ಕೋಳಿಕಳ್ಳ ಸಿಕ್ಕುಬಿದ್ರೂ ‘ಹಗಣ’ ಕಟ್ತಾರೆ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

| ಕಳೆದ ಸಂಚಿಕೆಯಿಂದ |

ಏನಿದು ಹಗ್ರಾಣ..?

ಕರ್ನಾಟಕದ ಬಹಳ ಹಳೆಯ ರಂಗರೂಪವಾದ ‘ಹಗರಣ’ ಶತಮಾನಗಳ ಹಿಂದಿನಿಂದ ಉಳಿದುಕೊಂಡು ಬಂದ ಒಂದು ಜಾನಪದ ಕಲಾಪ್ರದರ್ಶನ. ಇದು ಪೂರ್ತಿ ನಿಚ್ಚಳವಾದ ನಾಟಕವಲ್ಲ. ‘ಟನಾಳ್ ಪಗರಣ’ ಎಂದು ‘ಕವಿರಾಜಮಾರ್ಗ’, ‘ವಡ್ಡಾರಾಧನೆ’,  ‘ವಚನಗಳು’ ಮುಂತಾದ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಕರೆಯಲ್ಪಟ್ಟು ಅದರ ಕುರಿತಾಗಿ ಕೆಲವಷ್ಟು ಮಾಹಿತಿಯನ್ನೂ ಅವುಗಳಲ್ಲಿ ಒಳಗೊಂಡ ಹಗರಣವನ್ನು ಅಂಕೋಲೆಯಲ್ಲಿ ‘ಹಗ್ರಾಣ’ ‘ಹಗಣ’ ಮುಂತಾದ ಆಡುಪದಗಳಿಂದ ಕರೆಯುತ್ತ ಇಂದಿನ ಈ ಯುಗದಲ್ಲಿಯೂ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಹಗರಣಕ್ಕೆಂದೇ ತಯಾರಾದ ವಿಶೇಷ ನಮೂನೆಯ ವೇಷಭೂಷಣಗಳು ಮತ್ತು ‘ಮರ ಮೊಗ’ (ಮರದ ಮುಖವಾಡ) ಬಳಸಿ ಸುಗ್ಗಿ (ಹೋಳಿ), ಸಂಕ್ರಾಂತಿ, ಯುಗಾದಿ ಮುಂತಾದ ಸಂದರ್ಭದಲ್ಲಿ ಜನಪದರಿಂದ ಪ್ರದರ್ಶನವಾಗುವ ಈ ಕಲೆ ಬಹುತೇಕ ಪ್ರದೇಶ ವಿಶಿಷ್ಟವೂ.. ಜಾತಿ ವಿಶಿಷ್ಟವೂ ಆದುದಾಗಿದ್ದು ಈಗಲೂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಪಪ್ರಮಾಣದಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಬಹಳ ಪ್ರಮಾಣದಲ್ಲಿ ಕಂಡುಬರುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಹಾಲಕ್ಕಿ ಒಕ್ಕಲಿಗರು ಮತ್ತು ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಮೊಕ್ಕಲು, ಮುಕ್ರಿ ಮತ್ತು ಅಂಬಿಗ ಸಮುದಾಯಗಳಿಗೆ ಸೇರಿದವರು, ಬಂಡಿ ಹಬ್ಬದ ಸಮಯದಲ್ಲಿ ನಾಡವರು ಈ ಹಗಣವನ್ನು ಆಡಿ ಹಗುರಾಗುತ್ತಾರೆ. ಯುಗಾದಿ ಕಿರಿಸುಗ್ಗಿಯ ಅಂಕೋಲೆ ಬಡಗೇರಿ ಹಾಲಕ್ಕಿ ಹಗರಣ, ಸುಗ್ಗಿ (ಹೋಳಿ ಹುಣ್ಣಿಮೆ) ಹಬ್ಬದ ಬೆಳಂಬಾರದ ಹಾಲಕ್ಕಿ ಹಗರಣ, ಬಂಡಿ ಹಬ್ಬದ ಒಂಬತ್ತು ದಿನಗಳ ಕಾಲ ನಡೆಯುವ ಕೊಗ್ರೆ ನಾಡವ ಮತ್ತಿತರ ಸಮುದಾಯದವರ ಹಗರಣ ಮುಂತಾದ ಪ್ರಮುಖವನ್ನೆಲ್ಲ ಇಲ್ಲಿ ನಾವು ಹೆಸರಿಸಬಹುದು.

ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಇಡೀ ವರ್ಷದುದ್ದಕ್ಕೂ ನಡೆದ ಸಾರ್ವಜನಿಕ ವಿದ್ಯಮಾನಗಳ ಅಣಕು ಪ್ರದರ್ಶನವನ್ನು, ಕೆಲವೊಮ್ಮೆ ನಡೆಯಬಾರದ ಖಾಸಗಿ ಪ್ರಸಂಗಗಳು, ಕಳ್ಳತನಗಳು ನಡೆದು ಊರು ತುಂಬ ಗುಸುಗುಸು ಸುದ್ದಿಯಾದುದನ್ನು ತಮ್ಮದೇ ಆದ ವ್ಯಂಗ್ಯಭರಿತ ವಿನೋದದೊಂದಿಗೆ ಊರ ದೇವರ ಆಡುಕಟ್ಟೆಯ ಮುಂದೆ, ನಿರ್ದಿಷ್ಟ ದಿನದಂದು ಊರಿನ ಬೀದಿಗಳಲ್ಲಿ ಪ್ರಕಟಪಡಿಸುವುದನ್ನು ಹಗಣವೆಂದು ಕರೆಯಲಾಗುತ್ತದೆ.. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸುದ್ದಿಯಾದ ಕೆಲವು ಪ್ರಚಲಿತ ಸುದ್ದಿಗಳೂ ಈ ಹಗಣದ ವಸ್ತುಗಳಾಗುತ್ತವೆ.

ವಿವಿಧ ಮುಖವಾಡ, ಉಡುಗೆ ತೊಡಿಗೆ, ಮತ್ತು ಮಾರುವೇಷ ಹಾಕಿಕೊಂಡು ಮೆರವಣಿಗೆಯಲ್ಲಿ ಚಲಿಸುವುದು. ಮರಗಾಲುಗಳನ್ನು ಕಟ್ಟಿಕೊಂಡು ನಡೆಯುವುದು ಮುಂತಾದವುಗಳೆಲ್ಲ ಸುಗ್ಗಿ ಸಂಕ್ರಾಂತಿ ಯುಗಾದಿಯಂದು ಹಾಲಕ್ಕಿಗಳು ಮತ್ತು ಇನ್ನಿತರರು ಪ್ರದರ್ಶಿಸುವ ಹಗಣಕ್ಕೆ ಸಂಬಂದಿಸಿದವಾಗಿರುತ್ತವೆ. ಈ ಮಾರುವೇಷಗಳಿಗೆ ಯಾವುದೇ ಸಾಂಪ್ರದಾಯಿಕ ಚೌಕಟ್ಟು ಅಥವಾ ಧಾರ್ಮಿಕತೆಯ ಲೇಪವಿಲ್ಲ.

ಸಮಾಜಕ್ಕೆ ಚುರುಕು ಮುಟ್ಟಿಸುವ ಘಟನೆಯನ್ನು ಪ್ರಸ್ತುತಪಡಿಸಬಹುದು. ಇದರ ಜೊತೆಗೆ ಕಲಾವಿದನು ತನಗೆ ಇಷ್ಟಬಂದ ವೇಷವನ್ನು ಹಾಕಬಹುದು.. ಪೋಲೀಸ್, ಕ್ರಿಶ್ಚಿಯನ್ ಪಾದ್ರಿ, ಮುಸ್ಲಿಂ ಮಾರಾಟಗಾರ, ರೈತ, ಕರಡಿ, ಸ್ತ್ರೀ ವೇಷ, ಯಕ್ಷಗಾನ, ಪೌರಾಣಿಕ ಪಾತ್ರಗಳು, ಬಡತನದ ಭೂತ, ಮುಂತಾದ ಹೀಗೆ ಹತ್ತು ಹಲವು ವೈವಿಧ್ಯಮಯವಾದ ವೇಷದೊಂದಿಗೆ ವಿನೋದ, ತಿಳಿವಳಿಕೆ ಮುಂತಾದವನ್ನು ಪ್ರಚುರಪಡಿಸುತ್ತ ವೇಷಗಾರರು ಚಲಿಸುತ್ತಾರೆ..

ಸಮಾಜದ ಎಲ್ಲ ಗಡಿರೇಖೆಗಳನ್ನು ಮೀರಿ ಸಕಲ ಜಾತಿಯವರು ಕೂಡಿ ಸಂತಸದಿಂದ ನಲಿವ ಈ ಹಗಣವನ್ನು ನೋಡಲು ಇಂದಿಗೂ ಹತ್ತಾರು ಸಾವಿರ ಜನ ಸೇರುವುದು ಅಂಕೋಲೆಯ ಒಂದು ಗಮನಾರ್ಹ ಗುರುತು ಅಂತಲೇ ಹೇಳಬಹುದು. ಆದರೆ ನಾನಿಲ್ಲಿ ವಿಶೇಷವಾಗಿ ಹೇಳಲು ಹೊರಟಿರುವುದು ಬಂಡಿಹಬ್ಬದ ಸಮಯದಲ್ಲಿ ಸುತ್ತ ಎಪ್ಪತ್ತು ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆಯ ಜೊತೆಗೇ ನಡೆಯುವ ಹಗಣದ ಬಗ್ಗೆ..
ದೇವ್ರು, ದಿಂಡ್ರು, ಭೂತ, ಬೇತಾಳಕ್ಕೆ ಹೆದರದಿದ್ರೂ ಊರಿನಲ್ಲಿ ಪ್ರತಿಯೊಬ್ಬರೂ ಈ ಹಗಣಕ್ಕೆ ಹೆದರಿ ನೀತಿಮಾರ್ಗದಲ್ಲಿ ನಡೆಯುತ್ತಾರೆ.

ಅನಾದಿಕಾಲದಿಂದ ಮನುಷ್ಯ ಕೆಟ್ಟ ಕೆಲಸದ ಕಡೆಗೆ ವಾಲದೇ.. ಮನ ಒಪ್ಪಿತವಾಗಿ ಅಥವಾ ನಾಲ್ಕು ಜನಕ್ಕೆ ಉಪಕಾರವಾಗಿ ಬದುಕಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಿಜರು ಈ ಹಗಣವನ್ನು ಆಡಿತೋರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರೋ ಏನೋ.. ಹಿಂದೆಲ್ಲ ಊರಿನಲ್ಲಿ ಕೆಲವು ಅನಾಚಾರಿಗಳು ತಮ್ಮ ಹೊಟ್ಟೆಯುರಿಗೆ ಹೆಚ್ಚು ಭತ್ತ ಮಾಡಿದವರ ಬಣಿವೆಗಳಿಗೆ ರಾತ್ರಿ ಹೋಗಿ ಬೆಂಕಿ ಹಾಕಿಟ್ಟು ಬರುವುದು, ಬೇಣದ ಕರಡಕ್ಕೂ ಹೀಗೆಯೇ ಬೆಂಕಿ ಇಡುವುದು. ಹೆಚ್ಚು ಹಾಲು ಕೊಡುವ ಇನ್ಯಾರದೋ ಮನೆಯ ಹಸುವಿನ ಕಾಲು ಕಡಿಯುವುದು ಅಥವಾ ಕೆಚ್ಚಲು ಕತ್ತರಿಸುವುದು, ರಾತ್ರಿ ಇನ್ನೊಬ್ಬರ ಮರದ ಮಾವಿನ ಕಾಯಿ, ತೆಂಗಿನಕಾಯಿ ಕೊಯ್ಯುವುದು, ಇನ್ನೊಬ್ಬರ ಮನೆ ಹೆಣ್ಣುಮಗಳಿಗೆ ಕಣ್ಣು-ಕೈ ಹಾಕುವುದು, ಕೋಳಿ ಕಳುವು ಮಾಡುವುದು ಇಂಥವನ್ನೆಲ್ಲ ಮಾಡುತ್ತಿದ್ದರಂತೆ. 

ಹೀಗೆ ಊರಿಗೆ ಉಪದ್ರವಾದವರ ಮಾನ ಮರ್ಯಾದೆಯನ್ನು ಹಗರಣದ ದಿನ ಅವರ ಮತ್ತವರ ಮಕ್ಕಳು ಮರಿ ಸಂಬಂಧಿಕರ ಮುಂದೆಯೇ ಅವರದ್ದೇ ಹೆಸರಿನಲ್ಲೇ ಊರಿನ ಗಟ್ಟಿಗನೊಬ್ಬ ಹಗಣ ಕಟ್ಟಿ ಹರಾಜು ಮಾಡುತ್ತಾನೆ. ಮರುದಿನದಿಂದ ಮುಖ ಎತ್ತಿ ತಿರುಗದ, ಯಾರೂ ಮಾತೇ ಆಡಿಸದ,ಊರ ಕಟ್ಟೆಯ ಮೇಲೆ ನಾಕು ಜನ ಕುಂತಲ್ಲಿ ಹೋಗಿ ಹರಟೆ ಹೊಡೆಯಲಾಗದ ಪರಿಸ್ಥಿತಿಗೆ ಅವನನ್ನು ತಂದುಬಿಡುತ್ತಾರೆ..

ಈ ಕಾರಣಕ್ಕಾಗಿ ಹಿಂದೆ ಹೆಚ್ಚಾಗಿ ಯಾವ ತಪ್ಪುತಡೆಗಳೂ ನಡೆಯುತ್ತಿರಲಿಲ್ಲ.. ಅಂಥಾ ಕಾರ್ಯಕ್ಕೆಳಸುವವನ ಹೃದಯ ಬುದ್ದಿ ಎರಡೂ ಅವನ ಎದೆ ಮೇಲೇ ಕುಳಿತು ಆಗಾಗ ‘ಸಿಕ್ಕಾಬಿದ್ರೆ… ಸುದ್ದಿಯಾದ್ರೆ… ಊರ ಕಟ್ಟೆ ಮುಂದೆ ಹಗಣ ಕಟ್ಟೂರ ಹಾಂ!!’ ಎಂದು ಅವನನ್ನು ಎಚ್ಚರಿಸುತ್ತಿದ್ದವು.. ಮತ್ತು ಸದಾ ಹೊಕ್ಕುಬಳಕೆಯ ಮನೆಗಳೇ ಇರುವ ಊರುಗಳಲ್ಲಿ ಅನಾಚಾರದ ಕೆಲಸ ಮಾಡಿ ಮುಚ್ಚಿಡಲೂ ಸಾಧ್ಯವಿರಲಿಲ್ಲ.. ಅದು ಇಂದಿಗೂ ಸಾದ್ಯವಿಲ್ಲ.. ಜನಪದ ಭಯ ಭಕ್ತಿಯ ದೈವಗಳು ಮತ್ತು ಹಗರಣಗಳು ಅಂದಿನಿಂದ ಇಂದಿನವರೆಗೂ ನೀತಿಮಾರ್ಗದಲ್ಲಿ ನಡೆವ, ತನ್ಮೂಲಕ ನಾಲ್ಕು ಜನಕ್ಕೆ ಉಪಕಾರಿಯಾಗಿಯೇ ಇರುವ ಮನಸ್ಥಿತಿಯ ಮನುಜನನ್ನು ನಮಗೆ ಕೊಟ್ಟಿವೆ. ಕೊಡುತ್ತಲಿವೆ.

ಈ ಹಿಂದೆ ಹೇಳಿದಂತೆ ಬಂಡಿಹಬ್ಬದ ಸಮಯದಲ್ಲಿ ಆಡುಕಟ್ಟೆಯ ಮುಂದೆ ಮೊದಲ ಮುಖವಾಡ ಮತ್ತು ಕೊನೆಯ ಮುಖವಾಡ ಆಡಿಸುವ ನಡುವೆ ನಡೆವ ಹಗರಣದಲ್ಲಿ ಮೊದಲ ಹಗರಣ ಬೇಸಾಯದ ಕುರಿತಾಗಿ ಇರುತ್ತದೆ. (ಬಂಡಿಹಬ್ಬ ನಡೆಯುವುದು ಬಿತ್ತನೆಯ ಪೂರ್ವದಲ್ಲಿ) ಊಳುವವ, ಎತ್ತುಗಳು ಎಲ್ಲವೂ ಮನುಷ್ಯರೇ ಆಗಿ ಬೀಜ ಬಿತ್ತುವುದು, ಹಕ್ಕಿಯಂತೆ ಅಭಿನಯಿಸಿ ಬೀಜ ತಿನ್ನಲು ಬರುವುದು.. ಆ ಹಕ್ಕಿಯನ್ನು ಇನ್ನೊಬ್ಬ ನಾನಾ ನಮೂನೆಯ ತಮಾಷೆಯ ಆಡು ನುಡಿಗಳನ್ನು ಅನ್ನುತ್ತ ಓಡಿಸುವುದು. ಮುಂತಾದವೆಲ್ಲ ನಡೆದ ಮೇಲೆ ಊರುಕೇರಿಯ ವಿದ್ಯಮಾನದ ಅಣಕು ನಡೆಯುತ್ತದೆ..

ಇಲ್ಲಿ ಯಾವ ಜಾತಿಯವರೂ ಕೂಡ ಯಾರನ್ನು ಬೇಕಿದ್ದರೂ ಬಡವ ಬಲ್ಲಿದರೆನ್ನದೇ ಕಳಸದ ಮುಂದೆ ಹಳಿಯಲು ಮುಕ್ತ ಅವಕಾಶವಿರುತ್ತದೆ. ಗೇಲಿಗೆ ಒಳಗಾದವರು ವೀಕ್ಷಿಸುವ ಜನಸಮುದಾಯದ ನಡುವೆ ಅಲ್ಲೇ ಇದ್ದರೂ ಕೋಪಗೊಂಡು ಜಗಳಕ್ಕೆ ಬರುವಂತಿಲ್ಲ. ಮುಯ್ಯಿ ತೀರಿಸಬೇಕು ಅನ್ನಿಸಿದರೆ ಅದೇ ದಿನ  ಅಥವಾ ಮುಂದಿನ ದಿನಗಳಲ್ಲಿ ತಮ್ಮನ್ನು ಗೇಲಿ ಮಾಡಿದವರ ಅಥವಾ ಅವರ ಬಳಗದವರ ಕುರಿತು ಒಂದು ಸಂದರ್ಭ ಸೃಷ್ಟಿಸಿ ಅತಿರಂಜಿಸಿ ಗೇಲಿಮಾಡಬಹುದು.. ಮತ್ತಿದನ್ನು ಅಲ್ಲಿಗಲ್ಲಿಗೆ ಬಿಟ್ಟುಬಿಡಬೇಕು.. ದ್ವೇಷ ಸಾಧಿಸುವಂತಿಲ್ಲ.. ಈ ಹಗಣ ಪರಿಚಿತ ವ್ಯಕ್ತಿಗಳಿಗೆ ಸಂಬಂಧಿಸಿದ್ದೇ ಆಗಿರುವ ಕಾರಣ ಮನರಂಜಿಸಿಕೊಳ್ಳಲು ಸುತ್ತ ಹತ್ತು ಹಳ್ಳಿಯ ಜನ ಲಗುಬಗೆಯಿಂದ ಸೇರುತ್ತಾರೆ.

ಹೀಗೆ ಸೇಸೆ ಹಾಕಿದ ನಂತರದ ಹನ್ನೆರಡು ದಿನ ಅಥವಾ ಒಂಭತ್ತು ದಿನದ ಬಂಡಿಹಬ್ಬದ ಅವಧಿಯಲ್ಲಿ ಹಗರಣಗಳು ನಡೆದು ನಂತರ ಬಂಡಿಹಬ್ಬದ ಮುನ್ನಾದಿನ ವಿಶೇಷ ಹಗರಣ ನಡೆಯುತ್ತದೆ. ಆ ರಾತ್ರಿ ಇಡೀ ದಿನ ಜಾಗರಣೆ ಇರುವ ಕಾರಣಕ್ಕೆ ‘ಜಾಗರ’ವೆಂದು ಕರೆಯುತ್ತಾರೆ. ಕೆಂಡದ ಕೊಂಡವನ್ನು ತಯಾರು ಮಾಡಿ ‘ಮಹಾಸತಿ’ ಅದನ್ನು ಹಾಯುವ ವಿಧಿ ನಡೆಯುತ್ತದೆ. ಸ್ತ್ರೀವೇಷ ಧಾರಿಯೊಬ್ಬ ಕೈಯಲ್ಲಿ ನಿಂಬೆ ಹಣ್ಣು ಹಾರಿಸುತ್ತ ಕೊಂಡದ ಸುತ್ತ ಆವೇಶದಿಂದ ನರ್ತಿಸುತ್ತ ಸತಿಸಹಗಮನ ರೂಪಕವನ್ನು ಅಭಿನಯಿಸುತ್ತಕೊಂಡ ಹಾಯುತ್ತಾನೆ. ಅವನ ನಂತರದಲ್ಲಿ ಭಕ್ತಾದಿಗಳು.. ಹರಕೆ ಕಟ್ಟಿಕೊಂಡವರು.. ಕೊಂಡ ಹಾಯುತ್ತಾರೆ.

ನಂತರದ ಹಗಣವಾಗಿ ಹುಲಿದೇವ ಬಂದು ದನಮುರಿಯುವುದನ್ನು ಒಬ್ಬನು ಹುಲಿಯಾಗಿ ಇನ್ನೊಬ್ಬ ದನವಾಗಿ ಅಭಿನಯಿಸಲಾಗುತ್ತದೆ.. ಹುಲಿ ದನವನ್ನು ಮುರಿದ ನಂತರ ದನ ಕೊಯ್ಯುವ ಸಮುದಾಯದವರು ಬಂದು ಆ ದನದ ಮಾಂಸ ಮತ್ತು ಚರ್ಮವನ್ನು ಕತ್ತರಿಸಿ ಒಯ್ಯುವ ಅಭಿನಯ ಕೂಡ ನಡೆಯುತ್ತದೆ. ನಂತರ ದೇವರನ್ನು ಗೇಲಿಮಾಡುವ ಹಗಣ.. ನಕಲಿ ಕಳಸ ಹೊತ್ತವರು, ಅಪ್ಪಣೆ ಪ್ರಸಾದ ಪರಿಹಾರ ಕೇಳುವವರು, ಬಾರ (ದೇವರು ಮೈ ಮೇಲೆ) ಬರುವುದು ಮುಂತಾದವುಗಳ ಅಭಿನಯ ನಡೆಯುತ್ತದೆ. ಇಲ್ಲಿ ಅತಿರಂಜನೆ, ಕ್ಷುಲ್ಲಕ ಕೋರಿಕೆ, ಅಸಂಬದ್ದತೆ ಎಲ್ಲವೂ ಇದ್ದು ನಕ್ಕೂ ನಕ್ಕೂ ನೋಡುವವರ ಹೊಟ್ಟೆ ಹುಣ್ಣಾಗುತ್ತದೆ.

ಊರಿಂದ ಬಹುದೂರದಲ್ಲಿ ನೌಕರಿ ಮಾಡುತ್ತಿರುವ ಜನ ಕೂಡ ಇವೆಲ್ಲ ಒಕ್ಕೂಟದ ಖುಷಿಯ ಕಾರಣಕ್ಕಾಗಿ ಬಂಡಿಹಬ್ಬದ ದಿನ ಊರ ಹಾದಿ ಹಿಡಿಯುವುದನ್ನು ತಪ್ಪಿಸುವುದಿಲ್ಲ.. ಮತ್ತು ತಮ್ಮ ಜಾತಿ, ಹುದ್ದೆ, ದೊಡ್ಡಸ್ತಿಕೆ ಮುಂತಾದ ಎಲ್ಲ ಹಮ್ಮುಗಳನ್ನು ಬದಿಗಿಟ್ಟು ಹಬ್ಬದ ಈ ಹಗರಣದಲ್ಲಿ ತಾವೂ ಒಂದು ಪಾತ್ರವಾಗಿ ಅಭಿನಯಿಸುತ್ತ ಅಥವಾ ನೋಡುಗರಾಗಿ.. ಪ್ರೋತ್ಸಾಹಕರಾಗಿ ಮುಂದಿನ ಸಾಲಿನಲ್ಲೇ ಹಾಜರಿರುತ್ತ ಈ ಜನಪದ ಕಲೆಯ ಮುಂದುವರಿಕೆಗೆ ಇಂದಿಗೂ ತಮ್ಮ ಪ್ರೀತಿ ಸಲ್ಲಿಸುತ್ತಿದ್ದಾರೆ.. ಮತ್ತು ಅವರು ತಮ್ಮ ಬದುಕಿನುದ್ದಕ್ಕೂ ಶಿಷ್ಟಾಚಾರವನ್ನು ಅಳವಡಿಸಿಕೊಳ್ಳಲು ಈ ಸಂಪ್ರದಾಯ, ಸೇವೆ, ಅನುಕರಣೆಗಳು ಅವರಿಗೆ ಸಹಾಯವನ್ನೂ ಮಾಡಿವೆ.

| ಮುಂದಿನ ಸಂಚಿಕೆಯಲ್ಲಿ |


March 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kiran Bhat

    ‘ಹಗಣ’.. ಸಾಮಾಜಿಕ ಅನಿಷ್ಟಗಳ ವಿರುದ್ಧ ಕಲಾತ್ಮಕ ಪ್ರತಿಭಟನೆ.
    ಕೆಲವು ಬಾರಿ ನೇರವಾದಿ ಹೇಳಲಾಗದ್ದನ್ನು ಹೇಳೋದಕ್ಕೊಂದು ಕಲಾದಾರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: