ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಶ್ರೀ ರಾಮಾಯಣದರ್ಶನಂ ಡಿವಿಡಿ ಕೇಳಿದ್ರಾ’, ಡಾ ಬಿ ಆರ್ ಸತ್ಯನಾರಾಯಣ

ಡಾ ಬಿ ಆರ್ ಸತ್ಯನಾರಾಯಣ

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚನದ ಡಿ.ವಿ.ಡಿ.ಗಳು ಹೊರ ಬರುತ್ತಿವೆ ಎಂಬುದು ಅತ್ಯಂತ ಖುಷಿ ಕೊಡುವ ವಿಚಾರವಾಗಿತ್ತು. ಕುಪ್ಪಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವುಗಳು ಬಿಡುಗಡೆಯಾದ ದಿನವೇ ಕೊಂಡು ತಂದು ಕೇಳಲಾರಂಭಿಸಿದೆ. ಸುಮಾರು ಎಂಬತ್ತು ಗಂಟೆಗಳಿಗೂ ಅಧಿಕ ಕಾಲಾವಧಿಯ ಈ ಡಿ.ವಿ.ಡಿ.ಗಳ ನಿರ್ಮಾಣ ನಿಜಕ್ಕೂ ಒಂದು ಮಹಾಪ್ರಯತ್ನ.  ಬೇರೆ ಭಾರತೀಯ ಭಾಷೆಗಳಲ್ಲಿ ಹೇಗೋ ಗೊತ್ತಿಲ್ಲ; ಕನ್ನಡದಲ್ಲಿ ಮಾತ್ರ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ವಚನ ಸಾಹಿತ್ಯದ ಹಲವಾರು ವಚನಗಳು ಗಾಯನ ರೂಪದಲ್ಲಿ ಪ್ರಸ್ತುತಗೊಂಡಿವೆ. ಕುಮಾರವ್ಯಾಸ ಭಾರತ ಗಮಕ ವಾಚನ-ವ್ಯಾಖ್ಯಾನದ ಧ್ವನಿಸುರಳಿಗಳೂ ಹೊರಬಂದಿದ್ದವು. ಪಂಪನ ಮಹಾಕಾವ್ಯಗಳನ್ನು ಹೊತ್ತು ತಂದ ಸಿ.ಡಿ.ಗಳಲ್ಲಿ ಕೆಲವು ಪದ್ಯಗಳನ್ನು ವಾಚಿಸುವ, ಗಮಕದಲ್ಲಿ ಹಾಡುವ, ಹಾಡಿನ ರೂಪದಲ್ಲಿ ಹಾಡುವ ಪ್ರಯತ್ನವನ್ನು ಮಾಡಲಾಗಿತ್ತು. ಈಗ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಗಮಕ ವಾಚನ-ವ್ಯಾಖ್ಯಾನ ರೂಪದಲ್ಲಿ ಬಂದಿರುವುದು ಕನ್ನಡ ಸಾಹಿತ್ಯಲೋಕದ ಒಂದು ಮಹತ್ಸಾಧನೆ. ಸುಮಾರು ಮೂವತ್ತೈದಕ್ಕೂ ಹೆಚ್ಚು ಗಮಕಿಗಳು ತಮ್ಮ ಧ್ವನಿಸಂಪತ್ತಿನಿಂದ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡುಗಾರಿಕೆಯಲ್ಲಿ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ಕಾಣುತ್ತಾರೆ. ಸಂಗೀತದ ಲಯ, ತಾಳ ಇವುಗಳ ಜೊತೆಯಲ್ಲಿ ಸಾಹಿತ್ಯದ ಶುದ್ಧಿಯನ್ನೂ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಪದವಿಂಗಡಣೆ, ಉಚ್ಛಾರ ಎಲ್ಲದರಲ್ಲೂ ಈ ಶ್ರೀಮಂತಿಕೆಯನ್ನು ಸಹೃದಯ ಕೇಳುಗ ಗಮನಿಸಬಹುದಾಗಿದೆ. ಕೇವಲ ಸಂಗೀತ ಜ್ಞಾನವಿದ್ದರೆ ಮಾತ್ರ ಸಾಲದು. ಸಾಹಿತ್ಯ ಜ್ಞಾನವೂ, ಅಭಿನಯ ಕೌಶಲವೂ, ಆ ಉನ್ನತ ಭಾವಗಳ ಗ್ರಹಣ ಶಕ್ತಿಯೂ ಸಂದರ್ಭಕ್ಕೆ ತಕ್ಕಂತೆ ಧ್ವನಿಯ ಏರಿಳಿತವನ್ನು ಮಾಡುವ ಸಾಮರ್ಥ್ಯವೂ ಸಹೃದಯತೆಯೂ ಇದ್ದರೆ ಮಾತ್ರ ಸಾಧ್ಯ ಎಂಬ ಕವಿಯ ಆಶಯವನ್ನು ಈಡೇರಿಸುವಲ್ಲಿ ಬಹುತೇಕ ಭಾಗಗಳಲ್ಲಿ ಗಮಕಿಗಳು ಯಶಸ್ವಿಯಾಗಿದ್ದಾರೆ. ಆದರೂ, ಕುಬೇರನಲಕಾವತಿಗೆ ಎಂಬುದನ್ನು ಕುಬೇರನ್ ಅಲಕಾವತಿಗೆ ಎಂದು ಬಿಡಿಸಿ ಹಾಡಿರುವುದು ಕಿರಿಕಿರಿಯುಂಟು ಮಾಡುತ್ತದೆ. ಅದು ಕುಬೇರನ ಅಲಕಾವತಿಗೆ ಎಂದಾಗಬೇಕಿತ್ತು. ಸುಧೈವಕ್ಕೆ ಇಂತವುಗಳ ಸಂಖ್ಯೆ ತುಂಬಾ ಕಡಿಮೆ.

ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಇಡಿಯಾಗಿ ಇಲ್ಲಿ ಬಳಸಿಕೊಂಡಿಲ್ಲ. ಅಲ್ಪಸ್ವಲ್ಪ ಭಾಗಗಳನ್ನು ಕೈಬಿಡಲಾಗಿದೆ. ಇದಕ್ಕೆ ಸಂಗ್ರಹಕಾರರು ಅಳವಡಿಸಿಕೊಂಡ ಮಾರ್ಗಸೂಚಿಗಳೇನು ಎಂಬುದು ತಿಳಿಯುವುದಿಲ್ಲ. ರಾವಣ ಹರಧನಸ್ಸನ್ನು ಎತ್ತಲು ಬಂದಾಗ ಸೀತೆಯ ಮನಸ್ಸಿನ ಭಾವನೆಗಳನ್ನು ದಾಖಲಿಸುವ ಓ ಧನುವೆ ಕಾಪಾಡು ಬಾಲೆಯಂ….. ಎಂಬ ಭಾಗವಿಲ್ಲ! ಅತ್ರಿ ಅನಸೂಯಾರನ್ನು ರಾಮ ಲಕ್ಷ್ಮಣ ಸೀತೆಯರು ಭೇಟಿಯಾಗುವ ಸನ್ನಿವೇಶವೂ ಮಾಯವಾಗಿದೆ. ರಾಮನಿಂದ ವರ್ಣಿತವಾಗಿ ಲಕ್ಷ್ಮಣನಲ್ಲಿ ನಗೆ ಉಕ್ಕಿಸಿದ ವಾತಾಪಿ ಇಲ್ವಲರ ಕಥೆ ಇಲ್ಲ. ಇವು ಕೆಲವೊಂದು ಉದಾಹರಣೆಗಳು ಮಾತ್ರ. ಕೆಲವು ಅಲಂಕಾರಗಳು, ವರ್ಣನೆಗಳು, ಉಪಮೆಗಳು ಬಿಟ್ಟು ಹೋಗಿವೆ. ಭೂಕಂಪ ಕಾಲದೊಳ್ ಶಿಖರದೌನ್ನತ್ಯದಿಂ ಕಣಿವೆ ಕಿಬ್ಬಿಗುರುಳ್ದು ಬೀಳ್ವ ಪೆರ್ಬಂಡೆ… ಎಂಬ ಅಲಂಕಾರ ತಾಟಕೆಯ ಪ್ರವೇಶದ ಸಂದರ್ಭದ್ದಾಗಿದ್ದು, ಅದೇ ಕಾಣೆಯಾಗಿದೆ. ಅಲಂಕಾರದ ಬಗ್ಗೆ ಕವಿಗೆ ಅಲಂಕಾರ ಎಂಬುದೇ ಇಲ್ಲ. ರಾವಣನ ಅರಮನೆಯ ವರ್ಣನೆ, ಕುಂಭಕರ್ಣನ ಗರಡಿಯ ಸಾಧನೆಯ ವರ್ಣನೆ, ಮುಂತಾದವೆಲ್ಲ ಬಹುಜನಗಳಿಗೆ ಅಲಂಕಾರವಾಗಿಯೊ ಉತ್ಪ್ರೇಕ್ಷೆಯಾಗಿಯೊ ಕಾಣಬಹುದು. ಆದರೆ ನನಗೆ ಮಾತ್ರ ಅದೆಲ್ಲವೂ ಕಣ್ಣಾರೆ ಕಂಡ ಸತ್ಯ ಎನ್ನುವ ಕವಿಯ ಮಾತುಗಳು ಗಮನಾರ್ಹ. ಉದಾಹರಣೆಗೆ ಕಾವ್ಯಾರಂಭದಲ್ಲಿ ಬರುವ ಶ್ರೀ ವೆಂಕಣ್ಣಯ್ಯನವರಿಗೆ ಎಂಬ ಅರ್ಪಣೆಯ ಭಾಗದ ಮೊದಲ ಹನ್ನೊಂದು ಸಾಲಗಳು. ರಾಮಾಯಣಂ ಅದು ವಿರಾಮಾಯಣಂ ಕಣಾ! ಮತ್ತು ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ! ಎಂಬ ಅರ್ಥಪೂರ್ಣವಾದ ಸಾಲುಗಳು ಬರುವುದು ಇಲ್ಲಿಯೇ ಆದ್ದರಿಂದ ಇದನ್ನು ಬಿಡುವ ಅವಶ್ಯಕತೆಯಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಕವಿ ತನ್ನ ಕಾವ್ಯೋದ್ಧೇಶವನ್ನು ಪ್ರತಿಪಾದಿಸಿರುವ ಕೆಲವು ಸಾಲುಗಳನ್ನು ಕೈಬಿಡಲಾಗಿದೆ. ಗುರಿಯೆಂತುಟಂತೆವೋಲ್ ಬಟ್ಟೆಯುಂ

ಬಲ್ಲೆನ್ ಸುಭಗಮೆಂದು. ರಾಮನ ಕಿರೀಟದಾ

ರನ್ನವಣಿಯೋಲೆ ರಮ್ಯಮಂ, ಪಂಚವಟಿಯೊಳ್

ತೃಣಸುಂದರಿಯ ಮೂಗುತಿಯ ಮುತ್ತಪನಿಯಂತೆ

ಮಿರುಮಿರುಗಿ ಮೆರವ ಹಿಮಬಿಂದುವುಂ.

ತಲುಪುವ ಗುರಿಯಷ್ಟೇ ನಡೆಯುವ ಮಾರ್ಗವೂ ಮುಖ್ಯ. ಅದನ್ನು ಕವಿ ಚೆನ್ನಾಗಿ ಬಲ್ಲರು.

ರಾಮನೇ ಕಾವ್ಯದ ನಾಯಕನಾದರೂ ರಾಮಾಯಣ ರಾಮನಿಗಿಂತ ದೊಡ್ಡದು! (ರಾಮಂಗೆ ಮಿಗಿಲಲ್ತೆ ರಾಮಾಯಣಂ). ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ ಎಂಬುದು ಕವಿಯ ಕಾಣ್ಕೆ. ಸರ್ವೋದಯ ಭಾವದ ಕವಿಗೆ ರಾಮನ ಕಿರೀಟದ ರತ್ನವೂ ಒಂದೆ; ಹುಲ್ಲಿನೆಸಳ ತುದಿಯ ಹಿಮಬಿಂದುವೂ ಒಂದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಜನ ಕಾವ್ಯಭಾಗಗಳನ್ನು ವ್ಯಾಖ್ಯಾನಿಸಿದ್ದಾರೆ. ಬಹುತೇಕ ಎಲ್ಲಾ ವ್ಯಾಖ್ಯಾನಕಾರರು ತಮ್ಮ ವಿದ್ವತ್ ಸಂಪತ್ತಿನಿಂದ ಕೇಳುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಎರಡನೆಯವರಾಗಿ ಮಾತನಾಡಿರುವ ಶ್ರೀ ಎಂ.ಹೆಚ್. ಕೃಷ್ಣಯ್ಯನವರ ಮಾತುಗಳು ಕಾವ್ಯಕ್ಕೆ, ಹಾಗೆಯೇ ಕುವೆಂಪು ಅವರಿಗೆ ಒಂದು ಪ್ರವೇಶವನ್ನು ಕಲ್ಪಿಸುತ್ತವೆ. ಯುಗ ಮತ್ತು ಜಗ ಎಂಬ ಎರಡು ಪದಗಳ ಹಿನ್ನೆಲೆಯಲ್ಲಿ ಅವರು ನಡೆಸಿರುವ ವಿಶ್ಲೇಷಣೆ ಗಮನ ಸೆಳೆಯುತ್ತದೆ. (ಅಭಿಷೇಕ ವಿರಾಡ್ ದರ್ಶನಂ ಸಂಚಿಕೆಗೆ ಅವರು ನೀಡಿರುವ ವ್ಯಾಖ್ಯಾನವೂ ಅತ್ಯದ್ಭುತವಾಗಿದೆ). ಕೆಲವು ಕಡೆ ವ್ಯಾಖ್ಯಾನ ಜಾಳು ಜಾಳಾಗಿರುವುದು ಉಂಟು. ಮಹಾಕಾವ್ಯವೊಂದನ್ನು ಸಹೃದಯರ ಮುಂದೆ ಒಂದು ಸಿದ್ಧ ವ್ಯಾಖ್ಯಾನದ ಚೌಕಟ್ಟನ್ನು ಹಾಕಿಯೇ ಇಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಹೇಳುತ್ತದೆ. ಅದರಲ್ಲೂ ಈಗಾಗಲೇ ಕಾವ್ಯವನ್ನು ತಕ್ಕಮಟ್ಟಿಗೆ ಓದಿರುವವರಿಗೆ, ಅಧ್ಯಯನ ನಡೆಸಿರುವವರಿಗೆ ಈ ವ್ಯಾಖ್ಯಾನ ಮತ್ತೆ ಮತ್ತೆ ಕೇಳವುದು ಕಷ್ಟ. ಆದರೆ, ಎಷ್ಟು ಬಾರಿ ಬೇಕಾದರೂ ಕೇಳಬಹುದಾದ ಗಮಕವಾಚನದ ನಡುನಡುವೆಯೇ ಮತ್ತೆ ಮತ್ತೆ ಈ ವ್ಯಾಖ್ಯಾನಗಳು ರಸಾಭಾಸ ಮಾಡಿಬಿಡುತ್ತವೆ. ಹತ್ತು ಜನ ಪಂಡಿತರು, ವಿಮರ್ಶಕರು, ಗಮಕಿಗಳು, ಲಾಕ್ಷಣಿಕರು ತಮ್ಮ ಇಡೀ ಜನ್ಮವನ್ನೆಲ್ಲ ಇದಕ್ಕೇ ಮೀಸಲಾಗಿರಿಸಿದರೂ ಹೇಳುವುದನ್ನೆಲ್ಲ ಮುಗಿಸಲಾರದಷ್ಟು ಬ್ರಹ್ಮಾಂಡವಾಗಿದೆ ಈ

ಕೃತಿ ಎಂಬ ಮಾತುಗಳನ್ನು ಗಮನಿಸಬೇಕು. ಆದರೆ ಕಾವ್ಯವನ್ನು ಇದುವರೆಗೂ ಓದದೇ ಇರುವವರಿಗೆ ಈ ವ್ಯಾಖ್ಯಾನದಿಂದ ಉಪಯೋಗವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಶಬರಿಗಾದನು ಅತಿಥಿ ದಾಶರಥಿ ಸಂಚಿಕೆಯಲ್ಲಿ ಸ್ತ್ರೀ-ಪುರುಷ ಪಾತ್ರಗಳ ಮಾತುಗಳಿಗೆ ಸ್ತ್ರೀ-ಪುರುಷ ಧ್ವನಿಗಳಲ್ಲೇ ಗಮಕರೂಪ ನೀಡಲಾಗಿದೆ. ಉಳಿದ ವಿವರಣೆ ಕಥಾನಿರೂಪಣೆ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಆದರೂ, ಸ್ತ್ರೀ-ಪುರುಷ ಪಾತ್ರಗಳ ಸಂಭಾಷಣೆಯನ್ನು ಮಾತಿನ ರೂಪದಲ್ಲೂ ಉಳಿದ ವಿವರಣೆ ಮತ್ತು ಕಥಾ ನಿರೂಪಣೆಯನ್ನು ಗಮಕದ ರೂಪದಲ್ಲೂ ನೀಡಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ದಶಾನನ ಸ್ವಪ್ನಸಿದ್ಧಿ ಕಾವ್ಯಭಾಗವನ್ನು ಶ್ರೀ ತಾರಾನಾಥರ ನಿರೂಪಣೆಯೊಂದಿಗೆ ನಾಟಕ ರೂಪದಲ್ಲಿ ಪ್ರಸ್ತುಪಡಿಸಿರುವುದು ವಿಶೇಷವಾಗಿದೆ. ರಾವಣ ಪಾತ್ರಧಾರಿಯ ಧ್ವನಿ ಅದ್ಭುತವಾಗಿದೆ. ಆದರೆ, ನಿನ್ನ ಮಗಳಲ್ತೆನ್ನವಳ್ ಅನಲೆ ಎಂಬ ಸಂಚಿಕೆಯನ್ನು ನಾಟಕ ರೂಪದಲ್ಲಿ ಪ್ರಸ್ತುಪಡಿಸುವ ಅವಕಾಶವಿದ್ದರೂ ಅದನ್ನು ಗಮಕ ರೂಪದಲ್ಲೇ ವಾಚಿಸಲಾಗಿದೆ. ಕನಿಷ್ಠ ಪಕ್ಷ ರಾವಣ ಮತ್ತು ಅನಲೆಯರ ಮಾತುಗಳಿಗೆ ಬೇರೆ ಬೇರೆ ಗಮಕಿಗಳ ಧ್ವನಿಯನ್ನು ಬಳಸಿದ್ದರೆ ಹೆಚ್ಚು ಧ್ವನಿಪೂರ್ಣವಾಗಿರುತ್ತಿತ್ತು. ನಿನ್ನ ಮಗಳಲ್ತು ಎನ್ನವಳ್ ಅನಲೆ ಸಂಚಿಕೆಯಲ್ಲಿ ಹಿರಿಯರಾದ ಶ್ರೀ ಸುಜನಾ ಅವರ ವ್ಯಾಖ್ಯಾನವನ್ನೇ ಬಳಸಿಕೊಂಡಿದ್ದು ಸ್ತುತ್ಯಾರ್ಹವಾಗಿದೆ. ರಾಮಾಯಣ ದರ್ಶನಂ ಕಾವ್ಯದ ಎಲ್ಲಾ ಭಾಗಕ್ಕೆ ರಾಗ ಹಾಕಬಾರದು. ವರ್ಣನೆ ಕಥಾ ನಿರೂಪಣೆಯ ಸನ್ನಿವೇಶಗಳಲ್ಲಿ ಮಾತ್ರ ರಾಗ ಹಾಕಬೇಕು. ಸಂಭಾಷಣೆ ಬಂದ ತಕ್ಷಣ ರಾಗವನ್ನು ನಿಲ್ಲಿಸಿಯೇ ಬಿಡಬೇಕು. ಆಯಾ ಸಂದರ್ಭಕೊಪ್ಪುವಂತೆ ಏರು ಇಳಿವುಗಳೊಡನೆ ಓದಿದೆ ಸಾಕು ಎಂಬ ಕವಿಯ ಮಾತುಗಳಿಲ್ಲಿ ಗಮನಾರ್ಹ.

ಧ್ವನಿಮುದ್ರಿಕೆಯ ಸಂಕಲನದಲ್ಲಿ ಆಗಿರುವ ಎಡವಟ್ಟಿನಿಂದ ಆಗಾಗ ಮಧ್ಯೆ ಮಧ್ಯೆ ಬೇರಾವುದೊ ಸಂದರ್ಭದ ವಾಚನ ವ್ಯಾಖ್ಯಾನದ ತುಣುಕುಗಳು ಕೆಳಿಸಿಬಿಡುತ್ತವೆ. ಮಂಥರೆ ಬಾಲರಾಮನಿಗೆ ಕನ್ನಡಿ ಕೊಟ್ಟು ಸಮಾಧಾನಪಡಿಸುವ ಭಾಗ ಮುಂದಿನ ಸಂಚಿಕೆಯ ಕೊನೆ ಭಾಗವಾಗಿ ಸೇರಿಬಿಟ್ಟಿದೆ. ಶಿಲಾ ತಪಸ್ವಿನಿ ಸಂಚಿಕೆಯ ಸೀತಾ ಸ್ವಯಂವರದ ಸಂದರ್ಭದಲ್ಲಿ ನಡುವೆ ಸುಮಾರು ಅರ್ಧ ಗಂಟೆಗಳ ಕಾಲ ಕವಿಕ್ರತು ದರ್ಶನ ಸಂಚಿಕೆಯ ವಾಚನ ಮತ್ತು ವ್ಯಾಖ್ಯಾನ ನುಸುಳಿಬಿಟ್ಟಿದೆ. ಬಿಲ್ಲು ಎತ್ತಲು ಹೊರಟ ರಾಮ ಮತ್ತೆ ನಮಗೆ ಎದುರಾಗುವುದು ಅಯೋಧ್ಯೆಗೆ ಹೊರಟ ಮದುವೆಯ ಮೆರವಣಿಗೆಯಲ್ಲಿ! ಪಾದುಕಾ ಕಿರೀಟಿ ಭಾಗದಲ್ಲಿ ಅಲ್ಲಲ್ಲಿ ಹೆಚ್.ಎಸ್.ವಿ.ಯವರ ಧ್ವನಿಯಲ್ಲಿ ರಾಮಾಯಣದರ್ಶನಂ ಸಾಲುಗಳ ವಾಚನವನ್ನು ಕೇಳುವುದೇ ಒಂದು ಸೊಗಸು. ಆದರೆ ಇಲ್ಲೂ ಈ ಅಕ್ರಮ ನುಸುಳುವಿಕೆಯ ಕಿರಿಕಿರಿ ಹೆಚ್ಚಾಗಿದೆ. ಇವೆಲ್ಲಾ ಸರಿಪಡಿಸಬಹುದಾಗಿದ್ದ ತೊಂದರೆಗಳು. ಈ ಪ್ರಯತ್ನದ ಜೊತೆಯಲ್ಲೇ ಮಾಡಬಹುದಾಗಿದ್ದ ಇನ್ನೊಂದು ಕೆಲಸವೆಂದರೆ, ವ್ಯಾಖ್ಯಾನರಹಿತವಾದ, ಕೇವಲ ಗಮಕ ವಾಚನವನ್ನಷ್ಟೇ ಒಳಗೊಂಡಿದ್ದ ಡಿ.ವಿ.ಡಿ.ಗಳನ್ನು ಪ್ರತ್ಯೇಖವಾಗಿ ಮಾರಾಟಕ್ಕೆ ಬಿಡಬಹುದಾಗಿದ್ದು. ವ್ಯಾಖ್ಯಾನದ ಗೋಜಲು ಬೇಡ ಎನ್ನುವವರಿಗೆ, ಕಾವ್ಯವನ್ನಷ್ಟೇ ಕೇಳಬೇಕೆನ್ನುವವರಿಗೆ ಇದರಿಂದ ಉಪಯೋಗವಾಗುತ್ತಿತ್ತು.  ಈ ಡಿ.ವಿ.ಡಿ.ಗಳ ಜೊತೆಯಲ್ಲೇ, ಮಹಾಕಾವ್ಯದ ಪಠ್ಯವನ್ನು, ಪಿ.ಡಿ.ಎಫ್. ಅಥವಾ ಬೇರೆ ರೂಪದಲ್ಲಿ ಒದಗಿಸಬಹುದಿತ್ತು. ಇದರಿಂದ ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಕೆಟ್, ಸ್ಮಾರ್ಟ್‌ಫೋನ್ ಮುಂತಾದವುಗಳಲ್ಲಿ ಕಾವ್ಯವನ್ನು ಕೇಳುತ್ತಲೇ, ಆ ಭಾಗಗಳನ್ನು ಓದಬೇಕು ಅನ್ನುವವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ದೃಕ್-ಶ್ರವ್ಯ ಎರಡು ರೂಪಗಳಲ್ಲೂ ಕಾವ್ಯ ಸಹೃದಯನೊಳಗೆ ಇಳಿಯುತ್ತಿತ್ತು. ಎರಡು ಸಹಸ್ರಮಾನದ ಕನ್ನಡ ಭಾಷೆಯ ಸರ್ವ ಸೊಗಸನ್ನು ಒಳಗೊಂಡಿರುವ ಆಧುನಿಕ ಮಹಾಕಾವ್ಯ ಶ್ರಿ ರಾಮಾಯಣ ದರ್ಶನಂ ಓದುಗರನ್ನಷ್ಟೇ ಅಲ್ಲ; ಕೇಳುಗರನ್ನೂ ಡಿಜಿಟಲ್ ರೂಪದಲ್ಲಿ ತಲುಪಿರುವುದು ಸಂತೋಷದ ವಿಚಾರವಾಗಿದೆ. ಇದೊಂದು ನಿರಂತರ ಪ್ರಕ್ರಿಯೆ. ಲಹರಿ ರೆಕಾರ್ಡಿಂಗ್ ಸಂಸ್ಥೆ ಹಾಗೂ ಕುಪ್ಪಳಿ ಕುವೆಂಪು ಪ್ರತಿಷ್ಠಾನ ಈ ಮಹಾಕಾರ್ಯದಲ್ಲಿ ಕೈಜೋಡಿಸಿ ಯಶಸ್ವಿಯಾಗಿವೆ. ಕನ್ನಡ ಸಾಹಿತ್ಯಾಸಕ್ತರು, ಕಾವ್ಯಾಸಕ್ತರು ಇದರ ಪೂರ್ಣ ಪ್ರಯೋಜನ ಪಡೆಯುವಂತಾಗಲಿ.

‍ಲೇಖಕರು avadhi

5 February, 2014

1 Comment

  1. maheshwari.u

    nanna baalyadalli nanna doddanna shreeramayana darshanam mahakavyavannu malegaalada raathrigalalli manemandigella odiheluthidda. balyadalli ee ruupadalli doreta kavya samskarakke naanu runiyaagiddene.eega ee kavyada DVD bandide emba ollesuddi santoshavannu needitu.khanditavaagi avu janamanavannu talapabeku.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading