ಶ್ರೀನಿವಾಸ ಪ್ರಭು ಅಂಕಣ: ಮರೆಯಲಾಗದ ‘ಮುಸ್ಸಂಜೆ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 111
——————
‘ರಾಷ್ಟ್ರಗೀತೆ’ ಚಿತ್ರದ ಚಿತ್ರೀಕರಣ ಬಲು ಸಂಭ್ರಮದಿಂದ ಆರಂಭವಾಯಿತು. ಕೆ.ವಿ.ರಾಜು ಸಮರ್ಥ ನಿರ್ದೇಶಕ—ಬರಹಗಾರರಷ್ಟೇ ಅಲ್ಲ, ಬಹಳ ಒಳ್ಳೆಯ ತಂತ್ರಜ್ಞ ಎಂದೇ ಹೆಸರಾದವರು. ಕ್ಯಾಮರಾ ಕೋನಗಳನ್ನು ಅವರು ನಿರ್ಧರಿಸುತ್ತಿದ್ದ ಬಗೆಯೇ ತುಂಬಾ ವಿಶಿಷ್ಟವಾದುದು. ಅನೇಕ ಚಿತ್ರಿಕೆಗಳ ಸಂಯೋಜನೆಯಂತೂ ಛಾಯಾಗ್ರಾಹಕರಿಗೇ ಸವಾಲೊಡ್ಡುವ ರೀತಿಯಲ್ಲಿರುತ್ತಿತ್ತು. ಎಷ್ಟೋ ದೃಶ್ಯಗಳನ್ನು ಸ್ವತಃ ರಾಜು ಅವರೇ ಕೈಲಿ ಕ್ಯಾಮರಾ ಹಿಡಿದು ಚಿತ್ರೀಕರಿಸಿದ್ದುಂಟು! ಸಾಹಸ ದೃಶ್ಯಗಳ ಸಂಯೋಜನೆಯಲ್ಲಿಯೂ ರಾಜು ಸಿದ್ಧಹಸ್ತರು.ಛೇಸಿಂಗ್ ದೃಶ್ಯವಾಗಲೀ ಹೊಡೆದಾಟದ ದೃಶ್ಯವೇ ಆಗಲಿ ಕಲಾವಿದರು ಕೊಂಚ ಗಾಬರಿಗೊಳ್ಳುವ ರೀತಿಯಲ್ಲಿಯೇ ರಾಜು ಚಿತ್ರೀಕರಿಸುತ್ತಿದ್ದರು! ‘ಹೆದರಿಕೋಬಾರದು ಮರೀ..ಸಾಹಸ ದೃಶ್ಯಗಳನ್ನ ಭಯಪಟ್ಟುಕೊಂಡು ಮಕ್ಕಳಾಟದ ಥರಾ ಶೂಟ್ ಮಾಡಿದ್ರೆ ಏನ್ ಥ್ರಿಲ್ಲಿರುತ್ತೆ ಮಣ್ಣು!’ ಎನ್ನುತ್ತಾ ಕಲಾವಿದರನ್ನು ಹುರಿದುಂಬಿಸುತ್ತಿದ್ದರು.

ಒಂದು ದೃಶ್ಯದ ಚಿತ್ರೀಕರಣದ ಪ್ರಸಂಗ ನನಗಿನ್ನೂ ನೆನಪಿದೆ: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರಗೀತೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಿದ್ದು.ಅಲ್ಲಿ ಒಂದು ದೃಶ್ಯದಲ್ಲಿ ನಾನು ನನ್ನ ಬಂಟರೊಂದಿಗೆ ಮಂಜುಳಾ ಶರ್ಮ ಅವರನ್ನು ಮೇಲಿನ ಮಹಡಿಗೆ ಎಳೆದುಕೊಂಡು ಹೋಗಿ ಅವರನ್ನು ಮೇಲಿನಿಂದ ಕೆಳಗೆ ದೂಡುವ ದೃಶ್ಯ..ಮೇಲಿನತನಕ ಎಳೆದುಕೊಂಡು ಹೋಗುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು.ಕೆಳಗೆ ತಳ್ಳುವ ದೃಶ್ಯದ ಸಂಯೋಜನೆಯನ್ನು ರಾಜಣ್ಣ ವಿವರಿಸುತ್ತಿದ್ದಂತೆ ನನಗೆ ಜಂಘಾಬಲವೇ ಉಡುಗಿಹೋಯಿತು! ಆ ಬಹುಮಹಡಿ ಕಟ್ಟಡದ ಮೇಲ್ಭಾಗದ ತಡೆಗೋಡೆಯ ಮೇಲೇ ಆಕೆಯನ್ನು ಮಲಗಿಸಿ ತಳ್ಳುವಂತೆ ಅಭಿನಯಿಸಬೇಕಿತ್ತು! ಸಹಾಯಕ್ಕೆ,ಸಹಕಾರಕ್ಕೆ ಜನರೇನೋ ಇದ್ದಾರೆ, ಸರಿಯೇ…ಆದರೆ ಅಕಸ್ಮಾತ್ ಏನಾದರೂ ಹೆಚ್ಚುಕಡಿಮೆಯಾದರೆ ಆಕೆಯ ಗತಿ?? ಆಕೆಯನ್ನು ತಳ್ಳುವ ದುಷ್ಟಕೃತ್ಯ ನನ್ನಿಂದಲೇ ಜರುಗಬೇಕಿತ್ತು! ಆಕೆಯಂತೂ ಆ ಜಾಗವನ್ನೂ ಆ ಎತ್ತರವನ್ನೂ ಆ ದೃಶ್ಯ ಸಂಯೋಜನೆಯನ್ನೂ ನೋಡಿ—ಕೇಳಿಯೇ ಕಂಗಾಲಾಗಿಹೋಗಿದ್ದರು.

ನಿಜಹೇಳಬೇಕೆಂದರೆ ಆಕೆಗಿಂತ ನಾನೇ ಹೆಚ್ಚು ಗಾಬರಿಯಾಗಿಬಿಟ್ಟಿದ್ದೆ.ಆಕೆ ನನ್ನ ಬಳಿ ಬಂದು ‘ ಪ್ಲೀಸ್ ಡೂ ಸಂಥಿಂಗ್ ಸರ್..ದಿಸ್ ಈಸ್ ವೆರಿ ರಿಸ್ಕಿ’ ಎಂದು ಪರಿತಪಿಸುತ್ತಿದ್ದರು.ಕೊನೆಗೆ ನಾನೇ ಧೈರ್ಯವಹಿಸಿ ರಾಜಣ್ಣನ ಬಳಿ ಮಾತಾಡಿ ಅವರ ಮನ ಒಲಿಸಲು ಯತ್ನಿಸಿದೆ.ಹಾಗೆಲ್ಲಾ ಬಡಪೆಟ್ಟಿಗೆ ಒಪ್ಪಿಕೊಳ್ಳುವ ಜಾಯಮಾನವೇ ಅಲ್ಲ ರಾಜಣ್ಣನದು..ಅಂದು ನನ್ನ ಮೇಲೆ ಅದೇನು ಕರುಣೆ ಉಕ್ಕಿತೋ ಕಾಣೆ,’ಹೋಗಲಿ ಬಿಡ್ರಯ್ಯಾ..ಯಾಕೋ ಇವನು ಭಾಳ ಹೆದರಿಕೋತಿದಾನೆ..ಬನ್ನಿ..ಇಲ್ಲಿ ಈ ಹೊಗೆಗೂಡಿನ ಮೇಲೆ ಆಕೇನ ಮಲಗಿಸಿ..ಚೀಟ್ ಮಾಡಿಕೊಂಡು ಈ ಶಾಟ್ ತೆಗೆಯೋಣ’ ಎಂದು ಅಲ್ಲೇ ಇದ್ದ ದೊಡ್ಡ ಹೊಗೆಗೂಡಿನ ಮೇಲೆ ಆಕೆಯನ್ನು ಮಲಗಿಸಿ ತಳ್ಳುವ ರೀತಿಯಲ್ಲಿ ಸಂಯೋಜಿಸಿಕೊಂಡು ಅರೆಮನಸ್ಸಿನಿಂದಲೇ ಆ ದೃಶ್ಯದ ಚಿತ್ರೀಕರಣ ಮುಗಿಸಿದರು! ಅವರಿಗೆ ಪರಮ ನಿರಾಸೆಯಾದರೂ ನಾನು ಹಾಗೂ ಮಂಜುಳಾ ಶರ್ಮ—ಇಬ್ಬರೂ ‘ಸಧ್ಯ..ತೂಗುಕತ್ತಿಯಿಂದ ತಪ್ಪಿಸಿಕೊಂಡೆವು’ ಎಂದು ನಿರಾಳದ ನಿಟ್ಟುಸಿರು ಬಿಟ್ಟೆವು!

ಎರಡು ದಿನಗಳ ನಂತರ ಮತ್ತೊಂದೂ ಆತಂಕದ ಸನ್ನಿವೇಶ ಎದುರಾಯಿತು.ಅದೇ ಕಟ್ಟಡದ ಮೇಲ್ಮಹಡಿಯಿಂದ ನನ್ನನ್ನು ಕೆಳಕ್ಕೆ ತಳ್ಳಿ ದುಷ್ಟಸಂಹಾರ ಮಾಡಿದೆನೆಂದು ನಾಯಕ ಬೀಗುವ ದೃಶ್ಯದ ಚಿತ್ರೀಕರಣ ಅಂದು ನಿಗದಿಯಾಗಿತ್ತು! ಅಯ್ಯೋ! ಆ ಹೆಣ್ಣುಮಗಳ ಪರವಾಗಿ ನಾನು ಮಾತಾಡಿ ದೃಶ್ಯ ಸಂಯೋಜನೆಯನ್ನು ಬದಲಿಸಲು ರಾಜಣ್ಣನ ಮನ ಒಲಿಸಿದ್ದೆ..ಇಂದು ಏನನ್ನುತ್ತಾರೋ?ನನ್ನ ರಕ್ಷಣೆಗೆ ಬರುವವರಾದರೂ ಯಾರು? ಈ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ನಾನು ಅಷ್ಟೇನೂ ಪಳಗಿದವನಾಗಿರಲಿಲ್ಲ.. ಜಯನಗರ ಬಹುಮಹಡಿ ವಾಣಿಜ್ಯ ಸಂಕೀರ್ಣದ ಮೇಲಿನ ಎತ್ತರದ ತಡೆಗೋಡೆ ನನ್ನನ್ನು ಅಣಕಿಸುತ್ತಿತ್ತು!”ಪ್ರಭುದೇವಾ…ಇವತ್ತು ಸಿನಿಮಾದಲ್ಲಿ ನಿನ್ನ ಕಥೆ ಮುಗಿಸ್ತಾ ಇದೀವಿ..ಇಲ್ಲಿಂದ ಕೆಳಗೆ ನಿನ್ನನ್ನ ರಪ್ಪಂತ ಎಸೀತಾರೆ..ಆಮೇಲೆ ಕೆಳಗಡೆ ಧೊಪ್ಪಂತ ಬಿದ್ದು ರಕ್ತ ಸುರಿಸಿಕೊಂಡು ನೀನು ಸಾಯಬೇಕು..ರೆಡೀನಾ?” ಅಂದರು ರಾಜಣ್ಣ!

ಪೆಚ್ಚುಪೆಚ್ಚಾಗಿ ನಕ್ಕು ತಲೆಯಾಡಿಸಿದೆ.ರಾಜಣ್ಣ ನಗುತ್ತಾ “ಅಲ್ನೋಡು” ಎಂದರು.ಅತ್ತ ತಿರುಗಿ ನೋಡಿದರೆ ಅಲ್ಲಿ ನನ್ನ ಪ್ರತಿಕೃತಿಯಂತಹ ಬೊಂಬೆಯೊಂದನ್ನು ಸಿದ್ಧಪಡಿಸಿ ಇಟ್ಟಿದ್ದರು ಕಲಾನಿರ್ದೇಶಕರು! ಅಬ್ಬಾ! ಕರುಣಾಮಯಿ ಭಗವಂತನಿಗೆ ನನ್ನ ಮೊರೆ ಕೇಳಿಯೇಬಿಟ್ಟಿದೆ! ಕೆಳಗೆಸೆಯುವುದು ಆ ಪ್ರತಿಕೃತಿಯನ್ನು!ರಾಜಣ್ಣ ನನ್ನ ಆತಂಕ—ಗಾಬರಿಗಳನ್ನು ಅರ್ಥಮಾಡಿಕೊಂಡವರಂತೆ ‘ಸುಖಕರ ಸಾವ’ನ್ನೇ ನನಗಾಗಿ ಸಂಯೋಜಿಸಿದ್ದಾರೆ! ಮನದಲ್ಲೇ ಅವರಿಗೆ ನೂರು ನಮಸ್ಕಾರ ಸಲ್ಲಿಸಿದೆ.ಏನೇ ಹೇಳಿ,ಸಿನೆಮಾಗಳಲ್ಲಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ವಿಪರೀತ ಧೈರ್ಯ ಇರಬೇಕು..ಧೈರ್ಯದ ಜೊತೆಗೆ ತುಂಬು ಎಚ್ಚರ..ಅಗಾಧ ಸಮಯ ಪ್ರಜ್ಞೆಗಳೂ ಇರಬೇಕು..ಕರಾರುವಾಕ್ಕಾದ ಪೂರ್ವಸಿದ್ಧತೆಗಳಿಲ್ಲದೇ ಚಿತ್ರೀಕರಣಕ್ಕೆ ತೊಡಗಿದಿರೋ,ಅಪಾಯ ಕಟ್ಟಿಟ್ಟ ಬುತ್ತಿ! ಇರಲಿ.

‘ರಾಷ್ಟ್ರಗೀತೆ’ ಚಿತ್ರದ ಚಿತ್ರೀಕರಣ ಯಾವ ಅಡ್ಡಿ ಆತಂಕಗಳೂ ಎದುರಾಗದೆ ನಿರ್ವಿಘ್ನವಾಗಿ ನಡೆದು ಪೂರ್ಣಗೊಂಡಿತು.ರಾಜು ಅವರಿಗಂತೂ ಇದು ಮಹತ್ವಾಕಾಂಕ್ಷೆಯ ದೊಡ್ಡ ಚಿತ್ರವಾಗಿತ್ತು.ಒಂದು ವ್ಯಾಪಾರಿ ಚಿತ್ರವನ್ನು ಗೆಲ್ಲಿಸಲು ಬೇಕಾದ ಎಲ್ಲ ಸಿದ್ಧ ಸೂತ್ರಗಳೂ ಚಿತ್ರದಲ್ಲಿ ಹೇರಳವಾಗಿದ್ದವು.ಅವುಗಳ ಜತೆಗೆ ರಾಜಣ್ಣನ ಸಮರ್ಥ ಚಿತ್ರಕಥೆ—ಕೆನ್ನೆಗೆ ಬಾರಿಸುವಂತಿದ್ದ ತೀಕ್ಷ್ಣ ಸಂಭಾಷಣೆಗಳು..ನುರಿತ ಪಾತ್ರವರ್ಗದ ಸಂದರ್ಭೋಚಿತ ಅಭಿನಯ..ಅದ್ದೂರಿ ನಿರ್ಮಾಣ..ಎಲ್ಲವೂ ಸೇರಿದ ಮೇಲೆ ಚಿತ್ರ ಯಶಸ್ವಿಯಾಗಲೇಬೇಕಲ್ಲಾ! ಆದರೆ ಆಗಲಿಲ್ಲ! ಅದೇಕೋ ಕನ್ನಡ ಪ್ರೇಕ್ಷಕ ನಮ್ಮ ಚಿತ್ರಕ್ಕೆ ರಕ್ಷಾಕವಚವನ್ನು ಹೊದಿಸಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಯಾವ ಘನಸದ್ದನ್ನೂ ಮಾಡದೆ ಕೆ.ಮಂಜು—ಕೆ.ವಿ.ರಾಜು ಅವರ ಯಶಸ್ವೀಜೋಡಿಯ ಈ ಚಿತ್ರ ಇನ್ನಿಲ್ಲದಂತೆ ನೆಲಕಚ್ಚಿಬಿಟ್ಟಿತು.

ಚಿತ್ರವನ್ನು ನೋಡಿದಾಗ ನನಗನ್ನಿಸಿದ್ದಿಷ್ಟು: ಚಿತ್ರ ಸಂಕಲನದ ಹಂತದಲ್ಲಿ ಸೋತಿದೆ ಎಂದು. ವೇಗವಾಗಿ ಕಥೆಯನ್ನು ಹೇಳುವ ಸಂಭ್ರಮದಲ್ಲಿ ಒಂದು ಚಿತ್ರಿಕೆ ಅಥವಾ ದೃಶ್ಯ ಪರಿಣಾಮಕಾರಿಯಾಗಿ ಪ್ರೇಕ್ಷಕನನ್ನು ಮುಟ್ಟಲು ಬೇಕಾದಷ್ಟು ಸಮಯವನ್ನೇ ಕೊಡದೆ ಕತ್ತರಿ ಆಡಿಸುತ್ತಾ ಧಾವಿಸಿಬಿಟ್ಟರೆ ಪ್ರೇಕ್ಷಕಚಿತ್ರವನ್ನು ಆಸ್ವಾದಿಸುವುದಾದರೂ ಹೇಗೆ? ಚಿತ್ರಿಕೆ—ದೃಶ್ಯ ಅವನ ಮನದಾಳಕ್ಕೆ ಇಳಿದು ತಟ್ಟಿದಾಗಷ್ಟೇ ಪರಿಣಾಮಕಾರಿಯಾಗುವುದಲ್ಲವೇ? ಅದಕ್ಕೆ ಸಮಯಾವಕಾಶವನ್ನೇ ಕೊಡದೆ,’ಚಿತ್ರ ಫಾಸ್ಟ್ ಆಗಿರಬೇಕು..ಲ್ಯಾಗ್ ಆಗಬಾರದು’ ಅನ್ನುವುದೊಂದೇ ಮೂಲಮಂತ್ರವಾಗಿಬಿಟ್ಟಾಗ ಇಂಥ ಅಪಾಯಗಳು ಘಟಿಸುವುದು ಸಹಜವೇನೋ ಎಂಬುದು ನನ್ನ ಮನದ ಭಾವನೆಯಾಗಿತ್ತು.

ಇತ್ತೀಚಿನ ಅನೇಕ ಚಿತ್ರಗಳಲ್ಲಿ ಇದೇ ತರಹದ ಪ್ರವೃತ್ತಿಯನ್ನೂ ತತ್ಪರಿಣಾಮವಾಗಿ ಚಿತ್ರ ಬೀರಬೇಕಾದಷ್ಟು ಪರಿಣಾಮ ಬೀರದೇ ಎಡವಿರುವುದನ್ನೂ ನಾನು ಗಮನಿಸಿದ್ದೇನೆ.ಕೆಲವರೊಂದಿಗೆ ಈ ಕುರಿತಾಗಿ ಚರ್ಚಿಸಿದ್ದೇನೆ ಕೂಡಾ.ಆದರೆ ಚಿತ್ರರಂಗದ ಹಿರಿಯ ಪ್ರಭೃತಿಗಳು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅನ್ನುವುದು ನನಗೆ ಬೇಸರವನ್ನೇನೂ ಉಂಟುಮಾಡಲಿಲ್ಲ—ಅದು ನಿರೀಕ್ಷಿತವೇ ಆದ್ದರಿಂದ!
‘ರಾಷ್ಟ್ರಗೀತೆ’ ಯಶಸ್ವಿಯಾಗಿದ್ದರೆ ಬಹುಶಃ ಸೂಟುಬೂಟಿನ ಖಳನಟನಾಗಿ ನಾನು ಒಂದಿಷ್ಟು ವಿಜೃಂಭಿಸಲು ಅವಕಾಶಗಳು ದೊರೆಯುತ್ತಿದ್ದವೊ ಏನೋ…ದುರದೃಷ್ಟವಶಾತ್ ಅದಾಗಲಿಲ್ಲ.ಒಂದೆರಡು ಪತ್ರಿಕೆಗಳಲ್ಲಿ ನನ್ನ ಅಭಿನಯವನ್ನು ಮೆಚ್ಚಿ ಬರೆದಿದ್ದರೆಂಬುದೊಂದೇ ಸಮಾಧಾನ ನೀಡಿದ ಸಂಗತಿ: ‘”ಅಯ್ಯನ ಪಾತ್ರದಲ್ಲಿ ಕರ್ನಾಟಕದ ಹಿರಿಯ ರಂಗನಟ ಶ್ರೀನಿವಾಸ ಪ್ರಭು ಅವರು ಸರಿಹೊಂದುತ್ತಾರೆ”‘!!

ಇದೇ ಕಾಲಮಾನದಲ್ಲಿ ನಾನು ಅಭಿನಯಿಸಿದ ಮತ್ತೊಂದು ಪ್ರಮುಖ ಚಿತ್ರವೆಂದರೆ ಪಿ.ರಾಮದಾಸ ನಾಯ್ಡು ಅವರ “ಮುಸ್ಸಂಜೆ”. ತಮ್ಮ ಮೊದಲ ಚಿತ್ರ “ಅಮರ ಮಧುರ ಪ್ರೇಮ” ದಲ್ಲೇ ಸಹೃದಯರ ಗಮನ ಸೆಳೆದಿದ್ದ ರಾಮದಾಸ ನಾಯ್ಡು ಅವರು ಮುಂದೆ ಸಾಲುಸಾಲು ಬಂದ ಪ್ರೇಮಕಥಾ ಚಿತ್ರಗಳಿಗೆ ತಮ್ಮ ಚಿತ್ರದ ಮೂಲಕ ಮುನ್ನುಡಿ ಬರೆದರೆಂದರೆ ತಪ್ಪಾಗಲಾರದೇನೋ.

ತಮ್ಮದೇ ಹೊರಾಂಗಣ ಚಿತ್ರೀಕರಣ ಘಟಕವನ್ನೂ ಸಂಕಲನಕೇಂದ್ರವನ್ನೂ ಸ್ಥಾಪಿಸಿಕೊಂಡು ಅನೇಕ ಧಾರಾವಾಹಿಗಳನ್ನೂ ನಿರ್ಮಿಸಿ—ನಿರ್ದೇಶಿಸಿದ ರಾಮದಾಸ ನಾಯ್ಡು ಅವರು ಕಿರುತೆರೆ ಕ್ಷೇತ್ರದಲ್ಲಿ ದೊಡ್ಡ ಹೆಸರಾದವರು.ಇವರು ನಿರ್ಮಿಸಿ ನಿರ್ದೇಶಿಸಿದ್ದ ‘ಜನಾರಣ್ಯ’ ಎಂಬ ಧಾರಾವಾಹಿಯಲ್ಲಿ ನಾನು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದೆ.ಮೂಲತಃ ಬರಹಗಾರರಾದ ರಾಮದಾಸ ನಾಯ್ಡು ಅವರು ಅನೇಕ ಚಿತ್ರಗಳಿಗೆ ಗೀತೆಗಳನ್ನೂ ರಚಿಸಿದ್ದಾರೆ.’ಅಪರಿಚಿತ’ ಚಿತ್ರಕ್ಕಾಗಿ ಇವರು ರಚಿಸಿರುವ ಗೀತೆಗಳು ಇಂದಿಗೂ ಬಲು ಜನಪ್ರಿಯ.ಇಂತಹ ಸೃಜನಶೀಲ ಹಾಗೂ ಸದಾ ಹೊಸತನಕ್ಕಾಗಿ ತುಡಿಯುವ ಸಂವೇದನಾಶೀಲ ಬರಹಗಾರ—ನಿರ್ದೇಶಕ ರಾಮದಾಸ ನಾಯ್ಡು ತಮ್ಮ ‘ಮುಸ್ಸಂಜೆ’ ಚಿತ್ರದಲ್ಲಿ ನನಗೊಂದು ಪ್ರಮುಖ ಪಾತ್ರವನ್ನು ನೀಡಿದರು.

“ಮುಸ್ಸಂಜೆ”—ಹೆಸರೇ ಹೇಳುವಂತೆ ಬಾಳಸಂಜೆಯ ಘಟ್ಟದಲ್ಲಿರುವ ಹಿರಿಯ ಚೇತನಗಳ ಸುತ್ತ ಹೆಣೆದ ಕಥೆ. ವೃದ್ಧಾಪ್ಯದಲ್ಲಿ ಎದುರಾಗುವ ಸಮಸ್ಯೆಗಳು..ಆತಂಕ ತಲ್ಲಣಗಳು..ಆ ಸಮಯದಲ್ಲಿ ಕಾಡುವ ಅಸ್ಥಿರತೆ—ಅಸಹಾಯಕತೆ—ಪರಾವಲಂಬನೆಯ ಅನಿವಾರ್ಯತೆ—ಒಡೆದು ಚೂರಾಗುವ ಸ್ವಾಭಿಮಾನ…ಇವೆಲ್ಲವನ್ನೂ ಬಹಳ ಸಮರ್ಥವಾಗಿ ಪಡಿಮೂಡಿಸುವಂತೆ ಚಿತ್ರಕಥೆಯನ್ನು ಹೆಣೆದಿದ್ದರು ರಾಮದಾಸ ನಾಯ್ಡು.ದತ್ತಣ್ಣ,ಮಾಸ್ಟರ್ ಹಿರಣ್ಣಯ್ಯ,ವೆಂಕಟರಾವ್ ,ರೇಣುಕಮ್ಮ ಮುರುಗೋಡ್ ,ಜಿ.ವಿ.ಶಾರದಾ,ಭಾರ್ಗವಿ ನಾರಾಯಣ್ ,ಶಾಂತಮ್ಮ, ಯಮುನಾಮೂರ್ತಿ ಮೊದಲಾದ ಹಿರಿಯ ಕಲಾವಿದರೊಂದಿಗೆ ನಾನು ಹಾಗೂ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರಗಳಲ್ಲಿದ್ದೆವು.

ಸಿದ್ಧಸೂತ್ರಗಳ ಕಮರ್ಷಿಯಲ್ ಚಿತ್ರಗಳ ಚೌಕಟ್ಟಿನಿಂದ ತೀರಾ ಹೊರನಿಲ್ಲುವ ‘ಮುಸ್ಸಂಜೆ’ಯಂಥ ಚಿತ್ರಗಳು ವಾಸ್ತವ ನೆಲೆಗಟ್ಟಿನ ಮೇಲೆ ನಿಲ್ಲುವ,ಬದುಕಿಗೆ ಹತ್ತಿರವಾದ, ಯಾವುದೇ ವಿಜೃಂಭಣೆ—ಅತಿರಂಜಕತೆಗಳಿಲ್ಲದ,ಸಮಾಜಕ್ಕೆ ಸಂದೇಶ ಸಾರುವ ಅರ್ಥಪೂರ್ಣ ಚಿತ್ರಗಳು. ಇಂಥ ಚಿತ್ರಗಳಲ್ಲಿ ಅಭಿನಯಿಸುವಾಗಲಾದರೂ ಅಷ್ಟೇ:ಯಾವುದೇ ಅತಿರೇಕಗಳಿಗೆ ಪಕ್ಕಾಗದೆ,ಅತಿ ಅಬ್ಬರಕ್ಕೆ ಅವಕಾಶವೀಯದೆ ಸಹಜತೆಯನ್ನು ಕಾಪಾಡಿಕೊಳ್ಳುವುದು,’ಇವನೂ ನಮ್ಮಲ್ಲೊಬ್ಬ’ಎಂದು ಪ್ರೇಕ್ಷಕರಿಗೆ ಭಾಸವಾಗಿ ಅವರಿಗೆ ಹತ್ತಿರವಾಗುವಂತೆ ಅಭಿನಯಿಸುವುದು ಬಹಳ ಮುಖ್ಯ.’ರಾಷ್ಟ್ರಗೀತೆ’ಯಂತಹ ಚಿತ್ರಗಳಲ್ಲಿ ಅಭಿನಯಿಸುವಾಗಿನ ‘ವಾಸ್ತವಕ್ಕಿಂತ ಬಲು ದೊಡ್ಡದಾದ’ ವಿಜೃಂಭಿತ ಅಭಿನಯ ಶೈಲಿಗೂ ಮುಸ್ಸಂಜೆಯಂತಹ ವಾಸ್ತವವಾದಿ ಚಿತ್ರಗಳ ಸಹಜಾಭಿನಯ ಶೈಲಿಗೂ ಅಜಗಜಾಂತರ! ಬಹುಶಃ ಒಬ್ಬ ನಟನಿಗೆ ಎದುರಾಗುವಂತಹ ದೊಡ್ಡ ಸವಾಲುಗಳೂ ಇವೇ ಎಂದುಕೊಳ್ಳುತ್ತೇನೆ.

ತೀರಾ ಕಡಿಮೆ ವೆಚ್ಚದಲ್ಲಿಯೇ ‘ಮುಸ್ಸಂಜೆ’ ಚಿತ್ರವನ್ನು ತಯಾರಿಸಬೇಕಾದ ಅನಿವಾರ್ಯತೆ ನಿರ್ದೇಶಕರಿಗಿತ್ತು.ಹಾಕಿದ ಬಂಡವಾಳ ವಾಪಸ್ ಬಂದರೂ ಸಾಕು ಎನ್ನುವುದು ಇಂತಹ ಕಲಾತ್ಮಕ—ಅರ್ಥಪೂರ್ಣ ಚೌಕಟ್ಟಿನ ಚಿತ್ರನಿರ್ಮಾಪಕ—ನಿರ್ದೇಶಕರ ಮನೋಧರ್ಮ.ಸಾರ್ಥಕ ಚಿತ್ರವೊಂದನ್ನು ಪ್ರೇಕ್ಷಕರಿಗೆ ಕೊಟ್ಟಿದ್ದೇವೆ ಎನ್ನುವ ಆತ್ಮತೃಪ್ತಿ ಎಲ್ಲಕ್ಕಿಂತ ದೊಡ್ಡದು ಎನ್ನುತ್ತಿದ್ದರು ರಾಮದಾಸ ನಾಯ್ಡು. ದತ್ತಣ್ಣ—ಮಾಸ್ಟರ್ ಹಿರಣ್ಣಯ್ಯ ಅಂತಹ ಹಿರಿಯ ಕಲಾವಿದರೊಂದಿಗೆ ನಟಿಸುವ ಅವಕಾಶವಾದದ್ದೂ ನನ್ನ ಸಂತಸವನ್ನು ಹೆಚ್ಚಿಸಿತ್ತು.

ಪ್ರತಿಯೊಬ್ಬರ ಬದುಕಿನಲ್ಲಿ ನಿಸ್ಸಂಶಯವಾಗಿ ಎದುರಾಗುವ ವೃದ್ಧಾಪ್ಯದ ಬವಣೆಗಳನ್ನು—ನೋವು ಸಂಕಟಗಳನ್ನು ಅಚ್ಚುಕಟ್ಟಾಗಿ ಹೃದಯಸ್ಪರ್ಶಿಯಾಗಿ ಬೆಳ್ಳಿತೆರೆಯಮೇಲೆ ಬಿಂಬಿಸುವ ಕಾರ್ಯದಲ್ಲಿ ರಾಮದಾಸ ನಾಯ್ಡು ಯಶಸ್ವಿಯಾಗಿದ್ದರು.ವಿಮರ್ಶಕರಿಂದಲೂ ಪ್ರೇಕ್ಷಕ ವರ್ಗದಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾದುದಷ್ಟೇ ಅಲ್ಲ, ಆ ವರ್ಷದ ಶ್ರೇಷ್ಠ ಚಿತ್ರ ಎಂಬ ರಾಜ್ಯಪ್ರಶಸ್ತಿಗೂ ಮುಸ್ಸಂಜೆ ಪಾತ್ರವಾಯಿತು.ಅಷ್ಟೇ ಅಲ್ಲದೆ ಶ್ರೇಷ್ಠ ಸಂಭಾಷಣೆ—ಶ್ರೇಷ್ಠ ಬಾಲಕಲಾವಿದ ಇತ್ಯಾದಿ ಇನ್ನಿತರ ನಾಲ್ಕು ಪ್ರಶಸ್ತಿಗಳನ್ನೂ ‘ಮುಸ್ಸಂಜೆ’ ಬಾಚಿಕೊಂಡಿತು.ಭಾರತೀಯ ಪನೋರಮಾಗೆ ಆಯ್ಕೆಯಾದದ್ದಷ್ಟೇ ಅಲ್ಲ, ಎಂಟು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಹಿರಿಮೆ ‘ಮುಸ್ಸಂಜೆ’ ಚಿತ್ರದ್ದು! ಜೊತೆಗೆ,’2000ದಿಂದ 2015ರವರೆಗೆ ತೆರೆ ಕಂಡ 64 ಶ್ರೇಷ್ಠ ಭಾರತೀಯ ಚಿತ್ರಗಳು’ ಎಂದು ಆಡೂರ್ ಗೋಪಾಲಕೃಷ್ಣನ್ ನೇತೃತ್ವದ ಸಮಿತಿ ಗುರುತಿಸಿದ ಚಿತ್ರಗಳ ಪಟ್ಟಿಯಲ್ಲಿ ‘ಮುಸ್ಸಂಜೆ’ ಚಿತ್ರ ಸೇರ್ಪಡೆಯಾದದ್ದು ಬಹು ದೊಡ್ಡ ಗೌರವದ ಸಂಗತಿಯಾಯಿತು.

ದೂರದರ್ಶನ ಕೇಂದ್ರದವರು ರಾಮದಾಸ ನಾಯ್ಡು ಅವರ ‘ಮುಸ್ಸಂಜೆ’, ಪ್ರವಾಹ’,’ಮೊಗ್ಗಿನ ಜಡೆ’ ಹಾಗೂ ‘ಬೇಲಿ ಮತ್ತು ಹೊಲ’— ಈ ಚಿತ್ರಗಳ ಮೂರು ವರ್ಷಗಳ ಕಾಲ ಏಕಸ್ವಾಮ್ಯ ಪ್ರಸಾರದ ಹಕ್ಕನ್ನು ಪಡೆದುಕೊಂಡು ಅನೇಕಾನೇಕ ಬಾರಿ ಈ ಚಿತ್ರಗಳ ಪ್ರಸಾರ ಮಾಡಿದ್ದು ಮತ್ತೊಂದು ವಿಶೇಷ. ಇವುಗಳಲ್ಲಿ ‘ಬೇಲಿ ಮತ್ತು ಹೊಲ’ ಕುಂ.ವೀರಭದ್ರಪ್ಪ ಅವರ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು ಇದೇ ಕಥೆಯನ್ನು ಆಧರಿಸಿ ಹಿಂದೆ ನಾನು ನಾಟಕರೂಪವನ್ನು ಸಿದ್ಧಪಡಿಸಿ ರಂಗದ ಮೇಲೆ ತಂದದ್ದನ್ನು ಈ ಹಿಂದೆ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.ಬೇಲಿ ಮತ್ತು ಹೊಲ ಚಿತ್ರದಲ್ಲಿಯೂ ಮುಖ್ಯ ಪಾತ್ರ ನಿರ್ವಹಣೆಗೆ ನಾಯ್ಡು ಅವರು ಆಹ್ವಾನಿಸಿದ್ದರೂ ಆಗ ಅನೇಕ ಧಾರಾವಾಹಿಗಳಲ್ಲಿ ಅಭಿನಯದಲ್ಲಿ ತೊಡಗಿದ್ದರಿಂದ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.ಈಗಲೂ ‘ಮುಸ್ಸಂಜೆ’ ಚಿತ್ರ ಒಮ್ಮೊಮ್ಮೆ ದೂರದರ್ಶನದಿಂದ ಪ್ರಸಾರವಾಗುತ್ತಿರುತ್ತದೆ;ಅನೇಕರು ಚಿತ್ರ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಲೇ ಇರುತ್ತಾರೆ!!

‍ಲೇಖಕರು avadhi

September 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: