
ಆಗಿನ್ನೂ ’ಆಧಾರ್’ ಗಲಾಟೆ ಜೋರಿದ್ದ ಕಾಲ. ಯಾವುದೇ ದಾಖಲಾತಿಗಳನ್ನು ಮಾಡಿಸುವುದರಲ್ಲಿ, ದಾಖಲೆಗಳನ್ನು ಹುಷಾರಾಗಿಟ್ಟುಕೊಳ್ಳುವುದರಲ್ಲಿ ಪರಮ ಸೋಮಾರಿಯಾದ ನಾನು ದಿನಕ್ಕೊಂದು ಹೊಸ ಕಾರಣ ಹುಡುಕುತ್ತಾ ಅರ್ಜಿ ಸಲ್ಲಿಸುವುದನ್ನು ಮುಂದೂಡುತ್ತಾ ಇದ್ದೆ. ಕಡೆಗೊಂದು ದಿನ ನನ್ನ ಸ್ವಭಾವ ತಿಳಿದಿದ್ದ ನನ್ನ ಕಸಿನ್ ’ನಾವೆಲ್ಲಾ ಹೋಗ್ತಾ ಇದೀವಿ, ಮಾತಾಡದೆ ಎಲ್ಲಾ ದಾಖಲೆಗಳನ್ನೂ ಜೋಡಿಸಿಕೋ’ ಎಂದು ಫರ್ಮಾನ್ ಹೊರಡಿಸಿದ. ಆಗ ಜೊತೆಗಿದ್ದ ಅವನ ಸ್ನೇಹಿತ, ಅಲ್ಲಿನ ಲೋಕಲ್ ಪುಡಾರಿ, ’ನೀವು ಶುಕ್ರವಾರ ಮಧ್ಯಾಹ್ನ ೧೨ ರಿಂದ ೨ ಗಂಟೆ ಒಳಗೆ ಹೋಗಿ, ಕೆಲಸ ಬೇಗ ಆಗುತ್ತೆ, ಕ್ಯೂ ಕಡಿಮೆ ಇರುತ್ತೆ’ ಅಂದ. ನನಗೆ ಆಶ್ಚರ್ಯ, ಅದ್ಯಾಕೆ ಆ ದಿನ ಮತ್ತು ಆ ಸಮಯದಲ್ಲಿ ಜನ ಕಮ್ಮಿ ಇರ್ತಾರೆ ಅಂತ. ಅವರನ್ನು ಕೇಳಿದೆ. ’ಇಲ್ಲಮ್ಮ, ಆಧಾರ್ ಶುರು ಆದಾಗಿನಿಂದ ನೋಡ್ತಾ ಇದೀನಿ, ಮೊದಲು ಮತ್ತು ಅತಿ ಹೆಚ್ಚು ಕಾರ್ಡ್ ಮಾಡಿಸಿಕೊಳ್ಳಲು ಬರ್ತಾ ಇರುವವರು ಮುಸ್ಲಿಮರು, ಆ ಸಮಯದಲ್ಲಿ ಅವರ ಪ್ರಾರ್ಥನೆ ಇರುತ್ತೆ ಹಾಗಾಗಿ ಜನ ಕಮ್ಮಿ ಅಂದರು. ನಾನು ನಂಬಲಿಲ್ಲ, ಕಡೆಗೆ ಅದೇ ಸಮಯಕ್ಕೆ ನಾವು ಹೋದಾಗ, ಅಲ್ಲಿ ನಿಜಕ್ಕೂ ಜನ ಕಮ್ಮಿ ಇದ್ದರು ಮತ್ತು ನಮ್ಮ ಕೆಲಸ ಬೇಗ ಆಯ್ತು. ಆದರೆ ನನ್ನ ಗೊಂದಲ ಹಾಗೇ ಇತ್ತು, ಅಲ್ಲಿಗೆ ಬಂದಿದ್ದ ನನ್ನ ಗೆಳತಿ ಒಬ್ಬಳ ಬಳಿ ಇದನ್ನೇ ಚರ್ಚಿಸಿದೆ. ಅವಳು ಅದೇ ಜಾಗದಲ್ಲಿ ಒಂದು ಎನ್ ಜಿ ವೋ ಗಾಗಿ ಕೆಲಸ ಮಾಡುತ್ತಿದ್ದಳು, ಅವಳೆಂದಳು ’ನೀನು ಒಂದು ಗಮನಿಸಿದ್ದೀಯಾ, ಪ್ರತಿ ಸಲ ಭಾರತ್ – ಪಾಕಿಸ್ತಾನ್ ಮ್ಯಾಚ್ ಆದಾಗಲೂ, ಪ್ರತಿ ಸಲ ಎಲ್ಲೋ ಭಯೋತ್ಪಾದನೆಯ ಕೃತ್ಯ ನಡೆದಾಗಲೂ ಅವರು ತಮ್ಮ ದೇಶಭಕ್ತಿಯನ್ನು ಪದೇ ಪದೇ, ಪದೇ ಪದೇ ನಿರೂಪಿಸಿಕೊಳ್ಳಬೇಕಾಗುತ್ತದೆ. ಅವರದೇ ದೇಶದಲ್ಲೂ ಅವರು ವಲಸೆ ಬಂದವರ ಹಿಂಜರಿಕೆಯಲ್ಲಿ, ಅತಂತ್ರತೆಯಲ್ಲಿ ಬದುಕಬೇಕಾಗಿರುತ್ತದೆ, ಹಾಗಾಗಿ ಯಾವುದೇ ಸರ್ಕಾರಿ ದಾಖಲಾತಿಗೆ ಅವರು ಮೊದಲು ಮುಂದೆ ಬರುತ್ತಾರೆ. ಬಹುಶಃ ಅದು ಅವರ ’want to belong’ ನ ಒಂದು ಭಾಗವಾಗಿರಬಹುದು ಎಂದಳು. ನನಗೆ ನಿಸಾರರ ’ನಿನಿಮ್ಮೊಡನಿದ್ದೊ ನಿಮ್ಮಂತಾಗದೆ’ ಕವನ ನೆನಪಾಗಿತ್ತು.
ಹೌದು, ’ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ
ಹರಟಿ ಬಾಳ ತಳ್ಳುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ ನನ್ನ ನಂಬಿಕೆ ನೀಯತ್ತು ಹಕ್ಕು ಕೊನೆಗೆ
ಸಾಚಾತನವನ್ನು ಪರಚಿ, ಒತ್ತಿ ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ ನನ್ನದುರಿನಲ್ಲೇ
ತನಿಖೆ ಮಾಡುವ ಕ್ಷಣವನ್ನು ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.’ ನಿಜ ಅದು ಬಲು ಕಷ್ಟದ ಕೆಲಸ.
ಈ ಕಾಲಮಾನದ ವಿಪರ್ಯಾಸ ಎಂದರೆ ಇಂದು ಜಗತ್ತಿನ ಯಾವುದೇ ಪಂಗಡ, ಯಾವುದೇ ಧರ್ಮ, ಯಾವುದೇ ಜಾತಿ ಜಗತ್ತಿನ ಒಂದಲ್ಲ ಒಂದು ಮೂಲೆಯಲ್ಲಿ ಈ ಕವನದ ಜೊತೆ ತನ್ನನ್ನು ಸಮೀಕರಿಸಿಕೊಳ್ಳಬಹುದು. ಒಂದೇ ಸಾಲಿನಲ್ಲಿ ’ಅವರಿದ್ದಾರಲ್ಲ…..’ ಎಂದು ಮುಂದೆ ಬರುವ ವಿಶೇಷಣಗಳನ್ನೂ ಸಹಿಸಿ, ಭರಿಸಿ, ಮತ್ತೆ ಅವರೆದುರಿಗೇ ತಾವು ಅವರಿಗೆ ನಿಷ್ಠರಾಗಿದ್ದೇವೆ ಎಂದು ಸಾಬೀತು ಪಡಿಸುವುದಿದೆಯಲ್ಲಾ ಅದು ಬಲು ಕಷ್ಟದ ಕೆಲಸ. ಮೊದಲಿಗೆ, ಹೀಗೆ ಒಂದೇ ಸಾಲಿನಲ್ಲಿ ಜನರಲೈಸೇಶನ್ ಮಾಡುವುದಿದೆಯಲ್ಲಾ ಅದನ್ನು ಸಹಿಸುವುದು ಸುಲಭವಲ್ಲ.
ಇಲ್ಲಿ ಜನರಲೈಸೇಶನ್ ಅನ್ನುವ ಪದವನ್ನು ನಾನು ಬರೀ ಧರ್ಮದ ಮಟ್ಟಿಗೆ ಉಪಯೋಗಿಸುತ್ತಿಲ್ಲ, ಅದು ಜಾತಿ ಸೂಚಕವಾಗಿಯೂ, ಲಿಂಗ ಸೂಚಕವಾಗಿಯೂ ಅಷ್ಟೇ ಅಪಾಯಕಾರಿ. ಬದುಕಿನಲ್ಲಿ ತುಂಬಾ ನೋವುಂಡಿದ್ದ ಗೆಳತಿಯೊಬ್ಬಳು ಒಮ್ಮೆ ಹೀಗಂದಿದ್ದಳು. ’ಈ ಗಂಡಸರೇ ಇಷ್ಟು ಕಣೆ’ ಅಂತ, ಆ ಗಳಿಗೆಯಲ್ಲೂ ಅವಳಿಗೆ ಹೇಳಿದ್ದೆ, ’ಮೋಸ ಮಾಡುವ, ನೋವು ಕೊಡುವ ಒಬ್ಬ ಗಂಡಸಿದ್ದರೆ, ಗೌರವಿಸುವ, ಸ್ನೇಹಿತರಾಗಿರುವ, ಓಗೊಡುವ ಹಲವು ಒಳ್ಳೆಯ ಮನಸ್ಸುಗಳು ಸಹ ಇರುತ್ತವಲ್ಲ’ ಅಂತ. ಹೀಗೆ ಸಾರಾಸಗಟಾಗಿ, ಗಂಡನ್ನು, ಹೆಣ್ನನ್ನು, ಹಣವುಳ್ಳವರನ್ನು, ಇಲ್ಲದವರನ್ನು, ಅಧಿಕಾರಸ್ಥರನ್ನು, ರಾಜಕಾರಣಿಗಳನ್ನು, ಎಲ್ಲರನ್ನೂ ಕಾಲ ಕಾಲಕ್ಕೆ ತಕ್ಕಂತೆ ಒಂದು ಗುಂಪಿಗೆ ಸೇರಿಸಿ, ಅದಕ್ಕೊಂದು ವಿಶೇಷಣ ಹಚ್ಚಿ, ಆ ಗುಂಪಿನ ಎಲ್ಲೆ ಭದ್ರಪಡಿಸಿ, ಒಳಗಿರುವವರು ಪ್ರಯತ್ನ ಪಟ್ಟರೂ ಹೊರ ಹೋಗದಂತೆ ತಡೆದು ನಿಲ್ಲಿಸುವ ಸ್ವಭಾವದ ಬಗ್ಗೆ ಅಸಹನೆ ಇದೆ ನನಗೆ.
ವರ್ಣಾಶ್ರಮ ತಪ್ಪು ಎಂದರೆ ಅದನ್ನು ಯಾರೇ ಪಾಲಿಸಿದರೂ ಅದು ತಪ್ಪೇ, ಜಾತಿ ಪದ್ಧತಿ ತಪ್ಪು ಎಂದರೆ ಅದನ್ನು ಯಾರಿಗೇ ಆರೋಪಿಸಿ, ಆ ಗುಂಪನ್ನು ವರ್ಗೀಕರಣ ಮಾಡುವುದು ಸಹ ತಪ್ಪೇ. ಹೀಗೆ ಒಂದೇ ಗುಂಪಿನ ಹೆಸರು ಹೇಳಿ ಮುಸ್ಲಿಮರನ್ನು, ಗೌಡರನ್ನು, ಬ್ರಾಹ್ಮಣರನ್ನು, ದಲಿತರನ್ನು ಗುಂಪುಗೂಡಿಸಿ ಅದಕ್ಕೆ ಸೇರಿದ ಯಾರೋ ಕೆಲವರು ಮಾಡಿದ ಕೆಲಸವನ್ನು ಆ ಇಡೀ ಗುಂಪಿಗೆ ಆರೋಪಿಸಿ ವರ್ಗೀಕರಣ ಮಾಡುವುದು ಸಹ ತಪ್ಪೇ.
ತನ್ನ ಜೀವನದಲ್ಲೇ ಎಂದೂ ತನ್ನ ಜಾತಿಯನ್ನು ಆವಾಹಿಸಿಕೊಳ್ಳದ ಗೆಳತಿಯೊಬ್ಬಳು ಒಮ್ಮೆ ಅವಳ ಜಾತಿಯ ಕಾರಣದಿಂದ ಪ್ರಶ್ನೆಗೊಳಗಾದಾಗ ತನ್ನ ಅಸಹಾಯಕತೆಯನ್ನು ಹೀಗೇ ಹೇಳಿಕೊಂಡಿದ್ದಳು. ’ನೋಡೇ ಎಂದೂ ನನ್ನ ಜಾತಿಯವರ ಸಭೆಗೆ ನಾನು ಹೋಗಲಿಲ್ಲ, ಸಂಘಕ್ಕೆ ಸೇರಲಿಲ್ಲ, ಅವರ ಪದ್ಧತಿಯನ್ನು ಅನುಸರಿಸಲಿಲ್ಲ, ಅವರ್ಯಾರೂ ನನ್ನನ್ನು ತಮಗೆ ಸೇರಿದವಳು ಅಂತ ನೋಡುವುದೇ ಇಲ್ಲ, ಈಗ ನೋಡು ಈ ಗಲಾಟೆ ಆಗ್ತಾ ಇದೆ. ಸಾಧಾರಣವಾಗಿ ಈ ರೀತಿ ಆದರೆ ಅವರವರ ಪಂಗಡದವರು ರಕ್ಷಣೆಗೆ ಬರುತ್ತಾರೆ, ಆದರೆ ನನ್ನ ದುರಂತ ಎಂದರೆ ಅವರನ್ನು ನಾನು ದೂರ ಇಟ್ಟೆ, ನಾನು ನನ್ನವರು ಅಂದುಕೊಂಡವರು ಈಗ ನನ್ನನ್ನು ನಂಬುತ್ತಿಲ್ಲ, ಎಲ್ಲಿ ತಪ್ಪಾಯ್ತು ನನ್ನಿಂದ’ ಅಂತ. ನಿಜ ಅದು. ನಮ್ಮ ಅನುಮಾನದ ನೋಟ, ವಾದ ಕೇಳುವ ಜರೂರತ್ತೇ ಇಲ್ಲದೆ ಪೂರ್ವ ನಿರ್ಧಾರಿತ, ಪೂರ್ವಾಗ್ರಹ ಧೋರಣೆಗಳಿಂದ ಅವರು ತಮ್ಮ ಅದೇ ಗುಂಪಿನ ಆಸರೆಯಡಿ ಸೇರಲು ಪರೋಕ್ಷವಾಗಿ ತಳ್ಳುತ್ತಿಲ್ಲ ತಾನೆ ನಾವು? ಜಾತಿಗಳೊಡನೆ ತಮ್ಮನ್ನು ಗುರುತಿಸಿಕೊಳ್ಳುವ, ಆ ಮೂಲಕ ಆ ಜಾತಿಗೆ ಸೇರಿದ ಎಲ್ಲರ, ಎಲ್ಲಾ ಕೃತ್ಯಗಳನ್ನೂ ಸಮರ್ಥಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಅವರನ್ನು ತಳ್ಳುತ್ತಿಲ್ಲ ತಾನೆ ನಾವು?
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇಂತಹುದೇ ಒಂದು ಪ್ರಸಂಗ ನಡೆಯಿತು. ಒಬ್ಬ ಹೆಣ್ಣು ಮಗಳು ಒಂದು ಜಾತಿಯ ಬಗ್ಗೆ ಒಂದು ಅಭಿಪ್ರಾಯ ಹಾಕಿದಾಗ, ಅದನ್ನು ಖಂಡಿಸುವುದು ಅಥವಾತಮ್ಮನ್ನು ಸಮರ್ಥಿಸಿಕೊಳ್ಳುವುದೂ ಸರಿ, ಆದರೆ ಅದಕ್ಕೆ ಪ್ರತಿಕ್ರಯಿಸಿದ ಒಬ್ಬ ವ್ಯಕ್ತಿ ನಾಗರೀಕ ಸಮಾಜದ ಎಲ್ಲಾ ನೀತಿ, ನಿಯಮಗಳನ್ನೂ ಗಾಳಿಗೆ ತೂರಿ, ಮಾನವೀಯತೆ, ಕನಿಷ್ಠ ಮರ್ಯಾದೆಯನ್ನೂ ಮರೆತು ಚಳುವಳಿಗೆ ಕರೆಕೊಡುವ ರೀತಿಯಲ್ಲಿ ಬಲಾತ್ಕಾರಕ್ಕೆ ಕರೆ ಕೊಟ್ಟ ಘಟನೆ ನಾವೆಲ್ಲರೂ ನೋಡಿದ್ದೇವೆ. ಆತ ಮಾಡಿದ್ದು ಅಮಾನವೀಯತೆ ಮತ್ತು ಅಪರಾಧ, ಆ ಬಗ್ಗೆ ಎರಡು ಮಾತೇ ಇಲ್ಲ. ಆತನನ್ನು ವಿರೋದಿಸುತ್ತಿರುವ ಘಳಿಗೆಯಲ್ಲೂ ನಾನು ಬೆಂಬಲಿಸುತ್ತಿರುವುದು ಆ ಹೆಣ್ಣುಮಗಳನ್ನು, ಆಕೆಯ ಘನತೆಯನ್ನು. ಆದರೆ ಆಕೆ ಹೇಳುವ ಎಲ್ಲಾ ಮಾತುಗಳನ್ನಾಗಲೀ, ಆಕೆಯ ಆ ಅಭ್ರಾಯವನ್ನಾಗಲೀ ಅಲ್ಲ. ಆಕೆಯ ಹಾಕಿದ ಸ್ಟೇಟಸ್ ಬಗ್ಗೆ ನನಗೂ ಪ್ರಶ್ನೆಗಳಿವೆ. ಹಾಗೆ ಒಂದು ಪಂಗಡದಕ್ಕೆ ಸೇರಿದ ಎಲ್ಲರನ್ನೂ ಒಂದೇ ಮಾತಿನಲ್ಲಿ ಖಂಡಿಸುವುದರ ಬಗ್ಗೆಯೂ ನನಗೆ ಸಮ್ಮತಿ ಇಲ್ಲ. ಅದರ ಜೊತೆ ಜೊತೆಯಲ್ಲಿಯೇ ’ತನ್ನದಲ್ಲದ’ ಎಲ್ಲದರ ಬಗ್ಗೆಯೂ ಆತನಲ್ಲಿರುವ ಅಸಹನೆಯ ಬಗ್ಗೆ ಖಂಡನೆ ಸಹ. ಮತ್ತು ಯಾವುದೇ ಮಾತು, ಯಾವುದೇ ಅಭಿಪ್ರಾಯ ಆ ತರಹದ ಪ್ರತಿಕ್ರಿಯೆಗೆ ಕಾರಣವಾಗಬಾರದು. ಅದು ಖಂಡನೀಯ.
ಆತ ಒಪ್ಪಿಕೊಂಡದ್ದನ್ನು ವಿರೋಧಿಸುವ ಎಲ್ಲರನ್ನೂ ಆತ ಕೀಳಾಗೇ ಕಂಡಿದ್ದಾನೆ ಮತ್ತು ಆತನ ದೃಷ್ಟಿಯಲ್ಲಿರುವುದು ಎರಡೇ ಧರ್ಮ, ಒಂದು ಅವನದ್ದು ಮತ್ತೊಂದು ಅದನ್ನು ಒಪ್ಪದವರದ್ದು. ಅದನ್ನು ಒಪ್ಪದವರನ್ನು ಖಂಡಿಸುವ ಭರದಲ್ಲಿ ಆತ ಪ್ರಪಂಚದ ಅತಿ ಕೀಳು, ಮತ್ತು ಅತಿ ಅಸಹ್ಯಕರ ಭಾಷೆಯನ್ನು ಬಳಸಬಲ್ಲ ಎನ್ನುವುದನ್ನು ಜಾಲತಾಣದಲ್ಲಿ ಹರಿದಾಡಿದ ಆತನ ಅನೇಕ ಕಾಮೆಂಟ್ ಗಳ ಫೋಟೋ ಶಾಟ್ ಗಳು ತೋರಿಸಿವೆ. ಈಗ ಈತನ ಈ ನಡೆಯನ್ನು ಹೇಗೆ ಸಹಿಸಲು ಸಾಧ್ಯವಿಲ್ಲವೋ ಹಾಗೆ ಈತನ ಕಾರಣದಿಂದ ಈತನ ಜಾತಿ, ಧರ್ಮವನ್ನು ಬೈಯ್ಯಲು ಸಹ ಸಾಧ್ಯವಿಲ್ಲ ಅಲ್ಲವೇ? ಇಲ್ಲಿ ತಪ್ಪು ವ್ಯಕ್ತಿಯದ್ದು, ಜಾತಿಯದ್ದಲ್ಲ.
ಯಾರನ್ನೇ ಆಗಲಿ ಇಡಿಯಾಗಿ ಒಪ್ಪಿಕೊಳ್ಳುವ ಅಥವಾ ಇಡಿಯಾಗಿ ನಿರಾಕರಿಸುವುದರಲ್ಲಿನ ಅಪಾಯವೆಂದರೆ ಆ ವ್ಯಕ್ತಿ ಅಥವಾ ಜಾತಿ ಅಥವಾ ಧರ್ಮದ ಎಲ್ಲಾ ಕೆಲಸಗಳನ್ನೂ ಪರೀಕ್ಷಿಸದೆ, ಪ್ರಶ್ನಿಸದೆ ನಾವು ಒಪ್ಪಿಕೊಳ್ಳಬೇಕಾಗಿ ಬರುತ್ತದೆ. ಮತ್ತು ಅವಕ್ಕೆಲ್ಲಾ ನಾವು ಜವಾಬ್ದಾರಿ ಹೊರಬೇಕಾಗುತ್ತದೆ. ’ಪರ್ವ’, ’ಗೃಹಭಂಗ’ ಮೆಚ್ಚಿದ ಕಾರಣಕ್ಕೆ ನಾನು ’ಕವಲು’, ’ಯಾನ’ವನ್ನು ಬೆಂಬಲಿಸಬೇಕಿಲ್ಲ. ’ತಬ್ಬಲಿಯು ನೀನಾದೆ ಮಗನೆ’, ’ಕವಲು’, ’ಯಾನ’ವನ್ನು ನಿರಾಕರಿಸಿದೆ ಎಂದು ’ಪರ್ವ’, ’ಗೃಹಭಂಗ’ವನ್ನು ಧ್ವೇಷಿಸಬೇಕಿಲ್ಲ.
ಅತಿರೇಕ ಎಲ್ಲಿದ್ದರೂ ತಪ್ಪೇ. ನಾವು ಬೆಳೆಯುತ್ತಿದ್ದಾಗ, ನಮ್ಮ ಮಕ್ಕಳ ಕಾಲಕ್ಕೆ ಇವೆಲ್ಲಾ ಹೊರಟುಹೋಗಿರುತ್ತದೆ, ಜಾತಿ, ಧರ್ಮ ಹೊಸಿಲೊಳಗಿನ ಆಚರಣೆ ಮಾತ್ರ ಆಗಿರುತ್ತದೆ ಎನ್ನುವ ಕನಸಿತ್ತು, ಭರವಸೆ ಇತ್ತು. ಒಮ್ಮೆ ಈ ಬಗ್ಗೆ ಲಂಕೇಶರೇ ಇರಬೇಕು, ಬರೆದಿದ್ದರು, ’ನಾವು ಕಾಲೇಜಿನಲ್ಲಿದ್ದಾಗ, ಮುಂದೆ ನಮ್ಮ ಮಕ್ಕಳ ಕಾಲಕ್ಕೆ ಬಹುಶಃ ಗಾಂಧೀಜಿ ದೇವರಾಗಿಬಿಟ್ಟಿರುತ್ತಾರೆ ಅಂದುಕೊಂಡಿದ್ದೆ, ಆದರೆ ಇದೇನಾಗಿ ಹೋಯ್ತು…’ ಅಂತ. ಹಾಗೆ ಈಗ ನೋಡಿದರೆ ಅನ್ನಿಸುತ್ತದೆ, ಅಯ್ಯೋ ಇದೇನಾಗಿ ಹೋಯ್ತು? ಮೂಢನಂಬಿಕೆಗಳು ಅಂದಿಗಿಂತ ಈಗ ಹೆಚ್ಚಾಗಿವೆ, ಜಾತಿ – ಜಾತಿಗಳ ನಡುವಣ ಗೆರೆಗಳು, ಗೋಡೆಗಳಾಗಿವೆ, ಧರ್ಮ ಜನರನ್ನು ಬೆಸೆಯುತ್ತಿಲ್ಲ, ಒಡೆಯುತ್ತಿದೆ. ಈಗ ಎಲ್ಲವೂ ಅತಿರೇಕವೆ. ಯಾವುದೇ ನಂಬಿಕೆಯನ್ನು ನಂಬುವವರದ್ದು ಒಂದು ಅತಿರೇಕವಾದರೆ, ನಂಬದವರದ್ದು ಇನ್ನೊಂದು ಅತಿರೇಕ. ಇಬ್ಬರೂ ಮತ್ತೊಬ್ಬರನ್ನು ಹೊಡೆವ, ಕೆಡವುವ ಯೋಚನೆಯಲ್ಲೇ ಇರುತ್ತಾರೆ. ಆಚರಣೆಗಳು, ನಂಬಿಕೆಗಳು ಯಾಕೆ ವೈಯಕ್ತಿಕ ಆಯ್ಕೆ ಅನ್ನಿಸುತ್ತಿಲ್ಲ ನಮಗೆ? ಯಾಕೆ my way or no way ಅನ್ನುವ ಅಸಹನೆ ಈಗೀಗ?
ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ ಇಲ್ಲಿ, ಆದರೆ ಅದು ಯಾವುದೇ ಒಂದು ಜಾತಿಗೆ, ಒಂದು ಧರ್ಮಕ್ಕೆ, ಸ್ತ್ರೀ ಅಥವಾ ಪುರುಷ ಸಮುದಾಯಕ್ಕೆ ಸೇರಿರುವುದಿಲ್ಲ. ಇಲ್ಲಿರುವವರು ಒಳ್ಳೆಯ ಜನ ಮತ್ತು ಕೆಟ್ಟ ಜನ ಮಾತ್ರ.
ನಮ್ಮ ನಡವಳಿಕೆ ಇನ್ನೊಬ್ಬರು ನಂಬಿಕೆಯಿಂದ ನಮ್ಮ ಅಂಗಳಕ್ಕೆ ಬರುವ ಹಾಗೆ ಇರಬೇಕೆ ಹೊರತು, ಪಕ್ಕದ ಮನೆಯವರು ಬೇಲಿ ಭದ್ರ ಪದಿಸುವ ಹಾಗೆ ಇರಬಾರದು ಅಲ್ಲವೇ?



ಕಣ್ದೆರುಸುವ ಬರಹ, ಆಪ್ತ ನುಡಿಗಳಿಂದ ಸೀದಾ ಎದೆಗೇ ನಾಟುತ್ತವೆ, ವಿಚಾರಗಳು. ಕಾಶ್! ಯಟೋಪಿಯಾ ಎಂಬ ಜಗತ್ತು ಇದ್ದಿದ್ದರೆ! ಕನಸಿನ ಲೋಕವೊಂದು ನನಸಾಗಿ ಸಿಕ್ಕರೆ! ಎನ್ನುವುದಕ್ಕಿಂತ ಎಲ್ಲ ನಮ್ಮ ಕೈಯಲ್ಲೇ ಇದೆ, ಅದು ಒಳಗಿನಿಂದ ಬರಬೇಕು! ಅದು ಆಗುತ್ತಿಲ್ಲ, ಅದೇ ವ್ಯಥೆ.
Madam, agree with your views at large.
The dissent is proportional to number of people following it.
’ಈ ಗಂಡಸರೇ ಇಷ್ಟು ಕಣೆ’ is usual reaction to behaviour of one single male. The feeling is equally short lived.
Where as, if number of people continue to show unacceptable tendencies over a period of time, the dissent become generalized.
The mindset and agony-level of person generalizing is equally important as the generalization itself.
Of course, our maturity depends upon not judging entire person based on one single act/work. On a larger perspective, it applies to bigger groups and communities.
But, if these acts follow a monotonous route and becomes indifferent to surroundings, generalizations become inevitable.
We live in a busy world. There is not much time to analyse everything even when they matter to us. Psychologically, generalization is a protective phenomenon and highly individualized. The pros and cons of individual generalization is left to the person committed to it.
ನಮ್ಮ ನಡವಳಿಕೆ ಇನ್ನೊಬ್ಬರು ನಂಬಿಕೆಯಿಂದ ನಮ್ಮ ಅಂಗಳಕ್ಕೆ ಬರುವ ಹಾಗೆ ಇರಬೇಕೆ ಹೊರತು, ಪಕ್ಕದ ಮನೆಯವರು ಬೇಲಿ ಭದ್ರ ಪದಿಸುವ ಹಾಗೆ ಇರಬಾರದು applies to everyone. On the corollary, one should not be callous enough to open the gates and wide when the neighbour is closing them shut on indiscriminate basis. You never know who is behind those closed doors.
Thank you again for another meaningful insight.
ನಿನ್ನ ಬರಹದಲ್ಲಿ ಖಚಿತತೆ ಇದೆ …. ವಿವೇಚನೆಯಿದೆ …. ಸಮಚಿತ್ತವೂ ಇದೆ. ಈ ರೀತಿಯ ಜನರಲೈಸೇಷನ್ ನ್ ಕಹಿ ಉಂಡ ಕ್ಷಣಗಳು ನೆನಪಾಗಿ ನನಗೇ ಗೊತ್ತಿಲ್ಲದಂತೆ ತೆಳು ನೀರು ಕಣ್ಣಲ್ಲಿ. ನಿನ್ನ ಬೆಸ್ಟ್ ಬರಹಗಳ ಸಾಲಲ್ಲಿ ಇದೂ ಒಂದು ಸಂಧ್ಯಾ ….
ಇಂದು ಯಾವುದೇ ವಿಷಯದ ಬಗ್ಗೆ ಚರ್ಚೆಯಿರಲಿ,ಲೇಖನವಿರಲಿ ಅದು ಯು ಆರ್ ಅನಂತಮೂರ್ತಿ ಅಥವಾ ಭೈರಪ್ಪನವರ ಸಕಾರಣ /ವಿನಾಕಾರಣ ಉಲ್ಲೇಖವಿಲ್ಲದೆ ಪ್ರಾರಂಭ/ಮುಕ್ತಾಯವಾಗುವಂತಿಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಬೌದ್ಧಿಕ ಮತ್ತು ಸಾಂಸ್ಕೃತಿಕ ರಂಗಗಳ ಸ್ಥಿತಿ “generalize” ಆಗಿಬಿಟ್ಟಿದೆ!1. ‘ಯಾನ’ವನ್ನು ತಾವಾಗಲೇ ಓದಿ ತಮ್ಮ ಅಭಿಪ್ರಾಯ ರೂಪಿಸಿಕೊಂಡಿರಬಹುದು. ಅದರ ಬಗ್ಗೆ ಕಳೆದ ಭಾನುವಾರ ‘ಕನ್ನಡಪ್ರಭ’ದಲ್ಲಿ ಬಂದ ಒಂದು ಲೇಖನ, ಆ ಕಾದಂಬರಿಯ ಒಂದೆರೆಡು ಪುಟಗಳ ಉಲ್ಲೇಖ ಮತ್ತು ಸೋಮವಾರ, ೨೮/೭/೨೦೧೪ರಂದು ಒಂದೇ ದಿನ 10000 (ಹತ್ತು ಸಾವಿರ) ಪ್ರತಿಗಳು ಮಾರಾಟವಾಯಿತು ಎಂಬ ಸುದ್ದಿ ಬಿಟ್ಟರೆ ಆ ಕಾದಂಬರಿಯ ಬಗ್ಗೆ ನಮ್ಮ ‘ರೆಗ್ಯುಲರ್’ ಪತ್ರಿಕಾವಿಮರ್ಶಕರು, ಚಿಂತಕರು ಮತ್ತು ಬುದ್ಧಿಜೀವಿಗಳು ಇನ್ನೂ ಏನೂ ಹೇಳಿಲ್ಲ. ಆದ್ದರಿಂದ ದಯವಿಟ್ಟು ‘ಅವಧಿ’ಯಲ್ಲಿ ತಾವು ಅದರ ವಿಮರ್ಶೆಮಾಡಿದರೆ ಉತ್ತಮ ಎಂದು ನನ್ನ ಅನಿಸಿಕೆ.
ಬ್ಯಾಲನ್ಸ್ ನ ಕೊರತೆ ಬಹುಶ ಎಲ್ಲರಿಗೂ(ನೋಡಿ ಮತ್ತೆ ಜನರೈಲೇಸೇಷನ್) ಬ೦ದಿರುವ ರೋಗ.
ನಮ್ಮ ಜನರ ಸಮಸ್ಯೆ ಎ೦ದರೆ ನಾವು ನಮಗೆ ಬೇಕಾದನ್ನು ಮಾತ್ರ ತೆಗುದುಕೊಳ್ಳುತ್ತೇವೆ. ಸ್ವೀಕರಿಸುತ್ತೇವೆ. ಪಸರಿಸುತ್ತೇವೆ. ಇನ್ನೊ೦ದು ಬಗೆಯನ್ನು ನೋಡದೇ ಇರುತ್ತೇವೆ. ನೋಡಿದರೂ ವ್ಯರ್ಜಿಸುತ್ತೇವೆ.
Yes I agree. Immediately Modern Man needs to learn living with differences.
Well balanced article madam.:)
ಈ ಸ್ಟೀರಿಯೊ ಟೈಪ ಮಾಡುವದು ಈ ಸಮಯದ ವಿಪರ್ಯಾಸ -ತಪ್ಪು , ತಪ್ಪೆಂದು ಗೊತ್ತಿದ್ದು ಇಲ್ಲಿ ಎಲ್ಲರೂ ಎಡವುವವರೆ. ತುಂಬಾ ಒಳ್ಳೆಯ ಲೇಖನ