ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಾ ನಾಗರಾಜ್ ಬರೆದ ಒಂದು ಕೌನ್ಸಲಿಂಗ್ ಕಥೆ

ಅಂಗೈಲ್ಲೊಂದು ಅರಿವಿನ ಹಣತೆ

ಶಾಂತಾ ನಾಗರಾಜ್

ಮೇಲ್ನೋಟಕ್ಕೆ ಅದೊಂದು ಸುಂದರ ಕುಟುಂಬ. ಉನ್ನತ ಅಧಿಕಾರಿಯಾಗಿರುವ ಗಂಡ, ಮೊದಲ ಮತ್ತು ಕೊನೆಯ ಇಂಜಿನಿಯರಿಂಗ್ ಪದವಿಯಲ್ಲಿ ಓದುತ್ತಿರುವ ಇಬ್ಬರು ಜಾಣ ಗಂಡುಮಕ್ಕಳು, ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ, ಸತಿಸಾಧ್ವೀಮಣಿ ಹೆಂಡತಿ, ರಸ್ತೆಯಲ್ಲಿ ಹೋಗುತ್ತಿದ್ದವರು ವಾವ್! ಎಂದು ಮತ್ತೊಮ್ಮೆ ನೋಡುವಂಥಾ ಸುಂದರ ಮನೆ!! ಒಂದು ಮಧ್ಯಾಹ್ನ ಗೃಹಿಣಿ ಆಗಷ್ಟೇ ಉಂಡು ಮಲಗಿದ್ದಾಗ, ಮಕ್ಕಳು ಕಾಲೇಜಿನಲ್ಲಿಯೂ, ಗಂಡ ಆಫ಼ೀಸಿನಲ್ಲಿಯೂ ಇರುವ ಹೊತ್ತಿನಲ್ಲಿ, ಈ ಮನೆಗೆ ಹಿಂಬಾಗಿಲಿನಿಂದ ಕಳ್ಳನ ಆಗಮನವಾಯಿತು. ಅಡಿಗೆಮನೆಯಲ್ಲಿ ಶಬ್ದ ಕೇಳಿ ಅಲ್ಲಿಗೆ ಬಂದ ನಿದ್ದೆಗಣ್ಣಿನ ಹೆಂಡತಿಗೆ ದೈತ್ಯಕಳ್ಳನ ದರ್ಶನ! ಬೀರುಗಳ ಬೀಗದಕೈ ಕೊಡುವಂತೆ ಆಗ್ರಹ, ಬೆದರಿಕೆ. ಅವಳು ಹುಡುಕಲು ಡಬ್ಬಗಳನ್ನು ತಡಕಾಡಿದಾಗ ಅವಳ ಕೈಗೆ ಸಿಕ್ಕಿದ್ದು ಮೆಣಸಿನಪುಡಿಯ ಡಬ್ಬ! ಧೈರ್ಯಮಾಡಿ ಒಂದು ಹಿಡಿ ಮೆಣಸಿನ ಪುಡಿಯನ್ನು ಕಳ್ಳನ ಕಣ್ಣಿಗೆ ಎರಚಿದಳು. ವಿಚಲಿತನಾದ ಕಳ್ಳ ಹಿಂದೆ ಸರಿದದ್ದರಿಂದ ಒಂದು ಕಣ್ಣಿಗೆ ಮಾತ್ರ ಪುಡಿ ಬಿತ್ತು. ಮತ್ತಷ್ಟು ಕೋಪಗೊಂಡ ಕಳ್ಳ ಇವಳ ಎಡಗೈ ಎಳೆದು ಅಲ್ಲೇ ಇದ್ದ ಮಿಕ್ಸಿಯಲ್ಲಿಟ್ಟು ಆನ್ ಮಾಡಿಬಿಟ್ಟ. ಬೆರಳುಗಳು ಲಟಲಟವೆಂದವು ನೋವಿನಿಂದ ಜೋರಾಗಿ ಬೊಬ್ಬೆಹಾಕಿದಳು. ಅಕ್ಕ ಪಕ್ಕದ ಮನೆಯಜನ ಜಮಾಯಿಸಿದರು. ಮೆಣಸಿನಪುಡಿಯ ಘಾಟಿನಿಂದ ಓಡಲಾದ ಕಳ್ಳ ಸಿಕ್ಕಿಬಿದ್ದ. ಒಬ್ಬರು ಆಂಬುಲೆನ್ಸಿಗೆ, ಮತ್ತೊಬ್ಬರು ಗಂಡನಿಗೆ, ಮಗದೊಬ್ಬರು ಪೋಲೀಸ್‍ಗೆ ಫೋನ್ ಮಾಡಿ, ಅವಳು ಆಸ್ಪತ್ರೆಗೆ, ಕಳ್ಳ ಜೈಲಿಗೆ, ಸಕಾಲದಲ್ಲಿ ತಲುಪುವಂತೆ ಮಾಡಿದರು. ಅವಳ ಬೆರಳುಗಳು ಮತ್ತೆ ಚೈತನ್ಯ ಪಡೆಯಲು ಮೂರುತಿಂಗಳು ಬೇಕಾದವು. ಗಂಡ ಆಫ಼ೀಸಿಗೆ ರಜೆ ಹಾಕಿದ, ಮಕ್ಕಳು ಕಾಲೇಜಿಗೆ ಪಾಳಿಯಲ್ಲಿ ಹೋಗುತ್ತಾ ಅಮ್ಮನ ಸೇವೆಗೆ ನಿಂತರು. ಅವರ ಆರೈಕೆ, ಆದರ, ಅಭಿಮಾನಗಳಿಂದ ಅವಳು ಮತ್ತೆ ಸುಸ್ಥಿತಿಗೆ ಬಂದಳು. ಕಳ್ಳನಿಗೆ ಒಂದು ವರ್ಷ ಜೈಲು ಶಿಕ್ಷೆಯಾಯಿತು.

ಹೀಗೇ ಒಂದೂವರೆ ವರ್ಷ ಕಳೆದಿದೆ. ಮತ್ತೊಂದು ಮಧ್ಯಾಹ್ನ ಗಂಡನಿಗೆ ಫೋನು “ಮತ್ತೆ ಕಳ್ಳ ಬಂದಿದ್ದ, ಹಿಂದಿನ ಸಲದಂತೇ ಮೆಣಸಿನ ಪುಡಿ ಎರಚಿದೆ. ಮತ್ತೆ ಅವನು ನನ್ನ ಎಡಗೈನ ಮಧ್ಯದ ಬೆರಳನ್ನು ಮಿಕ್ಸಿಯಲ್ಲಿ ಸಿಕ್ಕಿಸಿದ್ದಾನೆ, ಕಳ್ಳ ಸಿಗಲಿಲ್ಲ ಓಡಿಹೋದ”. ಈಬಾರಿ ಹೆಂಡತಿಯಿಂದಲೇ ಫ಼ೋನು! ಮತ್ತೆ ಆಸ್ಪತ್ರೆ, ಮತ್ತೆ ಬೆರಳಿಗೆ ಹೊಲಿಗೆ. ಈ ಬಾರಿ ಒಂದೇ ಬೆರಳಾದ್ದರಿಂದ ವಾಸಿಯಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಗಂಡನಿಗೆ ಚಿಂತೆ ಹೆಚ್ಚಿತು. ಕಳ್ಳ ಇವಳ ಮೇಲೆ ದ್ವೇಷ ಬೆಳೆಸಿಕೊಂಡಿರಬಹುದು. ಈ ಬಾರಿ ಸಿಗದೇ ತಪ್ಪಿಸಿಕೊಂಡಿರುವುದರಿಂದ ಮತ್ತೆ ಬರಬಹುದು .. ಇತ್ಯಾದಿ ಇತ್ಯಾದಿ. ಮಕ್ಕಳ ಜೊತೆ ವಿಚಾರ ವಿನಿಮಯ ಮಾಡಿಕೊಂಡು ಆ ಮನೆಯನ್ನು ಬಾಡಿಗೆಗೆ ಕೊಟ್ಟು, ಮತ್ತೊಂದು ಬಡಾವಣೆಯಲ್ಲಿ ಬಾಡಿಗೆಗೆ ಮನೆಯನ್ನು ಹಿಡಿದು ವಾಸವನ್ನು ಸ್ಥಳಾಂತರಿಸಿದರು. ಮತ್ತೊಂದು ವರ್ಷ ಕಳೆಯಿತು. ಮತ್ತೆ ಗಂಡನಿಗೆ ಹೆಂಡತಿಯಿಂದ ಫ಼ೋನು ” ಕಳ್ಳ ಈ ಮನೆಯನ್ನೂ ಹುಡುಕಿಕೊಂಡು ಬಂದ, ಈ ಬಾರಿ ನನ್ನ ಎಡಗೈ ಹೆಬ್ಬರಳನ್ನು ಜಖಂ ಮಾಡಿ ಓಡಿ ಹೋದ” ಗಂಡ ಪ್ರಾಥಮಿಕ ಚಿಕಿತ್ಸೆಯನ್ನೆಲ್ಲಾ ಕೊಡಿಸಿ, ಹೆಂಡತಿಯನ್ನು ಮನೋವೈದ್ಯರ ಬಳಿಗೆ ಕರೆತಂದ. ಇದನ್ನು ’ಅಟೆನ್ಷನ್ ಸೀಕಿಂಗ್ ಡಿಸಾರ್ಡರ್’ ಎನ್ನುತ್ತಾರೆ. ಅಂದರೆ ತಮ್ಮ ಕಡೆಗೆ ಮನೆಯವರ ವಿಶೇಷ ಗಮನ ಸೆಳೆದುಕೊಳ್ಳುವ ದೌರ್ಬಲ್ಯ. ಈ ಮೇಲಿನ ಕಥೆಯಲ್ಲಿ ಮೊದಲೊಮ್ಮೆ ಕಳ್ಳ ಬಂದಿದ್ದು ನಿಜ. ಮತ್ತೆರಡು ಬಾರಿ ಆಕೆ ತನಗೆ ತಾನೇ ಮಿಕ್ಸಿಯಲ್ಲಿ ಗಾಯ ಮಾಡಿಕೊಂಡು ಕಳ್ಳನ ಕಥೆ ಹುಟ್ಟುಹಾಕಿದ್ದು. ಯಾಕೆ ಆಕೆಗೆ ಇಂಥಾ ಅಗತ್ಯ ಬಂತು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವಳ ಬದುಕಿನ ಒಳಗೊಮ್ಮೆ ಹಣಕು ಹಾಕಬೇಕಾಗುತ್ತದೆ. ಹೆಚ್ಚು ವಿದ್ಯಾಭ್ಯಾಸವನ್ನು ಮಾಡದ ಆಕೆ ಬಾಲ್ಯದಿಂದಲೂ ಕೀಳರಿಮೆಯನ್ನು ಅನುಭವಿಸುತ್ತಿದ್ದಳು. ಗಂಡ ಉನ್ನತಾಧಿಕಾರಿಯಾಗಿ, ಮಕ್ಕಳೂ ಜಾಣರಾಗಿ ಮೇಲೆ ಹೋದಂತೆಲ್ಲಾ ಆಕೆಯ ಕೀಳರಿಮೆಯ ಮಟ್ಟವೂ ಮೇಲೇರುತ್ತಾ ಬಂತು. ಯಾರೊಂದಿಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾರದ ಪರಿಸ್ಥಿತಿ. ಇವಳ ಒಳತೋಟಿಯನ್ನು ಗಮನಿಸಲು, ಆಲಿಸಲು ಸಾಂತ್ವನ ಹೇಳಲು ಗಂಡ ಮಕ್ಕಳಿಗೆ ಪುರುಸೊತ್ತಿಲ್ಲ. ’ ನಾನು ಯಾರಿಗೂ ಬೇಡ, ನನ್ನ ಅಗತ್ಯ ಯಾರಿಗೂ ಇಲ್ಲ, ಯಾಕಾಗಿ ಬದುಕಿರ ಬೇಕು’ ಇಂಥಾ ಭಾವಗಳು ಪದೇ ಪದೇ ಸುಳಿದಾಡುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲೂ ಭಯ! ಇಂಥಾ ದಿನಗಳಲ್ಲೇ ಕಳ್ಳನ ಘಟನೆ ನಡೆಯುತ್ತದೆ. ಮನೆಯ ಜನರ ಅನುಕಂಪ, ಆರೈಕೆ, ಆದರಗಳು ಇನ್ನಿಲ್ಲದಂತೆ ಸಿಗುತ್ತವೆ. ಆಕೆ ಆಗ ಸುಖದ ಅನುಭವವನ್ನು ಹಿತವನ್ನೂ ಅನುಭವಿಸುತ್ತಾಳೆ. ಅದು ಮತ್ತೆ ಮತ್ತೆ ಬೇಕೆನಿಸುತ್ತದೆ! ಆಕೆಯ ಒಳ ಮನಸ್ಸು ಇಂಥಾ ಸಂದರ್ಭಗಳನ್ನು ಮತ್ತೆ ಪಡೆಯಲು ಒಳದಾರಿಯೊಂದನ್ನು ಕಂಡುಕೊಳ್ಳುತ್ತದೆ. ಆದರೆ ಇದು ಅವಾಸ್ತವಿಕವಾದ ದಾರಿ ಎನ್ನುವುದನ್ನು ಆಕೆಯ ಅಸೂಕ್ಷ್ಮ ಬುದ್ಧಿ ಅರಿಯುವುದಿಲ್ಲ. ಅಲ್ಲದೇ ಮೊದಲ ಬಾರಿ ಬೆರಳುಗಳು ತುಂಡಾಗಿ, ಹೊಲಿಗೆ ಹಾಕಿದಾಗ ಹಸ್ತ ಎಷ್ಟೇ ಸಹಜವಾಗಿ ಕಾಣುತ್ತಿದ್ದರೂ ಬೆರಳುಗಳು ಸ್ಪರ್ಷಶಕ್ತಿಯನ್ನು ಕಳೆದುಕೊಂಡಿರುವುದರಿಂದ ಅವಳಿಗೆ ಮತ್ತೆ ಮತ್ತೆ ಗಾಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಸತ್ಯ ವೈದ್ಯರಿಗೆ ತಿಳಿದಿದೆ. ಆದರೆ ಈ ವೈಜ್~ಝಾನಿಕ ತಿಳುವಳಿಕೆ ಆಕೆಗಿಲ್ಲ. ಈ ಗಮನ ಸೆಳೆಯುವ ದೋಷಗಳು ಸ್ವಲ್ಪ ಮಟ್ಟಿಗೆ ಎಲ್ಲರಲ್ಲೂ ಇರುತ್ತದೆ. ಆದರೆ ಅದು ಬರೀ ಪ್ರಯತ್ನದ ಮಟ್ಟದಲ್ಲೇ ಇದ್ದರೆ ಸ್ವಲ್ಪ ಸಮಯದ ನಂತರ ಬಿಟ್ಟು ಹೋಗುತ್ತದೆ. ಬಾಲ್ಯದಲ್ಲಿ, ತಾರುಣ್ಯದಲ್ಲಿ ಇಂಥಾ ಪ್ರಯತ್ನಗಳು ಅಲ್ಲಲ್ಲಿ ಕಂಡು ಬಂದರೂ ವ್ಯಕ್ತಿತ್ವ ವಿಕಸನವಾಗುತ್ತಿದ್ದಂತೆ ತನ್ನ ನಡವಳಿಕೆಗೆ ತಾನೇ ನಾಚಿಕೊಳ್ಳುವ ವ್ಯಕ್ತಿ ಕ್ರಮೇಣ ತನ್ನನ್ನು ತಾನು ತಿದ್ದಿಕೊಳ್ಳುತ್ತಾ ಸಮಾಜದಲ್ಲಿ ಸಭ್ಯ, ಸಜ್ಜನ ಎಂದು ಕರೆಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಾನೆ. ಯಶಸ್ವಿಯೂ ಆಗುತ್ತಾನೆ. ಆದರೆ ಈ ಚಟವೇ ಮುಂದುವರೆದರೆ, ಅಥವಾ ಮಧ್ಯವಯಸ್ಸಿನಲ್ಲಿ ಮತ್ತೆ ತಲೆದೋರಿದರೆ, ಈ ಸಮಸ್ಯೆಗೆ ಏನೆನ್ನೋಣ? ಇದನ್ನು ಮಾನಸಿಕ ದೌರ್ಬಲ್ಯ ಎಂದೇ ಪರಿಗಣಿಸ ಬೇಕಾಗುತ್ತದೆ. ಕೇಳುವವರಿಗೆ ಸಮಯ, ಅಗತ್ಯ ಇರಲಿ ಬಿಡಲಿ ಮಾತನಾಡುತ್ತಲೇ ಇರುವುದು, ತನಗೆ ಎಲ್ಲಾ ತಿಳಿದಿದೆ, ತಾನು ಏನನ್ನು ಬೇಕಾದರೂ ನಿಭಾಯಿಸಬಲ್ಲೆ ಎನ್ನುವುದನ್ನು ಹೇಳುತ್ತಲೇ ಇರುವುದು, ತನ್ನನ್ನು ತಾನು ಮಿತಿಮೀರಿ ಹೊಗಳಿಕೊಳ್ಳುವುದು, ಇವೆಲ್ಲಾ ಈ ದೌರ್ಬಲ್ಯದ ಲಕ್ಷಣಗಳು. ಇಂಥವರಿಗೆ ’ನಾನು ಹೀಗೆಲ್ಲಾ ಆಡುವುದರಿಂದ ಜನ ನನ್ನ ಬೆನ್ನ ಹಿಂದೆ ಪರಿಹಾಸ್ಯ ಮಾಡಿಕೊಂಡು ನಗಬಹುದು’ ಎನ್ನುವ ಪರಿವೆಯೂ ಇರುವುದಿಲ್ಲ. ಇವರಿಗೆ ಕೌನ್ಸಿಲಿಂಗ್ ಮತ್ತು ಕೆಲವೊಮ್ಮೆ ಔಷಧಿಯ ಅಗತ್ಯವೂ ಇರುತ್ತದೆ. ಹಾ
ಗಿದ್ದರೆ ಇದಕ್ಕೇನು ಪರಿಹಾರ? ಈ ಪ್ರಶ್ನೆ ಇದನ್ನು ಓದುತ್ತಿರುವ ನಿಮ್ಮಲ್ಲಿ ಹುಟ್ಟುವುದು ಸಹಜವೇ! ಇದಕ್ಕಾಗಿ ಒಂದು ಸರಳ ಪ್ರಯತ್ನವನ್ನು ಮಾಡಲು ನಮ್ಮೆಲ್ಲರಿಗೂ ಸಾಧ್ಯವಿದೆ. ನಮ್ಮ ಅಂಗೈಲ್ಲಿ ಒಂದು ಸಣ್ಣ ಅರಿವಿನ ಹಣತೆಯನ್ನು ಹಚ್ಚಿಟ್ಟುಕೊಳ್ಳೋಣ. ಅದರ ಬೆಳಕಿನಲ್ಲಿ ಇಂಥಾ ಸಮಸ್ಯೆಗಳನ್ನು ಗಮನಿಸೋಣ. ನಮ್ಮ ಮನಸ್ಸಿನ ಕುಹಕ, ಗೇಲಿ ಇಂಥವನ್ನೆಲ್ಲಾ ಗುಡಿಸಿ ಹಾಕಿ ಅದರ ಸ್ಥಳದಲ್ಲಿ ಒಂದಷ್ಟು ಕರುಣೆ, ತ್ಯಾಗ, ಔದಾರ್ಯ ಇವುಗಳನ್ನು ಪ್ರತಿಷ್ಠಾಪಿಸೋಣ. ಇಂಥವರೊಡನೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾ ’ನಾನೂ ನಿನ್ನ ಜೊತೆಗಿದ್ದೇನೆ, ನಿನ್ನ ಮನಸ್ಸಿನ ದುಗುಡವೇನು ನನ್ನಲ್ಲಿ ಯಾವ ಭಯವಿಲ್ಲದೇ ಹೇಳು’ ಎನ್ನುತ್ತಾ ಮೈಯೆಲ್ಲಾ ಕಿವಿಯಾಗೋಣ. ಆ ಅಳಲಿನ ಕೊಳೆಯೆಲ್ಲಾ ಉಕ್ಕಿಹರಿದು ಹೋಗಿ ಜಾಗವನ್ನು ಖಾಲಿ ಮಾಡಲಿ. ಅಲ್ಲಿ ನಮ್ಮ ಅರಿವಿನ ಹಣತೆಯ ಬೆಳಕನ್ನು ಸ್ಥಾಪಿಸೋಣ. ಆ ಮನದ ಶುಭ್ರತೆಯನ್ನು ನಾವೂ ಅನುಭವಿಸೋಣ!! ಏನಂತೀರಿ?

‍ಲೇಖಕರು G

31 May, 2015

5 Comments

  1. c

    Nice counselling !

  2. ಆರತಿ ಘಟಿಕಾರ್

    ಚೆನ್ನಾಗಿದೆ ! ಇಷ್ಟ ವಾಯಿತು ನಿಮ್ಮ ಕೌನ್ಸಲಿಂಗು 🙂

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  4. madakari talwar

    super madam. nimma kayam oduga nanu. innastu bariri.

    • Anonymous

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading