ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಇವು ತುಟಿಕಚ್ಚಿ ಬಿಕ್ಕು ತಡೆಹಿಡಿದವರ ಕಥೆಗಳು


ಸಿಟ್ಟಿನಿಂದ ಮೈ ಥರ ಥರ ನಡುಗುತ್ತಿರುತ್ತದೆ, ಅಸಹಾಯಕತೆಯಿಂದ ಕಣ್ಣಲ್ಲಿ ನೀರು ಹನಿ ಹನಿಯಾಗಿ ಸೇರುತ್ತಿರುತ್ತದೆ, ಅಳಲಾರನೆಂಬ ಹಠ, ತುಟಿ ಕಚ್ಚಿ ಹಿಡಿದ ಬಿಕ್ಕು, ಆಡಬೇಕಾಗಿದ್ದ ಮಾತುಗಳ ಸಂತೆ ಗದ್ದಲ ಮನದ ತುಂಬಾ, ಮಾತುಗಳ ಬಿಸಿ ತುಪ್ಪ ನಾಲಿಗೆಯಲಿ, ಉಗಿದು ಬಿಡಲೇ, ಅಂದು ಬಿಡಲೇ, ಅತ್ತು ಬಿಡಲೇ, ಹಗುರಾಗಿ ಬಿಡಲೇ, ಮಂಡಿಯೂರಿ ಕೂತು, ನೆಲಕ್ಕೆ ಕೈ ಬಡಿದು, ಆಕಾಶವೆಂಬೋ ಆಕಾಶಕ್ಕೆ ತಾಕುವ ಹಾಗೆ ಹಿಡಿದಿಟ್ಟ ಮಾತುಗಳನ್ನೆಲಾ ಕೂಗಿ ಕೂಗಿ ಹೇಳಿಬಿಡಲೇ?
ಅರ್ಥವಾದ ಜಾಣತನ, ಬೆನ್ನ ಹಿಂದಿನ ವಂಚನೆ, ಬೆಚ್ಚನೆಯ ಅಂಗೈಯ ಮರೆಯಲ್ಲಿದ್ದ ಹರಿತವಾದ ಚೂರಿ, ನಗುವ ಕಣ್ಣುಗಳ ಹಿಂದಿನ ಲೆಕ್ಕಾಚಾರ, ಹೇಳಿದ ಸುಳ್ಳು, ಅರಿವಿಗೆ ಬಂದ ಮೋಸ, ಮಾಡಿದ ಅನ್ಯಾಯ, ತಪ್ಪಿಲ್ಲದೇ ತಲೆ ತಗ್ಗಿಸಿದ ಅವಮಾನ ಹೇಳಿಬಿಡಲೇ ಈಗ, ಇಲ್ಲಿ, ಈ ಕ್ಷಣದಲ್ಲಿ? ಒಂದು ಕ್ಷಣ, ಒಂದೇ ಕ್ಷಣ. ಆ ನಿರ್ಣಾಯಕ ಕ್ಷಣ ಸರಿದುಹೋಗಿಬಿಡುತ್ತದೆ, ನೋವು ದನಿಯಾಗುವುದಿಲ್ಲ, ಅಳಲಿಗೆ ಪದಗಳು ಸಿಗುವುದಿಲ್ಲ. ನೋವಿನ ಇನ್ನೊಂದು ತೆರೆ ಎದೆಯ ಮೇಲೆ ಕೂರುತ್ತದೆ. ಹೃದಯದ ಮೇಲೆ ಮತ್ತಷ್ಟು ಆಡದ ಮಾತುಗಳ ಭಾರ. ಆಡಿದ ಮಾತುಗಳು ಕೇಳಿದವರ ಮೇಲೆ ಏನು ಪರಿಣಾಮ ಬೀರುತ್ತದೋ ಗೊತ್ತಿಲ್ಲ, ಆದರೆ ಆಡದ ಮಾತುಗಳು, ನುಂಗಿಕೊಂಡ ಹೃದಯಕ್ಕೆ ಏರಿಸುವ ಒಜ್ಜೆ ಭರಿಸಲಾರದ್ದು.
ಹೀಗೆ ದಿನಗಟ್ಟಲೆ, ವಾರ ಗಟ್ಟಲೆ, ವರ್ಷಗಟ್ಟಲೆ ಅಳಲುಗಳಿಗೆ ಮಾತುಗಳ ದೇಹ ಸಿಗದೆ, ಅತೃಪ್ತ ಆತ್ಮಗಳಂತೆ ಅಲೆಯುತ್ತಿರುವಾಗ ಆ ಭಾರ ತಡೆಯುವುದು ಸುಲಭವಲ್ಲ. ಒಂದು ಯುದ್ಧಕ್ಕೆ ನಿರಂತರ ಮೈ ತೆತ್ತಂತೆ.  ’ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು? ಕೋಪಿಸಲು, ನಿಂದಿಸಲು ಮೌನವ ಮೀರುವನೇನು?  ಅಂಗೈಗೆ ಮೊಳೆ ಹೊಡೆಯುತ್ತಾ ಕ್ರಿಸ್ತನಿಗೆ ಮಾತನಾಡಲು ನಿಷೇದ ಹೇರಿದ ಹಾಗೆ.
ಹಾಗೆ ನಿರಂತರ ಮಾನಸಿಕ, ದೈಹಿಕ ಆಘಾತಗಳನ್ನು ಸಹಿಸುತ್ತಾ ಕಡೆಗೊಂದು ದಿನ ಮಾತನಾಡಲು ಶುರು ಮಾಡಿದರೆ, ಆಗ ಬರುವುದು ಆಕ್ರಂದನವಲ್ಲ, ಅದೊಂದು ವಿಷಣ್ಣತೆಯ ಮುಗಿಯದ ಹಾಡು. ಅಲ್ಲಿನ ಪ್ರತಿ ಮಾತಿಗೂ ಒಂದು ಭಾರವಿರುತ್ತದೆ, ನಿಟ್ಟುಸಿರಿರುತ್ತದೆ, ಕಣ್ಣೀರು ಅಲ್ಲಿ ಧಾರಾಕಾರ ಅಲ್ಲ, ಅದು ಅಲ್ಲಿ ಹೆಪ್ಪುಗಟ್ಟಿದ ಹಿಮ. ಆ ಅಂತಹ ಹೆಪ್ಪುಗಟ್ಟಿದ ವಿಷಾದದ ಹಲವು ’ನಿನ್ನೆ’ಗಳು ಅಚಾನಕ್ ಆಗಿ ನನ್ನ ಬೊಗಸೆಗೆ ಬಿದ್ದಿದ್ದವು.
ಅಪರೂಪಕ್ಕೊಮ್ಮೆ ಸಿಗುವ, ಸಿಕ್ಕಾಗಲೂ ಕೆಲವೇ ಮಾತುಗಳನ್ನಾಡುವ, ಮಾತಿಗಿಂತಾ ಕಣ್ಣಲ್ಲಿನ ಆತ್ಮೀಯತೆಯಲ್ಲೇ ಹೆಚ್ಚು ಸಂಭಾಷಿಸುವ ಸ್ನೇಹಿತೆ ಜಯಶ್ರೀ ಕಾಸರವಳ್ಳಿ, ಅವರ ಕಥೆಗಳನ್ನು ನಾನು ಓದಲು ಶುರು ಮಾಡಿದ್ದು ಈ ಎರಡು ಮೂರು ವರ್ಷಗಳೀಚೆಗೆ, ಅದೂ ಬಿಡಿ ಬಿಡಿಯಾಗಿ. ಅವರ ಕಥೆಗಳನ್ನು ಇಡಿಯಾಗಿ ಮೊದಲ ಸಲ ಓದಿದ್ದು ಅವರ ’ತಂತಿಬೇಲಿಯ ಒಂಟಿ ಕಾಗೆ’ ಪುಸ್ತಕದಲ್ಲಿ. ಮೊದಲ ಕಥೆ ಓದುವಾಗಲೇ ಅನ್ನಿಸಿತು, ಇವು ಹಾಗೆ ಬೇಸರವಾದಾಗ ಕೈಲಿ ಹಿಡಿದು ಸರಾಗವಾಗಿ ಓದುವ ಕಥೆಗಳಲ್ಲ ಎಂದು, ಕಥೆ ಓದುವಾಗ ಒಂದು ಮೌನ ಬೇಕು, ಕಥೆ ಓದಿದ ಮೇಲೆ, ಮತ್ತೊಂದು ಕಥೆ ಓದುವ ಮೊದಲೂ ಒಂದು ಮೌನ ಬೇಕು. ಹಾಗೆ ಮೌನದೊಂದಿಗೆ ಮನಸ್ಸನ್ನು ನಾಟುವ ಕಥೆಗಳು ಅವು. ನಂತರ ಮೊನ್ನೆ ಮೊನ್ನೆ ಸಿಕ್ಕ ಅವರ ಪುಸ್ತಕ ’ದಿನಚರಿಯ ಕಡೇ ಪುಟದಿಂದ’. ಮೊದಲು ಓದಿದ್ದು ಅದೇ ಹೆಸರಿನ ಕಥೆ. ಕಥೆ ಓದಿ, ಸುಮ್ಮನೆ ಕುಳಿತೆ. ಆಗ ಅನ್ನಿಸಿದ್ದು, ಇವು ತುಟಿ ಕಚ್ಚಿ ಬಿಕ್ಕನ್ನು ತಡೆಹಿಡಿದ ಕಥೆಗಳು ಅಂತ.
ಒಮ್ಮೆ ನೋಡಿದರೆ ಇವರ ಎಲ್ಲಾ ಕಥೆಗಳೂ ಒಂದೇ ಕಥೆಯ ಬಿಡಿ ಬಿಡಿ ಚಿತ್ರಗಳು, ಆದರೆ ಸ್ವತಂತ್ರವಾಗಿ ಕಥೆಯಾದ ಪಾತ್ರಗಳು. ಇವರ ಕಥೆಗಳ ಆವರಣ ಮತ್ತು ಹೂರಣ ಎರಡೂ ಸಾಂದ್ರವಾಗಿರುತ್ತದೆ, ಹಾಗಾಗಿ ಕಥೆಗಳು, ಪಾತ್ರ ಮತ್ತು ಆವರಣದ ಜೊತೆಯಲ್ಲಿಯೇ ನಮ್ಮೊಳಗಿಳಿಯುತ್ತದೆ.
ಇಲ್ಲಿನ ಎಲ್ಲಾ ಪಾತ್ರಗಳಿಗೊಂದು ಘನತೆ ಇದೆ, ಇವು ಸೋತ ಪಾತ್ರಗಳಿರಬಹುದು, ಆದರೆ ಸೋಲೊಪ್ಪಿಕೊಂಡ ಪಾತ್ರಗಳಲ್ಲ. ಬದುಕಿನೊಡನೆ ನಿರಂತರ ಹೋರಾಟ ಮಾಡುವ ಪಾತ್ರಗಳು.
ಧರ್ಮಸೆರೆ ಚಿತ್ರದ ಆರತಿ ಪಾತ್ರ ನೆನಪಿದಯಾ? ಸ್ಮಿತಾ ಪಾಟೀಲ್ ಕಣ್ಣುಗಳು ನೆನಪಿದೆಯಾ? ’ಮೂಕ ಹಕ್ಕಿಯು ಹಾಡುತಿದೆ, ಭಾಷೆಗೆ ನಿಲುಕದ ಭಾವಗೀತೆಯಾ’, ಕಥಾ ಸಂಕಲನದ ಸುಮಾರು ಕಥೆಗಳು ಆ ಭಾವಗೀತೆಗಳಂತಹ ಹಾಡುಗಳೇ.
ಈ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಬರೆದರೆ ಎಲ್ಲಾ ಕಥೆಗಳ ಬಗ್ಗೆಯೂ ಬರೆಯಬೇಕು, ಆದರೆ ನಾನಿಲ್ಲಿ ಮೂರು ಕಥೆಗಳ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ. ಅವು ಜಯಶ್ರೀ ಅವರ ಕಥೆಗಳೆಲ್ಲದರ ಪ್ರಾತಿನಿಧಿಕ ಕಥೆಗಳು ಅಂತಲ್ಲ, ಅಥವಾ ಈ ಸಂಕಲನದಲ್ಲಿ ಅವು ಮೂರೇ ಅತ್ಯುತ್ತಮ ಕಥೆಗಳು ಅಂತಲೂ ಅಲ್ಲ, ಬಹುಶಃ ಅವು ಮೂರು ನನ್ನನ್ನು ಜಾಸ್ತಿ ಕಲಕಿದ ಕಥೆಗಳು. ಅಥವಾ ಆ ಕಥೆಗಳಲ್ಲಿನ ಮಾತುಗಳಿಗಿಂತಾ ಹೆಚ್ಚಾಗಿ ಅದರಲ್ಲಿನ ಮೌನದಿಂದ ಅವು ನನ್ನೊಂದಿಗೆ ಉಳಿದ ಕಥೆಗಳು.

ಮೊದಲ ಕಥೆ ’ಸ್ವಗತದಾಚೆಗೆ’. ಇಲ್ಲಿ ಲೈಂಗಿಕ ಶೋಷಣೆ ಇದೆ, ಅರಿಯದ ಬಾಲಕಿಯನ್ನು ಸಂಬಂಧಿಕರೇ ಲೈಂಗಿಕವಾಗಿ ಬಳಸಿಕೊಂಡಾಗ ಆ ಹೇವರಿಕೆ ಅವಳ ಮೈಯಲ್ಲಿ ರಕ್ತಕ್ಕೂ ಮೀರಿದ ದ್ರವವಾಗಿ ಹರಿದು ಅವಳ ಇಡೀ ಜೀವನವನ್ನು ಕಾಡಿ, ಕಾಡಿ, ದೇಹದಲಿ ಬೆಳೆದ ಕ್ಯಾನ್ಸರ್ ಆಗುತ್ತದೆ. ಪಕ್ಕದ ಕೋಣೆಯಲ್ಲಿ ಅಪ್ಪ ನರಳಾಡುತ್ತಾ ಕೊನೆ ಉಸಿರೆಳೆಯುತ್ತಿರುತ್ತಾರೆ, ಈ ಕೋಣೆಯ ಕತ್ತಲಲ್ಲಿ ಈ ಹುಡುಗಿಯ ಬಾಲ್ಯದ ಮೇಲೆ ಕತ್ತಲು ಸುರಿಯುತ್ತಿರುತ್ತದೆ. ’ಯಾರಾದರೂ ಲಾಟೀನು ತನ್ನಿ’ ಎನ್ನುವ ಅಮ್ಮನ ಮಾತು ಇವಳ ಈ ಕೋಣೆಯನ್ನು ತಲುಪುವುದೇ ಇಲ್ಲ. ಆ ಕ್ಷಣದ ದಿಗ್ಭ್ರಮೆ, ಆಘಾತದಲ್ಲಿ ಮಾತೇ ಆಡದೆ ಸುಮ್ಮನೆ ಉಳಿದ ಸುನಂದೆ ಆ ಮೌನದ ಬೆಲೆಯನ್ನು ಇಡೀ ಜೀವನ ಕಟ್ಟುತ್ತಾ ಹೋಗುತ್ತಾಳೆ. ಒಂದೊಮ್ಮೆ ಧೈರ್ಯ ಮಾಡಿ ಅಮ್ಮನಲ್ಲಿ ಹೇಳಿದರೂ, ಅಮ್ಮ ಅದನ್ನು ’ಈಗೇನು ನೀನೇನು ಬಸಿರಾದೆಯಾ’ ಎನ್ನುವ ಒಂದೇ ಮಾತಿನಲ್ಲಿ ವ್ಯಕ್ತ ಗಾಯವಾಗದ ಏಟು ಏಟಲ್ಲ ಎಂದು ತಳ್ಳಿ ಹಾಕಿಬಿಡುತ್ತಾಳೆ. ಆದರೆ ಬಸಿರಾಗಿದ್ದರೆ ಹೆರುವವರೆಗೂ ಮಾತ್ರ ಹೊರಬೇಕಿದ್ದ ಪರಿಣಾಮದ ಹೊರೆಯನ್ನು ಸುನಂದೆ ತಾನು ಬದುಕಿರುವವರೆಗೂ ಹೊತ್ತಿದ್ದಾಳೆ. ಆ ಕ್ರಿಯೆಯಿಂದ ಆಗ ಹೆಪ್ಪುಗಟ್ಟಿದ ಹೆಣ್ತನ ಎಲ್ಲಿ ಸ್ಪರ್ಶದ ಬಿಸುಪಿಗೆ ಕರಗಿ ಯಾತನೆಯೆಲ್ಲಾ ಮಾತಾಗಿಬಿಡುವುದೋ ಎನ್ನುವ ಭಯದಲ್ಲಿ ಗಂಡನನ್ನೂ ಮನಸ್ಸಿನ ಕೋಣೆಯೊಳಗೆ ಬಿಟ್ಟುಕೊಳ್ಳಲಾಗುವುದಿಲ್ಲ ಅವಳಿಗೆ. ಸುನಂದೆಯ ಆ ಮೌನದ ಬಿಸಿ ನಮ್ಮನ್ನು ಸುಟ್ಟುಹಾಕುತ್ತದೆ. ಇಲ್ಲೆಲ್ಲೂ ಅವಳ ಅಳಲು ವಾಚ್ಯವಾಗಿಲ್ಲ. ಅವಳ ’ಇಂದಿ’ನ ಭಾವ ತೀವ್ರವಾಗಿದೆ, ’ನಿನ್ನೆ’ಯ ನೋವುಗಳು ಆಳವಾಗಿವೆ. ಅವಳ ಇಂದಿನ ಕ್ಯಾನ್ಸರ್ ಅವಳನ್ನು ದೈಹಿಕವಾಗಿ, ವ್ಯಕ್ತವಾಗಿ ಘಾಸಿಗೊಳಿಸಿದೆ, ಅವಳ ’ನಿನ್ನಿ’ನ ನೆನಪು ಅವ್ಯಕ್ತವಾಗಿ ಅವಳ ಮನಸ್ಸನ್ನು ಹಣಿದುಹಾಕಿದೆ. ಇವುಗಳೆಲ್ಲದರ ನಡುವೆಯೂ ಅವಳ ಮನಸ್ಸಿನಲ್ಲಿನ ಪ್ರೀತಿಯ ಹುಡುಕಾಟ ಮುಕ್ಕಾಗಿಲ್ಲ. ಎದೆಗೊರಗಿಸಿಕೊಳ್ಳುವ, ಮೈಯನ್ನಲ್ಲ, ಮನಸ್ಸನ್ನು ನೇವರಿಸುವ ಒಂದು ಬಿಂಬದ ಹುಡುಕಾಟದಲ್ಲಿ ಅವಳು ಹೆಜ್ಜೆ ಹಾಕುತ್ತಿರುತ್ತಾಳೆ.
ಇನ್ನೊಂದು ಕಥೆ ’ದಿನಚರಿಯ ಕಡೇ ಪುಟದಿಂದ’. ಮೊದಲ ನೋಟದಲ್ಲಿ ಇದು ಒಂದು ಇಜ್ಜೋಡು ದಾಂಪತ್ಯದ ಕಥೆ. ಹಟ ಮಾಡುವ, ಜಗಳ ಆಡುವ, ರಚ್ಚೆ ಹಿಡಿದು ಗಂಡನ ಜೊತೆ ಸಂವಾದ ಬೆಳೆಸಲು ಹಂಬಲಿಸುವ ಹೆಂಡತಿ, ತನ್ನ ತಣ್ಣನೆಯ ನಡುವಳಿಕೆಯಿಂದ, ಮಾತೇ ಆಡದೆ ಅವಳನ್ನು ಮಣಿಸಬಲ್ಲೆ ಎನ್ನುವ ಪುರುಷಾಹಂಕಾರದಿಂದ ಹೆಂಡತಿಯನ್ನು ಅವಳ ಅತಂತ್ರ, ಅಭದ್ರತಾ ಸ್ಥಿತಿಯಲ್ಲಿಡುವುದರಲ್ಲೇ ತನ್ನ ’ಗಂಡ’ತನವನ್ನು ಕಾಪಾಡಿಕೊಳ್ಳುವ ಗಂಡ. ವಾರಗಟ್ಟಲೆ ಟೂರು ಹೋದಾಗ ಒಂದು ಫೋನ್ ಹೆಂಡತಿಯನ್ನು ನೇವರಿಸುತ್ತದೆ ಎಂದು ಆತನಿಗೆ ಗೊತ್ತು, ಆದರೆ ಅಥವ ಅದರಿಂದಾಗಿಯೇ ಆತ ಫೋನ್ ಮಾಡುವುದಿಲ್ಲ. ಹೆಂಡತಿ ಹೆದರಿದ ಹಾಗೆ ತನಗೆ ಹೊರಗೆ ಇನ್ನೊಂದು ಸಂಬಂಧವಿಲ್ಲ ಎಂದು ಒಂದು ಮಾತು ಹೇಳಿದರೂ ಸಾಕು ಹೆಂಡತಿಗೆ ನೆಮ್ಮದಿ, ಆದರೂ ಮತ್ತು ಅದಕ್ಕಾಗಿಯೇ ಆತ ಏನೂ ಹೇಳುವುದಿಲ್ಲ. ಆದರೆ ಈ ಕಥೆಗೆ ಇನ್ನೊಂದು ಪದರ ಇದೆ, ಈ ಜಗಳ ಮಕ್ಕಳನ್ನು ಹೇಗೆ ಅಪ್ಪ ಅಮ್ಮನಿಗೆ ತಕ್ಕಂತೆ ಮುಖವಾಡ ಹಾಕುವುದನ್ನು ಕಲಿಸಿಬಿಡುತ್ತದೆ ಅಂತ. ದುರಂತ ಇರುವುದು ಅಲ್ಲಿ. ಅಳುವ ಅಮ್ಮ, ಅಳಿಸುವ ಅಪ್ಪ, ಇಬ್ಬರಿಂದಲೂ ಘಾಸಿಗೊಳಗಾದವರು ಮಕ್ಕಳು. ದಾಂಪತ್ಯಕ್ಕಿಂತಲೂ ಇಲ್ಲಿ ಅವನತಿ ಆಗುವುದು ಮಕ್ಕಳ ಮುಗ್ಧತೆಯದು, ಅವರ ಬಾಲ್ಯದ್ದು. ಬಾಲ್ಕನೆಯ ಮೂಲೆಯಲ್ಲಿ ನಿಂತು ದೀನರಾಗಿ ಜಗಳ ನೋಡಬೇಕಾದ, ಅಮ್ಮ ಏನಾದರೂ ಮಾಡಿಕೊಂಡರೆ ಎನ್ನುವ ಹೆದರಿಕೆಯಲಿ ಮಕ್ಕಳಾಗಿರಬೇಕಾದ ಮಕ್ಕಳು ಹಿರಿಯರಂತೆ ಅಡಿಗೆ ಮನೆಯಿಡೀ ಓಡಾಡಿ, ಚಾಕು, ಚೂರಿ, ಸೀಮೆ ಎಣ್ಣೆಗಳನ್ನು ಎತ್ತಿಡುವುದು, ಬೆಳೆಯುತ್ತಾ ಬೆಳೆಯುತ್ತಾ ’ಮುಖಕ್ಕಡ್ಡವಾಗಿ ಎನನ್ನಾದರೂ ಹಿಡಿದು’ ಬದುಕಿನ ವಾಸ್ತವಕ್ಕೆ ಮುಖ ಮುಚ್ಚಿಕೊಳ್ಳುವುದು, ಇಲ್ಲಿದೆ ಈ ಇಡೀ ಕಥೆಯ ದುರಂತ. ಓದುವಾಗ ಯಾಕೋ ನನಗೆ ಖಾಸನೀಸರ ’ತಬ್ಬಲಿಗಳು’ ಕಥೆ ನೆನಪಾಯಿತು.
ಹಾಗೆಯೇ ನನ್ನನ್ನು ಕಾಡಿದ ಮತ್ತೊಂದು ಕಥೆ ’ಕೊಪ್ಪರಿಗೆ ಹೊತ್ತವರು’. ಜಯಶ್ರೀಯವರ ಉಳಿದ ಕಥೆಗಳಿಂದ ಭಿನ್ನವಾಗಿ ತನ್ನ ನಿರೂಪಣೆಯ ಸಾಂದ್ರತೆಯಿಂದ ನಮ್ಮದಾಗುವ ಕಥೆ ಇದು. ಕಥೆಯಲ್ಲಿನ ಸೀನೂಕಾಕ ಒಡೆಯರ ಮನೆಯ ಕೊಪ್ಪರಿಗೆ ಹೊತ್ತು ಒಳ ಅಂಗಳದ ಚೌಕಿಯಲಿ ತುಂಬಿದ್ದ ನೀರನ್ನು ಬಾಚಿ ಎತ್ತಲು ಹೋಗಿ ಬಿದ್ದು ಬೆನ್ನು ಮುರಿದುಕೊಂಡವನು. ಇಡೀ ವ್ಯವಸ್ಥೆಯಲ್ಲಿ ಅವನು ಕೊಪ್ಪರಿಗೆ ’ಹೊರುವವನು’ ಮಾತ್ರ. ಕೊಪ್ಪರಿಗೆಯೂ ಅವನದಲ್ಲ, ಕೊಪ್ಪರಿಗೆಯಲ್ಲಿರುವುದೂ ಅವನದಲ್ಲ. ಗಂಡಸರ ಪ್ರಪಂಚದಿಂದ ಒಳ ಮನೆಗೆ ಬರುವ ಈ ಸೀನೂಕಾಕ ಉಳಿಯುವುದು ಮಾತ್ರ ಹೆಂಗಸರ ಪ್ರಪಂಚದಲ್ಲಿ. ಅವನನ್ನು ಗಂಡಸರ ಪ್ರಪಂಚ ಬಳಸಿಕೊಂಡರೆ, ಹೆಂಗಸರ ಪ್ರಪಂಚ ಪೋಷಿಸುತ್ತದೆ. ಈ ವೈರುಧ್ಯದಲ್ಲಿ, ಅದನ್ನು ಜಯಶ್ರೀ ಕಥೆಯಾಗಿಸುವ ರೀತಿಯಲ್ಲಿ ವೈದೇಹಿ, ಮಿತ್ರಾ ವೆಂಕಟ್ರಾಜು ನೆನಪಾಗಿಬಿಡುತ್ತಾರೆ.
ಇವರ ಕಥನಶೈಲಿ, ನಿರೂಪಣೆ, ಭಾಷೆಯ ಮೇಲಿನ ನಿಯಂತ್ರಣ ಇವೆಲ್ಲದರ ಹಿಂದೆ ಅಪಾರವಾದ ಓದಿದೆ, ಜೀವನದ್ರವ್ಯ ಇದೆ, ಇಲ್ಲಿ ಪಾತ್ರ ಮಹಿಳೆಯಾಗಿರುವುದು ಕೇವಲ ಕಾಕತಾಳೀಯವೇ ಹೊರತು, ಅವನ್ನು ಬಲವಂತವಾಗಿ ಮಹಿಳಾವಾದಿ ಪಾತ್ರಗಳನ್ನಾಗಿಸಲೂ ಜಯಶ್ರೀ ಎಲ್ಲೂ ಪ್ರಯತ್ನಿಸುವುದಿಲ್ಲ. ಕಥೆಗಳ ಗೆಲುವಿರುವುದು ಅಲ್ಲಿ. ಈ ಕಥೆಗಳು ಮೂಲತಃ ಸಂಬಂಧಗಳನ್ನು ಅನ್ವೇಷಿಸುತ್ತವೆ, ಬದುಕಿನ ಒಳಗಣ ಹೊರಳಾಟಗಳನ್ನು ವಿಶ್ಲೇಷಿಸುತ್ತವೆ., ಮತ್ತು ಇವೆಲ್ಲವನ್ನು ಒಂದು ಅಪ್ಪಟವಾದ ಪ್ರಾಮಾಣಿಕತೆಯಲ್ಲಿ ಮಾಡುತ್ತವೆ. ಪಾತ್ರಗಳಿಂದ ದೂರ ನಿಂತು ಜಯಶ್ರೀ ಪಾತ್ರಗಳನ್ನು ನಮ್ಮ ಮುಂದಿಡುತ್ತಾರೆ, ಎಲ್ಲೂ, ಯಾವ ಪಾತ್ರವನ್ನೂ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ, ನನಗೆ ಬಹಳ ಇಷ್ಟವಾದದ್ದು ಅವರ ಈ ಅಂತರ ಕಾಯ್ದುಕೊಳ್ಳುವ ರೀತಿ. ಕಥೆಗಳಿಗೆ ಮುನ್ನುಡಿ ಬರೆದ ಎಂ ಎಸ್ ಆಶಾದೇವಿ ಹೇಳುವ ಹಾಗೆ ’ಸಮಕಾಲೀನ ಹೆಣ್ಣಿನ ಸಂಘರ್ಷದ ನೆಲೆಗಳನ್ನು ಕಂಡುಕೊಳ್ಳುವುದು ಇವರ ಮುಖ್ಯ ಕಾಳಜಿಯಾಗಿರುವಂತೆ ತೋರಿ’ದರೂ, ಇವರ ಕಥೆಗಳಲ್ಲಿ ’ನಿರ್ಧಿಷ್ಟವಾಗಿ ಹೆಣ್ಣಿನದು, ಹೆಣ್ಣಿನದು ಮಾತ್ರ ಅಂದು ವರ್ಗೀಕರಿಸಲಾಗದ ಮಾನವಾನುಭವದ ನೆಲೆ’ ಇದೆ. ಈ ಅನುಭವದ ನೆಲೆಯಲ್ಲಿ ಮೂಡಿದ್ದರಿಂದ ಈ ಕಥೆಗಳು ತಮ್ಮ ಗಟ್ಟಿ ತಳಪಾಯದಿಂದ ಮತ್ತು ಕಟ್ಟಡದಿಂದ ನಮಗೆ ಮುಖ್ಯವೆನಿಸುತ್ತವೆ.
ಇಷ್ಟೆಲ್ಲಾ ಬರೆದ ಮೇಲೂ, ಮಿಕ್ಕ ಕಥೆಗಳ ಅಂಬುಜಾ, ’ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ’ ಕಥೆಯ ಏಳುಮಲೆ, ಕಣ್ಣನ್, ’ಮನೆಯೊಳಗೊಬ್ಬ’ ಕಥೆಯ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎನ್ನುವುದರ ಸುತ್ತ ಹೆಣೆದ ಕಥೆಗಾರಿಕೆ, ಥೇಟ್ ಕವನದಂತಹ ’ಒಂದಷ್ಟು ಚೂರುಗಳು’ ಎಲ್ಲವೂ ನನ್ನನ್ನು ಜಗ್ಗುತ್ತಲೇ ಇವೆ.
ಸಾಧಾರಣವಾಗಿ ಅವರ ಕಥೆಗಳ ಸ್ಥಾಯೀಭಾವವಾದ ವಿಷಣ್ಣತೆ ಮತ್ತು ಖಿನ್ನತೆ ಅವರ ಕಥೆಗಳ ಶಕ್ತಿಯೂ ಹೌದು ಮತ್ತು ಮಿತಿಯೂ ಹೌದು. ನಾನು ಮೊದಲೇ ಹೇಳಿದಹಾಗೆ ಹರಿಯುವ ನದಿಗೆ ಒಂದು ಚಲನಶೀಲತೆ, ಒಂದು ಚಂಚಲತೆ ಇದ್ದರೆ, ಜಲಾಶಯದಲ್ಲಿ ಕಾಲವೆಲ್ಲಾ ಕಟ್ಟಿಟ್ಟು ಕಡೆಗೊಮ್ಮೆ ಒಂದು ಗೇಟು ತೆರೆದಾಗ ಹೊರಗೆ ನುಗ್ಗುವ ನೀರಿಗೆ ಒಂದು ತೀವ್ರತೆ ಇರುತ್ತದೆ. ಅಂತಹ ತೀವ್ರತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಕಥೆಯಾಗಿಸಿದ ಪುಸ್ತಕ ಇದು.
 

‍ಲೇಖಕರು G

10 October, 2014

13 Comments

  1. bharathi b v

    Eegle … Eegle odbeku ansthide ….

  2. ಅಪರ್ಣ ರಾವ್

    ee vivaraneya bhaavadinda hora baralu samaya bekide…

  3. narayan raichur

    oodabekemba kutoohala hechchuttide !!

  4. samyuktha

    Odabeku!

  5. JOGI

    ಸಂಧ್ಯಾರಾಣಿ ಅವರೇ,
    ಜಯಶ್ರೀಯವರ ಕತೆಗಳನ್ನು ನೀವು ಪರಿಚಯಿಸಿದ ಕ್ರಮ ತುಂಬ ಇಷ್ಟವಾಯಿತು. ನನಗೆ ಜಯಶ್ರೀ ಕತೆಗಳು ತುಂಬ ಇಷ್ಟ. ತಂತಿ ಬೇಲಿಯ ಒಂಟಿಕಾಗೆ, ದಿನಚರಿಯ ಕಡೇ ಪುಟ- ಎರಡೂ ಸಂಕಲನದ ಕತೆಗಳನ್ನು ಓದಿ ಖುಷಿಪಟ್ಟಿದ್ದೆ. ತುಂಬ ದಿನ ಅವು ಕಾಡಿದ್ದವು. ಅವುಗಳ ಕುರಿತು ಬರೆಯಬೇಕೆಂದುಕೊಂಡಿದ್ದೆ. ಅಷ್ಟು ಹೊತ್ತಿಗೆ ನೀವು ಬರೆದುಬಿಟ್ಟಿರಿ, ನಾನು ಬರೆದಿದ್ದರೂ ಇಷ್ಟು ಆಳವಾಗಿ, ಗಾಢವಾಗಿ ಬರೆಯಲು ಆಗುತ್ತಿರಲಿಲ್ಲ. ಜಯಶ್ರೀ ಅವರು ಮತ್ತಷ್ಟು ಕತೆಗಳನ್ನು ಬರೆದು ನಮ್ಮನ್ನು ಮುದಗೊಳಿಸುತ್ತಿರಲಿ.
    -ಜೋಗಿ

    • ಸಂಧ್ಯಾರಾಣಿ

      ಥ್ಯಾಂಕ್ಯೂ… ನಿಮ್ಮ ಬರವಣಿಗೆಯ ನಡುವೆಯೂ ನಾನು ಬರೆದದನ್ನು ಓದಿ, ಪ್ರತಿಕ್ರಯಿಸುತ್ತೀರಿ. ಇಂತಹ ಮಾತುಗಳು ಕೊಡುವ ಪ್ರೋತ್ಸಾಹ ದೊಡ್ಡದು. ಹೌದು ಜಯಶ್ರೀ ಕಥೆಗಳೇ ಹಾಗೆ, ಓದಿದ ಮೇಲೂ ಕಾಡುತ್ತಲೇ ಇರುತ್ತವೆ. ಮತ್ತೊಮ್ಮೆ ಥ್ಯಾಂಕ್ಯೂ 🙂

  6. shobhavenkatesh

    chennagide sandhya

  7. Anil Talikoti

    ದುರಂತತೆ, ವಿಷಣ್ಣತೆಗಳ ಬಣ್ಣಿಸಲು ನೀವು ಉಪಯೋಗಿಸಿದ ‘ತುಟಿ ಕಚ್ಚಿ ಬಿಕ್ಕು ಹಿಡಿದು’ ದುಃಖ ಮಡುಗಟ್ಟಿಸುವದನ್ನು ಎಷ್ಟು ಚೆನ್ನಾಗಿ ಬಿಂಬಿಸುತ್ತದೆ. ಈ ಕಥೆಗಳನ್ನು ಓದಲೆಬೇಕು ಎನಿಸುವಂತೆ ಮಾಡುವ ಬರಹವಿದು.
    ~ಅನಿಲ

  8. jayashreekasaravalli

    ಇವತ್ತೆಲ್ಲಾ ಮೊಮ್ಮಗನ ಚೌಲದ ಗಡಿಬಿಡಿಯಲ್ಲೆಂದು ಅರಾಮವಾಗಿದ್ದವಳು,ಈಗ ಮನೆಗೆ ಬಂದ ಮೇಲೆ ಎಂದಿನ ಶುಕ್ರವಾರದಂತೆ(ಯಾವಾಗಲೂ ನಿಮ್ಮ ಲೇಕನವನ್ನು ನಾನು ರಾತ್ರಿಯೇ ಓದುವುದು)ನಿಮ್ಮ ಲೇಖನಕ್ಕಾಗಿ ’ಅವಧಿ’ ತೆರೆದರೆ ಎಂಥಾ ಆಶ್ಚರ್ಯ? ಕಥೆಗಳೊಳಗೆ ಬಹಳ ಸಹಜವಾಗಿ ಪ್ರವೇಶಿಸಿ, ನಿಮ್ಮ ಎಂದಿನ ಮೆಲುದನಿಯಲಿ ಕಥೆಗಳೊಳಗಿನ ಅಂತರಂಗವನ್ನು ಸರಾಗವಾಗಿ ಸ್ಪರ್ಶಿಸಿ,ಅಳವನ್ನು ತಡಕಿ, ಪದರೊಳಗಿನ ಸಾರವನ್ನು ಮೆದುವಾಗಿ ಎಳೆದು,ಅತ್ಯಂತ ಆಪ್ತವಾಗಿ ಅದನ್ನು ತೆರೆದಿಡುವ ಪರಿಯೇ,ಬರೆದವರು ಯಾರೇ ಆದರೂ ಅವರ ಅಂತಃಕರಣವನ್ನು ತಟ್ಟಿಬಿಡುವಂತಹದು ಸಂಧ್ಯಾ. ನಿಮಗೆ ಹೇಗೆ ಧನ್ಯವಾದ ಹೇಳಬೇಕೋ ನನಗೆ ತಿಳಿಯುತ್ತಿಲ್ಲ.
    ಜೋಗಿ ಸರ್, ನೀವು ನನ್ನ ಕಥೆಗಳನ್ನು ಓದಿದ್ದೀರಿ ಅನ್ನುವುದೇ ಅತ್ಯಂತ ಸಂತೋಷದ ಸಂಗತಿ.ನಿಮಗೂ ನನ್ನ ಹೃದಯಪೂರ್ವಕ ನಮನಗಳು ಸಾರ್.

  9. mmshaik

    very nice..madam..!!!!!!!!!!!i like it..

  10. vidyashankar

    ಜಯಶ್ರೀ ಕಾಸರವಳ್ಳಿಯವರ ಕತೆಗಳಷ್ಟೇ ನಿಮ್ಮ ಲೇಖನ ಕೂಡ ಆಪ್ತವಾಗಿದೆ. ಮತ್ತೊಮ್ಮೆ ಅವರ ಕತೆಗಳ ಓದಲು ಪ್ರೇರೇಪಿಸುತ್ತಿದೆ.

  11. Anonymous

    ವಿಮರ್ಶೆಯೆಂದರೆ ಹೀಗಿರಬೇಕು. ಮುನ್ನುಡಿ ಏಕೆ ಬೇಕು? ಸಂಧ್ಯಾ ರಾಣಿ ಖುಷಿಯಾಯಿತು. ಜಯಶ್ರೀ..ಪುಸ್ತಕ ಕೊಂಡು ಓದಿ ನಿಮ್ಮನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತೇನೆ. ಬಾಲ್ಯಗೆಳತಿ ಕಥೆ ಬರೆದರೆ ಕಥೆ ಎನಿಸಲ್ಲ. ಯಾರಿರಬಹುದು ಅಂತ ಪತ್ತೇದಾರಿಕೆ ಶುರುವಾಗುತ್ತೆ …. ಹಿಹಿಹ್ಹೀ…:-)

  12. Sangeeta Shenoy

    ಜಯಶ್ರೀ, ನಾನು ಸುಮನಾ/ ಸಂಗೀತಾ ಶೆಣೈ..ಈ ಮೇಲಿನ ಕಾಮೆಂಟ್ ನಾನು ಬರೆದದ್ದು. ಯಾರೋ anonymous ಅನಾಮಿಕಳು ಅಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading