
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
95
ಸೆಪ್ಟೆಂಬರ್ 29 ನೆಯ ತಾರೀಖು 1993. ರಿಷಿ ಕಪೂರ್ ಹಾಗೂ ಶಾರುಖ್ ಖಾನ್ ಅಭಿನಯದ ‘ದೀವಾನಾ’ ಚಿತ್ರ ಗುಲ್ಬರ್ಗಾದಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿತ್ತು. ಸಿನೆಮಾ ನೋಡುವುದೇ ಅಲ್ಲಿ ನಮಗೆ ಮುಖ್ಯವಾದ ಮನರಂಜನಾ ಕಾಯಕವಾಗಿ ಹೋಗಿತ್ತಲ್ಲಾ! ಹಾಗಾಗಿ ಅಂದು ರಾತ್ರಿ ಊಟ ಮುಗಿಸಿ ಬೈಕ್ ಹತ್ತಿ ‘ದೀವಾನಾ’ ಚಿತ್ರ ನೋಡಲು ಟಾಕೀಸ್ ನತ್ತ ಹೊರಟೆವು. ಮರುದಿನ ಏನೋ ಕಾರಣಕ್ಕೆ ಶಾಲೆಗೆ ರಜೆ ಇದ್ದುದರಿಂದ ರಾಧಿಕಾಳ ನಿದ್ದೆಗೆ ತೊಂದರೆಯಾಗುತ್ತದೆಂಬ ಚಿಂತೆಯೂ ಇರಲಿಲ್ಲ.ಚಿತ್ರ ನೋಡಿಕೊಂಡು ಮರಳಿ ಬರುವಾಗ ದಾರಿಯಲ್ಲಿ ಆಟೋ ಹಿಂಬದಿಯಲ್ಲಿ ಅಂಟಿಸಿದ್ದ ಶಂಕರ್ ನಾಗ್ ರ ಭಾವಚಿತ್ರ ಗಮನ ಸೆಳೆಯಿತು. ತಕ್ಷಣವೇ ಅವರೊಟ್ಟಿಗೆ ಕಳೆದ ದಿನಗಳ ಹತ್ತಾರು ನೆನಪುಗಳು ನುಗ್ಗಿಬಂದವು. ಅವರ ಬಗ್ಗೆಯೇ ಮಾತಾಡಿಕೊಂಡು ಮನೆಯ ಸಮೀಪ ಬರುತ್ತಿದ್ದಂತೆ ತಟಕ್ಕನೆ ಮತ್ತೊಂದು ಸಂಗತಿ ಹಳವಂಡದಿಂದ ನೆಗೆದು ಬಂತು: ಬೆಳಗಾದರೆ ಸೆಪ್ಟೆಂಬರ್ 30 ನೇ ತೇದಿ! 1990 ನೇ ಇಸವಿಯ ಅದೇ ದಿನವೇ ಅಲ್ಲವೇ ಭೀಕರ ಅಪಘಾತಕ್ಕೆ ತುತ್ತಾಗಿ ಶಂಕರ್ ನಾಗ್ ನಮ್ಮನ್ನು ಅಗಲಿ ಹೊರಟುಹೋದದ್ದು!? ಛೆ..ಮೂರು ವರ್ಷಗಳು ಕಳೆದುಹೋದವು ಆಗಲೇ.. ಅವರಿಲ್ಲದೆಯೇ! ಅವರಿದ್ದಿದ್ದರೆ ಎಂಥದೊಂದು ಬದಲಾವಣೆ ನಮ್ಮ ಚಿತ್ರರಂಗದಲ್ಲಿ ಘಟಿಸಬಹುದಿತ್ತು… ಎಷ್ಟು ಹೊಸ ಆಲೋಚನೆಗಳು.. ಪ್ರಯೋಗಗಳು.. ಕನಸುಗಳು ನಮ್ಮ ಚಿತ್ರರಂಗಕ್ಕೆ ಹೊಸ ರಕ್ತ ತುಂಬಿ ಶ್ರೀಮಂತ ಗೊಳಿಸುತ್ತಿದ್ದವು ಎಂದೆಲ್ಲಾ ಪೇಚಾಡಿಕೊಳ್ಳುತ್ತಾ ಮನೆ ತಲುಪಿ ಮಲಗಲು ಅಣಿಯಾದೆವು.
ವಿಪರೀತ ಸೊಳ್ಳೆಗಳಿದ್ದುದರಿಂದ ಸೆಖೆಯಾದರೂ ಸೊಳ್ಳೆ ಪರದೆ ಕಟ್ಟಿಕೊಳ್ಳದೆ ಮಲಗಲಾಗುತ್ತಿರಲಿಲ್ಲ. ಮಗಳನ್ನು ಮಲಗಿಸಿ ಪರದೆ ಕಟ್ಟಿ ಎಲ್ಲ ಕಡೆಗಳಲ್ಲೂ ಪರದೆಯನ್ನು ಹಾಸಿಗೆಯ ಅಡಿಗೆ ಭದ್ರವಾಗಿ ಸಿಕ್ಕಿಸಿ ಸೊಳ್ಳೆ ಒಳನುಗ್ಗದಂತೆ ಬಂದೋಬಸ್ತು ಮಾಡಿಕೊಂಡು ಮಲಗಿದಾಗ ರಾತ್ರಿ ಎರಡು ಗಂಟೆಯ ಸಮಯ. ಹಾಂ..ಹೇಳಲು ಮರೆತಿದ್ದೆ! ಅದಾವ ಮಾಯದಲ್ಲೋ ಒಂದೆರಡು ಗುಬ್ಬಿಗಳು ಮನೆಯ ಒಳಗೆ ಸೇರಿಕೊಂಡು ರೂಂನಲ್ಲಿದ್ದ ಸಜ್ಜೆಯಲ್ಲಿ ಗೂಡು ಕಟ್ಟಿಕೊಂಡು ಬಿಟ್ಟಿದ್ದವು! ಮೃದುಮನಸ್ಸಿನ ರಂಜನಿಗೆ ಗೂಡು ತೆಗೆದುಹಾಕುವುದು ಸುತರಾಂ ಇಷ್ಟವಾಗಲಿಲ್ಲ. “ಇರಲಿ ಬಿಡಿ ಪ್ರಭೂಜೀ… ನಾವೇನು ಅವಕ್ಕೆ ಬಾಣಂತನ ಮಾಡಬೇಕೇ ಇಲ್ಲಾ ಎಣ್ಣೆ ಸ್ನಾನ ಮಾಡಿಸಬೇಕೇ? ಮೊಟ್ಟೆ ಇಟ್ಟು ಮರಿ ಮಾಡಿ ರೆಕ್ಕೆ ಬಲಿತ ಮೇಲೆ ಹಾರಿಸಿಕೊಂಡು ಹೋಗುತ್ವೆ.. ಆಮೇಲೆ ನಾನೇ ಆ ಜಾಗ ಸ್ವಚ್ಛ ಮಾಡಿಕೋತೀನಿ.. ಅವಕ್ಕೆ ತೊಂದರೆ ಕೊಡೋದು ಬೇಡ” ಎಂದುಬಿಟ್ಟಳು.ಜೊತೆಯಲ್ಲೇ ಇದ್ದ ಮಗಳದ್ದೂ ಪಕ್ಕವಾದ್ಯ: “ಹೌದು ಡ್ಯಾಡಿ ತೆಗೀಬೇಡ ಪಾಪ… ಆಮೇಲೆ ಅವು ಅಳುತ್ವೆ.. ಆಗ ನಂಗೂ ಅಳು ಬಂದು ಬಿಡುತ್ತೆ.” ಸರಿ, ಮಗಳನ್ನು ಅಳಿಸಿ ಮಡದಿಗೆ ನೋವು ಕೊಡುವುದಾದರೂ ಸಾಧ್ಯವೇ? ಎಂದು ನಾನೂ ಸುಮ್ಮನಾಗಿಬಿಟ್ಟಿದ್ದೆ. ಮನೆಗೆ ಬಂದ ಸ್ನೇಹಿತರು—ಮನೆ ಮಾಲೀಕ ಕಲ್ಲೂರ್ ಕರ್ ಅವರು, “ಓಹೋ!ಮನೆ ಒಳಗೆ ಗುಬ್ಬಿ ಗೂಡು ಕಟ್ಟಿದೆ ಅಂದರೆ ಶುಭಸೂಚನೆ! ರಾಧಿಕಾಳಿಗೆ ಒಬ್ಬ ತಮ್ಮಾನೋ ತಂಗೀನೋ ಬರ್ತಾರೆ” ಎಂದು ಛೇಡಿಸಿ ರಂಜನಿ ಮುಖ ಕೆಂಪು ಮಾಡಿಕೊಂಡ ಸಂಭ್ರಮವೂ ಆಗಿತ್ತು! ಅಂದು ರಾತ್ರಿ ಸಿನೆಮಾ ನೋಡಿಕೊಂಡು ಬಂದೆವಲ್ಲಾ, ಆ ವೇಳೆಗಾಗಲೇ ಗುಬ್ಬಮ್ಮ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಹೊರಬಂದಾಗಿತ್ತು. ಅಂದು ಅದೇನಾಗಿತ್ತೋ ಏನೋ, ಒಂದೇ ಸಮ ಚೀಂವ್ ಚೀಂವ್ ಎಂದು ಕಿರಲುತ್ತಿದ್ದ ಮರಿ ಅದಾವ ಮಾಯಕದಲ್ಲೋ ನೆಲಕ್ಕೆ ಬಿದ್ದು ಮತ್ತಷ್ಟು ರೋದಿಸತೊಡಗಿತು. ಹೇಗೋ ಕಷ್ಟಪಟ್ಟು ಹರಸಾಹಸ ಮಾಡಿ ಮೂವರೂ ಸೇರಿ ಆ ಗುಬ್ಬಿಮರಿಯನ್ನು ಮತ್ತೆ ಗೂಡಿನೊಳಗೆ ಸೇರಿಸುವುದರಲ್ಲಿ ಯಶಸ್ವಿಯಾದೆವು! ಗುಬ್ಬಿ ಮರಿಯ ಆಕ್ರಂದನದ ಜತೆಗೆ ಗೆಳೆಯನ ನೆನಪೂ ಮನಸ್ಸನ್ನು ತುಂಬಿಕೊಂಡುಬಿಟ್ಟದ್ದರಿಂದ ಮಲಗಿದ ತಕ್ಷಣಕ್ಕೆ ನಿದ್ದೆ ಬಾರದೆ ಒಂದಷ್ಟು ಹೊತ್ತು ಹೊರಳಾಡಿದ ಮೇಲೆ ಕೊನೆಗೊಮ್ಮೆ ಜೊಂಪು ಹತ್ತಿದಂತಾಯಿತು.

ಬೆಳಗಿನ ಜಾವ 4 ಗಂಟೆಯ ಸಮೀಪ… ಇದ್ದಕ್ಕಿದ್ದಹಾಗೆ ಘುಡು ಘುಡು ಘುಡು ಶಬ್ದ… ಬೃಹತ್ ಗಾತ್ರದ ಬಂಡೆಯೊಂದು ಉರುಳಿ ಉರುಳಿ ಬಂದ ಹಾಗೆ ! ಗಾಢ ನಿದ್ರೆಗಿನ್ನೂ ಜಾರಿರಲಿಲ್ಲವಾದ್ದರಿಂದ ತಕ್ಷಣವೇ ಎಚ್ಚರವಾಗಿಹೋಯಿತು.. ಅರೆ! ಇದೇನಾಗುತ್ತಿದೆ!!? ಭಯಂಕರ ಸದ್ದಿನೊಂದಿಗೆ ಇಡೀ ಮನೆ ಹೊಯ್ದಾಡುತ್ತಿದೆ! ಇದೇನು ಕೆಟ್ಟ ಕನಸೇ ವಾಸ್ತವವೇ ಎಂಬ ಜಿಜ್ಞಾಸೆಯಲ್ಲಿ ಮುಂದೆ ಏನು ಮಾಡುವುದೆಂದು ತೋಚದೆ ಕಂಗೆಟ್ಟುಹೋದೆ. ಆ ವೇಳೆಗೆ ರಂಜನಿಯೂ ಎಚ್ಚರಗೊಂಡು ಆ ಭಯಂಕರ ಸದ್ದು ಹಾಗೂ ಮನೆಯ ಹೊಯ್ದಾಟವನ್ನು ಗಮನಿಸಿ ತಲ್ಲಣಿಸಿಹೋದಳು. ಏನೇ ಆಗಲಿ ಹೊರಗೋಡುವುದೇ ಕ್ಷೇಮವೆಂದು ಭಾವಿಸಿ ಭದ್ರವಾಗಿ ಸಿಕ್ಕಿಸಿದ್ದ ಸೊಳ್ಳೆಪರದೆಯನ್ನು ಬಿಡಿಸೋಣವೆಂದು ನೋಡಿದರೆ ಆತಂಕ—ಗಾಬರಿಗೆ ಕೈಗಳು ಓಡುತ್ತಲೇ ಇಲ್ಲ.. ಹತೋಟಿಗೂ ಸಿಗುತ್ತಿಲ್ಲ! ಹಾಗೂ ಹೀಗೂ ಕಷ್ಟಪಟ್ಟು ಪರದೆಯನ್ನು ಬಿಡಿಸಿ ಮಗಳನ್ನು ಎತ್ತಿಕೊಂಡು ಮನೆಯ ಹೊರಬಾಗಿಲ ಬಳಿ ಬಂದರೆ ಬಾಗಿಲ ಚಿಲಕ ಒಂದೇ ಸಮನೆ ತನಗೆ ತಾನೇ ಠಣಠಣ ಎಂದು ಹೊಡೆದುಕೊಳ್ಳುತ್ತಿದೆ! ಬಾಗಿಲು ತೆಗೆಯೋಣವೆಂದರೆ ಚಿಲಕ ಮುಟ್ಟಲೂ ಧೈರ್ಯ ಸಾಲುತ್ತಿಲ್ಲ! ಮನೆಯ ತೂಗಾಟವಾಗಲೀ ಭಯಂಕರ ಘುಡು ಘುಡು ಸದ್ದಾಗಲೀ ಇನ್ನೂ ನಿಂತಿಲ್ಲ! ಅರೆ ನಿದ್ರೆಯಲ್ಲಿ ಎದ್ದು ಪೂರ್ಣ ಎಚ್ಚರವಾಗದ, ಭಯ—ಗಾಬರಿ—ತಲ್ಲಣಗಳ ಒಂದು ಅಯೋಮಯ ಸ್ಥಿತಿಯಲ್ಲಿ ಏನಾದರಾಗಲಿ ಎಂದು ಧೈರ್ಯದಿಂದ ಚಿಲಕಕ್ಕೆ ಕೈಹಾಕಿ ಬಾಗಿಲು ತೆಗೆದು ಹೊರ ಬಂದು ನೋಡಿದರೆ ಅದಾಗಲೇ ಹತ್ತಾರು ಮಂದಿ ತಂತಮ್ಮ ಮನೆಗಳಿಂದ ಹೊರಬಂದು ನಿಂತಿದ್ದಾರೆ.. ಎಲ್ಲರ ಮುಖದ ಮೇಲೂ ಗಾಬರಿ—ಆತಂಕಗಳು ಅಚ್ಚೊತ್ತಿವೆ! ಆ ವೇಳೆಗೆ ಮನೆಯ ಹೊಯ್ದಾಟ ತಹಬಂದಿಗೆ ಬಂದು ಸದ್ದೂ ಸಹಾ ಕ್ಷೀಣವಾಗಿ ಕೊಂಚ ಸಮಾಧಾನದಿಂದ ಉಸಿರು ಬಿಡುವಂತಾಯಿತು. ಅದಾಗಲೇ ಹೊರಗೆ ಬಂದಿದ್ದ ನೆರೆಹೊರೆಯವರನ್ನು ಕೇಳಿದೆ—”ಏನಾಯಿತು ಸರ್”?. ಗುಂಪಿನಿಂದ ಧ್ವನಿಯೊಂದು ತೇಲಿಬಂತು: “ಭೂಕಂಪ ಸಾssರ್ ಭೂಕಂಪ! earthquake”!
ಭೂಕಂಪ!!
ಆ ಶಬ್ದವನ್ನು ಕೇಳುತ್ತಿದ್ದಂತೆ ಹೊಸ ಭಯ—ಆತಂಕದಿಂದ ಮೈ ಕಂಪಿಸಿಬಿಟ್ಟಿತು! ಅದುವರೆಗೆ ಕೇವಲ ನಿಘಂಟಿನ ಒಂದು ಶಬ್ದವಾಗಿದ್ದ ಭೂಕಂಪ ಮೊಟ್ಟಮೊದಲ ಬಾರಿಗೆ ನಮಗೆ ತನ್ನ ಸ್ವರೂಪ ದರ್ಶನ ಮಾಡಿಸಿದ್ದು ಹೀಗೆ! ಗುಂಪಿನಲ್ಲಿದ್ದ ಹಿರಿಯರೊಬ್ಬರು ಉದ್ಗರಿಸಿದರು: “ಪುಣ್ಯ ಸರ್ ನಮ್ಮದು…ಇನ್ನೊಂದೇ ಒಂದು ಸ್ವಲ್ಪ ದೊಡ್ಡ ಪ್ರಮಾಣದಲ್ಲಾಗಿದ್ದರೂ ಇಷ್ಟುಹೊತ್ತಿಗೆ ಭೂತಾಯಿ ನಮ್ಮನ್ನೆಲ್ಲಾ.. ಬರೀ ನಮ್ಮನ್ನೇನು..ಇಡೀ ಊರನ್ನೇ ನುಂಗಿಬಿಟ್ಟಿರೋಳು.. ಸಧ್ಯ.. ಇಷ್ಟಕ್ಕೇ ಕೃತವಾಯ್ತು ಅನ್ನೋದೇ ಸಮಾಧಾನ.” ನಿಜವೇ! “ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು” ಎಂಬ ಬಸವಣ್ಣನವರ ವಚನದ ಸಾಲುಗಳು ನೆನಪಾದವು. ಧರೆ ಹತ್ತಿ ಉರಿದರೂ ನಿಲಲಾಗದು.. ಧರೆ ಕಂಪಿಸಿದರೂ ನಿಲಲಾಗದು!!ಹೀಗೇ ಮಾತಾಡಿಕೊಳ್ಳುತ್ತಾ ಬುದ್ಧಿ—ಭಾವಕೋಶಗಳೊಳಗೆ, ಮೈಯ ನರನಾಡಿಗಳಿಗೆ ಆ ವೇಳೆಗೆ ತುಸು ಇಳಿದಿದ್ದ ಭೂಕಂಪದ ‘ರೋಚಕತೆ’ಯನ್ನು ಅನುಭವಿಸುತ್ತಾ ಹೋಗಿ ಮಲಗಿದರೂ ನಿದ್ದೆ ಎಲ್ಲಿ ಕಣ್ಣಿಗೆ ಹತ್ತಬೇಕು? ಹಾಗೂ ಹೀಗೂ ಸಮಯ ಜಾರಿ ಬೆಳಕು ಹರಿದ ಮೇಲೆ ಒಂದಷ್ಟು ಸುದ್ದಿಗಳು ತೇಲಿಬಂದವು: ಗುಲ್ಬರ್ಗಾ ನಗರದ ಹಲವೆಡೆ ಭೂಕಂಪದ ಕಾರಣವಾಗಿ ಗೋಡೆಗಳು ಕುಸಿದಿವೆ.. ಮತ್ತೆ ಕೆಲವೆಡೆ ಬಿರುಕು ಬಿಟ್ಟಿವೆ.. ನಗರದ ಪ್ರಸಿದ್ಧ ಶರಣ ಬಸವೇಶ್ವರ ದೇವಾಲಯದ ಒಂದು ಬದಿಯ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ.. ಇತ್ಯಾದಿ ಇತ್ಯಾದಿ.
ಏನೇ ಆದರೂ ತುಂಬಾ ದೊಡ್ಡ ಅನಾಹುತದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದೇವೆ ಎಂದು ಸಮಾಧಾನ ಮಾಡಿಕೊಳ್ಳುವಷ್ಟರಲ್ಲೇ ಹೃದಯ ವಿದ್ರಾವಕ ಸುದ್ದಿಯೊಂದು ಬಂದಪ್ಪಳಿಸಿತು: “ಗುಲ್ಬರ್ಗಾದಿಂದ ಸುಮಾರು 110 ಕಿ.ಮೀ.ದೂರದಲ್ಲಿರುವ ಆಂಧ್ರಕ್ಕೆ ಸೇರಿದ ಕಿಲ್ಲಾರಿ ಎಂಬ ಊರಿನಲ್ಲಿ ಹಾಗೂ ಗುಲ್ಬರ್ಗಾದಿಂದ 140 ಕಿ.ಮೀ. ದೂರದಲ್ಲಿರುವ ಮಹಾರಾಷ್ಟ್ರಕ್ಕೆ ಸೇರಿದ ಲಾತೂರ್ ಎಂಬ ಊರಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೂಕಂಪ ತನ್ನ ಉಗ್ರ ಪ್ರತಾಪವನ್ನು ಮೆರೆದಿದೆ! ನೂರಾರು ಮನೆಗಳು ನೆಲಕ್ಕುರುಳಿವೆ; ಸಾವಿರಾರು ಮಂದಿ ಕುಸಿದ ಮನೆಗಳ ಅಡಿಯಲ್ಲಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ!”
ಸಾವು—ನೋವುಗಳ ಪ್ರಮಾಣ ಊಹಿಸಲಾಗದಷ್ಟು ದೊಡ್ಡ ಮಟ್ಟದಲ್ಲಿರುವುದಾಗಿಯೂ,ನೆಲಕ್ಕುರುಳಿರುವ ಮನೆಗಳ ಅವಶೇಷಗಳನ್ನು ತೆರವು ಮಾಡಿದ ನಂತರವಷ್ಟೇ ಅಡಿಯಲ್ಲಿ ಹುದುಗಿರುವವರನ್ನು ರಕ್ಷಿಸುವ—ಹೊರತರುವ ಕಾರ್ಯಾಚರಣೆ ನಡೆಸಲು ಸಾಧ್ಯ ಎಂಬುದಾಗಿಯೂ ತದನಂತರವೇ ದುರಂತದ ಭೀಕರತೆಯ ಸ್ಪಷ್ಟ ಚಿತ್ರ ದೊರೆಯುವುದೆಂಬುದಾಗಿಯೂ ವರದಿಗಳು ಬಂದಿದ್ದವು. ಅಂದರೆ.. ನಾವು ನಿಜಕ್ಕೂ ಕೂದಲೆಳೆಯ ಅಂತರದಲ್ಲೇ ಭೀಕರ ದುರಂತದ ದವಡೆಯಿಂದ ಪಾರಾಗಿದ್ದೇವೆ ಎಂಬುದನ್ನು ನೆನೆದು ಒಂದಿಷ್ಟು ಸಮಾಧಾನವಾದರೂ ಧರೆಯ ಆರ್ಭಟಕ್ಕೆ ಸಿಕ್ಕು ಅಸಹಾಯಕರಾಗಿ ನಲುಗಿಹೋದವರನ್ನು ನೆನೆದು ಹೃದಯ ಭಾರವಾಗಿ ಹೋಯಿತು. ಅದೇ ನೋವು—ಸಂಕಟದಲ್ಲಿ ಆಫೀಸಿಗೆ ಹೋದರೆ ನಿರ್ದೇಶಕ ಕುಲಕರ್ಣಿಯವರು ತುರ್ತುಸಭೆ ಕರೆದಿದ್ದರು: “ಲಾತೂರ್ ಹಾಗೂ ಕಿಲ್ಲಾರಿಗಳಲ್ಲಿ ಘಟಿಸಿರುವ ಭೀಕರ ಭೂಕಂಪದ ವಿಸ್ತತ ವರದಿಯನ್ನು ಸಿದ್ಧಪಡಿಸಿಕೊಡುವ ಜವಾಬ್ದಾರಿ ನಮ್ಮ ಹೆಗಲಿಗೆ ಬಂದಿದೆ. ಆ ಎರಡೂ ಪ್ರದೇಶಗಳಿಗೆ ಹೋಗಿ ವ್ಯಾಪಕ ಚಿತ್ರೀಕರಣ ನಡೆಸಿ,ಮಾಹಿತಿ ಸಂಗ್ರಹಿಸಿ ದುರಂತದ ಸಮಗ್ರ ಚಿತ್ರ ಕಟ್ಟಿಕೊಡಬೇಕಾಗಿದೆ.. ಮೂರು ನಾಲ್ಕು ದಿನಗಳು ಚಿತ್ರೀಕರಣ ನಡೆಸಿ ಅಲ್ಲಿಂದಲೇ ಸೀದಾ ಹೈದರಾಬಾದ್ ಗೆ ಹೋಗಿ ಅಲ್ಲಿನ ತಂತ್ರಜ್ಞರ ನೆರವಿನಿಂದ ಸಂಕಲನವನ್ನು ಮಾಡಿ ದೆಹಲಿಗೆ ಪ್ರಸಾರಕ್ಕಾಗಿ ಕಳಿಸಿಕೊಡಬೇಕಾಗಿದೆ” ಎಂದರು ನಮ್ಮ ನಿರ್ದೇಶಕರು. ಇದ್ದವನು ನಾನೊಬ್ಬನೇ ಕಾರ್ಯಕ್ರಮ ನಿರ್ಮಾಪಕನಾದುದರಿಂದ ಬೇರೆ ಆಯ್ಕೆಯ ಗೊಡವೆಯೇ ಇಲ್ಲದೆ ಈ ಜವಾಬ್ದಾರಿ ನನ್ನ ಹೆಗಲೇರಿತು! ಕೆಲಸವೇ ಇಲ್ಲದೆ ಸುಮ್ಮನೇ ಕಾಲಹರಣ ಮಾಡುತ್ತಿದ್ದೇವಲ್ಲಾ ಎಂದು ಬೇಸರಿಸಿಕೊಳ್ಳುತ್ತಿದ್ದವರಿಗೆ ಇದ್ದಕ್ಕಿದ್ದ ಹಾಗೆ ಬೊಗಸೆ ತುಂಬಾ ಕೆಲಸ! ಆದರೆ ಇಂಥದೊಂದು ಭೀಕರ ಅವಘಡದ ಚಿತ್ರೀಕರಣದಿಂದ ಆರಂಭವಾಗಬೇಕಿತ್ತೇ ನಮ್ಮ ಕೆಲಸ!?

ಅಳ್ಳೆದೆಯವನಾದ ನನಗೆ ಈ ದುರಂತಕ್ಕೆ ಮುಖಾಮುಖಿಯಾಗುವುದಾದರೂ ಸಾಧ್ಯವೇ? ದುರಂತದ ಸುದ್ದಿ ಕೇಳಿ ಮರುಗುವುದು ಬೇರೆ.. ಸ್ವತ: ದುರಂತಕ್ಕೆ ಸಾಕ್ಷಿಯಾಗಿ ನಿಂತು ಚಿತ್ರೀಕರಣ ನಡೆಸಿ ವರದಿ ಸಿದ್ಧ ಪಡಿಸುವುದು ಬೇರೆ! ಆದರೆ ಈಗ ಬೇರೆ ನಿರ್ವಾಹವಿಲ್ಲ! ಮನಸ್ಸು—ಹೃದಯಗಳನ್ನು ಕಲ್ಲು ಮಾಡಿಕೊಂಡು ಚಿತ್ರೀಕರಣ ನಡೆಸಬೇಕು… ಸುದ್ದಿ ಚಿತ್ರಗಳನ್ನು ಸಿದ್ಧಪಡಿಸಿ ದೆಹಲಿಗೆ ಕಳಿಸಬೇಕು!ಆಗ ನಮ್ಮ ಗುಲ್ಬರ್ಗಾ ಕೇಂದ್ರದಲ್ಲಿದ್ದುದು ಒಂದೇ ಒಂದು ENG ಉಪಕರಣ. ಆ ಉಪಕರಣವೋ, ದೆಹಲಿಯಿಂದ ಮೊದಲುಗೊಂಡು ಹಲವಾರು ಮುಖ್ಯ ಕೇಂದ್ರಗಳಲ್ಲಿ ಪರಮನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಕೊನೆಗೆ ಈಗ ಮುಪ್ಪಿನ ಕಾಲಕ್ಕೆ ಗುಲ್ಬರ್ಗಾ ಕೇಂದ್ರಕ್ಕೆ ಬಂದು ಧೂಳು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿತ್ತು.. ಅದನ್ನು ಹೊರತೆಗೆದು ಧೂಳು ಝಾಡಿಸಿ, “ಇನ್ನೂ ಉಸಿರಾಡಿಕೊಂಡು ಕೆಲಸ ಮಾಡುವ ಸ್ಥಿತಿಯಲ್ಲಿದೆ” ಎಂದು ಖಾತ್ರಿ ಪಡಿಸಿಕೊಂಡು ಲಾತೂರ್—ಕಿಲಾರಿಯತ್ತ ಹೊರಟೇಬಿಟ್ಟೆವು. ಜತೆಗಿದ್ದವರು ನನ್ನ ಸಹಾಯಕ ಮಜುಂದಾರ್ ಹಾಗೂ ಕ್ಯಾಮರಾಮನ್ ಶ್ರೀಧರ್. ಮೂರು ತಾಸಿನ ಪ್ರಯಾಣದ ನಂತರ ನಾವು ಲಾತೂರ್ ತಲುಪಿದೆವು. ಅಲ್ಲಿನ ರುದ್ರ ಭೀಕರ ದೃಶ್ಯವನ್ನು ನೋಡಿ ನಾನು ಅಕ್ಷರಶಃ ನಡುಗಿಹೋದೆ. ಎತ್ತ ನೋಡಿದರೂ ಕಲ್ಲುಗಳ ರಾಶಿ…ಅಲ್ಲಲ್ಲಿ ಮುರಿದು ಬಿದ್ದಿದ್ದಂತಹ ಒಂದಿಷ್ಟು ಮರದ ತೊಲೆಗಳು.. ಕಂಬಗಳು. ಉದುರಿ ಚದುರಿ ಬಿದ್ದಿದ್ದ ಕಲ್ಲುಗಳಾದರೂ ಎಂಥವು? ಚಿತ್ರ ವಿಚಿತ್ರ ಆಕಾರದ, ಸಾಮ್ಯವೇ ಇಲ್ಲದ ಕಲ್ಲುಗಳು! ಒಂದೇ ಅಳತೆ—ಆಕಾರದ ಕಲ್ಲುಗಳಿದ್ದರೆ ಅವನ್ನು ಜೋಡಿಸಿ ಒಂದಷ್ಟು ಮರಳು—ಸಿಮೆಂಟ್ ಹಾಕಿ ಕಟ್ಟಿದರೆ ಒಂದಷ್ಟು ಬಿಗಿ —ಭದ್ರ ಇದ್ದೀತು; ಇವೋ ಒಂದಕ್ಕಿಂತ ಒಂದು ಭಿನ್ನ ಆಕಾರದ, ನಿರ್ದಿಷ್ಟ ಆಕಾರವೇ ಇಲ್ಲದ ಕಲ್ಲುಗಳು. ಅವನ್ನು ಸುಮ್ಮನೇ ಹಾಗೇ ಒಂದರ ಮೇಲೊಂದರಂತೆ ಪೇರಿಸಿ ಇಷ್ಟು ಮಣ್ಣು—ಮರಳು ಮೆತ್ತಿಬಿಟ್ಟರೆ ಏನು ಬಿಗಿ ತಾನೇ ಬಂದೀತು? ಜೋರು ಬಿರುಗಾಳಿಯ ರಭಸವನ್ನೇ ತಡೆಯಲು ಈ ಕಲ್ಲು ಮನೆಗಳಿಗೆ ಅಸಾಧ್ಯವಿರುವಾಗ ಭೂಕಂಪದ ಹೊಡೆತಕ್ಕೆ ಅವು ಪ್ರತಿರೋಧ ಒಡ್ಡುವುದಾದರೂ ಎಲ್ಲಿಂದ? ನನಗನ್ನಿಸಿದ್ದು ಭೂಕಂಪದ ಆಘಾತಕ್ಕೆ ಬಲಿಯಾದವರಿಗಿಂತ ಈ ಕಲ್ಲುಗಳ ರಾಶಿಯ ಅಡಿಗೆ ಸಿಕ್ಕು ಉಸಿರುಗಟ್ಟಿ ಗತಪ್ರಾಣರಾದವರೇ ಹೆಚ್ಚು ಎಂದು. ಎಷ್ಟೇ ತ್ವರಿತಗತಿಯ ಕಾರ್ಯಾಚರಣೆ ನಡೆಸಿದರೂ ವಿಶಾಲ ಬಯಲಿನಲ್ಲಿ ಅಗಾಧವಾಗಿ ಒಟ್ಟಿಕೊಂಡು ಬಿದ್ದಿದ್ದ ಆ ಕಲ್ಲು—ಮಣ್ಣಿನ ರಾಶಿಯನ್ನು ತೆರವು ಗೊಳಿಸಲು ನಾಲ್ಕಾರು ದಿನಗಳಾದರೂ ಬೇಕು.. ಅಡಿಯಲ್ಲಿ ಸಿಕ್ಕಿಬಿದ್ದಿರುವವರು ಅದುತನಕ ಜೀವದಿಂದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಿಸಿ ಮನಸ್ಸು ಮುದುಡಿ ಹೋಯಿತು. ಅದಕ್ಕೆ ಸರಿಯಾಗಿ ಹಾಗೇ ಚಿತ್ರೀಕರಣ ನಡೆಸುತ್ತಾ ಮುಂದೆ ಸಾಗಿದರೆ ದೊಡ್ಡ ಕಲ್ಲುಗಳ ಸಂದಿನಿಂದ ಅಲ್ಲಲ್ಲಿ ಇಣುಕುತ್ತಿದ್ದ ಕೈಗಳು.. ಕಾಲ್ಗಳು… ಆ ದೃಶ್ಯವನ್ನು ನೋಡಿದ ಮೇಲಂತೂ ನಾನು ಹೌಹಾರಿಹೋದೆ. ನೆಲೆನೀಡಬೇಕಾದ ನೆಲನೇ ನುಂಗಿದರೆ ರಕ್ಷಣೆಯೆಲ್ಲಿ? ‘ಹರ ಕೊಲ್ಲಲ್ ಪರ ಕಾಯ್ವನೇ’? ಇಂಥ ಅಸಹಾಯಕ ಭಾವದಲ್ಲೇ ಮುಳುಗಿ ರಕ್ಷಣಾ ಸಿಬ್ಬಂದಿಯವರಿಗೆ ದೇಹಗಳು ಸಿಲುಕಿರುವ ಸುದ್ದಿ ತಿಳಿಸಿ ಮತ್ತಷ್ಟು ಚಿತ್ರೀಕರಣ ನಡೆಸಿ ಸಂಜೆಯ ವೇಳೆಗೆ ಹೈದರಾಬಾದ್ ಗೆ ಹೊರಟೆವು. ನಮ್ಮ ಅದೃಷ್ಟಕ್ಕೆ ಎಲ್ಲ ಚಿತ್ರಿಕೆಗಳೂ ಸರಿಯಾಗಿ ಮೂಡಿ ಬಂದಿದ್ದವು. ಅಲ್ಲಿ ಸಂಕಲನ ಕಾರ್ಯ ಮುಗಿಸಿ ದೆಹಲಿಗೆ ಚಿತ್ರಿಕೆ—ವರದಿಗಳನ್ನು ರವಾನಿಸಿ ಗುಲ್ಬರ್ಗಾಗೆ ಹೊರಳಿ ಬಂದೆವು.
ಆಫೀಸಿನಲ್ಲಿ ಕ್ಯಾಮರಾ ಉಪಕರಣಗಳನ್ನಿಳಿಸಿ ಅಲ್ಲಿಂದ ಬೈಕ್ ಹತ್ತಿಕೊಂಡು ಮನೆಗೆ ಬಂದು ನೋಡಿದರೆ ಮನೆಗೆ ಬೀಗ ಹಾಕಿದೆ! ಅಯ್ಯೋ ದೇವರೇ! ಇಷ್ಟು ಹೊತ್ತಿನಲ್ಲಿ ಬೀಗ ಹಾಕಿಕೊಂಡು ಮಗುವನ್ನೂ ಕರೆದುಕೊಂಡು ರಂಜನಿ ಎಲ್ಲಿಗೆ ಹೋಗಲು ಸಾಧ್ಯ? ಎಂದು ಚಿಂತಿಸುತ್ತಿರುವಾಗಲೇ ಮನೆ ಮಾಲೀಕ ಕಲ್ಲೂರ್ ಕರ್ ಅವರು ಮಹಡಿ ಹತ್ತಿ ಮೇಲೆ ಬಂದರು. “ಕಾಳಜಿ ಮಾಡಬ್ಯಾಡ್ರಿ.. ರಂಜನಿ—ರಾಧಿಕಾ ನಮ್ಮ ಮನ್ಯಾಕ ಮಲಕ್ಕೊಂಡಾರ.. ಒಬ್ಬಾಕೀನಾ ಕೂಸಿನ ಜೋಡಿ ಇರಾಕ ಅವರಿಗೆ ಅಂಜಿಕಿ ಆಗ್ತಿತ್ತಂತ.. ನೆನ್ನಿ ಹಂಗ ಮತ್ತ ಎಲ್ಲಾರ ಭೂಕಂಪ ಆದರ ಗತಿ ಏನಂತ ಕೆಳಗ ಬಂದು ಮಲಗ್ಯಾರ.. ನಿಮ್ಮ ಬೈಕ್ ಸದ್ದು ಕೇಳಿ ನೀವು ಬಂದಿರಬೇಕಂತ ಎಣಿಸಿ ನಾ ಬಂದೆ ನೋಡ್ರಿ” ಎಂದು ಕಲ್ಲೂರ್ ಕರ್ ಅವರು ಹೇಳಿದ ಮೇಲೆ ಮನಸ್ಸಿಗೆ ಸಮಾಧಾನವಾಯಿತು
ಮತ್ತೆ ಮರುದಿನವೂ ಕ್ಯಾಮರಾ ತೆಗೆದುಕೊಂಡು ಲಾತೂರ್—ಕಿಲ್ಲಾರಿಗಳತ್ತ ಚಿತ್ರೀಕರಣಕ್ಕಾಗಿ ಪ್ರಯಾಣ ಬೆಳೆಸಿದೆವು. ಅಂದೂ ಹಿಂದಿನ ದಿನದಂತೆಯೇ.. ಅದೇ ತೆರನಾದ ಖಿನ್ನಗೊಳಿಸುವ ಅನುಭವಗಳು.. ಚಿತ್ರೀಕರಣ ಮುಗಿಸಿ ಹೈದರಾಬಾದ್ ಗೆ ಹೋಗಿ ಸಂಕಲನ ನಡೆಸಿ ದೆಹಲಿಗೆ ವರದಿ ಕಳಿಸಿ ಮನೆಗೆ ಮರಳುವುದು—ಹೀಗೇ ನಡೆದಿತ್ತು.
ಆ ಮೂರೂ ದಿನಗಳೂ ರಂಜನಿ ರಾಧಿಕಾಳೊಂದಿಗೆ ಕೆಳಗಡೆ ಇದ್ದ ಕಲ್ಲೂರ್ ಕರ್ ಅವರ ಮನೆಯಲ್ಲೇ ಮಲಗಿದ್ದಳು.
ಹೀಗೆ ಲಾತೂರ್—ಕಿಲ್ಲಾರಿಗಳಲ್ಲಿ ಘಟಿಸಿದ ಭೂಕಂಪದ ಕವರೇಜ್ ಅನ್ನು ಅತ್ಯಂತ ಸಮರ್ಥವಾಗಿ ಹಾಗೂ ಯಶಸ್ವಿಯಾಗಿಯೇ ನಿರ್ವಹಿಸಿದರೂ ಅದು ಖಂಡಿತ ಹೇಳಿಕೊಳ್ಳುವಂತಹ ಸಂಗತಿಯೂ ಆಗಿರಲಿಲ್ಲ.. ಹೇಳಿಕೊಂಡು ಸಂಭ್ರಮಿಸಿ ಹೆಮ್ಮೆ ಪಡುವಂತಹ ಸಂಗತಿ ಮೊದಲೇ ಆಗಿರಲಿಲ್ಲ. ಅಂಥದೊಂದು ಪ್ರಾಕೃತಿಕ ದುರಂತಕ್ಕೆ ನಾನು ಸಾಕ್ಷಿಯಾದದ್ದು, ಆ ಮಟ್ಟಿನ ಸಂಕಟ—ಖಿನ್ನತೆಗಳನ್ನು ಅನುಭವಿಸಿದ್ದು ಅದೇ ಮೊದಲು. ಅದಕ್ಕೆ ಈಗಲೂ ಭೂಕಂಪ ಎಂಬ ಶಬ್ದವನ್ನು ಕೇಳಿದರೆ ಸಾಕು, ಮೈ ಹಾಗೇ ಒಮ್ಮೆ ಕಂಪಿಸಿಬಿಡುತ್ತದೆ!!!
। ಇನ್ನು ಮುಂದಿನ ವಾರಕ್ಕೆ ।






0 Comments