ಶ್ರೀನಿವಾಸ ಪ್ರಭು ಅಂಕಣ- ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

87

ಸಾಹಿತ್ಯ ಸಂಚಿಕೆಗಳನ್ನು ಕೇವಲ ಸ್ಟುಡಿಯೋ ಚರ್ಚೆಗಳಿಗೆ ಮಾತ್ರ ಸೀಮಿತಗೊಳಿಸದೆ ಆದಷ್ಟು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಈ ನಿಟ್ಟಿನಲ್ಲಿ ನಡೆಸಿದ ಚಿಂತನೆಯ ಫಲವಾಗಿ ಮೂಡಿಬಂದ ಕಾರ್ಯಕ್ರಮವೇ ‘ಋತುವೈಭವ’.ಡಾ॥ ಹೆಚ್ ಎಸ್ ವಿ ಅವರು ಹಾಗೂ ಡಾ॥ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬೇರೆ ಬೇರೆ ಋತುಗಳನ್ನು ಕುರಿತಾಗಿ ಸೊಗಸಾದ ರೂಪಕಗಳನ್ನು ರಚಿಸಿಕೊಟ್ಟರು. ನಮ್ಮ ಪುರಾತನ ಕವಿಗಳ ಕಾವ್ಯಗಳಲ್ಲಿರುವ ಋತುಸಂಬಂಧಿ ವರ್ಣನೆಗಳೊಂದಿಗೆ ಆಧುನಿಕ ಕವಿಗಳ ಋತು ವ್ಯಾಖ್ಯಾನಗಳನ್ನೂ ಒಳಗೊಂಡಿದ್ದ ಈ ರೂಪಕಗಳನ್ನು ಒಂದಿಷ್ಟು ನಿರೂಪಣೆಯೊಂದಿಗೆ ಹೇರಳವಾಗಿ ಪ್ರಕೃತಿ ಚಿತ್ರಗಳನ್ನೂ ಮಿಳಿತಗೊಳಿಸಿ ರಮ್ಯ ಚೌಕಟ್ಟಿನಲ್ಲಿ ನಿರೂಪಿಸಿದ್ದು ಒಂದು ಹೊಸ ಬಗೆಯ ಅನುಭವವನ್ನು ಕಟ್ಟಿಕೊಟ್ಟಿತು. ಬೆಳಗಿನ ಜಾವದಲ್ಲೇ ತಂಡವನ್ನು ಕರೆದುಕೊಂಡು ಲಾಲ್ ಬಾಗ್—ಕಬ್ಬನ್ ಪಾರ್ಕ್ ಗಳಲ್ಲಿ..ನಗರದ ಬೀದಿ ಬೀದಿಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದುದು ಇನ್ನೂ ಹಸಿರು ನೆನಪು!

ಯುಗಾದಿ ಹಬ್ಬಕ್ಕೆಂದು ವಿಶೇಷ ಕವಿಗೋಷ್ಠಿಗಳನ್ನೂ ಆಯೋಜಿಸಿ ನಮ್ಮ ನಾಡಿನ ಹೆಮ್ಮೆಯ ಕವಿಗಳನ್ನೆಲ್ಲಾ ಲಾಲ್ ಬಾಗ್ ಗೆ ಕರೆದುಕೊಂಡು ಹೋಗಿ ಅಲ್ಲಿಯ ರಮ್ಯವಾತಾವರಣದಲ್ಲಿ ಸುಂದರ ಪ್ರಕೃತಿಯ ಹಿನ್ನೆಲೆಯಲ್ಲಿ ಕವಿಗಳ ಕವಿತಾವಾಚನವನ್ನು ಚಿತ್ರೀಕರಿಸಿ ಪ್ರಸಾರ ಮಾಡಿದಾಗ ವೀಕ್ಷಕರಿಂದ ಮೆಚ್ಚುಗೆಯ ಸುರಿಮಳೆ!

ಶತಾವಧಾನಿ ಗಣೇಶ್ ಅವರನ್ನು ನಮ್ಮ ಸ್ಟುಡಿಯೋಗೆ ಒಮ್ಮೆ ಆಹ್ವಾನಿಸಿದ್ದೆ. ಆಗ ಅವರು ಅಷ್ಟಾವಧಾನವನ್ನು ನಡೆಸಿಕೊಟ್ಟ ಪರಿಯನ್ನು ಕಂಡು ವೀಕ್ಷಕರು ಬೆಕ್ಕಸಬೆರಗಾಗಿದ್ದರು! ಗಣೇಶ್ ಅವರ ಅದ್ಭುತ ನೆನಪಿನ ಶಕ್ತಿ, ಅವರ ಅಗಾಧ ಪಾಂಡಿತ್ಯ, ಅನನ್ಯ ವಾಕ್ಪಟುತ್ವ, ಸಮಯಸ್ಫೂರ್ತಿಗಳೆಲ್ಲವನ್ನೂ ಅನ್ಯಾದೃಶ ರೀತಿಯಲ್ಲಿ ಪ್ರಕಾಶಕ್ಕೆ ತರುವ ಕಾರ್ಯಕ್ರಮವೇ ಅವರು ನಡೆಸುವ ಅಷ್ಟಾವಧಾನ. ಪೃಚ್ಛಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡುತ್ತಾ, ಯಾರು ಎಷ್ಟೇ ಯತ್ನಿಸಿದರೂ ಒಂದಿಷ್ಟೂ ಚಿತ್ತ ವಿಚಲಿತವಾಗದಂತೆ ನೋಡಿಕೊಳ್ಳುತ್ತಾ, ಆಶುಕವಿತೆಗಳನ್ನೂ ಪೃಚ್ಛಕರು ಕೇಳಿದ ಛಂದಸ್ಸಿನಲ್ಲಿಯೇ ರಚಿಸುತ್ತಾ, ಸಾವಧಾನದಿಂದ ನಗುನಗುತ್ತಾ ಅವರು ಕಾರ್ಯಕ್ರಮವನ್ನು ಕಟ್ಟಿಕೊಡುತ್ತಿದ್ದುದೇ ಒಂದು ಬೆರಗಿನ ಸಂಗತಿ. ಡಾ॥ಲಕ್ಷ್ಮೀನಾರಾಯಣ ಭಟ್ಟರು, ಅ.ರಾ.ಮಿತ್ರ, ಪ್ರೊ॥ಲೀಲಾ ಮೊದಲಾದ ವಿದ್ವನ್ಮಣಿಗಳು ಪೃಚ್ಛಕರಾಗಿ ಭಾಗವಹಿಸಿದ್ದು ಕಾರ್ಯಕ್ರಮದ ಘನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಈ ಸಮಯದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳಿಗೂ ಹೋಗಿ ಅಲ್ಲಿ ಆಯೋಜನೆಗೊಂಡಿದ್ದ ಮುಖ್ಯ ಕಾರ್ಯಕ್ರಮಗಳೆಲ್ಲವನ್ನೂ ವಿಸ್ತೃತವಾಗಿಯೇ ಚಿತ್ರೀಕರಿಸಿಕೊಂಡು ಬರುತ್ತಿದ್ದೆ. ಜೊತೆಗೆ ಸಮ್ಮೇಳನಕ್ಕೆ ಆಗಮಿಸಿದ್ದ ಗಣ್ಯ ಸಾಹಿತಿಗಳ—ವಿದ್ವಾಂಸರ ಸಂದರ್ಶನಗಳನ್ನೂ ಮುದ್ರಿಸಿಕೊಳ್ಳುತ್ತಿದ್ದೆ.

‘ಸಂಚಯ’ ಸಾಹಿತ್ಯ ಸಂಚಿಕೆಗಾಗಿ ನಾನು ರೂಪಿಸಿದ ಮತ್ತೊಂದು ಮುಖ್ಯ ಕಾರ್ಯಕ್ರಮವೆಂದರೆ ಹನಿಗವನ ಗೋಷ್ಠಿಗಳು. YNK ಅವರು, ಬಿ.ಆರ್.ಲಕ್ಷ್ಮಣರಾವ್, ಡುಂಡಿರಾಜ್, ಜರಗನಹಳ್ಳಿ ಶಿವಶಂಕರ್ ಮೊದಲಾದ ಖ್ಯಾತನಾಮರೆಲ್ಲಾ ಭಾಗವಹಿಸಿದ್ದ ಈ ಗೋಷ್ಠಿಗೆ “honey ಕವನ ಗೋಷ್ಠಿ” ಎಂದು ನಾಮಕರಣ ಮಾಡಿದ್ದೆ! ಪುಟ್ಟ ಪುಟ್ಟ ಸಾಲುಗಳ ಈ ಹನಿಗವನಗಳಲ್ಲಿ ಶ್ಲೇಷೆ—ಅನ್ಯೋಕ್ತಿ ವಿಧಾನದ ಫಲವಾಗಿ ಚಿಮ್ಮಿ ಬರುತ್ತಿದ್ದ ಹೊಸ ಹೊಳಹುಗಳು, ಶಬ್ದ ಚಮತ್ಕಾರಗಳು ವೀಕ್ಷಕರಿಗೆ ಕಚಗುಳಿ ಇಡುತ್ತಾ ಮನಸೂರೆಗೊಳ್ಳುತ್ತಿದ್ದವು.

ಗೆಳೆಯ ನರಹಳ್ಳಿ ಬಾಲು ನಮ್ಮ ಸ್ಟುಡಿಯೋದಲ್ಲಿಯೇ ನಡೆಸಿಕೊಟ್ಟ ಅನೇಕ ಸಂದರ್ಶನ—ಚರ್ಚೆಗಳು ತತ್ಕಾಲೀನ ಸಾಹಿತ್ಯದ ಗೊತ್ತುಗುರಿಗಳಿಗೆ ತೋರುಬೆರಳಾಗುವುದರಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದವು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು, ಡಾ॥ಚಿದಾನಂದ ಮೂರ್ತಿಗಳು, ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥರಾವ್ ಮೊದಲಾದ ಅನೇಕ ಪ್ರಸಿದ್ಧ ಸಾಹಿತಿಗಳು—ವಿಮರ್ಶಕರು ಈ ಸಂವಾದಗಳಲ್ಲಿ ಭಾಗವಹಿಸಿ ಕಳೆಗಟ್ಟಿಸುತ್ತಿದ್ದರು. ಪ್ರಸಿದ್ಧ ಕವಯಿತ್ರಿ ಶಶಿಕಲಾ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಕವಿಗೋಷ್ಠಿ ಆ ಸಮಯದಲ್ಲಿ ಪ್ರಸ್ತುತಗೊಂಡ ಮತ್ತೊಂದು ಮಹತ್ವದ ಕಾರ್ಯಕ್ರಮ.

ಯಾವುದೋ ವಿಶೇಷ ಸಂದರ್ಭಕ್ಕೆಂದು ಡಾ॥ಹೆಚ್ ಎಸ್ ವೆಂಕಟೇಶ ಮೂರ್ತಿ ಹಾಗೂ ನರಹಳ್ಳಿ ಬಾಲು ಅವರೊಂದಿಗೆ ಮೈಸೂರಿನಲ್ಲಿದ್ದ ಡಾ॥ಹಾ.ಮಾ.ನಾಯಕರ ಮನೆಗೇ ಹೋಗಿ ಅವರ ವಿಶೇಷ ಸಂದರ್ಶನವನ್ನು ಮಾಡಿಕೊಂಡು ಬಂದದ್ದಂತೂ ಒಂದು ಅಪೂರ್ವ ಅನುಭವ.

ಹೀಗೆ ‘ಸಂಚಯ’ ಸಾಹಿತ್ಯ ಸಂಚಿಕೆಯನ್ನು ವೈವಿಧ್ಯಪೂರ್ಣವಾಗಿ, ಸ್ವಾರಸ್ಯಕರವಾಗಿ ರೂಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾಗಲೇ ಆಗ ನಿರ್ದೇಶಕರಾಗಿದ್ದ ಹಕ್ ಸಾಹೇಬರಿಗೆ ಧಿಡೀರನೆ ವರ್ಗಾವಣೆಯಾಗಿ ನಿರ್ದೇಶಕರ ಸ್ಥಾನ ತುಂಬಲು ಕೇರಳದವರಾದ ರುಕ್ಮಿಣಿಯವರು (ಅವರು ತಮ್ಮ ಹೆಸರನ್ನು ಬರೆದುಕೊಳ್ಳುತ್ತಿದ್ದುದು Rugmini ಎಂಬುದಾಗಿ) ಆಗಮಿಸಿದರು. ಬಂದವರೇ ಅವರು ಮಾಡಿದ ಮೊದಲ ಕೆಲಸವೆಂದರೆ ನಮ್ಮ ವಿಭಾಗಗಳ ಬದಲಾವಣೆ. “Being a theatre person you should look after only drama section! no choice or options for you!” ಎಂದವರೇ ನನಗೆ ಮರಳಿ ನಾಟಕ ವಿಭಾಗದ ಉಸ್ತುವಾರಿಯನ್ನು ವಹಿಸಿಬಿಟ್ಟರು! ನಾನು ಮೂಲತಃ ಸಾಹಿತ್ಯದ ವಿದ್ಯಾರ್ಥಿಯೇ ಆದ್ದರಿಂದ ಸಂಚಯದಂಥ ಸಾಹಿತ್ಯ ಸಂಚಿಕೆಗಳ ವಿಭಾಗ ಅಪರಿಚಿತವೆನಿಸದಿದ್ದರೂ ನಾಟಕ ವಿಭಾಗ ಒಂದು ರೀತಿಯಲ್ಲಿ ‘ತವರುಮನೆ’ಯ ಹಾಗಾದ್ದರಿಂದ ಮರಳಿ ಮನೆಗೆ ಬಂದಂತೆ ಭಾಸವಾಗಿ ಸಂತಸವಾಯಿತು. ಹುರುಪಿನಿಂದ ಹೊಸ ಹೊಸ ನಾಟಕಗಳನ್ನು ಸಿದ್ಧಪಡಿಸುವುದರತ್ತ ಗಮನ ಹರಿಸತೊಡಗಿದೆ.

ವಾಸ್ತವವಾಗಿ ಹಕ್ ಸಾಹೇಬರು ನಿರ್ದೇಶಕರಾಗಿ ಬರುವ ಮುನ್ನವೇ ನಾನು ನಾಟಕ ವಿಭಾಗಕ್ಕೆ ಕಲಾವಿದರನ್ನು ಆರಿಸಿಕೊಳ್ಳುವ ಆಲೋಚನೆ ಮಾಡಿ ಒಂದು ಅಭಿನಯ ಪರೀಕ್ಷೆಗಾಗಿ ಕಲಾವಿದರನ್ನು ಆಹ್ವಾನಿಸಿದ್ದೆ. ಆಕಾಶವಾಣಿಯಲ್ಲಿ ನಿಲಯದ ಕಲಾವಿದರಿರುವಂತೆ ನಮ್ಮದೇ ಕಲಾವಿದರ ತಂಡವಿದ್ದರೆ ಆ ಕಲಾವಿದರನ್ನು ಆರಿಸಿಕೊಂಡು ನಾಟಕಗಳನ್ನು ಸಿದ್ಧಪಡಿಸಿಕೊಡಲು ನಿರ್ದೇಶಕರನ್ನು ಆಹ್ವಾನಿಸುವುದು, ಆ ನಾಟಕಗಳನ್ನು ನಮ್ಮ ಸ್ಟುಡಿಯೋದಲ್ಲಿ ಅಥವಾ ಅಗತ್ಯವಿದ್ದರೆ ಹೊರಾಂಗಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡುವುದು ನನ್ನ ಯೋಚನೆಯಾಗಿತ್ತು. ನಾಡಿನ ಪ್ರಸಿದ್ಧ ನಿರ್ದೇಶಕರೂ ನಾಟಕಕಾರರೂ ಆಗಿದ್ದ ಬಿ.ಸಿ.ಚಂದ್ರಶೇಖರ್ ಅವರು ಹಾಗೂ ನಮ್ಮ ಭೂತಪೂರ್ವ ನಿರ್ದೇಶಕ ಜೆ.ಎನ್.ಕಮಲಾಪುರ್ ಅವರು ಆಯ್ಕೆ ಸಮಿತಿಯಲ್ಲಿದ್ದರು. ನೂರಕ್ಕೂ ಹೆಚ್ಚು ಕಲಾವಿದರನ್ನು ಈ ಪ್ರಕ್ರಿಯೆಯ ಮೂಲಕ ಆರಿಸಿ ಅವರ ವಿವರಗಳನ್ನೆಲ್ಲಾ ಒಳಗೊಂಡ ಹೊತ್ತಿಗೆಗಳನ್ನು ಸಿದ್ಧಪಡಿಸಿಟ್ಟಿದ್ದೆ. ನನಗೆ ಅರಿವಿರುವ ಮಟ್ಟಿಗೆ ದೇಶದ ಯಾವ ದೂರದರ್ಶನ ಕೇಂದ್ರದಲ್ಲಿಯೂ ಅದುವರೆಗೆ ಅಂಥದೊಂದು ಪ್ರಕ್ರಿಯೆ ನಡೆದಿರಲಿಲ್ಲ. ನಮ್ಮ ಕೇಂದ್ರದಲ್ಲಿಯೇ ಒಂದು ಹಾಲ್ ನಲ್ಲಿ ತಾಲೀಮಿಗೆ ವ್ಯವಸ್ಥೆ ಮಾಡಿದ್ದೆ. ಅನೇಕ ನಿರ್ದೇಶಕರು ನಮ್ಮಲ್ಲಿಗೆ ಆಗಮಿಸಿ ನಮ್ಮ ಕೇಂದ್ರದ ಕಲಾವಿದರನ್ನೇ ಆರಿಸಿಕೊಂಡು ಹಲವಾರು ಶ್ರೇಷ್ಠ ನಾಟಕಗಳನ್ನು ನಮಗಾಗಿ ಸಿದ್ಧಪಡಿಸಿಕೊಟ್ಟರು. ಅವುಗಳಲ್ಲಿ ತುಂಬಾ ಮಹತ್ವದ ಕೆಲವು ಪ್ರಯೋಗಗಳೆಂದರೆ ಪ್ರಸಿದ್ಧ ನಿರ್ದೇಶಕಿ ಮಾಲತಿಯವರು ಮಾಡಿಸಿದ ‘ಮೀಡಿಯಾ’ ಹಾಗೂ ಜಯತೀರ್ಥ ಜೋಶಿ ಮಾಡಿಸಿದ ‘ಕಲ್ಯಾಣಿ’.

‘ಮೀಡಿಯಾ’ ಕ್ರಿ ಪೂ 431ರಲ್ಲಿ ಶ್ರೇಷ್ಠ ಗ್ರೀಕ್ ನಾಟಕಕಾರ ಯೂರಿಪಿಡೀಸ್ ರಚಿಸಿದ ದುರಂತ ನಾಟಕ. ಉತ್ಕಟ ಪ್ರೇಮಿ ಮೀಡಿಯಾ, ತನ್ನ ಪತಿ ಜೇಸನ್ ಮಾಡಿದ ನಂಬಿಕೆ ದ್ರೋಹದಿಂದ ರೊಚ್ಚಿಗೆದ್ದು ಅವನನ್ನೂ ತನ್ನ ಇಬ್ಬರು ಮಕ್ಕಳನ್ನೂ ಪ್ರತೀಕಾರ ರೂಪವಾಗಿ ಬರ್ಬರವಾಗಿ ಹತ್ಯೆ ಮಾಡುವುದು ನಾಟಕದ ಕೇಂದ್ರ ಬಿಂದು. ಕೆಲ ವಿಮರ್ಶಕರು ಗುರುತಿಸುವಂತೆ ಇದು ಬಹುಶಃ ಜಗತ್ತಿನ ಪ್ರಪ್ರಥಮ ಸ್ತ್ರೀವಾದಿ ನಾಟಕ ಕೂಡಾ! ಸಂಬಂಧಗಳ ಒಳಸುಳಿಗಳ ಸುರುಳಿಗಳನ್ನು ಅನಾವರಣಗೊಳಿಸುತ್ತಾ ಸಾಗಿ ಕೊನೆಯಲ್ಲಿ ಪ್ರೇಕ್ಷಕರನ್ನು ತಲ್ಲಣಗೊಳಿಸಿ ಗಾಢ ಮೌನಕ್ಕೆ ದೂಡಿಬಿಡುವ ಈ ದುರಂತನಾಟಕವನ್ನು ಬಹು ಸಮರ್ಥವಾಗಿ ರಂಗಕ್ಕೆ ಮಾಲತಿಯವರು ಅಳವಡಿಸಿದ್ದರು. ಅವರೇ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು ಕೂಡಾ. ಅದ್ಭುತವಾದ ಸೆಟ್ ಗಳು, ಮನಮುಟ್ಟುವ ಅಭಿನಯಗಳಿಂದಾಗಿ ಮೀಡಿಯಾ ಜನಮನ ಸೂರೆಗೊಂಡ ಯಶಸ್ವೀ ನಾಟಕವಾಯಿತು.

ಜಯತೀರ್ಥ ಜೋಶಿ ಆರಿಸಿಕೊಂಡ ‘ಕಲ್ಯಾಣಿ’ ನಾಟಕ ಬ್ರೆಕ್ಟ್ ನ ‘ಗುಡ್ ವುಮನ್ ಆಫ್ ಸೆಜು಼ವಾನ್’ ನಾಟಕವನ್ನು ಆಧರಿಸಿ ರಚಿತವಾದದ್ದು. ದೂರದರ್ಶನದಲ್ಲಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಭವ್ಯ ಸೆಟ್ ಗಳನ್ನು ನಮ್ಮ ಕಲಾವಿಭಾಗದವರು ನಿರ್ಮಿಸಿಕೊಟ್ಟಿದ್ದರು. ಇದೇ ನಾಟಕದ ಕೆಲ ಭಾಗಗಳನ್ನು ಫ್ತಿಟ್ಸ್ ಬೆನವಿಟ್ಸ್ ಅವರ ನಿರ್ದೇಶನದಲ್ಲಿ ದೆಹಲಿಯ ನಾಟಕ ಶಾಲೆಯಲ್ಲಿ ಮಾಡಿದಾಗ ನಾನು ಪೈಲಟ್ ನ ಪಾತ್ರವನ್ನು ನಿರ್ವಹಿಸಿದ್ದರ ಬಗ್ಗೆ ಹಿಂದೆಯೇ ಬರೆದಿದ್ದೇನೆ. ನಳಿನಿ ಅಕ್ಕ ಕಲ್ಯಾಣಿಯ ಮುಖ್ಯ ಭೂಮಿಕೆಯಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಳು. ಭಾರಿ ಸೆಟ್ ಗಳನ್ನು ಪದೇ ಪದೇ ನಿರ್ಮಿಸಿ ಕೆಡವಿ ಮತ್ತೆ ಕಟ್ಟುವ ತೊಂದರೆಯಿಂದ ಪಾರಾಗಲು ದೃಶ್ಯಗಳನ್ನು ಚಿತ್ರೀಕರಿಸುವ ಕ್ರಮವನ್ನೇ ಬದಲಾಯಿಸಿಕೊಳ್ಳಬೇಕಾಯಿತು! ಒಂದು ಸೆಟ್ ನಿರ್ಮಿಸಿದರೆ ಆ ರಂಗಸಜ್ಜಿಕೆಯಲ್ಲಿ ನಡೆಯುವ ದೃಶ್ಯಗಳೆಲ್ಲವನ್ನೂ ಚಿತ್ರೀಕರಿಸುವುದು; ನಂತರ ಮತ್ತೊಂದು ಸೆಟ್ ನ ನಿರ್ಮಾಣ—ಚಿತ್ರೀಕರಣ…ನಂತರ ಮತ್ತೊಂದು.. ಕೊನೆಯಲ್ಲಿ ದೃಶ್ಯಗಳನ್ನು ಅನುಕ್ರಮಣಿಕೆಯಲ್ಲಿ ಜೋಡಿಸಿ ಸಂಕಲಿಸುವುದು! ಹೀಗೆ ಒಂದು ವಾರಕ್ಕೂ ಹೆಚ್ಚು ಕಾಲ ಸ್ಟುಡಿಯೋದಲ್ಲಿ ‘ಕಲ್ಯಾಣಿ’ ನಾಟಕದ ಚಿತ್ರೀಕರಣ ನಡೆಯಿತು.ಕೊನೆಯ ದಿನದ ಚಿತ್ರೀಕರಣ ಮುಗಿದಾಗ ನಮ್ಮ ಇಂಜಿನಿಯರಿಂಗ್ ವಿಭಾಗದ ಗೆಳೆಯರು ನೆಮ್ಮದಿಯ ನಿಟ್ಟುಸಿರು ಬಿಟ್ಟು,”ನಮ್ಮ ಸರ್ವೀಸಲ್ಲೇ ಇಷ್ಟು ಕೆಲಸ ನಮ್ಮಿಂದ ಯಾರೂ ತೆಗೆದಿರಲಿಲ್ಲ” ಎಂದು ಉದ್ಗರಿಸಿದ್ದರು!ಒಟ್ಟಿನಲ್ಲಿ ಒಂದು ಎಪಿಕ್ ನಾಟಕದ ಎಪಿಕ್ ನಿರ್ಮಾಣವಾಗಿತ್ತು ‘ಕಲ್ಯಾಣಿ’ ನಾಟಕ!

ಆ ಸಂದರ್ಭದಲ್ಲೇ U S ನಿಂದ ಬಂದಿದ್ದ ತಜ್ಞರ ತಂಡವೊಂದನ್ನು ನಮ್ಮ ಕೇಂದ್ರಕ್ಕೆ ಆಹ್ವಾನಿಸಿ ಒಂದು ಕಾರ್ಯಾಗಾರವನ್ನು ಯೋಜಿಸಲಾಯಿತು. ಈ ಕಾರ್ಯಾಗಾರದ ನಿರ್ವಹಣೆಯ ಹೊಣೆ ನನ್ನ ಹೆಗಲೇರಿತ್ತು. ಮಿನರ್ವ ಮಿಲ್ ಆವರಣದಲ್ಲಿ ನಾನು ಆಯೋಜಿಸಿದ ಈ ಕಾರ್ಯಾಗಾರದಲ್ಲಿ ಸುಮಾರು ಇಪ್ಪತ್ತು ಮಂದಿ ಆಯ್ದ ಕಲಾವಿದರು ಭಾಗವಹಿಸಿದ್ದರು.

ಮದ್ರಾಸ್ ನಲ್ಲಿ ನಡೆದ ಇಂಡೋ ಜರ್ಮನ್ ಕಾರ್ಯಾಗಾರಕ್ಕೂ ನಮ್ಮ ನಿರ್ದೇಶಕರು ನನ್ನನ್ನೇ ಆರಿಸಿ ಕಳಿಸಿದ್ದರು. ಕಿರುಚಿತ್ರ ನಿರ್ಮಾಣ—ನಿರ್ದೇಶನಗಳಿಗೆ ಸಂಬಂಧ ಪಟ್ಟಿದ್ದ ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಒಂದು ಮರೆಯಲಾಗದ ಅನುಭವ. ಪೆರುಮಾಳ್ ಎಂಬ ಕಥೆಗಾರರ ಒಂದು ಕಥೆಯನ್ನು ಕಿರುತೆರೆಗೆ ಅಳವಡಿಸಿಕೊಂಡು ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ತಂಡದ ಎಲ್ಲರೂ ಸೇರಿ ಆ ಕಿರುಚಿತ್ರವನ್ನು ಸಿದ್ಧಪಡಿಸಿದ್ದೆವು.

ಮುಂದಿನ ದಿನಗಳಲ್ಲಿ ಕನ್ನಡದ ಕಥೆಗಳನ್ನು ಅಳವಡಿಸಿಕೊಂಡು ಸಾಕಷ್ಟು ಕಿರುಚಿತ್ರಗಳನ್ನೂ ಕೂಡಾ ಸಿದ್ಧಪಡಿಸತೊಡಗಿದೆ. ಕೆಲವನ್ನು ನೆನಪಿಸಿಕೊಳ್ಳುವುದಾದರೆ: ನರೇಂದ್ರಬಾಬು ಅವರ ‘ಚಿಟ್ಟೆ’; ಸುಶೀಲಾದೇವಿ ಅವರ ‘ಅನಾಗರಿಕ’; ಪ್ರೇಮಾ ಭಟ್ ಅವರ ‘ಆಗಂತುಕರು’; ಕುಂ.ವೀರಭದ್ರಪ್ಪ ಅವರ ಕಥೆಯಾಧಾರಿತ ‘ನಿರ್ಜೀವ’.

‘ನಿರ್ಜೀವ’ ನಾನು ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿದ್ದಾಗ ಮಾಡಿದ್ದ ಕಿರುಚಿತ್ರ—ಈ ಕುರಿತಾಗಿ ಹಿಂದೆಯೇ ಬರೆದಿದ್ದೇನೆ. ಇಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದವರು ಸಂಕೇತ್ ಕಾಶಿ ಹಾಗೂ ರಿಚರ್ಡ್ ಜಿ ಲೂಯಿಸ್. ದೈನ್ಯವೇ ಮೈವೆತ್ತಂತೆ ಕಾಣುತ್ತಿದ್ದ ಕಾಶಿಯ ಅಭಿನಯ ಮನ ಕಲಕುವಂತಿದ್ದರೆ ಕುತಂತ್ರಿ ಹುಸೇನನ ಪಾತ್ರದಲ್ಲಿ ರಿಚಿ ವೀಕ್ಷಕರ ಕಟುನಿಂದೆಗೆ ಪಾತ್ರವಾಗುವಷ್ಟು ಸಮರ್ಥವಾಗಿ ಅಭಿನಯಿಸಿದ್ದ! ಈ ಚಿತ್ರಕ್ಕೆ ಗೆಳೆಯ ಎಂ ಎನ್ ವ್ಯಾಸರಾವ್ ಒಂದು ಮನಮುಟ್ಟುವ ಗೀತೆಯನ್ನು ಬರೆದುಕೊಟ್ಟಿದ್ದ. ‘ಬದುಕೇ ಒಂದು ಗೋರಿಯಾಗಿದೆ…ಈ ಜೀವ..ನಿರ್ಜೀವ’..ಎಂದು ಮುಂತಾಗಿ ಸಾಗುವ ಈ ಗೀತೆಗೆ ಅಷ್ಟೇ ಅದ್ಭುತವಾಗಿ ಸ್ವರ ಸಂಯೋಜನೆ ಮಾಡಿ ತಮ್ಮ ಆರ್ತದನಿಯಲ್ಲಿ ಹಾಡಿ ವೀಕ್ಷಕರ ಕಣ್ಣು ತೇವಗೊಳಿಸಿದವರು ಪ್ರಸಿದ್ಧ ಗಾಯಕ—ಸಂಗೀತ ನಿರ್ದೇಶಕ ಸಿ. ಅಶ್ವಥ್. ದೂರದರ್ಶನದಿಂದ ಪ್ರಸಾರಗೊಂಡ ಈ ಚಿತ್ರ ಅಪಾರ ಜನಮೆಚ್ಚುಗೆಯನ್ನು ಪಡೆದುಕೊಂಡಿತು. ಆಗ ಸಿ.ಅಶ್ವಥ್ ಅವರು,”ನೀವು ಒಬ್ಬ ಸದಭಿರುಚಿಯ ಸಮರ್ಥ ನಿರ್ದೇಶಕರು; ನಿಮ್ಮೊಟ್ಟಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ; ಮುಂದೆಯೂ ಇಂಥ ಅವಕಾಶಗಳು ಒದಗಿಬರಲಿ” ಎಂದು ಮೆಚ್ಚಿ ಪತ್ರ ಬರೆದಿದ್ದರು! ಅವರು ಆಶಿಸಿದ್ದಂತೆಯೇ ಮುಂದೆ ಅನೇಕ ಸಂದರ್ಭಗಳಲ್ಲಿ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶಗಳೂ ಒದಗಿ ಬಂದವು ಅನ್ನಿ. ಆ ವಿವರಗಳನ್ನು ಮುಂದಿನ ಪುಟಗಳಲ್ಲಿ ದಾಖಲಿಸುತ್ತೇನೆ.

‘ನಾಗರಿಕತೆ ಇರುವುದು ವೇಷ ಭೂಷಣಗಳಲ್ಲಾಗಲೀ ಪದವಿ ಪ್ರತಿಷ್ಠೆಗಳಲ್ಲಾಗಲೀ ಅಲ್ಲ; ಅದು ಇರುವುದು ನಿಮ್ಮ ಮಾನವೀಯ ದೃಷ್ಟಿಕೋನದಲ್ಲಿ; ನಿಮ್ಮ ಸಂಸ್ಕಾರದಲ್ಲಿ’—ಎಂಬ ಸತ್ಯವನ್ನು ನವುರಾಗಿ ಬಿಂಬಿಸುವ ಕಥೆ, ಸುಶಿಲಾದೇವಿಯವರ ”ಅನಾಗರಿಕ’. ಪ್ರಸಿದ್ಧ ರಂಗ ಕಲಾವಿದ ರಾಮಮೂರ್ತಿ (ಇತ್ತೀಚೆಗಷ್ಟೇ ಇವನನ್ನು ಕಳೆದುಕೊಂಡದ್ದು ತುಂಬಲಾರದ ನಷ್ಟ)—ನಳಿನಿ ಅಕ್ಕ ಹಾಗೂ ನರೇಶ್ ಅವರು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದ ಈ ಕಿರುಚಿತ್ರ ಕೂಡಾ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರೇಮಾಭಟ್ ಅವರ ‘ಆಗಂತುಕರು’ ಸಂಬಂಧಗಳ ಪೊಳ್ಳುತನವನ್ನು ಸೂಕ್ಷ್ಮವಾಗಿ ಗಮನಿಸುವ ಕಥೆ. ಯಾವುದೋ ಬಾದರಾಯಣ ಸಂಬಂಧವನ್ನು ಹೇಳಿಕೊಂಡು ದಂಪತಿಗಳಿರುವ ಮನೆಗೆ ಬರುವ ಹಿರಿಯ ಪತಿ ಪತ್ನಿಯರು ಮನೆಯವರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಮನೆಯವರಂತೆಯೇ ಆಗಿಬಿಡುತ್ತಾರೆ. ಒಂದು ದಿನ ಮನೆಯವರು ಹೊರಹೋದ ಸಮಯವನ್ನು ಬಳಸಿಕೊಂಡು ಮನೆಯಲ್ಲಿದ್ದ ಒಡವೆ ವಸ್ತುಗಳನ್ನೆಲ್ಲಾ ದೋಚಿಕೊಂಡು ಹೋಗಿಬಿಡುತ್ತಾರೆ! ಈ ನೇರ ಸರಳ ಕಥೆಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿಕೊಳ್ಳುವಾಗ ಕೊನೆಯಲ್ಲಿ ನಾನು ಒಂದು ಸಣ್ಣ ಬದಲಾವಣೆ ಮಾಡಿಕೊಂಡಿದ್ದೆ: ಹಿರಿಯ ದಂಪತಿಗಳು ಎಲ್ಲವನ್ನೂ ದೋಚಿಕೊಂಡು ಹೋದದ್ದು ಅರಿವಾದಾಗ ಗಂಡ ಹೆಂಡತಿಯನ್ನು ಕೇಳುತ್ತಾನೆ: “ಏನೇನು ಕಳುವಾಗಿದೆ ಅಂತ ನೋಡಿ ಹೇಳು..ಪಟ್ಟಿಮಾಡಿಕೊಂಡು ಸ್ಟೇಷನ್ ಗೆ ಹೋಗಿ ದೂರು ಕೊಟ್ಟು ಬರುತ್ತೇನೆ.” ಹೆಂಡತಿ ಹೇಳುತ್ತಾಳೆ: “ಹೂಂ..ಬರಕೊಳ್ಳಿ..ನಂಬಿಕೆ, ವಿಶ್ವಾಸ, ಪ್ರೀತಿ..ಎಲ್ಲಾ ಕಳುವಾಗಿದೆ. ಆದಷ್ಟು ಬೇಗ ಹುಡುಕಿಕೊಡೋದಕ್ಕೆ ಪೋಲೀಸರಿಗೆ ಹೇಳಿ!”

ಈ ಮಾತುಗಳು ಕಿರುಚಿತ್ರಕ್ಕೆ ಒಂದು ಅನಿರೀಕ್ಷಿತ ಮಾರ್ಮಿಕ ಅಂತ್ಯವನ್ನು ತಂದುಕೊಟ್ಟು ಪರಿಣಾಮ ತೀವ್ರತೆಯನ್ನು ಹೆಚ್ಚಿಸುತ್ತವೆ. ನನಗೇ ಬಹಳ ಇಷ್ಟವಾದ ನಾನು ಮಾಡಿದ ಕಿರುಚಿತ್ರವಿದು!

ನರೇಂದ್ರಬಾಬು ಅವರ ‘ಚಿಟ್ಟೆ’ ಒಂದು ಸ್ತ್ರೀಕೇಂದ್ರಿತ ಕಥೆ; ರೇಷ್ಮೆ ಹುಳುವನ್ನು ಸಾಂಕೇತಿಕವಾಗಿ ಬಳಸಿಕೊಂಡು ಒಂದು ಹೆಣ್ಣಿನ ಬವಣೆಯ ಬದುಕನ್ನು ಹೃದಯಂಗಮವಾಗಿ ಕಟ್ಟಿಕೊಡುವ ಸಾರ್ಥಕ ಕಥೆ. ಇದರ ದೃಶ್ಯ ಮಾಧ್ಯಮದ ಅಳವಡಿಕೆಯೂ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಈ ಕಾಲಾವಧಿಯಲ್ಲಿಯೇ ಆತ್ಮೀಯ ಗೆಳೆಯ—ಎನ್ ಎಸ್ ಡಿ ಸಹಪಾಠಿ ಸುರೇಂದ್ರನಾಥ್ ಅಲಿಯಾಸ್ ಸೂರಿ ಚೆಕಾಫ್ ನ ಕಥೆಗಳನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿ ಕೊಟ್ಟ. ಅವನು ಕಲಾಗಂಗೋತ್ರಿ ತಂಡಕ್ಕಾಗಿ ನಿರ್ದೇಶಿಸಿದ್ದ ‘ಈ ಮುಖದವರು’ ನಾಟಕದಲ್ಲಿ ನಾನು ಒಂದು ಮುಖ್ಯ ಪಾತ್ರ ವಹಿಸಿದ್ದ ಸಂಗತಿಯನ್ನು ಈಗಾಗಲೇ ಹೇಳಿದ್ದೇನಷ್ಟೇ. ಮತ್ತೊಬ್ಬ ಮುಖ್ಯ ಪಾತ್ರಧಾರಿ ಸತ್ಯಸಂಧ ತೀರಿಕೊಂಡ ಮೇಲೆ ಆ ನಾಟಕವನ್ನು ರಂಗದ ಮೇಲೆ ಅಭಿನಯಿಸಿರಲಿಲ್ಲ. ಆ ನಾಟಕವನ್ನೇಕೆ ದೂರದರ್ಶನಕ್ಕೆ ಅಳವಡಿಸಿಕೊಳ್ಳಬಾರದು ಎಂದು ಆಲೋಚಿಸಿದೆ. ಆಗ ಸತ್ಯಸಂಧನ ಪಾತ್ರಕ್ಕೆ ಬದಲಿ ಪಾತ್ರಧಾರಿಯಾಗಿ ನನಗೆ ಹೊಳೆದದ್ದು ಪೃಥ್ವಿರಾಜ್ ನ ಹೆಸರು. ‘ಅಜಿತನ ಸಾಹಸಗಳು’ ಧಾರಾವಾಹಿಯಲ್ಲಿ ಡಾ॥ರಾವ್ ಪಾತ್ರದಲ್ಲಿ ಅಭಿನಯಿಸಿದ್ದು ಇದೇ ಪೃಥ್ವಿ.ಸೂರಿ ತಾನೇ ರೂಪಾಂತರಿಸಿ ಸಮರ್ಥವಾಗಿ ನಿರ್ದೇಶಿಸಿದ್ದ ಈ ನಾಟಕ ನನ್ನ ಯಾವತ್ತಿನ ಮೆಚ್ಚಿನ ನಾಟಕ. ದೂರದರ್ಶನಕ್ಕೆ ಅಳವಡಿಸಿಕೊಂಡು ಪ್ರಸಾರ ಮಾಡಿದಾಗಲೂ ವೀಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು.

ಮುಂದಿನ ಕೆಲ ವರ್ಷಗಳು ನನ್ನ ಬದುಕಿನಲ್ಲಿ ಅನೇಕ ಅನಿರೀಕ್ಷಿತ ತಿರುವುಗಳನ್ನು ಕಂಡ ಸಮಯ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

March 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: