ಶನಿವಾರ ಸಂಜೆ ಆಗುತ್ತಿದ್ದಂತೆ ಅಲ್ಲೊಂದು ಅಗೋಚರ ಸಂಭ್ರಮದ ವಾತಾವರಣ ಸೃಷ್ಟಿ ಆಗುತ್ತಿತ್ತು. ಮನೆಯ ಪಕ್ಕದಲ್ಲೇ ಸಾಗುತ್ತಿದ್ದ ಬೆಂಗಳೂರು – ಬಳ್ಳಾರಿ ರೋಡ್ ಗೂ ಒಂದು ಧಡಕಿ ಬಂದಂತೆ, ಇದ್ದಕ್ಕಿದ್ದಂತೆ ವಾಹನಗಳ ಸಂಚಾರ ಹೆಚ್ಚಾಗುತ್ತಿತ್ತು. ಹೊಲದ ಕಡೆಯಿಂದ, ಗೋಮಾಳದಿಂದ ಹಸುಗಳು ವಾಪಸ್ ಬರುತ್ತಿದ್ದರೆ ಹೈ ವೇ ಪಕ್ಕದಲ್ಲೇ ’ಗೋಧೂಳಿ ಹಾರುವ ಹೊತ್ತು’ ಅಚಾನಕ್ ಸೃಷ್ಟಿ ಆಗುತ್ತಿತ್ತು. ಮನೆ ಎದುರಿಗಿನ ಬಯಲಿನಲ್ಲಿ ಛೋಟಾಸಾಬಿ ಮನೆ, ಅಲ್ಲೇ ಎದುರಲ್ಲಿ ದನಗಳ ಕಾಲಿಗೆ ’ಟಣ್ ಟಣ್’ ಶಬ್ಧ ಹೊರಡಿಸುತ್ತಾ, ಹೊಳೆ ಹೊಳೆಯುವ ಚಪ್ಪಲಿ ಬೆಸೆಯುತ್ತಿದ್ದ ದೃಶ್ಯ. ಮನೆ ಪಕ್ಕದ ಗಿರಣಿ, ಅದನ್ನು ಯಾಕೋ ಮಿಶನ್ ಮನೆ ಅನ್ನುತ್ತಿದ್ದರು.
ಅಲ್ಲಿ ಆ ದಿನ ರಾಗಿ ಹಿಟ್ಟು ಮಾಡಿಸಲು ಬರುತ್ತಿದ್ದವರೂ ಜಾಸ್ತಿ. ಮಧ್ಯ ಮಧ್ಯ ಕೆಲವರು ಭತ್ತ ಮಿಶನ್ ಗೆ ಹಾಕಿಸಲು ಬರುತ್ತಿದ್ದರು. ಅದಕ್ಕೆ ಬೇರೆ ಮಿಶೀನು. ಅವುಗಳ ನಡುವೆ ಅಕ್ಕಿ ಹಿಟ್ಟು ಮಾಡಿಸಲು ಬರುವವರು, ಹಿಟ್ಟು ರಾಗಿ ಹಿಟ್ಟಿನ ಜೊತೆ ಬೆರೆತು ಕಪ್ಪಾಗಬಾರದೆಂದು ಒಂದಿಷ್ಟು ಅಕ್ಕಿ ಪ್ರತ್ಯೇಕವಾಗಿ ತರುತ್ತಿದ್ದರು. ಮೊದಲು ಅದನ್ನು ಮಿಶೀನಿಗೆ ಹಾಕಿಸಿ, ಆಮೇಲೆ ಇನ್ನೊಂದು ಗೂಡೆಯಲ್ಲಿದ್ದ ಅಕ್ಕಿ ಹಾಕಿಸೋರು. ಮಿಶೀನಿಗೆ ತಾಕಿ ಇದ್ದ ದೊಡ್ಡ, ದೊಡ್ಡ ಚಕ್ರಗಳು, ಅವುಗಳನ್ನು ಬಳಸಿ, ಬಳುಕುತ್ತಾ ಸಾಗುತ್ತಿದ್ದ ಬೆಲ್ಟ್, ಅದಕ್ಕೆ ಅಲ್ಲಲ್ಲಿ ಹಾಕಿದ್ದ ತೇಪೆ.
ಮನೆ ಈಚೆ ಪಕ್ಕ ಒಂದು ಚಿಲ್ಲರೆ ಅಂಗಡಿ. ಅಂಗಡಿಯಲ್ಲಿ ಅಜ್ಜ, ಸೋದರಮಾವ ಇರುತ್ತಿದ್ದರು. ವಾರಕ್ಕೆರಡು ಬಾರಿ ಅಂಗಡಿಗೆ ಸಾಮಾನು ತರಲು ಅಜ್ಜ ಹೋದರೆ, ನಾನು ಅಂಗಡಿಯಲ್ಲಿ ತಾತ್ಕಾಲಿಕ ಕ್ಯಾಷಿಯರ್! ಅಗಾಗ ತಿನ್ನಲು ಖಾರ ಹಚ್ಚಿದ ಕಡಲೆ ಬೀಜ, ಗಾಜಿನ ಡಬ್ಬಿಯಲ್ಲಿ ಬಿಂಕದಿಂದ ಕೂತಿರುತ್ತಿದ್ದ ಬೆಣ್ಣೆ ಬಿಸ್ಕತ್ತು, ಅಂಗಡಿ ಮುಚ್ಚಿದ ಮೇಲೆ ಬನ್ನು ಮತ್ತು ಗುಲ್ಕನ್ನು … ಇನ್ನೇನು ಬೇಕು ನನಗೆ?! ಅಂಗಡಿಯಲ್ಲಿ ಕೂರಲು ತುದಿಗಾಲಲ್ಲಿ ನಿಂತಿರುತ್ತಿದ್ದೆ.
ಆ ಅಂಗಡಿ ಒಂದು ವಿಶ್ವವನ್ನೇ ನನ್ನ ಜಗತ್ತಿಗೆ ತುಂಬುತ್ತಿತ್ತು. ಮಾಟವಾಗಿ ಜೋಡಿಸಿರುತ್ತಿದ್ದ ವೀಳೆದೆಲೆಯನ್ನು ಹಾಗೇ ಒಂದು ಕಟ್ಟು ಐದು ಬೆರಳುಗಳನ್ನೂ ಬಳಸಿ ತೆಗೆಯುವುದು, ಕಟ್ಟುವುದು, ಪೇಪರ್ ನಲ್ಲಿ ಪೊಟ್ಟಣ ಕಟ್ಟುವುದು, ಅಲ್ಲೇ ಮೇಲೆ ಸುತ್ತಿರುತ್ತಿದ್ದ ಟ್ವೈನ್ ದಾರದಿಂದ ಪಕ್ಕದಲ್ಲೇ ಇದ್ದ ವಿಶಿಷ್ಟ ಪರಿಮಳದ ನೀಲಿ ಬಣ್ಣದ ಕಸ್ತೂರಿ ಸೋಪನ್ನು ಗೆರೆ ನೋಡಿ ಕತ್ತರಿಸುವುದು ಎಲ್ಲಾ ಕಲಿತಿದ್ದೆ. ಶನಿವಾರ ಬಟವಾಡೆ, ವಾರದ ಕೆಲಸದ ಹಣ ಸಿಗುತ್ತಿತ್ತು, ಕೆಲವರು ಬರುವಾಗಲೇ ಒಂದು ರೌಂಡು ಪರಮಾತ್ಮನನ್ನು ಏರಿಸೇ ಬಂದಿರುತ್ತಿದ್ದರಿಂದ ಸಣ್ಣದಾಗಿ ತೂರಾಡುತ್ತಾ ಒಂದೊಂದೇ ಸಾಮಾನು ಕಟ್ಟಿಸುತ್ತಿದ್ದರು. ಅವರ ಮಾತು, ಅಲ್ಲಿ ಚಿಮ್ಮುತ್ತಿದ್ದ ಹಾಸ್ಯ, ಕೊಸರು, ಸಣ್ಣ ಸಣ್ಣ ಜಗಳಗಳು, ಹೈ ವೇಯಲ್ಲಿ ಹೋಗುತ್ತಿದ್ದ ದೊಡ್ಡ ದೊಡ್ಡ ಲಾರಿಗಳ ಪಂಜಾಬಿ ಡ್ರೈವರ್ ಗಳು ಆಗಾಗ ಗಾಡಿ ನಿಲ್ಲಿಸಿ ಕೊಳ್ಳುತ್ತಿದ್ದ ಚಾರ್ ಮಿನಾರ್ ಸಿಗರೇಟು .. ಅಷ್ಟರಲ್ಲಿ ಬಯಲಾಚೆಗಿನ ಟೆಂಟ್ನಲ್ಲಿ ಶುರುವಾಗುತ್ತಿದ್ದ ’ನಮೋ ವೆಂಕಟೇಶ, ನಮೋ ತಿರುಮಲೇಶ..’ ಹಾಡು.. ಇವೆಲ್ಲಾ ನನ್ನ ಪುಸ್ತಕದ ಹಾಳೆಗಳು.
ಅಂಗಡಿಗೆ ಬರುತ್ತಿದ್ದ ಪಂಚೆ ಉಟ್ಟವರು, ಪಟಾಪಟಿ ನಿಕ್ಕರ್, ಜುಬ್ಬದಂತಹ ಅಂಗಿ ತೊಟ್ಟವರ ನಡುವೆ ಬಿಳಿ ಖಾದಿ ಬಟ್ಟೆಯ ಯೂನಿಫಾರ್ಮ್ ತೊಟ್ಟವರೂ ಬರುತ್ತಿದ್ದರು. ಅವರೆಲ್ಲಾ ಅಲ್ಲೇ ಪಕ್ಕದ ಜೈಲಿನಿಂದ ಬರುತ್ತಿದ್ದರು. ಹೌದು ಜೈಲಿನಿಂದ. ಆದರೆ ಅವರನ್ನು ಸಂಕೋಲೆಗಳು ಬಂಧಿಸುತ್ತಿರಲಿಲ್ಲ, ಅವರ ಸುತ್ತಾ ದೊಡ್ಡ ದೊಡ್ಡ ಗೋಡೆಗಳಿರಲಿಲ್ಲ, ಅವರನ್ನು ಬ್ಯಾರಾಕ್ ಗಳಲ್ಲಿ ಕೂಡಿಹಾಕುತ್ತಿರಲಿಲ್ಲ. ಅದೊಂದು ವಿಶಿಷ್ಟವಾದ ಜೈಲು. ಜೈಲೆಂದರೆ ಜೈಲು, ಅಲ್ಲ ಅಂದರೆ ಇಲ್ಲ.
ಬೆಂಗಳೂರಿನಿಂದ ಸುಮಾರು ೪೦-೪೫ ಕಿಮೀ ದೂರದಲ್ಲಿ, ದೇವನಹಳ್ಳಿ ತಾಲೂಕಿನ ಬಳಿ ಇರುವ ಕೋರಮಂಗಲ ಬಯಲು ಬಂದಿಖಾನೆ ಅದು. ಬೆಂಗಳೂರಿನಿಂದ, ಈಗಿರುವ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಸಾಗಿ, ದೇವನಹಳ್ಳಿ ದಾಟಿದ ಮೇಲೆ, ಸುಮಾರು ಮೂರು ಮೈಲಿ ನಂತರ ಸಿಗುವ ಊರು ಆವತಿ, ಕೆಂಪೇಗೌಡರ ವಂಶಸ್ಥರ ಊರು. ಅಲ್ಲಿ ಬಸ್ ಸ್ಟ್ಯಾಂಡ್ ಬಳಿ ಬಲಕ್ಕೆ ತಿರುಗಿ ನಡೆಯುತ್ತಾ ಹೋದರೆ, ಸುಮಾರು ೪-೫ ಕಿಮೀ ಗಳಲ್ಲಿ ಕೋರಮಂಗಲ ಸಿಗುತ್ತದೆ. ಅಲ್ಲಿ ಸುಮಾರು ೧೩೦ ಎಕರೆ ಜಾಗದಲ್ಲಿದೆ ಈ ಬಯಲು ಬಂದಿಖಾನೆ. ಕಾರಾಗೃಹದ ನಿಮ್ಮ ಎಲ್ಲಾ ಕಲ್ಪನೆಗಳನ್ನು ಕಿತ್ತು ಹಾಕುವ ಜಾಗ ಇದು. ಅದ್ಭುತವಾದ ದ್ರಾಕ್ಷಿ ತೋಟ, ನೀಟಾದ ಪಾತಿಯಲ್ಲಿ ಹೊಳೆಯುವ ಟೊಮ್ಯಾಟೋ, ಬೀನ್ಸ್, ಬದನೆ. ಪಕ್ಕದ ಮಡಿಯಲ್ಲಿ ಶಿಸ್ತಿನಿಂದ ಬೆಳೆದ ಸೊಪ್ಪು. ಅಲ್ಲಿ ಬಂಧನವಿಲ್ಲ, ಅಲ್ಲಿ ಸರಳುಗಳಿಲ್ಲ, ಅಲ್ಲಿ ಇಕ್ಕಟ್ಟಾದ ಕಪ್ಪು ಕೊಠಡಿಗಳಿಲ್ಲ. ಅಲ್ಲಿರುವ ಬೇಲಿ ಅಲ್ಲಿರುವ ಖೈದಿಗಳು ಓಡಿ ಹೋಗದಿರಲಿ ಎಂದು ಕಟ್ಟಿದ್ದಲ್ಲ, ಸುತ್ತ ಮುತ್ತಲಿನ ರೈತರು ಜಮೀನು ಒತ್ತರಿಸಿಕೊಳ್ಳದಿರಲಿ ಎಂದು ಕಟ್ಟಿರುವುದು! ಅಲ್ಲಿದ್ದ ಖೈದಿಗಳು, (ಅವರನ್ನು ಹಾಗೆ ಕರೆಯುವುದೇ ಒಂದು ವಿಡಂಬನೆ ಎಂದು ಈಗ ಅನ್ನಿಸುತ್ತಿದೆ, ಆದರೆ ಆಗ ಎಲ್ಲರೂ ಹಾಗೆ ಕರೆಯುತ್ತಿದ್ದರು, ನಾವೂ ಹಾಗೆ,ಅ ಅವರ ಮುಂದೆಯೇ ಕರೆಯುತ್ತಿದ್ದೆವು, ಅವರು ಯಾವತ್ತೂ ಸಿಟ್ಟು ಮಾಡಿಕೊಂಡಿರಲಿಲ್ಲ..) ಆ ಬಂದಿಖಾನೆಯ ಕೃಷಿಕರು. ಅಲ್ಲಿದ್ದ ದ್ರಾಕ್ಷಿ, ತರಕಾರಿ ಎಲ್ಲಾ ಅವರೇ ಬೆಳೆಯುತ್ತಿದ್ದರು. ಜೊತೆಯಲ್ಲಿ ಅಲ್ಲಿ ಕಂಬಳಿ ಸಹ ನೇಯುತ್ತಿದ್ದರು ಎಂದು ನೆನಪು. ಮೊದಲ ಸಲ ಅಪರಾಧ ಮಾಡಿದವರು, ಶಿಕ್ಷೆಯ ಮುಕ್ಕಾಲು ಪಾಲು ಅವಧಿ ಮುಗಿಸಿದವರನ್ನು ಅಲ್ಲಿ ಇರಿಸುತ್ತಿದ್ದರು. ಬೇಸಿಗೆ ರಜೆಗೆ ಅಜ್ಜಿ ಮನೆಗೆ ಹೋದಾಗ ಅಲ್ಲಿಂದ ಬರುವುದಕ್ಕೆ ಮೊದಲು ಒಮ್ಮೆಯಾದರೂ ಇಲ್ಲಿಗೆ ಹೋಗಲೇಬೇಕು, ಅಲ್ಲೆಲ್ಲಾ ಸುತ್ತಾಡಿ, ದ್ರಾಕ್ಷಿ ಕೊಂಡು, ತಿಂದು, ಕಟ್ಟಿಸಿಕೊಂಡು, ಅಲ್ಲಿರುತ್ತಿದ್ದ ನಾಯಿ ಮರಿಗಳ ಜೊತೆಯಲ್ಲಿ ಆಟವಾಡಿ, ರಾತ್ರಿ ಮನೆಗೆ ವಾಪಸ್.

ಯಾವುದೇ ಬಂಧನ ಇಲ್ಲದಿದ್ದರೂ ಅವರು ಯಾರೂ ಓಡಿಹೋಗುತ್ತಿರಲಿಲ್ಲ. ಅಲ್ಲಿಂದ ಯಾವುದೋ ಕಾರಣಕ್ಕೆ ಓಡಿ ಹೋಗಿ, ಒಂದು ದಿನದೊಳಗೆ ಮತ್ತೆ ವಾಪಸ್ಸು ಬಂದ ಅಜ್ಜ ದೊಡ್ಡ ಬಸ್ಯಪ್ಪ. ಅವರೆಲ್ಲಾ ವಾರಕ್ಕೊಮ್ಮೆ ಅಜ್ಜನ ಅಂಗಡಿಗೆ ಬರುತ್ತಿದ್ದರು, ಎಷ್ಟೋ ವರ್ಷಗಳಿಂದ ಬರುತ್ತಿದ್ದರು, ಆದರೆ ಎಲ್ಲರೂ ನಮ್ಮ ಪಾಲಿಗೆ ’ಖೈದಿ’ಗಳೇ. ಆದರೆ ಈ ಅಜ್ಜ, ಅಜ್ಜ ಅಂದರೆ ಅಂತಹ ವಯಸ್ಸೇನೂ ಆಗಿರಲಿಲ್ಲ, ಅರೆ ಬರೆ ನೆರೆತ ಕೂದಲು, ಯಾವಾಗ್ಲೂ ಮುಳ್ಳು ಗಡ್ಡ, ಇಷ್ಟಗಲ ಮುಖ, ದೊಡ್ಡ ಮೀಸೆ, ಮೀಸೆ ತುದಿಯಿಂದಾ, ಕೆನ್ನೆ ಅಂಚಿನಿಂದ ಸದಾ ಜರುತ್ತದೇನೋ ಅಂತಿರುತ್ತಿದ್ದ ನಗು.. ಎಲ್ಲರೂ ಅವರನ್ನು ಬಸಪ್ಪಜ್ಜ ಎಂದೇ ಕರೆಯುತ್ತಿದ್ದರು. ಈ ಬಸಪ್ಪಜ್ಜ ಒಮ್ಮೆ ಶನಿವಾರ ಸಾಮಾನು ತರಲೆಂದು ಬಂದವರು ವಾಪಸ್ಸು ಹೋಗದೆ, ನಡೆದು ಎಲ್ಲೋ ಹೋಗಿಬಿಟ್ಟಿದ್ದಾರೆ, ರಾತ್ರಿ ಎಣಿಕೆ ಸಂದರ್ಭದಲ್ಲಿ ಗೊತ್ತಾಗಿ ವಾರ್ಡನ್ ಒಬ್ಬರು ವಿಚಾರಣೆಗೆ ಬಂದಾಗ ನಮಗೆಲ್ಲಾ ಸುದ್ದಿ ಗೊತ್ತಾಗಿ ಅವತ್ತಿನ ಮಟ್ಟಿಗೆ ಅದು ಬ್ರೇಕಿಂಗ್ ನ್ಯೂಸ್, ತಮಾಷೆ ಅಂದ್ರೆ ಇವರು ವಾಪಸ್ಸು ಹೋಗೋಷ್ಟ್ರಲ್ಲಿ ಆ ಬಸಪ್ಪಜ್ಜ, ಅವರಿವರನ್ನು ವಿಳಾಸ ಕೇಳಿಕೊಂಡು, ವಾಪಸ್ ಬಂದು ಜೈಲಿನ ಬಾಗಿಲು ಬಡೀತಾ ನಿಂತಿದ್ರಂತೆ!
ಹೀಗೆ ವಾಪಸ್ ಬಂದು ಫೇಮಸ್ ಆದ ಬಸಪ್ಪಜ್ಜನ್ನ ಕಂಡರೆ ನಮಗೆಲ್ಲಾ ಏನೋ ಸೋಜಿಗ. ಆದರೆ ಆ ಸೋಜಿಗವನ್ನು ದಾಟಿ ಬಸಪ್ಪಜ್ಜ ನಮಗೆ ಹತ್ತಿರ ಆಗಿದ್ದರು… ಅದಕ್ಕೆ ಒಂದು ಘಟನೆ ಕಾರಣ ಆಯಿತು. ಅಲ್ಲಿ ಜೈಲಿನಲ್ಲಿ ಒಬ್ಬರು ಇವರನ್ನೆಲ್ಲಾ ನೋಡಿಕೊಳ್ಳೋ ಅಧಿಕಾರಿ ಇದ್ದರು, ಬಡ್ ಭಡ್ ಎಂದು ಸದ್ದು ಮಾಡುವ ಜಾವಾ ಬೈಕಿನಲ್ಲಿ ಬರ್ತಾ ಇದ್ದರು, ದೊಡ್ಡ ಮೀಸೆ, ಜೋರು ಜೋರು ಮಾತು, ನಗು. ದೊಡ್ಡವರಿಗೆಲ್ಲಾ ಅವರು ಬಂದರೆ ಖುಷಿ. ಊರಲ್ಲಿನ, ಸೀಮೆಯಾಚೆಯ ಸುದ್ದಿಯನ್ನೆಲ್ಲಾ, ಹೇಳ್ತಾ ಇದ್ದರು, ಹರಟೆಗೆ ಇವರನ್ನು ಬಿಟ್ಟರಿಲ್ಲ. ಆದರೆ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಇವರು ಎಂದರೆ ನಡುಕ. ಕಲ್ಲಾಟ, ಹುಣಿಸೆ ಬೀಜದಾಟ, ಅಳಗುಳಿ ಮನೆ ಆಟ ಆಡುತ್ತಾ ಜಗುಲಿಯಲ್ಲಿ ಕೂತಿರುತ್ತಿದ್ದ ಹುಡುಗಿಯರನ್ನು ಅನಾಮತ್ತಾಗಿ ಹಿಂದಿನಿಂದ ಬಂದು ಹಿಡಿದು, ಎತ್ತಿಕೊಂಡು, ಮುತ್ತು ಕೊಟ್ಟು, ಆಲ್ಲೇ ಅಂಗಡಿಯಲ್ಲಿ ಚಾಕಲೇಟ್ ಸಹಾ ಕೊಡಿಸುತ್ತಿದ್ದರು. ಯಾರೇ ನೋಡಲಿ ಅದು ಮಕ್ಕಳೆಂದರೆ ತುಂಬಾ ಪ್ರೀತಿ ಇರುವ ವ್ಯಕ್ತಿಯ ಮುದ್ದು ಅನ್ನಿಸುತ್ತಿತ್ತು. ಆದರೆ ಯಾರೂ ಹೇಳದೆ, ವಿವರ ಏನೂ ತಿಳಿಯದಿದ್ದರೂ ಮಕ್ಕಳಿಗೆ ಅವರು ಅವಚಿ ಹಿಡಿವ ರೀತಿ ಅಸಹ್ಯ ಹುಟ್ಟಿಸುತ್ತಿತ್ತು, ನೋವಾಗುತ್ತಿತ್ತು. ಅವರು ಮುತ್ತು ಕೊಟ್ಟ ಮೇಲೆ ನೀರಿನಲ್ಲಿ ಉಜ್ಜಿದರೂ, ಸಾಮೂನು ಹಾಕಿ ತಿಕ್ಕಿದರೂ, ಆ ಎಂಜಲಿನ ಅಸಹ್ಯ ಹೋಗುತ್ತಲೇ ಇರಲಿಲ್ಲ. ಆದರೆ ಹೇಳೋದು ಯಾರಲ್ಲಿ? ಮೊದಲನೆಯದಾಗಿ ಅದನ್ನು ಹೇಳಬೇಕು ಅಂತಾನೇ ಗೊತ್ತಿರಲಿಲ್ಲ ನಮಗೆ. ೩-೪ ಕ್ಲಾಸಿನ ಮಕ್ಕಳು ನಾವು. ಯಾರೂ ನಮಗೆ ಗುಡ್ ಟಚ್, ಬ್ಯಾಡ್ ಟಚ್ ಹೇಳಿಕೊಟ್ಟಿರಲಿಲ್ಲ. ಒಂದ್ಸಲ ನಾಲ್ಕನೇ ಕ್ಲಾಸ್ ಹುಡುಗಿ ಒಬ್ಬಳಿಗೆ, ದನ ಮೇಯಿಸುವ ಹುಡುಗನೊಬ್ಬ ಕಣ್ಣು ಹೊಡೆದು, ಅವಳು ಅದನ್ನು ಮೇಡಂ ಗೆ ಹೇಳಿ ಅದೊಂದು ದೊಡ್ಡ ಸುದ್ದಿ ಆಗಿಬಿಟ್ಟಿತ್ತು. ಆ ಹುಡುಗನ ಪಾಡಿರಲಿ, ಮೇಡಂ ಇವಳಿಗೆ ’ಆಗಲೆ ಕಣ್ಣು ಹೊಡೆಯೋದು ಅಂದ್ರೇನು ಅಂತ ಗೊತ್ತೇನೆ ನಿನಗೆ’ ಅಂತ ಬೈದು, ಸ್ಕೂಲಿನ ಎಲ್ಲರೂ ಬಂದು ಇವಳನ್ನು ನೋಡಿಕೊಂಡು ಹೋಗುತ್ತಿದ್ದರು. ಹಾಗಾಗಿ, ಏನೇ ಆಗಲಿ ದೊಡ್ಡವರಿಗೆ ಹೇಳೋದು ಜಾಸ್ತಿ ಅಪಾಯಕಾರಿ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದಿದ್ದರು. ಹಾಗಿರುವಾಗ ಈ ’ಬೈಕ್ ಮಾಮ’ ನ ಕಾಟಕ್ಕೆ ಏನು ಮಾಡೋದು?
ಒಂದ್ಸಲ ಹೀಗೇ ಆಗಿತ್ತು, ಪದ್ಮಳನ್ನು ಈ ಮಾಮ ಹಿಡಿದು, ಮುತ್ತುಕೊಟ್ಟು, ಅವರ ಎಂಜಲು ಕೆನ್ನೆಗೆ ಮೆತ್ತಿ, ಓಕರಿಸಿಕೊಂಡೇ ಹೋಗಿ ಮುಖ ತೊಳೆದು ಬಂದಿದ್ದಳು ಪದ್ಮ. ಅಲ್ಲೇ ಅಂಗಡಿಯಲ್ಲಿ ಹೊಗೇ ಸೊಪ್ಪು ತೆಗೆದುಕೊಳ್ಳುತ್ತಿದ್ದ ಬಸಪ್ಪಜ್ಜ ಸುಮ್ಮನೆ ಬಂದು, ಜಗುಲಿ ಅಂಚಿಗೆ ಕೂತು, ಅಡಿಕೆ ಬಾಯಿಗೆ ಹಾಕಿಕೊಂಡು, ಎಲೆಯ ನಾರು ತೆಗೆಯುತ್ತಾ ಹೇಳಿದ್ದ, ’ಕಣ್ಣು ಮಾರಿ ಮ್ಯಾಲ ಎರಡಿರ್ತಾವು, ದ್ಯಾವ್ರು ಹೆಣ್ಣಿನ ಬೆನ್ನಿಗೂ ಎರಡು ಕಣ್ಣು ಕೊಟ್ಟಿರ್ತಾನವ್ವ… ನೋಡಬೇಕು, ಸುಮ್ಮನೇ ಕೂರಬಾರದು, ಬ್ಯಾಡ ಅಂದ್ರೆ ತಿಳಿಸ್ ಹೇಳ್ ಬ್ಯಾಕು, ಕೈಕಾಲು ಬಡೀಬೇಕು, ಏನೂ ಆಗಲಿಲ್ಲಾಂದ್ರ ಓಡಬೇಕು… ಸುಮ್ಮನಿರಬಾರ್ದವ್ವ’ ಅಂತ.
ಆ ದಿನ ಅಷ್ಟೇ ಅಜ್ಜ ಹೇಳಿದ್ದು. ಜೈಲು ವಾಸ ಅನುಭವಿಸುತ್ತಿದ್ದ ಒಬ್ಬ ಖೈದಿಯಲ್ಲಿನ ಈ ಅಮ್ಮ ನನಗೆ ಆಗ ಅರ್ಥ ಆಗಿರಲಿಲ್ಲ. ಆಗ ಮೊದಲು ಅಚ್ಚರಿ ಆಗಿದ್ದು, ಯಾರಿಗೂ ಗೊತ್ತಾಗದ ನಮ್ಮ ಈ ಸಂಕಟ ಬಸಪ್ಪಜ್ಜನಿಗೆ ಗೊತ್ತಾಗಿದ್ದು ಹೇಗೆ ಅಂತ … ನಮ್ಮ ಸಂಕಟ ದೊಡ್ಡವರ ಪ್ರಪಂಚದ ಒಬ್ಬರಿಗೆ ಅರ್ಥವಾಗಿದ್ದೇ ಆಶ್ಚರ್ಯ ನಮಗಾಗ. ಬಸಪ್ಪಜ್ಜನ ಮಾತು ಆಮೇಲೆ ಸುಮಾರು ಸಲ ನೆನಪಿಗೆ ಬಂದಿದೆ. ಸುಮಾರು ಸಲ ನನ್ನ ಕಾಡಿದೆ, ಕೈ ಹಿಡಿದಿದೆ. ಆಮೇಲೆ ನಾನು ಅಂಗಡಿಯಲ್ಲಿ ಕೂತಾಗ ಬಸಪ್ಪಜ್ಜ ಬಂದರೆ, ಹೊಗೆಸೊಪ್ಪಿನ ಎಸಳು ಹೆಚ್ಚು ಮಾಡಿ ಕೊಡುತ್ತಿದ್ದೆ, ಅಡಿಕೆ ಅಂಗೈಲಿ ನೋಡುವಾಗ ಬೇಕೆಂದೆ ಎರಡು ಹೆಚ್ಚು ಹಾಕುತ್ತಿದ್ದೆ, ಎಲೆ ಹೆಚ್ಚು ಎಣಿಸುತ್ತಿದ್ದೆ. ಎಲೆ – ಅಡಿಕೆ ಲೆಕ್ಕ ಬಸಪ್ಪಜ್ಜನಿಗೆ ಗೊತ್ತಾಗುತ್ತಿರಲಿಲ್ಲ, ಆದರೆ ಹೊಗೆಸೊಪ್ಪಿನ ಆ ಹೆಚ್ಚು ಎಸಳನ್ನು ಪ್ರತಿ ಸಲ ಒಂದು ಬೆಳ್ಳನೆ ನಗುವಿನೊಂದಿಗೆ ಡಬ್ಬಿಗೆ ಮತ್ತೆ ಹಾಕಿ ಹೋಗುತ್ತಿದ್ದ, ಅದೂ ಮಾವನಿಗೆ ಗೊತ್ತಾಗದಂತೆ.
ಇವತ್ತು ರೇಡಿಯೋದಲ್ಲಿ ಅಮೀರ್ ಖಾನ್ ಸಂದರ್ಶನ, ’ಸತ್ಯ ಮೇವ ಜನತೆ’ಯ ಮಾತು, ಆಮೇಲೆ ಅದೇ ನೆನಪಲ್ಲಿ ಯೂಟ್ಯೂಬ್ ನಲ್ಲಿ ನೋಡಿದ ಸತ್ಯಮೇವ ಜಯತೆ. ಆದರೆ ಇವ್ಯಾವುದೂ ಇಲ್ಲದಿದ್ದಾಗಲೂ ಬಸಪ್ಪಜ್ಜ ಹೇಳಿದ ’ಕಣ್ಣು ಮಾರಿ ಮ್ಯಾಲ ಎರಡಿರ್ತಾವು, ದ್ಯಾವ್ರು ಹೆಣ್ಣಿನ ಬೆನ್ನಿಗೂ ಎರಡು ಕಣ್ಣು ಕೊಟ್ಟಿರ್ತಾನವ್ವ… ನೋಡಬೇಕು, ಸುಮ್ಮನೇ ಕೂರಬಾರದು, ಬ್ಯಾಡ ಅಂದ್ರೆ ತಿಳಿಸ್ ಹೇಳ್ ಬ್ಯಾಕು, ಕೈಕಾಲು ಬಡೀಬೇಕು, ಏನೂ ಆಗಲಿಲ್ಲಾಂದ್ರ ಓಡಬೇಕು… ಸುಮ್ಮನಿರಬಾರ್ದವ್ವ’ ಅನ್ನೋ ಮಾತು ಬಿಟ್ಟೂ ಬಿಡದೆ ನೆನಪಾಗುತ್ತಿದೆ. ಈ ನೆಪದಲ್ಲಿ ಆ ಅಜ್ಜನಿಗೊಂದು ಸಲಾಂ…
ಸಂಧ್ಯಾರಾಣಿ ಕಾಲಂ : ಅಮೀರ್ ಖಾನ್ ಇಲ್ಲದ ಕಾಲದಲ್ಲಿ ಈ ಬಸಪ್ಪಜ್ಜ…
ನಿಮಗೆ ಇವೂ ಇಷ್ಟವಾಗಬಹುದು…

ಪ್ರಾಯಶ ಪ್ರತಿಭಟಿಸಬೇಕು ಎಂದು ಕೂಡಾ ಅರಿವಿರದ ದಿನಗಳವು – ಅವರಿಗೂ ಕೂಡಾ ಅದು ತಪ್ಪೆಂದು ಅನಿಸುತ್ತಿರಲಿಲ್ಲವೋ ಏನೋ? ಬಸಪ್ಪಜ್ಜ ಪ್ರಪಂಚ ಕಂಡವನು ಎನಿಸುತ್ತದೆ -ಮೆಲಕು ಹಾಕುವಂತ ಮಾತುಗಳು.
ಸುಸ್ತಾದ ಹಾಗೆ ಅನ್ನಿಸಿತು,,,,ಒಂದು ಗಳಿಗೆ ಬಂದು ನಿಂತು ಹೋಗುವ ಡಿಪ್ರೆಶನ್,,,