
ತುಂಬಾ ಹಿಂದೆ ಒಂದು ಕಥೆ ಕೇಳಿದ್ದೆ, ಕಥೆ ಅಂದ್ರೆ ಕಥೆ, ತಮಾಶೆ ಅಂದ್ರೆ ತಮಾಶೆ. ಒಂದ್ಸಲ ಅಮರ್, ಅಕ್ಬರ್, ಆಂಥೋನಿ ಹಡಗಿನಲ್ಲಿ ಹೋಗ್ತಾ ಇದ್ರಂತೆ. ಇದ್ದಕ್ಕಿದ್ದಂತೆ ನದಿಯಲ್ಲಿ ಪ್ರವಾಹ ಬಂತಂತೆ. ಅಕ್ಬರ್ ತನ್ನ ದೇವರನ್ನು ಪ್ರಾರ್ಥನೆ ಮಾಡಿದನಂತೆ, ದೇವರು ಬಂದು ಅವನನ್ನು ಕಾಪಾಡಿದನಂತೆ, ಆಂಥೋನಿ ಕೂಗಿದನಂತೆ, ಅವನ ದೇವರು ಸಹ ಬಂದು ಅವನನ್ನು ಕಾಪಾಡಿದನಂತೆ, ಅಮರ್ ಕರೆದೇ ಕರೆದನಂತೆ, ಕರೆದೇ ಕರೆದನಂತೆ, ಯಾರೂ ಬರಲಿಲ್ಲವಂತೆ. ಅವನು ಸತ್ತು ಸ್ವರ್ಗಕ್ಕೆ ಹೋದ ಮೇಲೆ ಎದುರಾದ ಮೊದಲ ದೇವರನ್ನು ಕೇಳಿದನಂತೆ, ’ಅವರಿಬ್ಬರೂ ಕೂಗಿದಾಗ ಅವರ ದೇವರು ಬಂದು ಕಾಪಾಡಿದರು, ನನಗೆ ಇಷ್ಟು ಜನ ದೇವರಿದ್ದಾರೆ, ಎಷ್ಟು ಪೂಜೆ ಮಾಡಿದ್ದೀನಿ, ಆದರೆ ಒಬ್ಬರೂ ಬರಲಿಲ್ಲ’ ಅಂತ. ಆಗ ಆ ದೇವರು ಹೇಳಿದನಂತೆ, ’ಇಲ್ಲಪ್ಪ ನೀನು ಕರೆದಾಗ ಇಷ್ಟು ಜನರಲ್ಲಿ ನೀನು ಯಾರನ್ನ ಕರೀತಿದೀಯ ಅಂತಾನೆ ಗೊತ್ತಾಗಲಿಲ್ಲ, ಅವನು ಹೋಗ್ತಾನೆ ಅಂತ ಇವನು, ಇವನು ಹೋಗ್ತಾನೆ ಅಂತ ಅವನು ನೋಡೋಷ್ಟರಲ್ಲಿ ನೀನು ಮುಳುಗಿ ಬಿಟ್ಟಿದ್ದೆ’ ಅಂತ. ಮೊದಲ ಸಲ ಕೇಳಿದಾಗ ನಗು ಬಂದಿತ್ತು, ಆದರೆ ಈ ಕಥೆಯ ಇನ್ನೊಂದು ಆಯಾಮ ನನಗೆ ಅರ್ಥ ಆಗಿದ್ದು ’ಪರ್ವ’ ಓದಿದಾಗ…
ಮಹಾಭಾರತ ಯುದ್ಧ ಮುಗಿದಿದೆ, ಆದರೆ ಕೊನೆಯ ಘಟ್ಟದಲ್ಲಿ ಅಶ್ವತ್ಥಾಮನಿಂದ ಉಪಪಾಂಡವರ ಹತ್ಯೆ ನಡೆದು ಹೋಗಿದೆ. ದ್ರೌಪದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಪಾಂಡವರು ಕೈ ಕೈ ಹಿಸುಕಿಕೊಳ್ಳುತ್ತಾ ಸುತ್ತಲೂ ನಿಂತು ನೋಡುತ್ತಿದ್ದಾರೆ. ಸಮಾಧಾನ ಪಡಿಸಿದಷ್ಟೂ ಸಮಾಧಾನವಾಗದೆ ಅಗ್ನಿಪುತ್ರಿ ಸಿಡಿಯುತ್ತಾಳೆ. ಅವಳ ನೋವಿನ ತೂಕವೇ ಬೇರೆ, ಅದರ ಕಾರಣಗಳೇ ಬೇರೆ. ಅದು ಕೇವಲ ಮಕ್ಕಳನ್ನು ಕಳೆದುಕೊಂಡ ನೋವಲ್ಲ. ತನ್ನ ಅಷ್ಟು ವರ್ಷಗಳ ದಾಂಪತ್ಯ ವಿಫಲವಾದ ನೋವು, ಅಭಿಮನ್ಯು ಸತ್ತಾಗ ಅರ್ಜುನ ಸುಭದ್ರೆಯ ಜೊತೆಜೊತೆಯಲ್ಲೇ ರೋಧಿಸಿರುತ್ತಾನೆ, ಘಟೋತ್ಕಜ ಸತ್ತಾಗ ಭೀಮ ಮನಸ್ಸು, ದೇಹ, ಆತ್ಮ ಎಲ್ಲವೂ ಏಕೀಭವಗೊಂಡಂತೆ ಅತ್ತಿರುತ್ತಾನೆ, ಆದರೆ ಈಗ ಉಪಪಾಂಡವರು ಸತ್ತಾಗ ದ್ರೌಪದಿ ಏಕಾಂಗಿಯಾಗಿ ಅಳುತ್ತಿರುತ್ತಾಳೆ. ಅವರು ಕೇವಲ ದ್ರೌಪದಿಯ ಮಕ್ಕಳು ಮಾತ್ರ ಆಗಿಬಿಟ್ಟಿರುತ್ತಾರೆ, ಅವರು ಯಾವ ಪಾಂಡವನಿಗೂ ’ತನ್ನವರು’ ಅನ್ನಿಸಿರುವುದಿಲ್ಲ… ದ್ರೌಪದಿಯ ದುರಂತ ಇರುವುದು ಇಲ್ಲಿ. ತನ್ನ ಬದುಕನ್ನೇ ಐದು ಭಾಗ ಮಾಡಿಕೊಂಡ ಪಾಂಚಾಲಿ ಯಾರಿಗೂ ತನ್ನವಳು ಅನ್ನಿಸಿರುವುದೇ ಇಲ್ಲ. ಹೌದು ಎಲ್ಲರಿಗೂ ಸಲ್ಲುವವರು ಯಾರೊಬ್ಬರಿಗೂ ಸೇರಿದವರಾಗಿರುವುದಿಲ್ಲ.
ಕೆಲವರು ಹಾಗೆ, ಎಲ್ಲರನ್ನು ತಮ್ಮವರನ್ನಾಗಿಸುತ್ತಾರೆ, ಎಲ್ಲರಿಗೂ ಪ್ರಾಧಾನ್ಯತೆ ಕೊಡುತ್ತಾ ಹೋಗುತ್ತಾರೆ, ಅವರಿಗೆ ಯಾರೊಬ್ಬರೂ ಪ್ರಯಾರಿಟಿ ಅಲ್ಲ, ಎಲ್ಲವೂ ಆಗಿಂದಾಗ್ಗೆ, ಕಾಲ ಕಾಲಕ್ಕೆ ಸ್ಪಂದಿಸುವ ಸಂಬಂಧಗಳು. ಎಲ್ಲರಿಗೂ ತಾವು ಸಲ್ಲುತ್ತೇವೆ ಎಂದುಕೊಳ್ಳುತ್ತಾ ಇರುತ್ತಾರೆ. ಆದರೆ ಹಾಗೆ ಎಲ್ಲರನ್ನೂ ಅಕಾಮಡೇಟ್ ಮಾಡುತ್ತಾ, ಮಾಡುತ್ತಾ ಯಾರೊಬ್ಬರಿಗೂ ಇವರು ಪ್ರಯಾರಿಟಿ ಆಗಿರುವುದೇ ಇಲ್ಲ. ಮೊದಮೊದಲು ಅದು ಒಂದು ಕೊರತೆ ಅಂತ ಅನ್ನಿಸುವುದೇ ಇಲ್ಲ, ಸುತ್ತ ಮುತ್ತ ಜನರು ಇರುವಾಗ, ಉಘೇ ಉಘೇ ಅನ್ನುತ್ತಿರುವಾಗ ಎದೆಯ ದನಿಯೂ ಕೇಳಿಸುವುದಿಲ್ಲ. ಜಾತ್ರೆ ಆದರೆ ಬಯಲಿಗೆ ಎಲ್ಲರೂ ಬರುತ್ತಾರೆ, ಅಲ್ಲಿ ಎಲ್ಲರೂ ಸಂಭ್ರಮಿಸುತ್ತಾರೆ, ನಗುತ್ತಾರೆ, ನಲಿಯುತ್ತಾರೆ, ಆದರೆ ಕತ್ತಲಾದ ಮೇಲೆ ಮಾತ್ರ ಮನೆಗೇ ಹಿಂದಿರುಗುತ್ತಾರೆ. ಬಯಲಿನಲ್ಲಿ ಎಲ್ಲರಿಗೂ ಜಾಗ ಇರುತ್ತದೆ, ಆದರೆ ಆ ಎಲ್ಲರಿಗೂ ಅವರವರದೇ ಆದ ಜಾಗ ಇರುತ್ತದೆ ಮತ್ತು ಬದುಕು ಇರುತ್ತದೆ. ಬಯಲಿಗೆ ಅದು ಅರ್ಥವಾಗುವುದೇ ಇಲ್ಲ.
ಈ ಬಯಲಿನ ವಾಸ್ತವ ನನಗೆ ನಿನ್ನೆ ಮತ್ತೆ ಭಾಸವಾಯಿತು.
ರಾಮ್ ಗೋಪಾಲ್ ವರ್ಮ ಬರೆದ ’ನನ್ನಿಷ್ಟ’ ಪುಸ್ತಕವನ್ನು ಅತ್ಯಂತ ಸಮರ್ಥವಾಗಿ ಸೃಜನ್ ಕನ್ನಡಕ್ಕೆ ತಂದಿದ್ದಾರೆ. ಅದನ್ನು ನಾನು ಓದಿದ್ದೆ. ಆಮೇಲೆ ಅವರು ವರ್ಮನ ಬಗೆಗಿನ ಮತ್ತೊಂದು ಪುಸ್ತಕ ’ವೋಡ್ಕಾ ವಿತ್ ವರ್ಮಾ’ ಕನ್ನಡಕ್ಕೆ ತರುತ್ತಿದ್ದಾರೆ ಎಂದು ತಿಳಿದ ತಕ್ಷಣ, ಸ್ವತಃ ನಾನೆ ಪ್ರಕಾಶಕಿಯೇನೋ ಎನ್ನುವ ಹಾಗೆ ಅವರ ಬೆನ್ನಿಗೆ ಬಿದ್ದಿದ್ದೆ! ಆಗಿಂದಾಗ್ಗೆ ನಿಯಮಿತವಾಗಿ, ವ್ರತ ತಪ್ಪದಂತೆ ’ಪುಸ್ತಕ ಆಯ್ತಾ’ ಅಂತ ಕೇಳೇ ಕೇಳ್ತಾ ಇದ್ದೆ! ಮೊನ್ನೆ ಪುಸ್ತಕ ನನ್ನ ಕೈ ಸೇರಿದ್ದೇ, ಅದೇ ದಿನ ಓದಲು ಪ್ರಾರಂಭಿಸಿದ್ದೆ.
’ನನ್ನಿಷ್ಟ’ ರಾಮಗೋಪಾಲ್ ವರ್ಮ ಸ್ವತಃ ತಾನೇ ಬರೆದದ್ದು, ಆದರೆ ಇದನ್ನು ಬರೆದಿರುವುದು ತೆಲುಗಿನ ಚಿತ್ರವಿಮರ್ಶಕ, ಗೀತ ಸಾಹಿತಿ ಸಿರಾಶ್ರೀ. ಎರಡಕ್ಕೂ ಇರುವ ಒಂದೇ ಕೊಂಡಿ ಸೃಜನ್ ಅವರ ಒಳ್ಳೆಯ ಅನುವಾದ. ಪುಸ್ತಕ ಓದುತ್ತಾ ಓದುತ್ತಾ ಯಾಕೋ ಆರ್ ಜಿ ವಿ ನನಗೆ ’ಊರ ನಡುವಣ ಬಯಲಿ’ನ ಹಾಗೇ ಕಾಣಿಸಿದ.
ಪುಸ್ತಕದಲಿ ಸಿರಾಶ್ರೀ ವರ್ಮನನ್ನು ಮೂರು ಮಜಲಿನಲ್ಲಿ ನೋಡುತ್ತಾರೆ.
೧. ರೀಲ್ ವರ್ಮ
೨. ರಿಯಲ್ ವರ್ಮ ಮತ್ತು
೩. ಮೀಡಿಯಾ ವರ್ಮ.
ವರ್ಮನನ್ನು ಆತನ ಚಿತ್ರಗಳ ಮೂಲಕ, ಸಂಬಂಧಗಳ ಮೂಲಕ ಮತ್ತು ಮೀಡಿಯಾ ಕಣ್ಣುಗಳ ಮೂಲಕ ನೋಡುವ ಪ್ರಯತ್ನ ಇದು. ಆದರೆ ಪುಸ್ತಕ ಓದುತ್ತಾ ಓದುತ್ತಾ ನನಗೆ ವರ್ಮನನ್ನು ಪುಸ್ತಕದ ವ್ಯಕ್ತಿಗಳು ಬೇರೆಯದೇ ಮೂರು ನೆಲೆಗಳಲ್ಲಿ ಅರ್ಥೈಸಿಕೊಂಡಿದ್ದಾರೆ ಅನ್ನಿಸಿತು.
ಆತನ ಮಿತ್ರ ವೃಂದ, ಆತನ ’ಕಂಪನಿ’ಯ ತಂತ್ರಜ್ಞರಿಗೆ, ಪುರಿ, ಕೃಷ್ಣವಂಶಿಯಂತಹ ಆರಾಧಕರಿಗೆ ಆತ ದೇವರಾಗಿ ಕಾಣುತ್ತಾನೆ. ಅಷ್ಟೇ ಅಲ್ಲ, ಸ್ವತಃ ಲೇಖಕ ಸಿರಾಶ್ರೀ ಸಹ ವರ್ಮನ ಆ ಮೋಡಿಗೆ ಸಿಲುಕಿದ್ದಾರೆ ಅಂತ ಗೊತ್ತಾಗಿಬಿಡುತ್ತದೆ. ಅವರು ಆಗಾಗ ವರ್ಮನನ್ನು ಲೆಕ್ಕಕ್ಕೆ ಇಡದಂತೆ ಮಾತನಾಡಿದರೂ ಅದರ ಹಿಂದಿನ ಉದ್ದೇಶ ವರ್ಮ ತನ್ನನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದೇ ಆಗಿರುತ್ತದೆ.

ಮತ್ತೆ ಕೆಲವರಿಗೆ ಆತ ರಾಕ್ಷಸ. ಆತ ಸಹಾಯಕ ನಿರ್ದೇಶಕನಾಗಿ ದುಡಿದ ರೆಡ್ಡಿ ತರಣಿ ರಾವ್, ಆತನ ಸೋದರ ಮಾವ ಮತ್ತಿತರರಿಗೆ ಆತ ರಾಕ್ಷಸ. ರೆಡ್ಡಿ ತರಣಿ ರಾವ್ ಅಂತೂ ಆತನ ಬಗ್ಗೆ ’ಒಬ್ಬ ಅದ್ಭುತ ತಂತ್ರಜ್ಞ, ಆದರೆ ಮನುಷ್ಯನಾಗಿ ಶೇಕಡ ೧೦೦% ಫೇಲ್ಯೂರ್, ಯಾವ ಮನುಷ್ಯ ಸಂಬಂಧಕ್ಕೂ ಅವನು ನಿಷ್ಠನಾಗಿರಲಾರ. ಭಾವನೆ ಮತ್ತು ಸಂಬಂಧಗಳ ವಿಷಯಕ್ಕೆ ಬಂದರೆ ಅವನೊಬ್ಬ ಹ್ಯಾಂಡೀಕ್ಯಾಪ್ಡ್. ಅವನಲ್ಲಿನ ತಂತ್ರಜ್ಞನನ್ನು ಅವನ ಅಹಂ ನುಂಗುತ್ತಿದೆ.’ ಎಂದೇ ಹೇಳುತ್ತಾರೆ. ಅವನ ಸೋದರ ಮಾವ ಸಹ ಅಷ್ಟೇ, ಆತನ ಬಗ್ಗೆ ಅದೇ ದಾಟಿಯಲ್ಲಿ ಮಾತನಾಡುತ್ತಾರೆ. ಅವನ ಅಮ್ಮ ಮತ್ತು ತಂಗಿಗೆ ಸಹ ನಾಯಕನಿಗಿಂತ, ಖಳನಾಯಕ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಾನೆ. ನಿರ್ದೇಶಕ ಪುರಿ ಜಗನ್ನಾಥ್ ಹೇಳುವ ಹಾಗೆ ಆತನ ಸಂಪರ್ಕಕ್ಕೆ ಬಂದವರನ್ನು ಆತ ಮೂರು ವಿಧದಲ್ಲಿ ಪ್ರಭಾವಿಸುತ್ತಾನೆ. ’Educates, Thrills or Disturbs’. ಆತನನ್ನು ದ್ವೇಷಿಸಬೇಕು ಅಥವಾ ಪ್ರೀತಿಸಬೇಕು, ನಿರ್ಲಿಪ್ತವಾಗಿ ಉಳಿಯಲು ಸಾಧ್ಯವೇ ಇಲ್ಲ.
ಆದರೆ ಇಲ್ಲಿ ಅತ್ಯಂತ ಕುತೂಹಲಕಾರಿ ವಿಷಯವೆಂದರೆ ಆತ ಮನುಷ್ಯನಾಗಿ ಕಂಡಿರುವುದು ಕೇವಲ ಇಬ್ಬರಿಗೆ, ಆತನಿಂದ ಎಲ್ಲವನ್ನೂ ನಿರೀಕ್ಷೆ ಮಾಡುವ ಅಧಿಕಾರ ಇದ್ದ ಇಬ್ಬರಿಗೆ. ಆತನ ಹೆಂಡತಿ ಮತ್ತು ಮಗಳು. ಪ್ರೇಮಿಸಿ ಮದುವೆಯಾದ ಹೆಂಡತಿ ರತ್ನ, ಪ್ರೇಮಿಯಾಗಿ ಬಂದ ರಾಮ್ ಗೋಪಾಲ್ ಗಂಡನಾಗಿ ಬದಲಾದ ಮೇಲೆ, ಚಿತ್ರರಂಗ ಆತನನ್ನು ಬದಲಾಯಿಸಿದ ಮೇಲೆ ಜೊತೆಗೆ ಬಾಳಲಾರದೆ ದೂರಾಗುತ್ತಾಳೆ. ಆದರೆ ಅದು ಕೇವಲ ತನ್ನೊಬ್ಬಳ ನಿರ್ಧಾರ ಆಗಿರಲಿಲ್ಲ ಅಂತ ಹೇಳಿದರೂ ಎಲ್ಲೂ ಆತನ ಮೇಲೆ ತಪ್ಪು ಹೊರಿಸುವುದಿಲ್ಲ. ಹಾಗೆ ಬೇರಾದ ನಂತರ ತನಗಾಗಿ ಎಂದೂ ಆರ್ಥಿಕ ಸಹಾಯವನ್ನಾಪೇಕ್ಷಿಸುವುದೂ ಇಲ್ಲ. ತಮಾಷೆ ಅಂದರೆ ಕಾನೂನು ಬದ್ಧವಾಗಿ ದೂರಾದ ನಂತರ ಮತ್ತೆ ತಮ್ಮ ಸ್ನೇಹವನ್ನು ಮುಂದುವರಿಸುತ್ತಾರೆ.
ಹೆಂಡತಿ ಅವನನ್ನು ವರ್ಣಿಸಿರುವ ರೀತಿ ಹೀಗೆ, ’ಅವರಲ್ಲಿ ತುಂಬಾ ಬುದ್ಧಿವಂತ ಮಗು, ತುಂಬಾ ಅಮಾಯಕನಾದ ಬೆಳೆದ ಮಗು ಜೊತೆಯಾಗಿದ್ದಾರೆ’. ಇದನ್ನು ಓದಿದ ಮೇಲೆ ಅನ್ನಿಸಿದ್ದು ಆತನನ್ನು ಇನ್ನು ಬೇರೆ ರೀತಿ ವರ್ಣಿಸುವುದು ಸಾಧ್ಯವೇ ಇಲ್ಲ ಅಂತ. ಮಗಳು ಅಪ್ಪನನ್ನು ಎಂದೂ ಅಪ್ಪನನ್ನಾಗಿ ನೋಡಲಾರದೆ, ಸ್ನೇಹಿತನನ್ನಾಗಿ ಮಾತ್ರ ಒಪ್ಪಿಕೊಳ್ಳುತ್ತಾಳೆ. ಆತನ ಜೀವನ ಅವಳಿಗೆ ಅನುಕರಣೀಯವಲ್ಲ, ಎಷ್ಟೋ ಜನರನ್ನು ಪ್ರೇರೇಪಿಸಿದ ವರ್ಮನ ’ರಾಮೂಯಿಸಂ’ ಅವಳಿಗೆ ಏನೂ ಅಲ್ಲ. ಆಕೆಯ ’ಯಾರೂ ಎದುರು ನೋಡದ ಖಾಲಿ ಅಪಾರ್ಟ್ ಮೆಂಟಿಗೆ ಮರಳುವ’ ಅಪ್ಪ, ಒಂದು ಮಿತಿಯಾಚೆಗೆ ಯಾರನ್ನೂ ಪ್ರೀತಿಸಲಾರ. ಆದ್ದರಿಂದ ಆಕೆಯೇ ಹೇಳುವ ಹಾಗೆ ಅಪ್ಪನೊಂದಿಗೆ ಯಾವುದೇ ಸೀರಿಯಸ್ ರಿಲೇಶನ್ ಸಾಧ್ಯವಿಲ್ಲ’. ಅಪ್ಪನನ್ನು ’ರಾಮೂ ಅಪ್ಪ’ ಎಂದು ಕರೆಯುವ ಅವಳ ಪಾಲಿಗೆ ಅಪ್ಪ ’ದಿ ಮ್ಯಾನ್ – ಕಿಡ್, ದಿ ಮೇಕರ್ – ಡೆಸ್ಟ್ರಾಯರ್, ದಿ ಮೇನಿಯಾಕ್ – ಜೀನಿಯಸ್’.
ಇಲ್ಲಿ ಇನ್ನೊಂದು ಸ್ವಾರಸ್ಯ ಇದೆ. ಸಿರಾಶ್ರೀ ತನ್ನ ಪುಸ್ತಕದ ಅಧ್ಯಾಯಗಳನ್ನು ’ಪೆಗ್’ಗಳಾಗಿ ಗುರುತಿಸಿದ್ದಾರೆ, ’ಪೆಗ್ ೧, ಪೆಗ್ ೨…’ ಈ ರೀತಿ. ಆದರೆ ವರ್ಮಾ ಹೆಂಡತಿ ಮತ್ತು ಮಗಳ ಜೊತೆಗಿನ ಸಂದರ್ಶನವನ್ನು ಮಾತ್ರ ಕಾಫಿ ಕಪ್ಪಿಗೆ ಹೋಲಿಸಿ, ಕಪ್ ೧, ಕಪ್ ೨ ಎಂದು ಕರೆಯುತ್ತಾರೆ. ಬಹುಶಃ ವರ್ಮನ ಮತ್ತಿನಿಂದ ತಪ್ಪಿಸಿಕೊಂಡವರು ಅವರಿಬ್ಬರೇ ಎನ್ನುವುದಕ್ಕೆ ಇರಬಹುದಾ?!
ಇರಲಿ, ಮತ್ತೆ ಮೊದಲಿಗೇ ಬರುವುದಾದರೆ ’ವೋಡ್ಕಾ ವಿತ್ ವರ್ಮಾ’ ಓದಿದಾಗ ನನಗೆ ಯಾಕೋ ಈತ ಎಲ್ಲರಿಗೂ ಸಲ್ಲುವವ ಆದರೆ ಯಾರಿಗೂ ಸೇರದವನಾಗೇ ಕಂಡ. ರೆಡ್ಡಿ ತಾರಣಿರಾವ್ ಹೇಳಿದಂತೆ ಪ್ರೀತಿಸುವ ಶಕ್ತಿಯನ್ನೇ ಕೊಡದೆ ದೇವರು ಈತನಿಗೆ ಅನ್ಯಾಯ ಮಾಡಿಬಿಟ್ಟನಾ? ಎಲಾ ಸಂಬಂಧಗಳಲ್ಲೂ ಕ್ಲಾರಿಟಿ, ಹುಡುಕುತ್ತಾ ಹುಡುಕುತ್ತಾ, ಒಂದೊಂದೆ ಪದರ ಕಳಚುತ್ತಾ ಕಳಚುತ್ತಾ ಈತನ ಕೈಗಳಿಗೆ ಕೇವಲ ಅನುಭೂತಿ ಮೆತ್ತಿಕೊಂಡು ಕೈ ಖಾಲಿಯಾಗಿ ಉಳಿಯಿತಾ? ಹಿಂದಿಯಲ್ಲಿ ಒಂದು ಗಜಲ್ ಇದೆ, ‘parakh na nahi, parakh ne sey koi apna nahi hota’, (ಯಾರನ್ನೂ ಹೆಚ್ಚಾಗಿ ಪರೀಕ್ಷೆಗೆ ಒಳಪಡಿಸುತ್ತಾ ಹೋಗಬೇಡ, ವಿಶ್ಲೇಷಣೆ ಮಾಡುತ್ತಾ, ಮಾಡುತ್ತಾ ಕಡೆಗೆ ಯಾರೂ ನಮ್ಮವರಾಗಿ ಉಳಿಯುವುದಿಲ್ಲ) ಅಂತ, ಇದು ಆ ಜಾಣನಿಗೆ ಗೊತ್ತಾಗಲೇ ಇಲ್ಲವಲ್ಲ… ಅವನ ಎಲ್ಲವನ್ನೂ ವಿಚಕ್ಷಣೆಗೆ ಒಡ್ಡುವ ಆ ಚಾಣಾಕ್ಷ್ಯ ಮತಿಯೇ ಅವನಿಗೆ ಶತೃವಾಯಿತಾ? ತನ್ನ ಒಂದು ಕಂಪನಿ, ಸಾಮ್ರಾಜ್ಯ ಕಟ್ಟಿಕೊಂಡ, ಎಲ್ಲರನ್ನೂ ಬೆಳೆಸಿದ ಆತ ತನ್ನದಾಗಿ ಏನನ್ನೂ ಕಟ್ಟಿಕೊಳ್ಳಲಿಲ್ಲ.
ಬಯಲು ತನ್ನ ಕರ್ತವ್ಯ ತಾನು ಮಾಡಿದರೂ, ಮಡಿಲ ತುಂಬಾ ನಗು ಹೊತ್ತು ತಂದರೂ ಅದರ ಪಾಲಿಗೆ ದಕ್ಕುವುದು ವಿದಾಯಗಳು ಮಾತ್ರ. ಪುರಿ ತನ್ನ ಮುನ್ನುಡಿಯಲ್ಲಿ ಹೇಳುವ ಹಾಗೆ, ’ಎಲ್ಲ ಸಂಬಂಧಗಳನ್ನೂ ಮುರಿದುಕೊಂಡು ಮುಂಬೈನಲ್ಲಿ ಬದುಕುವ ರಾಮ್ ಒಬ್ಬನೇ ನನಗಿಷ್ಟ.’ ಆದರೆ ಭವಿಷ್ಯದಲ್ಲಿ ವೃದ್ಧನಾಗಿ, ಇನ್ನೊಬ್ಬರ ಮೇಲೆ ಅವಲಂಬಿತನಾಗಿ ಬದುಕುವ ರಾಮುವನ್ನು ಕಲ್ಪಿಸಿಕೊಳ್ಳುವುದು ಇಷ್ಟವಾಗುವುದೇ ಇಲ್ಲ. ಅದು ಎಲ್ಲರನ್ನೂ ತನ್ನವರೆಂದುಕೊಂಡು, ತಾನು ತನ್ನನ್ನು ಯಾರಿಗೂ ಒಪ್ಪಿಸಿಕೊಳ್ಳದ ಬಯಲಿನ ದುರಂತ.
ಎಲ್ಲಾ ತರ್ಕದಾಚೆಗೂ, ಜಗದಗಲಕ್ಕೂ ರೆಕ್ಕೆ ಇದ್ದರೂ, ಬೇರು ಮಣ್ಣಿನಲ್ಲಿರಲಿ, ಅಲ್ಲಿ ನಿಮ್ಮದೇ ಒಂದು ಜಗವಿರಲಿ.


ಸಶಕ್ತ ಬರಹ, ‘ಪರಖ್ ನಾ ನಹೀಂ, ಪರಖ್ ನೆ ಸೆ ಕೋಯೀ ಅಪನಾ ನಹೀಂ ಹೋತಾ’ ಎಲ್ಲವನ್ನೂ ಹೇಳುತ್ತದೆ, ಬದುಕಿನ ಪಾಠವನ್ನು ಒಂದೇ ಸಾಲಿನಲ್ಲಿ ಅದ್ಭುತವಾಗಿ. ‘ಎಕ್ಷೆಂಟ್ರಿಸಿಟಿ ಇಸ್ ಎ ಲಕ್ಷುರಿ ಆಫ್ ಎ ಜೀನಿಯಸ್’ ಅಂದ ಹಾಗೆ ಕೆಲ ಭೌತಿಕ ಮಾನದಂಡಗಳು ಇಂತಹವರಿಗೆ ಲಾಗೂ ಆಗುವುದಿಲ್ಲ ಅನ್ನಿಸುತ್ತೆ. ಉತ್ಕೃಷ್ಟ ಮಾತುಗಳ, ವಿಶ್ಲೇಷಣೆಯ ಬರಹ.
. ಬಯಲಿನಲ್ಲಿ ಎಲ್ಲರಿಗೂ ಜಾಗ ಇರುತ್ತದೆ, ಆದರೆ ಆ ಎಲ್ಲರಿಗೂ ಅವರವರದೇ ಆದ ಜಾಗ ಇರುತ್ತದೆ ಮತ್ತು ಬದುಕು ಇರುತ್ತದೆ. ಬಯಲಿಗೆ ಅದು ಅರ್ಥವಾಗುವುದೇ ಇಲ್ಲ.
ತನ್ನ ಬದುಕನ್ನೇ ಐದು ಭಾಗ ಮಾಡಿಕೊಂಡ ಪಾಂಚಾಲಿ ಯಾರಿಗೂ ತನ್ನವಳು ಅನ್ನಿಸಿರುವುದೇ ಇಲ್ಲ. ಹೌದು ಎಲ್ಲರಿಗೂ ಸಲ್ಲುವವರು ಯಾರೊಬ್ಬರಿಗೂ ಸೇರಿದವರಾಗಿರುವುದಿಲ್ಲ.
ಇವು ಕೆಲ ಬರೆದಿಟ್ಟುಕೊಳ್ಳಬೇಕಾದ ಮಾತುಗಳು, ಅಲ್ಲ ವಿಚಾರಗಳು!
ಒಂದು ಕಾಲಂನಲ್ಲಿ ಇಷ್ಟು ಮನಮುಟ್ಟುವಂತೆ ಬರೆಯುವವರು ವಿರಳ. ಬಯಲಿನ ವಾಸ್ತವತೆಯ ವಿವರ ಅನನ್ಯವಾಗಿದೆ. ಒಂದು ಮಿತಿಯಾಚೆಗೆ ಯಾರನ್ನೂ ಪ್ರೀತಿಸಲಾಗದ್ದಕ್ಕೆ ಎಲ್ಲರಲ್ಲೂ ಪರಫೆಕ್ಷನ ಹುಡುಕುವದು ಮುಳ್ಳಾಗುತ್ತದೆಯೋ ಏನೋ? ವಿಪರೀತ ವಿಚಕ್ಷಣೆ ವಿನಾಶಕಾರಿಯೆ? ಈ ಬರಹಗಳನ್ನು ಓದುವದು ಸುಂದರ ಕಾವ್ಯ ಆಸ್ವಾದಿಸಿದಂತೆ.
~ಅನಿಲ
Brilliant analaysis!! Superb writing. Thanks.
Very good point of analysis… ಎಲ್ಲಾ ತರ್ಕದಾಚೆಗೂ, ಜಗದಗಲಕ್ಕೂ ರೆಕ್ಕೆ ಇದ್ದರೂ, ಬೇರು ಮಣ್ಣಿನಲ್ಲಿರಲಿ, ಅಲ್ಲಿ ನಿಮ್ಮದೇ ಒಂದು ಜಗವಿರಲಿ. Yes everyone need that unconditional love and dedication.
Justttttt brilliant Sandhya
ಒಂದೇ ಲೇಖನದಲ್ಲಿ ಮೂರು ಆಯಾಮಗಳು..
ಅಮರ್, ಅಕ್ಬರ್ , ಅಂಥೋನಿಯ ಕಥೆ ಹೇಳುತ್ತಲೇ ದ್ರೌಪದಿಯ ವೇದನೆಯ ತೆರೆದಿಡುತ್ತಿರಿ… ಬಯಲಿನ ಕಥೆ ಹೇಳುತ್ತಲೇ ಬಯಲಿಗೆ ರಾಮ್ ಗೋಪಾಲ್ ವರ್ಮನೆಂಬ ಮೇಧಾವಿಯ ಸಮೀಕರಿಸಿ ಹೇಳುತ್ತಿರಿ…
-ರಾಮ್ ಗೋಪಾಲ್ ವರ್ಮ ನಿಮಗೆ ಕಾಡಿದಷ್ಟು, ನಿಮ್ಮ ಬರಹಗಳು ನಮಗೆ ಕಾಡುವಂತೆ ಮಾಡುತ್ತಿರಿ..
ಇಷ್ಟವಾಯಿತು ತುಂಬಾ..
good article madam
ಲೇಖನ ಇಷ್ಟವಾಯಿತು
so fine,,, but again an analysis ahha ahaha,,
ಉತ್ತಮ ಓದು ಹಾಗೂ ಉತ್ತಮ ಬರಹ..
ತುಂಬಾ ಚೆನ್ನಾಗಿದೆ ಲೇಖನ ಸಂಧ್ಯಾ ಅವರೇ