ಸಂವರ್ಥ ಸಾಹಿಲ್
ಆವಾಗ ನಾನಿನ್ನೂ ಶಾಲೆಗೆ ಹೋಗುತ್ತಿದ್ದ ಬಾಲಕ. ಪಠ್ಯ ಪುಸ್ತಕಗಳಲ್ಲಿ ಶಿವರಾಮ ಕಾರಂತರ ಹೆಸರು ಓದಿದ್ದೆ ಮತ್ತು ಆ ದಿನಗಳಲ್ಲಿ ಕಾರಂತರು ನಮ್ಮ ಊರಿಗೆ ಹತ್ತಿರದಲ್ಲೇ ಇರುತ್ತಾರೆ ಎಂಬ ಬಗ್ಗೆ ಒಂದು ವಿಚಿತ್ರವಾದ ಹೆಮ್ಮೆ ನನಗೆ.
ಆದರೆ ಸುಮಾರು ತೊಂಬತ್ತರ ದಶಕದ ನಡುವಿನಲ್ಲಿ ಆ ಅಭಿಮಾನ ಜಾರಿ ಒಂದು ಬಗೆಯ ಸಿಟ್ಟು ಮತ್ತು ದ್ವೇಷ ಹುಟ್ಟಿಕೊಂಡಿತು.
ಆಗಿದ್ದು ಇಷ್ಟೇ; ಶಿವರಾಮ ಕಾರಂತರ ಓದುವ ಆಟ ಪಠ್ಯಪುಸ್ತಕವಾಗಿ ಜಾರಿಯಾಗಿತ್ತು ಮತ್ತು ಅದರಲ್ಲಿ ‘ಲಟಪಟ ಆಚಾರಿಯ ದಿನಚರಿ’ ಎಂಬ ಒಂದು ಪಾಠವಿತ್ತು. ಅದರ ವಿರುದ್ಧ ವಿಶ್ವಕರ್ಮ ಸಮುದಾಯ ‘ಇದು ನಮಗೆ ಮಾಡಿದ ಅವಮಾನ’ ಎನ್ನುತ್ತಾ ಬೃಹತ್ ಹೋರಾಟ ನೆಡೆಸಿತು. ನಾನು ಆಗಿನ್ನೂ ಐದನೇ ಕ್ಲಾಸ್ ಇರಬೇಕು. ವಿಶ್ವಕರ್ಮ ಸಮುದಾಯದ ಸಂಘ ಸಂಘಟನೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ (ಈಗಲೂ ತೊಡಗಿಸಿಕೊಂಡಿರುವ) ತಂದೆ ಈ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಅವರ ಸ್ನೇಹಿತರು, ಸಂಘದ ಸದಸ್ಯರು ಆಗೊಮ್ಮೆ ಈಗೊಮ್ಮೆ ಮನೆಗೆ ಬರುತ್ತಿದ್ದರು ಮತ್ತು ಕಾರಂತರ ಕುರಿತಾಗಿ ಬಹಳ ಸಿಟ್ಟಿನಿಂದ ಮಾತನಾಡುತ್ತಿದ್ದರು. ನಾನು ಅವರ ಮಾತುಗಳನ್ನು ಕೇಳಿಸಿಕೊಂಡು ಕಾರಂತರು ನಮಗೇನೋ ಅನ್ಯಾಯ ಮಾಡಿದ್ದಾರೆ ಎಂದು ಅಂದುಕೊಂಡು ಅವರನ್ನು ದ್ವೇಷಿಸತೊಡಗಿದೆ.

ಆ ಹೋರಾಟದ ಸಲುವಾಗಿ ನೆಡೆದ ಒಂದೆರಡು ಮೀಟಿಂಗ್ ಗೆ ನಾನು ಸುಮ್ಮನೆ ತಂದೆ ಜೊತೆ ಹೋಗಿದ್ದೆ. ಅಲ್ಲಿ ಜನರ ಕಣ್ಣಲ್ಲಿ ಕೆಂಡ ಕಂಡು ಕಾರಂತರು ಏನೋ ಅಕ್ಷಮ್ಯ ಕೆಲಸ ಮಾಡಿದ್ದಾರೆ ಎಂದು ಭಾವಿಸಿದ್ದೆ. ಅದು ನನ್ನ ಒಳಗಿನ ಸಿಟ್ಟು ದ್ವೇಷವನ್ನು ದ್ವಿಗುಣಗೊಳಿಸಿತ್ತು. ಅದೊಂದು ದಿನ ಕಾರಂತರ ಊರಲ್ಲಿ ವಿಶ್ವಕರ್ಮ ಸಮುದಾಯದವರು ಒಂದು ಬೃಹತ್ ಮೆರವಣಿಗೆ ತೆಗೆದರು, ಅಲ್ಲಿ ಕಾರಂತರ ವಿರುದ್ಧ ಘೋಷಣೆ ಕೂಗಿದರು. ನಾನು ಆ ಮೆರವಣಿಗೆಗೆ ಬರುತ್ತೇನೆ ಎಂದು ನಾನು ಹಠ ಹಿಡಿದಿದ್ದೆ. ಆದರೆ ತಂದೆ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಅಂತೂ ಇಂತೂ ಕೊನೆಗೂ ಓದುವ ಆಟ ಕೈಬಿಡಲಾಯಿತು. ವಿಶ್ವಕರ್ಮರು ಹಿಗ್ಗಿದರು!
ಆ ದಿನಗಳಲ್ಲೆ ಅಮ್ಮ ಒಂದು ಬಾರಿ ಹೇಳಿದ್ದರು, “ಮೊದಲು ಇವರಿಗೆ (ನನ್ನ ತಂದೆಗೆ) ಕಾರಂತರು ಅಂದ್ರೆ ಜೀವ. ಈಗ ಹೀಗೆ ಪ್ರತಿಭಟನೆ ಮಾಡುತ್ತಿದ್ದಾರೆ,” ಎಂದು. ನನಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಅದನ್ನು ಕೇಳಿ ಏನೆಂದು ಆಲೋಚಿಸುವ ತಾಳ್ಮೆಯೂ ನನ್ನ ಬಾಲಿಶ ಸಿಟ್ಟಿಗೆ ಇರಲಿಲ್ಲ.
ಅದು ಸರಿಯಾಗಿ ಅರ್ಥವಾಗಿದ್ದು ಮುಂದೆ ನಾನು ಹತ್ತನೇ ತರಗತಿಯಲ್ಲಿ ಇರುವಾಗ ಮನೆಯ ಅಟ್ಟವೇರಿದಾಗ. ಅಲ್ಲಿ ಒಂದು ಚೀಲದಲ್ಲಿ ಕಾರಂತರ ಹಲವಾರು ಕಾದಂಬರಿಗಳಿದ್ದವು. ಅವುಗಳ ಜೊತೆಗೆ ಒಂದಿಷ್ಟು ಭೈರಪ್ಪ ಅವರ ಕಾದಂಬರಿಗಳು. ಅಷ್ಟು ಹೊತ್ತಿಗೆ ನಾನು ‘ಜಾತಿ ಮೀರಿ ನಿಲ್ಲಬೇಕು’ ಎಂಬ ಅರಿವು ಅದು ಹೇಗೋ ಮೂಡಿಸಿಕೊಂಡಿದ್ದೆ. ಕಾರಂತರ ಬಗ್ಗೆ ಸಿಟ್ಟು ಇಳಿದಿತ್ತು ಮತ್ತು ಹಿಂದಿದ್ದ ದ್ವೇಷದ ಬಗ್ಗೆ ನನಗೇ ನಗು ಬರುತಿತ್ತು.
ಆ ಪುಸ್ತಕಗಳನ್ನೆಲ್ಲಾ ಕೆಳಗಿಳಿಸಿದೆ.
ಅಮ್ಮನ ಹತ್ತಿರ ಕೇಳಿದಾಗ ಹೇಳಿದರು, “ಮೊದಲೆಲ್ಲ ಏನು ಕಾರಂತರನ್ನು ಓದುದೇ ಓದುದು. ಆಮೇಲೆ ದೊಡ್ಡಮ್ಮ ಮತ್ತು ಇವರದ್ದು ಅದರ ಬಗ್ಗೆ ಗಂಟೆಗಟ್ಟಲೆ ಚರ್ಚೆ.” ದೊಡ್ಡಮ್ಮ ಅಂದರೆ ನನ್ನ ತಂದೆಯ ಕಸಿನ್ ನ ಹೆಂಡತಿ. ಮೈಸೂರ್ ಮೂಲದ ಅವರು ಪುಸ್ತಕ ಪ್ರೇಮಿ. ಅದು ನನಗೆ ಆ ಹೊತ್ತಿಗಾಗಲೇ ತಿಳಿದಿತ್ತು. ಆದರೆ ತಂದೆ ಹೀಗೆ ಕತೆ ಕಾದಂಬರಿ ಓದುವವರೆಂದು ತಿಳಿದಿರಲಿಲ್ಲ, ಅದರಲ್ಲೂ ಕಾರಂತರ ಕಾದಂಬರಿ! ಅಂದು ಸಂಜೆ ಅಪ್ಪನ ಬಳಿ ಕೇಳಿದಾಗ ಹೇಳಿದರು, “ಕಾರಂತರು ಬಹು ದೊಡ್ಡ ಬರಹಗಾರರು. ಆದರೆ ಅವರು ಓದುವ ಆಟದಲ್ಲಿ ಹಾಗೆ ಬರೆಯಬಾರದಿತ್ತು.” ಆ ಸಿಟ್ಟಿನಲ್ಲೇ ಅವರ ಪುಸ್ತಕ ಎಲ್ಲ ಅಟ್ಟಕ್ಕೆ ತಳ್ಳಿದ್ದಾ ಎಂದು ಕೇಳಿದರೆ ಅಪ್ಪ, “ಇಲ್ಲ. ಅದು ಓದುವ ಆಟಕ್ಕಿಂತ ಮುಂಚೆಯೇ ಅಟ್ಟದ ಮೇಲೆ ಹಾಕಿದ್ದು. ಯಾಕೋ ಓದುವ ಹುಚ್ಚು ಸ್ವಲ್ಪ ಇಳಿದು ಹೋಯಿತು.”
ಶಿಕ್ಷಣ ಪಡೆದ ಮೊದಲನೇ ತಲೆಮಾರಿನವರಾದ ತಂದೆ ಅಷ್ಟೆಲ್ಲ ಶಿಕ್ಷಣ ಇಲ್ಲದ ವಿಶ್ವಕರ್ಮ ಸಮುದಾಯದ ಏಳ್ಗೆಗಾಗಿ ಸಂಘ ಸಂಸ್ಥೆ ಸೇರಿ ಅದಕ್ಕೆ ಹೆಚ್ಚು ಸಮಯ ಮೀಸಲಿಡಲಾರಂಭಿಸಿದ್ದರು. ಮತ್ತು ಹೆಚ್ಚಿನ ವಿಶ್ವಕರ್ಮರಂತೆ “ನಾವು ಬ್ರಾಹ್ಮಣರು” ಎಂದು ಮಾತ್ರವಲ್ಲ, ‘ಬ್ರಾಹ್ಮಣರಿಗಿಂತ ಶ್ರೇಷ್ಠರು,” ಎಂದು ಇವತ್ತಿಗೂ ನಂಬಿದ್ದಾರೆ.
ಈ ಅಸ್ಮಿತೆ ಪ್ರೇಮ ಮತ್ತು ಕಾರಂತರ ಕಾದಂಬರಿಯ ಬಗೆಗಿನ ಮೆಚ್ಚುಗೆ ಎದುರಾಬದರಾಗಿದ್ದು ಓದುವ ಆಟ ಹೊರಬಿದ್ದಾಗ. ಅಂತೂ ಇಂತೂ ಅದಕ್ಕೂ ಪರದೆ ಬಿತ್ತು. ಇದೆಲ್ಲ ಅರ್ಥವಾಗಿದ್ದು ಅಟ್ಟದ ಮೇಲೆ ಕಾರಂತರ ಕಾದಂಬರಿ ಸಿಕ್ಕಾಗ. ಇದಾಗಿ ಸುಮಾರು ಒಂದು ಒಂದೂವರೆ ವರ್ಷದ ನಂತರ ನಾನು ನನ್ನ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಕಾದಂಬರಿ ಓದಿದೆ. ಅದು ಕಾರಂತರ ‘ಚಿಗುರಿದ ಕನಸು’ ಆಗಿತ್ತು. ಅದನ್ನು ಓದು ಓದು ಎಂದು ಒತ್ತಾಯಪಡಿಸಿ ಓದಿಸಿದ್ದು ಇಂದಿಗೂ ಕಾರಂತರ ಅಭಿಮಾನಿ ಆಗಿರುವ ಆದರೆ ಓದುವ ಆಟದ ಬಗ್ಗೆ ಅಸಮಾಧಾನ ಇರುವ ನನ್ನ ತಂದೆ.
ಆಗಿನಿಂದ ಈಗಿನ ತನಕ ನನ್ನೆಲ್ಲಾ ಒಂಟಿತನದ ನಡುವೆ ಪುಸ್ತಕಗಳು ನನ್ನ ಸಾಥ್ ನೀಡಿವೆ. ಇದರ ಆರಂಭ ಆಗಿದ್ದು ಶಿವರಾಂ ಕಾರಂತರ ಬರವಣಿಗೆಯಿಂದ. ಹೌದು, ನಾನು ಯಾವ ಕಾರಂತರನ್ನು ಬಾಲಿಶವಾಗಿ ದ್ವೇಷಿಸುತ್ತಿದ್ದೆನೋ ಅದೇ ಕಾರಂತರ ಬರವಣಿಗೆಯಿಂದ. ಕಾರಂತರು ತಮ್ಮ ಕೊನೆಗಾಲದಲ್ಲಿ ಹಿಂದುತ್ವ ಪರ ಆಗಿದ್ದರು ಎಂಬುದನ್ನು ಕೇಳಿದಾಗ ಮನುಷ್ಯನ ಆಲೋಚನೆಗಳು ನಂಬಿಕೆಗಳು ಭಾವನೆಗಳು ದ್ವೇಷದಿಂದ ಪ್ರೀತಿಗೆ ಹೋಗುವ ರೀತಿಯೇ, ಅಭಿಮಾನದಿಂದ ಅಸಮಾಧಾನಕ್ಕೆ ಮತ್ತು ಲಿಬರಲ್ ಇಂದ ಮೂಲನಿಷ್ಠವಾದಕ್ಕೆ ಸಹ ಚಲಿಸಬಹುದು ಎಂದು ಅರ್ಥವಾಯಿತು. ಆದರೂ ಇಂದಿಗೂ ನನ್ನ ಮೆಚ್ಚಿನ ಲೇಖಕರಲ್ಲಿ ಕಾರಂತರು ಒಬ್ಬರು. ನಾನು ಇಂದಿಗೂ ಅವರಿಗೆ ಋಣಿ.
ಶಿವರಾಮ ಕಾರಂತ, ಅಪ್ಪ ಮತ್ತು ನಾನು..
ನಿಮಗೆ ಇವೂ ಇಷ್ಟವಾಗಬಹುದು…





0 Comments