ವಿದ್ಯಾ ಎನ್ ಆರ್
ಭಾಷೆ ಎಂಬುದು ಕೇವಲ ಪದಗಳಲ್ಲ, ಅದೊಂದು ಸಂಸ್ಕೃತಿ, ಸಂಪ್ರದಾಯ, ಒಂದಿಡೀ ಸಮುದಾಯವನ್ನು ಒಗ್ಗೂಡಿಸುವ ಶಕ್ತಿ, ಇಡೀ ಸಮುದಾಯದ ಇತಿಹಾಸವೇ ಆಗಿದೆ ಎನ್ನುತ್ತಾರೆ ಅಮೆರಿಕಾದ ಭಾಷ ಶಾಸ್ತ್ರಜ್ಞ ನೋಮ್‌ಚಾಮ್ಸ್ಕಿ. ಇಂತದ್ದೊಂದು ಭಾಷೆ ಕಣ್ಮರೆಯಾದರೆ? ಮನುಕುಲಕ್ಕೆ ಅದರಿಂದಾಗುವ ನಷ್ಟದ ಅಂದಾಜು ಕೂಡ ಊಹಿಸಲಾಗದು.
ಅರೆ ಅದ್ಹೇಗೆ ಎನ್ನುವಿರಾ, ಕಳೆದ ಆಗಸ್ಟ್‌ನಲ್ಲಿ ಬುಡಕಟ್ಟು ವ್ಯಕ್ತಿಯೋರ್ವನ ಸಾವು ಪ್ರಪಂಚದಾದ್ಯಂತ ಭಾರಿ ಚರ್ಚೆಗೀಡಾಯಿತು. ಕಾರಣ ಅಮೆಜಾನ್ ಅರಣ್ಯ ಪ್ರದೇಶಕ್ಕೆ ಸೀಮಿತವಾದ ಸ್ಥಳೀಯ ಬುಡಕಟ್ಟೊಂದರ ಕಟ್ಟಕಡೆಯ ಪ್ರತಿನಿಧಿ ಆ ಮೃತವ್ಯಕ್ತಿ.
ಆ ಸಾವಿನ ಮೂಲಕ ಒಂದಿಡೀ ಬುಡಕಟ್ಟು ಸಮುದಾಯದ ಕೊನೆಯ ಕೊಂಡಿ ಕಳಚಿದ್ದು, ದಿನನಿತ್ಯ ನಮ್ಮೆಲ್ಲರ ನಡುವೆಯೇ ಅಳಿದುಹೋಗುತ್ತಿರುವ ಎಷ್ಟೋ ಭಾಷೆಗಳ ಬಗ್ಗೆ ಚಿಂತಿಸುವಂತೆ ಮಾಡಿತು.
ಆತ ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕ ಕಳೆದುಕೊಂಡು ಮೂವತ್ತು ವರ್ಷಗಳೇ ಕಳೆದುಹೋಗಿದ್ದವು. ನಾಗರಿಕ ಪ್ರಪಂಚದಿಂದ ಎದುರಿಸಿದ ಆಘಾತಕಾರಿ ಘಟನೆಗಳೇ ಆತನನ್ನು ಎಲ್ಲರಿಂದ ಅಜ್ಞಾತ ವಾಸಕ್ಕೊಳಗಾಗುವಂತೆ ಮಾಡಿದ್ದವು.
‘ಮ್ಯಾನ್ ಆಫ್ ಹೋಲ್’
ಅಮೆಜಾನ್ ಬುಡಕಟ್ಟಿನ ಆ ವ್ಯಕ್ತಿಯನ್ನು ʼಮ್ಯಾನ್ ಆಫ್ ಹೋಲ್ʼ ಎಂದು ಗುರುತಿಸಲಾಗುತ್ತಿತ್ತು. ಬ್ರೆಜಿಲ್‌ನ ರೊಂಡಾನಿಯಾದ ಸ್ಥಳೀಯ ತನಾರು ಬುಡಕಟ್ಟಿಗೆ ಸೇರಿದ ಈತ ಕೊರೆಯುತ್ತಿದ್ದ ದೊಡ್ಡ ದೊಡ್ಡ ಗುಂಡಿಗಳೇ ಆತನಿಗೆ ʼಮ್ಯಾನ್ ಆಫ್ ಹೋಲ್ʼ ಹೆಸರು ತಂದುಕೊಡಲು ಕಾರಣ.

ಯಾರೇ ಆತನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ ಈಟಿ, ಬಾಣಗಳಿಂದಲೇ ಆತ ಉತ್ತರಿಸುತ್ತಿದ್ದ ಎನ್ನುತ್ತಾರೆ ಸಂಶೋಧಕರು. ಬಾಹ್ಯ ಆಕ್ರಮಣಕಾರರಿಂದ ಆತನ ಸಮುದಾಯದ ಮೇಲೆ ನಡೆದ ಅಸಂಖ್ಯಾತ ಹತ್ಯಾಕಾಂಡಗಳೇ ಆತನನ್ನು ಮಾನವ ಸಂಕುಲದಿಂದ ದೂರ ಉಳಿಸಿದವು ಎನ್ನುವುದು ನೋವಿನಸಂಗತಿ.
ಈತನ ಸಾವು ಜಗತ್ತಿನ ಬುಡಕಟ್ಟು ಜನಾಂಗಗಳು ಹಾಗು ಬುಡಕಟ್ಟು ಭಾಷಾ ಉಳಿಕೆ ಹೋರಾಟಗಾರರಲ್ಲಿ ಆತಂಕ ಸೃಷ್ಟಿಸಿದೆ.
‘ಭಾಷಾ ಉಳಿಕೆ ಸವಾಲು’
ಯಾವುದೇ ಭಾಷೆಯನ್ನು ಉಳಿಸಿಕೊಳ್ಳುವ ಮೂಲ ಉದ್ದೇಶ ಆ ಭಾಷೆಯಿಂದಿರುವ ಇಡೀ ಸಮುದಾಯದ ಜನರ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಂತದ್ದಾಗಿರುತ್ತದೆ.
ಬುಡಕಟ್ಟು ಭಾಷೆಗಳು ಆಯಾ ಪ್ರದೇಶದ ಸಸ್ಯ ಮತ್ತು ಪ್ರಾಣಿ ಸಂಕುಲದ, ಔಷದೀಯ ವನ್ಯತಳಿಗಳ ಬಗೆಗಿನ ಅಮೂಲ್ಯವಾದ ಭಂಡಾರವಾಗಿರುತ್ತವೆ. ಇಂತಹ ಅತ್ಯಮೂಲ್ಯ ಮಾಹಿತಿ ಅರಿವಿಗೆ ಭಾಷೆಯ ಉಳಿಕೆ ಅನಿವಾರ್ಯ.
ಏಳು ದಶಕಗಳ ಸ್ವಾತಂತ್ರ್ಯದ ನಂತರವೂ ಭಾರತ ಕೂಡ ಅನೇಕ ಬುಡಕಟ್ಟು ಭಾಷೆಗಳ ಅವನತಿಯ ಆತಂಕ ಎದುರಿಸುತ್ತಿದೆ.
ವರದಿಯೊಂದರ ಪ್ರಕಾರ, ಜಗತ್ತಿನ ಏಳು ಸಾವಿರ ಭಾಷೆಗಳು ಈಗಾಗಲೇ ಅಪಾಯದ ಅಂಚಿನಲ್ಲಿದ್ದು, ಭುವಿಯ ಅರ್ಧದಷ್ಟು ಭಾ಼ಷಾ ವೈವಿಧ್ಯತೆ ನಶಿಸಿಹೋಗುವ ಎಲ್ಲ ಸಾಧ್ಯತೆಗಳು ಸನಿಹದಲ್ಲಿವೆ. ಭಾರತವೊಂದರಲ್ಲೇ ಸುಮಾರು ೧೯೭ ಭಾಷೆಗಳು ಅಳಿವಿನಂಚಿನಲ್ಲಿವೆ ಎನ್ನುತ್ತದೆ ವರದಿ. ಇದರಲ್ಲಿ ಐದು ಬುಡಕಟ್ಟು ಭಾಷೆಗಳೂ ಕೂಡ ಸೇರಿದ್ದು, ಭಾಷಾ ತಜ್ಞರ ಪ್ರಕಾರ ಸಿಕ್ಕಿಂನ ಮಾಝಿ ಭಾಷೆ ಅತಿಹೆಚ್ಚು ಅಪಾಯ ಸ್ಥಿತಿ ತಲುಪಿದೆ.
ಪೀಪಲ್ಸ್ ಲಿಂಗ್ವಿಸ್ಟಿಕ್ಸ್ ಸವ್ರೆ ಆಫ್ ಇಂಡಿಯಾ ಸಂಶೋಧನೆ ಪ್ರಕಾರ ಸದ್ಯ ಒಂದೇ ಕುಟುಂಬದ ನಾಲ್ವರು ವ್ಯಕ್ತಿಗಳು ಮಾತ್ರ ಮಾಝಿ ಭಾಷೆಯನ್ನು ಬಳಸುತ್ತಾರೆ.
ಭಾಷೆ ಜೀವಂತಿಕೆಯೂ ಸೇರಿದಂತೆ ಸ್ಥಳೀಯ ಬುಡಕಟ್ಟು ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಕಳೆದ ವರ್ಷ ಜನವರಿಯಲ್ಲಿ ತಜ್ಞರ ಸಭೆಯೊಂದನ್ನು ಆಯೋಜಿಸಿತ್ತು. ಅಲ್ಲಿ ಭಾಗವಹಿಸಿದ್ದ ಅನೇಕ ದೇಶಗಳ ಭಾಷಾ ಶಾಸ್ತ್ರಜ್ಞರು ಭಾಷಾ ಉಳಿಕೆಗಾಗಿ ಕೆಲವು ಮಾರ್ಗಗಳನ್ನು ಅನುಸರಿಸಲು ಸಲಹೆ ನೀಡಿದರು. ಅಂತರ ಪೀಳಿಗೆಯ ನಡುವಿನ ಪ್ರಮುಖ ಸಂವಹನ, ಬುಡಕಟ್ಟು ಮಹಿಳೆಯರ ಪಾತ್ರ ಹಾಗೂ ಮಾತೃಭಾಷೆ ಕಲಿಕೆಗೆ ಒತ್ತು ನೀಡುವ ಮೂಲಕ ಸ್ಥಳೀಯ ಭಾಷೆಗಳ ಪುನರುಜ್ಜೀವನ ಅನಿವಾರ್ಯತೆ ಕುರಿತು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.






0 Comments