ಶೈಲಾ ಗೋವಿಂದ್
ತಮ್ಮ ವಿದ್ಯಾಗುರುಗಳಾದ ಡಾ.ಕೆ.ವಿ.ಪುಟ್ಟಪ್ಪನವರಿಗೆ ಪುಸ್ತಕವನ್ನು ಅರ್ಪಿಸಿದ ಲೇಖಕರು ಮುನ್ನುಡಿಯಲ್ಲಿ ತಮ್ಮ ವಿಜ್ಞಾನ ಕಲಿಕೆ, ವಿಜ್ಞಾನಿಗಳೆಡೆಗೆ ಸಮಾಜದ ದೃಷ್ಟಿಕೋನ, ಬರಹಕ್ಕೆ ಪ್ರೇರಣೆಯಾದ ಸಂಗತಿಗಳನ್ನು ಪ್ರಸ್ತಾಪಿಸುತ್ತ ಮುಖದಲ್ಲೊಂದು ತಿಳಿನಗೆ ಹರಡಿ ಕರ್ಣಾಟಕ ಎಂಬ ಪತ್ರಿಕೆಗೆ ‘ಪುಟಭರ್ತಿ’ಗಾಗಿ ಬರೆದ ಲೇಖನಗಳ ಸಂಗ್ರಹ ಹೇಗೆ ಹೊಸ ಪುಸ್ತಕ ರೂಪ ತಾಳಿತು ಎಂಬುದನ್ನು ಸೊಗಸಾಗಿ ವಿವರಿಸುತ್ತಾರೆ.
ಮಧ್ಯೆ ಘಟನೆಯ ಸ್ವಾರಸ್ಯಕ್ಕೆ ತಕ್ಕಂತೆ ರೇಖಾಚಿತ್ರಗಳನ್ನು ಬಿಡಿಸಿಕೊಟ್ಟ ಶ್ರೀ ರಾಮಮೂರ್ತಿಯವನ್ನು ಸ್ಮರಿಸುತ್ತಾರೆ. ಈ ಹಾಸ್ಯ ಪ್ರಸಂಗಗಳು ಬರಿಯ ಕಪೋಕಲ್ಪಿತವಲ್ಲ, ಬದಲಾಗಿ ಖ್ಯಾತ ವಿಜ್ಞಾನಿಗಳ ಬದುಕಿನ ಘಟನೆಗಳನ್ನಾಧರಿಸಿ ಬರೆದ ವಾಸ್ತವಕ್ಕೆ ಹತ್ತಿರವಾದ ಚಿತ್ರಣವಾಗಿದೆ. ಹಲವು ವಿಜ್ಞಾನಿಗಳ ಎಲ್ಲ ಮುಖಗಳನ್ನು ವಿವಿಧ ದೃಷ್ಟಿಕೋನಗಳಿಂದ ಕಂಡು, ವಿಶ್ಲೇಷಿಸಿ, ಸ್ವತಃ ಅನುಭವಿಸಿ ಲೇಖಕರು ಅಕ್ಷರಕ್ಕಿಳಿಸಿದ ಪರಿ ತುಂಬ ಮನೋಜ್ಞವಾಗಿದೆ.
ಇದು ಒಂದು ೮೭ ಬೇರೆ ಬೇರೆ ಹಾಸ್ಯ ಪ್ರಸಂಗಗಳ ಸಂಕಲನವಾಗಿದ್ದು ಸಾಮಾನ್ಯಜ್ಞಾನದ ಕೊರತೆ, ಗಡಿಬಿಡಿಯ ಅಚಾತುರ್ಯಗಳು, ಅನ್ಯಮನಸ್ಕತೆಯ ಗೊಂದಲಗಳು, ವಾಸ್ತವದ ಉತ್ಪ್ರೇಕ್ಷಿತ ರೂಪಗಳು ಹಾಸ್ಯದ ಲೇಪವಾಗಿ ಓದುಗರಲ್ಲಿ ನಗೆಯುಕ್ಕಿಸುತ್ತವೆ. ಜಿ.ಎಚ್.ಹಾರ್ಡಿಯವರ “ದೇವರ ಪರಮ ಶತ್ರು” ಎಂಬ ಪ್ರಸಂಗದಿಂದ ಆರಂಭವಾಗುವ ಓದು ಐನ್ಸ್ಟೀನನ “ಗೂಢ ನಿವಾಸ”ದಲ್ಲಿ ಕೊನೆಗೊಳ್ಳುತ್ತದೆ..

೧೯೬೭ರಲ್ಲಿ ಹೃದಯ ನಾಟಿ ಚಿಕಿತ್ಸೆ ಕಂಡುಹಿಡಿದು ಖ್ಯಾತಿ ಪಡೆದ ಬರ್ನಾರ್ಡ್ ರವರನ್ನು ಉಪನ್ಯಾಸ, ಭಾಷಣಕ್ಕೆ ಕರೆದವರು ಅಸಂಖ್ಯಾತ ಮಂದಿ.. ಇದರಿಂದ ರೋಸಿ ಹೋದ ಅವರೊಮ್ಮೆ ಭಾಷಣವನ್ನು ಕೇಳಿ ಕೇಳಿ ಅರೆದು ಕುಡಿದಿದ್ದ ತಮ್ಮ ಕಾರು ಚಾಲಕನನ್ನು ಬದಲಿಯಾಗಿ ಕಳುಹಿಸುತ್ತಾರೆ.. ತಾನು ಕಾರುಚಾಲಕನ ವೇಷ ತೊಟ್ಟು ಸಭಿಕರೆಡೆಯಲ್ಲಿ ಆಸೀನರಾಗಿದ್ದರಂತೆ. ಅಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ತಡವರಿಸದೆ ಉತ್ತರಿಸುವ ಚಾಲಕನ ಶ್ರದ್ಧೆಗೆ ಮೂಗಿಗೆ ಬೆರಳಿಡುವ ಸರದಿ ಈ ವಿಜ್ಞಾನಿಯದ್ದು.. ಕೊನೆಗೊಂದು ಕ್ಲಿಷ್ಟ ಪ್ರಶ್ನೆ ಎದುರಾದಾಗ ಉತ್ತರ ಗೊತ್ತಿಲ್ಲದಿದ್ದರೂ ತಡವರಿಸದೆ ಆ ಚಾಲಕ, “ಅರೆ, ಇಂತಹ ಸಿಲ್ಲಿ ಪ್ರಶ್ನೆಗೆ ನಾನ್ಯಾಕೆ?? ನನ್ನ ಕಾರುಚಾಲಕನೇ ಉತ್ತರಿಸುತ್ತಾನೆ, ನೋಡುತ್ತಿರಿ..” ಎಂದು ಡಾ.ಬರ್ನಾರ್ಡ್ ರತ್ತ ಬೆಟ್ಟು ತೋರಿದಾಗ ಅವನ ಸನ್ನಿವೇಶ ನಿಭಾಯಿಸುವ ತಂತ್ರಕ್ಕೆ ಬೆರಗಾದರಂತೆ..!
ಐನ್ಸ್ ಸ್ಟೀನರ ಬೆಕ್ಕುಪ್ರೇಮ, ಹೆಸರಿನ ಅವಾಂತರ, ವಿಳಾಸದ ಮರೆವು ಲೇಖನಗಳು ,”ಅಬ್ಬಾ.. ಹೀಗೂ ಉಂಟೆ” ಎಂದು ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ.
ದೊಡ್ಡ ದೊಡ್ಡ ಸಂಶೋಧನೆಗಳನ್ನು ನಡೆಸಿದ ವಿಜ್ಞಾನಿಗಳು ದಿನನಿತ್ಯದ ಜೀವನದಲ್ಲಿ ಹೇಗೆ ತಮ್ಮ ಹೆಸರು, ಊಟ, ನಿದ್ದೆಗಳನ್ನು ಮರೆಯುತ್ತಾರೆ ಹಾಗೂ ಅದರಿಂದ ಏನೆಲ್ಲ ಫಜೀತಿ, ಗೊಂದಲ ಹುಟ್ಟುಹಾಕುತ್ತಾರೆ ಎಂಬುದು ಒಂದೊಂದೇ ಲೇಖನ ಅಸ್ವಾದಿಸುತ್ತ ಹೋದಂತೆ ನಮ್ಮರಿವಿಗೆ ಬರುತ್ತದೆ. ಅಸಾಮಾನ್ಯರ ಸಾಮಾನ್ಯ ವಿಷಯಗಳು ಹಾಸ್ಯಾಸ್ಪದವಾಗಿ ಮುಖದಲ್ಲೊಂದು ತಿಳಿನಗೆ ಹರಡಲು ಮರೆಯದೆ ಈ ಪುಸ್ತಕ ಓದುವಿರಲ್ಲಾ…??






I had read this book in my school days… Bahala khushi kotta pustaka 🙂