ರಾಕೇಶ್ ಜೋಷಿ
ಬೆಳಿಗ್ಗೆ ೯:೦೦ಕ್ಕೆ ಗಡಿ ಬಿಡಿಯಿಂದ ಎದ್ದೆ, ನೋಡಿದ್ರೆ ಇವಳು ನನ್ನ ಮೊಬೈಲ್ ತೊಗೊಂಡು ಅದರಲ್ಲಿರೋ game ಆಡುತ್ತ ಕುಳಿತಿದ್ದಳು. ಲೇಟ್ ಆದರು ನನ್ನ ಎಬ್ಬಿಸೋದು ಬಿಟ್ಟು game ಆಡುತ್ತ ಕುಳಿತ ಇವಳನ್ನ ನೋಡಿ ಕೋಪ ಬಂತು. ನನಗೆ officeಗೆ late ಆಗುತ್ತೆ ಕಣೆ ಬೇಗ ತಿಂಡಿ ಮಾಡು ಅಂತಾ ಹೇಳುತ್ತಾ ಎದ್ದೆ. ನಾ ಎದ್ದಿದ್ದು ನೋಡಿ, ನನಗೊಂದು smile ಹಾಕಿ ಇವತ್ತು ಮನೇಲಿ ತಿಂಡಿ-ಗಿಂಡಿ ಇಲ್ಲ ಅಂತಾ ಹೇಳಿದಳು. ಸ್ವಲ್ಪ ಗಾಬರಿ ಆಯಿತು. ಆದರು ಸುಧಾರಿಸಿಕೊಂಡು ಯಾಕೆ gas ಏನಾದ್ರು ಖಾಲಿ ಆಯ್ತಾ ಅಂತಾ ಕೇಳಿದೆ. ಇಲ್ಲಾರೀ ಇವತ್ತು ಶಿವರಾತ್ರಿ, so ಇವತ್ತು ಅಡಿಗೆ ಮನೆಗೆ ರಜಾ ಅಂದಳು. ನೆನ್ನೆ ಫೋನ್ನಲ್ಲಿ ಅಮ್ಮ ಹೇಳಿದ್ದು ನೆನಪಾಯಿತು. ಹೂ ತೊಗೊಂಡು ಬಾ. ಬಿಲ್ವಪತ್ರಿ ತೊಗೊಂಡು ಬಾ. ಶಿವನಾಮ ಸ್ಮರಣೆ ಮಾಡು ಅಂತೆಲ್ಲ ಹೇಳಿದ್ದಳು. ಹ್ಞೂ ಅಂದು ಅವಳಿಂದ ಏನೋ ತಪ್ಪಿಸಿಕೊಂಡಿದ್ದೆ. ಆದರೆ ಇವಳಿಂದ?
ಶಿವನೆ ನೀನೆ ನನ್ನ ಕಾಪಾಡಪ್ಪ ಅಂತಾ ಎದ್ದು ಸ್ನಾನ ಮಾಡಿ ಬಂದೆ. ಅಟ್-ಲೀಸ್ಟ್ ಒಂದು ಕಾಫಿ ಸಿಗುತ್ತಾ ಅಂತಾ ಸಣ್ಣ ಆಸೆ ಇಂದ ಅವಳತ್ತ ನೋಡಿದೆ. ನನ್ನ ನೋಟ ಅರ್ಥ ಆಯಿತು ಅನ್ಸುತ್ತೆ ಆದರು ನನ್ನನು ನೋಡಿದರು ನೋಡದ ಹಾಗೆ ಟೇಬಲ್ ಮೇಲೆ ಬಿಲ್ವಪತ್ರಿ ಇದೆ ದೇವರಿಗೆ ಪೂಜೆ ಮಾಡಿ ಅಂತಾ ಅಬ್ಬರಿಸಿದಳು. ಈ ಹಬ್ಬಗಳಾದ್ರೂ ಏನಕ್ಕೆ ಬರುತ್ವೋ ಅಂತಾ ಗೊಣಗ್ತಾನೆ ಅಂತು ಇಂತೂ ನಮ್ಮ ಮನೆ ದೇವರಿಗೆ ಇವತ್ತು ಹೂ ಕಾಣೋ ಭಾಗ್ಯ ಬಂತಪ್ಪ ಅನ್ಕೊಂಡು ದೇವರ ಮನೆಗೆ entry ಹಾಕಿದೆ. ಮನೆ ಹುಡುಕುವಾಗ ದೇವರ ಕೊಣೆ seperate ಆಗಿರಬೇಕು ಅಂತಾ ಹುಡುಕಿ ಈ ಮನೆಗೆ ಬಂದಿದ್ವಿ. ಅಮ್ಮ ಬಂದಾಗ ದಿನಾ ಪೂಜೆನೂ ನಡಿತಿತ್ತು(ಮಾಡಿಸ್ತಿದ್ಲು). ಅಮ್ಮ ಊರಿಗೆ ಹೋಗಿದ್ದೆ ಬಂತು ದೇವರ ಮನೆ ಕಡೆ ನಾ ಹೋಗಿರಲಿಲ್ಲ. ಆದರೆ ಒಳಗಡೆ ಹೋದಾಗ ಸ್ವಚ್ಚವಾಗೆ ಕಂಡಿತು. ಇವಳೆನೋ ಪೂಜೆ ಮಾಡ್ತಿರಬಹುದು ಅಂತಾ ಅನ್ಕೊಂಡು ಸುಮ್ಮನಾದೆ. ಏನು ಮಾತಾಡದೆ ಬೇಗ ಹೂ ಏರಸಿ ಹೊರಬಂದೆ. ಆಯಿತು ಕಣೆ ಪೂಜೆ, ಇವಾಗಲಾದರು ಅಂತಾ ವಟರ ಎತ್ತಿದೆ. ಹ್ಞೂ ಕಾಫಿ ಬೇಕು ಅಂದ್ರೆ ಅಮ್ಮಗೆ ಫೋನ್ ಮಾಡಿ ಅವರು ಹೇಳಿದ್ರೆ ನೋಡೋಣ. ಅರ್ಥ ಆಯಿತು ಇದೆಲ್ಲ ಇಷ್ಟಕ್ಕೆ ಮುಗಿಯಲ್ಲ ಅಂತಾ. ಅಮ್ಮಂಗೆ ಫೋನ್ ಮಾಡಿದ್ರು ಏನ್ ಗಿಟ್ಸಲ್ಲ ಅಂತಾ ಗೊತ್ತಾಯಿತು. ಆಫೀಸಿಗೆ ಹೊಗೊದೊಂದೇ ದಾರಿ ಅಂದುಕೊಂಡು ಅಲ್ಲಿದ್ದ ಎರಡು ಬಾಳೆಹಣ್ಣು ತಿಂದು ಕಾಲ್ಕಿತ್ತೆ.
ಸುಮಾರು ೧೨ಕ್ಕೆ ಇವಳಿಂದ ಫೋನ್ ಬಂತು, ರೀ ಏನು ತಿನ್ನಬೇಡಿ.. ಇವತ್ತು ಉಪವಾಸ.. ಆಯಿತು ಮಾರಾಯಿತಿ ಏನು ತಿನ್ನಲ್ಲ ಬರಿ ಒಂದು ಜೂಸ ತೊಗೋತೀನಿ ಅಂತಾ ಹೇಳ್ದೆ. ಅವಳಿಗೆ ಅದು ಸಮಾಧಾನ ಆಯಿತು ಅನ್ಸುತ್ತೆ ಫೋನ್ ಅಷ್ಟಕ್ಕೆ ಇಟ್ಟಳು. ಮದ್ಯಾನ್ಹ ಆಫೀಸ್ ಕ್ಯಾಂಟೀನ್ಗೆ ಹೋಗಿ ಗಡದ್ದಾಗಿ ಒಂದು ಮಸಲ್ ದೋಸೆ ಮತ್ತು ಒಂದು ಅಕ್ಕಿ ರೊಟ್ಟಿ ತಿಂದು ಬಂದೆ. ನನ್ನ ಹೊಟ್ಟೆ ಏನೋ ಸಮಾಧಾನ ಆಯಿತು. ಇವಳದೆನು ಕೇಳೋಣ ಅಂತಾ ಫೋನ್ ಮಾಡಿದೆ. ನನಗಿಂತ ಮುಂಚೆನೆ ಮಾತು ಶುರು ಮಾಡಿದ್ಲು. ಮನೆಗೆ gasನವನು ಬಂದಿದ್ದ, ಮನೇಲಿ ದುಡ್ಡು ಇರಲಿಲ್ಲ ಹಾಗಾಗಿ ಕೆಳಗಿನ ಮನೆಯವರ ಹತ್ರಾ ದುಡ್ಡು ಇಸ್ಕೊಂಡು ಕೊಟ್ಟಿದೀನಿ. ಇವತ್ತು ನೀವು ಬರುವಾಗ ದುಡ್ದು ತೆಗಿಸ್ಕೊಂಡು ಬನ್ನಿ ಅಂತಾ ತಾಕಿತಿ ಮಾಡಿದಳು. ಕೊಲೆ ಬಸವನ ಹಾಗೆ ತಲೆ ಹಾಕುತ್ತ, ಅವಳ ಮಾತನ್ನ ಕೇಳ್ತಾ, ನಾ ಏನಕ್ಕೆ ಫೋನ್ ಮಾಡಿದೆ ಅನ್ನೋದೇ ಮರೆತು ಹೋಯಿತು. ಸ್ವಲ್ಪ ಹೊತ್ತಿನ ನಂತರ ರೀ ಊಟ ಆಯ್ತಾ ಅಂತಾ casual ಆಗಿ ಕೇಳಿದಳು. ಹ್ಞೂ ಕಣೆ ಅಕ್ಕಿ ರೋಟಿ ತಿಂದೆ, ನೀನು ಅಂತಾ ಕೇಳ್ದೆ.. ಅಷ್ಟೇ ನಾ ಮಾತಾಡಿದ್ದು.. ಫೋನ್ ಕೆಳಗೆ ಇಡೋವರೆಗೂ ಅವಳಾರತಿ ಆಯಿತು. ರಾತ್ರಿ ನಿಮಗೆ ಉಪವಾಸ ಅಂತಾ ಧಮಕಿ ಬೇರೆ ಬಂತು. ಏನ್ ಮಾಡೋದು ಇವಳ ಮಾತನ್ನ ಕೇಳ್ತಾ ಇದ್ರೆ ಎಲ್ಲಾನು ಮರೆತು ಬಿಡ್ತಿನಿ ಅಂತಾ ನನನ್ನೇ ಬೈಕೊಂಡು ..ಥೂಥ ಅಂತಾ ಒಂದು round ಶಿವನ್ನು ಬೈಕೊಂಡು ಸಾಯಂಕಾಲ ಮನೇಲಿ ಅವಳನ್ನ ಹೇಗೆ face ಮಾಡೋದು ಅಂತಾ ಯೋಚಿಸತೊಡಗಿದೆ.
ಕೊನೆಗೆ ಒಂದು ಐಡಿಯಾ ಫ್ಲಾಶ್ ಆಯಿತು. ಇದಕ್ಕೆಲ್ಲ ಮದ್ದು ಅವಳ favorite ಡಿಶ್ ಪಿಜ್ಜಾ. ಆಫೀಸ್ ಮುಗಿಸ್ಕೊಂಡು ಮನೆಗೆ ಹೊರಡೋ ೩೦ ನಿಮಿಷ ಮೊದಲೇ ಪಿಜ್ಜಾ order ಮಾಡಿದೆ. ಮನೆಗೆ ಹೋಗೋವಾಗ ಅದನ್ನ ಪಿಕ್-ಅಪ್ ಮಾಡ್ಕೊಂಡು ಮನೆಗೆ ಹೋದೆ. ಮದ್ಯಾನ್ಹ ಊಟ ಮಾಡಿದ್ದು ಅಲ್ದೆ ಪಿಜ್ಜಾನ್ನಾ ಬೇರೆ ತಂದಿದಿರಾ ಅಮ್ಮನಿಗೆ ಹೇಳ್ತೀನಿ ಅಂತಾ left and right ಆಗಿ class ತೊಗೊಂಡಳು. ಆದ್ರೆ ಎಷ್ಟೇ ಆದರು ಪಿಜ್ಜಾ ವಾಸನೆ ಕಡಿಮೆ ಆಗದೆ ಇರೋ ಕಾರಣ ಬೇಗನೆ ನನ್ನ ಜೊತೆ ರಾಜಿ ಆಗಿ ಪಿಜ್ಜಾ ತಿನ್ನೋಕೆ ರೆಡಿ ಆದಳು. ಇಬ್ಬರು ಗಡದ್ದಾಗಿ ಪಿಜ್ಜಾ ತಿಂದ್ವಿ. ಅಲ್ಲಿಗೆ ನಮ್ಮ ಶಿವರಾತ್ರಿ ಉಪವಾಸ ಅಂತ್ಯವಾಗಿತ್ತು. ಪಿಜ್ಜಾ ನಮ್ಮ ಹೊಟೆನ್ನ ತುಂಬಿಕೊಂಡಿತು. ಜೇಬಿಗೆ ೫೦೦ ರೂಪಾಯಿ ಕತ್ತರಿನು ಬಿದ್ದಿತ್ತು. ಆದರೆ ಅವಳ ಮುಖದಲ್ಲಿ ನೆಮ್ಮದಿ ಇತ್ತು. next ಶಿವರಾತ್ರಿ ವರೆಗೂ ನಾನು ಸೇಫ್ ಅಂತಾ ಶಿವನಿಗೆ ಒಂದು ನಮಸ್ಕಾರ ಹಾಕಿ, ಲೇ ಶಿವನಿಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ ಅಂತೆ ಕಣೆ.. ಈ ಶಿವರಾತ್ರಿಗೆ ಹೆಚ್ಚು ಫಲ ನಮ್ಮಿಬ್ಬರಿಗೆ ಕಣೆ ಅಂತಾ ಹೇಳ್ದೆ.. ಹ್ಞೂ ಅಮ್ಮನಿಗೆ ಹೇಳಿದ್ರೆ ಎಲ್ಲಾನು ತಿಳಿಯುತ್ತೆ ಅಂತಾ ಒಂದು ಆವಾಜ ಹಾಕಿ ಮಲಗೋಕೆ ಹೊರಟಳು.







0 Comments