ಅಲ್ಲಿದ್ದದ್ದು ಇಬ್ಬರು. ಒಡಲಲ್ಲಿ ಭೋರ್ ಎನ್ನುವ ದುಗುಡ ತುಂಬಿಕೊಂಡು ತುಯ್ದಾಡುತ್ತಾ ಇದ್ದ ಮುಗಿಲು, ಗಾಳಿಗೆ ಒದ್ದಾಡುತ್ತಿದ್ದ ದೀಪದ ಹಾಗೆ ಕಣ್ಣೋಟ, ಮನಸ್ಸುಗಳಲ್ಲಿ ವ್ಯಗ್ರತೆ, ಒಬ್ಬರ ಆರೋಪಕ್ಕೆ ಪ್ರತಿಯಾಗಿ ಇನ್ನೊಬ್ಬರ ಪ್ರತ್ಯಾರೋಪ, ಕ್ರಿಯೆಯ ಪ್ರತಿಕ್ರಿಯೆಯಾಗಿ ಘಟಿಸಿದ ಘಟನೆಗಳ ಭಾರ ಇಬ್ಬರ ಹೆಗಲುಗಳ ಮೇಲೂ, ಸೇತುವೆಗಳಾಗಬೇಕಿದ್ದ ಮಾತುಗಳು ಗೋಡೆಗಳಾಗಿ ಕೈ ಬೆರಳು ತಾಕಿದರೆ ಸೋಕುವ ದುಗುಡ. ’ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ, ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ….’, ಆದರೆ ಇಲ್ಲಿ ಬೇಟೆಯಾಡಿರುವುದು ಹಮ್ಮಲ್ಲ, ಇನ್ಯಾವುದೋ ನೆರಳು. ಏನನ್ನೋ ಹೇಳಲು ಪ್ರಯತ್ನಿಸಿ ಬಿಕ್ಕುತ್ತಿದ್ದ ಕೊರಳು, ಕಣ್ಣೆವೆಗಳ ಕೊನೆಯಲ್ಲಿ ಆಣೆ ಮಾಡಿ ನಿಲ್ಲಿಸಿದ್ದರೂ ಇನ್ನೇನು ಕುಸಿದು ಕೆಳಗೆ ಬೀಳುತ್ತೇನೆ ಎನ್ನುವ ಕಣ್ಣ ಹನಿ, ಸಂಬಂಧ ಕಡಿದುಕೊಳ್ಳುವ ಉದ್ದೇಶ ಇಲ್ಲದಿದ್ದರೂ, ವಿರುದ್ಧ ದಿಕ್ಕಿನಲ್ಲಿ ಸಾಗಿ ಬಂದ ದೂರ ಕ್ರಮಿಸುವುದು ಸುಲಭವಲ್ಲ.
ಮಾತನಾಡುತ್ತಾ ಆಡುತ್ತಾ ಇದ್ದಕ್ಕಿದ್ದಂತೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ ಅವಳ ಕೈ ಬೆರಳುಗಳು ಅವನ ಬೆರಳನ್ನು ತಾಕಿದವು. ಆ ಕೋಪದ ಮಾತುಗಳ ನಡುವೆಯೇ ಅವನ ಬೆರಳುಗಳು ಆಯಾಚಿತವಾಗಿ ಆ ಬೆರಳನ್ನು ಬಳಸಿ ಹಿಡಿದವು. ಅದು ಆ ಕ್ಷಣದ ಸಾಕ್ಷಾತ್ಕಾರ. ಎಲ್ಲ ಕೋಪ ಜಗಳದ ನಡುವೆಯೂ, ಆರೋಪ ಪ್ರತ್ಯಾರೋಪಗಳ ನಡುವೆಯೂ ಆ ಘಳಿಗೆಯಲ್ಲಿ ಪರಸ್ಪರರಲ್ಲಿ ಅವಲಂಬನೆ ಆಪ್ಯಾಯತೆಯ ಅರಿವು ಮನಸ್ಸನ್ನು ತಟ್ಟಿ, ಮಾತುಗಳ ಮೊನಚು ತಗ್ಗಲಾರಂಭಿಸಿತು..
ಹೌದೆ, ಇದು ಹೀಗಾಗಬಹುದೇ? ಸ್ಪರ್ಶಕ್ಕೆ ನಿಜಕ್ಕೂ ಅಂತಹ ಮಾಂತ್ರಿಕತೆ ಉಂಟೆ? ಮಾತಿಗೆ ಮೀರಿದ ಭಾವ ಸ್ಪರ್ಶಕ್ಕೆ ನಿಲುಕಬಹುದೇ? ಆಗ ನೆನಪಾದದ್ದು ವೈದೇಹಿಯವರೊಡನೆ ನನ್ನ ಭೇಟಿ.
ಅಮ್ಮನಂತಹ ಮಾತು
ಮಗುವಿನಂತಹ ನಗು.
ಕವನ ಕೇಳಿ, ಆರ್ದ್ರ ಗೌರಿಯ
ಮೌನ ಕೇಳಿ,
ಕಣ್ಣೆಲ್ಲಾ ಉಪ್ಪುಪ್ಪು..
ಕಾಯುತ್ತಿದ್ದ ಕೈಗಳಲ್ಲಿ
ಆ ಗುಬ್ಬಿ ಕೈಯ್ಯ ಅಪ್ಪಿಕೊಂಡಾಗ
ಮಂಜು ಮಂಜು ಕಂಗಳಿಗೆ
ಕನ್ನಡಿಯಲಿ ಕಂಡದ್ದು ಥೇಟ್
ಅದೇ ಗೌರಿ..
ವೈದೇಹಿ ಮತ್ತು ಅವರ ಕಥೆಗಳೆಂದರೆ ನನ್ನ ಅಂತರಂಗದ ಸಖಿಯರಿದ್ದಂತೆ. ಅವರ ಕಥೆಗಳ ಪಿಸುಮಾತು, ಕವಿತೆಗಳ ಮೌನ, ನಿಟ್ಟುಸಿರಿನ ಕಂಬನಿ ಎಲ್ಲವನ್ನೂ ಬೊಗಸೆಯಲ್ಲಿ ಮೊಗೆದು ತುಂಬಿಕೊಂಡವಳು ನಾನು. ಒಂದು ಅಡಿಗೆ ಮನೆ, ಒಳ ಚಾವಡಿ, ಅಂಗಳದಲ್ಲಿ ಇಡೀ ವಿಶ್ವದ ದರ್ಶನ ಮಾಡಿಸುವ ವೈದೇಹಿಯವರನ್ನು ಒಮ್ಮೆ ನೋಡಲೇಬೇಕು ಎಂದು ಆ ದಿನ ಸುಚಿತ್ರಾಕ್ಕೆ ಹೋಗಿದ್ದೆ. ಒಂದು ಭೇಟಿ, ಸಾಧ್ಯವಾದರೆ ಒಂದೆರಡು ಮಾತು, ಇದು ನನ್ನ ಮನಸ್ಸಿನಲ್ಲಿದ್ದದ್ದು.
ಮೊದಲು ಮಂಗಳಾ ಎನ್ ರಾವ್ ವೈದೇಹಿಯವರ ಕಥೆ ಓದಿದರು. ಮನಸ್ಸು ಹಸಿ ಹಸಿ ಆಗಿತ್ತು. ಆಮೇಲೆ ಎಸ್ ದಿವಾಕರ್ ಮತ್ತು ಸ್ವತಃ ವೈದೇಹಿ ಕವಿತೆಗಳನ್ನು ಓದಿದರು. ನನ್ನ ಅಕ್ಕ ಪಕ್ಕ ಇಬ್ಬರು ಗೆಳತಿಯರು, ಕವನ ಮುಗಿಯುವಷ್ಟರಲ್ಲಿ ಮೂರೂ ಜನರ ಕಣ್ಣುಗಳೂ ಒದ್ದೆ. ಆ ಘಳಿಗೆಯಲ್ಲಿ ನನಗೆ ತೀವ್ರವಾಗಿ ಅನ್ನಿಸಿದ್ದು, ಹೀಗೆ ನಮಗೇ ಗೊತ್ತಿಲ್ಲದೆ ನಮ್ಮಲ್ಲಿರುವ ಲೋಕವನ್ನು ಕಟ್ಟಿಕೊಡುವ ವೈದೇಹಿಯವರ ಕೈಗಳನ್ನು ಒಮ್ಮೆ ಸ್ಪರ್ಶಿಸಿ ಒತ್ತಿ ಹಿಡಿಯಬೇಕು ಎಂದು. ಆ ಭಾವನೆ ಎಷ್ಟು ತೀವ್ರವಾಗಿತ್ತೆಂದರೆ ನನ್ನ ಭಾವನೆಗಳನ್ನು ತೋರಿಸಿಕೊಳ್ಳಲು ಹಿಂಜರೆಯುವ ನಾನು ಕಾರ್ಯಕ್ರಮ ಮುಗಿದ ಮೇಲೆ ಅವರ ಹತ್ತಿರ ಹೋಗಿ, ’ಇಷ್ಟು ಮನಸ್ಸಿಗೆ ತಾಕುವಂತೆ ಬರೆಯುವ ನಿಮ್ಮ ಕೈಯನ್ನು ಒಮ್ಮೆ ಸ್ಪರ್ಶಿಸಬೇಕು ನಾನು’ ಅಂದೆ. ಅದೇ ಮಗುವಿನ ನಗೆಯೊಂದಿಗೆ ನನ್ನ ಕೈ ಕುಲುಕಿದರು ವೈದೇಹಿ. ಅಷ್ಟರಲ್ಲಿ ಮತ್ತ್ಯಾರೋ ಬಂದು ಕೈ ಚಾಚಿದರು. ತಮ್ಮ ಬಲಗೈಯನ್ನು ನನ್ನ ಕೈಗಳಿಂದ ಬಿಡಿಸಿಕೊಂಡ ಅವರು ಅದನ್ನು ಬಂದವರೆಡೆಗೆ ಚಾಚಿದರು. ಒಂದು ಕ್ಷಣ ನನ್ನ ಕೈ ಹಾಗೆ ತಬ್ಬಲಿಯಂತೆ ಗಾಳಿಯಲ್ಲಿ ನಿಂತಿತ್ತು. ಒಂದೇ ಕ್ಷಣ, ಮತ್ತೆ ತಮ್ಮ ಎಡಗೈ ಚಾಚಿ, ನನ್ನ ಕೈ ಒತ್ತಿ ಹಿಡಿದರು ವೈದೇಹಿ. ಆ ಘಳಿಗೆಯಲ್ಲಿ ನನ್ನನ್ನು ತಾಕಿದ್ದು, ಮೊದಲನೆಯದಾಗಿ ಅವರಿಗಿರುವ ಸೂಕ್ಷ್ಮ ಸಂವೇದನೆ ಮತ್ತು ಅವರ ಆ ಗೆಸ್ಚರ್ ಮತ್ತು ಆ ಸ್ಪರ್ಶ ನನಗೆ ನೀಡಿದ re assurance. ಒಂದು ಸ್ನೇಹವನ್ನು, ಆಪ್ಯಾಯತೆಯನ್ನು ಅಷ್ಟು ಚೆನ್ನಾಗಿ ಇನ್ಯಾವ ಮಾತುಗಳೂ ಹೇಳಲಾಗುತ್ತಿರಲಿಲ್ಲ..
ಪರಿಚಯ, ಸ್ನೇಹ, ಆತ್ಮಿಯತೆ ವ್ಯಕ್ತಪಡಿಸೋಕೆ ಕೈ ಕುಲುಕುವುದು ಅನಿವಾರ್ಯವೇ? ಎನ್ನುವಂತಹ ಒಂದು ಸ್ಟೇಟಸ್ ಅನ್ನು ಗೆಳತಿಯೊಬ್ಬಳು ಫೇಸ್ ಬುಕ್ಕಿನಲ್ಲಿ ಹಾಕಿದ್ದಳು. ಆಗಿನಿಂದ ಇದು ಮನಸ್ಸನ್ನು ಕಾಡುತ್ತಲೇ ಇದೆ. ಅಪರಿಚಿತರನ್ನು ಅಥವಾ ಕೇವಲ ಪರಿಚಿತರನ್ನು ಭೇಟಿಯಾದಾಗ ನಮಸ್ತೆ ಎನ್ನುತ್ತೇವೆ. ಅದರೆ ಸ್ನೇಹದಲ್ಲಿ, ಆತ್ಮೀಯತೆಯಲ್ಲಿ, ಸಂಬಂಧದಲ್ಲಿ ಸ್ಪರ್ಶ ಒಂದು ಜೀವಸೆಲೆಯನ್ನು ಹಂಚುತ್ತದೆ ಅನ್ನಿಸುತ್ತದೆ ನನಗೆ. ಸ್ಪರ್ಶ ಎಂದರೆ ವಾಂಛೆ ಆಗಿರಬೇಕಿಲ್ಲ, ಸ್ಪರ್ಶ ಎಂದರೆ ಸಲಿಗೆಯೂ ಆಗಬೇಕಿಲ್ಲ. ಅದು ಒಂದು ಆತ್ಮೀಯತೆಯನ್ನು ಒಪ್ಪಿಕೊಳ್ಳುವ, ವ್ಯಕ್ತ ಪಡಿಸುವ ಕ್ರಿಯೆ ಅನ್ನಿಸುತ್ತದೆ.

ಸ್ಪರ್ಶ ಕೊಡಬಲ್ಲ ಸಾಂತ್ವನವನ್ನು ಅರಿಯಬೇಕಾದರೆ ಕಾಯಿಲೆಯಿಂದ ಮಲಗಿರುವವರನ್ನು ಕೇಳಿ, ಸ್ಪರ್ಶ ತರಬಲ್ಲ ಬದಲಾವಣೆಯನ್ನು ತಿಳಿಯಬೇಕಾದರೆ ಹಾಗೆ ಮಲಗಿದವರನ್ನು ನೋಡಿಕೊಳ್ಳುವವರನ್ನು ಕೇಳಿ. ಹುಷಾರಿಲ್ಲದೆ ಮಲಗಿರುವಾಗ ಒಂದು ಪುಟ್ಟ ಕಂದನ ಕೈನ ಶೀತಲ ಸ್ಪರ್ಶ ನೀಡುವ ತಂಪನ್ನು ಯಾವ ಔಷಧಿ ತಾನೇ ನೀಡೀತು? ಹುಷಾರು ತಪ್ಪಿದಾಗ ಅಮ್ಮನ ಮಡಿಲಿಗೆ, ಅಮ್ಮನ ಸೀರೆಯ ಪರಿಮಳಕ್ಕೆ, ಕೈಗಳ ತಟ್ಟುವಿಕೆಗೆ ಹಠ ಹಿಡಿಯುವ ಮಗು ಮನಸ್ಸು ಹೇಳೀತು ಸ್ಪರ್ಶದ ಸಿರಿಯನ್ನು.
ಒಮ್ಮೆ ಒಂದು ಲೇಖನ ಓದಿದ್ದೆ. ಸ್ತನದ ಕ್ಯಾನ್ಸರ್ ಆಗಿ, ಆಪರೇಶನ್ ಆಗಿ, ಕಿಮೋಥೆರಪಿ, ರೇಡಿಯೇಶನ್ ಎಲ್ಲ ದಾಟಿದ ಮಹಿಳೆ ಒಬ್ಬಳು ಬರೆದ ಲೇಖನ ಅದು. ಆಕೆ ತನ್ನ ದೇಹದ ಒಂದು ಭಾಗವನ್ನು ಕಳೆದುಕೊಂಡಿದ್ದಾಳೆ, ಇಲ್ಲಿಯವರೆಗೂ ಇದ್ದ ಸ್ತನ ಈಗ ಕೇವಲ ಎದೆ. ಕಳೆದುಕೊಂಡದ್ದು ಕೇವಲ ಸ್ತನವನ್ನಾ ಅಥವಾ ತನ್ನ ಹೆಣ್ತನದ ಒಂದು ಅವಿಭಾಜ್ಯ ಅಂಗವನ್ನಾ ಎನ್ನುವ ಅನುಮಾನ ಮನಸ್ಸಿನ ತುಂಬಾ. ಅಂತಹ ದೈಹಿಕ ಹಾಗು ಮಾನಸಿಕ ನೋವಿನ ಕಲೆ ಇನ್ನೂ ಹಸಿಯಾಗಿರುವಾಗಲೇ ಆಕೆ ನಿಯಮಿತವಾದ ಚೆಕ್ ಅಪ್ ಗೆಂದು ಆಸ್ಪತ್ರೆಗೆ ಬರುತ್ತಾಳೆ. ಅವಳನ್ನು ಪರಿಶೀಲಿಸಲು ಬಂದ ನರ್ಸ್ ಅವಳ ಗಾಯ ಮಾಗಿರುವುದೋ ಇಲ್ಲವೋ ಎಂದು ನೋಡಲು ಅದನ್ನು ಸ್ಪರ್ಶಿಸುತ್ತಾಳೆ. ಈಕೆ ಮೌನವಾಗಿ, ನೀರವವಾಗಿ ಕಣ್ಣೀರಿಡತೊಡಗುತ್ತಾಳೆ. ನರ್ಸ್ ಅವಳನ್ನು ಮೃದುವಾಗಿ ಕೇಳುತ್ತಾಳೆ, ’ಇದನ್ನು ಸ್ಪರ್ಶಿಸಿದ್ದೀಯಾ ನೀನು’ ಅಂತ. ಈಕೆ ಇನ್ನೂ ಆ ಧೈರ್ಯವಾಗಿಲ್ಲ ಅನ್ನುತ್ತಾಳೆ. ಸ್ನಾನ ಮಾಡುವಾಗ ನೀರು ಅದರ ಮೇಲೆ ಬಿದ್ದಾಗ ಸ್ಪರ್ಶದ ಅನುಭವ ಕೂಡ ನನಗೆ ದಕ್ಕುವುದಿಲ್ಲ ಎಂದು ಬಿಕ್ಕುತ್ತಾಳೆ. ಆಗ ಆ ನರ್ಸ್ ಏನೂ ಮಾತನಾಡದೆ ತನ ಅಂಗೈಯನ್ನು ಆಕೆಯ ಎದೆಯ ಮೇಲಿಡುತ್ತಾಳೆ. ’ಆ ಘಳಿಗೆಯಲ್ಲಿ ಆಕೆ ಸ್ಪರ್ಶಿಸಿದ್ದು ನನ್ನ ಆತ್ಮವನ್ನು’ ಎಂದು ಆ ಮಹಿಳೆ ನೆನೆಸಿಕೊಳ್ಳುತ್ತಾಳೆ. ’ಆ ಘಳಿಗೆಯಲ್ಲಿ ನನಗೆ ಅದು ಅಸಹ್ಯವಲ್ಲ, ಅಸ್ಪೃಶ್ಯವಲ್ಲ, ಅದು ನಾನೇ ಅನ್ನಿಸಿತು. ಇನ್ನೊಬ್ಬರು ನನ್ನ ದೇಹದ ಬದಲಾವಣೆಯನ್ನು ಒಪ್ಪಿಕೊಂಡು ಅದನ್ನು ಸ್ಪರ್ಶಿಸಿದರು ಎನ್ನುವುದು ನನಗೆ ದೊಡ್ಡ ಆತ್ಮವಿಶ್ವಾಸ ಕೊಟ್ಟಿತು. ನನ್ನನ್ನು ನಾನು ಒಪ್ಪಿಕೊಂಡೆ’ ಎಂದು ಆಕೆ ನೆನೆಯುತ್ತಾಳೆ. ಒಂದು ಸ್ಪರ್ಶಕ್ಕೆ ಎಷ್ಟು ಆಯಾಮಗಳು…
ಹಾಗೆ ಇನ್ನೊಂದು ಸುಂದರ ದೃಶ್ಯ ನೆನಪಾಗುತ್ತದೆ. ಅವರಿಬ್ಬರ ನಡುವೆ ಪ್ರೇಮ ಇನ್ನೂ ಆಗ ಮನೆ ಕಟ್ಟುತ್ತಾ ಇತ್ತು. ಅವನಿಗೆ ಸ್ವಲ್ಪ ಜ್ವರ ಬಂದ ಹಾಗನ್ನಿಸಿ, ಹಾಗೆಂದು ಹೇಳಿದ. ತನ್ನ ಕೈಯನ್ನು ಅವನ ಹಣೆ, ಕುತ್ತಿಗೆಯ ಮೇಲಿಟ್ಟು ಜ್ವರ ಇದೆಯೋ ಇಲ್ಲವೋ ಎಂದು ನೋಡುವ ಬದಲು ಆಕೆ ಮೆಟ್ಟಂಗಾಲಿಟ್ಟು, ತುದಿ ಬೆರಳಿನಲ್ಲಿ ನಿಂತು, ತನ್ನ ಕೆನ್ನೆಯನ್ನು ಆತನ ಕತ್ತಿನ ತಿರುವಿಗೆ ಒತ್ತಿ ಜ್ವರ ಇದೆಯೋ ಇಲ್ಲವೋ ನೋಡುತ್ತಿದ್ದಳು! ನನ್ನಾಣೆಯಾಗಿ ಹೇಳುತ್ತೇನೆ ಅಂತಹ ಇನ್ನೊಂದು ರೊಮ್ಯಾಂಟಿಕ್ ಘಳಿಗೆಯನ್ನು ನನ್ನ ಜೀವನದಲ್ಲೇ ನೋಡಿಲ್ಲ ನಾನು…. ಜ್ವರದಂತಹ ಜ್ವರಕ್ಕೂ ಆಮಂತ್ರಣ ಕೊಟ್ಟು ಕರೆಸಿಕೊಂಡುಬಿಡಬೇಕು ಅನ್ನಿಸುವಂತಹ ದೃಶ್ಯ ಅದು! ಯಾವುದೇ ವಾಂಛೆಯಿಲ್ಲದೆ, ಪ್ರೀತಿ ಮಾತ್ರ ತುಂಬಿದ್ದ ದೃಶ್ಯ ಅದು.
ಇಷ್ಟೆಲ್ಲಾ ಬರೆಯುತ್ತಿರುವ ಈ ಘಳಿಗೆಯಲ್ಲಿ ನಾನು ಹೇಳ ಹೊರಟಿರುವುದಾದರೂ ಏನು ಎಂದು ನನ್ನನ್ನೇ ಕೇಳಿಕೊಂಡಾಗ ನನ್ನ ಕಣ್ಣೆದುರಲ್ಲಿದ್ದಿದ್ದು ಮಧ್ಯವಯಸ್ಸಿನ ಆ ಹೆಣ್ಣಿನ ಚಿತ್ರ … ’ಬೇರೆ ಏನೂ ಬೇಡ, ಸುಸ್ತಾಗಿರುವಾಗ ಒಂದು ಪ್ರೀತಿಯ ಮಾತು, ಮೊದಲಿನಂತಹ ಒಂದು ಆತ್ಮೀಯ ಸ್ಪರ್ಶ, ನಾನಿದ್ದೀನಿ ಬಿಡು ಅನ್ನುವ ಸ್ಪರ್ಶ.. ಅದರ ಮುಂದೆ ಮಿಕ್ಕಿದ್ದೆಲ್ಲಾ ಸೆಕೆಂಡರಿ ಅನ್ನಿಸಿಬಿಡುತ್ತದೆ’….. ಆದರೆ ಇಲ್ಲಿ ಹೆಣ್ಣಿನ ಚಿತ್ರ ಮಾತ್ರ ಯಾಕೆ? ಇದು ಒಂದು ಗಂಡಿನ ಮನಸ್ಸಿನ ಮಾತೂ ಆಗಿರಬಹುದು ಅಲ್ಲವೇ? ಹೆಣ್ಣಾಗಲೀ, ಗಂಡಾಗಲೀ, ಮಧ್ಯವಯಸ್ಸಾಗಲೀ, ಇಳಿವಯಸ್ಸಾಗಲೀ ಬೆಚ್ಚನೆಯ ಸ್ಪರ್ಶ ಜೀವದಾಯಿನಿಯೇ ಅಲ್ಲವೇ?



Houdu ivella heege heege nanage annisidduntu …sparshada aa santhvana nenapaythu nimma lekhana odi …sooper annodu bittu mattenoo holeethilla …
ಸಂಧ್ಯಾ, ಬರಹಕ್ಕೂ ಒಂದು ಬೆಚ್ಚನೆಯ ಹಸ್ತವಿರುವುದಾದರೆ, ಅದು ಸ್ಪರ್ಶಿಸಿದ್ದು ನನ್ನ ಮನಸ್ಸು!
ಚೆಂದದ ಬರಹ.
ಸುಂದರ ಅಭಿವ್ಯಕ್ತಿ.
ಇಷ್ಟವಾಯ್ತು.
-Rj
ಸಂಧ್ಯಾರಾಣಿ ಜಿ, ನಮಸ್ಕಾರ..ಹೃದಯಕ್ಕೆ ಬಲು ಆಪ್ತತೆಯ ಸ್ಪರ್ಶ ನೀಡುವ ಬರಹ. ತಮ್ಮ ಮನದಾಳದ ಮಾತುಗಳು ಹೀಗೆ ಹರಿಯುತ್ತಿದ್ದರೆ, ಕೇಳುತ್ತಲೆ ಇರಬೇಕು ಎನಿಸುತ್ತದೆ, ಹರಿಹರನ್ ಹಾಡು, ‘ಕುಛ್ ದೂರ ಹಮಾರೆ ಸಾಥ ಚಲೋ, ಹಮ್ ದಿಲ್ ಕಿ ಕಹಾನೀ ಕೆಹ ದೇಂಗೆ” ಹಾಡಿನಲ್ಲಿ ಹೇಳುವ ಹಾಗೆ, ನಿಮ್ಮ ಮಾತು ಕೇಳುತ್ತ, ಭೂ ಅಂಚಿನವರೆಗೂ ಹಾಗೆ ಸುಮ್ಮನೆ ಹೆಜ್ಜೆ ಹಾಕುತ್ತ, ಕಿವಿಯಾಗಿ ನಡೆಯಬೇಕೆನಿಸುತ್ತದೆ. ಭಾವ ಸ್ಪರ್ಶನೀಡಿದ್ದು ಮನಕ್ಕೆ,……ದಿನವೂ ಅನುದಿನದ ಬಳಲಿಕೆಯಲ್ಲಿ ನನಗೆ ಅಷ್ಟು ಸಮಯಾವಕಾಶ ಸಿಗದು. ಹೀಗಾಗಿ ನಮ್ಮ ಓದು ಪ್ರಾರಂಭವಾಗುವುದು, ಸರಿರಾತ್ರಿಯಲ್ಲಿ. ಸಾಹಿತ್ಯ ಜಗತ್ತಿನಲ್ಲಿ, ಆಪ್ತವಾದದ್ದನ್ನು ನನಗೆ ಓದಲು ಹುಡುಕಿ ಹೆಕ್ಕಿ ಕೊಡುವವಳು ನನ್ನ ಮನೆಯಾಕೆ. ಆದರೆ ಇಂದು ಅದನ್ನು ನಾನು ಅವಳಿಗೆ, ನನ್ನ ಮಗಳಿಗೆ ಕರೆದು ಓದಿಸಿದೆ, ಅವರಿಗೆ ಏನೋ ಕೊಡುಗೆ ನೀಡಿದ ಖುಷಿಯಾಯಿತು.ಇದೇ ಬರಹದ ಆಪ್ತತೆಯಲ್ಲವೇ? ಪ್ರೀತಿಯಿಂದ……
A warm handshake to you Sandhya. 🙂
ಒಂದು ಸ್ಪರ್ಶ .. ಒಂದೇ ಒಂದು ಸ್ಪರ್ಶ… ಎಲ್ಲ ಮಾತುಗಳನ್ನು ಮೌನದ ಭಾವಗಳನ್ನು ಅರ್ಥೈಸಬಲ್ಲದಲ್ಲವಾ …:)
ಚಂದದ ಲೇಖನ
ಆದರೆ ಇಲ್ಲಿ ಹೆಣ್ಣಿನ ಚಿತ್ರ ಮಾತ್ರ ಯಾಕೆ? ಇದು ಒಂದು ಗಂಡಿನ ಮನಸ್ಸಿನ ಮಾತೂ ಆಗಿರಬಹುದು ಅಲ್ಲವೇ?
ಹೌದು.. ನೀವು ಹೇಳಿದ್ದು ಸರಿ. ಚಂದದ ಬರಹ.
Sabdhyaa… entha novannoo marsuva shakti ide ‘sparsha’kke…
Nimma lekhana nanna oLgannu Sparshiside…
balaliruva managalig tayiya sparsha nimma ee lekhana. Idannu vodu “munnabhai-I_+ nenapayitu.
“ಹೆಣ್ಣಾಗಲೀ, ಗಂಡಾಗಲೀ, ಮಧ್ಯವಯಸ್ಸಾಗಲೀ, ಇಳಿವಯಸ್ಸಾಗಲೀ ಬೆಚ್ಚನೆಯ ಸ್ಪರ್ಶ ಜೀವದಾಯಿನಿಯೇ” ಹೌದು.
ವರ್ಷಗಳ ಹಿಂದೆ ನಾನು ಸಾವು ಬದುಕಿನ ನಡುವೆ ಹೋರಾಡುತ್ತ ಮಲಗಿದ್ದಾಗ ಅಲ್ಲಿ ರಾತ್ರಿ ನನ್ನನ್ನು ನೋಡಿಕೊಳ್ಳಲು ಸರದಿಯಲ್ಲಿ ಬರುತ್ತಿದ್ದ ಗೆಳೆಯರು ಅವರ ಉದ್ಯೋಗದ ಅನುಕೂಲತೆಗಳಿಗೆ ಅನುಗುಣವಾಗಿ ಮತ್ತು ನನಗೆ ಕಿಂಚಿತ್ತೂ ತೊಂದರೆ ಆಗದಂತೆ ಪಾಳಿ ಬದಲಾಯಿಸಿಕೊಂಡು ಇರುತ್ತಿದ್ದರು. ಎಷ್ಟೋ ಬಾರಿ ನಂಗೆ ಮಾತೇ ಆಡಲು ಆಗ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ನನ್ನ ಪಕ್ಕದಲ್ಲಿ ಸ್ಟೂಲ್ ಹಾಕಿ ಕುಳಿತು ಸುಮ್ಮನೇ ಕೈಯಲ್ಲಿ ಕೈಯಿಟ್ಟು ಅವರು ಕೊಡುತ್ತಿದ್ದ ಆಸರೆ, ಬೆಚ್ಚನೆಯ ಭಾವ ಮರಳಿ ಬದುಕಿಗೆ ಬರುವತ್ತ ನಂಗೆ ಬೆಳಕಾಯಿತು… Thanks Sandhya… ಅಷ್ಟೂ ಜೀವಗಳಿಗಿವತ್ತು ಮತ್ತೆ ಫೋನ್ ಮಾಡಿದೆ….
bahaLa manamuttuva baraha.
ಸ್ಥಿತ ಪ್ರಜ್ಞ ಮನಸ್ಸು ತೀರಾ ಬೌದ್ಧಿಕವಾಗಿ, ಯಾವ ಅವಲ೦ಬನೆಯೂ ಬೇಡ ಅನ್ನುವಾಗೆಲ್ಲ ನಾವು ಗಟ್ಟಿಗರಾಗುತ್ತೇವೆ ಅನ್ನುವ ಭಯ ಅಥವ ಸತ್ಯ ಮನಸಿಗೆ ಆವರಿಸತ್ತೆ.
ಅಸಲು ನಿಜಾ೦ಶ ಅ೦ದರೆ ಗಾಢ ದುಗುಡದ ಸಮಯದಲ್ಲಿ ಅಥವ ಮನಸ್ಸು ನೊ೦ದು ತೊಪ್ಪೆಯಾದಾಗ ಕ೦ಡಿತವಾಗಿಯೂ ಒ೦ದು ಆಸರೆ ಅನಿವಾರ್ಯವಾಗಿರತ್ತೆ.
ನೀವೆ ಬರೆದ ಪದ್ಯದ ಸಾಲುಗಳು ನನಗೆ ನೆನಪಿದೆ,
“ನಾನೆಂದೂ ಕಣ್ಣೀರಿಟ್ಟಿಲ್ಲ’
ಎಂದು ಬೀಗುವಾಗ,
ಕರಗಿ ಕಣ್ಣಿರಾಗಬಲ್ಲವರ
ಕಣ್ಣಿಗೆ
ನೀವೆಷ್ಟು ಬಂಜರಾಗಿ
ಕಾಣಬಹುದೆಂದು
ಯೋಚಿಸಿದ್ದೀರಾ?” ಎ೦ಬ ಈ ಸಾಲುಗಳು ಅಲ್ಲಿ ಬಹಳವೇ ಸೂಕ್ತ.
ಮನಸ್ಸು ನೊ೦ದುಕೊ೦ಡಾಗ ಸಿಗುವ ಸಣ್ಣ ಪುಟ್ಟ ಸಾ೦ತ್ವಾನಗಳು ಬಹಳ ಹಿತ ಕೊಡುತ್ತದೆ. ನನ್ನ ಬದುಕಿನಲ್ಲೂ ಅ೦ತಹ ಬಹಳ ಅನುಭವಗಳು ಸ೦ದಿವೆ. ಒ೦ದೊಮ್ಮೆ ಎದುರಿಗಿನ ಸಾ೦ತ್ವಾನಗಳು ಬರಿ ಟೊಳ್ಳಾಗಿದ್ದರೂ ಕ್ಷಣಿಕವಾಗಿ ಅದು ಮುದವೇ.
ನಿಜಕ್ಕೂ ಆ ಆಸರೆಯ ಕೈಗಳಿಗಾಗಿ, ಅದರ ಪ್ರೀತಿಯ ಹೊನಲಿಗೆ ಜಿಹ್ವೆ ಚಾಚುತ್ತಾ ಕಾಯುವುದು ಅಪ್ಯಾಯಮಾನ.
ನಿಮ್ಮ ಬರಹ ಬಹಳ ಅ೦ದರೆ ಬಹಳ ಹಿಡಿಸಿತು
ee touchali EnO ide 🙂
ತುಂಬಾ ಲವಲವಿಕೆಯ ಮುದ್ದಾದ ಬರಹ. ಸ್ಪರ್ಶದ ಮಾಂತ್ರಿಕತೆ ತಾರಕಕ್ಕೆರುವದು ಮನಸ್ಸು ಖಿನ್ನವಾದಾಗ ಎನಿಸುತ್ತದೆ ನನಗೆ. ಪ್ರಫುಲ್ಲವಾದಾಗಲೂ ಅಷ್ಟೇ ಅಪ್ಯಾಯಮಾನವಾಗಿ ಇರಬಹುದೋ ಏನೋ ಕೆಲವೊಂದು ಸಂಧರ್ಭದಲ್ಲಿ. ಯಾಕೋ ಏನೋ ನಾಶಿರುದ್ದಿನನ ‘ಸ್ಪರ್ಶ’ ಚಿತ್ರ ನೆನಪಾಯಿತು. ನಮ್ಮನ್ನು ‘ಸ್ಪರ್ಶ’ ಮಾಡುವವರಲ್ಲಿ ನಮಗೆ ಪೂಜ್ಯ ಭಾವನೆ ಇದ್ದಾಗ ಮಾತ್ರ ಇದು ಮಾಂತ್ರಿಕವಾಗಬಹುದೋ ಏನೋ, ಇಲ್ಲಾದರೆ ಯಾಂತ್ರಿಕ ವಾಗುವ ಸಾಧ್ಯತೆಗಳಿವೆ.
-ಅನಿಲ ತಾಳಿಕೋಟಿ
Ha, eshtu aaptavaagi mana muttvante barediddiri. Chandada baraha.
lovely write up sandhya
congrats
ಬದುಕಿನ ಎಲ್ಲ ಘಟ್ಟಗಳಲ್ಲಿ,ಎಲ್ಲ ಹಂತಗಳಲ್ಲಿ ಮತ್ತು ಎಲ್ಲ ಸಂದರ್ಭಗಳಲ್ಲಿ ಸ್ಪರ್ಶ ಅಮೃತವರ್ಷಿಣಿ……
nija tumbaa aapta baraha…..hrudayavannu meetiddiri sandhya..!!!deepavaLiya haardika shubhashyagaLu..ee mulaka arivina haNte hacchuttiruva avadhi baLgakkuu beLkina shubhaashyagaLu…!!!!!!!!!!!!!!!!!!!!!
“ಆದರೆ ಇಲ್ಲಿ ಹೆಣ್ಣಿನ ಚಿತ್ರ ಮಾತ್ರ ಯಾಕೆ? ಇದು ಒಂದು ಗಂಡಿನ ಮನಸ್ಸಿನ ಮಾತೂ ಆಗಿರಬಹುದು ಅಲ್ಲವೇ? ಹೆಣ್ಣಾಗಲೀ, ಗಂಡಾಗಲೀ, ಮಧ್ಯವಯಸ್ಸಾಗಲೀ, ಇಳಿವಯಸ್ಸಾಗಲೀ ಬೆಚ್ಚನೆಯ ಸ್ಪರ್ಶ ಜೀವದಾಯಿನಿಯೇ ಅಲ್ಲವೇ?” I agree…
ಮಾತು ಬಾರದ ಮೌನಿಯಾಗಿರಬೇಕು ಅನ್ನಿಸುತ್ತೆ,ಮನಸ್ಸಿಗೆ ಬೇಕಿರುವುದು ಸುಂದರ ಸ್ಪರ್ಶ.
tayiya , atmiyara,maguvina,makkala, sparsha annuva padave ondu practical anubhava. adkkae bhavane tumbi barediruvara baraha thumba bhavapurnavagide
nanna amma tanna antima dinagalannu enisuttiddaga nanna aliya sudhir pakkadalli kulitu avala hastvannu hididukolluttiddaru.preetiya sparshdinda avalu nidde madutiddalu sandhya avara baraha a sandhrbha nenapige bantu
ನಾ ಮೌನಿ 🙁
ಮನಸ್ಸಿಗೆ ಭಾಳಾ ಹತ್ತಿರವಾಯಿತು ಅಷ್ಟೇ..
medam nimage amma prashathi banidide
ನೀವು ಯಾವಾಗಲೂ ನನ್ನ ಮನಸ್ಸಿನ ಭಾವನೆಗಳನ್ನು ಕದೀತೀರಿ! 🙂 ಬಹಳ ಆಪ್ತ ಬರಹ. ಕೈ ಕುಲುಕುವುದು, ಅಪ್ಪುಗೆಯೋ ಇವೆಲ್ಲವೂ ದೇಹದ ಭಾಷೆಯಷ್ಟೇ. ಮಾತುಗಳಿಗಿಂತ ಸಂಬಂಧವನ್ನು ಬಿಗಿ ಮಾಡುವ ಕ್ರಿಯೆಯಷ್ಟೇ. 🙂