ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ
ಅಂಕಣ 122
—————
ಅನಂತರದ ದಿನಗಳಲ್ಲಿ ನಾನು ನಿರೂಪಣೆ ಮಾಡಿದ- ಹಿನ್ನೆಲೆ ಧ್ವನಿ ನೀಡಿದ ಕಾರ್ಯಕ್ರಮಗಳು ಎಣಿಕೆಗೆ ಸಿಗದಷ್ಟು. ಪ್ರಸಿದ್ಧ ವನ್ಯ ಛಾಯಾಚಿತ್ರಗ್ರಾಹಕರಾದ ಕೃಪಾಕರ- ಸೇನಾನಿ ಅವರ ಒಂದೆರಡು ಅಪರೂಪದ ಸಾಕ್ಷ್ಯಚಿತ್ರಗಳಿಗೆ ಹಿನ್ನೆಲೆ ಧ್ವನಿಯನ್ನು ನೀಡಿದ್ದು, ಪ್ರಸಿದ್ಧ ಕವಯಿತ್ರಿ- ಸಾಹಿತಿ ಎಂ.ಆರ್.ಕಮಲ ಅವರ ‘ಭಾವವೀಣೆ’ ಧ್ವನಿಸಾಂದ್ರಿಕೆಯ ಲೋಕಾರ್ಪಣೆ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟದ್ದು ನೆನಪಿನಲ್ಲಿನ್ನೂ ಹಸಿರಾಗಿದೆ.
‘ಭಾವವೀಣೆ’ ಧ್ವನಿಸಾಂದ್ರಿಕೆಯಲ್ಲಿರುವ ಎಂಟು ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದವರು ಸಿ.ಅಶ್ವಥ್. ಈ ಧ್ವನಿ ಸಾಂದ್ರಿಕೆಯ ‘ಅಮ್ಮಾ ಹಚ್ಚಿದೊಂದು ಹಣತೆ’ ಗೀತೆ ಇಂದಿಗೂ ಅತಿ ಜನಪ್ರಿಯ. ಮತ್ತೊಂದು ಮುಖ್ಯವಾದ ಧ್ವನಿ ಸಾಂದ್ರಿಕೆಯನ್ನು ಕುರಿತು ನಾನು ಮಾತನಾಡುವ ಪ್ರಸಂಗ ಅಚಾನಕ್ಕಾಗಿ ಒದಗಿಬಂತು. ಹಲವು ಕಾರಣಗಳಿಗೆ ಈ ಸಂದರ್ಭ ನನ್ನ ನೆನಪಿನಲ್ಲಿ ಹಸಿರಾಗಿದೆ. ಸಿ.ಅಶ್ವಥ್ ಅವರು , ಕನ್ನಡ ಕಾವ್ಯಕ್ಷೇತ್ರದ ಅಶ್ವಿನಿ ದೇವತೆಗಳೆಂದೇ ಹೆಸರಾದ ಡಾ॥ಹೆಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಬಿ.ಆರ್. ಲಕ್ಷ್ಮಣರಾವ್ ಅವರ ಹಲವಾರು ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ಎಲ್ಲ ಹಾಡುಗಳನ್ನೂ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿ ‘ಜೀವಸಖಿ’ ಎಂಬ ಧ್ವನಿಸಾಂದ್ರಿಕೆಯನ್ನು ಸಿದ್ಧಪಡಿಸಿದ್ದರು. ಕಲಾಕ್ಷೇತ್ರದಲ್ಲಿ ಇದರ ಬಿಡುಗಡೆ ಸಮಾರಂಭವೂ ಅದ್ದೂರಿಯಾಗಿ ಆಯೋಜನೆಗೊಂಡಿತ್ತು. ಸಿ ಡಿ ಯಲ್ಲಿರುವ ಹಾಡುಗಳ ಬಗ್ಗೆ ಪ್ರಸಿದ್ಧ ಪತ್ರಕರ್ತ- ಸಾಹಿತಿ ರವಿ ಬೆಳಗೆರೆಯವರು ಮಾತನಾಡುವವರಿದ್ದರು. ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ಬಂದಿತ್ತು. ಇಂಥದೊಂದು ಸುಂದರ ಸಮಾರಂಭಕ್ಕೆ ಹೋಗದಿರುವುದುಂಟೇ? ಎಸ್ ಪಿ ಅವರ ಗಾಯನದ ವಿಶೇಷ ಆಕರ್ಷಣೆ ಬೇರೆ! ಮೊದಲೇ ಶೂಟಿಂಗ್ ಇತ್ಯಾದಿ ಎಲ್ಲ ಕಾರ್ಯಕ್ರಮಗಳನ್ನೂ ಹೊಂದಿಸಿಕೊಂಡು ಅಂದಿನ ಸಂಜೆಯನ್ನು ಬಿಡುವಾಗಿರಿಸಿಕೊಂಡಿದ್ದೆ.
ನಾಡಿದ್ದು ಸಮಾರಂಭ. ಇಂದು ರಾತ್ರಿ ಸುಮಾರು ಎಂಟು ಗಂಟೆಗೆ ಅಶ್ವಥ್ ಅವರ ಫೋನ್! ” ರೀ.. ಒಂದು ಪ್ರಾಬ್ಲಮ್ ಆಗಿಬಿಟ್ಟಿದೆ ಕಣ್ರೀ ಶ್ರೀನಿವಾಸ ಪ್ರಭು… ಈಗ ನೀವೇ ನನಗೆ ಸಹಾಯ ಮಾಡಬೇಕು” ಎಂದು ಎತ್ತರದ ದನಿಯಲ್ಲಿಯೇ ಮಾತು ಶುರು ಮಾಡಿದರು ಅಶ್ವಥ್. “ಹೇಳಿ ಸರ್ ನನ್ನಿಂದೇನಾಗಬೇಕು?” ಎಂದೆ ನಾನು. “ನಾಡಿದ್ದು ‘ಜೀವಸಖಿ’ ಬಿಡುಗಡೆ ಸಮಾರಂಭದಲ್ಲಿ ಸಿ ಡಿ ಬಗ್ಗೆ ರವಿ ಬೆಳಗೆರೆ ಮಾತಾಡಬೇಕಿತ್ತಲ್ಲಾ… ಅವನಿಗೆ ಸಿಕ್ಕಾಪಟ್ಟೆ ಹುಷಾರಿಲ್ಲವಂತೆ.. ಮಲಗಿ ಬಿಟ್ಟಿದಾನಂತೆ. ಹೆಚ್ ಎಸ್ ವಿ , ಲಕ್ಷ್ಮಣ ರಾವ್ ನಿಮ್ಮ ಹೆಸರನ್ನ ಸಜೆಸ್ಟ್ ಮಾಡಿದ್ರು.. ನಾಡಿದ್ದು ಸಿ ಡಿ ಬಗ್ಗೆ ನೀವು ಮಾತಾಡಬೇಕು.. ಸಾಹಿತ್ಯ- ಸಂಗೀತ ಎರಡರ ಬಗ್ಗೇನೂ ಮಾತಾಡಬೇಕು.. ಅಡ್ರೆಸ್ ಮೆಸೇಜ್ ಮಾಡಿ… ಈಗಲೇ ಸಿ ಡಿ ಕಳಿಸ್ತೀನಿ… ಅದ್ಭುತವಾಗಿ ಬಂದುಬಿಟ್ಟಿದೆ ಕಣ್ರೀ.. ಎಸ್ ಪಿ ಅಂತೂ ಅಬ್ಬಬ್ಬಬ್ಬಬ್ಬಬ್ಬಬ್ಬಬ್ಬಾ… ಸಾಧ್ಯಾನೇ ಇಲ್ಲ… ನೀವೇ ಕೇಳ್ತೀರಲ್ಲಾ.. ಗೊತ್ತಾಗುತ್ತೆ.. ಏನಾದ್ರೂ ಶೂಟಿಂಗು ಮೀಟಿಂಗು ಇದ್ರೆ ಕ್ಯಾನ್ಸಲ್ ಮಾಡಿಕೊಂಡುಬಿಡಿ..ಆಯ್ತಾ? ಅಡ್ರೆಸ್ ಕಳಿಸಿ..” ಎಂದು ಇನ್ನಷ್ಟು ಏನೇನೋ ಹೇಳಿ ನನ್ನ ಉತ್ತರಕ್ಕೂ ಕಾಯದೇ ಫೋನ್ ಇಟ್ಟೇಬಿಟ್ಟರು!
ಒಂದು ಕ್ಷಣ ಏನೂ ತೋಚದೆ ಹಾಗೇ ಕೂತಿದ್ದು ಅಶ್ವಥ್ ರ ವೇಗಾತಿವೇಗದ ಮಾತಿನ ‘ಹೊಡೆತ’ವನ್ನು ಅರಗಿಸಿಕೊಳ್ಳಲು ಯತ್ನಿಸಿದೆ. ರಂಜನಿಯೊಂದಿಗೂ ಈ ವಿಚಾರ ಚರ್ಚಿಸಿದೆ. ಅವಳಂತೂ ಬಲು ಖುಷಿಯಿಂದ, ‘ಎಂಥ ಒಳ್ಳೇ ಸಂಗತಿ ಇದು! ಕಣ್ಣುಮುಚ್ಚಿಕೊಡು ಒಪ್ಪಿಕೊಳ್ಳಿ’ ಅಂದಳು. ಅಸಲಿಗೆ ಅವರು ಒಪ್ಪಿಗೆ ಕೇಳಿದ್ದರಲ್ಲವೇ ನಾನು ಒಪ್ಪುವ-ಬಿಡುವ ಪ್ರಶ್ನೆ! ‘ನಾಡಿದ್ದೇ ಕಾರ್ಯಕಮ ರಂಜು.. ಅಷ್ಟರೊಳಗೆ ಎಲ್ಲಾ ಹಾಡುಗಳನ್ನೂ ಹತ್ತಾರು ಸಲ ಕೇಳಿ ಅವುಗಳ ಬಗ್ಗೆ ಟಿಪ್ಪಣಿ ಸಿದ್ಧಪಡಿಸಿಕೊಳ್ಳೋದಕ್ಕಾಗುತ್ತಾ? ತುಂಬಾ ಕಮ್ಮಿ ಸಮಯ ಅಲ್ವಾ ಇರೋದು?” ಎಂದು ನಾನು ಅನುಮಾನಿಸಿದರೆ, “ನಿಮ್ಮೊಬ್ಬರಿಗಾದರೆ ಕಮ್ಮಿ ಸಮಯ. ನಾನೂ ಜೊತೆಗಿದೀನಲ್ಲಾ! ನಾನೂ ಸಹಾಯ ಮಾಡ್ತೀನಿ..ಇಬ್ಬರೂ ಕೂತು ಬರೆಯೋಣ.. ಏನೂ ಚಿಂತೆ ಮಾಡಬೇಡಿ” ಎಂದು ರಂಜನಿ ಭರವಸೆ ನೀಡಿದ ಮೇಲೆ ಎಷ್ಟೋ ಸಮಾಧಾನವಾಯಿತು.
ತುಸುಹೊತ್ತಿನಲ್ಲೇ ಸಿ ಡಿ ಯೂ ನಮ್ಮ ಕೈ ಸೇರಿಬಿಟ್ಟಿತು. ಒಂದು ತಪಸ್ಸಿನ ಹಾಗೆ ಇಬ್ಬರೂ ಕೂತು ಹಾಡುಗಳನ್ನೆಲ್ಲಾ ಕೇಳಿ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡೆವು. ಹೆಚ್ ಎಸ್ ವಿ ಹಾಗೂ ಬಿ ಆರ್ ಎಲ್ ಅವರ ಹತ್ತು ಸುಂದರ ಭಾವಗೀತೆಗಳಿಗೆ ಅಶ್ವಥ್ ಅವರು ಮಾಡಿದ್ದ ಸ್ವರ ಸಂಯೋಜನೆಯಲ್ಲಿ ಅವರ ಮಾಂತ್ರಿಕ ಸ್ಪರ್ಶ ಹೊಡೆದುಕಾಣುತ್ತಿತ್ತು. ಎಸ್ ಪಿ ಬಿ ಅವರ ಭಾವಪೂರ್ಣ ಗಾಯನವಂತೂ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವಂತಿದ್ದವು.
ಕಾರ್ಯಕ್ರಮದ ದಿನ ಸಂಜೆ ನಾನೂ ರಂಜನಿಯೂ ಕಲಾಕ್ಷೇತ್ರಕ್ಕೆ ಹೋದೆವು. ಧ್ವನಿವರ್ಧಕ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದ ಅಶ್ವಥ್ ಅವರು ನನ್ನನ್ನು ನೋಡಿ, “ಅಬ್ಬಾ.. ಬಂದ್ರೇನ್ರೀ! ಆಮೇಲೆ ಎಸ್ ಪಿ ಅವರು ಸುಮಾರು ಹಾಡುಗಳನ್ನ ಹೇಳ್ತಿದಾರೆ.. ಅದಕ್ಕೇ ಅವರಿಗೆ ಟೈಂ ಜಾಸ್ತಿ ಕೊಡಬೇಕು… ನೀವು ತುಂಬಾ ಹೊತ್ತು ಕುಯ್ತಾ ನಿಂತುಬಿಡಬೇಡಿ.. ಸ್ವಲ್ಪ ಚುಟುಕಾಗಿ ಎಲ್ಲ ಹಾಡುಗಳನ್ನೂ ಪರಿಚಯ ಮಾಡಿಕೊಟ್ಟುಬಿಟ್ರೆ ಸಾಕು ಕಣ್ರೀ… ಆಯ್ತಾ?” ಎಂದು ತುಸು ಗದರುವ ದನಿಯಲ್ಲೇ ಹೇಳಿದಾಗ ಪೆಚ್ಚೆನಿಸಿತಾದರೂ ಅವರ ಸ್ವಭಾವದ ಪರಿಚಯವಿದ್ದ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಕಾರ್ಯಕ್ರಮ ಆರಂಭವಾಯಿತು. ರಂಜನಿ ಸಭಾಂಗಣದಲ್ಲಿ ಕೂತಿದ್ದಳು. ನಾನು ಸೈಡ್ ವಿಂಗ್ ನಲ್ಲಿಯೇ ನಿಂತಿದ್ದೆ. ಕಲಾಕ್ಷೇತ್ರ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮದ ನಿರೂಪಕರು ಎಲ್ಲಾ ಗಣ್ಯರನ್ನೂ ವೇದಿಕೆಗೆ ಆಹ್ವಾನಿಸಿದರು. ಹೆಚ್ಚು ಸಂಖ್ಯೆಯಲ್ಲಿಯೇ ಗಣ್ಯರನ್ನು ಆಹ್ವಾನಿಸಿದ್ದರಿಂದ ವೇದಿಕೆ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ಆಸನಗಳಿಂದ ತುಂಬಿಹೋಗಿತ್ತು. ವಿಶೇಷ ಆಹ್ವಾನಿತರೆಲ್ಲಾ ಬಂದು ಆಸೀನರಾದರು. ಕೊನೆಯಲ್ಲಿ ನಿರೂಪಕರು “ಧ್ವನಿಸಾಂದ್ರಿಕೆಯ ಪರಿಚಯವನ್ನು ಪ್ರಸಿದ್ಧ ನಟ ಶ್ರೀನಿವಾಸ ಪ್ರಭು ಅವರು ಮಾಡಿಕೊಡುವವರಿದ್ದಾರೆ.. ಅವರಿಗೆ ಪ್ರೀತಿಯ ಆಹ್ವಾನ” ಎಂದಾಗ ನಾನು ವೇದಿಕೆಗೆ ಹೋಗಿ ಸಹೃದಯ ಪ್ರೇಕ್ಷಕರಿಗೆ ನಮಸ್ಕರಿಸಿ ಕೂರಲು ನೊಡುತ್ತೇನೆ- ಒಂದೇ ಒಂದು ಆಸನವೂ ತೆರವಿಲ್ಲ! ಕೆಲ ಕ್ಷಣಗಳು ಹಾಗೇ ನಿಂತಿದ್ದರೂ ಆಯೋಜಕರಾರೂ ಒಂದು ಆಸನದ ವ್ಯವಸ್ಥೆ ಮಾಡುವ ಸೌಜನ್ಯ ತೋರಲಿಲ್ಲ. ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸುವಾಗ ಸಣ್ಣ ಪುಟ್ಟ ಎಡರು ತೊಡರುಗಳು ಎದುರಾಗುವುದು ಸಹಜವೇ; ಅರ್ಥವಾಗುತ್ತದೆ. ಆದರೆ ಮೊದಲು ನಿಗದಿಯಾಗಿದ್ದಂತೆ ರವಿ ಬೆಳಗೆರೆಯವರೇ ಬಂದಿದ್ದರೆ ಆಯೋಜಕರ ವರ್ತನೆ ಹೀಗೇ ಇರುತ್ತಿತ್ತೇ? ಸಮಾರಂಭದಲ್ಲಿ ಒಂದು ಮುಖ್ಯ ಜವಾಬ್ದಾರಿಯನ್ನು ಹೊತ್ತಿರುವ ಒಬ್ಬ ಕಲಾವಿದನಿಗೆ ಆಸನ ನೀಡುವ ಕನಿಷ್ಠ ಗೌರವವನ್ನಾದರೂ ತೋರಬೇಡವೇ? ಇಂತಹ ಧೋರಣೆಗಳೆಂದರೆ ನನಗೆ ಮೊದಲಿನಿಂದಲೂ ಆಗಿಬರದು. ಮನಸ್ಸಿಗೆ ತುಂಬಾ ಕಸಿವಿಸಿಯಾಗಿಹೋಯಿತು. ಮತ್ತೆರಡು ಕ್ಷಣ ನೋಡಿ ಹಾಗೇ ಮೆಲ್ಲಗೆ ಸೈಡ್ ವಿಂಗ್ ಗೆ ಜಾರಿಕೊಂಡುಬಿಟ್ಟೆ.
ಸಣ್ಣಪುಟ್ಟ ವಿಚಾರಗಳೇ ಆದರೂ ಸೂಕ್ಷ್ಮ ಪ್ರಕೃತಿಯವನಾದ್ದರಿಂದ ತುಂಬಾ ಬಾಧಿಸಿಬಿಡುತ್ತಿದ್ದವು. ಬೇರೆಲ್ಲಿಯಾದರೂ ಇಂತಹ ಪ್ರಸಂಗ ಎದುರಾಗಿದ್ದರೆ ಖಂಡಿತ ಅರೆಚಣವೂ ಅಲ್ಲಿ ನಿಲ್ಲುತ್ತಿರಲಿಲ್ಲ. ಪ್ರೀತಿಯ ಕವಿಗಳ ಕಾರ್ಯಕ್ರಮ.. ಬಿಟ್ಟುಹೋಗುವುದು ಹೇಗೆ? ನನಗೆ ನಾನೇ ಸಮಾಧಾನ ಹೇಳಿಕೊಂಡು ಸೈಡ್ ವಿಂಗ್ ನಲ್ಲಿಯೇ ನಿಂತಿದ್ದೆ. ಸಿ ಡಿ ಬಿಡುಗಡೆ ಇತ್ಯಾದಿ ಸಂಭ್ರಮಗಳು ವೇದಿಕೆಯ ಮೇಲೆ ನೆರವೇರಿದವು. ನಂತರ ನಿರೂಪಕರು ಸಿ ಡಿ ಬಗ್ಗೆ ಮಾತಾಡಲು ನನ್ನನ್ನು ವೇದಿಕೆಗೆ ಆಹ್ವಾನಿಸಿದರು. ಸಣ್ಣ ಅಸಮಾಧಾನ- ದುಗುಡಗಳು ಕಾಡುತ್ತಿದ್ದರೂ ಸಾವಧಾನವಾಗಿ ಮಾತು ಆರಂಭಿಸಿದೆ: “ಪ್ರಿಯ ವೀಕ್ಷಕರೇ, ಜಾಸ್ತಿ ಕುಯ್ಯಬೇಡಿ ಅಂತ ಅಶ್ವಥ್ ಅವರು ತಾಕೀತು ಮಾಡಿ ಕಳಿಸಿದಾರೆ.. ಇಷ್ಟು ಒಳ್ಳೆಯ ಸಿ ಡಿ ಲೋಕಾರ್ಪಣೆ ಆಗ್ತಿರೋವಾಗ ಅದಕ್ಕೆ ನ್ಯಾಯ ಒದಗಿಸೋದಕ್ಕಾದರೂ ನಾನು ಸ್ವಲ್ಪ ಮಾತಾಡಲೇಬೇಕಾಗುತ್ತೆ. ಖಂಡಿತಾ ಕುಯ್ಯೋಲ್ಲ.. ಆದರೆ ಸಮಯ ತುಸು ಜಾಸ್ತಿ ತೆಗೆದುಕೊಂಡರೆ ಬೇಸರಿಸದೆ ಸಹಕರಿಸಿ” ಎಂದು ನಾನು ಹೇಳುತ್ತಿದ್ದಂತೆ ಪ್ರೇಕ್ಷಾಗೃಹದಿಂದ ಮಾತೊಂದು ತೇಲಿಬಂತು: “ನೀವು ಮಾತಾಡಿ ಶ್ರೀನಿವಾಸ ಪ್ರಭು.. ಕೇಳೋಕೆ ನಾವು ಸಿದ್ಧವಾಗಿದೀವಿ”. ಹಾಗೆಂದವರು ಯಾರೆಂದು ನೋಡಿದರೆ ಮುಂದಿನ ಸಾಲಿನಲ್ಲಿಯೇ ಕುಳಿತಿದ್ದ ಪ್ರಣಯರಾಜ ಶ್ರೀನಾಥ್ ಕಣ್ಣಿಗೆ ಬಿದ್ದರು! ಅವರಿಗೆ ನಮಸ್ಕರಿಸಿ ಮಾತು ಮುಂದುವರಿಸಿದೆ.
ಎಲ್ಲ ಕವಿತೆಗಳ ಸಾಹಿತ್ಯಿಕ ವಿಶ್ಲೇಷಣೆ- ಕವಿತೆಯ ಭಾವವನ್ನು ಅತ್ಯಂತ ಸಮರ್ಥವಾಗಿ ಹೊಮ್ಮಿಸುವಂತಹ ಅರ್ಥಪೂರ್ಣ ಸ್ವರ ಸಂಯೋಜನೆ-ಕವಿತೆಯ ಅಂತರ್ಗತ ಭಾವಕೋಶದ ಪ್ರತಿ ಸೂಕ್ಷ್ಮ ತಂತುವನ್ನೂ ಅದ್ಭುತವಾಗಿ ತೆರೆದಿಟ್ಟಿದ್ದ ಎಸ್ ಪಿ ಬಿ ಅವರ ಗಂಧರ್ವ ಗಾಯನ… ಹೀಗೆ ಮೂರೂ ಮಗ್ಗುಲುಗಳಿಂದ ವಿಶ್ಲೇಷಣೆ ಮಾಡಿದ್ದು ಸಹೃದಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮಾತು ಮುಗಿಸುವ ವೇಳೆಯಲ್ಲಿ ಥಟ್ಟನೆ ನೆನಪಾಯಿತು: ಲೇಖನವನ್ನು ಸಿದ್ಧ ಪಡಿಸುವಲ್ಲಿ ರಂಜನಿಯದೂ ಸಮಪಾಲು ಶ್ರಮವಿದೆ.. ಅವಳ ಕೊಡುಗೆಯನ್ನು ಸ್ಮರಿಸದಿದ್ದರೆ ಅಪಚಾರವಾಗುತ್ತದೆ ಎನ್ನಿಸಿತು. ” ಜೀವಸಖಿ ಧ್ವನಿ ಸಾಂದ್ರಿಕೆಯನ್ನು ಕುರಿತ ಈ ಲೇಖನವನ್ನು ನನಗೆ ದೊರೆತ ಅಲ್ಪ ಸಮಯದಲ್ಲಿ ಸಿದ್ಧಪಡಿಸುವಲ್ಲಿ ನನ್ನ ಜೀವಸಖಿ ರಂಜನಿ ವಿಶೇಷವಾಗಿ ನೆರವಾಗಿದ್ದಾಳೆ.. ಈ ಸಂದರ್ಭದಲ್ಲಿ ಅವಳ ಕೊಡುಗೆಯನ್ನು ನೆನೆಯುವುದು ನನ್ನ ಕರ್ತವ್ಯ” ಎಂದಾಗ ಸಹೃದಯರಿಂದ ಪ್ರಚಂಡ ಕರತಾಡನ.. ರಂಜನಿಯ ಕಣ್ಣಲ್ಲಿ ಸಂತಸದ ಬೆಳಕು.
ಇನ್ನೇನು ನಾನು ವೇದಿಕೆಯಿಂದ ಕೆಳಗಿಳಿಯಬೇಕು, ಪ್ರಣಯರಾಜ ಶ್ರೀನಾಥ್ ಅವರು ಸುಮ್ಮನಿರಬೇಕಲ್ಲಾ! ” ಅದು ಹ್ಯಾಗೆ ಕೆಳಗಿಳಿದುಬಿಡ್ತೀರಿ ಶ್ರೀನಿವಾಸ ಪ್ರಭು? ನಿಮ್ಮ ಜೀವಸಖಿಯ ಕೊಡುಗೆ ಇದೆ ಅಂದಮೇಲೆ ಅವರನ್ನೂ ವೇದಿಕೆಗೆ ಕರೀಬೇಕು ತಾನೇ? ಕರೀರಿ.. ರಂಜನಿ ಅವರನ್ನ ವೇದಿಕೆಗೆ ಕರೆದು ಪರಿಚಯ ಮಾಡಿಕೊಡಿ” ಎಂದು ಪ್ರೀತಿಯಿಂದ ಅಪ್ಪಣೆ ಮಾಡಿಯೇಬಿಟ್ಟರು! ಸಂಕೋಚದಿಂದಲೇ ವೇದಿಕೆಗೆ ಬಂದ ರಂಜನಿಯನ್ನು ಸಹೃದಯರಿಗೆ ಪರಿಚಯ ಮಾಡಿಕೊಟ್ಟೆ. ಅಲ್ಲಿಗೂ ಸುಮ್ಮನಾಗಲಿಲ್ಲ ಶ್ರೀನಾಥ್ ಅವರು! ಹಾರವೊಂದನ್ನು ತರಿಸಿ ನನ್ನ ಕೈಯಿಂದ ರಂಜನಿಗೆ ಹಾಕಿಸಿ ಎಲ್ಲರಿಂದ ಚಪ್ಪಾಳೆ ಹೊಡೆಯಿಸಿ ನಂತರವೇ ನಮ್ಮನ್ನು ಕೆಳಗಿಳಿಯಲು ಅವಕಾಶ ಮಾಡಿಕೊಟ್ಟರು!
ನಾವಿಬ್ಬರೂ ಸಿದ್ಧಪಡಿಸಿ ನಾನು ಮಂಡಿಸಿದ ಆ ಲೇಖನ ಅಶ್ವಥ್ ಅವರಿಗೂ, ಎಸ್ ಪಿ ಬಿ ಅವರಿಗೂ ಸಹಾ ಬಹಳ ಇಷ್ಟವಾಗಿ ಅವರ ಮೆಚ್ಚುಗೆಯ ಮಾತುಗಳು ಆರಂಭದ ನನ್ನ ಇರುಸು ಮುರುಸನ್ನು ದೂರ ತಳ್ಳುವಲ್ಲಿ ಯಶಸ್ವಿಯಾದವು! ಅಶ್ವಥ್ ಅವರಂತೂ ಕಾರ್ಯಕ್ರಮ ಮುಗಿದಮೇಲೆ ನನ್ನನ್ನು ತಬ್ಬಿಕೊಂಡು, “ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಛೆನ್ನಾಗಿ ಎಲ್ಲಿ ವಿಷಯಾನೂ ಕವರ್ ಮಾಡಿ ಹೇಳಿದ್ರೀ ನೀವು! ಸಾಧ್ಯಾನೇ ಇಲ್ಲ! ಅಬ್ಬಬ್ಬಬ್ಬಬ್ಬಾ..” ಎನ್ನುತ್ತಾ ಭರ್ಜರಿ ಹಣ್ಣಿನ ಬುಟ್ಟಿಯೊಂದನ್ನು ಕೈಗಿಟ್ಟು ,” ಸ್ಟೇಜ್ ಮೇಲೆ ಕೊಡ್ಲಿಲ್ಲ ನಿಮಗೆ.. ಏನೇನೋ ಕನ್ ಫ್ಯೂಷನ್ನು.. ಯಾರಿಗೋ ಏನೋ ಹೇಳ್ತೀವಿ.. ಅವರು ಅದನ್ನ ಮಾಡೋಲ್ಲ.. ಗಬ್ಬೆಬ್ಬಿಸಿಬಿಡ್ತಾರೆ.. ತೊಗೊಳ್ಳಿ.. ಈ ಬುಟ್ಟಿಗೇ ನಾನೂರು ರೂಪಾಯಿ ಕಣ್ರೀ! ಅದೂ ಹೋಲ್ ಸೇಲ್ ರೇಟು.. ಹಣ್ಣುಗಳು ಪ್ರತಿಯೊಂದೂ ನಂದೇ ಸೆಲೆಕ್ಷನ್ನು.. ಟೂ ಹಂಡ್ರೆಂಡ್ ಇಯರ್ಸ್ ಅಲ್ಲಿ ಯಾರೂ ಇಂಥ ಫ್ರೂಟ್ ಬೌಲ್ ರೆಡಿ ಮಾಡಿರೋಲ್ಲ.. ಮನೇಗೆ ಹೋಗಿ ನೋಡಿ ಗೊತ್ತಾಗುತ್ತೆ” ಎಂದು ಮತ್ತೊಮ್ಮೆ ತಬ್ಬಿ ನಮ್ಮಿಬ್ಬರನ್ನೂ ಬೀಳ್ಕೊಟ್ಟಾಗ ಕಹಿಯೆಲ್ಲಾ ಮರೆತುಹೋಗಿತ್ತು… ಮನಸ್ಸು ತುಂಬಿ ಬಂದಿತ್ತುˌರಂಜನಿಯಂತೂ ಪರಮ ಸಂತಸದಿಂದ ಬೀಗುತ್ತಾ ಎಲ್ಲರ ಅಭಿನಂದನೆಗಳನ್ನೂ ಸ್ವೀಕರಿಸುವುದರಲ್ಲಿ ಮುಳುಗಿಹೋಗಿದ್ದಳು.
ಕವಿದ್ವಯರಿಂದ, ಅನೇಕ ಸಹೃದಯ ಮಿತ್ರರಿಂದ ಬೆನ್ನು ತಟ್ಟಿಸಿಕೊಂಡು ಸಂತೃಪ್ತ ಭಾವದಿಂದ ಮನೆಗೆ ಮರಳಿದೆವು. ಅಶ್ವಥ್ ಅವರು ಹೇಳಿದ್ದ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇರಲಿಲ್ಲ! ಆರಿಸಿ ಆರಿಸಿ ಹೆಕ್ಕಿ ತೆಗೆದಂತಿದ್ದ ವಿಶೇಷ ಹಣ್ಣುಗಳು ಬೆತ್ತದ ಬುಟ್ಟಿಯ ತುಂಬಾ ನಳನಳಿಸುತ್ತಿದ್ದವು!
ಕೊನೆ ಸಿಡಿ:
ಈಗ ನಾಲ್ಕಾರು ವರ್ಷಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯಿತು. ಕನ್ನಡದ ಎಲ್ಲಿ ಹಿರಿಯ ಕಿರಿಯ ನಿರೂಪಕರನ್ನೂ ಆಹ್ವಾನಿಸಿ ಗೌರವಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮವದು. ಕನ್ನಡದ ಪ್ರಸಿದ್ಧ- ಹಿರಿಯ ನಟ, ನಿರೂಪಕ ಬಿ.ಆರ್. ಶಿವರಾಮಯ್ಯನವರಿಂದ ಮೊದಲುಗೊಂಡು ಇತ್ತೀಚೆಗೆ ರಂಗಪ್ರವೇಶ ಮಾಡಿದ ಹೊಸ ನಿರೂಪಕರವರೆಗೆ ಎಲ್ಲರನ್ನೂ ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಕನ್ನಡ ರಂಗಭೂಮಿಯ ಪ್ರಖ್ಯಾತ ರಂಗಕರ್ಮಿಗಳು- ನಿರ್ವಾಹಕರು ಆಯೋಜಿಸಿದ್ದ ಕಾರ್ಯಕ್ರಮವಾಗಿತ್ತು ಅದು. ಅದೇಕೊ ಕಾಣೆ, ನನಗೊಬ್ಬನಿಗೆ ಆ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ. ಹಾಗೇ ನೆನಪಿಗೆ ಬಂತು.. ಹೇಳಿದೆ ಅಷ್ಟೇ.
0 ಪ್ರತಿಕ್ರಿಯೆಗಳು