothi

    ಗೊತ್ತಿಲ್ಲ ಏನು ಬರೀಬೇಕೆಂದು ಇಲ್ಲಿ….
    ಕಣ್ಣಲ್ಲಿ ನೀರು..
    ಈ ಕಣ್ಣೀರಿಗೂ ಕಾರಣ
    ತಿಳಿದಿಲ್ಲ:))

  8. Sandhya, Secunderabad

    Estu chennagi bhavanegalige padagala roopa kottiddiri Sandhya Madam.
    Oodta oodta kaneeru bandiddantoo nija.
    Nimma maatugalu nannavoo saha – kanneru horabaralu ondu haadina saalu / ondu sundara painting / Movie / mana muttuva baraha – enoo aagabahudu.

  9. Anuradha.B.Rao

    ‘ಹಾಗೆ ನೋಡಿದರೆ ಯಾರಾದರೂ ಏನನ್ನಾದರೂ ನೋಡಿ ಅತ್ತರೆ ಆ ಅಳು ಕೇವಲ ಎದುರಿಗಿರುವವರಿಗಾಗಿ ಅಲ್ಲವಂತೆ, ಆ ಅಳು ಸ್ವಲ್ಪ ಅವರ ಸ್ವಂತದ್ದಾಗಿಯೂ ಇರುತ್ತದಂತೆ. ಅವರ ಜೀವನದ ಏನೋ ಈ ನೆಪದಲ್ಲಿ ಅಳುವಾಗಿ ಹರಿದಿರುತ್ತದಂತೆ. ಪ್ರತಿ ಸಲ ಕಣ್ಣೀರಿಡುವಾಗಲೂ ನಮ್ಮ ಯಾವುದೋ ಹಳೆಯ ಗಾಯ ’ಕಳಕ್’ ಎಂದಿರುತ್ತದೆ.’
    ಮನಸ್ಸನ್ನು ತಟ್ಟಿದ ಸಾಲುಗಳು . ಇಷ್ಟವಾಯಿತು .

  10. Uday Itagi

    “ಕಣ್ಣೀರು ಗಂಡು ಹೆಣ್ಣು ಎಂಬ ಭೇದ ನೋಡುವುದಿಲ್ಲ, ಅದು ಹೃದಯ ಜನ್ಯ ಅಷ್ಟೆ, ಅಳುವ ಗಂಡಸನ್ನು, ನಗುವ ಹೆಂಗಸನ್ನು ನಂಬಬಾರದು ಅನ್ನುವ ಗಾದೆ ಒಂದು ಪೊಳ್ಳು ಮಾತು. ಅಳಬಲ್ಲ ಗಂಡಸು, ತನ್ನ ಕಂಬನಿ ತೋರಿಸಿಕೊಳ್ಳುವ ಧೈರ್ಯ ಮಾಡುವ ಗಂಡಸು ಹೆಚ್ಚು ಹೃದಯವಂತನಂತೆ ಕಾಣುತ್ತಾನೆ. ಯಾವ ಗಂಡು ಮಾನಸಿಕವಾಗಿ ಹೆಚ್ಚು ದೃಢವಾಗಿರುತ್ತಾನೋ ಅವನಲ್ಲಿ ಕಂಬನಿಯನ್ನು ವ್ಯಕ್ತಪಡಿಸುವ ತಾಕತ್ತು ಹೆಚ್ಚಿರುತ್ತದೆ ಅನ್ನುತ್ತಾರೆ ಮನಶ್ಯಾಸ್ತ್ರಜ್ಞರು.”
    ಈ ಸಾಲುಗಳು ನನ್ನ ಮನಸ್ಸನ್ನು ತಟ್ಟಿದವು. ನನಗೆ ತುಂಬಾ ದುಂಖವಾದಾಗ ಆತ್ಮೀಯರೆದುರು ಅತ್ತುಬಿಡುತ್ತಿದ್ದೆ. ಆಗೆಲ್ಲಾ ಅವರು ಗಂಡಸರು ಅಳಬಾರದು ಎಂದು ತಮಾಷೆ ಮಾಡುತ್ತಿದ್ದರು. ಆದರೆ ಸಂಧ್ಯಾರಾಣಿಯವರು ಸಾಲುಗಳು ನನಗೆ ಯಾರೂ ಹೇಳದ ಸಮಾಧನವನ್ನು ನೀಡಿವೆ. Thanks and hats off to you Sandhya mam!

  11. ಇಂದುಶೇಖರ ಅಂಗಡಿ

    “ಸುತ್ತಾಡಲು, ತಿಂಡಿತಿನ್ನಲು, ಪ್ರಾರ್ಥನೆ ಮಾಡಲು, ಆಟ ಆಡಲು, ಕಡೆಗೆ ಪ್ರೀತಿ ಮಾಡಲು ಸಹ ಜಾಗ ಕಟ್ಟುವ ಜಾಣರು ನಾವು, ಅಳಲು ಯಾಕೆ ಒಂದು ಜಾಗ ಕಟ್ಟಿಕೊಳ್ಳಬಾರದು?”
    ಅಳುವದಕ್ಕಾಗಿ ಜಾಗ ಕಟ್ಟಿಕೊಂಡು ಹೋಗಿ ಅಲ್ಲಿ ಕುಳಿತು ಅತ್ತರೆ ಅದೊಂದು ಕೃತಕ (ಬರಿಸಿಕೊಂಡ) ಅಳುವಾಗಬಹುದಲ್ಲವೇ ? ಅಳು ಜಾಗ ನೋಡಿಕೊಂಡು ಬರುವಂಥದಲ್ಲ. ಕೆಲವೊಂದು ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದಂತೆಯೇ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣು ಮಂಜಾಗುತ್ತದೆ. ನಮ್ಮ ಕಣ್ಣುಗಳು, ಹೃದಯ ಅನುಭವಿಸುವ ವೇದನೆಯನ್ನು
    ಮೆದುಳಿನ ದಾರಿ ಬೈಪಾಸ್ ಮಾಡಿ ನೇರವಾಗಿ ಕಣ್ಣೀರಿನ ಮೂಲಕ ತೋರಿಸಿಕೊಡುತ್ತವೆ ಅನಿಸುತ್ತದೆ.

  12. Sushma Moodbidri

    ಕಣ್ಣೀರು ನನ್ನಲ್ಲಿನ ಸಂಕಟದ ಘನರೂಪ, ನೋವು ದಿನಮಾನವೆಲ್ಲಾ ಕುದಿದು ಕಟ್ಟಿದ ಕೆನೆ, ಇದು ನನ್ನಲ್ಲಿನ ಯಾರ ಎದಿರೂ ಬರದ ನಾನು.
    -ನನ್ನೊಳಗಿನ ಮಾತುಗಳೆಲ್ಲಾ ಅಕ್ಷರವಾದ ಭಾವ..
    ಸಂಧ್ಯಾ ರಾಣಿ ಮೇಡಂ ಇಷ್ಟವಾಯಿತು

  13. ಕುಸುಮ

    ಕಣ್ಣೀರೆಂದರೆ ನನ್ನಲ್ಲಿನ ಯಾರ ಎದುರೂ ಬಾರದ ನಾನು!!!

  14. Usha Rai

    ”ಹೌದು ಅಳು ಅತ್ಯಂತ ಖಾಸಗಿ ಕ್ಷಣ. ನಗುವನ್ನು, ತಮಾಷೆಯನ್ನು, ತರಲೆಯನ್ನು, ತಿಂಡಿಯನ್ನು, ಪುಸ್ತಕವನ್ನು ಸಹ ಹಂಚಿಕೊಳ್ಳಬಹುದು, ಆದರೆ ಕಂಬನಿ ಅತ್ಯಂತ ವೈಯಕ್ತಿಕ’ ಎಷ್ಟು ಚೆನ್ನಾಗಿ ಹೇಳಿದ್ದೀರಿ.ಇಡೀ ಲೇಖನ ಮನದೊಳಕ್ಕೆ ಇಳಿಯಿತು.

  15. samyuktha

    _/\_

  16. Anonymous

    ಎಷ್ಟು ಚೆಂದಗೆ ಬರೆದಿದ್ದೀರಿ ಮೇಡಂ…

  17. Asha

    Nimma maathu satya, nanagu eshto sala yaavudhaadharu hegalige ovaragi allabeku antha anisuthe , aadhare antha hegalu nannagilla madam.

  18. sunil

    Bahala bahala ishtavaaytu…dukkhavaaytu…
    Namage bedavaada naalku hanigalu kanninda jaari hogodakke eshtu pramukhyate ide…abba!!
    Nija aluvikege ondu dimbdu…hodike idre saaku.

  19. ajith

    Thumba chennagide.. yayathi natakada thunuku kooda aste.. ಯಾವ ಗಂಡು ಮಾನಸಿಕವಾಗಿ ಹೆಚ್ಚು ದೃಢವಾಗಿರುತ್ತಾನೋ ಅವನಲ್ಲಿ ಕಂಬನಿಯನ್ನು ವ್ಯಕ್ತಪಡಿಸುವ ತಾಕತ್ತು ಹೆಚ್ಚಿರುತ್ತದೆ ಅನ್ನುತ್ತಾರೆ ಮನಶ್ಯಾಸ್ತ್ರಜ್ಞರು. Thumba istavada saalugalu ivu…all the best

  20. kannika sripathy

    Alu ondu yovuktika, yellara hatira hanchikollalagadu, nanna amma hoda mele nanage alu andare yene yembudu goteyetu, nimma baraha tumga chennagide madam.

  21. Nalla Tambi

    ನಾನು ಅಳುವುದು ಬಹಳ ಕಡಿಮೆ. ನನ್ನ ಮಗ, ಮಗಳು(ಬೇರೆ ಬೇರೆ ಸಂದರ್ಭಗಳಲ್ಲಿ) ಸಾವಿನ ದವಡೆಗೆ ಸಿಕ್ಕಿಕೊಂಡಾಗ( ಈಗ ದೇವರ ದಯೆಯಿಂದ ಆರೋಗ್ಯವಾಗಿದ್ದಾರೆ) ಅತ್ತದ್ದು ಬಾಥ್ರೂಮಿನಲ್ಲಿ.. ತಲೆಮೇಲೆ ಸುರಿದುಕೊಂಡ ನೀರೊಂದಿಗೆ ಬೆರೆತು ಹರಿದ ಕಣ್ಣೀರು.. ನನ್ನ ತಂದೆ, ತಾಯಿ ತೀರಿಕೊಂಡಾಗ.. ಮೌನವಾಗಿ ಬಿಕ್ಕಳಿಸುತ್ತಾ… ಕೆಲವೊಮ್ಮ ಸಿನಿಮಾ theater ಕತ್ತಲಲ್ಲಿ……ಮತ್ತೆ ನನಗೆ ಹಿಡಿಸಿದ ಕೆಲವು ಹಾಡುಗಳಿಗೆ.. ರಾತ್ರಿ ಒಂಟಿಯಾಗಿ cd ಕೇಳುವಾಗ.. especially ಭಾರತಿಯಾರಿನ ನಲ್ಲದೋರ್ ವೀಣೈ ಸೆಯಿದೆ… ಬಾಂಬೆ ಜಯಶ್ರೀ ಹಾಡು… ಹೀಗೆ…………

  22. ಶಮ, ನಂದಿಬೆಟ್ಟ

    “ಯಾರ ಮುಂದೆ ನಿರಾತಂಕವಾಗಿ ಅಳಬಲ್ಲೆವೋ ಅವರಲ್ಲಿ ಒಂದು ನಂಬಿಕೆ. ಹೌದು ಅಳು ಅತ್ಯಂತ ಖಾಸಗಿ ಕ್ಷಣ. ನಗುವನ್ನು, ತಮಾಷೆಯನ್ನು, ತರಲೆಯನ್ನು, ತಿಂಡಿಯನ್ನು, ಪುಸ್ತಕವನ್ನು ಸಹ ಹಂಚಿಕೊಳ್ಳಬಹುದು, ಆದರೆ ಕಂಬನಿ ಅತ್ಯಂತ ವೈಯಕ್ತಿಕ ಭಾವ. ಅದನ್ನು ಆತ್ಮವನ್ನು ಹಂಚಿಕೊಳ್ಳಬಲ್ಲವರ ಜೊತೆಯಲ್ಲಿ ಮಾತ್ರ ಹಂಚಿಕೊಳ್ಳಬಹುದು.”
    ಬಹಳಷ್ಟು ಸಾರ್ತಿ ನಮ್ಮದೇ ಮನೆಯಲ್ಲಿ ನಾವು ಅಸಹಾಯಕರಾಗುವುದು, 7-8 ಬೆಡ್ ರೂಮಿನ ಮನೆಯಲ್ಲೂ ಜಾಗವಿಲ್ಲವೆನಿಸುವುದು ಅಳಲಾರದೇ ತೊಳಲಾಡಿದಾಗಲೇ ಕಣೇ… ನನಗೊಂದು ಹುಚ್ಚು ಕನಸಿದೆ; ನಾವು ಯಾವಾಗಲಾದರೂ ಸೈಟು ತೊಗೊಂಡು ಮನೆ ಅಂತ ಕಟ್ಟಿಸಿದ ಕಾಲಕ್ಕೆ ನನಗೇ=ನಂಗ್ ನಂಗೆ ಮಾತ್ರ ಅಂತ ಒಂದು ರೂಮು ಬೇಕು ಅಂತ. ನಿಜಕ್ಕಾದರೆ ಆ ಕನಸು ಹುಟ್ಟಿಕೊಂಡಿದ್ದು ಅಳಬೇಕೆನ್ನಿಸಿದ ಕ್ಷಣ ತಡೆಹಿಡಿಯದೇ ಕಂಬನಿ ಹರಿಯಬಿಡಬೇಕು ಎಂಬ ಕಾರಣಕ್ಕೆ…
    ಈ ಲೇಖನ ಓದುವಾಗ ನನ್ನ ಮನಸೇ ಮಾತಾಡಿದಂತಾಯಿತು. Love to You..

  23. Hema Sadanand Amin

    nanage nanna kannirallu priti. ekanthadalli joragi attu bidabennisuthade. aadare yarigagi kannira arpane madithiddheno avaru nannedurige irbekinisuthade. bere yaru bade. matte aa kanniru mattu avaru. nanu nimitta maatra.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading