ಶ್ರೀನಿವಾಸ ಪ್ರಭು ಅಂಕಣ – ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

17

ನಳಿನಿ ಅಕ್ಕನ ಮದುವೆಯಲ್ಲಿ ನಮ್ಮೆಲ್ಲರನ್ನೂ ಕಾಡಿದ ಒಂದೇ ಒಂದು ಕೊರತೆಯೆಂದರೆ ತಾತನ- ಅಂದರೆ ಅವಧೂತ ಶಿಶುಸ್ವಾಮಿಗಳ ಅನುಪಸ್ಥಿತಿ. ‘ನಿನ್ನ ಮದುವೆಗೆ ಖಂಡಿತ ಬಂದೇ ಬರುತ್ತೇನೆ’ ಎಂದು ಅಕ್ಕನಿಗೆ ಮಾತು ಕೊಟ್ಟಿದ್ದರಂತೆ. ಆದರೆ ಬರಲಿಲ್ಲ. ಅದಷ್ಟೇ ಅಲ್ಲ, ಅಕ್ಕನ ಮದುವೆ ನಿಶ್ಚಯ ಮಾಡಿಕೊಟ್ಟು ಹೋದ ತಾತ ಮತ್ತೆ ನಮ್ಮ ಮನೆಗೆ ಬರಲೇ ಇಲ್ಲ.

ಬಹುಶಃ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಅವರ ಕರ್ತವ್ಯಗಳು ಮುಗಿದವೆಂದು ಭಾವಿಸಿದರೋ ಏನೋ… ಅವರ ನೆನಪು ಮಾತ್ರ ಸದಾ ನಮ್ಮೆಲ್ಲರನ್ನೂ ಕಾಡುತ್ತಲೇ ಇರುತ್ತದೆ. ‘ಓ.. ಇವನ ಮೂಗು ನೋಡು’, ‘ಏ ಕೊಮರು (ಕುಮಾರ), ಎಲ್ಲಿ ಹೋದೆ ನೀನು’, ಓಹೊ! ನಿನ್ನ ಬಳಿ (ತಂಗಿ ಪದ್ಮಿನಿಗೆ) ಗಂಡನ ವಾಸನೆ ಬರ್ತಾ ಉಂಟಲ್ಲ’ …. ಇಂಥ ಅವರ ಉದ್ಗಾರಗಳು, ಅವರ ರೆಡ್ ಫೋರ್ಡ್ ಪೆನ್ನಿನ ಮೋಹ, ಸದಾ ಅವರು ಹಚ್ಚಿಕೊಳ್ಳುತ್ತಿದ್ದ ನೋಪೇನ್ ಜೆಲ್ ನ ಘಮ, ಅವರು ಹೇಳುತ್ತಿದ್ದ ಅದ್ಭುತ ಕತೆಗಳು… ಇದೆಲ್ಲವನ್ನೂ ಆಗಾಗ್ಗೆ ನಾವು ಜ್ಞಾಪಿಸಿಕೊಳ್ಳುತ್ತಲೇ ಇರುತ್ತೇವೆ.

ಅಕ್ಕನ ಮದುವೆಯಾದಾಗ ನಾನು ಆನರ್ಸ್ ಎರಡನೇ ವರ್ಷದಲ್ಲಿದ್ದೆ. ಕುಮಾರಣ್ಣಯ್ಯ ಮ್ಯಾಥಮ್ಯಾಟಿಕ್ಸ್ ಆನರ್ಸ್ ಪದವಿಯಲ್ಲಿ ಎರಡನೇ rank ಗಳಿಸಿ ಸೆಂಟ್ರಲ್ ಕಾಲೇಜ್ ನಲ್ಲಿಯೇ ಎಂ ಎಸ್ ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಅಣ್ಣಯ್ಯನ ಗಣಿತದ ಪರಿಣತಿ ನನಗೆ ಒಂದು ದೊಡ್ಡ ಅಚ್ಚರಿಯಾಗಿ ಕಾಡಿದರೆ ಅವನ ಶಿಸ್ತು-ಸಂಯಮಗಳು ಮತ್ತಷ್ಟು ಬೆರಗು ಹುಟ್ಟಿಸುತ್ತಿದ್ದವು. ಯಾವುದರಲ್ಲೂ ಅಷ್ಟೇನೂ ಶಿಸ್ತಿಲ್ಲದ ನನಗೆ ಮುಂದೆ ಕಡು ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!

ಅಣ್ಣಯ್ಯ ಎಂ ಎಸ್ ಸಿ ಪ್ರಥಮ ವರ್ಷದಲ್ಲಿದ್ದಾಗಲೇ ಕೆಲಸಕ್ಕೆ ಅರ್ಜಿ ಹಾಕಲು ಪ್ರಾರಂಭಿಸಿದ್ದ. ಯಾವ ಕಲ್ಲು ಯಾವ ಹಣ್ಣನ್ನು ಕೆಡವುತ್ತದೋ ಕಂಡವರಾರು ಎಂಬುದು ಅವನ ಸಿದ್ಧಾಂತ. ಹಾಗೆಯೇ ಒಂದು ದಿನ ಕೆನರಾ ಬ್ಯಾಂಕ್ ನಿಂದ ಲಿಖಿತ ಪರೀಕ್ಷೆಗೆ ಕರೆ ಬಂದೇ ಬಿಟ್ಟಿತು! ನಂತರ ಕೆಲವೇ ದಿನಗಳಲ್ಲಿ ಸಂದರ್ಶನಕ್ಕೆ ಕರೆ! ಸಂದರ್ಶನದಲ್ಲಿ ಅಣ್ಣಯ್ಯ ನೇರವಾಗಿಯೇ, ‘ನಾನು ಎಂ ಎಸ್ ಸಿ ಓದುತ್ತಿರುವುದರಿಂದ ಬೆಂಗಳೂರಿನಲ್ಲೇ ಕೆಲಸ ಕೊಟ್ಟರೆ ಮಾತ್ರ ಸೇರಿಕೊಳ್ಳುತ್ತೇನೆ.. ಇಲ್ಲದಿದ್ದರೆ ಓದು ನಿಲ್ಲಿಸಿ ಬರುವುದು ಕಷ್ಟ’ ಎಂದು ಹೇಳಿಬಿಟ್ಟ. ಅದಾದ ಕೆಲವು ದಿನಗಳಿಗೇ, ದುರ್ಗಾಪೂಜೆಯ ದಿನ, ಬ್ಯಾಂಕ್ ನಿಂದ ಪತ್ರ : “ನೀವು ಆಯ್ಕೆಯಾಗಿದ್ದೀರಿ. ಅಗತ್ಯ ಬಿದ್ದೊಡನೆ ನಿಮ್ಮನ್ನು ಸೇವೆಗೆ ಆಹ್ವಾನಿಸಲಾಗುವುದು”.

ಮತ್ತೆ ಶುರುವಾಯಿತು ಜಿಜ್ಞಾಸೆ: ಮುಂದೇನು? ಕೆಲಸಕ್ಕೋಸ್ಕರ ಓದು ನಿಲ್ಲಿಸುವಂತಿಲ್ಲ; ಆಗ ಬೆಂಗಳೂರಿನಲ್ಲೇ ಕೆಲಸವಾದರೂ ಕಾಲೇಜ್ ನಲ್ಲಿ ಹಾಜರಾತಿಯ ಸಮಸ್ಯೆ ಬರುತ್ತದಲ್ಲಾ, ಅದಕ್ಕೇನು ಮಾಡುವುದು? ಆ ಸಂದರ್ಭದಲ್ಲಿ ಮತ್ತೆ ನಮಗೆ ದಾರಿದೀಪವಾಗಿ ಒದಗಿ ಬಂದವರು ಶ್ರೀಕಂಠ ಮೇಷ್ಟ್ರು. “Attendance ಬಗ್ಗೆ ನೀನು ತಲೆ ಕೆಡಿಸಿಕೊಳ್ಳಬೇಡ.. ಉಳಿದ lecturers ಜೊತೇನೂ ಮಾತಾಡಿ ನಿನಗೆ ಅಗತ್ಯ ಇರೋ ಅಷ್ಟು attendance ಕೊಡಿಸೋದು ನನ್ನ ಜವಾಬ್ದಾರಿ. ಆದರೆ ತರಗತಿಗಳಲ್ಲಿ ಪಾಠ ಆಗಿರದ ಕಾರಣಕ್ಕೆ ನೀನೇ ಓದಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೋಬೇಕಾಗುತ್ತೆ.. ಅದಕ್ಕೂ ಏನೂ ಹೆದರೋದು ಬೇಡ.. ನಾನಿದೀನಿ.. ಮನೇಲೇ ಪಾಠ ಹೇಳಿಕೊಡ್ತೀನಿ” ಎಂದು ಆಶ್ವಾಸನೆ ಕೊಟ್ಟರು. ಮತ್ತೆ ಕೆಲದಿನಗಳಲ್ಲೇ ಬ್ಯಾಂಕ್ ನಿಂದ training ಗೆ ಕರೆ ಬಂದಿತು. training ನಲ್ಲಿದ್ದ 30 ಮಂದಿಯ ಪೈಕಿ ಅಣ್ಣಯ್ಯನೊಬ್ಬನಿಗೇ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದು! ಅದೂ ಮಲ್ಲೇಶ್ವರಂ ಸರ್ಕಲ್ ಶಾಖೆಯಲ್ಲಿ! ಆ ಶಾಖೆಯಲ್ಲಿ ವಿಭಜಿತ ಸಮಯಗಳಲ್ಲಿ ಕಾರ್ಯ ನಿರ್ವಹಣೆ: ಬೆಳಿಗ್ಗೆ 8.30 ರಿಂದ 11 ಹಾಗೂ ಸಂಜೆ 4 ರಿಂದ 7 ! ಎಲ್ಲಾ ಎಷ್ಟು ಅನುಕೂಲಕರವಾಗಿಯೇ ಆಗುತ್ತಿದೆ ಎಂದು ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ! ಅಣ್ಣಯ್ಯ ಬೆಳಿಗ್ಗೆ ಬೇಗ ಎದ್ದು ಸಿದ್ಧನಾಗಿ ಜಯನಗರದಿಂದ ಮಲ್ಲೇಶ್ವರಕ್ಕೆ ಬಸ್ ಹಿಡಿದು ಹೋಗುತ್ತಿದ್ದ.

ಬೆಳಗಿನ ಕೆಲಸ ಮುಗಿಸಿ ಮತ್ತೆ ಬಸ್ ಹಿಡಿದು ಕಾಲೇಜ್ ಗೆ ಬರುತ್ತಿದ್ದ. ನಾನು ಕಾಲೇಜ್ ಗೆ ಬರುವಾಗ ಇಬ್ಬರ ಬುತ್ತಿಯನ್ನೂ ತಂದಿರುತ್ತಿದ್ದೆ. ಊಟದ ಸಮಯಕ್ಕೆ ಅವನ ಡಿಪಾರ್ಟ್ ಮೆಂಟ್ ಗೇ ಹೋಗುತ್ತಿದ್ದೆ. ಅಲ್ಲೇ ಇದ್ದ parkನಲ್ಲಿ ಕೂತು ಇಬ್ಬರೂ ಊಟ ಮುಗಿಸುತ್ತಿದ್ದೆವು. ನಂತರ ಮತ್ತೊಂದು ಕ್ಲಾಸ್ ಮುಗಿಸಿಕೊಂಡು ಅಣ್ಣಯ್ಯಮತ್ತೆ ಕೆಲಸಕ್ಕೆ ದೌಡಾಯಿಸುತ್ತಿದ್ದ.

ಒಮ್ಮೆ ಹೀಗೇ ಊಟದ ಸಮಯಕ್ಕೆ ನಾನು ಅಣ್ಣಯ್ಯನ ವಿಭಾಗದ ಬಳಿ ಹೋಗಿದ್ದೆ. ಅಲ್ಲಿ ಶ್ರೀಕಂಠ ಮೇಷ್ಟ್ರ ಜೊತೆಯಲ್ಲಿ ವೆಂಕಣ್ಣಯ್ಯ ಎಂಬ ಮತ್ತೊಬ್ಬ ಪ್ರಾಧ್ಯಾಪಕರು ಹೊರಗಡೆಯೇ ಮಾತಾಡುತ್ತಾ ನಿಂತಿದ್ದರು. ಭ್ರೂಮಧ್ಯೆ ಕುಂಕುಮಶೋಭಿತರಾಗಿ ಬಂದ ನಮ್ಮಿಬ್ಬರನ್ನೂ ನೋಡಿ ಅವರು “ಆಹಾ! ಎಲ್ಲಾ ಚಂದ್ರಬಿಂಬ ವದನಗಳೇ!” ಎಂದು ಉದ್ಗರಿಸಿ ನಕ್ಕಿದ್ದರು. ಶ್ರೀಕಂಠ ಮೇಷ್ಟ್ರು ಬಹಳ ಸಮಯದವರೆಗೆ ಈ ಪ್ರಸಂಗವನ್ನು ನೆನೆಸಿಕೊಂಡು ನಗುತ್ತಿದ್ದರು. ಅಣ್ಣಯ್ಯ ಕೆಲವೊಮ್ಮೆ , ಹನ್ನೊಂದು ಗಂಟೆಗೆ HOD ಅವರ ಕ್ಲಾಸ್ ಇದ್ದಾಗ ‘ ಬ್ಯಾಂಕ್ ನಿಂದ ಕಾಲೇಜ್ ಗೆ ಬೇಗ ಬರಲು ಅನುಕೂಲವಾಗುತ್ತದೆ’ ಎಂಬ ಕಾರಣಕ್ಕೆ ಮನೆಯಿಂದ ಸೈಕಲ್ ತೆಗೆದುಕೊಂಡು ಹೊರಡುತ್ತಿದ್ದ.

ಹವ್ಯಾಸಿ ರಂಗಭೂಮಿಯಲ್ಲಿ ತುಂಬಾ ಕಷ್ಟ ಪಡುವುದಕ್ಕೆ ‘ಸೈಕಲ್ ಹೊಡೆಯುವುದು’ ಎಂದು ತಮಾಷೆಯಾಗಿ ಹೇಳುವ ವಾಡಿಕೆಯಿದೆ. ಆ ಲೆಕ್ಕದಲ್ಲಿ ಕುಮಾರಣ್ಣಯ್ಯ ತುಂಬಾ ಸೈಕಲ್ ಹೊಡೆದಿದ್ದಾನೆ.. ವಾಸ್ತವವಾಗಿ ಹಾಗೂ ಆಲಂಕಾರಿಕವಾಗಿ ಕೂಡಾ! ಇಷ್ಟೆಲ್ಲಾ ಒದ್ದಾಟಗಳ ನಡುವೆಯೂ ಅಣ್ಣಯ್ಯ ಎಂ ಎಸ್ ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದದ್ದು ನಿಜಕ್ಕೂ ಒಂದು ದೊಡ್ಡ ಸಾಧನೆಯೇ ಹೌದು. ಅಣ್ಣಯ್ಯ ಕೆಲಸಕ್ಕೆ ಸೇರಿದ ಮೇಲೆ ಮನೆಯ ಆರ್ಥಿಕ ಪರಿಸ್ಥಿತಿ ಎಷ್ಟೋ ಸುಧಾರಿಸಿ ಅಣ್ಣ ಸಮಾಧಾನದಿಂದ ಉಸಿರಾಡುವಂತಾಯಿತು.

ಆನರ್ಸ್ ತರಗತಿಗಳಲ್ಲಿ ನಾನು ಓದುತ್ತಿದ್ದ ವೇಳೆಯಲ್ಲಿ ನನಗೆ ತುಂಬಾ ಆತ್ಮೀಯರಾಗಿದ್ದ ಗೆಳೆಯರೆಂದರೆ ನನ್ನ ತರಗತಿಯವರೇ ಆಗಿದ್ದ ಮೈಸೂರು ವಿ. ಸುಬ್ರಹ್ಮಣ್ಯ, ಎಲ್. ಶಿವಪ್ರಕಾಶ್ ಹಾಗೂ ಎನ್. ನಾಗರಾಜ.ವೀಣೆ ಶೇಷಣ್ಣನವರ ಮರಿಮಗನೂ ಸ್ವತಃ ಅದ್ಭುತ ವೀಣಾವಾದಕನೂ ಆಗಿರುವ ಸುಬ್ರಹ್ಮಣ್ಯ ಅಲಿಯಾಸ್ ಸುಬ್ಬಣ್ಣ ನನಗಂತೂ ಒಬ್ಬ ಹಿರಿಯಣ್ಣನಂತೇ ಇದ್ದ. ಈ ಗೆಳೆಯರು ಅನೇಕ ಸಂದರ್ಭಗಳಲ್ಲಿ ನನಗೆ ನೀಡಿದ ನೆರವು-ಸಾಂತ್ವನ-ಭರವಸೆಗಳನ್ನು ನಾನೆಂದೂ ಮರೆಯುವಂತಿಲ್ಲ.

ನನ್ನ ಸಂಕಟದ ಸಮಯಕ್ಕೊದಗಿದ ಆಸರೆಯ ಹೆಗಲುಗಳಿವು. ಹಾಗೆಯೇ ಇಂದು ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಹಳ ದೊಡ್ಡ ಹೆಸರಾಗಿರುವ ಅನೇಕ ಧೀಮಂತರು ನನ್ನ ಮುಂದಿನ ಅಥವಾ ಹಿಂದಿನ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿದ್ದರೆಂಬುದೂ, ಅವರುಗಳೊಂದಿಗೆ ನನಗೆ ಪ್ರೀತಿಯ ಸ್ನೇಹ ಸಂಪರ್ಕವಿತ್ತೆಂಬುದೂ ಸಹಾ ನನಗೆ ಒಂದು ಹೆಮ್ಮೆಯ ಸಂಗತಿಯೇ. ಹಾಗೇ ಸುಮ್ಮನೆ ಒಂದಷ್ಟು ಹೆಸರುಗಳನ್ನು ಹೇಳುವುದಾದರೆ, ಕೆ.ವಿ. ನಾರಾಯಣ, ಹೆಚ್. ಎಸ್. ವೆಂಕಟೇಶಮೂರ್ತಿಯವರು, ದೊಡ್ಡರಂಗೇಗೌಡರು, ಸು. ರುದ್ರಮೂರ್ತಿ ಶಾಸ್ತ್ರಿಗಳು, ಆರ್. ಶೇಷಶಾಸ್ತ್ರಿ, ಎನ್.ಜಿ. ಶ್ರೀನಿವಾಸ್, ಹಿರೇಮಠ್ ,ಆರ್. ಪೂರ್ಣಿಮಾ, ಸಿಂ.ಗು. ಸಿದ್ದರಾಮಯ್ಯ, ಡಿ. ವಿ. ರಾಜಶೇಖರ,ಕೋದಂಡರಾಮ ಶೆಟ್ಟಿ, ಸಂಧ್ಯಾಶರ್ಮ, ಮೀರಾಸಾಬಿಹಳ್ಳಿ ಶಿವಣ್ಣ, ನರಹಳ್ಳಿ ಬಾಲಸುಬ್ರಹ್ಮಣ್ಯ, ಲಕ್ಷ್ಮಣ ಕೊಡಸೆ, ಕವಿ ಸಿದ್ದಲಿಂಗಯ್ಯ, ಬಸವರಾಜ ಕಲ್ಗುಡಿ… ಕೆಲ ಹೆಸರುಗಳು ಬಿಟ್ಟುಹೋಗಿದ್ದರೆ ಅದಕ್ಕೆ ಮರೆವಿನ ಕಾರಣವಷ್ಟೇ! ಕೋದಂಡರಾಮ ಶೆಟ್ಟಿ ಹಾಗೂ ಡಿ. ವಿ. ರಾಜಶೇಖರ-ಈ ಇಬ್ಬರೂ ಹಿರಿಯ ಮಿತ್ರರಂತೂ ಅನೇಕ ಇಕ್ಕಟ್ಟಿನ ಸಂದರ್ಭಗಳಲ್ಲಿ ನನ್ನ ಜತೆಗಿದ್ದು ನನಗೆ ಮಾರ್ಗದರ್ಶನ ಮಾಡಿದ್ದಾರೆ.

1972 ರಲ್ಲಿ ನಾನು ಬಿ ಎ ಆನರ್ಸ್ ಕೊನೆಯ ವರ್ಷದಲ್ಲಿದ್ದೆ. ಆ ಸಮಯದಲ್ಲಿ ಉಲ್ಲಾಳ್ ಶೀಲ್ಡ್ ಅಂತರಕಾಲೇಜು ಕನ್ನಡ ನಾಟಕ ಸ್ಪರ್ಧೆ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ನಗರದ ಅನೇಕ ಪ್ರತಿಷ್ಠಿತ ಕಾಲೇಜ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು. ಆ ವರ್ಷ ಸೆಂಟ್ರಲ್ ಕಾಲೇಜ್ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ತೀರ್ಮಾನವಾಗಿ ನಾಟಕವನ್ನು ಸಿದ್ಧ ಪಡಿಸುವ ಜವಾಬ್ದಾರಿಯನ್ನು ಕನ್ನಡ ವಿಭಾಗಕ್ಕೆ ಒಪ್ಪಿಸಲಾಗಿತ್ತು. ಮಾರ್ಗದರ್ಶನದ ಹೊಣೆ ಹೊತ್ತುಕೊಂಡ ಮರುಳಸಿದ್ದಪ್ಪನವರು ನಾಟಕ ನಿರ್ದೇಶನಕ್ಕೆ ಪ್ರಸಿದ್ಧ ರಂಗ ನಿರ್ದೇಶಕ, ನಾಟಕಕಾರ ಕ.ವೆಂ. ರಾಜಗೋಪಾಲ್ ಅವರನ್ನು ಆಹ್ವಾನಿಸಿದ್ದರು.

ಕ ವೆಂ ಅವರು ಆಯ್ಕೆ ಮಾಡಿಕೊಂಡಿದ್ದ ನಾಟಕ ಪಿ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’. ಕ್ರಾಂತಿ ಮಾತ್ರವೇ ಸಾಮಾಜಿಕ ಬದಲಾವಣೆಯನ್ನು ತರಬಲ್ಲದು ಎಂದು ಬಲವಾಗಿ ನಂಬುವ ಪ್ರೊಫೆಸರ್ ಒಬ್ಬರು ತಮ್ಮ ಕಟ್ಟಾ ಅನುಯಾಯಿಯೂ ಆಗಿದ್ದ ವಿದ್ಯಾರ್ಥಿ ಒಬ್ಬನಿಗೆ ತಮ್ಮ ಮನೆಯಲ್ಲಿ ಆಶ್ರಯಕೊಟ್ಟು ಇಟ್ಟುಕೊಳ್ಳುತ್ತಾರೆ. ಆ ವಿದ್ಯಾರ್ಥಿಯನ್ನು ಕ್ರಾಂತಿಕಾರಿ ಎಂಬ ಅನುಮಾನದ ಮೇಲೆ ಪೊಲೀಸರು ಹುಡುಕುತ್ತಿರುತ್ತಾರೆ. ವ್ಯವಸ್ಥೆಯನ್ನು ಎದುರುಹಾಕಿಕೊಂಡೂ ಸಹಾ ಅವನಿಗೆ ರಕ್ಷಣೆ ಕೊಡಲು ಪ್ರೊಫೆಸರ್ ಮುಂದಾಗಿರುತ್ತಾರೆ.

ಪ್ರೊಫೆಸರ್ ಹಾಗೂ ಅವರ ಪತ್ನಿ ಮನೆಯಿಂದ ಹೊರಗೆ ಹೋದ ಒಂದು ಸಂದರ್ಭದಲ್ಲಿ ಮನೆಗೆ ಅನಿರೀಕ್ಷಿತವಾಗಿ ನುಗ್ಗುವ ಕಳ್ಳ , ಅವನೊಂದಿಗೆ ವಿದ್ಯಾರ್ಥಿಯ ಮುಖಾಮುಖಿ- ಜಟಾಪಟಿ, ನಂತರ ವಿದ್ಯಾರ್ಥಿಯ ಮೇಲೇ ಬರುವ ಕಳ್ಳತನದ ಗುಮಾನಿ – ಆರೋಪ, ಅವನ ಅನಿರೀಕ್ಷಿತ ಕೊಲೆ… ಹೀಗೆ ನಾಟಕ ಅನೇಕ ತಿರುವುಗಳನ್ನು ಪಡೆಯುತ್ತಾ ಕ್ರಾಂತಿ ಹಾಗೂ ಹುಸಿ ಕ್ರಾಂತಿಗಳ ನೆಲೆಗಳನ್ನು ಶೋಧಿಸುತ್ತಾ ಹೋಗುತ್ತದೆ. ಇಂತಹ ಒಂದು ಅರ್ಥಪೂರ್ಣ ನಾಟಕವನ್ನು ನಿರ್ದೇಶನಕ್ಕೆ ಆಯ್ದುಕೊಂಡ ಕ.ವೆಂ. ಅವರು ಪಾತ್ರವರ್ಗದ ಆಯ್ಕೆಯ ಪ್ರಕ್ರಿಯೆ ಆರಂಭಿಸಿದರು.

ಸೆಂಟ್ರಲ್ ಕಾಲೇಜ್ ನ ಅನೇಕ ವಿಭಾಗಗಳಿಂದ ಹಲವಾರು ವಿದ್ಯಾರ್ಥಿಗಳು ತುಂಬು ಆಸಕ್ತಿಯಿಂದ ಆಯ್ಕೆಯ ಸಭೆಗೆ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳಿಂದಲೂ ನಾಟಕದ ಭಾಗಗಳನ್ನು ಓದಿಸಿ, ಅವರ ಅಭಿನಯ ಸಾಮರ್ಥ್ಯವನ್ನು ಪರೀಕ್ಷಿಸಿ ಕೊನೆಗೆ ಆಯ್ಕೆಯಾದ ಕಲಾವಿದರ ಪಟ್ಟಿಯನ್ನು ಘೋಷಿಸಿದರು. ನಾನು ಪ್ರೊಫೆಸರ್ ಭಗವಾನ್ ನ ಪಾತ್ರಕ್ಕೆ ಆಯ್ಕೆಯಾಗಿದ್ದೆ! ಎಕನಾಮಿಕ್ಸ್ ವಿಭಾಗದ ಒಬ್ಬ ಹೆಣ್ಣುಮಗಳು ನನ್ನ ಪತ್ನಿಯ ಪಾತ್ರಕ್ಕೆ, ನಮ್ಮ ವಿಭಾಗದಲ್ಲೇ ಎರಡನೇ ವರ್ಷದ ಆನರ್ಸ್ ವಿದ್ಯಾರ್ಥಿಯಾಗಿದ್ದ ಸತ್ಯೇಂದ್ರ ಕಳ್ಳನ ಪಾತ್ರಕ್ಕೆ ಆಯ್ಕೆಯಾಗಿದ್ದರು. ಉಳಿದವರು ಈಗ ನನಗೆ ನೆನಪುಳಿದಿಲ್ಲ. ನನಗೋ ಮುಖ್ಯ ಪಾತ್ರ ದೊರೆತ ಸಂಭ್ರಮ-ಖುಷಿ ಒಂದೆಡೆ, ಕೇವಲ 17 ವರ್ಷ ಪ್ರಾಯದ, ಸಪೂರ ಪೀಚು ದೇಹದ ನಾನು ಅಷ್ಟು ಮುಖ್ಯ ಪಾತ್ರವನ್ನು ನಿರ್ವಹಿಸಬಲ್ಲೆನೇ ಎಂಬ ಶಂಕೆ-ಅಂಜಿಕೆ ಮತ್ತೊಂದೆಡೆ! “ಪರವಾಗಿಲ್ಲ ಮಾಡಿ ಪ್ರಭೂ.. ನಾವೆಲ್ಲಾ ಇದೀವಿ.. training ಕೊಡ್ತೀವಿ” ಎಂದು ಪ್ರೀತಿಯ ಮೇಷ್ಟ್ರು ಮರುಳಸಿದ್ದಪ್ಪನವರು ಧೈರ್ಯ ತುಂಬಿದರು.

ಪ್ರತಿದಿನ ತರಗತಿಗಳು ಮುಗಿದ ಮೇಲೆ ನಮ್ಮ ವಿಭಾಗದ ಒಂದು ಕೊಠಡಿಯಲ್ಲಿಯೇ ತಾಲೀಮು ಶುರುವಾಗುತ್ತಿತ್ತು. ತಾಲೀಮಿನುದ್ದಕ್ಕೂ ನಿರ್ದೇಶಕರಿಗೆ ಒಂದಲ್ಲಾ ಒಂದು ತೊಡಕು ಎದುರಾಗುತ್ತಲೇ ಹೋಯಿತು. ಮೊಟ್ಟಮೊದಲ ತೊಡಕಿನ ಕಾರಣ ನಾನೇ ಆಗಿದ್ದೆ! ಒಂದು ದಿನ ಕ.ವೆಂ. ಅವರು ರಿಹರ್ಸಲ್ ಪ್ರಾರಂಭಿಸುತ್ತಲೇ, “ಪ್ರಭು, ಈ ದೃಶ್ಯದಲ್ಲಿ ನೀವು ಒಳಗಿನಿಂದ ಬರುವಾಗಲೇ ನಿಮ್ಮ ಕೈಲಿ ಸಿಗರೇಟ್ ಉರಿಯುತ್ತಿರುತ್ತದೆ.. ನೀವು ಬಂದವರೇ ಒಂದೆರಡು ಬಾರಿ ಸೇದಿ..” ಅವರ ಮಾತು ಮಗಿಯುವ ಮುನ್ನವೇ ನಾನು ಬವಳಿ ಬಂದವನಂತೆ ಕುಸಿದೇ ಹೋದೆ! ಮೊದಲನೆಯದಾಗಿ ಅದು ತನಕ ನನಗೆ ಸಿಗರೇಟ್ ಸೇದಿ ಅಭ್ಯಾಸವಿರಲಿಲ್ಲ.. ಸಿಗರೇಟ್ ಸೇದುವುದರ ಬಗ್ಗೆ ನನಗೆ ಅಂಥ ಆಕ್ಷೇಪಣೆಯಾಗಲೀ ಮುಜುಗರವಾಗಲೀ ಇರದಿದ್ದರೂ ನಾಟಕ ನೋಡಲು ಮನೆಯವರೆಲ್ಲಾ ಬರುವವರಿದ್ದರು! ಮುಖ್ಯವಾಗಿ ಅಣ್ಣ..! ಅವರೆಲ್ಲರೆದುರು ನಾನು ರಂಗದ ಮೇಲೆ ಸಿಗರೇಟ್ ಸೇದಿದರೆ ಅವರಿಗಾಗುವ ಆಘಾತವನ್ನು ಕಲ್ಪಿಸಿಕೊಂಡೇ ನಾನು ನಡುಗಿಬಿಟ್ಟೆ! ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ, ನಮ್ಮಂತಹ ಸಂಪ್ರದಾಯಸ್ಥ ಕುಟುಂಬಗಳ ಚೌಕಟ್ಟಿನಲ್ಲಿ ಸಿಗರೇಟ್ ಒಂದು ನಿಷಿದ್ಧ ವಸ್ತುವೇ ಆಗಿತ್ತು. “ಸಾಧ್ಯವೇ ಇಲ್ಲ” ಎಂದು ನಾನು ಅಕ್ಷರಶಃ ಚೀರಿಬಿಟ್ಟೆ! ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡ ಕ.ವೆಂ. ಅವರು ಹೇಗೋ ಸಮಾಧಾನಮಾಡಿಕೊಂಡು ಮುಂದಿನ ದೃಶ್ಯದ ಅಭ್ಯಾಸ ಪ್ರಾರಂಭಿಸಿದರು.

ಆ ದೃಶ್ಯವನ್ನು ವಿವರಿಸುತ್ತಾ, “ನೀವಿಬ್ಬರೂ ಹೊರಗಿನಿಂದ ಒಳಬರುತ್ತೀರಿ.. ಬರುವಾಗ ಭಗವಾನ್ (ನನ್ನ ಪಾತ್ರ) ಪತ್ನಿಯನ್ನು ತೋಳಿನಿಂದ ಬಳಸಿ ಹಿಡಿದಿರುತ್ತಾನೆ.. ಒಳಬರುತ್ತಲೇ…” ನಿರ್ದೇಶಕರು ಮಾತು ಮುಗಿಸುವ ಮುನ್ನವೇ ಪತ್ನಿಯ ಪಾತ್ರಧಾರಿ ಸಿಡಿದರು : “Sorry sir, it is impossible. ಯಾರೂ ನನ್ನ ಮೈ ಮುಟ್ಟೋದಕ್ಕೆ ನಾನು ಅವಕಾಶ ಕೊಡೋಲ್ಲ ಸರ್”. ನಿರ್ದೇಶಕರಂತೂ ಹತಾಶೆಯಿಂದ ತಲೆ ಮೇಲೆ ಕೈಹೊತ್ತು ಕೂತುಬಿಟ್ಟರು. “ಹೀಗಾದ್ರೆ ನಾನು ನಾಟಕ ಹ್ಯಾಗೆ ಮಾಡಿಸಲಿ? ಒಬ್ಬೊಬ್ಬರು ಒಂದೊಂದು ವಿಷಯಕ್ಕೆ ತಕರಾರು ಮಾಡ್ತಿದ್ರೆ ನನಗೆ ತುಂಬಾ ಕಷ್ಟವಾಗುತ್ತೆ.. ಅವನು ನೋಡಿದ್ರೆ ಸಿಗರೇಟ್ ಸೇದೋಲ್ಲ ಅಂತಾನೆ.. ನೀವು ನೋಡಿದ್ರೆ ಮೈ ಮುಟ್ಟಬೇಡಿ ಅಂತೀರಾ.. ಇದು ನಾಟಕ ಕಣ್ರೀ.. ಸ್ವಲ್ಪ rigidity ಬಿಡಬೇಕು” ಎಂದೆಲ್ಲಾ ಒಂದಿಷ್ಟು ಬುದ್ಧಿ ಹೇಳಿದರು. ಪ್ರಯೋಜನ ಮಾತ್ರ ಶೂನ್ಯ. ನಾವಿಬ್ಬರೂ ನಮ್ಮ ನಿಲುವು ಬದಲಿಸಲು ಒಪ್ಪಲಿಲ್ಲ. ಹತಾಶರಾದ ನಿರ್ದೇಶಕರು ತಾವೇ ಹೊಂದಾಣಿಕೆ ಮಾಡಿಕೊಂಡು ಅಭ್ಯಾಸ ಮುಂದುವರಿಸಿದರು. ಸುಮಾರು 20 ದಿನಗಳ ಕಾಲ ನಮ್ಮ ಅಭ್ಯಾಸ ನಡೆದು ಪ್ರದರ್ಶನದ ದಿನ ಹತ್ತಿರ ಬಂದೇ ಬಿಟ್ಟಿತು.

ನಮ್ಮ ನಾಟಕ ಪ್ರದರ್ಶನ ಇದ್ದುದು ಟೌನ್ ಹಾಲ್ ನಲ್ಲಿ. ಹಿಂದೆ ಹೈಸ್ಕೂಲ್ ನಲ್ಲಿದ್ದಾಗ ಇದೇ ವೇದಿಕೆಯ ಮೇಲೆ ಗಂಡುಗೊಡಲಿ ನಾಟಕ ಆಡಿದ್ದೆವು. ದೊಡ್ಡ ರಂಗಸ್ಥಳದ ಮೇಲೆ ಅಭಿನಯಿಸುವುದೆಂದರೆ ಏನೋ ಒಂದು ಸಂಭ್ರಮ.. ಖುಷಿ!ನಮ್ಮ ನಾಟಕದ ದಿನ ಪ್ರೇಕ್ಷಾಗೃಹ ತುಂಬಿ ಹೋಗಿತ್ತು. ಅಣ್ಣ ಅಮ್ಮನಾದಿಯಾಗಿ ಮನೆಯವರೆಲ್ಲರೂ ನಾಟಕ ನೋಡಲು ಬಂದಿದ್ದರು. ಕ ವೆಂ ನಿರ್ದೇಶಿಸಿರುವ ಲಂಕೇಶರ ನಾಟಕ ಎಂದು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ರಂಗಾಸಕ್ತರೆಲ್ಲರೂ ಟೌನ್ ಹಾಲ್ ನಲ್ಲಿ ನೆರೆದಿದ್ದರು.

ನಾನು ರಂಗದ ಮೇಲೆ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದ ಮೊದಲ ಮಹತ್ವದ ಪ್ರಯೋಗವಾದ್ದರಿಂದ ಪ್ರಾರಂಭದಲ್ಲಿ ಒಂದು ಸಣ್ಣ ಅಳುಕಿದ್ದರೂ ಬೇಗನೇ ಚೇತರಿಸಿಕೊಂಡು ಸಂಪೂರ್ಣ ಗಮನವನ್ನು ಪಾತ್ರದ ಮೇಲೆ ಕೇಂದ್ರೀಕರಿಸಿ ಅಭಿನಯಿಸಿದೆ. ಎಲ್ಲರ ಸಮಯೋಚಿತ ಅಭಿನಯದಿಂದಾಗಿ ಅದೊಂದು ಒಳ್ಳೆಯ ಪ್ರದರ್ಶನವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ‘ಗಂಡ-ಹೆಂಡತಿಯರ ಜೋಡಿ ನೋಡಲು ಅಕ್ಕ-ತಮ್ಮನಂತಿತ್ತು’, ‘ಹಿಂದಿನ ಸಾಲಿಗೆ ಕೆಲವೊಂದು ಮಾತುಗಳು ಕೇಳುತ್ತಿರಲಿಲ್ಲ’… ಈ ತರಹ ದ ಒಂದೆರಡು ಗೊಣಗುಗಳನ್ನು ಬಿಟ್ಟರೆ ಒಟ್ಟಾರೆ ಒಂದು ಯಶಸ್ವೀ ಪ್ರದರ್ಶನವಾಯಿತು ‘ಕ್ರಾಂತಿ ಬಂತು ಕ್ರಾಂತಿ’.

ಅದೇ ವೇದಿಕೆಯ ಮೇಲೆ ಮರುದಿನ ಲಂಕೇಶರ ‘ಪೋಲೀಸರಿದ್ದಾರೆ ಎಚ್ಚರಿಕೆ’ ನಾಟಕವನ್ನುˌ ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.ಕನ್ನಡದ ಶ್ರೇಷ್ಠ ನಾಟಕಕಾರ ಸಂಸರ ದುರಂತ ಬದುಕಿನ ಸುತ್ತ ಹೆಣೆಯಲಾಗಿರುವ ನಾಟಕ ಅದು. ನಾನು ಸಂಸರ ಬಗ್ಗೆ ಕೇಳಿದ್ದು ಅದೇ ಮೊದಲು. ಆ ನಾಟಕ ಪ್ರದರ್ಶನ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಆ ಗುಂಗಿನಿಂದ ಹೊರಬರಲು ನನಗೆ ಹಲವಾರು ದಿನಗಳೇ ಬೇಕಾದವು.

ಕೇಶವರಾವ್ ಅಂತಲೋ ಕೇಶವ ಸ್ವಾಮಿ ಅಂತಲೋ ಒಬ್ಬ ಕಲಾವಿದರು ಸಂಸರ ಭೂಮಿಕೆಯನ್ನು (ನಾಟಕದಲ್ಲಿ ರುದ್ರಮೂರ್ತಿ) ಮನಮುಟ್ಟುವಂತೆ ನಿರ್ವಹಿಸಿದ್ದರು. ಸಂಸರ ವಿನಾಕಾರಣದ ಪೋಲೀಸ್ ಭಯ,ಅವರ ಅನುಮಾನ-ತಲ್ಲಣಗಳು, ಅವರ ಮಾನಸಿಕ ವಿಕಲ್ಪ- ಪ್ರಕ್ಷುಬ್ದತೆಗಳು ಅಂದಿನಿಂದಲೇ ನನ್ನನ್ನು ತೀವ್ರವಾಗಿ ಕಾಡತೊಡಗಿದವು. ಎಷ್ಟೇ ವರ್ಷಗಳು ಉರುಳಿಹೋದರೂ ಸಂಸರು ನನ್ನ ಸ್ಮೃತಿ ಪಟಲದಿಂದ ದೂರವಾಗಲೇ ಇಲ್ಲ. ಹಾಗಾಗಿಯೇ ಈಗ್ಗೆ ಕೆಲವರ್ಷಗಳ ಹಿಂದೆ ನಾನು ಸಂಸರ ಬದುಕು-ಭಯ-ತಲ್ಲಣಗಳನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ನಾಟಕ ಬರೆದೆ. ಅದೇ ‘ಸಾಮಿಯ ಸ್ವಗತ’.

ಈ ಏಕಪಾತ್ರದ ನಾಟಕದಲ್ಲಿ ನಾನೇ ಸಂಸರ ಭೂಮಿಕೆಯನ್ನು ನಿರ್ವಹಿಸಿ ಹತ್ತಾರು ಕಡೆ ಪ್ರದರ್ಶನವನ್ನೂ ನೀಡಿದೆ. ಇದೇ ನಾಟಕ ಮುಂದೆ ಹಲವಾರು ಬದಲಾವಣೆಗಳೊಂದಿಗೆ ರಾಷ್ಟ್ರ ದಾಖಲೆಯನ್ನೂ ವಿಶ್ವದಾಖಲೆಯನ್ನೂ ಬರೆದ ಚಿತ್ರವಾಗಿ ರೂಪುಗೊಂಡಿತು. ಅದೇ-“ಬಿಂಬ-ಆ ತೊಂಬತ್ತು ನಿಮಿಷಗಳು” ಚಲನಚಿತ್ರ. ಇದರ ಬಗ್ಗೆ ವಿಷದವಾಗಿ ಮುಂದಿನ ಅಂಕಣಗಳಲ್ಲಿ ಬರೆಯುತ್ತೇನೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: