ಕಾಡಿದ ‘ಕಾಮರೂಪಿಗಳ್’

ಲಹರಿ ತಂತ್ರಿ

ರಾಮ!
ಸತ್ಯ ಹೇಳುತ್ತೇನೆ.. ಕೃಷ್ಣ ಕಾಡಿದಷ್ಟು ರಾಮ ಯಾವತ್ತಿಗೂ ಕಾಡಿಲ್ಲ. ಕೃಷ್ಣ ನಾವಂದುಕೊಂಡ ಪಾತ್ರಕ್ಕೆ, ಭಾವಕ್ಕೆ ತನ್ನಷ್ಟಕ್ಕೆ ತಾನೇ ಹೊಂದಬಲ್ಲ. ಆದರೆ ರಾಮನಿಗೆ ಅವನದೇ ಆದ ಗಾಂಭೀರ್ಯವಿದೆ. ಹುಡುಗಾಟಕ್ಕೆ ದಕ್ಕುವವನಲ್ಲ ರಾಮ. ಆದರೂ ಈ ಸಲದ ರಾಮನವಮಿ ಮುಗಿದಂದಿನಿಂದ ರಾಮ ಮತ್ತೆ ಮತ್ತೆ ನೆನಪಾಗುತ್ತಿದ್ದ. ಹೆಚ್.ಎಸ್.ವಿ ಯವರ ‘ಶ್ರೀರಾಮ ಗುಡಿಯಲ್ಲಿ ‘ ಕೇಳಿದ ಮೇಲಂತೂ ಮತ್ತೆ ಮತ್ತೆ ಮನಸ್ಸು ರಾಮನ ಸುತ್ತಲೇ ಸುತ್ತುತ್ತಿತ್ತು. ಕಾಕತಾಳೀಯ ಎಂಬಂತೆ ನೋಡಿದ್ದು ಕುವೆಂಪು ರವರ ‘ಶ್ರೀ ರಾಮಾಯಣ ದರ್ಶನಂ’ ಆಧಾರಿತ ‘ಕಾಮರೂಪಿಗಳ್’ ನಾಟಕ.

ನಾಟಕದ ಶುರುವಿನಲ್ಲಿಯೇ ನಮ್ಮೊಳಗಿರುವ ರಾಮನ ಬಗ್ಗೆ, ದಶರಥನ ಬಗ್ಗೆ, ಮಂಥರೆ ಕೈಕೇಯಿಯರ ಬಗ್ಗೆ ಹೇಳಿಬಿಡುತ್ತಾರೆ ನಿರ್ದೇಶಕರು. ಉಳಿದ ನಾಟಕವೆಲ್ಲ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುತ್ತಾ, ಪಾತ್ರಗಳೊಂದಿಗೆ ತುಲನೆ ಮಾಡಿಕೊಳ್ಳುತ್ತಾ ಸಾಗುವುದಷ್ಟೇ.. ಕಥಾ ಹಂದರ ಖಂಡಿತಾ ಹೊಸತಲ್ಲ ಆದರೆ ನಾಟಕವನ್ನು ಕಟ್ಟಿಕೊಟ್ಟಿರುವ ರೀತಿ ಮೆಚ್ಚುವಂಥದ್ದು. ಸಾಹಿತ್ಯಾಸಕ್ತಿಯಿಂದಲೋ ಏನೋ ಪ್ರತಿ ಹಳೆಗನ್ನಡದ ಪ್ರತಿ ಮಾತೂ ಕರ್ಣಾನಂದಮಯ ಎನಿಸುತ್ತಿತ್ತು. ವಿಶೇಷ ಎಂದರೆ ಭಾಷೆ ಎಲ್ಲಿಯೂ ಭಾವಕ್ಕೆ ತೊಡಕಾಗದಂತೆ ಕಾದಿದ್ದು ನಟರ ಅಭಿನಯ. ರಂಗಸಜ್ಜಿಕೆ, ಬೆಳಕು, ವಸ್ತ್ರ ವಿನ್ಯಾಸ ಎಲ್ಲವೂ ಅಚ್ಚುಕಟ್ಟು. ಕಥೆ ರಾಮ ಲಕ್ಷ್ಮಣ ಮತ್ತು ಶೂರ್ಪನಖಿಯ ಘಟನೆಯ ಸುತ್ತ ಸುತ್ತಿ ಜಟಾಯುವಿನ ಮರಣದವರೆಗೆ ಸಾಗುತ್ತದೆ. ರಾಮಾಯಣದ ವಸ್ತುವೇ ಆಗಿರುವುದರಿಂದ ಅರ್ಧಕ್ಕೇ ನಿಂತಿತಲ್ಲಾ ಎಂದೆನಿಸುವುದಿಲ್ಲ.

ನಾಟಕದುದ್ದಕ್ಕೂ ಆವರಿಸಿಕೊಂಡಿದ್ದು ರಾಮ ಮತ್ತು ಶೂರ್ಪನಖಿ.
ತುಸು ಹೆಚ್ಚೇ ಸಂಪ್ರದಾಯಸ್ಥ ಮನಸ್ಥಿತಿ ಹೊಂದಿರುವ ನಂಗೆ, ಶೂರ್ಪನಖಿಯ ಪಾತ್ರದೊಂದಿಗೆ ನಡೆಸಿರುವ ಪ್ರಯೋಗ ಆ ಕ್ಷಣಕ್ಕೆ ವಿಚಿತ್ರ, ಬೇಡಿತ್ತೇನೋ ಎನಿಸಿದರೂ ಅವಳ ಅಭಿನಯ, ತೆರೆಯ ಮೇಲೆ ತನ್ನನ್ನು ತಾನು ಕಟ್ಟಿಕೊಟ್ಟ ರೀತಿ ಎಲ್ಲವೂ ಸೇರಿ ಶೂರ್ಪನಖಿ ಹೀಗೇ ಇದ್ದಿರಬಹುದು ಎನಿಸಿದ್ದು ಸುಳ್ಳಲ್ಲ. ಹಾಸ್ಯವೂ ಅಲ್ಲದ, ಗಾಂಭೀರ್ಯವೂ ಇಲ್ಲದ ಪಾತ್ರ ನಿರ್ವಹಣೆ ಸುಲಭದ ಮಾತಂತೂ ಅಲ್ಲವೇ ಅಲ್ಲ.

ಮೂಗು ಕುಯ್ಯಿಸಿಕೊಂಡ ಶೂರ್ಪನಖಿಯ ಮಾತು, ಆ ಸನ್ನಿವೇಶ ವ್ಯಕ್ತವಾಗಿರುವ ರೀತಿ ಎರಡೂ ಚಂದ!
ಪ್ರತಿ ಸನ್ನಿವೇಶವನ್ನು, ಪಾತ್ರವನ್ನು ಆಳಕ್ಕಿಳಿದು ನೋಡಿದಾಗ ಮಾತ್ರ ನಿಜ ಸ್ವರೂಪ ಅರಿವಾಗುತ್ತದೆ ಎಂಬುದಕ್ಕೆ ಶೂರ್ಪನಖಿಯೇ ನಿದರ್ಶನ.

ಇನ್ನು ರಾಮ! ನನಗೆ ತಿಳಿದ ಮಟ್ಟಿಗೆ ಸದಾ ಗಾಂಭೀರ್ಯವನ್ನೇ ಹಾಸಿ ಹೊದ್ದಿರುವ ರಾಮ ಒಂದಷ್ಟು ಕುಚೋದ್ಯ ವನ್ನು ವ್ಯಕ್ತಪಡಿಸುವುದು ಈ ಸಂದರ್ಭದಲ್ಲಿ ಮಾತ್ರ.
ಎರಡನ್ನೂ ಸರಿದೂಗಿಸಿಕೊಂಡು ಹೋಗುವಲ್ಲಿ ನಟ ಮತ್ತು ನಿರ್ದೇಶಕ ಇಬ್ಬರೂ ಗೆದ್ದಿದ್ದಾರೆ. ಮಾಯಾ ಜಿಂಕೆ ತಂದುಕೊಡು ಎಂದಾಗ ಉದ್ವಿಗ್ನಗೊಳ್ಳುವ ರಾಮ ಕ್ಷಣ ಮಾತ್ರದಲ್ಲಿಯೇ ಸಾವರಿಸಿಕೊಂಡು ಮತ್ತೆ ಗಾಂಭೀರ್ಯಕ್ಕೆ ಮರಳುವ ಪರಿಯೇ ನೋಡಲು ಚೆಂದ.

ಸೀತೆ, ಲಕ್ಷ್ಮಣ, ಜಟಾಯು, ರಾವಣ ಎಲ್ಲರೂ ಅವರವರ ಪಾತ್ರವನ್ನು ಸಮರ್ಥವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಿರುವುದರಿಂದಲೇ ಈಗಾಗಲೇ ಹೃದ್ಗತವಾಗಿರುವ ಕಥೆಯೊಂದು ಹೊಸತೆನಿಸಿ ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಸುಮಾರು ಒಂದೂವರೆ ಘಂಟೆಯ ಕಾಲ ಕಣ್ಣನ್ನು ಆಚೀಚೆ ಹೋಗದ ಹಾಗೆ ಹಿಡಿದು ನಿಲ್ಲಿಸುತ್ತದೆ.

‍ಲೇಖಕರು Admin

May 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: