ಜಿ ಎನ್ ನಾಗರಾಜ್ ಅವರು’ ಅವಧಿ’ಯ ತಮ್ಮ ಅಂಕಣದಲ್ಲಿ ಸಿದ್ದಲಿಂಗಯ್ಯ ಫಿನಾಮೆನಾ ಬಗ್ಗೆ ಬರೆದಿದ್ದರು.
ಅದು ಇಲ್ಲಿದೆ– ಕ್ಲಿಕ್ಕಿಸಿ ಭಾಗ ೧ ಭಾಗ ೨
ಎರಡು ಕಂತುಗಳಲ್ಲಿ ವಿವರವಾಗಿ ಪ್ರಕಟವಾದ ಈ ಬರಹಕ್ಕೆ ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ-

ಶಿವಾಜಿ ಗಣೇಶನ್
ಕಾಮ್ರೇಡ್ ಜಿ.ಎನ್. ನಾಗರಾಜ್ ಅವರು ಸಿದ್ದಲಿಂಗಯ್ಯ ಅವರಿಂದ ಪ್ರೇರಿತರಾದ ಬಗೆಗೆ, ಮತ್ತು ಎರಡು ದಿನಗಳ ಹಿಂದೆ ಅವರ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಂಘಟನೆ ಕುರಿತಂತೆ ವಸ್ತುನಿಷ್ಟವಾದ ಎರಡು ಲೇಖನವನ್ನು ‘ಅವಧಿ’ಯಲ್ಲಿ ಬರೆದರು. ಅದನ್ನೇ ಫೇಸ್ ಬುಕ್ ನಲ್ಲಿಯೂ ಹಾಕಿದರು.
ಸಿದ್ದಲಿಂಗಯ್ಯನವರ ನುಡಿನಮನದ ದಿನ ಅವರ ಕೊನೆಯ ಸಮಗ್ರ ಕಾವ್ಯವನ್ನು ಮುಖ್ಯಮಂತ್ರಿ ಅವರಿಗೆ ಅರ್ಪಿಸಿದ್ದನ್ನು ಮತ್ತು ಅವರ ಕುಟುಂಬ ಹಾಗು ಆಪ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರಿಂದಲೇ ಬಿಡುಗಡೆ ಆದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದಲಿಂಗಯ್ಯ ಅವರು ತಮ್ಮ ಬದುಕಿನುದ್ದಕ್ಕೂ ನಂಬಿಕೊಂಡು ಬಂದ ವಿಚಾರಗಳಿಗೆ ಇದು ವಿರುದ್ಧವಾದ ನಡೆ ಎನ್ನುವ ಅಸಮಾಧಾನ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲಿ ಸಿದ್ದಲಿಂಗಯ್ಯನವರ ಬಗೆಗೆ ಬೇರೆಯವಂತೆ ವಿಷಕಾರಿರುವ ಲವಲೇಶವೂ ಇಲ್ಲ.
ಒಬ್ಬ ಲೇಖಕ ತನ್ನ ಕೃತಿಯನ್ನು ಯಾರಿಗೆ ಅರ್ಪಿಸಿದ್ದಾರೆ ಎನ್ನುವುದು ಅವರ ವೈಯಕ್ತಿಕ ವಿಚಾರ ಎನ್ನುವುದು ಸತ್ಯ. ಆದರೆ ಸಿದ್ದಲಿಂಗಯ್ಯ ಅವರ ವಿಚಾರವನ್ನು ಬಲ್ಲವರಿಗೆ ಅಚ್ಚರಿ ಮತ್ತು ಬೇಸರ ಆಗಿರುವುದನ್ನು ವ್ಯಕ್ತಪಡಸಿದ್ದಾರೆ. ಸಿದ್ದಲಿಂಗಯ್ಯ ಅವರು ಈಗ ನಮ್ಮ ನಡುವೆ ಇಲ್ಲವಾದ ಕಾರಣ ಅದಕ್ಕೀಗ ಉತ್ತರ ಸಿಗುವುದಿಲ್ಲ. ಇರಲಿ ಕಾಮ್ರೇಡ್ ನಾಗರಾಜ್ ಅವರ ಪ್ರಾಮಾಣಿಕ ಅನಿಸಿಕೆ ಬಗೆಗೆ ನನಗೆ ಗೌರವ ಇದೆ. ಆ ಪ್ರಶ್ನೆಗೆ ನಮ್ಮಲ್ಲೇ ಸಿದ್ದಲಿಂಗಯ್ಯನವರ ನಡೆ ನುಡಿ ಬರಹ ಇತ್ಯಾದಿಯನ್ನು ಅವಲೋಕಿಸಿದ ಸಾಧ್ಯವಾದಷ್ಟು ಅರ್ಥ ಮಾಡಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳೋಣ.

ಇನ್ನು ನಾನು ಮೊದಲೇ ಗಮನಿಸಿದಂತೆ ಸಿದ್ದಲಿಂಗಯ್ಯನವರ ನಿಲುವು, ಬದುಕು ಬರಹ ಇತ್ಯಾದಿ ಕುರಿತಂತೆ ಮೂರು ರೀತಿಯ ಜನರು ಅವರ ಸಾವನ್ನೂ ಸಂಭ್ರಮಿಸುವ ರೀತಿಯಲ್ಲಿ ವ್ಯಂಗ್ಯ, ಕುಹಕ, ಟೀಕೆ ಮತ್ತು ಅಸೂಯೆ ವ್ಯಕ್ತಪಡಿಸುತ್ತಿದ್ದಾರೆ. ಟೀಕೆಗೆ ಸಿದ್ದಲಿಂಗಯ್ಯ ಅತೀತರೇನಲ್ಲ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಆ ಟೀಕೆಗಳನ್ನು ಅವರನ್ನು ಬಲ್ಲವರೂ ಒಪ್ಪುವಂತಿದ್ದರೆ ಸಂತೋಷ. ಸಿದ್ದಲಿಂಗಯ್ಯನವರನ್ನು ಅಂತ್ಯಕ್ರಿಯೆಗೆ ಕಲಾಗ್ರಾಮ ಆಯ್ಕೆ ಮಾಡಿದ್ದು ಸೇರಿದಂತೆ ಅನೇಕ ಆಯಾಮಗಳಲ್ಲಿ ಟೀಕೆ ಮಾಡಲಾಯಿತು.
ಇಂದು ಕವಿ ಎನಿಸಿಕೊಂಡ ಯುವಕನೊಬ್ಬ ‘ಅವರೇ ಅವರ ಅಂತ್ಯಕ್ರಿಯೆಯನ್ನೂ ಮಾಡಿದರಂತೆ’ ಎಂದಿದ್ದಾನೆ. ಅಂದರೆ ಏನು? ಅಂದರೆ ಒಳಾರ್ಥ ಬಿಜೆಪಿ ಸರ್ಕಾರವೇ ರಾಷ್ಟ್ರಗೌರವದೊಡನೆ ಅಂತ್ಯಕ್ರಿಯೆ ನಡೆಸಿದೆ ಎನ್ನುವುದಷ್ಟೇ. ಸಿದ್ದಲಿಂಗಯ್ಯ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದವರು. ನಾಡೋಜ ಪ್ರಶಸ್ತಿ ಪುರಸ್ಕೃತರು. ಅದಕ್ಕಿಂತ ಮುಖ್ಯವಾಗಿ ಅವರೊಬ್ಬ ದಲಿತ ಚಳುವಳಿಗೆ ಚಲನಾ ಶಕ್ತಿ ನೀಡಿದ ಕ್ರಾಂತಿಕಾರಿ ಕವಿ ಎನ್ನುವ ವಿವೇಕವೂ ಇಲ್ಲದಂತೆ ಫೇಸ್ ಬುಕ್ನಲ್ಲಿ ತಮ್ಮ ಬಾಲಿಷವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.
ಇರಲಿ ಇಂತಹ ಟೀಕೆಗಳು ಸಹಾ ಕವಿಯ ಬದುಕು ಬರಹವನ್ನು ಜೀವಂತವಾಗಿರಿಸುವುದು ಅವರ ಬದುಕು ಮತ್ತು ಬರವಣಿಗೆಯ ಶಕ್ತಿ ಎಂದು ಪರಿಗಣಿಸೋಣ. ಇಂತಹ ಕುಹಕ, ಅಸೂಯೆ ಪಡುವ ಶನಿಸಂತತಿ ಮಹಾದೇವ ಅಂತಹವರನ್ನೂ ಬಿಟ್ಟಿಲ್ಲ. ಎರಡು ವರ್ಷಗಳ ಹಿಂದೆ ಮಹಾದೇವ ಏನು ಎತ್ತ ಎಂದು ಗೊತ್ತಿಲ್ಲದ ಬಿಎಸ್ಪಿಯ ಅವಿವೇಕಿ ಹುಡುಗನೊಬ್ಬ ಅವರನ್ನು ಗಂಜಿಗಿರಾಕಿ ಎಂದು ಬರೆದಿದ್ದ.

ಸಿದ್ದಲಿಂಗಯ್ಯ ಅವರ ನಡೆಯಲ್ಲಿ ಕೆಲವು ವರ್ಷಗಳಿಂದ ಆಗಿರುವ ಬದಲಾವಣೆಗೆ ನಿಜವಾದ ಕಾರಣವೇನು ಎನ್ನುವ ನಿಜವಾದ ರಹಸ್ಯ ಅವರ ಆಪ್ತರಾಗಿದ್ದ ನನಗೂ ಗೊತ್ತಿಲ್ಲ. ಆದರೆ ಅವರಿಗೆ ಎಷ್ಟೇ ರಾಜಕೀಐ ಅಧಿಕಾರ ಸಿಕ್ಕರೂ ಅವರೆಂದೂ ಹಣಕಾಸು ಮತ್ತು ಆಸ್ತಿಪಾಸಿ ಮಾಡಿಕೊಂಡರೆಂಬ ವಿಷಯದಲ್ಲಿ ಎಂದೂ ಭ್ರಷ್ಟರಾಗಲಿಲ್ಲ ಎನ್ನುವುದನ್ನು ನಾನು ಮಾತ್ರವಲ್ಲ ಅವರನ್ನು ಹತ್ತಿರದಿಂದ ಬಲ್ಲ ಅನೇಕರಿಗೆ ಚೆನ್ನಾಗಿ ಗೊತ್ತಿದೆ. ಅದು ಅವರ ಬಗೆಗೆ ನಮ್ಮಂತಹವರಿಗೆ ಹೆಮ್ಮೆ ಎನಿಸುತ್ತದೆ.
ಈ ಹಿನ್ನೆಲೆಯಲ್ಲಿ ಅವರ ವಾಸ್ತವ ಬದುಕಿನ ಕಡೆ ನನ್ನ ಮನಸ್ಸು ಇಣುಕಿ ನೋಡಿದಾಗ ಆತಂಕ ಕಾಡುತ್ತಿದೆ. ಅವರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ನಿವೃತ್ತರಾದ್ದರಿಂದ ಯುಜಿಸಿ ವೇತನದನ್ವಯ ಪಡೆಯುತ್ತಿದ್ದ ಪೆನ್ಷನ್ ಅವರ ಸಂಸಾರ ಸರಿದೂಗಿಸಲು ಸಾಕಾಗುತ್ತಿತ್ತು ಎನಿಸುತ್ತದೆ. ಆದರೆ ಆ ಪನ್ಷನ್ ನಲ್ಲಿ ಅರ್ಧಭಾಗ ಈಗ ಅವರ ಶ್ರೀಮತಿ ಅವರಿಗೆ ಬರಬಹುದು. ಅವರ ಮಗ ಈಗಷ್ಟೇ ಡಿಗ್ರಿ ಮುಗಿಸಿದ್ದಾನೆ. ಇನ್ನೂ ಓದಬೇಕು. ಉದ್ಯೋಗ ಸಿಗಬೇಕು.
ಮಗಳು ಮತ್ತು ಅಳಿಯ ವೈದ್ಯದಂಪತಿಗಳು. ಅವರು ನೆರವಾಗುವುದರಲ್ಲಿ ಸಂಶಯವಿಲ್ಲ. ಆದರೆ ಹಲವು ರಾಜಕೀಯ ಅಧಿಕಾರ ನಡೆಸಿದರೂ, ಮುಂದಿನ ದಿನಗಳಲ್ಲಿನ ಸಿದ್ದಲಿಂಗಯ್ಯನವರ ಕುಟುಂಬ ಆರ್ಥಿಕ ಸ್ಥಿತಿ, ಕುಟುಂಬದ ನಿವರ್ಹಹಣೆ ಹೇಗೆ ನಡೆಯುತ್ತದೆ ಎನ್ನುವುದನ್ನು ನೆನಪಿಸಿಕೊಂಡರೆ ಸಿದ್ದಲಿಂಗಯ್ಯನವರನ್ನು ವೈಯಕ್ತಿಕವಾಗಿ ಬಲ್ಲ ನನಗೆ ಬೇಸರವಾಗುತ್ತದೆ. ಈ ಸತ್ಯವನ್ನು ಯಾರಿಗೆ ಹೇಗೆ ನಂಬಿಸುವುದು?






0 Comments