ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗೀತಾ ಚಚಾಡಿ ಕಂಡಂತೆ ʼಜೋತಯ್ಯನ ಬಿದಿರು ಬುಟ್ಟಿಯʼ

ಸಂಗೀತಾ ಚಚಾಡಿ

ಪಿ ಯು ಸಿ ದಿನಗಳು. ಎರಡನೇ ವರ್ಷದ ಹೊತ್ತಿಗೋ ಅಥವಾ ಮೊದಲ ವರ್ಷದ ಉತ್ತರಾರ್ಧವೋ ಸರಿಯಾಗಿ ನೆನಪಿಲ್ಲ. ಉತ್ತರ ಕನ್ನಡದಿಂದ ಬಂದ ಆ ಇಬ್ಬರು ಹುಡುಗಿಯರು ಹೊಸದಾಗಿ ಕ್ಲಾಸ್ ಜಾಯಿನ್ ಆಗಿದ್ದರು. ಅದೇನೋ ಅಂತಾರಲ್ಲ, ‘ನಾನು ಬಂದ ಮೇಲೆ ನಂದೇ ಹವಾ’ ಹಾಗೆ, ಈ ಇಬ್ಬರು ಹುಡುಗಿಯರು ಬಂದ ತಕ್ಷಣದಿಂದಲೇ ಚಟ ಪಟ ಉತ್ತರಗಳನ್ನು ಹೇಳುತ್ತಾ ಇಡೀ ಕ್ಲಾಸ್ ನಲ್ಲಿ ತಮ್ಮದೇ ಛಾಪನ್ನು ಒತ್ತಿದ್ದರು. ಬರೀ ಓದಿನ ಬಗ್ಗೆ ಅಂತಲ್ಲ.

ಪರಿಸರದ ಬಗೆಗಿನ ಪ್ರೀತಿ ಮತ್ತು ಅದನ್ನು ಕಾಪಿಟ್ಟುಕೊಂಡು ಅದರೊಂದಿಗೆ ಬದುಕುವ ರೀತಿ ಇವೆಲ್ಲವುಗಳಿಂದಾಗಿ ಈ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದವರ ಬಗ್ಗೆ ಗೊತ್ತಿಲ್ಲದೇ ಗೊತ್ತಿರುವಂಥ ಒಂದು ಸಣ್ಣ ಅಭಿಮಾನ ನನಗೆ. ಅಂತೆಯೇ ನಮ್ಮ ತೇಜಸ್ವಿನಿ ಹೆಗಡೆಯವರ ಬಗ್ಗೆಯೂ ಕೂಡ. ಅವರ ಬರವಣಿಗೆಯಲ್ಲಿನ ಪ್ರಭುದ್ದತೆ, ತನ್ಮಯತೆ, ಶ್ರದ್ಧೆ ಇವೆಲ್ಲವುಗಳ ಜೊತೆ ಕಠಿಣತೆಯ ಒಂದು ಶಿಸ್ತು ಇವೆಲ್ಲವುಗಳಿಂದಾಗಿ ಅವರ ಬರಹಗಳನ್ನು ಓದುವದು ಎಂದರೆ ನನಗೆ ಅತ್ಯಂತ ಖುಷಿ. ಅವರ ಬರಹಗಳಲ್ಲಿ ಯಾವಾಗಲೂ ಪಾರದರ್ಶಕ ಮತ್ತು ಖಂಡತುಂಡ ಅಭಿಪ್ರಾಯಗಳಿವೆ.

ಹೀಗಾಗಿಯೇ ಕೊಂಚ ಸಮಯ ಸಿಕ್ಕಿದೆ, ಒಂದೊಳ್ಳೆ ಚಿತ್ರ ಅಥವಾ ಸಿರೀಸ್ ನೋಡಬೇಕು ಎನಿಸಿದಾಗೆಲ್ಲ ನಾನು ಹುಡುಕುವದು ತೇಜಸ್ವಿನಿ ಮತ್ತು ಸಂಧ್ಯಾರಾಣಿಯವರ ಗೋಡೆಗಳನ್ನು. ಅಲ್ಲಿ ಅವರು ಶಿಫಾರಸು ಮಾಡಿದ ಚಿತ್ರ ಅಥವಾ ಸಿರೀಸ್ ಗಳನ್ನು ನೋಡಿದಾಗ ಮೋಸ ಯಾವತ್ತೂ ಆಗಿಲ್ಲ. ಇನ್ನು ತೇಜಸ್ವಿನಿಯವರ ಪುಸ್ತಕವಾಗಲೀ ಅಥವಾ, ವೈಶಾಲಿ ಹೆಗಡೆಯವರ ಪುಸ್ತಕವಾಗಲೀ, ನನ್ನನ್ನು ಮೊದಲು ಆಕರ್ಷಿಸುವದು ಪುಸ್ತಕದ ಹೆಸರುಗಳೇ. ಹೆಸರಿನಂತೆಯೇ ಒಳಗಣ ಹೂರಣ ಕೂಡ ಅಷ್ಟೇ ಆಕರ್ಷಣೀಯ ಎಂದು ಬೇರೆ ಹೇಳಬೇಕಿಲ್ಲ. ಅಳುವಾಗ ಯಾರೂ ಬಂದಿಲ್ಲ, ಕಷ್ಟಪಡುವಾಗ ಒಬ್ಬರೂ ಕಂಡಿಲ್ಲ, ಅಂಥವರಿಗಂಜದೆ ಅರವತ್ತರ ವಯಸ್ಸಿನಲ್ಲಿ ಮದುವೆಗೆ ತಯಾರಾಗಿ, ತನಗೊಂದು ಗಂಡು ಹುಡುಕಲು ಹೇಳುವ, ನನ್ನ ಮನೆಯ ಯಜಮಾನ್ತಿ ನಾನೇ ಆಗಬೇಕಲ್ಲವಾ ?ಎಂದು ಪ್ರಶ್ನೆ ಹಾಕುವ ರತ್ನಾಳ ಪಾತ್ರ ಬಹಳ ಇಷ್ಟವಾಯ್ತು. ಇದ್ಯಾರು ಯಶವಂತಿ ? ತಾನಾಜಿಯ ಕಥೆಯಲ್ಲಿ ಕೇಳಿಯೇ ಇಲ್ಲವಲ್ಲ ಎಂದುಕೊಳ್ಳುತ್ತ, ತಾನಾಜಿಯ ಬಗ್ಗೆ ಅವಳಿಗಿರುವ ಕಾಳಜಿಯ ಬಗ್ಗೆ ಮಾರುಹೋಗುತ್ತ, ಕೊನೆಗೆ ಯಶವಂತಿ ಯಾರು ಎಂದು ತಿಳಿದಾಗ ಅಚ್ಚರಿಯೋ ಅಚ್ಚರಿ.

ಒಂದಷ್ಟು ಕ್ಲ್ಯೂ ಕೂಡ ಕೊಡದೇ ಯಶವಂತಿಯ ಬಗ್ಗೆ ಕುತೂಹಲ ಉಕ್ಕಿ ಹರಿಸುತ್ತಾರೆ. ತನ್ನಿಂದಾದಷ್ಟು ಅಥವಾ ಅದಕ್ಕೂ ಮೀರಿ ನಮ್ಮಪ್ಪ ನಮಗೆ ಮಾಡಿದ್ದೆದೆಂದರೆ, ನೌಕರಿಯಲ್ಲಿದಾಗ ಸಿಗುತ್ತಿದ್ದ ಪಾಸ್ ಸೌಲಭ್ಯದಿಂದ ಎಷ್ಟೋ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿದ್ದು, ಪ್ರತಿ ರಜೆಗೂ ಪ್ರವಾಸ ಮಾಡಿಸಿದ್ದು. ಅಪ್ಪನೆಂದರೆ ಅದು ಸುಮ್ಮನೇನಾ ? ಅಂತೆಯೇ “ಜೋತಯ್ಯನ ಬಿದಿರು ಬುಟ್ಟಿಯ” ಕಥೆಯಲ್ಲಿ ಜೋತಯ್ಯ, ನಡೆಯಲು ಆಗದ ಮಗನನ್ನು ಬಿದಿರು ಬುಟ್ಟಿಯಲ್ಲಿ ಕೂಡಿಸಿಕೊಂಡು ಬೆಟ್ಟ ಗುಡ್ಡ ಅಲೆಯುತ್ತಾ, ಆತ ಇರುವದರೊಳಗೆ ನನ್ನಿಂದಾದಷ್ಟು ಸ್ಥಳ ತೋರಿಸುವೆ ಎಂದು ಹೊತ್ತು ನಡೆಯುತ್ತಿದ್ದದ್ದನ್ನು ನೋಡಿದಾಗ ಅನಂತನ ಜೆಕಣ್ಣಾಲಿಗಳು ತುಂಬಿ ಬಂದಿದ್ದರಲ್ಲಿ ಆಶ್ಚರ್ಯ ಖಂಡಿತಾ ಇಲ್ಲ.

ಈ ನೆನಪು ಅನಂತನ ಮನದಲ್ಲಿ ಅದೆಷ್ಟು ಆಳವಾಗಿ ಬೇರೂರಿತ್ತೆಂದರೆ, ತನಗೆ ಅಲ್ಜಿಮರ್ ಕಾಯಿಲೆ ಬಂದಾಗ ಕೂಡ ಈ ಘಟನೆ ಮರೆಯಲಾರದಷ್ಟು. ಕಾಯಿಲೆಯಿಂದಾಗಿ ಎಲ್ಲಾ ಮರೆತು ಹೋಗಿ ಬರೀ ಉಸಿರಾಡುತ್ತಿದ್ದರೆ ಏನು ಪ್ರಯೋಜನ ಎಂದು ಕಡಲಿನಾಳದಲ್ಲಿಯಲು ಹೋದಾಗ, ಆತನನ್ನು ಎಚ್ಚರಿಸಿದ್ದು ಈ ಜೋತಯ್ಯನ ಬಿದಿರು ಬುಟ್ಟಿಯೇ. ಮನುಷ್ಯ ಎಷ್ಟೇ ಕುಸಿದರೂ, ಪೂರ್ತಿ ನೆಲ ಕಚ್ಚದಂತೆ ಹಿಡಿಯುವದು ಇಂತಹ ಕೆಲವು ನೆನಪುಗಳೇ. ಸುತ್ತಲೂ ಜನಗಳನ್ನು ತುಂಬಿಸಿಕೊಂಡಿರುತ್ತೇವೆ. ಆ ಗುಂಪು, ಈ ಗುಂಪು, ಪ್ರವಾಸ ಇತ್ಯಾದಿ ಇತ್ಯಾದಿ. ಆದರೆ ಸೀತಜ್ಜಿ ಹೇಳುವಂತೆ ಸುತ್ತಲೂ ಜನ ತುಂಬಿಕೊಂಡಿದ್ದರೂ, ಒಳಗಿನ ಸಂಕಟಕ್ಕೆ ಜೊತೆಯಾಗೋ ಜೀವವೊಂದು ಬೇರೆಯೇ ಇರುತ್ತದೆ ಮತ್ತು ಅದನ್ನು ಮನಸ್ಸು ಯಾವಾಗಲೂ ಬಯಸುತ್ತಿರುತ್ತದೆ.

ಸೀತಜ್ಜಿಯ ಹಸಿರು ಪತ್ತಲದ ಕಥೆಯ ಹಿಂದಿನ ರಹಸ್ಯವಂತೂ ಅದೆಷ್ಟು ಮಧುರ. ಪಾತಕ್ಕ ಅದರ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಹೇಳಿದಾಗಲೇ ನಾನು ಕಥೆಯ ಅಂತ್ಯವನ್ನು ಊಹೆ ಮಾಡಿದ್ದೆ. ನಾನು ಊಹೆ ಮಾಡಿದಂತೆಯೇ ಇದ್ದಿದ್ದು ಬಹಳ ಖುಷಿಯಾಯಿತು. ಆ ಹಸಿರು ಪತ್ತಲವನ್ನು ಇಟ್ಟವರು ಯಾರು ಎಂದು ತಿಳಿದಾಗ ಉಂಟಾಗುವ ಆ ಭಾವನೆಯನ್ನು ವರ್ಣಿಸಲು ಶಬ್ದಗಳು ಸಾಲವು. ಅಲ್ಲೊಂದು ನವಿರಾದ ಪ್ರಣಯವಿದೆ. ಯಶವಂತಿಯ ಪಾತ್ರದಿಂದ ಹಿಡಿದು ರತ್ನಿಯ ಪಾತ್ರದವರೆಗೂ ವಿವಿಧತೆಗಳು, ವಿಧ ವಿಧ ಸಂಘರ್ಷಗಳು. ಎಲ್ಲ ಕಥೆಗಳ ಬಗ್ಗೆ ಇನ್ನಷ್ಟು ಮತ್ತಷ್ಟು ಬರೆಯುತ್ತಾ ಹೋಗುವ ಇರಾದೆಯಿಲ್ಲ. ಆದರೆ ಖಂಡಿತ ಕೊಂಡು, ಓದಿ, ಅನುಭವಿಸಿ, ಅನುಭಾವಿಸಬೇಕಾದ ಪುಸ್ತಕ. ಮನಸ್ಸು ಒದ್ದೆಯಾಗುವದು ನಿಜ.

‍ಲೇಖಕರು Admin

30 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading