ಶ್ರೀನಿವಾಸ ಪ್ರಭು ಅಂಕಣ: ಹೊಸಕಿದರು ‘ಸಂಜೆ ಮಲ್ಲಿಗೆ’ಯನ್ನು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 114
——————
ಒಂದಷ್ಟು ದಿನಗಳು ಯಾವ ತೊಂದರೆಯೂ ಇಲ್ಲದೇ ಶೂಟಿಂಗ್ ನಿರಾಳವಾಗಿ ನಡೆಯಿತು. ಎಲ್ಲರೂ ಅನುಭವಿ ಕಲಾವಿದರೇ ಆದುದರಿಂದ ಪಾತ್ರದ ಅಂತರಂಗವನ್ನು ಅರ್ಥ ಮಾಡಿಕೊಂಡು ಜೀವ ತುಂಬಿ ಅಭಿನಯಿಸುತ್ತಿದ್ದರು. ಒಂದು ರೀತಿಯಲ್ಲಿ ‘ಸಂಜೆ ಮಲ್ಲಿಗೆ’ ಮನೆ ಮನೆಯ ಕಥೆಯೇ ಆದ್ದರಿಂದ ವೀಕ್ಷಕರ ಮನಸ್ಸಿಗೂ ಬಲು ಬೇಗ ಹತ್ತಿರವಾಗಿಬಿಟ್ಟಿತು. ಪ್ರಾರಂಭದ ಕೆಲವು ಕಂತುಗಳಂತೂ ಮನ ಮಿಡಿಸುವ ಕಥಾಹಂದರವನ್ನು ಹೊಂದಿದ್ದವು. ಒಂದು ಕಂತಿನಲ್ಲಂತೂ 12 ರ ವಯಸ್ಸಿನ ಬಾಲಕನೊಬ್ಬ ತನ್ನ ತಂದೆ ತಾಯಿಯರೊಂದಿಗೆ ಮಾತನಾಡುತ್ತಾ, “ನಿಮಗೆ ವಯಸ್ಸಾದ ಮೇಲೆ ನಿಮ್ಮನ್ನು ನಾನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ” ಎನ್ನುತ್ತಾನೆ. ಆಘಾತಗೊಂಡ ತಂದೆ, “ಯಾಕೋ ಹೀಗೆ ಮಾತಾಡ್ತಿದೀಯಾ?” ಎಂದು ಸಂಕಟದಿಂದ ಕೇಳಿದರೆ ಆ ಬಾಲಕ, “ಹೌದಪ್ಪಾ, ಅದೇ ಅಲ್ಲವೇ ನಡೆದುಕೊಂಡು ಬಂದಿರುವ ಪದ್ಧತಿ? ನೀನೂ ನಿನ್ನ ಅಮ್ಮನನ್ನು— ಅಂದರೆ ನನ್ನ ಅಜ್ಜಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಂದಿದ್ದೀಯಲ್ಲಾ!” ಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಬಾಲಕನ ತಂದೆ ತಾಯಿಯರು ಮಾರುತ್ತರ ಕೊಡಲಾಗದೇ ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ. ಇದು ಆ ಕಾಲದ ಬಹು ಚರ್ಚಿತ ಪ್ರಸಂಗವಾಗಿತ್ತು.

ಕೌಟುಂಬಿಕ ವ್ಯವಸ್ಥೆಯಲ್ಲಿ ಎದುರಾಗುವ ಬಗೆಬಗೆಯ ಸಮಸ್ಯೆಗಳ ಮೇಲೆ ಕ್ಷಕಿರಣ ಬೀರುವ ಪ್ರಯತ್ನ ಸಂಜೆಮಲ್ಲಿಗೆ ಧಾರಾವಾಹಿಯಲ್ಲಿತ್ತು. ಒಂದು ಸೂರಿನಡಿಯಲ್ಲಿ ಬದುಕುವ ಸಂದರ್ಭ ಎದುರಾದಾಗ ಧುತ್ತೆಂದು ಪುಟಿದೇಳುವ ಸಮಸ್ಯೆಗಳು, ತಲೆಮಾರುಗಳ ನಡುವೆ ಮೂಡುವ ಹೊಂದಾಣಿಕೆಯಲ್ಲಿನ ವೈಫಲ್ಯಗಳನ್ನು ಹಲವಾರು ಪ್ರಸಂಗಗಳಲ್ಲಿ ಸಮರ್ಥವಾಗಿ ಹಿಡಿದಿಡುವ ಪ್ರಯತ್ನ ಪ್ರಾರಂಭದ ಕಂತುಗಳಲ್ಲಿತ್ತು. ಬರಬರುತ್ತಾ ಯಾಕೋ ಎಲ್ಲ ಪಾತ್ರಗಳೂ ಕಣ್ಣೀರ ಧಾರೆ ಸುರಿಸುತ್ತಾ ಗೋಳುಕರೆಯುವುದೇ ವಿಪರೀತವಾಗಿ ಸಮಸ್ಯೆಯನ್ನು ಕುರಿತ ಧನಾತ್ಮಕ ಚಿಂತನೆಗಿಂತ ಹಿರಿಯರ ನೋವುಗಳನ್ನಷ್ಟೇ ವಿಜೃಂಭಿಸಿ ವೀಕ್ಷಕರನ್ನು ಅಳಿಸಿ ಸಹಾನುಭೂತಿ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕಥಾಹಂದರ ಬೆಳೆಯತೊಡಗಿತು.

ನನಗೇಕೋ ಇದು ಏಕಮುಖೀ ಅಭಿಪ್ರಾಯಗಳನ್ನು ಹೇರುವಂತೆ ಭಾಸವಾಗಿ ಕಥಾ ಸಂವಿಧಾನದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವ ದೃಷ್ಟಿಯಿಂದ ಆಲೋಚಿಸತೊಡಗಿದೆ. ವಾಹಿನಿಯ ಹಿರಿಯ ಅಧಿಕಾರಿಗಳೊಂದಿಗೂ ಈ ಕುರಿತಾಗಿ ಚರ್ಚಿಸಿ ಬದಲಾಯಿಸಲು ಅವರ ಪರವಾನಗಿಯನ್ನು ಪಡೆದುಕೊಂಡೆ. ಆಗಲೇ ಒಂದು ಹೊಸ ವಿಚಾರ ಮನಸ್ಸಿಗೆ ನುಗ್ಗಿ ಬಂತು: ಒಂದರ್ಥದಲ್ಲಿ ‘ಸಂಜೆ ಮಲ್ಲಿಗೆ’ ಎಲ್ಲ ಕುಟುಂಬಗಳಿಗೂ ಸಂಬಂಧ ಪಡಬಹುದಾದ, ಎಲ್ಲೆಡೆ ನಡೆಯಬಹುದಾದ, ಎಲ್ಲರ ಅನುಭವಗಳಿಗೆ ಹತ್ತಿರವಾದ ಕಥಾನಕವೇ ಆದ್ದರಿಂದ ವೀಕ್ಷಕರನ್ನೂ ಕಥಾವಿಸ್ತರಣೆಯಲ್ಲಿ ತೊಡಗಿಸಿಕೊಳ್ಳಬಾರದೇಕೆ ಅನ್ನಿಸಿತು. ಕೂಡಲೇ ಮುಂದಿನ ಕಂತಿನಲ್ಲಿಯೇ ವೀಕ್ಷಕರಿಗೆ ಒಂದು ಸಂದೇಶವನ್ನು ಕೊಟ್ಟೆ: “ನಮ್ಮ ಕಥಾವಸ್ತುವಿಗೆ ಹೊಂದಿಕೆಯಾಗುವಂತಹ ಪ್ರಸಂಗಗಳು ನಿಮ್ಮದೇ ಬದುಕಿನಲ್ಲಿ ಘಟಿಸಿದ್ದರೆ, ಅಥವಾ ಅಂಥ ಪ್ರಸಂಗಗಳು ನಿಮ್ಮ ಸುತ್ತ ನಡೆದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. ಸ್ವಾರಸ್ಯಕರವಾದ, ಅರ್ಥಪೂರ್ಣವಾದ, ನಾವೀನ್ಯತೆ ಇರುವ ಪ್ರಸಂಗಗಳನ್ನು ನಾವು ನಮ್ಮ ಚಿತ್ರಕಥೆಯಲ್ಲಿ ಅಳವಡಿಸಿಕೊಳ್ಳುತ್ತೇವೆ”.

ಆಶ್ಚರ್ಯವೆನ್ನಿಸುವ ರೀತಿಯಲ್ಲಿ ವೀಕ್ಷಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿತು! ಕೇವಲ ಹತ್ತು ದಿನಗಳ ಅವಧಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಬರಹಗಳು ಅಂಚೆಯ ಮೂಲಕ ನನ್ನನ್ನು ತಲುಪಿದವು! ನಾನೂ ಬಲು ಸಂಭ್ರಮದಿಂದ ಆ ರಾಶಿಯಲ್ಲಿದ್ದ ಒಳ್ಳೆಯ ಬರಹಗಳನ್ನು ಹೆಕ್ಕಿ ತೆಗೆಯತೊಡಗಿದೆ.

