ಶ್ರೀನಿವಾಸ ಪ್ರಭು ಅಂಕಣ – ಕೊನೆಯ ಭೇಟಿ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

81

ಒಂದು ನಿವೇದನೆ:

ಹೇಳುತ್ತಿರುವ ವಿಷಯಗಳಿಗೆ ಅನುಗುಣವಾಗಿ ಘಟನೆಗಳ ಕಾಲಮಾನಕ್ಕೆ ಸಂಬಂಧಪಟ್ಟ ಹಾಗೆ ಕೊಂಚ ಹಿಂದು ಮುಂದು ಮುಂದು ಹಿಂದಾಗಬಹುದು..ಕ್ಷಮೆ ಇರಲಿ.

ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಪ್ರೇಮಲೋಕ’ ಬಿಡುಗಡೆಯಾದದ್ದು 1987ರಲ್ಲಿ.ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ ಕೂಡಾ.ಚಿತ್ರದ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ಗುರುತರ ಜವಾಬ್ದಾರಿಯನ್ನು ಗಂಗರಾಜು ಅಲಿಯಾಸ್ ಹಂಸಲೇಖ ಅವರು ವಹಿಸಿಕೊಂಡಿದ್ದರು.12—13 ಹಾಡುಗಳಿದ್ದ ‘ಪ್ರೇಮಲೋಕ’ ಚಿತ್ರದಲ್ಲಿ ಸಂಗೀತವೂ ಒಂದು ಪ್ರಧಾನ ಪಾತ್ರವನ್ನೇ ವಹಿಸಿತ್ತೆಂದರೆ ಅತಿಶಯೋಕ್ತಿಯಲ್ಲ. ‘ಪ್ರೇಮಲೋಕ’ ಕನ್ನಡ ಚಿತ್ರರಂಗದಲ್ಲೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದ ಯಶಸ್ವೀ ಚಿತ್ರ.

‘ಕನಸುಗಾರ’—’ಕ್ರೇಜಿ಼ಸ್ಟಾರ್’ ಮೊದಲಾದ ಬಿರುದುಗಳನ್ನು ರವಿಚಂದ್ರನ್ ಅವರಿಗೆ ದೊರಕಿಸಿಕೊಟ್ಟ ‘ಪ್ರೇಮಲೋಕ’ ಚಿತ್ರದ ಪ್ರಚಂಡ ಯಶಸ್ಸಿಗೆ ಹಂಸಲೇಖ ಅವರ ಸಾಹಿತ್ಯ—ಸಂಗೀತಗಳ ಕೊಡುಗೆಯೂ ಗಣನೀಯವಾಗಿಯೇ ಇತ್ತೆನ್ನುವುದು ಸಂಶಯಾತೀತ ಸಂಗತಿ. ”ಕನ್ನಡ ಚಿತ್ರರಂಗದಲ್ಲಿ ‘ಹಂಸಶಕೆ’ ಪ್ರಾರಂಭವಾದುದು ಈ ಚಿತ್ರದಿಂದಲೇ”ಎಂದೇ ನಾನು ಯಾವಾಗಲೂ ಹೇಳುತ್ತೇನೆ! ಆ ವೇಳೆಗಾಗಲೇ ರವಿಯವರು ನಾಯಕನಾಗಿ ನಟಿಸಿದ್ದ ಚಿತ್ರಗಳೆಲ್ಲವೂ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದಲೂ ಯಶಸ್ವೀ ಚಿತ್ರಗಳೆನಿಸಿಕೊಂಡು ನಮ್ಮಿಬ್ಬರ ‘ಶರೀರ—ಶಾರೀರ ಜೋಡಿ’ಯೂ ಕನ್ನಡ ಜನತೆಗೆ ಪ್ರಿಯವಾಗಿ ಹೋಗಿತ್ತು! ಜೊತೆ ಜೊತೆಗೇ ‘ಪ್ರೇಮಲೋಕ’ ಡಬ್ಬಿಂಗ್ ಸಮಯದಲ್ಲಿ ಹಾಗೂ ನಂತರದ ದಿನಗಳಲ್ಲಿ ಅಷ್ಟೇನೂ ಹಿತಕರವಲ್ಲದ ಒಂದೆರಡು ಸಂಗತಿಗಳೂ ಘಟಿಸಿದವು. ಅವನ್ನೀಗ ನೆನಪಿಸಿಕೊಳ್ಳುತ್ತೇನೆ.

ಪ್ರೇಮಲೋಕ ಚಿತ್ರದ ಡಬ್ಬಿಂಗ್ ನಡೆದದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಯಥಾಪ್ರಕಾರ ರಜೆಯ ದಿನಗಳನ್ನು ಹೊಂದಿಸಿಕೊಂಡು, ತೀರಾ ಅನಿವಾರ್ಯವಾದಾಗ ಆಫೀಸಿಗೆ ರಜೆ ಹಾಕಿ ಡಬ್ಬಿಂಗ್ ಕೆಲಸಕ್ಕೆ ಹೋಗುತ್ತಿದ್ದೆ. ಆ ಕಾಲಕ್ಕೇ ಬಹು ದೊಡ್ಡ ಬಂಡವಾಳದ ಮಹತ್ವಾಕಾಂಕ್ಷೆಯ ಚಿತ್ರವಾದುದರಿಂದ ಪ್ರತಿಯೊಂದು ಹಂತದಲ್ಲೂ ಯಾವುದೇ ತಪ್ಪುಗಳು ನುಸುಳದಂತೆ—ಯಾವುದೇ ರಾಜಿಗೂ ಪಕ್ಕಾಗದಂತೆ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿತ್ತು. ಹಂಸಲೇಖ ಅವರೇ ಖುದ್ದು ಹಾಜರಿದ್ದು ಪ್ರತಿ ಸಂಭಾಷಣೆಯನ್ನೂ ತಿದ್ದಿ ತಿದ್ದಿ ಡಬ್ಬಿಂಗ್ ಮಾಡಿಸುತ್ತಿದ್ದರು. ಹಾಗಾಗಿ ಸಾಧಾರಣವಾಗಿ ಅಗತ್ಯ ಬೀಳುತ್ತಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಪ್ರೇಮಲೋಕ ಚಿತ್ರದ ಡಬ್ಬಿಂಗ್ ಗೆ ಮೀಸಲಿಡಬೇಕಾಯಿತು. ನಾಲ್ಕಾರು ದಿನಗಳ ಕಾಲ ಸತತವಾಗಿ ಡಬ್ಬಿಂಗ್ ಮಾಡಿ ಮುಗಿಸಿದ ಮೇಲೆ ಹಂಸಲೇಖರ ಮುಖದ ಮೇಲೆ ಸಮಾಧಾನದ ಮುಗುಳ್ನಗು..ನನಗೂ ತೃಪ್ತಿಕರವಾಗಿ ಡಬ್ಬಿಂಗ್ ಮಾಡಿ ಮುಗಿಸಿದ ಸಂತಸ!

ಡಬ್ಬಿಂಗ್ ಮುಗಿದ ಮರುದಿನ ಆಫೀಸ್ ನಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ ವೇಳೆಯಲ್ಲೇ ಚಾಮುಂಡೇಶ್ಶರಿ ಸ್ಟುಡಿಯೋದಿಂದ ಫೋನ್ ಕರೆ: “ಈ ತಕ್ಷಣವೇ ಸ್ಟುಡಿಯೋಗೆ ಹೊರಟು ಬನ್ನಿ”! ಏನು ಹೆಚ್ಚುಕಡಿಮೆಯಾಗಿದೆಯೋ ಏನೋ ಎಂಬ ಆತಂಕದಿಂದಲೇ ಸ್ಟುಡಿಯೋಗೆ ಧಾವಿಸಿದೆ.ಹೋಗುತ್ತಿದ್ದಂತೆ ಎದುರಾದ ಮ್ಯಾನೇಜರ್ ಅವರು,”ಪ್ರಭುಗಳೇ, ಸ್ವಲ್ಪ re—dubbing ಮಾಡಬೇಕಾಗಿದೆಯಲ್ಲಾ” ಎಂದರು. “ಯಾಕೆ? ಏನು ತೊಂದರೆ ಆಗಿದೆ? ಯಾವ ಭಾಗವನ್ನು ಮತ್ತೆ ಡಬ್ ಮಾಡಬೇಕು?” ಎಂದು ನಾನು ಕೇಳಿದೆ. ಮ್ಯಾನೇಜರ್ ಅವರು ನನ್ನನ್ನೇ ದಿಟ್ಟಿಸುತ್ತಾ, “ಇಡೀ ಪಿಕ್ಚರ್ರು ಪ್ರಭುಗಳೇ” ಎಂದರು! ಇಡೀ ಪಿಕ್ಚರ್ ಮತ್ತೆ ಡಬ್ಬಿಂಗ್ ಎಂದರೆ ಮತ್ತೆ ನಾಲ್ಕಾರು ದಿನಗಳ ಕೆಲಸ! ಅಯ್ಯೋ ದೇವರೇ! ಮತ್ತೆ ಆಫೀಸಿಗೆ ರಜೆ ಹಾಕಬೇಕು! ಆ ವೇಳೆಗಾಗಲೇ ನಾನು ಹೀಗೆ ಪದೇ ಪದೇ ರಜೆ ಹಾಕುತ್ತಿದ್ದುದರಿಂದ ಮೇಲಧಿಕಾರಿಗಳ ವಲಯದಲ್ಲಿ ಸಣ್ಣದಾಗಿ ಅಸಮಾಧಾನ ಹೊಗೆಯಾಡತೊಡಗಿತ್ತು. ಆದರೂ ನಾನು ಯಾವುದೇ ಕೆಲಸವನ್ನೂ ಬಾಕಿ ಉಳಿಸಿಕೊಳ್ಳದೇ ನನ್ನ ನಿಗದಿತ ಕಾರ್ಯಕ್ರಮಗಳನ್ನು ನಿಗದಿತ ಸಮಯಕ್ಕೆ ಸಿದ್ಧಪಡಿಸಿ ಕೊಡುತ್ತಿದ್ದುದರಿಂದ ಹೆಚ್ಚಿನ ಪ್ರಶ್ನೆ—ವಿಚಾರಣೆಗೆ ಅವಕಾಶವಾಗಿರಲಿಲ್ಲ.

ಈಗ ನೋಡಿದರೆ ನಾನು ನಮ್ಮ ಸ್ಟುಡಿಯೋದಲ್ಲಿ ನಾಟಕದ ಶೂಟಿಂಗ್ ನಿಗದಿ ಪಡಿಸಿಕೊಂಡಿರುವ ಸಮಯದಲ್ಲೇ ಮತ್ತೆ ತುರ್ತಾಗಿ ಡಬ್ಬಿಂಗ್ ಮಾಡಿಕೊಡಿ ಎನ್ನುತ್ತಿದ್ದಾರೆ—ಅದೂ ಎರಡನೆಯ ಬಾರಿಗೆ! “ಯಾಕೆ ಸ್ವಾಮಿ ಮತ್ತೆ ಡಬ್ಬಿಂಗ್ ಮಾಡಬೇಕು? ಈಗ ಮಾಡಿರುವುದು ಸರಿ ಇಲ್ಲವೇ? ಏನಾದರೂ ತಪ್ಪುಗಳಾಗಿವೆಯೇ?” ಎಂದು ನಾನು ಕೇಳಿದೆ. “ಇಲ್ಲ ಪ್ರಭುಗಳೇ, ನಿಮ್ಮ ಕಡೇಂದ ಏನೂ ತೊಂದರೆ ಆಗಿಲ್ಲ. ಹೀರೋ—ಹೀರೋಯಿನ್ ವಾಯ್ಸ್ ಗಳನ್ನ ಸ್ಟಿರಿಯೋ ಎಫೆಕ್ಟ್ ನಲ್ಲಿ ಡಬ್ ಮಾಡಬೇಕಾಗಿತ್ತು. ಇಂಜಿನಿಯರ್ ಅವರು ಯಾವುದೋ ಜ್ಞಾನದಲ್ಲಿ ಮಾಮೂಲು ತಂತ್ರದಲ್ಲೇ ಮಾಡಿಬಿಟ್ಟಿದಾರೆ..ಅದಕ್ಕೇ ನಿಮ್ಮ ಭಾಗವನ್ನು ಪೂರ್ತಿಯಾಗಿ ಇನ್ನೊಂದು ಸಲ ಡಬ್ಬಿಂಗ್ ಮಾಡಬೇಕು” ಎಂದರು ಮ್ಯಾನೇಜರ್! ನನಗೆ ಬೇಸರದ ಜತೆಗೇ ಸಿಟ್ಟೂ ಉಕ್ಕಿಬಂತು. ಕೊಂಚ ಯೋಚಿಸಿ ನೇರವಾಗಿ ಮ್ಯಾನೇಜರ್ ಅವರಿಗೆ ಹೇಳಿದೆ: “ನೋಡಿ ಸ್ವಾಮೀ, ಒಂದೆರಡು ಭಾಗಗಳನ್ನು ಮತ್ತೆ ಡಬ್ ಮಾಡು ಅಂದಿದ್ರೆ ನನ್ನದೇನೂ ತಕರಾರು ಇರ್ತಿರಲಿಲ್ಲ. ಆದರೆ ಇಡೀ ಚಿತ್ರದ ಡಬ್ಬಿಂಗ್ ಅಂದರೆ ಮತ್ತೆ ನಾಲ್ಕಾರು ದಿನದ ಕೆಲಸ..ನನಗೆ ಆಫೀಸ್ ನಲ್ಲಿ ರಜೆ ಸಿಗೋದೂ ಕಷ್ಟ..ಜೊತೆಗೆ ನನ್ನದಲ್ಲದ ತಪ್ಪಿಗೆ ನಾನು ಮತ್ತೆ ಕೆಲಸ ಮಾಡಬೇಕಾಗಿರೋದರಿಂದ—ಇಡೀ ಚಿತ್ರಕ್ಕೆ ಮತ್ತೆ ಕಂಠದಾನ ಮಾಡಬೇಕಾಗಿರೋದರಿಂದ ಸಂಭಾವನೆಯನ್ನೂ ನೀವು ಎರಡರಷ್ಟು ಕೊಡಬೇಕಾಗುತ್ತೆ”.

ನನ್ನ ಮಾತಿಗೆ ಮ್ಯಾನೇಜರ್ ನಕ್ಕುಬಿಟ್ಟರು. “ಏನು ಪ್ರಭುಗಳೇ ಹೀಗೆ ಹೇಳ್ತಿದೀರಿ! ತೊಂದರೆ ಆಗಿದೆ ಅಂದ್ರೆ ಮತ್ತೆ ಡಬ್ಬಿಂಗ್ ಮಾಡಿ ಸರಿ ಪಡಿಸಬೇಕಾಗಿರೋದು ನಿಮ್ಮ ಧರ್ಮ ಅಲ್ಲವೇ? ಅಂಥಾದ್ದರಲ್ಲಿ ಡಬ್ಬಲ್ ಸಂಭಾವನೆ ಕೇಳ್ತಿದೀರಲ್ಲಾ, ನ್ಯಾಯವಾ?” ಎಂದು ನನ್ನನ್ನೇ ಮರು ಪ್ರಶ್ನಿಸಿದರು.

“ನಾನು ಅನ್ಯಾಯವಾಗಿ ಏನನ್ನೂ ಕೇಳ್ತಿಲ್ಲ ಸ್ವಾಮೀ..ನನ್ನ ಸಮಯಕ್ಕೆ ಒಂದು ಬೆಲೆ ಇದೆ..ಅದನ್ನಷ್ಟೇ ನಾನು ಕೇಳ್ತಿದೇನೆ..ಒಂದೋ ಎರಡೋ ದೃಶ್ಯಗಳ ಡಬ್ಬಿಂಗ್ ಮಾಡಬೇಕಾಗಿದ್ರೆ ನಾನೇನೂ ಹೆಚ್ಚಿನ ಸಂಭಾವನೆ ಕೇಳ್ತಿರಲಿಲ್ಲ. ಇದು ಹಾಗಲ್ಲ. ಜೊತೇಗೆ ಯಾರದೋ ತಪ್ಪಿಗೆ ನಾನು ದಂಡ ತೆರಬೇಕು ಅನ್ನೋದು ಯಾವ ನ್ಯಾಯ ನೀವೇ ಹೇಳಿ!” ಎಂದು ನಾನೂ ಪಟ್ಟುಬಿಡದೆ ವಾದಿಸಿದೆ. ಕೊನೆಗೆ ವಿಷಯ ದೊಡ್ಡವರ ತನಕವೂ ಹೋಯಿತು. ನನ್ನ ಸಂಭಾವನೆಗೆ ಇನ್ನೊಂದು ಸಾವಿರವನ್ನು ಸೇರಿಸಿ ಕೊಡುವುದೆಂದು ದೊಡ್ಡವರ ಸಭೆಯಲ್ಲಿ ನಿರ್ಣಯವಾಯಿತಂತೆ. ನನಗೇನೂ ಅದರಿಂದ ಸಮಾಧಾನವಾಗಲಿಲ್ಲ. ಮಾತು ಮುಂದುವರಿಸಲು ಮನಸ್ಸಾಗದೆ “ನಿಮ್ಮಿಷ್ಟ” ಎಂದಷ್ಟೇ ನುಡಿದು ಸುಮ್ಮನಾಗಿಬಿಟ್ಟೆ. ಆಫೀಸ್ ಕೆಲಸವನ್ನು ಆತ್ಮೀಯ ಗೆಳೆಯ—ಆಪದ್ಬಾಂಧವ ರಾಜೇಂದ್ರ ಕಟ್ಟಿಯ ಹೆಗಲಿಗೆ ವರ್ಗಾಯಿಸಿ ಹೇಗೋ ಸಮಯ ಹೊಂದಿಸಿಕೊಂಡು ಹೋಗಿ ಮರು ಡಬ್ಬಿಂಗ್ ಕೆಲಸ ಮುಗಿಸಿಕೊಟ್ಟೆ.

ಹಂಸಲೇಖರ ಮಧುರ ಸಂಗೀತದ ಮೋಡಿ ಒಂದೆಡೆಗಾದರೆ ‘ಕನಸುಗಾರ’ನ ಅದ್ದೂರಿ ಸೆಟ್ ಗಳು..ಹಾಡುಗಳ ಮನಮೋಹಕ ದೃಶ್ಯೀಕರಣ.. ಅಮೋಘ ಛಾಯಾಗ್ರಹಣಗಳ ಜಾದೂ ಮತ್ತೊಂದೆಡೆ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟು ‘ಪ್ರೇಮಲೋಕ’ ಅಭೂತಪೂರ್ವ ಯಶಸ್ಸು ಗಳಿಸಿತು. ಆ ಯಶಸ್ಸಿನಲ್ಲಿ ನನ್ನದೂ ‘ಕಂಠದಾನ’ದ ಒಂದು ಅಳಿಲುಸೇವೆ!

ನೋಡನೋಡುತ್ತಿದ್ದಂತೆ ಪ್ರೇಮಲೋಕ ಚಿತ್ರ ರಾಜ್ಯದ ಬಹಳಷ್ಟು ಕೇಂದ್ರಗಳಲ್ಲಿ ನೂರು ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿಯೇಬಿಟ್ಟಿತು!

ಕನ್ನಡ ಚಿತ್ರರಂಗಕ್ಕೆ ಕನಸುಗಾರ—ಸೃಜನಶೀಲ ನಿರ್ದೇಶಕನೊಬ್ಬನ ಆಗಮನವಾಗಿತ್ತು. ಶತದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಭರದಿಂದ ಸಿದ್ಧತೆಗಳು ಸಾಗತೊಡಗಿದವು. ಅದೇ ಸಮಯದಲ್ಲಿ ರವಿಯವರ ಮತ್ತೊಂದು ಹೊಸ ಚಿತ್ರದ ಡಬ್ಬಿಂಗ್ ಕೆಲಸವೂ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿತ್ತು. ಹಾಗೆ ಡಬ್ಬಿಂಗ್ ಗೆಂದು ನಾನು ಸ್ಟುಡಿಯೋಗೆ ಹೋಗಿದ್ದಾಗ ಮನಸ್ಸಿಗೆ ನೋವುಂಟುಮಾಡುವ ಮತ್ತೊಂದು ಸುದ್ದಿ ನನಗಾಗಿ ಕಾದಿತ್ತು: ‘ಶತದಿನೋತ್ಸವದ ಆಚರಣೆಯ ಅಂಗವಾಗಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ವೈಭವೋಪೇತ ಸಮಾರಂಭ ನಡೆಯಲಿದ್ದು ಅಲ್ಲಿ ಚಿತ್ರತಂಡದ ಪ್ರತಿಯೊಬ್ಬರಿಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸುತ್ತಿದ್ದಾರೆ—ಕಂಠದಾನ ಕಲಾವಿದರನ್ನು ಹೊರತುಪಡಿಸಿ! ಅಂದರೆ ಏನರ್ಥ? ಚಿತ್ರದ ಯಶಸ್ಸಿಗೆ ನಮ್ಮದೇನೇನೂ ಕೊಡುಗೆಯೇ ಇಲ್ಲವೇ? ತೆರೆಮರೆಯ ಕಲಾವಿದರೇ ಆದ ಕಂಠದಾನ ಕಲಾವಿದರು ಸಮಾರಂಭದಲ್ಲೂ ತೆರೆಮರೆಗೇ ಸರಿಯಬೇಕೇ? ನಿರ್ಮಾಣ ಸಹಾಯಕನಿಂದ ಹಿಡಿದು ಪ್ರತಿಯೊಂದು ವಿಭಾಗದ ಪ್ರತಿಯೊಬ್ಬ ಕಲಾವಿದನಿಗೆ—ತಂತ್ರಜ್ಞನಿಗೆ ಸ್ಮರಣಿಕೆ ಹಾಗೂ ಗೌರವಗಳು ಸಲ್ಲುತ್ತಿವೆ; ಕಂಠದಾನ ಕಲಾವಿದರಿಗೆ ಮಾತ್ರ ಈ ಮೆಚ್ಚುಗೆಯ ಭಾಗ್ಯವಿಲ್ಲ! ಒಳಗೊಳಗೇ ಬೇಸರ—ಅಸಮಾಧಾನದಿಂದ ಕುದ್ದುಹೋದರೂ ತೋರಗೊಡದೆ ಸಾವರಿಸಿಕೊಂಡೆ. ಅಲ್ಲಿದ್ದ ಮ್ಯಾನೇಜರ್ ಗಳ ಜೊತೆಯಲ್ಲಿ ಮಾತುಕತೆಯಾಯಿತು.

“ಹೌದು ಸರ್..ನಿಮ್ಮನ್ನ stage ಮೇಲೆ ಕರೆದು ‘ಇವರೇ ರವಿಯವರ ಧ್ವನಿ’ ಅಂತ ಪರಿಚಯ ಮಾಡಿಕೊಡೋದಕ್ಕಾಗುತ್ತಾ? ಆ ವಿಷಯ ಈಗಲೇ ಯಾರಿಗೂ ಗೊತ್ತಾಗೋದು ಬೇಡ ಅಂತ ತಾನೇ ನಾವು ತೀರ್ಮಾನ ಮಾಡಿರೋದು?” ಎಂದು ಅವರುಗಳು ನಮ್ಮ ಬಾಯಿ ಮುಚ್ಚಿಸಿಬಿಟ್ಟರು. ನನಗೆ ಈ ನಿರ್ಧಾರದಿಂದ ನೋವಾಗಿದ್ದು ದಿಟವೇ ಆದರೂ ಒಂದು ರೀತಿಯ ಸಮಾಧಾನವೂ ಆಯಿತೆನ್ನಿ. ನನಗೆ ಈ ಕುರಿತಾದಂತಹ ಯಾವುದೇ ಪ್ರಚಾರ ಬೇಕಿರಲಿಲ್ಲ. ಆದಷ್ಟೂ ತೆರೆಮರೆಯಲ್ಲಿರುವುದೇ ನನ್ನ ಆಫೀಸ್ ಕೆಲಸದ ದೃಷ್ಟಿಯಿಂದ ಒಳ್ಳೆಯದಿತ್ತು! ಹಾಗಾಗಿ ನಾನೂ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಾಗಿಬಿಟ್ಟೆ. ಆದರೆ ಇತರ ಕಂಠದಾನ ಕಲಾವಿದರು ಸುಮ್ಮನಾಗಲಿಲ್ಲ. “ಪ್ರಭು ಸರ್, ದಯವಿಟ್ಟು ನೀವು ರವಿ ಸರ್ ಹತ್ರ ಮಾತಾಡಿ.. ನಿಮ್ಮ ಮಾತಿಗೆ ಅವರು ಬೆಲೆ ಕೊಟ್ಟೇ ಕೊಡ್ತಾರೆ” ಎಂದು ನನಗೆ ದುಂಬಾಲು ಬಿದ್ದರು. ಸರಿ, ಒಮ್ಮೆ ಮಾತಾಡಿ ನೋಡುವುದರಿಂದ ಕಳೆದುಕೊಳ್ಳುವುದಾದರೂ ಏನು ಎಂದುಕೊಂಡು ಅಂದೇ ಸಂಜೆ ಸ್ಟುಡಿಯೋಗೆ ಬಂದಿದ್ದ ರವಿ ಅವರ ಬಳಿ ವಿಷಯ ಪ್ರಸ್ತಾಪ ಮಾಡಿದೆ. “ಕಂಠದಾನ ಕಲಾವಿದರೆಂದು ಹೇಳದಿದ್ದರೂ ಅಡ್ಡಿಯಿಲ್ಲ.. ಚಿತ್ರಕ್ಕಾಗಿ ದುಡಿದ ತಂತ್ರಜ್ಞರು ಎಂದು ಪರಿಚಯಿಸಿ ಸ್ಮರಣಿಕೆ ನೀಡಬಹುದಲ್ಲವೇ?” ಎಂದೆಲ್ಲಾ ಹೇಳಿ ಅವರ ಮನ ಒಲಿಸಲು ಪ್ರಯತ್ನ ಪಟ್ಟೆ. ಆದರೆ ಅವರ ತೀರ್ಮಾನ ಸೂಜಿಮೊನೆಯಷ್ಟೂ ಮಿಸುಕಲಿಲ್ಲ.”very very sorry.. ಇದೊಂದು ವಿಷಯದಲ್ಲಿ ಒತ್ತಾಯ ಮಾಡಲೇಬೇಡಿ..ನಿಮಗೆ ಅಷ್ಟು ಬೇಕು ಅನ್ನಿಸಿದರೆ ಒಂದು ಮೆಮೆಂಟೋಲಿ ನಿಮ್ಮ ಹೆಸರು ಹಾಕಿಸಿ ನಿಮ್ಮ ಮನೇಗೇ ಕಳಿಸಿಕೊಡ್ತೀನಿ. ಸರೀನಾ? ಸ್ಟೇಜ್ ಮೇಲೆ ಕರೆದು ಕೊಡೋದು ಸಿಂಪ್ಲೀ ಔಟ್ ಆಫ್ ಕ್ವೆಶ್ಚನ್” ಎಂದುಬಿಟ್ಟರು. ಅವರು ಹೇಳಿದ್ದು ನನಗೇಕೋ ಸರಿಕಾಣಲಿಲ್ಲ! ಸ್ಮರಣಿಕೆಯನ್ನು ಪ್ರೇಕ್ಷಕರ—ಆಪ್ತರ ಸಮಕ್ಷಮದಲ್ಲಿ ಸ್ವೀಕರಿಸುವುದು ಒಂದು ಗೌರವದ—ಮೆಚ್ಚುಗೆಯ ಸಂಕೇತವಾಗಿಯೇ ಹೊರತು ಅದೇನೂ ದಾನವೋ ಭಿಕ್ಷೆಯೋ ಅಲ್ಲವಲ್ಲ!

‘ಪರವಾಗಿಲ್ಲ ಬಿಡಿ ಸರ್.. ಬೇರೆ ಕಂಠದಾನ ಕಲಾವಿದರು ನಿಮ್ಮ ಹತ್ರ ಮಾತಾಡೋದಕ್ಕೆ ವಿನಂತಿ ಮಾಡಿಕೊಂಡಿದ್ದರಿಂದ ಮಾತಾಡಿದೆ ಅಷ್ಟೇ..ಸ್ಟೇಜ್ ಮೇಲೆ ಸ್ಮರಣಿಕೆ ತೊಗೋಬೇಕು ಅನ್ನೊ ಹಂಬಲವಾಗಲೀ ಮಹದಾಸೆಯಾಗಲೀ ನನಗೂ ಇಲ್ಲ ಬಿಡಿ” ಎಂದು ನುಡಿದು ಡಬ್ಬಿಂಗ್ ಮುಂದುವರಿಸಲು ಹೊರಟುಹೋದೆ.

ಮರುದಿನ ಆಶ್ಚರ್ಯವೆನ್ನುವಂತೆ ಮ್ಯಾನೇಜರ್ ಅವರು ಸಮಾರಂಭದ ಆಹ್ವಾನ ಪತ್ರಿಕೆಯನ್ನು ಕೊಟ್ಟು ಖಂಡಿತ ಬರಬೇಕು ಎಂದು ಕೇಳಿಕೊಂಡರು. ಆ ಸಮಾರಂಭಕ್ಕೆ ಅನೇಕ ದೊಡ್ಡ ದೊಡ್ಡ ನಟರು ಅತಿಥಿಗಳಾಗಿ ಆಗಮಿಸುವವರಿದ್ದರು. ಅಂಥದೊಂದು ವರ್ಣರಂಜಿತ ಸಮಾರಂಭದಲ್ಲಿ ಪಾಲುಗೊಳ್ಳುವುದು ನನಗೂ ಹೊಸ ಅನುಭವವೇ ಆದುದರಿಂದ ತಪ್ಪಿಸಿಕೊಳ್ಳಲು ಮನಸ್ಸಾಗದೆ ಸಮಾರಂಭಕ್ಕೆ ಹೋದೆ. ನಿಜಕ್ಕೂ ಸಮಾರಂಭವನ್ನು ವೈಭವೋಪೇತವಾಗಿ ಆಯೋಜಿಸಿದ್ದರು. ತಮ್ಮ ನೆಚ್ಚಿನ ನಟ ನಟಿಯರನ್ನು ನೋಡಿ ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ನೆರೆದಿದ್ದರು. ಮ್ಯಾನೇಜರ್ ಅವರು ವ್ಯವಸ್ಥೆ ಮಾಡಿಕೊಟ್ಟ ಆಸನದಲ್ಲಿ ಕುಳಿತು ಸೊಗಸಾಗಿ ನಡೆದ ಸಮಾರಂಭವನ್ನು ಕಣ್ತುಂಬಿಕೊಂಡು ಇನ್ನೇನು ಹೊರಡಬೇಕು,ಅಷ್ಟರಲ್ಲಿ ಮ್ಯಾನೇಜರ್ ಅವರು ಬಳಿ ಬಂದು,” ಪ್ರಭುಗಳೇ, ಈಗ ಅಶೋಕ ಹೋಟಲ್ ನಲ್ಲಿ ಪಾರ್ಟಿ ಇದೆ..ಸೀದಾ ಅಲ್ಲಿಗೇ ಬಂದುಬಿಡಿ” ಎಂದು ಆಹ್ವಾನ ನೀಡಿದರು.

ಅಶೋಕ ಹೋಟಲ್ ನಲ್ಲಿ ಅಂದು ಇಡೀ ಕನ್ನಡ ಚಿತ್ರರಂಗವೇ ನೆರೆದಿತ್ತು ಎನ್ನಬೇಕು. ಬಹುತೇಕ ಅಪರಿಚಿತರೇ ಇದ್ದ ಆ ವಾತಾವರಣದಲ್ಲಿ ನನ್ನ ಮುಜುಗರವನ್ನು ಬಹುಮಟ್ಟಿಗೆ ತಪ್ಪಿಸಿದವರು ಸಿ.ಆರ್.ಸಿಂಹ, ಲೋಕೇಶ್, ಜೈಜಗದೀಶ್, ಪತ್ರಕರ್ತ ಗಣೇಶ್ ಕಾಸರಗೊಡು ಹಾಗೂ ಕೆಲ ಮಾಧ್ಯಮ ಮಿತ್ರರು. ಅಲ್ಲಿ ಎಲ್ಲರದೂ ಒಂದೇ ಪ್ರಶ್ನೆ: ‘ನಿಮಗೇಕೆ ಸ್ಮರಣಿಕೆ ನೀಡಲಿಲ್ಲ? ನಿಮ್ಮನ್ನು ಅದು ಹೇಗೆ ಮರೆತುಬಿಟ್ಟರು?’ “ಈ ಪ್ರಶ್ನೆಗೆ ಉತ್ತರ ಕೊಡಬೇಕಾದವರನ್ನುನೀವು ಕೇಳಬೇಕೆ ಹೊರತು ನನ್ನನ್ನು ಕೇಳಿ ಸುಖವಿಲ್ಲ” ಎಂದಷ್ಟೇ ಹೇಳಿ ನಾನು ಸುಮ್ಮನಾಗಿಬಿಟ್ಟೆ.

ಇಷ್ಟೇ ಆಗಿಬಿಟ್ಟಿದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತಿತ್ತು. ಎಡವಟ್ಟಾಗಿದ್ದೇ ಇಲ್ಲಿ!!

ಸಮಾರಂಭ ಮುಗಿದ ಒಂದೆರಡು ದಿನಗಳಲ್ಲಿ ಸುಮಾರು ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕಗಳಲ್ಲಿ ಆ ಕುರಿತ ವರದಿಗಳು ಪ್ರಕಟವಾದವು. ಒಂದೆರಡು ಪತ್ರಿಕೆಗಳಲ್ಲಿ ನನಗೆ ಸ್ಮರಣಿಕೆ ನೀಡದೇ ಹೋದ ಸಂಗತಿಯನ್ನು ಪ್ರಸ್ತಾಪಿಸಿದ್ದರೆ ಒಂದು ಸಿನೆಮಾ ಕುರಿತ ನಿಯತಕಾಲಿಕದಲ್ಲಂತೂ—ಬಹುಶಃ ಅರಗಿಣಿ ಇರಬೇಕು—ಮುಖಪುಟದಲ್ಲೇ ನನ್ನ ಭಾವಚಿತ್ರದ ಜೊತೆಗೇ ಒಂದು ಲೇಖನವನ್ನೇ ಪ್ರಕಟಿಸಿಬಿಟ್ಟಿದ್ದರು. ಅದರ ಶೀರ್ಷಿಕೆ: “ಯಾರೂ ಕ್ಯಾರೇ ಅನ್ನದ ಟಿ ವಿ ಪ್ರಭು ಕಂಠ”!!

“ಪ್ರತಿವಾರ ಪ್ರಿಯ ವೀಕ್ಷಕರ ಕಂತೆ ಕಂತೆ ಪತ್ರಗಳೊಂದಿಗೆ ಟಿವಿಯಲ್ಲಿ ಪ್ರತ್ಯಕ್ಷರಾಗುವ ಶ್ರೀನಿವಾಸ ಪ್ರಭು ಅವರು ಈಗ ರವಿಚಂದ್ರನ್ ಅವರ ಧ್ವನಿಯಾಗಿದ್ದಾರೆ; ಸೂಪರ್ ಹಿಟ್ ಚಿತ್ರ ಪ್ರೇಮಲೋಕದಲ್ಲಿಯೂ ಪ್ರಭು ಅವರೇ ರವಿಯವರಿಗೆ ಕಂಠದಾನ ಮಾಡಿರುವುದು ಹೌದಾದರೂ ಚಿತ್ರದ ಶತದಿನೋತ್ಸವದ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ಅವರನ್ನು ನೆನೆಯದೇ ಇದ್ದುದು, ಸ್ಮರಣಿಕೆಯನ್ನು ನೀಡದಿದ್ದುದು ಆಶ್ಚರ್ಯವೆನಿಸಿತು” ಎಂಬುದು ಒಟ್ಟು ಲೇಖನದ ಸಾರಾಂಶವಾಗಿತ್ತು!

ನಾನು ನಿರೀಕ್ಷಿಸಿದ್ದಂತೆಯೆ ಮರುದಿನವೇ ಮ್ಯಾನೇಜರ್ ಅವರು ಫೋನ್ ಮಾಡಿ ಗಾಂಧಿನಗರದ ಆಫೀಸ್ ಗೆ ಕರೆಸಿಕೊಂಡರು. ಅಂದು ನನ್ನೊಂದಿಗೆ ವೀರಾಸ್ವಾಮಿ ಅವರೇ ಮಾತಾಡಿದರು. ನಾನೇ ಪತ್ರಕರ್ತ ಮಿತ್ರರಿಗೆ ಹೇಳಿ ಆ ಲೇಖನವನ್ನು ಬರೆಸಿರಬಹುದೆಂಬ ಗುಮಾನಿ ಅವರುಗಳಿಗೆ ಬಂದಿರಲಿಕ್ಕೂ ಸಾಕು. ವೀರಾಸ್ವಾಮಿಗಳು ಮಾತ್ರ ತುಂಬಾ ತಾಳ್ಮೆಯಿಂದ ಮಾತಾಡಿದ್ದಷ್ಟೇ ಅಲ್ಲ, ನನ್ನ ಮಾತುಗಳನ್ನೂ ಕೇಳಿಸಿಕೊಂಡರು. ನಾನು ಹೆಚ್ಚಿನ ಚರ್ಚೆ—ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ನನ್ನ ಮನಸ್ಸಿನ ಮಾತುಗಳನ್ನೆಲ್ಲಾ ಅವರ ಮುಂದೆ ಹೇಳಿಕೊಂಡುಬಿಟ್ಟೆ. ಅವನ್ನು ಕ್ರೋಢೀಕರಿಸಿ ಹೇಳುವುದಾದರೆ:
“ನಾನು ನನ್ನದೇ ಕಾರಣಗಳಿಗಾಗಿ ಯಾವುದೇ ಪ್ರಚಾರದಿಂದ ದೂರ ಉಳಿಯುವ ಮನುಷ್ಯ. ನಾನು ಯಾರಿಗಾದರೂ ಹೇಳಿ ಬರೆಯಿಸುವುದಿರಲಿ, ಹೀಗೆ ಬರೆಯುತ್ತಿದ್ದಾರೆಂದು ತಿಳಿದಿದ್ದರೆ ನಾನೇ ಅವರನ್ನು ತಡೆಯುತ್ತಿದ್ದೆ! ಎರಡನೆಯ ಮುಖ್ಯ ಅಂಶ—ನಾನು ಜೀವನೋಪಾಯಕ್ಕಾಗಿ ಡಬ್ಬಿಂಗ್ ಆರಿಸಿಕೊಂಡವನಲ್ಲ. ದೂರದರ್ಶನದಲ್ಲಿ ದೊಡ್ಡ ಹುದ್ದೆಯಲ್ಲಿರುವ ನನಗೆ ನನ್ನದೇ ಜವಾಬ್ದಾರಿಗಳಿವೆ.

ಮೂರನೆಯದಾಗಿ ನಾನೂ ಒಬ್ಬ ಕಲಾವಿದನೇ ಆದ್ದರಿಂದ ಇನ್ನೊಬ್ಬ ನಟನ ನೆರಳಾಗಿ ಉಳಿಯುವುದು ಅಷ್ಟೇನೂ ಹಿತದ ಸಂಗತಿಯಲ್ಲ ನನಗೆ. ಹಾಗಾಗಿ ನಾನು ಮುಖ್ಯವಾಗಿ ಡಬ್ಬಿಂಗ್ ಮಾಡುತ್ತಿರುವುದೇ ನಾಲ್ಕು ಕಾಸು ಹೆಚ್ಚಿನ ಸಂಪಾದನೆಗಾಗಿ. ಆದರೆ ಡಬ್ಬಿಂಗ್ ಕಲಾವಿದರ ಸಂಭಾವನೆ ನಮ್ಮ ಚಿತ್ರರಂಗದಲ್ಲಂತೂ ತೀರಾ ದಯನೀಯವೆನ್ನಿಸುವಷ್ಟು ಅಲ್ಪ ಪ್ರಮಾಣದ್ದು. ಹಾಗಾಗಿ ಈ ಕೆಲಸವನ್ನು ಮುಂದುವರಿಸುವುದರ ಬಗ್ಗೆಯೂ ನನಗೆ ವಿಶೇಷ ಆಸಕ್ತಿಯೂ ಇಲ್ಲ; ಅಷ್ಟೆಲ್ಲಾ ಸಮಯವೂ ಇಲ್ಲ. ನಾನು ಈಗ ನಿರೀಕ್ಷಿಸುತ್ತಿರುವುದೇ ಬಿಡುಗಡೆ.”

ವೀರಾಸ್ವಾಮಿಗಳು ನಿಜಕ್ಕೂ ದೊಡ್ಡವರು; ಸಮಾಧಾನದಿಂದಲೇ ಹೀಗೆ ಉತ್ತರಿಸಿದರು: “ಈಗ ಸಧ್ಯಕ್ಕೆ ಬಿಡುಗಡೆಯ ಮಾತು ಬೇಡ.ಬಹಳ ಕಷ್ಟಪಟ್ಟು ಹುಡುಕಿದ ಮೇಲೆ ನೀವು ಸಿಕ್ಕಿದೀರಿ..ನಿಮ್ಮ ಧ್ವನಿ ರವಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗ್ತಿದೆ..ಮತ್ತೆ ಇನ್ನೊಬ್ಬರನ್ನ ಹುಡುಕೋದು ರೇಜಿಗೆ ಕೆಲಸ..ನಾವೂ ನಿಮ್ಮನ್ನ ಗಮನಿಸ್ಕೋತೀವಿ..ನೀವೂ ಸ್ವಲ್ಪ ಅನುಸರಿಸಿಕೊಂಡು ಹೋಗಿ. ಮುಂದಿನ ಚಿತ್ರದಿಂದ ನಿಮಗೆ 5000ರೂಪಾಯಿ ಸಂಭಾವನೆ ಕೊಡೋದಕ್ಕೆ ಹೇಳ್ತೀನಿ. ಸರೀನಾ?”.

ದೊಡ್ಡವರು ಅಷ್ಟು ಹೇಳಿದ ಮೇಲೆ ಎದುರಾಡಲು ಮನಸ್ಸಾಗಲಿಲ್ಲ. ಅವರಿಗೆ ನಮಸ್ಕರಿಸಿ ಹೊರಟು ಬಂದೆ.

ವಿಶೇಷ ಮಾಹಿತಿ:
ನಾನು ಸುಮಾರು ಇಪ್ಪತ್ತು ಚಿತ್ರಗಳಲ್ಲಿ ರವಿಯವರಿಗೆ ಕಂಠದಾನ ಮಾಡಿದ್ದೇನೆ. ಕೊನೆಯ ಚಿತ್ರಕ್ಕೂ ನನಗೆ ಬಂದ ಸಂಭಾವನೆ 5000 ರೂಗಳು ಮಾತ್ರ!

ಹಾಂ..ಮತ್ತೂ ಒಂದು ವಿಷಯ: ಅದೇ ಮೊದಲು ನಾನು ಗಾಂಧಿನಗರಕ್ಕೆ ಸಿನೆಮಾ ಸಂಬಂಧಿ ಮಾತುಕತೆಗಾಗಿ ಹೋಗಿದ್ದು; ಅದೇ ನನ್ನ ಆ ಸಂಬಂಧದ ಕೊನೆಯ ಭೇಟಿ ಕೂಡಾ!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: