ಸಂಘಮಿತ್ರೆ ನಾಗರಘಟ್ಟ
ಇದೇ ಕಣ್ಣುಗಳು
ಅವನನ್ನೂ – ಆ ಬಣ್ಣದ
ಜಿಂಕೆಯನ್ನು ಅರಸಿದ್ದು
ಮತ್ತೊಬ್ಬನ್ನ ಕಣ್ಣನ್ನು
ಮನಸ್ಸನ್ನು ಕೆಣಕಿದ್ದು
ಇದೇ ಕಣ್ಣಿನ ಅಂಚು
ನಗು-ಅಳುವೆಂಬ
ಕಂದಮ್ಮಗಳ ಹಡೆದು
ತೂಗಿ ಲಾಲಿಸಿ ಬೆಳೆಸಿದ್ದು
ಆದರೂ ಅವನು ಮಾತ್ರ
ಈ ಕಣ್ಣನ್ನು-ಅದರೊಳಗಿನ
ನಿಷ್ಠಾವಂತ ಒಲವನ್ನು
ಗಮನಿಸಲು ಆಗದೆ
ಅವಳು ಹಡೆದ
ಅವನದೇ ನಗು,
ಅಳುವನ್ನು ಗುರುತಿಸಲಾಗದೆ

ದೂರ ಸರಿದಾಗಲೂ
ಇದೇ ಕಣ್ಣುಗಳು
ಅವನ ಕಣ್ ತೆರೆಸಿದ್ದು
ಮನ ಅರಳಿಸಿದ್ದು
ಆದರೂ,
ಎಂದಿಗೂ ಯಾರಿಗೂ
ಕಾಣಿಸುವುದಿಲ್ಲ ಈ ಕಣ್ಣ
ಜ್ಯೋತಿ… ಒಮ್ಮೆ ಅಂಧನಾಗಿದ್ದ
ಅವನ ಕಣ್ಣುಗಳ ಮಾತ್ರ
ಇಂದಿಗೂ ಪೂಜಿಸುತ್ತೇವೆ
ಹಾಡಿ ಕೊಂಡಾಡುತ್ತೇವೆ
ಕ್ಷಮಿಸಿ…
ಈ ಆರಾಧನೆಯ
ನಡುವೆ ಈ ಕಣ್ಣುಗಳನ್ನು
ನೆನಪಿಸಿಕೊಳ್ಳೋಣ ಇಲ್ಲದಿದ್ದರೆ
ನಮ್ಮ ಎದೆಗಳಲ್ಲೂ
ಮನುಸ್ಮೃತಿಯ ಪುಟಗಳು
ತೆರೆದುಕೊಳ್ಳಬಹುದು..






0 Comments