ಏತನ್ಮಧ್ಯೆ ಏಕೋ ವಾಹಿನಿಯ ಕಡೆಯಿಂದ ಸಣ್ಣದಾಗಿ ತೊಂದರೆಗಳು ಶುರುವಾಗತೊಡಗಿದವು. ಸಣ್ಣ ಸಣ್ಣ ತಪ್ಪುಗಳಿಗೂ ಟೇಪ್ ಅನ್ನು ವಾಪಸ್ ಕಳುಹಿಸಿ ‘ತಿದ್ದುಪಡಿ ಮಾಡಿ ಕಳಿಸಿ’ ಎಂದು ಸತಾಯಿಸತೊಡಗಿದರು.

ಈ ಕಿರಿಕಿರಿಗಳು ಸಾಲದೆಂಬಂತೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಯಿತು. ಒಂದು ದಿನ ಚಿತ್ರೀಕರಣಕ್ಕೆಂದು ಕಲಾಕುಟೀರಕ್ಕೆ ಹೋಗಿ ನೋಡುತ್ತೇನೆ—ಅಲ್ಲಿದ್ದ ಕಲ್ಲಿನ ಮಹಾದ್ವಾರವೇ ಕುಸಿದುಬಿದ್ದಿದೆ! ಹೊರಾಂಗಣದಲ್ಲಿ ನಾವು ಚಿತ್ರೀಕರಣ ನಡೆಸುತ್ತಿದ್ದ ಕೆಲ ಮುಖ್ಯ ಜಾಗಗಳಲ್ಲಿದ್ದ ಕಲಾಕೃತಿಗಳನ್ನೂ ವಿಶಿಷ್ಟ ಕಲ್ಲುಗಳನ್ನೂ ಸ್ಥಳಾಂತರಿಸಿದ್ದಾರೆ! ಅವುಗಳೇ ಇಲ್ಲದೆ ಹೋದ ಮೇಲೆ ನಾನೇನು ಚಿತ್ರೀಕರಣ ಮಾಡಲಿ? ಅವಿಲ್ಲವೆಂದರೆ ಒಂದು ರೀತಿಯಲ್ಲಿ ಆಶ್ರಮದ ಅಸ್ಮಿತೆಯೇ ಕಳೆದುಹೋದ ಹಾಗೆ! ತಕ್ಷಣವೇ ಅಲ್ಲಿ ಚಿತ್ರೀಕರಣ ನಿಲ್ಲಿಸಿ ಹೊಸ ಜಾಗದ ಅನ್ವೇಷಣೆಗೆ ತೊಡಗಿದೆ. ಒಂದು ದೊಡ್ಡ ಮನೆಯನ್ನು ಬಾಡಿಗೆಗೆ ಹಿಡಿದು ಅಗತ್ಯವಿದ್ದ ದೃಶ್ಯಗಳನ್ನು ಚಿತ್ರೀಕರಿಸಿ ಕಂತುಗಳನ್ನು ಕಳಿಸತೊಡಗಿದೆ. ಆ ಕುರಿತಾಗಿಯೂ ವಾಹಿನಿಯ ಕೆಲವು ಅಧಿಕಾರಿಗಳು ಜೋರಾಗಿಯೇ ಗೊಣಗತೊಡಗಿದರು.

ಆಗಿರುವ ಸಮಸ್ಯೆಯನ್ನು ವಿವರಿಸಿ ಕೆಲ ದಿನ ತಾಳಿಕೊಳ್ಳಿ, ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಕೇಳಿಕೊಂಡರೂ ಕಿರಿಕಿರಿ ತಪ್ಪಲಿಲ್ಲ. ಇದರ ಮೇಲೆ ‘ನಿಮ್ಮ ಧಾರಾವಾಹಿಗೆ ಟಿ ಆರ್ ಪೀನೇ ಇಲ್ಲ’ ಎಂದು ಬೇರೆ ಟೀಕಿಸುವುದು! ಅಸಲಿಗೆ ಆಗ ಅಲ್ಲಿ ಪ್ರಸಾರವಾಗುತ್ತಿದ್ದ ಯಾವ ಧಾರಾವಾಹಿಗೂ ಟಿ ಆರ್ ಪಿ ಇರಲೇ ಇಲ್ಲ! ಅಷ್ಟು ಯಾಕೆ, ಹೊಸದಾಗಿ ಆರಂಭವಾಗಿದ್ದ ಆ ವಾಹಿನಿಗೇ ಒಳ್ಳೆಯ ಟಿ ಆರ್ ಪಿ ಆಗಿನ್ನೂ ಬಂದಿರಲಿಲ್ಲ! ಆದರೆ ಅದನ್ನೆಲ್ಲಾ ಒಪ್ಪಿಕೊಳ್ಳುವಷ್ಟು ಔದಾರ್ಯ ಅಧಿಕಾರಿಗಳಿಗಿರುತ್ತದೆಯೇ? ‘ಒಳ್ಳೆಯ ಟಿ ಆರ್ ಪಿ ಕೊಡಿ, ನಾವೂ ಸಹಕರಿಸುತ್ತೇವೆ’ ಎಂಬುದೊಂದೇ ಅವರ ಮಂತ್ರ! ನಾನೇನು ಹಿತ್ತಲಲ್ಲಿ ಟಿ ಆರ್ ಪಿ ಯ ಫಲ ಕೊಡುವ ಗಿಡ ಬೆಳೆಸಿದ್ದೇನೆಯೇ!!

ಅದು ಡಿಸೆಂಬರ್ ಮಾಹೆಯ ಕೊನೆಯ ದಿನಗಳು. ಹೊಸ ವರ್ಷದ ಸ್ವಾಗತಕ್ಕಾಗಿ ಎಲ್ಲರೂ ಗೌರಿ ಬಿದನೂರಿನ ನಮ್ಮ ತೋಟದಲ್ಲಿ ಸೇರೋಣ ಎಂದು ಆತ್ಮೀಯ ಗೆಳೆಯ ಟಿ.ಎನ್. ಸೀತಾರಾಮ್ ಆಹ್ವಾನ ನೀಡಿದ್ದರು. ಪ್ರತಿ ವರ್ಷ ಹಾಗೆ ಸಮಾನ ಮನಸ್ಕ ಗೆಳೆಯರೆಲ್ಲಾ ಒಂದೆಡೆ ಸೇರಿ ಒಂದಷ್ಟು ಹರಟಿ ಹಾಡಿ ನಲಿದು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸುವುದು ರೂಢಿ.ನಾನು ರಂಜನಿ ಹಾಗೂ ಮಕ್ಕಳನ್ನೂ ಕರೆದುಕೊಂಡು ಹೋಗಿದ್ದೆ. ಅಂದಿನ ಗೋಷ್ಠಿಗೆ ನಮ್ಮೆಲ್ಲರಿಗೂ ಆತ್ಮೀಯರಾಗಿದ್ದ ಈ ಟಿವಿ ವಾಹಿನಿಯ ಒಬ್ಬ ಹಿರಿಯ ಅಧಿಕಾರಿಯೂ ಆಗಮಿಸಿದ್ದರು.

ಆ ವೇಳೆಗಾಗಲೇ ಹೊಸ ಕಥಾಹಂದರವನ್ನು ಸಿದ್ಧ ಪಡಿಸಿಕೊಂಡಿದ್ದ ನಾನು ಬಹಳ ಸಂಭ್ರಮದಿಂದ ಆ ಅಧಿಕಾರಿಗೆ ನಾನು ಮಾಡಿಕೊಂಡಿದ್ದ ಬದಲಾವಣೆಗಳನ್ನು ವಿವರಿಸಿ ‘ಹೀಗೆ ಮುಂದುವರಿಸಿದರೆ ಹೇಗೆ? ಚೆನ್ನಾಗಿರುತ್ತದಲ್ಲವೇ?’ ಎಂದು ಕೇಳಿದೆ. ‘ಅಗತ್ಯವಾಗಿ ಆಗಲಿ. ಮುಂದುವರಿಸಿ’ ಎಂದವರು ಆಶ್ವಾಸನೆ ನೀಡಿದಾಗ ನನ್ನ ಖುಷಿಗೆ ಪಾರವೇ ಇಲ್ಲ! ಅಂದು ರಾತ್ರಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿ ಅಲ್ಲಿಯೇ ತಂಗಿದ್ದು ಮರುದಿನ ಮಧ್ಯಾಹ್ನದ ಹೊತ್ತಿಗೆ ಊರಿಗೆ ಮರಳಿ ಬಂದೆವು.

2 ನೆಯ ತಾರೀಖು ಬೆಂಗಳೂರಿನಲ್ಲಿ ‘ಸಂಜೆ ಮಲ್ಲಿಗೆ’ಯ ಚಿತ್ರೀಕರಣ ನಿಗದಿಯಾಗಿತ್ತು. ಅಂದಂತೂ ಭಾರತಿ ವಿಷ್ಣುವರ್ಧನ್ ಅವರು ಮೊದಲುಗೊಂಡು ಎಲ್ಲ ಮುಖ್ಯ ಕಲಾವಿದರೂ ಬಂದಿದ್ದರು. ನಾನು ಹೊಸ ಹುರುಪಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಿದೆ. ಎರಡು ದೃಶ್ಯಗಳ ಚಿತ್ರೀಕರಣ ಮುಗಿಸಿ ಇನ್ನೇನು ಮೂರನೆಯ ದೃಶ್ಯ ಪ್ರಾರಂಭಿಸಬೇಕು, ಅಷ್ಟರಲ್ಲಿ ಮಡದಿ ರಂಜನಿಯ ಫೋನ್ ಬಂತು.ಗಾಬರಿಯ ದನಿಯಲ್ಲಿ ಅಳುತ್ತಳುತ್ತಾ ರಂಜನಿ ಬಿಕ್ಕಿದಳು: ” ಪ್ರಭೂಜೀ, ಈ ಟಿವಿ ಯಿಂದ ಪತ್ರ ಬಂದಿದೆ—ಮುಂದಿನ ವಾರದಿಂದಾನೇ ‘ಸಂಜೆ ಮಲ್ಲಿಗೆ’ ಧಾರಾವಾಹಿಯನ್ನ ನಿಲ್ಲಿಸ್ತಿದಾರಂತೆ.” ರಂಜನಿಯೇ ಹೇಳಿರದಿದ್ದರೆ ನಾನು ಆ ಸುದ್ದಿಯನ್ನು ನಂಬುತ್ತಿರಲಿಲ್ಲವೇನೋ! ನಂತರ ರಂಜನಿ ನಿಧಾನವಾಗಿ ಪತ್ರದ ಪೂರ್ಣ ಪಾಠವನ್ನು ಓದಿ ಹೇಳಿದಳು. ಏನೇನೇ ಮಾಡಿದರೂ ನನಗೆ ಆ ಸುದ್ದಿಯನ್ನು ಜೀರ್ಣಿಸಿಕೊಳ್ಳಲಾಗುತ್ತಿರಲಿಲ್ಲ. ಆ ಮನಸ್ಥಿತಿಯಲ್ಲಿ ಯಾಕೋ ಶೂಟಿಂಗ್ ಮುಂದುವರಿಸಲು ಮನಸ್ಸಾಗಲಿಲ್ಲ. ತಕ್ಷಣವೇ ಏನೋ ಸಬೂಬು ಹೇಳಿ ಎಲ್ಲರನ್ನೂ ಕಳಿಸಿಬಿಟ್ಟೆ.

ನಂತರ ಈ ಟಿವಿ ಯ ಪರಿಚಿತ ಅಧಿಕಾರಿಗಳಿಗೆ ಫೋನ್ ಮಾಡಿದೆ. “ಇದೇನು ಈ ಧಿಡೀರ್ ನಿರ್ಧಾರ? ಕಾರಣವಾದರೂ ಏನು?” ಎಂದು ಕೇಳಿದೆ.
“ಸೀರಿಯಲ್ ನ ಗುಣಮಟ್ಟ ಚೆನ್ನಾಗಿಲ್ಲ ಅಂತ ನನ್ನ ಮೇಲಧಿಕಾರಿಗಳು ಅಭಿಪ್ರಾಯ ಪಡ್ತಿದಾರೆ…ಹಾಗಾಗಿ ವಿಧಿಯಿಲ್ಲದೇ ಧಾರಾವಾಹಿಯನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ” ಎಂದರು ಆ ಮಹಾಶಯರು. ಅಯ್ಯೋ! ಇದೆಂಥಾ ವಿಚಿತ್ರ! ಕೆಲವೇ ಕೆಲವು ದಿನಗಳ ಹಿಂದೆ ಅದೇ ಮೇಲಧಿಕಾರಿಗಳು ನನ್ನ ಸಹಾಯಕರಾದ ಅಶೋಕ್ ಜೈನ್ ಹಾಗೂ ತಿಮ್ಮಣ್ಣ ಗೌಡರಿಗೆ ಸಿಕ್ಕಿದ್ದಾಗ, “ನಿಮ್ಮ ಸೀರಿಯಲ್ ಚೆನ್ನಾಗಿ ಬರ್ತಿದೆ” ಎಂದು ಮೆಚ್ಚಿ ಮಾತಾಡಿದ್ದರು! ಇದ್ದಕ್ಕಿದ್ದಂತೆ ಇದೆಂಥಾ ಬದಲಾದ ನಿಲುವು! ಯಾಕೋ ಎಲ್ಲಾ ಬಹಳ ವಿಚಿತ್ರವೆನಿಸತೊಡಗಿತು.
ನಾನೆಂದೆ: “ಹೀಗೆ ಇದ್ದಕ್ಕಿದ್ದಹಾಗೆ ನಿಲ್ಲಿಸುವುದು ಅನ್ಯಾಯವಾಗುತ್ತದೆ.ಕೊನೆಯ ಪಕ್ಷ ಒಂದು ಹತ್ತು ಹದಿನೈದು ದಿನಗಳ ಕಾಲಾವಕಾಶ ಕೊಡಿ..ಸಿದ್ಧಪಡಿಸಿಟ್ಟಿರುವ ಕಂತುಗಳನ್ನಾದರೂ ಪ್ರಸಾರ ಮಾಡಲು ಅನುವು ಮಾಡಿಕೊಡಿ” ಎಂದು ಕೇಳಿಕೊಂಡೆ. ‘ದೊಡ್ಡವರ ಬಳಿ ಮಾತಾಡಿ ಹೇಳುತ್ತೇನೆ’ ಎಂದರು.

ಆ ಅಧಿಕಾರಿಗಳು ಮರುದಿನ ಕೊಟ್ಟ ಸುದ್ದಿ ಮತ್ತಷ್ಟು ಕಂಗೆಡಿಸುವಂತಿತ್ತು: “ನಿಮ್ಮ ಧಾರಾವಾಹಿಯನ್ನು ಈ ತಕ್ಷಣದಿಂದಲೇ ನಿಲ್ಲಿಸಲು ಆದೇಶ ನೀಡಿದ್ದಾರೆ ದೊಡ್ಡವರು!” ಸೇಡು ತೀರಿಸಿಕೊಳ್ಳುವವರ ಧಾಟಿಯಲ್ಲಿತ್ತು ಮೇಲಧಿಕಾರಿಗಳ ವರ್ತನೆ. ಯಾವುದೋ ಒಂದು ಕಂತು, ಅದನ್ನು ಬಹಳ ಕೆಟ್ಟದಾಗಿ ಚಿತ್ರೀಕರಿಸಿದ್ದೆವೆಂಬುದು ಆ ಮಹಾನುಭಾವರ ಮುಖ್ಯ ಆರೋಪ..ಆ ಕಾರಣವಾಗಿಯೇ ಆ ಕ್ಷಣದಿಂದಲೇ ನಿಲ್ಲಿಸುವ ಆದೇಶ! ನನಗೆ ಒಂದು ವಿಷಯ ಅರ್ಥವಾಗಲೇ ಇಲ್ಲ : ಒಂದು ಸಣ್ಣ ತಪ್ಪಾದರೆ ತಿದ್ದುಪಡಿಗಾಗಿ ಮರಳಿ ಕಳಿಸುತ್ತಿದ್ದ ಮಹಾಶಯರಿಗೆ ಇಡಿಯ ಕಂತೇ ಕೆಟ್ಟದಾಗಿದೆ ಎನ್ನಿಸಿದಾಗ ಮರು ಚಿತ್ರೀಕರಣ ಮಾಡಿ ಕಳಿಸಿ ಎಂದು ಟೇಪ್ ಅನ್ನು ಮರಳಿಸಲು ಹೊಳೆಯಲಿಲ್ಲವೇ!

ವಾಸ್ತವವಾಗಿ ನಮ್ಮ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಹಾಗೆ ಇದ್ದಕ್ಕಿದ್ದಂತೆ ಧಾರಾವಾಹಿಯನ್ನು ನಿಲ್ಲಿಸಲು ಬರುವಂತಿರಲಿಲ್ಲ. ಒಂದು ಸಮಯಾವಕಾಶದ ಗಡುವು ಅತ್ಯಂತ ಸ್ಪಷ್ಟವಾಗಿ ಒಪ್ಪಂದ ಪತ್ರದಲ್ಲಿ ನಮೂದಾಗಿತ್ತು. ನಾನು ಕಾನೂನಾತ್ಮಕವಾಗಿ ಹೋರಾಡಿದ್ದರೆ ಖಂಡಿತ ಜಯಶಾಲಿಯಾಗುತ್ತಿದ್ದೆ. ಆದರೆ ಒಂದು ಪುಟ್ಟ ಜಯಕ್ಕಾಗಿ ಒಂದು ವಾಹಿನಿಯನ್ನೇ ಎದುರು ಹಾಕಿಕೊಳ್ಳುವುದು ಅಷ್ಟೇನೂ ಸಾಧುವಾದ ವಿಚಾರವಲ್ಲ ಎಂದು ಕೆಲ ಹಿತೈಷಿಗಳು ಅಭಿಪ್ರಾಯ ಪಟ್ಟರು. ಆ ವೇಳೆಗಾಗಲೇ ಸಿದ್ಧ ಪಡಿಸಿಟ್ಟುಕೊಂಡಿದ್ದ 15 ಕಂತುಗಳನ್ನಾದರೂ ಪ್ರಸಾರ ಮಾಡಲು ಅವಕಾಶ ಕೊಡಿ ಎಂದು ಇನ್ನಿಲ್ಲದಂತೆ ಕೇಳಿಕೊಂಡೆ. ಆದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ತಾವು ಹಿಡಿದದ್ದೇ ಹಠ—ಹೇಳಿದ್ದೇ ನಿಯಮ—ಮಾಡಿದ್ದೇ ತೀರ್ಮಾನ ಎಂಬಂತೆ ಅಧಿಕಾರಿಗಳು ತಮ್ಮ ಗುಣಮಟ್ಟದ ಆರೋಪಕ್ಕೇ ಅಂಟಿಕೊಂಡು ಬಿಟ್ಟರು. ಇದರ ಜತೆಗೆ ನಮ್ಮ ಧಾರಾವಾಹಿಗೆ ಟಿ ಆರ್ ಪಿ ಇರಲಿಲ್ಲ ಎಂಬ ಆಕ್ಷೇಪ ಬೇರೆ! ಹೊಸದಾಗಿ ಆರಂಭವಾದ, ಮಟಮಟ ಮಧ್ಯಾಹ್ನ ಪ್ರಸಾರವಾಗುತ್ತಿದ್ದ, ವೃದ್ಧರ ಸಮಸ್ಯೆಗಳ ಸುತ್ತ ಹೆಣೆಯಲಾಗಿದ್ದ ಒಂದು ಧಾರಾವಾಹಿಗೆ ಒಳ್ಳೆಯ ಟಿ ಆರ್ ಪಿ ಬರಬೇಕೆಂದರೆ, ಅದೂ ಪ್ರಾರಂಭದ ಹೊಸತರಲ್ಲಿಯೇ ಬರಬೇಕೆಂದರೆ ಹೇಗೆ ತಾನೇ ಸಾಧ್ಯವಾದೀತು?

ಸರಿ, ಬೇರೆ ಮಾರ್ಗವೇ ಇಲ್ಲದೆ ಎಲ್ಲ ಕಲಾವಿದರಿಗೂ ತಂತ್ರಜ್ಞರಿಗೂ ಸುದ್ದಿ ಮುಟ್ಟಿಸಿ ನನ್ನ ಧಾರಾವಾಹಿಗಾಗಿ ದಿನಗಳನ್ನು ಮೀಸಲಿಡುವ ಅಗತ್ಯವಿಲ್ಲವೆಂದೂ ಬಾಕಿ ನೀಡಬೇಕಾಗಿರುವ ಹಣವನ್ನು ಆದಷ್ಟು ಬೇಗ ಚುಕ್ತಾ ಮಾಡುವುದಾಗಿಯೂ ತಿಳಿಸಿ ಅದುವರೆಗಿನ ಅವರ ಸಹಕಾರಕ್ಕೆ ವಂದನೆಗಳನ್ನು ಅರ್ಪಿಸಿದೆ. ಹೊಸ ಕಥಾ ಹಂದರವನ್ನು ಸಿದ್ಧ ಪಡಿಸಿಕೊಂಡಿದ್ದೆನಲ್ಲಾ, ಆ ಭಾಗದ ಒಂದಷ್ಟು ದೃಶ್ಯಗಳನ್ನೂ ಚಿತ್ರೀಕರಿಸಿದ್ದೆ. ದುರದೃಷ್ಟವಶಾತ್ ಆ ದೃಶ್ಯಗಳು ಪ್ರಸಾರದ ಭಾಗ್ಯವನ್ನೇ ಕಾಣಲಿಲ್ಲ. ಆದರೂ ಕೆಲಸ ಮಾಡಿದ ಯಾವುದೇ ಕಲಾವಿದರ ಸಂಭಾವನೆಯನ್ನೂ ಕೊಡದೇ ಉಳಿಸಿಕೊಳ್ಳುವುದು ನನಗಿಷ್ಟವಾಗಲಿಲ್ಲ. ಎಲ್ಲರಿಗೂ ಅವರ ಸಂಭಾವನೆಯ ಹಣದ ಚೆಕ್ ಅನ್ನು ಕಳಿಸಿಕೊಟ್ಟೆ. ಕೆಲ ಕಲಾವಿದರು, “ನಮ್ಮ ಭಾಗ ಪ್ರಸಾರವೂ ಆಗಿಲ್ಲ..ಜತೆಗೆ ಧಾರಾವಾಹಿಯೂ ನಿಂತಿದೆ..ನಿರ್ಮಾಪಕರಿಗೆ ತೊಂದರೆಯಾಗುತ್ತದೆನ್ನುವುದು ನಮಗರ್ಥವಾಗುತ್ತದೆ” ಎಂಬ ಸಹಾನುಭೂತಿಯ ಮಾತುಗಳನ್ನಾಡಿ ಚೆಕ್ ಗಳನ್ನು ಮರಳಿಸಿದ್ದೂ ಉಂಟು! ಆದರೆ ನಾನು ಅವನ್ನು ಉಳಿಸಿಕೊಳ್ಳಲಿಲ್ಲ. “ಲಾಭ ನಷ್ಟಗಳೇನೇ ಆದರೂ ಅದು ನಿರ್ಮಾಪಕನ ಹಣೇಬರಹ…ಎಲ್ಲದಕ್ಕೂ ಅವನು ಸಿದ್ಧನಾಗಿರಲೇಬೇಕು” ಎಂದು ಹೇಳಿ ಎಲ್ಲಾ ಬಾಕಿಯನ್ನೂ ಚುಕ್ತಾ ಮಾಡಿಬಿಟ್ಟೆ.

ಸಂಜೆ ಮಲ್ಲಿಗೆ ಧಾರಾವಾಹಿಯ ಪ್ರಸಾರ ನಿಂತೇಹೋಯಿತು. ಒಂದು ಸಂಜೆಯ ನೀರವತೆಯಲ್ಲಿ ಇದ್ದಕ್ಕಿದ್ದಂತೆ ಒಂದು ವಿಷಯ ಅರಿವಿಗೆ ಬಂದುಬಿಟ್ಟಿತು: ಡಿಸೆಂಬರ್ 31 ರಂದು ಹೊಸ ವರ್ಷದ ಸ್ವಾಗತದ ಸಂತೋಷಕೂಟದಲ್ಲಿ ವಾಹಿನಿಯ ಒಬ್ಬ ಅಧಿಕಾರಿ ನನ್ನ ಜೊತೆಗೇ ಇದ್ದರು; ನಾನು ಹೇಳಿದ ಕಥಾವಸ್ತುವಿನ ಬದಲಾವಣಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಕೂಡಾ— ಎಂದು ಹೇಳಿದ್ದೇನಲ್ಲಾ; ಅದಾದ ಎರಡನೆಯ ದಿನಕ್ಕೇ ಧಾರಾವಾಹಿಯ ನಿಲುಗಡೆಯ ಆದೇಶದ ಪತ್ರ ನನಗೆ ಬಂದಿರುವುದು! ಆ ಪತ್ರಕ್ಕೆ ರುಜು ಮಾಡಿದ್ದವರು ನನ್ನ ಜತೆಗಿದ್ದ ಅದೇ ಮಹಾನುಭಾವರು! ಅಂದರೆ 31 ರಂದು ನನ್ನೊಟ್ಟಿಗಿರುವಾಗಲೇ ಅವರು ಧಾರಾವಾಹಿಯನ್ನು ನಿಲ್ಲಿಸುವ ತೀರ್ಮಾನ ಮಾಡಿಯಾಗಿದೆ! ಅಂದೇ ಅವರು ನನಗೆ ಈ ವಿಷಯ ತಿಳಿಸಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು..ಕೊನೆಯ ಪಕ್ಷ ಎರಡನೆಯ ತಾರೀಖು ಶೂಟಿಂಗ್ ಇಟ್ಟುಕೊಳ್ಳದೇ ಇರಬಹುದಿತ್ತು! ಆಗುತ್ತಿದ್ದ ನಷ್ಟದಲ್ಲಿ ಒಂದೆರಡು ಹನಿಗಳಾದರೂ ಕಡಿಮೆಯಾಗುತ್ತಿದ್ದವು! ಪಾಪ..ಅವರಿಗೆ ಯಾಕೋ ಹೇಳಲು ಮನಸ್ಸಾಗಲಿಲ್ಲ. ಆಗುವ ನೋವು ಸಂಕಟ ಆಗಿಯೇ ಆಗುತ್ತದೆ, ಕೊನೆಯ ಪಕ್ಷ ಈ ಒಂದು ಪಾರ್ಟಿಯಲ್ಲಾದರೂಪಾಪ ಸಂತೋಷವಾಗಿರಲಿ ಎಂಬುದು ಅವರ ಉದಾತ್ತ ಭಾವನೆಯಿದ್ದಿರಬೇಕು..

ಏನೋ.. ಒಟ್ಟಿನಲ್ಲಿ ಬಹಳ ಕನಸು ಕಟ್ಟಿಕೊಂಡು ಪ್ರಾರಂಭಿಸಿದ ‘ಸಂಜೆ ಮಲ್ಲಿಗೆ’ ಬಿರಿದು ಗಂಧ ಬೀರುವ ಮೊದಲೇ ನೆಲಕ್ಕುದುರಿ ಮುರುಟಿ ಹೋದದ್ದೊಂದು ಬಹುಕಾಲ ಕಾಡಿದ ನೋವಿನ ಸಂಗತಿ.

‍ಲೇಖಕರು avadhi

October 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: