
ಅಧ್ಯಾಯ- ಒಂದು
ಶುಭ ನುಡಿದ ಶಕುನದ ಹಕ್ಕಿ
ಭಾರತದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂಬುದು ಒಂದು ಅಚ್ಚಳಿಯದ ಹೆಸರು.
ಉತ್ತರ ಭಾರತದ ಸಂಸ್ಕೃತಿಯಲ್ಲಿ ಶುಭ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶೆಹನಾಯ್ ಮಂಗಳ ವಾದ್ಯಕ್ಕೆ ತಮ್ಮ ಉಸಿರು ತುಂಬಿ, ಅದರಿಂದ ಹೊರಟ ಸುಮಧುರವಾದ ನಾದವನ್ನು ತಮ್ಮ ಬದುಕಿನುದ್ದಕ್ಕೂ ಪರಿಮಳದಂತೆ ಜಗತ್ತಿಗೆಲ್ಲಾ ಹಂಚುತ್ತಾ ಸಂತನಂತೆ ಬದುಕಿದ ಅಪರೂಪದ ಕಲಾವಿದನೊಬ್ಬನ ಹೆಮ್ಮೆಯ ಹೆಸರು.
ದೇಶ,ಭಾಷೆ ಮತ್ತು ಜಾತಿ, ಧರ್ಮಗಳನ್ನು ಮೀರಿ ನಿಂತ ಹಲವು ಸಂಗೀತ ಕಲಾವಿದರು ಭಾರತದ ಇತಿಹಾಸದಲ್ಲಿ ತಮ್ಮ ಹೆಸರು ಮತ್ತು ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿ ಅಮರರಾಗಿದ್ದಾರೆ. ಇಂತಹ ಮಹನೀಯರಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಾಬಲ್ಯ ಸಾಧಿಸಿದ್ದ ಮುಸ್ಲಿಂ ಸಮುದಾಯದಿಂದ ಬಂದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷವಾಗಿದೆ. ಇದು ಭಾರತದ ಬಹುಮುಖಿ ಸಂಸ್ಕೃತಿ ಸಮಾಜಕ್ಕೆ ಮತ್ತು ಇಲ್ಲಿನ ಬಹುತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪಂಡಿತ್ ಅಬ್ದಲ್ ಕರೀಂ ಖಾನ್ ( ಗಂಗೂಬಾಯಿ ಹಾನಗಲ್ ಮತ್ತು ಭೀಮಸೇನ್ ಜೋಷಿಯವರ ಗುರುಗಳಾಗಿದ್ದ ಸವಾಯಿ ಗಂಧರ್ವರ ಗುರು) ಪಂಡಿತ್ ಅಲ್ಲಾವುದ್ದೀನ್ ಖಾನ್ ( ಸೀತಾರ್ ವಾದಕ ಪಂಡಿತ್ ರವಿಶಂಕರ್‍ರವರ ಗುರು) ಪಂಡಿತ್ ಅಲ್ಲಾದಿಯಾ ಖಾನ್ ( ಪಂಡಿತ್ ಮಲ್ಲಿಕಾರ್ಜುನ್ ಮನಸೂರ್ ಅವರ ಗುರು) ಉಸ್ತಾದ್ ಬಡೇ ಗುಲಾಂ ಆಲಿಖಾನ್, ಉಸ್ತಾದ್ ವಿಲಾಯತ್ ಖಾನ್ ಹೀಗೆ ಹಲವು ಮಹಾನ್ ಕಲಾವಿದರನ್ನು ನೆನಯಬಹುದು.
ಇಂತಹ ಶ್ರೇಷ್ಠ ಮಹಾನ್ ಕಲಾವಿದರ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ಕಲಾವಿದ ಹಾಗೂ ಸಂಗೀತ ಲೋಕದ ಸಂತನೆಂದು ಉಸ್ತಾದ್ ಬಿಸ್ಮಿಲ್ಲಾ ಖಾನ್‍ರನ್ನು ಕರೆಯಬಹುದಾಗಿದೆ. ಹಲವು ಶತಮಾನಗಳ ಕಾಲ ಉತ್ತರ ಮತ್ತು ದಕ್ಷಿಣ ಎಂಬ ಬೇಧವಿಲ್ಲದೆ, ದೇವಸ್ಥಾನ ಮತ್ತು ವಿವಾಹದಂತಹ ಶುಭ ಸಮಾರಂಭಗಳಲ್ಲಿ ಮಂಗಳ ವಾದ್ಯ ಎಂದು ನುಡಿಸಲಾಗುತ್ತಿದ್ದ ಶೆಹನಾಯ್ ಮತ್ತು ನಾಗಸ್ವರ ಈ ಎರಡೂ ವಾದ್ಯಗಳ ಸಂಗೀತವನ್ನು ಹೊಸ್ತಿಲಾಚೆಗೆ ಇಡಲಾಗಿತ್ತು.
ಇವುಗಳಿಂದ ಹೊರ ಹೊಮ್ಮುತ್ತಿದ್ದ ನಾದವು ಮಂಗಳಕರವಾಗಿದ್ದರೆ, ಇವುಗಳನ್ನು ನುಡಿಸುತ್ತಿದ್ದ ಕಲಾವಿದರು ಮಡಿವಂತರ ಪಾಲಿಗೆ ಮೈಲಿಗೆಯಾಗಿದ್ದರು. ಆದರೆ, ಈ ಎರಡೂ ವಾದ್ಯಗಳಿಗೆ ಸಂಗೀತ ಕಛೇರಿಗಳಲ್ಲಿ ಸ್ಥಾನಮಾನ ಗಳಿಸಿಕೊಡುವುದರ ಜೊತೆಗೆ ಇವುಗಳನ್ನು ನುಡಿಸುತ್ತಿದ್ದ ಕಲಾವಿದರ ಬದುಕಿಗೆ ಘನತೆ ಮತ್ತು ಗೌರವವನ್ನು ಉಸ್ತಾದ್ ಬಿಸ್ಮಿಲ್ಲಾಖಾನ್ ಮತ್ತು ದಕ್ಷಿಣದ ವಿದ್ವಾನ್ ಟಿ.ಎನ್.ರಾಜರತ್ನಂಪಿಳ್ಳೈ ಈ ಇಬ್ಬರು ಕಲಾವಿದರು ತಂದುಕೊಡುವುದರ ಮೂಲಕ ಚಿರಸ್ಮರಣೀಯರಾಗಿದ್ದಾರೆ.
ಉತ್ತರ ಭಾರತದಲ್ಲಿ ಶಾಸ್ತ್ರೀಯವಾದ ಹಿಂದೂಸ್ಥಾನಿ ರಾಗಗಳನ್ನು ಶೆಹನಾಯ್ ವಾದ್ಯಕ್ಕೆ ಬಿಸ್ಮಿಲ್ಲಾ ಖಾನರು ಅಳವಡಿಸಿಕೊಂಡರೆ, ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತದ ಶಾಸ್ತ್ರೀಯ ರಾಗಗಳನ್ನು ರಾಜರತ್ನಂ ಪಿಳ್ಳೈ ನಾಗಸ್ವರ ವಾದ್ಯಕ್ಕೆ ಅಳವಡಿಸಿಕೊಂಡರು. ಸುಶಿರ ವಾದ್ಯಗಳು ಎಂದು ಕರೆಯಲಾಗುವ ಶೆಹನಾಯ್, ಕೊಳಲು, ನಾಗಸ್ವರ ಮುಂತಾದ ವಾದ್ಯಗಳಿಗೆ ತಮ್ಮ ಎದೆಯ ತಿದಿಗಳನ್ನು ಒತ್ತಿ ಉಸಿರು ತುಂಬಿ ನುಡಿಸುವ ಸಂಗೀತದ ರಾಗಗಳನ್ನು ಸುಶ್ರಾವ್ಯವಾಗಿ ನುಡಿಸುವುದು ಸುಲಭದ ಸಂಗತಿಯಲ್ಲ.
ಆದರೆ, ಅದನ್ನು ಒಂದು ಧೀರ್ಘವಾದ ತಪಸ್ಸಿನ ಹಾಗೆ ಧ್ಯಾನಿಸಿ ತಮ್ಮದಾಗಿಸಿಕೊಂಡವರಲ್ಲಿ ಬಿಸ್ಮಿಲ್ಲಾ ಖಾನ್, ರಾಜರತ್ನಂ ಪಿಳ್ಳೈ ಹಾಗೂ ಪ್ರಸಿದ್ಧ ಕೊಳಲುವಾದಕ ಮಾಲಿ ಎಂದು ಪ್ರಸಿದ್ಧರಾಗಿದ್ದ ಟಿ.ಆರ್. ಮಹಾಲಿಂಗಂ ಮುಖ್ಯರಾದವರು.
ಶೆಹನಾಯ್ ವಾದ್ಯ ಪರಿಕರಕ್ಕೆ ಭಾರತದ ಸಂಗೀತದ ಇತಿಹಾಸದಲ್ಲಿ ಸುಧೀರ್ಘವಾದ ಇತಿಹಾಸವಿದೆ. ನಾಟ್ಯ ಮತ್ತು ಸಂಗೀತ ಕುರಿತ ಮುಖ್ಯ ಕೃತಿಯಾದ ಹಾಗೂ ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿ ರಚಿತವಾಯಿತು ಎಂದು ಹೇಳಲಾಗುವ “ನಾಟ್ಯ ಶಾಸ್ತ್ರ” ಕೃತಿಯಲ್ಲಿ ಭರತಮುನಿಯು ಸಂಗೀತ ವಾದ್ಯ ಪರಿಕರಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾನೆ.
ಅವುಗಳೆಂದರೆ, ಒಂದು- ತಟವಾದ್ಯ ಅಂದರೆ, ತಂತಿಗಳಿಂದ ಮಾಡಿದ ವಾದ್ಯಗಳು (ವೀಣೆ, ಸಾರಂಗಿ,ಸರೋದ್, ಸೀತಾರ್, ಪಿಟೀಲು ಇತ್ಯಾದಿ) ಎರಡು- ಸುಶಿರವಾದ್ಯ ಅಂದರೆ, ತುಟಿಯಂಚಿನಲ್ಲಿ ಇಟ್ಟುಕೊಂಡು ಉಸಿರು ತುಂಬಿ ನುಡಿಸುವ ವಾದ್ಯಗಳು ( ಶಂಖ, ಪುಂಗಿ, ಶೆಹನಾಯ್, ಕೊಳಲು, ನಾಗಸ್ವರ ಇತ್ಯಾದಿ) ಮೂರು- ಆನಂದ ಅಥವಾ ಅವನುದ್ಧ ವಾದ್ಯ ಅಂದರೆ, ಚರ್ಮವಾದ್ಯಗಳು ( ಡಮರುಗ, ಮೃದಂಗ, ನಗಾರಿ, ತಮಟೆ, ಚಂಡೆ ಇತ್ಯಾದಿ ಹಾಗೂ ನಾಲ್ಕನೆಯದು- ಘನವಾದ್ಯ ಅಂದರೆ, ಲೋಹ, ಮರ ಮತ್ತು ಕಲ್ಲಿನಿಂದ ತಯಾರಿಸಿದ ವಾದ್ಯಗಳು. ( ಗಂಟೆ, ಜಾಗಟೆ, ತಾಳ, ಇತ್ಯಾದಿ) ಶೆಹನಾಯ್ ವಾದ್ಯವು ಶಂಖವಾದ್ಯದ ಮುಂದುವರಿದ ಹಾಗೂ ಪರಿಷ್ಕೃತ ರೂಪ ಎಂದು ಸಂಗೀತ ಇತಿಹಾಸಗಾರರು ಅಭಿಪ್ರಾಯ ಪಟ್ಟಿದ್ದಾರೆ.
ಜಾನಪದ ಸಂಗೀತದ ವಾದ್ಯ ಪರಿಕರಗಳಲ್ಲಿ ಒಂದಾದ ಶೆಹನಾಯ್ ವಾದ್ಯದ ಮೂಲದ ಹೆಸರು ಸಿಂಹ ಅಥವಾ ಸಿಂಘ ಎಂದಾಗಿದೆ. ಈ ವಾದ್ಯವು ಹೆಚ್ಚಾಗಿ ಉತ್ತರ ಭಾರತದ ಬೆಟ್ಟ, ಕಣ ವೆ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನರ ನಡುವೆ ಪುಂಗಿ ಎಂಬ ಹೆಸರಿನಲ್ಲಿ ಮೆಚ್ಚಿನ ವಾದ್ಯವಾಗಿತ್ತು. ಆರಂಭದ ದಿನಗಳಲ್ಲಿ ಇದು ಕೇವಲ ಎಂಟು ಇಂಚು ಉದ್ದದ ಪುಟ್ಟ ವಾದ್ಯವಾಗಿತ್ತು.
ಸುಶ್ರಾವ್ಯವಾದ ಧ್ವನಿಯನ್ನು ಹೊರಡಿಸುವ ಉದ್ದೇಶದಿಂದ ಕಲಾವಿದರು ಈ ವಾದ್ಯಕ್ಕೆ ಏಳು ರಂಧ್ರಗಳನ್ನು ಕೊರೆದರು. ಕಾಲಕ್ರಮೇಣ ಕಲಾವಿದರ ಹವ್ಯಾಸಕ್ಕೆ ತಕ್ಕಂತೆ ಆಕಾರ, ವಿನ್ಯಾಸ ಹಾಗೂ ಅದರ ಉದ್ದಳತೆ ಬದಲಾಗುತ್ತಾ ಹೋಯಿತು. ಇದೀಗ ಸಾಮಾನ್ಯವಾಗಿ ಶೆಹನಾಯ್ ವಾದ್ಯಗಳು ಹದಿಮೂರು ಇಂಚಿನಿಂದ ಹದಿನಾರು ಇಂಚಿನವರೆಗೆ ಇರುತ್ತವೆ.ಇಂತಹ ವಾದ್ಯಗಳನ್ನು ತಯಾರಿಸಲು ಯಾವುದೇ ನಿಪುಣರು ಆ ದಿನಗಳಲ್ಲಿ ಇರಲಿಲ್ಲ.
ಸಾಮಾನ್ಯವಾಗಿ ಕಲಾವಿದರು ತಾವು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬಡಗಿ ಅಥವಾ ಕಮ್ಮಾರರ ಮೂಲಕ ಬರ್ಮಾ ಟೀಕ್ ಎಂಬ ತೇಗದ ಮರದ ಕೊರಡನ್ನು ಆಯ್ಕೆ ಮಾಡಿಕೊಂಡು, ಅದರ ಮಧ್ಯ ಭಾಗದಲ್ಲಿ ಕಾದ ಕಬ್ಬಿಣದ ಸಲಾಕೆಯನ್ನು ತೂರಿಸಿ ಕೊಳವೆಯ ರೂಪಕ್ಕೆ ತಂದು ನಂತರ ತಮ್ಮ ಕೈ ಬೆರಳುಗಳ ಚಲನೆಗೆ ಅಂದರೆ, ನುಡಿಸಾಣಿಕೆಗೆ ಅನುಕೂಲವಾಗುವಂತೆ ರಂಧ್ರಗಳನ್ನು ಕೊರೆಯಿಸುತ್ತಿದ್ದರು.
ಅದರ ಮುಂಭಾಗಕ್ಕೆ ಹಿತ್ತಾಳೆ ಲೋಹದಲ್ಲಿ ದಾಸವಾಳ ಹೂವಿನ ಆಕಾರದ ತೆರೆದ ಕವಚದಿಂದ ಸಿಂಗರಿಸುತ್ತಿದ್ದರು. ಸ್ಥಳಿಯವಾಗಿ ಬೆಳೆಯುತ್ತಿದ್ದ ಹುಲ್ಲಿನ ಪ್ರಬೇಧದ ನರ್ಕಟ್ ಎಂಬ ಬಿದಿರಿನಂತಹ ಕಡ್ಡಿಯನ್ನು ಚಪ್ಪಟೆಯಾಗಿ ಸೀಳಿ ಅದರ ಎರಡು ಸಣ್ಣ ತುಂಡುಗಳನ್ನು ಶಹನಾಯ್ ಹಿಂಬದಿಗೆ ಸಿಕ್ಕಿಸಿ ಉಸಿ ಮೂಲಕ ನುಡಿಸಲು ಅನುಕೂಲವಾಗುವಂತೆ ವಾದ್ಯವನ್ನು ಪರಿವರ್ತಿಸಿಕೊಳ್ಳುತ್ತಿದ್ದರು.
ನರಸಿಂಘ, ನರಸಿಂಹ ಎಂದು ಕರೆಯಲಾಗುತ್ತಿದ್ದ ಈ ಸುಶಿರವಾದ್ಯವು ಕಾಲಕ್ರಮೇಣ ಶೆಹನಾಯ್ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು. ಪ್ರಾಚೀನ ಭಾರತದ ದೇವಸ್ಥಾನಗಳಲ್ಲಿ ಪೂಜೆ ಅಥವಾ ಬ್ರಾಹ್ಮಣರ ಗೃಹಗಳಲ್ಲಿನ ಶುಭ ಸಮಾರಂಭಗಳಲ್ಲಿ ಗಂಟೆ, ಜಾಗಟೆಯೊಂದಿಗೆ ಬಳಸಲ್ಪಡುತ್ತಿದ್ದ ಶಂಖ ವಾದ್ಯದ ಸ್ಥಾನವನ್ನು ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ನ ಆಳ್ವಿಕೆಯಲ್ಲಿ ಶೆಹನಾಯ್ ಅಥವಾ ಪುಂಗಿ ಎಂಬ ವಾದ್ಯವು ಆಕ್ರಮಿಸಿಕೊಂಡಿತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯೂ ಸೇರಿದಂತೆ ಭಾರತದ ಅನೇಕ ಸಂಸ್ಥಾನಗಳಲ್ಲಿ ಅನೇಕ ಹಿಂದೂ ಕಲಾವಿದರ ಕುಟುಂಬಗಳು ದೇವಸ್ಥಾನಗಳಲ್ಲಿ ಪೂಜೆಯ ಸಂದರ್ಭಗಳಲ್ಲಿ ಪುಂಗಿ ನುಡಿಸುವ ವೃತ್ತಿಯನ್ನು ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡಿದ್ದರು. ಪುಂಗಿಯ ನಾದವು ಆ ಕಾಲಘಟ್ಟದಲ್ಲಿ ಕೇಳಲು ಸುಶ್ರಾವ್ಯವಾಗಿರದೆ, ಕರ್ಣ ಕಠೋರವಾಗಿತ್ತು. ಈ ಕಾರಣಕ್ಕಾಗಿ ಔರಂಗಜೇಬನ ಕಾಲದಲ್ಲಿ ದೇವಸ್ಥಾನಗಳಲ್ಲಿ ಪುಂಗಿ ನುಡಿಸುವುದನ್ನು ನಿಷೇಧಿಸಲಾಗಿತ್ತು.
ಔರಂಗಜೇಬನ ಈ ನಿಷೇಧವನ್ನು “ನಫಿಲಿ “ಎಂದು ಕರೆಯಲಾಗುತ್ತಿತ್ತು. ನಫಕ್ ಎಂಬ ಶಬ್ದದಿಂದ ಅಂದರೆ, ಶೋಕ ಸಂಗೀತ ಎಂಬುದರಿಂದ ಈ ಶಬ್ದ ಬಳಕೆಯಲ್ಲಿತ್ತು. ಇಂದಿಗೂ ಸಹ ಉತ್ತರ ಭಾರತದಲ್ಲಿ ಕೆಲವು ಸಮುದಾಯಗಳು ಶೆಹನಾಯ್ ವಾದ್ಯ ಸಂಗೀತವನ್ನು ಶೋಕ ಸಂಗೀತ ಎಂಬುದಾಗಿ ಪರಿಗಣಿ ಸಿವೆ. ಆದರೆ, ಇಂತಹ ಅಪವಾದ ಮತ್ತು ಕಟ್ಟುಪಾಡುಗಳನ್ನು ಮೀರಿ ಭಾರತದ ಪ್ರಾತಃಕಾಲಕ್ಕೆ ಮತ್ತು ಅದರ ಶುಭ ಆರಂಭಕ್ಕೆ ಸೂಚ್ಯವೆಂಬಂತೆ ಶೆಹನಾಯ್ ಮತ್ತು ನಾಗಸ್ವರ ವಾದ್ಯಗಳು ಬಳಕೆಯಾಗುತ್ತಿವೆ.
ಉತ್ತರ ಪ್ರದೇಶದ ಪೂರ್ವ ಭಾಗದ ಜನಪ್ರಿಯ ಜಾನಪದ ಪ್ರಕಾರದ ಮತ್ತು ಅರೆ ಶಾಸ್ತ್ರೀಯ ಪ್ರಕಾರದ ರಾಗಗಳನ್ನು ಶಹನಾಯ್ ವಾದಕರು ಹೆಚ್ಚಾಗಿ ಬಳಸುತ್ತಿದ್ದರು. ಬಿಸ್ಮಿಲ್ಲಾ ಖಾನರು ಈ ಕಲಾ ರಂಗವನ್ನು ಪ್ರವೇಶಿಸಿದ ನಂತರ ಕೆಲವು ಆಯ್ದ ಹಿಂದೂಸ್ತಾನಿ ಸಂಗೀತದ ರಾಗಗಳನ್ನು ಶೆಹನಾಯ್ ವಾದನಕ್ಕೆ ಬಳಸಿಕೊಳ್ಳುವುದರ ಮೂಲಕ ಅದಕ್ಕೆ ಸಂಗೀತ ಕಛೇರಿಯಲ್ಲಿ ಮಾನ್ಯತೆ ದೊರಕಿಸಿಕೊಟ್ಟರು.
ಆನಂತರ ಬಿಸ್ಮಿಲ್ಲಾ ಖಾನರಿಂದಾಗಿ ಶೆಹನಾಯ್ ವಾದ್ಯ ಸಂಗೀತವು ಭಾರತಾದ್ಯಂತ ಜನಪ್ರಿಯವಾಯಿತು. ಭಾರತದ ಸಂಗೀತ ಲೋಕದಲ್ಲಿ 1947 ರ ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯ ಪಡೆದ ಶುಭ ಗಳಿಗೆಯಲ್ಲಿ ಹಾಗೂ 1956 ರ ಜನವರಿ 26 ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ಮತ್ತು 1997 ರ ಲ್ಲಿ ಸಂಸತ್ತಿನ ಕೇಂದ್ರ ಸಭಾಂಗಣಲ್ಲಿ ಆಚರಿಸಲಾದ ಐವತ್ತನೆಯ ವರ್ಷದ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಹೀಗೆ ಮೂರು ಅವಿಸ್ಮರಣೀಯ ಸಮಾರಂಭಗಳಲ್ಲಿ ಶೆಹನಾಯ್ ಮಂಗಳ ವಾದ್ಯವನ್ನು ನುಡಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನರು ಭಾರತದ ಪಾಲಿಗೆ “ ಶುಭ ನುಡಿಯುವ ಶಕುನದ ಹಕ್ಕಿಯಾಗಿದ್ದರು’
ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಲ್ಲಿ ಜನಿಸಿ, ತಾನು ಹುಟ್ಟಿ ಬೆಳೆದ ಧರ್ಮಕ್ಕೆ ನಿಷ್ಟರಾಗಿದ್ದ ಬಿಸ್ಮಿಲ್ಲಾ ಖಾನರು ಅನ್ಯ ಧರ್ಮಗಳನ್ನು ಸಹ ಅಷ್ಟೇ ಪ್ರೀತಿಯಿಂದ ಗೌರವಿಸಿ ಆದರಿಸಿದರು. ವಾರಣಾಸಿಯಲ್ಲಿ ಹರಿಯುವ ಜೀವನದಿ ಗಂಗೆಯು ಬಿಸ್ಮಿಲ್ಲಾ ಖಾನರ ಪಾಲಿಗೆ ತಾಯಿಯಾದರೆ, ಅಲ್ಲಿನ ಕಾಶಿ ವಿಶ್ವನಾಥನು ತಂದೆಯ ರೂಪದಲ್ಲಿದ್ದನು. ಅಲ್ಲಿನ ಗಂಗಾ ನದಿ ತಟದ ಸೋಪಾನಗಳು ಬಿಸ್ಮಿಲ್ಲಾಖಾನರ ಪಾಲಿಗೆ ಬದುಕಿನ ಏಣಿಯ ಮೆಟ್ಟಿಲುಗಳಾಗಿದ್ದವು.
ಈ ಕಾರಣಕ್ಕಾಗಿ ಒಮ್ಮೆ ಅಮೇರಿಕಾದ ನಿಯೋಗವೊಂದು “ ನೀವು ಅಮೇರಿಕಾದಲ್ಲಿ ಬಂದು ನೆಲೆಸುವುದಾದರೆ, ಎಲ್ಲಾ ಬಗೆಯ ಸೌಕರ್ಯಗಳನ್ನು ನೀಡಲಾಗುವುದು” ಎಂದು ಅವರಿಗೆ ಆಮಿಷ ಒಡ್ಡಿದಾಗ; “ ಇಲ್ಲಿನ ಗಂಗೆಯನ್ನು ಮತ್ತು ಕಾಶಿ ವಿಶ್ವನಾಥನನ್ನು ಅಲ್ಲಿಗೆ ತರುವುದಾದರೆ; ನಾನು ಅಮೇರಿಕಾದಲ್ಲಿ ವಾಸಿಸಲು ಸಿದ್ಧ” ಎಂಬ ಮಾರ್ಮಿಕವಾದ ಉತ್ತರವನ್ನು ಖಾನ್ ಸಾಹೇಬರು ನೀಡಿದ್ದರು.
ಇಸ್ಲಾಂ ಧರ್ಮದಲ್ಲಿ ಶುದ್ಧ ಸಂಪ್ರದಾಯಸ್ಥ ನಿಷ್ಟರ ಪ್ರಕಾರ ಸಂಗೀತ ನುಡಿಸುವುದು ಪಾಪದ ಕೃತ್ಯ ಎಂಬ ನಂಬಿಕೆ ಈಗಲೂ ಜಾರಿಯಲ್ಲಿದೆ. ಒಮ್ಮೆ ಇರಾನ್ ಪ್ರವಾಸದಲ್ಲಿದ್ದ ಉಸ್ತಾದ್ ಬಿಸ್ಮಿಲ್ಲಾ ಖಾನರು ಅಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮೌಲ್ವಿಗಳು “ಇದು ಇಸ್ಲಾಂ ಧರ್ಮಕ್ಕೆ ವಿರೋಧವಲ್ಲವೆ?” ಎಂಬ ಪ್ರಶ್ನೆಯನ್ನು ಕೇಳಿದರು.
ಇದಕ್ಕೆ ಉತ್ತರಿಸಿದ ಬಿಸ್ಮಿಲ್ಲಾ ಖಾನರು “ ನೀವು ಪ್ರಾರ್ಥನಾ ಮಂದಿರದಲ್ಲಿ ಕೂಗುವ ಅಜಾನ್ ಮತ್ತು ನಾನು ನುಡಿಸುವ ಶೆಹನಾಯ್ ಇವೆರೆಡೂ ನನ್ನ ಪಾಲಿಗೆ ಒಂದೇ ಆಗಿವೆ. ನೀವು ಧ್ವನಿ ವರ್ಧಕದಲ್ಲಿ ಅಲ್ಲಾನನ್ನು ಪ್ರಾರ್ಥಿಸುತ್ತೀರಿ, ನಾನು ನನ್ನ ಈ ವಾದ್ಯದ ಮೂಲಕ ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ನುಡಿದರಲ್ಲದೆ, ತಮ್ಮ ಶೆಹನಾಯ್ ತೆಗೆದುಕೊಂಡು “ಅಲ್ಲಾಹೋಅಕ್ಬರ್” ಪ್ರಾರ್ಥನೆಯನ್ನು ಅದರಲ್ಲಿ ಸುಶ್ರಾವ್ಯವಾಗಿ ನುಡಿಸಿ ತೋರಿಸಿದಾಗ ಮೌಲ್ವಿಗಳು ಮೌನಕ್ಕೆ ಶರಣಾದರು.
ಬಿಸ್ಮಿಲ್ಲಾಖಾನರ ಈ ಮಾತಿನಿಂದ ಪ್ರಭಾವಿತಗೊಂಡ ಇರಾನ್ ಸರ್ಕಾರ ಅಲ್ಲಿನ ರಾಜಧಾನಿ ತೆಹರಾನ್ ನಗರದಲ್ಲಿ ನಿರ್ಮಿಸಿರುವ ಸಭಾ ಭವನಕ್ಕೆ ಬಿಸ್ಮಿಲ್ಲಾ ಖಾನರ ಹೆಸರನ್ನಿಟ್ಟು ಗೌರವಿಸಿದೆ. ಹಿಂದೂ, ಇಸ್ಲಾಂ ಮತ್ತು ಬೌದ್ಧ ಧರ್ಮಗಳ ಸಂಗಮ ಕ್ಷೇತ್ರದಂತಿರುವ ವಾರಣಾಸಿಯಲ್ಲಿ ನೆಲೆ ನಿಂತು ಎಲ್ಲಾ ಧರ್ಮ, ಜಾತಿ ಮತ್ತು ಭಾಷೆಗಳ ಸಾಂಸ್ಕೃತಿಕ ರಾಯಭಾರಿಯಂತೆ ಬದುಕಿದ ಉಸ್ತಾದ್ ಬಿಸ್ಮಿಲ್ಲಾ ಖಾನರ ಬದುಕು ಒಂದು ರೀತಿಯಲ್ಲಿ ಮಹಾ ಕಾವ್ಯದಂತಿದೆ.
ಭಾರತದ ಸ್ವಾತಂತ್ರ್ಯದ ಹೋರಾಟದ ದಿನಗಳಲ್ಲಿ ಮಹಾತ್ಮನೊಂದಿಗೆ ಗುರುತಿಸಿಕೊಂಡಿದ್ದ ಖಾನ್‍ಅಬ್ದುಲ್ ಗಫಾರ್ ಖಾನ್ ಮತ್ತು ಮೌಲಾನಾ ಅಜಾದ್ ಈ ಇಬ್ಬರು ಮಹನೀಯರನ್ನು ಹೊರತು ಪಡಿಸಿದರೆ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಎಲ್ಲಾ ಬಗೆಯ ಧರ್ಮಿಯರಿಂದ ಪ್ರೀತಿಸಲ್ಪಟ್ಟವರಲ್ಲಿ ಡಾ. ಅಬ್ದಲ್ ಕಲಾಂ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನರು ಪ್ರಮುಖರಾಗಿದ್ದಾರೆ.
ಈ ಇಬ್ಬರು ಮಹನೀಯರು ತಮ್ಮ ಪಾರದರ್ಶಕ ಗುಣ, ವ್ಯಕ್ತಿತ್ವ ಮತ್ತು ಸಹೃದಯತೆ ಹಾಗೂ ಅನನ್ಯವಾದ ದೇಶಭಕ್ತಿಯಿಂದಾಗಿ ಭಾರತದ ಎಲ್ಲಾ ಸಮುದಾಯಗಳಿಂದ ಗೌರವಿಸಲ್ಪಟ್ಟರಲ್ಲದೆ; ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಪಾತ್ರರಾದರು. ನಿರಂತರ ಎಪ್ಪತ್ತೈದು ವರ್ಷಗಳ ಕಾಲ ಶೆಹನಾಯ್ ವಾದ್ಯದ ಮೂಲಕ ಭಾರತದ ಜನಸಮುದಾಯಕ್ಕೆ ಸಂಗೀತದ ರಸದೌತಣ ಬಡಿಸಿದ ಬಿಸ್ಮಿಲ್ಲಾ ಖಾನರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಕೇಂದ್ರ ಸರ್ಕಾರ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದರ ಜೊತೆಗೆ ಉನ್ನತ ಮಟ್ಟದ ಚಿಕಿತ್ಸೆಗೆ ದೆಹಲಿಗೆ ಬರುವಂತೆ ಖಾನರಿಗೆ ಆಮಂತ್ರಣ ನೀಡಿತು.
ಆದರೆ, ನನ್ನ ಜೀವದ ಉಸಿರಿನಂತೆ ಪ್ರೀತಿಸುವ ಈ ಗಂಗೆಯನ್ನು ತೊರೆದು ನಾನು ಹೊರಗೆ ಸಾಯಲಾರೆ ಎಂದು ಸರ್ಕಾರದ ಆಹ್ವಾನವನ್ನು ನಿರಾಕರಿಸಿದ ಬಿಸ್ಮಿಲ್ಲಾ ಖಾನರು ಅಂತಿಮವಾಗಿ ಗಂಗೆಯ ಮಡಿಲಲ್ಲಿ ಪ್ರಾಣ ಬಿಡುವುದರ ಮೂಲಕ ಅವಳ ಸಾನಿಧ್ಯದ ವಾರಣಾಸಿಯಲ್ಲಿ ಮಣ್ಣಾದರು.
(ಮುಂದುವರಿಯುವುದು)






Thank you for this input about Bismilla Khan
ನಾದಯೋಗಿ ಬಿಸ್ಮಿಲ್ಲಾಖಾನರ ಜೀವನದ ಬಗ್ಗೆ ಮೂಡಿ ಬರುತ್ತಿರುವ ಚೆಂದದ ಪರಿಚಯಾತ್ಮಕ ಲೇಖನ ಸರಣಿಗಾಗಿ ಧನ್ಯವಾದಗಳು.
ಕ್ಷಮಿಸಿ. ಬಹುಶಃ ಮುದ್ರಣ ದೋಷದಿಂದಾಗಿ ಕೆಲವು ತಪ್ಪುಗಳು ಈ ಸಂಚಿಕೆಯಲ್ಲಿ ನುಸುಳಿ ಬಂದಿವೆ. ಅದನ್ನು ತಮ್ಮ ಗಮನಕ್ಕೆ ತರುವ ಉದ್ದೇಶ ನನ್ನದು.
ವಿವಿಧ ಬಗೆಯ ಸಂಗೀತ ವಾದ್ಯಗಳ ಬಗ್ಗೆ ಇರುವ ಮಾಹಿತಿಯಲ್ಲಿ ತಂತೀ ವಾದ್ಯಗಳಿಗೆ ಬಳಸುವ “ತತ ವಾದ್ಯ” ಎಂಬ ಹೆಸರು ಇಲ್ಲಿ “ತಟವಾದ್ಯ” ಎಂದಾಗಿದೆ. ಹಾಗೂ “ಅವನಧ್ಧ” ಎನ್ನುವುದು ಇಲ್ಲಿ “ಅವನುದ್ಧ” ಎಂದಾಗಿದೆ.. ದಯವಿಟ್ಟು ಗಮನಿಸಿ.
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ಲೇಖಕರ ಗಮನಕ್ಕೆ ತರುತ್ತೇವೆ